ಕಲ್ಲಡ್ಕ ಪ್ರಭಾಕರ್ ಭಟ್ ನನ್ನು ಬಂಧಿಸಿದಾಗ ಮಾತ್ರ ಕೋಮು ಪ್ರಚೋದನೆ ಆಗಿರುವುದಾ ?

Update: 2024-01-19 04:24 GMT
Editor : Ismail | Byline : ಆರ್. ಜೀವಿ

ಕಲ್ಲಡ್ಕ ಪ್ರಭಾಕರ್ ಭಟ್

ಒಂದು ಭರ್ಜರಿ ಬಹುಮತವಿರುವ ರಾಜ್ಯ ಸರಕಾರ ಮನಸ್ಸು ಮಾಡಿದರೆ ಏನು ಮಾಡಬಹುದು ?. ಏನೂ ಮಾಡಬಹುದು. ಕಾನೂನು ಉಲ್ಲಂಘಿಸಿದವರ, ಶಾಂತಿ ಭಂಗ ಮಾಡುವವರ ಹೆಡೆಮುರಿ ಕಟ್ಟುವುದು ಅದರ ಪಾಲಿಗೆ ತೀರಾ ಸಣ್ಣ, ಸುಲಭ ಕೆಲಸ. ಸಂಬಂಧಪಟ್ಟ ಠಾಣೆಯ ಪೊಲೀಸರು ಅದನ್ನು ಮಾಡಿ ಮುಗಿಸುತ್ತಾರೆ.

ಆದರೆ ಅದಕ್ಕೊಂದು ಕಂಡೀಷನ್ ಇದೆ. ಸರಕಾರ ಅದಕ್ಕೆ ಅಡ್ಡ ಬರಬಾರದು. ಅಕ್ರಮವಾಗಿ ಮರ ಕಡಿದ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಸೋದರ ವಿಕ್ರಂ ಸಿಂಹನನ್ನ ಬಂಧಿಸಲಾಯಿತು. ಪೊಲೀಸರು, ಅರಣ್ಯಾಧಿಕಾರಿಗಳು ತಮ್ಮ ಕೆಲಸ ಮಾಡಿದರು. ಆದರೆ ವಿಕ್ರಂ ಸಿಂಹ ಬಂಧನಕ್ಕೆ ಸರಕಾರ ಅಡ್ಡಿಯಾಗಲಿಲ್ಲ. ಏಕೆಂದರೆ ವಿಕ್ರಂ ಸಿಂಹ ಬಂಧನ ಆಗೋದು ಸರಕಾರಕ್ಕೆ ಬೇಕಿತ್ತು. ಹಾಗಾಗಿ ಅಲ್ಲಿ ಕಾನೂನು ಪಾಲನೆಯಾಯಿತು.

ಆದರೆ ಕಲ್ಲಡ್ಕ ಪ್ರಭಾಕರ್ ಭಟ್ ಪ್ರಚೋದನಕಾರಿ ಭಾಷಣ ಪ್ರಕರಣದಲ್ಲಿ ರಾಜ್ಯ ಸರಕಾರ ಆತನ ಬಂಧನ ಆಗದೇ ಇರೋದಕ್ಕೆ ಏನೇನು ಮಾಡಬೇಕು ಅದನ್ನೇ ಮಾಡಿತು ಎಂಬುದು ಹಗಲಿನಷ್ಟೇ ಸ್ಪಷ್ಟ ಹಾಗು ಸತ್ಯ. ಶ್ರೀರಂಗಪಟ್ಟಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಭಾಕರ್ ಭಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆಯೇ ಸರಕಾರ ತನ್ನ ವಿವರವಾದ ಆಕ್ಷೇಪಣೆ ಸಲ್ಲಿಸಲು ಸಮಯ ಕೇಳಬಹುದಿತ್ತು. ಆಗ ವಿಚಾರಣೆಯನ್ನು ಮುಂದೂಡಿ ನ್ಯಾಯಾಲಯ ಸರಕಾರಿ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ದಿನಾಂಕ ಕೊಡುತ್ತಿತ್ತು. ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇತ್ತು. ಇಂತಹ ಪ್ರಕರಣಗಳಲ್ಲಿ ಆಗುವುದೂ ಹಾಗೆಯೇ. ಸಾಮಾನ್ಯವಾಗಿ ಇಂತಹ ಲಿಖಿತ ಆಕ್ಷೇಪಣೆ ಸಲ್ಲಿಸಲು ಸರಕಾರ ತಿಂಗಳುಗಟ್ಟಲೆ ತೆಗೆದುಕೊಳ್ಳುತ್ತದೆ. ಅಲ್ಲೀವರೆಗೆ ಅರ್ಜಿ ವಿಚಾರಣೆ ಬಾಕಿಯಾಗುತ್ತದೆ.

ಆದರೆ ರಾಜ್ಯ ಸರಕಾರಕ್ಕೆ ಅದೇನು ವಿಶೇಷ ಕಾಳಜಿಯೋ ಏನೋ ?. ಅಲ್ಲೇ ಮೌಖಿಕ ಆಕ್ಷೇಪಣೆ ಕೂಡಲೇ ಸಲ್ಲಿಸಿಯೇ ಬಿಟ್ಟಿತು. ಪ್ರಭಾಕರ್ ಭಟ್ ಗೆ ಅಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕಿತು. ಹೈಕೋರ್ಟ್ ನಲ್ಲಿ ದೂರುದಾರೆ ನಜ್ಮಾ ಪರ ವಕೀಲ ಬಾಲನ್ ಅವರು ಕಲ್ಲಡ್ಕ ಪ್ರಭಾಕರ್ ಭಟ್ ಅನ್ನು ಬಂಧಿಸಿ ವಿಚಾರಣೆ ನಡೆಸುವುದು ಎಷ್ಟು ಮುಖ್ಯ ಎಂದು ಸುಪ್ರೀಂ ಕೋರ್ಟ್ ತೀರ್ಪುಗಳ ಆಧಾರದಲ್ಲಿ ವಾದ ಮಂಡಿಸುತ್ತಿದ್ದರು.

ಆದರೆ ಆಗಲೇ ಸರಕಾರ ಮಧ್ಯ ಪ್ರವೇಶಿಸಿ " ನಾವು ಆರೋಪಿಯನ್ನು ಬಂಧಿಸಲ್ಲ " ಎಂದು ಬಿಟ್ಟಿತು. ಈ ದೇಶದಲ್ಲಿ, ನಮ್ಮ ರಾಜ್ಯದಲ್ಲೇ ಅದೆಷ್ಟು ಸಾವಿರ ವಿಚಾರಣಾಧೀನ ಕೈದಿಗಳು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅವರ ಜಾಮೀನು ವಿಚಾರಣೆ ಹೇಗೆ ನಡೆಯುತ್ತಿದೆ ಎಂದು ಒಮ್ಮೆವಿಚಾರಿಸಿದರೆ ಕಲ್ಲಡ್ಕ ವಿಷಯದಲ್ಲಿ ಈ ಸರಕಾರ ಆತನಿಗೆ ಜಾಮೀನು ಕೊಡಿಸಲು ಅದೆಷ್ಟು ಆತುರದಿಂದ ಕೆಲಸ ಮಾಡಿದೆ ಎಂಬುದು ಸ್ಪಷ್ಟವಾಗುತ್ತದೆ.

ತಿಂಗಳು ಗಟ್ಟಲೆ, ವರ್ಷ ಗಟ್ಟಲೆ ಜಾಮೀನು ಅರ್ಜಿಗಳ ವಿಚಾರಣೆ ಮುಂದೂಡಲ್ಪಡುತ್ತದೆ.

ಸರಕಾರಿ ವಕೀಲರು ಪ್ರತಿ ದಿನಾಂಕಕ್ಕೆ ಬಂದು ಇನ್ನಷ್ಟು ಅಧ್ಯಯನ ಮಾಡೋದಿದೆ, ಆಕ್ಷೇಪಣೆಗೆ ಇನ್ನಷ್ಟು ಕಾಲಾವಕಾಶ ಬೇಕು ಅಂತಾರೆ.

ಕೂಡಲೇ ಅವರಿಗೆ ಮುಂದಿನ ದಿನಾಂಕ ಸಿಗುತ್ತೆ.

ಕೈದಿ ಜೈಲಿನಲ್ಲೇ ಕೋಳೀತಾ ಇರ್ತಾನೆ.

ಆದರೆ ಈ ಸರಕಾರಕ್ಕೆ ಪ್ರಭಾಕರ್ ಭಟ್ ಅನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದಕ್ಕಿಂತ ಆತನನ್ನು ಬಂಧಿಸದೇ ಇರುವುದೇ ಮುಖ್ಯವಾಗಿತ್ತು. ಕಲ್ಲಡ್ಕ ಪ್ರಭಾಕರ್ ಭಟ್ ಗೆ ಶ್ರೀರಂಗಪಟ್ಟಣದಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕಿದ ಮೇಲೆ ಸರಕಾರ ಏನು ಮಾಡಲು ಸಾಧ್ಯ ?

ಆತನನ್ನ ಬಂಧಿಸಿದರೆ ಆತ ದೊಡ್ಡ ಹೀರೊ ಆಗುತ್ತಿದ್ದ, ಕಾನೂನು ಸುವ್ಯವಸ್ಥೆ ಕಾಪಾಡೋದು ದೊಡ್ಡ ಸವಾಲಾಗುತ್ತಿತ್ತು, ಕೋಮು ಗಲಭೆ ನಡೆಯುವ ಸಾಧ್ಯತೆ ಇತ್ತು, ಬಿಜೆಪಿ ರಾಜಕೀಯ ಲಾಭ ಪಡೆಯುವ ಸಾಧ್ಯತೆ ಇತ್ತು ಇತ್ಯಾದಿ ಇತ್ಯಾದಿ ವಾದಗಳನ್ನು ಕಾಂಗ್ರೆಸ್ ಮುಖಂಡರೂ, ಬೆಂಬಲಿಗರೂ, ಕೆಲವು ಪ್ರಗತಿಪರರೂ ಮಾಡುತ್ತಿದ್ದಾರೆ.

ಹಾಗಾದರೆ ಈ ನಾಡಿನಲ್ಲಿ ಆಗಿರುವ ಎಲ್ಲ ಕೋಮು ಗಲಭೆಗಳೂ ಪ್ರಭಾಕರ್ ಭಟ್ ಅನ್ನು ಬಂಧಿಸಿದ್ದರಿಂದಲೇ ಆಗಿದ್ದಾ ?.

ಇಲ್ಲಿ ದ್ವೇಷ ಭಾಷಣ ಮಾಡಿದವರನ್ನು, ಕಾನೂನು ಉಲ್ಲಂಘಿಸಿದವರನ್ನು ಬಂಧಿಸಿದಾಗಲೇ ಕೋಮು ಗಲಭೆ ಆಗಿದ್ದಾ ?.

ನೆಲದ ಕಾನೂನು ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಜಾಮೀನು ರಹಿತ ಸೆಕ್ಷನ್ ಗಳಡಿ ಪ್ರಕರಣ ದಾಖಲಾದಾಗ ಬಂಧಿಸುವುದು ಸರಕಾರದ , ಪೋಲೀಸರ ಕರ್ತವ್ಯವಲ್ಲವೇ ?. ಹಾಗೆ ಬಂಧಿಸುವಾಗ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿಲ್ಲದಷ್ಟು ನಮ್ಮ ಪೊಲೀಸ್ ಹಾಗು ಕಾನೂನು ವ್ಯವಸ್ಥೆ ದುರ್ಬಲವೇ ?.

ಎಲ್ಲಕ್ಕಿಂತ ಮುಖ್ಯವಾಗಿ, ದ್ವೇಷ ಭಾಷಣ ಮಾಡುವವರನ್ನು ಬಂಧಿಸುವುದಿಲ್ಲ. ಬಂಧಿಸಿದರೆ ಅದರಿಂದ ದ್ವೇಷ ಹರಡುತ್ತದೆ ಎಂದು ಹೇಳುವುದೇ ಅದೆಷ್ಟು ದೊಡ್ಡ ವಿಪರ್ಯಾಸವಲ್ಲವೇ ?. ದ್ವೇಷ ಭಾಷಣ ನಡೆದಾಗ ದೂರು ಸಲ್ಲಿಸಲು ಕಾಯದೆ ಸರಕಾರವೇ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇಲ್ಲಿ ಸರಕಾರ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಲ್ಲ. ನಾಗರಿಕರು ದೂರು ನೀಡಿದ ಬಳಿಕ ಪ್ರಕರಣ ದಾಖಲಾಗಿದೆ. ಆದರೆ ಇಲ್ಲಿ ಸರಕಾರ ಸ್ವಯಂ ಪ್ರೇರಿತವಾಗಿ ಆರೋಪಿಯ ಬಂಧನ ಆಗದಂತೆ ನೋಡಿಕೊಂಡಿದೆ. ಅಷ್ಟೇ ಅಲ್ಲ, ಹೀಗೆ ದ್ವೇಷ ಭಾಷಣ ಮಾಡುವವರನ್ನು ಬಂಧಿಸಿ ಎಂದು ಕೆಲವರು ಸೇರಿಕೊಂಡು ಆಗ್ರಹಿಸಿದರೆ ಅವರ ಮೇಲೆ ಸರಕಾರ ಎಫ್ ಐ ಆರ್ ದಾಖಲಿಸಿದೆ.

ಅವರನ್ನು ಬಂಧಿಸಿದರೂ ಅಚ್ಚರಿಯಿಲ್ಲ.

ಅಂದರೆ ದ್ವೇಷ ಭಾಷಣ ಮಾಡುವುದು ಇಲ್ಲಿ ಓಕೆ. ಆದರೆ ಅದರ ವಿರುದ್ಧ ಪ್ರತಿಭಟನೆ ಮಾಡಿದರೆ ಅದರಿಂದ ಶಾಂತಿ ಭಂಗ ಆಗುತ್ತೆ. ಹುಷಾರ್... ಅಂತಾ ಹೇಳ್ತಾ ಇದೆ ಕರ್ನಾಟಕ ಸರಕಾರ. ಸಿದ್ದರಾಮಯ್ಯ ಸರಕಾರ ಇದ್ದಿದ್ರೆ ಹೀಗೆಲ್ಲ ಆಗ್ಲಿಕ್ಕೆ ಬಿಡ್ತಾನೆ ಇರ್ಲಿಲ್ಲ, ಈ ಸರಕಾರ ಹೋಗಿ ಸಿದ್ದರಾಮಯ್ಯ ಸರಕಾರ ಬರ್ಬೇಕು, ಆವಾಗ ಇದಕ್ಕೆಲ್ಲ ಸರಿಯಾಗಿ ಮದ್ದು ಮಾಡ್ತಾರೆ, ಸಿದ್ದರಾಮಯ್ಯ ಸರಕಾರ ಬಂದ್ರೆ ಕೋಮುವಾದಿಗಳಿಗೆ,

ದ್ವೇಷ ಭಾಷಣಕಾರರಾಗಿ ಉಳಿಗಾಲವಿಲ್ಲ ಅಂತ ಕೆಲವರು ವ್ಯಂಗ್ಯವಾಗಿ ಹೇಳ್ತಾ ಇರೋದು ಇದೇ ಕಾರಣಕ್ಕೆ.

ಇಲ್ಲಿ ರಾಜ್ಯ ಸರಕಾರ ಪ್ರಭಾಕರ್ ಭಟ್ ಅನ್ನು ಬಂಧಿಸಲ್ಲ ಅಂತ ಹೇಳ್ತಾ ಇರುವಾಗಲೇ ಆರೆಸ್ಸೆಸ್ ನ ಕೇಂದ್ರ ಕಚೇರಿ ಇರುವ ನಾಗ್ಪುರದಲ್ಲೇ ರಾಹುಲ್ ಗಾಂಧಿ ಹಾಗು ಮಲ್ಲಿಕಾರ್ಜುನ ಖರ್ಗೆಯವರು ಆರೆಸ್ಸೆಸ್ ವಿರುದ್ಧ ಸಮರ ಸಾರಿದ್ದಾರೆ. ಮೊದಲು ಆರೆಸ್ಸೆಸ್ ಅನ್ನು, ಅದರ ದ್ವೇಷ ಸಿದ್ಧಾಂತವನ್ನು ಸೋಲಿಸಬೇಕು. ಆಮೇಲಷ್ಟೇ ನಾವು ಬಿಜೆಪಿಯನ್ನು ಸೋಲಿಸಬಹುದು ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ದ್ವೇಷ ಭಾಷಣ ಮಾಡುವ ಆರೆಸ್ಸೆಸ್ ಮುಖಂಡನನ್ನು ಬಂಧಿಸದೇ ರಾಹುಲ್ ಗಾಂಧಿ ಹಾಗು ಖರ್ಗೆ ಮಾತನ್ನು ಪಾಲಿಸಲು ಹೊರಟಿದೆಯೇ ರಾಜ್ಯ ಕಾಂಗ್ರೆಸ್ ಸರಕಾರ ?.

ಅದಕ್ಕೆ ಜನ ಹೇಳ್ತಾ ಇರೋದು - ಮೊದಲು ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಬರಬೇಕು ಅಂತ. ಈ ಹೊಸ ವರ್ಷದಲ್ಲಾದರೂ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಬರಲಿ. ಏನಂತೀರಿ...

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!