ಈ ದೇಶದಲ್ಲಿ ಪ್ರತಿಯೊಂದು ಆರ್ಥಿಕ ಅಕ್ರಮವನ್ನೂ ವಿಪಕ್ಷಗಳ ನಾಯಕರು ಮಾತ್ರ ಮಾಡುತ್ತಿದ್ದಾರಾ ?

Update: 2023-08-30 17:35 GMT
Editor : Ismail | Byline : ಆರ್. ಜೀವಿ

ಈ ದೇಶದಲ್ಲಿ ಪ್ರತಿಯೊಂದು ಆರ್ಥಿಕ ಅಕ್ರಮವನ್ನೂ ವಿಪಕ್ಷಗಳ ನಾಯಕರು ಮಾತ್ರ ಮಾಡುತ್ತಿದ್ದಾರಾ?. ವಿಶ್ವದಲ್ಲೇ ಅತ್ಯಂತ ಶ್ರೀಮಂತ ಪಕ್ಷದ, ದೇಶದಲ್ಲೇ ಅತ್ಯಂತ ಪವರ್ ಫುಲ್ ಪಕ್ಷದ ರಾಜಕಾರಣಿಗಳು ಸಂಪೂರ್ಣ ಪರಿಶುದ್ಧರೇ ?. ಅವರು ಯಾವುದೇ ಭ್ರಷ್ಟಾಚಾರ, ಅಕ್ರಮ ಮಾಡಿಯೇ ಇಲ್ವಾ ?. ಚುನಾವಣೆ ಸಮೀಪಿಸುತ್ತಿರುವ ರಾಜ್ಯಗಳಲ್ಲಿ ವಿಪಕ್ಷದ ನಾಯಕರು ಭಯಂಕರ ಅಕ್ರಮ ಮಾಡ್ತಾ ಇದ್ದಾರಾ ?. ಅದೇ ರಾಜ್ಯದಲ್ಲಿರುವ ಬಿಜೆಪಿಯವರು ಒಂದೇ ಒಂದು ಅಕ್ರಮ ಮಾಡಲಿಲ್ವಾ ?. ಇಲ್ಲಿ ಪತ್ರಕರ್ತರು ವರದಿ ಮಾಡುವುದು, ಪ್ರಾಧ್ಯಾಪಕರು ಪ್ರಬಂಧ ಮಂಡನೆ ಮಾಡುವುದೇ ಅಪರಾಧವೇ ?. ಇದು ಮತ್ತೆ ಮತ್ತೆ ಈ ದೇಶದ ಜನರನ್ನು ಕಾಡುವ ಪ್ರಶ್ನೆಯಾಗಿದೆ.

ಈಗ ಒಂದೆಡೆ ಪ್ರತಿಪಕ್ಷದ ಸರ್ಕಾರವಿರುವ ಛತ್ತಿಸ್‌ಘಡದಂಥ ರಾಜ್ಯದಲ್ಲಿ ನಿರಂತರ ಇಡಿ ಮತ್ತು ಐಟಿ ದಾಳಿ. ಇನ್ನೊಂದೆಡೆ ಸತ್ಯ ಹೇಳುವ ಪತ್ರಕರ್ತರು, ಪ್ರೊಫೆಸರುಗಳ ವಿರುದ್ಧ ದಾಳಿಗಳು. ರೈತರು, ಜನಸಾಮಾನ್ಯರ ಪರವಾಗಿ ಮಾತನಾಡಿದರೆ ಪತ್ರಕರ್ತನ ಟ್ವಿಟರ್ ಖಾತೆಯನ್ನೇ ಅಮಾನತು ಮಾಡಲಾಗುತ್ತದೆ. ಸರ್ಕಾರದ ಯೋಜನೆಯ ಸ್ಥಿತಿ ಬಗ್ಗೆ ಸತ್ಯ ಹೇಳಿದರೆ ಎಫ್ಐಆರ್ ಹಾಕಲಾಗುತ್ತದೆ. ರೇಡ್, ಬಂಧನ, ಬೆದರಿಕೆ, ಕೇಸ್ ಇಂಥ ಎಲ್ಲವನ್ನೂ ಬಳಸಿಕೊಂಡು ತನ್ನನ್ನು ಪ್ರಶ್ನಿಸುವವರನ್ನು ಹತ್ತಿಕ್ಕುತ್ತಿರುವ, ಭಯದಲ್ಲಿ ಇಡುತ್ತಿರುವ ಸರ್ಕಾರ ದೇಶದಲ್ಲಿ ಏನು ಮಾಡಹೊರಟಿದೆ?.

ಛತ್ತೀಸ್‌ಘಡದಲ್ಲಿ ನಡೆದಿರುವ ನಿರಂತರ ಇಡಿ ಮತ್ತು ಐಟಿ ದಾಳಿಗಳ ವಿಚಾರವನ್ನೇ ತೆಗೆದುಕೊಳ್ಳಿ. ಅಲ್ಲಿ ಇಡಿ ಮತ್ತು ಐಟಿ ದಾಳಿಗೆ ಒಳಗಾಗದೇ ಇರುವ ಯಾವುದಾದರೂ ಇಲಾಖೆಗಳು ಇವೆಯೆ?. ಇಡಿ ಅಥವಾ ಐಟಿ ದಾಳಿಗೆ ಒಳಗಾಗದ ಯಾವುದಾದರೂ ಜಿಲ್ಲೆಗಳು ಆ ರಾಜ್ಯದಲ್ಲಿ ಇವೆಯೆ?. ವರದಿಗಳ ಪ್ರಕಾರ, ಜಿಎಸ್ಟಿ, ಸಾರಿಗೆ, ಖನಿಜ, ಅಬಕಾರಿ, ಕಾರ್ಮಿಕ ಇಲಾಖೆ, ಕಡೆಗೆ ಮುನ್ಸಿಪಾಲಿಟಿಯನ್ನೂ ಬಿಡದೆ ದಾಳಿ ನಡೆಸಲಾಗಿದೆ. ಇಡೀ ಛತ್ತಿಸ್‌ಘಡ ಸರ್ಕಾರವನ್ನೇ ಗುರಿ ಮಾಡಲಾಗಿದೆಯೆ? ಇದು ನಿಜವಾಗಿಯೂ ಭ್ರಷ್ಟಾಚಾರದ ವಿರುದ್ಧದ ದಾಳಿಯೆ ಅಥವಾ ಇಡಿ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ದಾಳಿಯೆ?.

ಅಲ್ಲಿ ಈ ಹಿಂದೆ 15 ವರ್ಷಗಳ ಕಾಲ ಇದ್ದ ಬಿಜೆಪಿಯ ರಮಣ್ ಸಿಂಗ್ ಸರ್ಕಾರದಲ್ಲಿ ನಡೆದಿವೆಯೆನ್ನಲಾಗುವ ಹಗರಣಗಳ ಬಗ್ಗೆ ಇಡಿಗೆ ಏನೂ ಕಂಡಿಲ್ಲವೆ?. ಯಾವುದೇ ಇಲಾಖೆಯಲ್ಲಿ ಹಗರಣ ನಡೆದಿದೆ ಎಂದಾದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿಯೂ ಅದಕ್ಕೆ ಏನಾದರೂ ನಂಟಿರಲೇ ಬೇಕಲ್ವಾ ?. ಇಡಿ ತನ್ನ ದಾಳಿ ಅಥವಾ ತನಿಖೆ ಸಂದರ್ಭದಲ್ಲಿ ಆ ಸಾಧ್ಯತೆಯ ಬಗ್ಗೆಯೂ ಗಮನ ಹರಿಸುತ್ತದೆಯೆ ಅಥವಾ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲವೆ?.

ಬಿಜೆಪಿಯ ರಮಣ್ ಸಿಂಗ್ ಸಿಎಂ ಆಗಿದ್ದ ಅವಧಿಯಲ್ಲಿ ಇಡಿ ಎಷ್ಟು ಬಾರಿ ಛತ್ತಿಸ್ಘಡದ ಮೇಲೆ ದಾಳಿ ನಡೆಸಿತ್ತು?. ರಮಣ್ ಸಿಂಗ್ ಸರ್ಕಾರದ ಹೆಸರು ಅಕ್ಕಿ ಹಗರಣದಲ್ಲಿ ಕೇಳಿ ಬಂದಿತ್ತು. ಇನ್ನೂ ಅಂಥ ಏನೇನು ಹಗರಣಗಳಿದ್ದವೊ? ಹಾಗಾದರೆ ರಮಣ್ ಸಿಂಗ್ ಅವರನ್ನು ತನಿಖೆಗೆ ಒಳಪಡಿಸಬೇಕೆಂದು ಇಡಿಗೆ ಯಾವತ್ತೂ ಅನ್ನಿಸಲೇ ಇಲ್ಲವೆ?.

ಈಗ ನೋಡಿದರೆ, ಅಲ್ಲಿ ನಿರಂತರ ದಾಳಿಗಳು ನಡೆಯುತ್ತಿರುವುದರ ಬಗ್ಗೆ ವರದಿಗಳು ಬರುತ್ತಲೇ ಇವೆ. ಎಷ್ಟರ ಮಟ್ಟಿಗೆಂದರೆ, ಮೊನ್ನೆ ಆಗಸ್ಟ್ 23ರಂದು ಇಡೀ ದೇಶವೇ ಇಸ್ರೋದ ಚಂದ್ರಯಾನದ ಬಗ್ಗೆ ಸಂಭ್ರಮಿಸುತ್ತಿದ್ದ ದಿನವೂ ಅಲ್ಲಿ ಇಡಿ ದಾಳಿ ನಡೆಯಿತು. ಅವತ್ತೇ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಜನ್ಮದಿನವೂ ಇತ್ತು. ಆದರೆ ಇಡಿಗೆ ಮಾತ್ರ ಇದಾವುದೂ ಲೆಕ್ಕಕ್ಕಿರಲಿಲ್ಲ.

ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ರಾಜಕೀಯ ಸಲಹೆಗಾರ ವಿನೋದ್ ವರ್ಮಾ, ವಿಶೇಷ ಕರ್ತವ್ಯಾಧಿಕಾರಿಗಳಾದ ಆಶಿಶ್ ವರ್ಮಾ ಮತ್ತು ಮನೀಷ್ ಬಂಚೋರ್ ಅವರ ನಿವಾಸಗಳ ಮೇಲೆ ಅವತ್ತು ಇಡಿ ರೇಡ್ ಆಯಿತು. ರಾಜ್ಯ ಸರ್ಕಾರಕ್ಕೆ ಹತ್ತಿರದವರೆನ್ನಲಾದ ವಿಜಯ್ ಭಾಟಿಯಾ ಎಂಬ ಉದ್ಯಮಿಯ ಮೇಲೆಯೂ ರೇಡ್ ನಡೆಯಿತು.

ಒಂದೆಡೆ ಭೂಪೇಶ್ ಬಘೇಲ್ ಅವರಿಗೆ ಮೋದಿ ಜನ್ಮದಿನದ ಶುಭಾಶಯ ಕೋರಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರೆ, ಮತ್ತೊಂದೆಡೆ ಅವರ ರಾಜಕೀಯ ಸಲಹೆಗಾರ ಮತ್ತು ಅಧಿಕಾರಿಗಳ ಮೇಲೆ ಇಡಿ ದಾಳಿ ನಡೆದಿತ್ತು.

ಅದಕ್ಕೆ ಭೂಪೇಶ್ ಬಘೇಲ್ ಟ್ವೀಟ್ ಮೂಲಕ ಖಡಕ್ಕಾಗಿಯೇ ಪ್ರತಿಕ್ರಿಯಿಸಿದ್ದರು: "ಗೌರವಾನ್ವಿತ ಪ್ರಧಾನಿಯವರೆ ಮತ್ತು ಅಮಿತ್ ಶಾ ಅವರೆ, ಇವತ್ತು ನನ್ನ ಜನ್ಮದಿನದ ದಿನವೂ ನೀವು ನನ್ನ ರಾಜಕೀಯ ಸಲಹೆಗಾರ ಮತ್ತು ನನ್ನ ಅಧಿಕಾರಿಗಳ ಮೇಲೆ ಇಡಿ ದಾಳಿ ನಡೆಯುವಂತೆ ನೋಡಿಕೊಂಡಿದ್ದೀರಿ. ನಿಮ್ಮ ಈ ಅಮೂಲ್ಯ ಉಡುಗೊರೆಗಾಗಿ ಧನ್ಯವಾದಗಳು" ಎಂಬ ಬಘೇಲ್ ಪ್ರತಿಕ್ರಿಯೆ ಮಾರ್ಮಿಕವಾಗಿತ್ತು.

ಆದರೆ ಅದಾವುದೂ ಅಂತವರಿಗೆ ನಾಟುವುದಿಲ್ಲ ಎಂಬುದೂ ಅಷ್ಟೇ ಸತ್ಯ. ರಾಹುಲ್ ಗಾಂಧಿ ಹೇಳುವಂತೆ, ಬಿಜೆಪಿ ದೇಶದ ಎಲ್ಲ ಸಂಸ್ಥೆಗಳನ್ನೂ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಮಾಧ್ಯಮ, ಅಧಿಕಾರಶಾಹಿ, ಚುನಾವಣಾ ಆಯೋಗ, ನ್ಯಾಯಾಂಗ ಎಲ್ಲದರ ಮೇಲೆಯೂ ಬಿಜೆಪಿ ಹಿಡಿತ ಸಾಧಿಸಿದೆ. ಎಲ್ಲವೂ ಮುಕ್ತ ಮತ್ತು ನಿರ್ಭೀತವಾಗಿದ್ದರೆ, ಮಾಧ್ಯಮಗಳು ಶುದ್ಧವಾಗಿದ್ದರೆ, ದೇಶದ ಯಾವುದೇ ಸಂಸ್ಥೆಗಳ ಮೇಲೆ ಹಿಡಿತ ಇಲ್ಲದೇ ಹೋಗಿದ್ದರೆ ಬಿಜೆಪಿಗೆ ಚುನಾವಣೆ ಗೆಲ್ಲುವುದು ಸಾಧ್ಯವೇ ಆಗುತ್ತಿರಲಿಲ್ಲ. ಒಂದು ಪಕ್ಷ ಇನ್ನೊಂದರ ವಿರುದ್ಧ ಹೋರಾಡುವ ಬದಲು, ಎಲ್ಲ ಸಂಸ್ಥೆಗಳನ್ನು ತನ್ನ ಹಿಡಿತದಲ್ಲಿ ತೆಗೆದುಕೊಂಡು, ಅವುಗಳ ಸ್ವಾತಂತ್ರ್ಯ ದಮನಗೊಳಿಸಿ, ಜನರನ್ನು ಭಯದಲ್ಲಿರಿಸಿ, ಮರೆಯಿಂದ ಬಾಣ ಹೂಡುವ ಕೆಲಸ ನಡೆಯುತ್ತಿದೆ.

ಇತ್ತೀಚೆಗೆ ಛತ್ತೀಸ್ಘಡದಲ್ಲಿನ ಕಾಂಗ್ರೆಸ್ ಅಧಿವೇಶನದ ವೇಳೆಯೂ ರೇಡ್ ನಡೆದಿತ್ತು. ಕಾಂಗ್ರೆಸ್ ನಾಯಕರು, ಪಕ್ಷದ ಪದಾಧಿಕಾರಿಗಳು, ಕಡೆಗೆ ವ್ಯಾಪಾರಿಗಳು, ಉದ್ಯಮಿಗಳ ಮೇಲೆಯೂ ದಾಳಿ ನಡೆದಿತ್ತು. ಅಲ್ಲಿ ಏನೂ ಸಿಗಲಿಲ್ಲ. ಆದರೂ ದಿನವೆಲ್ಲ ಮನೆಮಂದಿಯನ್ನೆಲ್ಲ ಕೂರಿಸಿ ಇಡಲಾಯಿತು. ಕಾಂಗ್ರೆಸ್ ಅಧಿವೇಶನಕ್ಕೆ ನಾಲ್ಕು ದಿನ ಮೊದಲು ಕಾಂಗ್ರೆಸ್ ನಾಯಕರು ಮತ್ತು ಶಾಸಕರ ನಿವಾಸಗಳ ಮೇಲೆ ರೇಡ್ ಶುರುವಾಗಿತ್ತು.

ಕಾಂಗ್ರೆಸ್ ಖಜಾಂಚಿ ರಾಮ್ ಗೋಪಾಲ್ ವರ್ಮಾ, ವಕ್ತಾರ ಆರ್ ಪಿ ಸಿಂಗ್ ಮೇಲೆ ರೇಡ್ ನಡೆಯಿತು. ಕಲ್ಲಿದ್ದಲು ವ್ಯಾಪಾರಿ, ಕಾಂಗ್ರೆಸ್ ನಾಯಕ ಸೂರ್ಯಕಾಂತ್ ತಿವಾರಿ, ಸನ್ನಿ ಅಗರ್ವಾಲ್, ವಿನೋದ್ ತಿವಾರಿ ಮೇಲೆಯೂ ರೇಡ್ ಆಗಿತ್ತು.

ಆಗಸ್ಟ್ 21ರಂದು ರಾಯಪುರ್ ಮತ್ತು ಭಿಲಾಯಿಯಲ್ಲಿ ಇಡಿ ದಾಳಿಗಳಾದವು. ವರದಿಗಳ ಪ್ರಕಾರ ರೈಸ್ ಮಿಲ್ಲುಗಳು, ಪೆಟ್ರೋಲ್ ಪಂಪ್ ಅಧಿಕಾರಿಗಳು, ವಕೀಲರು ಮತ್ತು ಜುವೆಲ್ಲರ್ಸ್ ಮೇಲೆಯೂ ದಾಳಿಗಳು ನಡೆದವು. ಜುಲೈ 21ರಂದು ಐಎಎಸ್ ಅಧಿಕಾರಿ ರಾನು ಸಾಹು, ಕೋರ್ಬಾ ಮುನ್ಸಿಪಾಲಿಟಿ ಅಧ್ಯಕ್ಷ ಪ್ರಭಾಕರ್ ಪಾಂಡೆ ಮೇಲೆ ದಾಳಿಯಾಯಿತು. ಕಾಂಗ್ರೆಸ್ ಖಜಾಂಚಿ ರಾಮ್ ಗೋಪಾಲ್ ಅಗರ್ವಾಲ್ ಮೇಲೆಯೂ ಇಡಿ ದಾಳಿ ನಡೆಯಿತು.

ಆಗಸ್ಟ್ 3ರಂದು ಕೂಡ ಹಲವು ಜಿಲ್ಲೆಗಳಲ್ಲಿ ರೇಡ್ ನಡೆಯಿತು. ಆಗಲೂ ಕಾಂಗ್ರೆಸ್ ನಾಯಕರ ಮೇಲೆ, ಟೈಲ್ಸ್ ವ್ಯಾಪಾರಿಗಳ ಮೇಲೆ ರೇಡ್ ಆಯಿತು. ಭಿಲಾಯ್ ಶಾಸಕ ದೇವೇಂದ್ರ ಯಾದವ್ ಮತ್ತು ಬೈಲಾಘಡ ಶಾಸಕ ಚಂದ್ರದೇವ್ ರೈ, ಮತ್ತೋರ್ವ ಶಾಸಕ ಅಗ್ನಿ ಚಂದ್ರಾಕರ್ ಮೇಲೆಯೂ ರೇಡ್ ಆಗಿತ್ತು.

2023ರ ಮಾರ್ಚ್ನಲ್ಲಿ ಅಬಕಾರಿ ಭವನದ ಮೇಲೆ ಲಿಕ್ಕರ್ ಹಗರಣಕ್ಕೆ ಸಂಬಂಧಿಸಿ ಇಡಿ ದಾಳಿ ನಡೆಯಿತು. ಜೈಲಿನಲ್ಲಿರುವ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್, ಮುಖ್ಯಮಂತ್ರಿಯ ಉಪ ಕಾರ್ಯದರ್ಶಿ ಸೌಮ್ಯಾ ಚೌರಾಸಿಯಾ ಅವರನ್ನು ಕೂಡ ತನಿಖೆಗೆ ಒಳಪಡಿಸಲು ಅನುಮತಿ ಕೊಡಲಾಗಿತ್ತು. ಒಂಬತ್ತು ತಿಂಗಳ ಹಿಂದೆ ಧಮ್ತಾರಿ ಜಿಲ್ಲೆಯ ಖನಿಜ ಇಲಾಖೆ ಅಧಿಕಾರಿ ಭಜರಂಗ್ ಪೈಕ್ರಾ ಅವರನ್ನು ಇಡಿ ಹಲವು ಗಂಟೆಗಳ ಕಾಲ ಪ್ರಶ್ನಿಸಿತ್ತು. ಆರು ತಿಂಗಳ ಹಿಂದೆ ರಾಯಪುರ್ ಜಿಲ್ಲೆಯ ಕಾರ್ಮಿಕ ಭವನ ಮತ್ತು ಜಿಎಸ್ಟಿ ಅಧಿಕಾರಿಗಳ ಮೇಲೆ ಇಡಿ ದಾಳಿ ನಡೆದಿತ್ತು. ಸಾರಿಗೆ ಆಯುಕ್ತ ದೀಪಾಂಶು ಕಬ್ರಾ ಮೇಲೆಯೂ ಇಡಿ ದಾಳಿ ನಡೆದಿದೆ. ಅಲ್ಲದೆ ಹಲವಾರು ಐಎಎಸ್, ಐಪಿಎಸ್ ಅಧಿಕಾರಿಗಳ ವಿರುದ್ಧವೂ ರೇಡ್ ಇಲ್ಲವೆ ವಿಚಾರಣೆ ನಡೆದಿದೆ.

ಪ್ರತಿಪಕ್ಷದ ಸರ್ಕಾರವಿರುವ ರಾಜ್ಯಗಳಲ್ಲಿ ಯಾವುದೇ ಸಮಯದಲ್ಲಿಯೂ ಅಧಿಕಾರಿಗಳಿಗೆ ವಿಚಾರಣೆಗಾಗಿ ಇಡಿ ಸಮನ್ಸ್ ಬರಬಹುದು ಅಥವಾ ದಾಳಿ ನಡೆಯಬಹುದು ಎಂಬ ಆತಂಕ ಕಾಡುವ ಹಾಗಾಗಿದೆ. ಹಾಗೆಯೇ ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಸಂಘಟಕರ ಮೇಲೆಯೂ ಕಣ್ಣಿಡಲಾಗಿದೆ. ಛತ್ತೀಸ್ಘಡದ ಯಾವುದಾದರೂ ಇಲಾಖೆಯನ್ನು ಬಿಟ್ಟಿವೆಯೆ, ಯಾವ ಜಿಲ್ಲೆಗಳನ್ನು ಬಿಡಲಾಗಿದೆ, ಯಾವ ಅಧಿಕಾರಿಗಳ ಮೇಲೆ ದಾಳಿಯಾಗಿಲ್ಲ ಎಂಬುದನ್ನು ಇಡಿ ಮತ್ತು ಐಟಿ ಹೇಳಬೇಕು.

ಛತ್ತಿಸ್ಘಡದ ಮೇಲೆ ಸತತ ದಾಳಿ ನಡೆಸುವ ಇಡಿ ಅಥವಾ ಐಟಿ, ಎಷ್ಟು ಸಲ ನೆರೆಯ ಮಧ್ಯಪ್ರದೇಶದ ಮೇಲೆ, ಅಲ್ಲಿನ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಲಹೆಗಾರರ ಮೇಲೆ, ಬಿಜೆಪಿ ಶಾಸಕರ ಮೇಲೆ ದಾಳಿ ನಡೆಸಿವೆ?. ಅಲ್ಲಿ ಬಿಜೆಪಿ ಶಾಸಕರ ಮೇಲಾಗಲೀ ಮಂತ್ರಿಗಳ ಮೇಲಾಗಲೀ ಮುಖ್ಯಮಂತ್ರಿಯ ಕರ್ತವ್ಯಾಧಿಕಾರಿಗಳ ಮೇಲಾಗಲೀ ಅವರಿಗೆ ಹತ್ತಿರವಿರುವ ಐಎಎಸ್ ಅಧಿಕಾರಿಗಳ ಮೇಲಾಗಲೀ ಇಡಿ ದಾಳಿ ನಡೆದಿರುವ ವರದಿಗಳಿಲ್ಲ. ಬಹುಶಃ ನಡೆದೂ ಇಲ್ಲ.

ಆದರೆ, ಒಂದು ವರದಿಯಂತೆ ಮಧ್ಯಪ್ರದೇಶದಲ್ಲಿ ಹಿಂದಿನ ಬಿಷಪ್ ಒಬ್ಬರ ನಿವಾಸದ ಮೇಲೆ ಮತಾಂತರ ಮತ್ತು ವಿದೇಶಿ ಫಂಡಿಂಗ್ ವಿಚಾರವಾಗಿ ಇಡಿ ರೇಡ್ ನಡೆದಿತ್ತು. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಪೀಪಲ್ಸ್ ಗ್ರೂಪ್ ಮೇಲೆ ಇಡಿ ದಾಳಿ ನಡೆದಿತ್ತು. ಶಿವರಾಜ್ ಸಿಂಗ್ ಚೌಹಾಣ್ ಹತ್ತಿರದವರ ಮೇಲೆ ಇಡಿ ದಾಳಿ ನಡೆದಿದೆಯೆ ಎಂದು ಹುಡುಕಿದರೆ ಭೂಪೇಶ್ ಬಘೇಲ್ ಅವರ ಹತ್ತಿರದವರ ಮೇಲಿನ ಇಡಿ ದಾಳಿಗಳ ಬಗ್ಗೆ ಮಾಹಿತಿ ಸಿಕ್ಕಿತು ಎಂದು ಪತ್ರಕರ್ತ ರವೀಶ್ ಕುಮಾರ್ ತಮ್ಮ ವೀಡಿಯೊದಲ್ಲಿ ಹೇಳಿದ್ದಾರೆ.

ಭೂಪೇಶ್ ಬಘೇಲ್ ಅವರು ಹೇಳುವ ಪ್ರಕಾರ, ಸಣ್ಣ ರಾಜ್ಯದ ಮೇಲೆ ಇನ್ನೂರಕ್ಕೂ ಹೆಚ್ಚು ಐಟಿ, ಇಡಿ ಮ್ತತಿತರ ದಾಳಿಗಳಾಗಿವೆ. ಭಯದ ವಾತಾವರಣವಿದೆ. ಇಡಿಯಲ್ಲಿ ಸಂಜಯ್ ಮಿಶ್ರಾ ಅಧಿಕಾರಾವಧಿ ಮುಂದುವರಿದಿದೆ. ಅಷ್ಟರೊಳಗೆ ಅವರು ಭಯ ಹುಟ್ಟಿಸುವುದಕ್ಕೆ ಎಲ್ಲ ಅಧಿಕಾರವನ್ನೂ ಬಳಸುತ್ತಾರೆ. ಯಾಕೆಂದರೆ ಅಧಿಕಾರಾವಧಿ ವಿಸ್ತರಿಸಿರುವ ತನ್ನ ಬಾಸ್ಗಳಿಗೆ ಏನು ಬೇಕೊ ಅದೆಲ್ಲವನ್ನೂ ಅವರು ಮಾಡುತ್ತಾರೆ. ಅಧಿಕಾರದಲ್ಲಿರುವ ಪಕ್ಷವೊಂದು ಹೀಗೆ ಮಾಡುತ್ತಿದ್ದರೆ ಇಂಥ ಅನಗತ್ಯ ಮೂಗು ತೂರಿಸುವಿಕೆ ಮತ್ತು ಕಿರುಕುಳವನ್ನು ತಡೆಯುವುದು ನ್ಯಾಯಾಲಯದ ಜವಾಬ್ದಾರಿ.

ಭೂಪೇಶ್ ಬಘೇಲ್ ಅವರ ಮಂತ್ರಿಗಳು ಮತ್ತು ಶಾಸಕರ ಮೇಲೆ ಮತ್ತೆ ಮತ್ತೆ ಏಕೆ ದಾಳಿಯಾಗುತ್ತಿದೆ ಮತ್ತು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಮಂತ್ರಿಗಳ ಮೇಲೆ ಏಕೆ ದಾಳಿ ನಡೆದಿಲ್ಲ ಎಂಬುದರ ಬಗ್ಗೆ ಇಡಿ ಹೇಳಬೇಕಿದೆ. ಮಧ್ಯಪ್ರದೇಶ ಭ್ರಷ್ಟಾಚಾರ ಮುಕ್ತ ಎಂದೇನಾದರೂ ಇಡಿ ಘೋಷಿಸಿದೆಯೆ?.

ಇಂಡಿಯನ್ ಎಕ್ಸ್ ಪ್ರೆಸ್ ನ ದೀಪ್ತಿಮಾನ್ ತಿವಾರಿ 2022ರ ಸೆಪ್ಟೆಂಬರ್ನಲ್ಲಿ ಇಡಿ ದಾಳಿಗಳ ಬಗ್ಗೆ ಮಾಡಿರುವ ವಿವರವಾದ ವರದಿ ಪ್ರಕಾರ,

2014ರಿಂದ ರಾಜಕೀಯ ನಾಯಕರ ಮೇಲಿನ ಇಡಿ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಿವೆ. ಇವುಗಳಲ್ಲಿ ಶೇ.95ರಷ್ಟು ಪ್ರಕರಣಗಳು ಪ್ರತಿಪಕ್ಷದ ನಾಯಕರ ವಿರುದ್ಧವೇ ಇವೆ.

ಸಿಬಿಐ ಸಿಬ್ಬಂದಿಯ ಮೂರನೇ ಒಂದರಷ್ಟು ಸಿಬ್ಬಂದಿಯೂ ಇರದ ಇಡಿ 2014ರಿಂದ ಎನ್ಡಿಎ 2ರ ಅವಧಿಯಲ್ಲಿ ಪ್ರತಿಪಕ್ಷಗಳ ನಾಯಕರು ಮತ್ತವರ ಸಹವರ್ತಿಗಳ ಮೇಲೆ ನಡೆಸಿರುವ ದಾಳಿಗಳು ಹೆಚ್ಚಿವೆ. 2014ರಿಂದ 2022ರ ಅವಧಿಯಲ್ಲಿ 121 ಪ್ರಮುಖ ನಾಯಕರ ವಿರುದ್ಧ ಇಡಿ ಒಂದಲ್ಲ ಒಂದು ಬಗೆಯ ಕ್ರಮ ಕೈಗೊಂಡಿದೆ. ಮತ್ತು ಇವರಲ್ಲಿ 115 ಅಂದರೆ ಶೇ.95ರಷ್ಟು ನಾಯಕರು ಪ್ರತಿಪಕ್ಷದವರಾಗಿದ್ದಾರೆ. ಯುಪಿಎ ಅವಧಿಯಲ್ಲಿ 2004ರಿಂದ 2014ರ ಅವಧಿಯಲ್ಲಿ 26 ನಾಯಕರನ್ನು ತನಿಖೆಗೆ ಒಳಪಡಿಸಲಾಗಿತ್ತು. ಇವರಲ್ಲಿ 14 ಅಂದರೆ ಶೇ.54ರಷ್ಟು ನಾಯಕರು ಮಾತ್ರವೇ ಪ್ರತಿಪಕ್ಷದವರಾಗಿದ್ದರು. ಮಹಾರಾಷ್ಟ್ರದಲ್ಲಿ ಹೇಗೆ ಸರ್ಕಾರವನ್ನು ಬೀಳಿಸಲು, ಪ್ರತಿಪಕ್ಷದವರನ್ನು ಸೆಳೆಯಲು ಇಡಿ ಬಳಕೆಯಾಗುತ್ತಿದೆ ಎಂಬುದನ್ನು ಗಮನಿಸಬಹುದು.

ಕೇಂದ್ರ ಮಂತ್ರಿಯೊಬ್ಬರು, ಪ್ರತಿಪಕ್ಷದವರನ್ನು ಸುಮ್ಮನೆ ಇರಿ, ಇಲ್ಲದಿದ್ದರೆ ಇಡಿ ನಿಮ್ಮ ಮನೆಬಾಗಿಲು ತಟ್ಟಲಿದೆ ಎಂದು ಬೆದರಿಸುತ್ತಾರೆಂದರೆ ಪರಿಸ್ಥಿತಿ ಎಂಥದು ಎಂಬುದನ್ನು ಊಹಿಸಬಹುದು. 2023 ಫೆಬ್ರವರಿ 7ರಂದು "ವಿಪಕ್ಷ ನಾಯಕರು ಇಡಿ ಕಾರಣದಿಂದಾಗಿ ಒಟ್ಟಾಗಿರುವುದಕ್ಕೆ ಇಡಿಗೆ ಧನ್ಯವಾದ ಹೇಳಬೇಕು. ಇಡಿ ಇವರನ್ನೆಲ್ಲ ಒಂದಾಗಿಸಿದೆ" ಎಂದಿದ್ದರು ಪ್ರಧಾನಿ ಮೋದಿ. ಆದರೆ ಭ್ರಷ್ಟಾಚಾರ ಆರೋಪ ಹೊತ್ತವರು ಬಿಜೆಪಿ ಸೇರಿದ ತಕ್ಷಣ ಏನಾಗುತ್ತದೆ ಎಂಬುದೂ ಎಲ್ಲರಿಗೂ ಗೊತ್ತಿದೆ.

2022ರ ಸೆಪ್ಟೆಂಬರ್ 15ರಂದು, ಅಕ್ರಮ ಆಸ್ತಿ ಹೊಂದಿರುವ 100 ಟಿಎಂಸಿ ನಾಯಕರ ಪಟ್ಟಿಯನ್ನು ಇಡಿಗೆ ಕೊಡುವುದಾಗಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದರು. ಈ ಹೇಳಿಕೆ ಇಡಿ ಬಗೆಗಿನ ಬಿಜೆಪಿ ವಿಶ್ವಾಸವನ್ನು ಅಥವಾ ಇಡಿ ಅವರ ಕೈಯಲ್ಲಿಯೇ ಇದೆ ಎಂಬುದನ್ನು ಸೂಚಿಸುತ್ತದೆ.

ಸಿಬಿಐ ತನಿಖೆ ನಿಧಾನವಾಗಿರುವುದರಿಂದ ಟಿಎಂಸಿಯ ಅನೇಕ ನಾಯಕರ ವಿರುದ್ಧ ಇಡಿ ತನಿಖೆಗೆ ಕೇಂದ್ರ ಶಿಫಾರಸು ಮಾಡಿದೆ ಎಂದು ಮತ್ತೊಬ್ಬ ಬಿಜೆಪಿ ನಾಯಕ ದಿಲೀಪ್ ಘೋಷ್ ಹೇಳಿದ್ದರು. ಸಿಬಿಐ ಅಧಿಕಾರಿಗಳು ಭ್ರಷ್ಟರು, ಟಿಎಂಸಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದೂ ಅವರು ಆರೋಪಿಸಿದ್ದರು. ಬಿಜೆಪಿ ನಾಯಕನ ಇಂಥದೊಂದು ಗಂಭೀರ ಆರೋಪದ ಬಳಿಕ ಇಡಿಯೇನಾದರೂ ಸಿಬಿಐ ಅಧಿಕಾರಿಗಳ ಮೇಲೆ ದಾಳಿ ನಡೆಸಿತೆ?.

ಕೇಂದ್ರ ಗುಪ್ತದಳ ಆಯುಕ್ತರ ವಾರ್ಷಿಕ ವರದಿ ಪ್ರಕಾರ, ಭ್ರಷ್ಟಾಚಾರ ಸಂಬಂಧಿತ ಅತಿ ಹೆಚ್ಚು ದೂರುಗಳಿರುವುದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳ ವಿರುದ್ಧ. ಆದರೆ ಇಡಿ ಅವರಾರ ಮೇಲೆಯೂ ದಾಳಿ ನಡೆಸಲಿಲ್ಲ. ಮುಂದೆ ದಾಳಿ ಮಾಡುವುದೆ?. ಆದರೆ ಛತ್ತಿಸ್ಘಡದ ಮೇಲೆ ನಿರಂತರ ದಾಳಿ ನಡೆದಿದೆ. ಜೊತೆಗೆ ಜಾರ್ಖಂಡ್ ಮೇಲೆಯೂ ಇಡಿ ದಾಳಿ ನಡೆದಿದೆ,

ಆಗಸ್ಟ್ 23ರಂದು ಜಾರ್ಖಂಡ್ನಲ್ಲಿ 34 ಕಡೆ ಇಡಿ ದಾಳಿ ನಡೆಸಿತು. ರಾಜ್ಯ ಹಣಕಾಸು ಸಚಿವ ಮತ್ತವರ ಪುತ್ರನ ಮೇಲೆ ದಾಳಿಯಾಯಿತು. ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಇಡಿ ಸಮನ್ಸ್ ಕಳಿಸುತ್ತಿದೆ. ಇಡಿ ಸಮನ್ಸ್ ವಿರುದ್ಧ ಬಿಡುಗಡೆ ಪಡೆಯಲು ಸೊರೇನ್ ಸುಪ್ರೀಂ ಕೋರ್ಟ್ ಮೊರೆಹೋಗುವ ತಯಾರಿ ನಡೆಸಿದ್ದಾರೆ ಎಂಬ ವರದಿಯಿದೆ. ಹೇಮಂತ್ ಸೊರೇನ್ಗೂ ಮೊದಲು ಅಲ್ಲಿ ಬಿಜೆಪಿ ಸರ್ಕಾರವಿತ್ತು. ಆ ಸರ್ಕಾರದ ಉದ್ದಕ್ಕೂ ಹಗರಣಗಳು ನಡೆದ ಬಗ್ಗೆ ಆರೋಪಗಳಿದ್ದವು. ಆದರೆ ಎಷ್ಟು ಬಿಜೆಪಿ ನಾಯಕರ ಮೇಲೆ ದಾಳಿ ನಡೆಸಲಾಯಿತು ಎಂಬುದನ್ನು ಇಡಿ ಹೇಳಬೇಕಿದೆ.

ಛತ್ತಿಸ್ಘಡದ ಮೇಲೆ ಬಿಜೆಪಿ ಕೆಂಗಣ್ಣು ಬಿದ್ದಿದ್ದು ಯಾವಾಗಿನಿಂದ?.

ಭೂಪೇಶ್ ಬಘೇಲ್ ಅವರು ಹೇಳುವ ಪ್ರಕಾರ, 2020ರ ಜುಲೈನಿಂದ ಐಟಿ ರೇಡ್ನೊಂದಿಗೆ ಈ ಸರಣಿ ದಾಳಿಗಳು ಶುರುವಾದವು. ಮದ್ಯ ಹಗರಣ ಎಂದು ಪ್ರಚಾರ ಮಾಡಲಾಯಿತು. ನಮ್ಮ ಸರ್ಕಾರಕ್ಕಿಂತ ಮೊದಲು ಅಬಕಾರಿ ಆದಾಯ 3900 ಕೋಟಿ ಇತ್ತು. ಈಗ ಅದು 6500 ಕೋಟಿ ಎನ್ನುತ್ತಾರೆ ಬಘೇಲ್ .

250 ಮಂದಿಯ ಐಟಿ ಟೀಂ ಇಡೀ ಛತ್ತೀಸ್ಘಡದ ಮೇಲೆ ದಾಳಿ ಮಾಡುತ್ತದೆ. ಅದರ ಬೆನ್ನಲೇ ಇಡಿ ಬರುತ್ತದೆ. ಇಡಿ ದಾಳಿ ಮುಗಿಸಿದ ಬೆನ್ನಲ್ಲೇ ಮತ್ತೆ ಐಟಿ ಬರುತ್ತದೆ. ಬೆದರಿಸುವುದು ನಡೆಯುತ್ತದೆ. ರಾಜಕಾರಣಿಗಳಿಗೆ ಅಧಿಕಾರಿಗಳಿಗೆ ಲಂಚ ಕೊಟ್ಟಿರುವುದಾಗಿ ಬರೆದು ಸಹಿ ಹಾಕಲು ಜನರನ್ನು ಬಲವಂತ ಮಾಡಲಾಗುತ್ತದೆ. ಇದು ಇಲ್ಲಿ ನಡೆಯುತ್ತಿರುವುದು ಎನ್ನುತ್ತಾರೆ ಬಘೇಲ್ .

ರಾಜಕೀಯವಾಗಿ ಎದುರಿಸಲು ತನಿಖಾ ಏಜನ್ಸಿಗಳನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ಈ ಹಿಂದಿನ ರಮಣ್ ಸಿಂಗ್ ಸರ್ಕಾರಕ್ಕೆ ಸಂಬಂಧಿಸಿದ ಎಷ್ಟು ಭ್ರಷ್ಟಾಚಾರ ಪ್ರಕರಣಗಳನ್ನು ರಾಜ್ಯ ಸರ್ಕಾರ ತನಿಖೆಗೆ ಎತ್ತಿಕೊಂಡಿದೆ ಎಂಬುದನ್ನು ಕಾಂಗ್ರೆಸ್ ಕೂಡ ಹೇಳಬೇಕಾದ ಅಗತ್ಯವಿದೆ.

ಏಪ್ರಿಲ್ನಲ್ಲಿ ಛತ್ತಿಸ್ಘಡ ಸರ್ಕಾರ ಮನಿ ಲಾಂಡರಿಂಗ್ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು.

ಇಡಿಯಂಥ ಕೇಂದ್ರ ಎಜನ್ಸಿಗಳನ್ನು ಬಿಜೆಪಿಯೇತರ ಸರ್ಕಾರಗಳ ವಿರುದ್ಧ ದುರ್ಬಳಕೆ ಮಾಡಿಕೊಳ್ಳಲಾಗುತ್ತಿರುವ ಬಗ್ಗೆ ಆರೋಪಿಸಲಾಗಿತ್ತು. ಲಿಕ್ಕರ್ ಹಗರಣದ ಇಡಿ ತನಿಖೆಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಆದರೆ ಈಗ ಸಿಬಿಐ ತನಿಖೆಗೆ ಬಿಲಾಸ್ಪುರ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಉದ್ದೇಶ ಈಗಿನ ಸರ್ಕಾರದ ಹೆಸರು ಕೆಡಿಸುವುದು. ಇದು ಪೂರ್ತಿಯಾಗಿ ರಾಜಕೀಯ ಪ್ರೇರಿತ ಎನ್ನುತ್ತಾರೆ ಬಘೇಲ್ .

ಈಗ ಬಂದಿರುವ ಮತ್ತೊಂದು ಸುದ್ದಿ ಕೂಡ ತನಿಖಾ ಸಂಸ್ಥೆಯ ವ್ಯಾಪ್ತಿಗೆ ಸಂಬಂಧಿಸಿದ್ದು. ವಿವಾದಿತ ಸಂಶೋಧನಾ ಪ್ರಬಂಧವೊಂದರ ತನಿಖೆಗಾಗಿ ಗುಪ್ತಚರ ತಂಡ ಅಶೋಕ ವಿವಿಗೆ ಹೋದ ವಿಚಾರ ಅದು. ದಿ ವೈರ್ ನಲ್ಲಿ ಈ ಬಗ್ಗೆ ವರದಿಯಾಗಿದೆ. ವರದಿ ಪ್ರಕಾರ, ಆ ಪ್ರಬಂಧದ ಲೇಖಕ ಸಬ್ಯಸಾಚಿ ದಾಸ್ ಮ್ತತ್ತು ವಿವಿಯ ಅರ್ಥಶಾಸ್ತ್ರ ವಿಭಾಗದ ಇತರ ಅಧ್ಯಾಪಕರುಗಳನ್ನು ತನಿಖೆಗೆ ಒಳಪಡಿಸಲು ಗುಪ್ತಚರ ಇಲಾಖೆ ಮುಂದಾಗಿದೆ.

ಸಂಶೋಧನಾ ಪ್ರಬಂಧವೊಂದರ ಸಂಬಂಧ ಗುಪ್ತಚರ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ ಎಂಬುದು ಆತಂಕ ಮೂಡಿಸುತ್ತದೆ. ಇದು ಎಂಥ ಸ್ಥಿತಿಯೆಂದರೆ, ಭಯಮುಕ್ತವಾಗಿರಲು, ಸರ್ಕಾರ ಸಿಟ್ಟಿಗೇಳಬಹುದಾದ ಯಾವ ವಿಷಯವನ್ನೂ ಮಾತನಾಡುವಂತಿಲ್ಲ. ಇಂಥ ಅದೆಷ್ಟು ಸಂಶೋಧನಾ ಪ್ರಬಂಧಗಳು ಬಂದಿರಬಹುದು. ಅವ್ನನೆಲ್ಲ ಈಗ ತನಿಖೆಗೆ ಒಳಪಡಿಸಲಾಗುತ್ತದೆಯೆ?. ಪಾಠ ಹೇಳುವವರ ಮೇಲೆಯೂ ಉಕ್ಕಿನ ಹಿಡಿತ ಬಿಗಿಗೊಳಿಸುವ ಯತ್ನವೆ ಇದು?.

ಇದೆಲ್ಲದರ ನಡುವೆಯೇ, ಪತ್ರಕರ್ತ ಮನದೀಪ್ ಪುನಿಯಾ ಅವರ, ಗಾಂವ್ ಸವೇರಾ ಹೆಸರಿನ ಟ್ವಿಟರ್ ಹ್ಯಾಂಡಲ್ ಮತ್ತು ಫೇಸ್ಬುಕ್ ಪುಟವನ್ನು ಬ್ಲಾಕ್ ಮಾಡಲಾಗಿದೆ . ಅವರು ಜನಸಾಮಾನ್ಯರ ಬಗ್ಗೆ ವರದಿ ಮಾಡಲು ಹಳ್ಳಿಯಿಂದ ಹಳ್ಳಿಗೆ ಹೋಗುತ್ತಿದ್ದರು. ಸ್ಥಳೀಯ ಮಟ್ಟದಲ್ಲಿ ಆಡಳಿತದ ನಿಜಬಣ್ಣ ಬಯಲು ಮಾಡುವ ಬಹಳ ಆಪಾಯಕಾರಿ ಸಾಹಸವನ್ನು ಅವರು ಮಾಡುತ್ತಿದ್ದರು. ನೂರಾರು ವರದಿಗಾರರಿರುವ ಚಾನೆಲ್ಗಳು ಮತ್ತು ಪತ್ರಿಕೆಗಳು ಈವರೆಗೂ ತಮ್ಮ ವರದಿಗಾರರನ್ನು ಕಳಿಸಿಯೇ ಇರದಂಥ ಸ್ಥಳಗಳಲ್ಲಿ ಮನದೀಪ್ ಸತ್ಯ ಹುಡುಕುವ ಕೆಲಸ ಮಾಡುತ್ತಿದ್ದರು.

ಅಷ್ಟಕ್ಕೂ ಈ ಸ್ವತಂತ್ರ ಪತ್ರಕರ್ತನ ಟ್ವಿಟರ್ ಹ್ಯಾಂಡಲ್ ಮತ್ತು ಫೇಸ್ಬುಕ್ ಪುಟವನ್ನು ಸರ್ಕಾರ ಬ್ಲಾಕ್ ಮಾಡಿಸಿದ್ದೇಕೆ ? ಆತ ಅಷ್ಟು ದೊಡ್ಡ ಅಪಾಯವಾಗಿ ಕಂಡರೇ ಸರ್ಕಾರಕ್ಕೆ? ಹೇಗೆ ಒಬ್ಬ ಪತ್ರಕರ್ತನಿಗೆ ಕಿರುಕುಳ ಕೊಡಬಹುದು ಎಂಬುದಕ್ಕೆ ಇದೊಂದು ಉದಾಹರಣೆ.

ಖಾತೆ ಬಂದ್ ಮಾಡಲು ಕೇಂದ್ರ ಸರ್ಕಾರ ಹೇಳಿರುವುದಾಗಿ ಟ್ವಿಟರ್ ಕಡೆಯಿಂದ ಮಾಹಿತಿ ಬಂದಿದ್ದು, ಫೇಸ್ಬುಕ್ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ಮನದೀಪ್ ಹೇಳಿದ್ದಾರೆ. ಅಂತೂ ಸರ್ಕಾರಕ್ಕೆ ಗ್ರಾಮೀಣ ಕಟು ವಾಸ್ತವದ ಬಗ್ಗೆ ಮಾಹಿತಿ ಜನರಿಗೆ ತಿಳಿಯುವುದು ಬೇಕಿಲ್ಲ. ಸತ್ಯ ಬೇಕಿಲ್ಲ. ಕೇಂದ್ರ ಸರ್ಕಾರದಿಂದ ಪವಾಡವೇ ನಡೆಯುತ್ತಿದೆ ಎಂದು ಹೇಳುವಂಥ ವರದಿಗಳು ಮಾತ್ರ ಬೇಕು.

ಇಷ್ಟೇ ಅಲ್ಲ, ಉತ್ತರ ಪ್ರದೇಶದ ಲಖೀಂಪುರಿಯಲ್ಲಿ ಪತ್ರಕರ್ತ ಶಿಶಿರ್ ಶುಕ್ಲಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಡ ಮಕ್ಕಳಿಗೆ ಸರ್ಕಾರ ಕೊಟ್ಟಿದ್ದ ಪುಸ್ತಕಗಳು ರದ್ದಿ ಅಂಗಡಿಯಲ್ಲಿ ಮಾರಾಟವಾಗುತ್ತಿದ್ದುದರ ಬಗ್ಗೆ ಅವರು ವರದಿ ಮಾಡಿದ್ದರು. ಸತ್ಯ ಹೇಳಿದ್ದಕ್ಕಾಗಿ ಅವರ ಮೇಲೆ ಸರ್ಕಾರದ ಇಮೇಜ್ಗೆ ಧಕ್ಕೆ ತಂದ ಆರೋಪ ಹೊರಿಸಲಾಗಿದೆ.

ಇಂಥ ಸ್ಥಿತಿ ಎದುರಾಗುತ್ತಿದೆ ಎಂದಾದರೆ ಯಾರಾದರೂ ಹೇಗೆ ಜನರ, ಬಡವರ, ದುರ್ಬಲರ, ಅಸಹಾಯಕರ, ಅನ್ಯಾಯಕ್ಕೊಳಗಾದವರ ಪರವಾಗಿ ಧ್ವನಿಯೆತ್ತಲು ಸಾಧ್ಯ?. ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಒಂದು ಆದೇಶ ಇನ್ನೂ ಆತಂಕಕಾರಿಯಾಗಿದೆ. ರಾಜ್ಯ ಸರ್ಕಾರದ ಅಥವಾ ಜಿಲ್ಲಾಡಳಿತದ ವಿರುದ್ಧವಾದ ವರದಿಗಳನ್ನು ಜಿಲ್ಲಾಡಳಿತದ ಅಧಿಕಾರಿಗಳು ತನಿಖೆಗೆ ಒಳಪಡಿಸಬೇಕು ಮತ್ತು ಮಾಧ್ಯಮ ಸಂಸ್ಥೆಗಳಿಂದ ಅದು ಸರಿಯೆ ಇಲ್ಲವೆ ಎಂಬ ಉತ್ತರ ಪಡೆಯುವಂತೆ ಸೂಚಿಸಿರುವ ಆದೇಶ ಅದು.

ಎಂಥ ತಮಾಷೆ ನೋಡಿ, ಇಲ್ಲಿಯವರೆಗೆ ಮಾಧ್ಯಮಗಳು ಪತ್ರಕರ್ತರು ಸರ್ಕಾರದಿಂದ ಉತ್ತರ ಬಯಸುತ್ತಿದ್ದರು. ಈಗ ಸರ್ಕಾರಕ್ಕೇ ಮಾಧ್ಯಮಗಳು ವಿವರಣೆ ನೀಡಬೇಕಾದ ಸ್ಥಿತಿ ಬಂದಿದೆ.

ಮೇಲ್ನೋಟಕ್ಕೆ ಈ ಆದೇಶ ಫ್ಯಾಕ್ಟ್ ಚೆಕಿಂಗ್ ಉದ್ದೇಶದ್ದು ಎಂಬಂತೆ ಕಂಡರೂ, ಶಿಶಿರ್ ಶುಕ್ಲಾ ಕೇಸ್ ಬಗ್ಗೆ ತಿಳಿದ ಮೇಲೆ, ಪ್ರತಿ ವರದಿ ಬಳಿಕವೂ ಎಫ್ಐಆರ್ ಹಾಕುವ ಬಗ್ಗೆ ಅಧಿಕಾರಿಗಳಲ್ಲಿಯೇ ಪೈಪೋಟಿ ಶುರುವಾಗಲಿದೆ ಎಂಬುದು ಸ್ಪಷ್ಟವಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ನ ಶ್ಯಾಮಲಾಲ್ ಯಾದವ್ ಬರೆದಿದ್ದಾರೆ. ಈಗಾಗಲೇ ದೇಶದಲ್ಲಿ ಪತ್ರಿಕೋದ್ಯಮ ಹಾಳಾಗಿ ಹೋಗಿದೆ. ಅದರ ಮಟ್ಟ ಪಾತಾಳಕ್ಕೆ ಕುಸಿದಿದೆ. ಇನ್ನು ಇದೆಲ್ಲವೂ ಶುರುವಾದರೆ ಪತ್ರಕರ್ತರು ಪಾತಾಳದಲ್ಲಿಯೂ ಕಾಣಿಸಲಾರದ ಸ್ಥಿತಿ ಬರಲಿದೆ ಎನ್ನುತ್ತಾರೆ ಪತ್ರಕರ್ತ ರವೀಶ್ ಕುಮಾರ್.

ಚಂದ್ರಯಾನ-3ರ ಯಶಸ್ಸನ್ನು ದೇಶವೇ ಒಂದಾಗಿ ಸಂಭ್ರಮಿಸುತ್ತಿದೆ. ಆದರೆ ಅಂಥ ಒಗ್ಗಟ್ಟಿನ ಅಡಿಯಲ್ಲಿಯೇ ಒಬ್ಬೊಬ್ಬರನ್ನು ಒಂದೊಂದು ರೀತಿ ಕಾಣುತ್ತಿರುವುದು ವಿಪರ್ಯಾಸ. ಮನದೀಪ್ ಪುನಿಯಾ ರೈತರ ಬಗ್ಗೆ ಮಾತನಾಡಿದ್ದಕ್ಕೆ ಅವರ ಟ್ವಿಟರ್ ಖಾತೆ ಬಂದ್ ಆಗುತ್ತದೆ.

ಬಡ ಮಕ್ಕಳಿಗೆಂದು ಕೊಡಲಾದ ಪುಸ್ತಕಗಳು ರದ್ದಿ ಅಂಗಡಿಯಲ್ಲಿ ಸಿಗುತ್ತಿರುವ ಸತ್ಯ ಬರೆದಿದ್ದಕ್ಕೆ ಶಿಶಿರ್ ಶುಕ್ಲಾ ವಿರುದ್ಧ ಎಫ್ಐಆರ್ ದಾಖಲಾಗುತ್ತದೆ.

ಪ್ರಶ್ನಿಸಿದರೆ ರೇಡ್, ಪ್ರತಿಪಕ್ಷದವರಾಗಿದ್ದರೆ ರೇಡ್. ಈಗ ಜನರನ್ನೂ ಪ್ರತಿಪಕ್ಷವೆಂಬಂತೆ ನೋಡಲಾಗುತ್ತಿದೆ. ನ್ಯೂ ಇಂಡಿಯಾ ಮಾಡ್ತೀವಿ ಎಂದಿದ್ದ ಪ್ರಧಾನಿ ಮೋದಿ ಇಂತಹದೊಂದು ಭಾರತವನ್ನು ರೂಪಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!