ಹೆಚ್ಚು ಮತ ನೀಡಿದ ಸಮುದಾಯವೊಂದು ನ್ಯಾಯಯುತ ಬೇಡಿಕೆಗಳ ಕುರಿತು ಮಾತನಾಡುವುದು ತಪ್ಪೇ?

ಬಾಯಿ ಬಿಟ್ಟರೆ ಸಂವಿಧಾನ ವಿರೋಧಿ ಮಾತಾಡುವ ಬಿಜೆಪಿಯ ಯತ್ನಾಳ್ರಂತಹ ನಾಯಕರು ಝಮೀರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸುವಾಗ ಝಮೀರ್ ಹೇಳಿಕೆ ಸರಿ, ಮುಸ್ಲಿಮರು ಒಗ್ಗಟ್ಟಾಗಿ ನಮ್ಮನ್ನು ಬೆಂಬಲಿಸಿದ್ದರಿಂದ ನಾವು ಗೆದ್ದಿದ್ದೇವೆ ಎಂದು ಯಾವುದೇ ಕಾಂಗ್ರೆಸ್ ನಾಯಕ ಹೇಳುವುದಿಲ್ಲ ಯಾಕೆ?

Update: 2024-06-28 06:56 GMT

ಬೀದರ್ ನಲ್ಲಿ ಸಾಗರ್ ಖಂಡ್ರೆ ಮುಸ್ಲಿಮರ ಬೆಂಬಲ ಪಡೆದು ಗೆದ್ದರು ಎಂದು ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದು ಮಡಿಲ ಮೀಡಿಯಾಗಳು ಸೇರಿಕೊಂಡು ದೊಡ್ಡ ವಿವಾದ ಮಾಡಿವೆ.

ಆದರೆ ಝಮೀರ್ ಹೇಳಿದ್ದರಲ್ಲಿ ತಪ್ಪೇನಿದೆ?

ರಾಜ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರು ತಮ್ಮ ವೋಟು ವಿಭಜನೆ ಆಗದ ಹಾಗೆ ರಾಜ್ಯದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಿದರು.

ರಾಜ್ಯದ 224 ಕ್ಷೇತ್ರಗಳ ಪೈಕಿ ಸುಮಾರು 65 ಕ್ಷೇತ್ರಗಳಲ್ಲಿ ಮುಸ್ಲಿಮ್ ಮತಗಳು ಪ್ರಾಮುಖ್ಯತೆ ಪಡೆದಿವೆ. ಮುಸ್ಲಿಮರು ಪ್ರಾಮುಖ್ಯತೆ ಹೊಂದಿರುವ ಆ 65 ವಿಧಾನಸಭಾ ಸ್ಥಾನಗಳಲ್ಲಿ ಅರ್ಧದಷ್ಟು ಸೀಟುಗಳನ್ನು ಗೆಲ್ಲಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಯಿತು ಎಂಬುದು ಚುನಾವಣಾ ಅಂಕಿಅಂಶಗಳ ವಿಶ್ಲೇಷಣೆಯಿಂದ ಸ್ಪಷ್ಟವಾಗಿದೆ.

ಹಳೇ ಮೈಸೂರು ಮತ್ತು ಮುಂಬೈ ಕರ್ನಾಟಕದಂತಹ ಪ್ರದೇಶಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾದದ್ದು ಅದೇ ಹಿನ್ನೆಲೆಯಲ್ಲಿ.

ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ 15 ಮುಸ್ಲಿಮ್ ಅಭ್ಯರ್ಥಿಗಳ ಪೈಕಿ ಒಂಭತ್ತು ಮಂದಿ ಗೆದ್ದಿದ್ದರೆ, ಜೆಡಿಎಸ್ನಿಂದ ಕಣಕ್ಕಿಳಿದ 22 ಮಂದಿ ಮುಸ್ಲಿಮರಲ್ಲಿ ಯಾರೂ ಗೆಲ್ಲದೇ ಹೋದರು ಎಂಬುದನ್ನೂ ಇಲ್ಲಿ ಗಮನಿಸಬೇಕು.

2018ರಲ್ಲಿ ಗೆದ್ದ ಏಳು ಮುಸ್ಲಿಮ್ ಅಭ್ಯರ್ಥಿಗಳಲ್ಲಿ ಐವರು ಕಾಂಗ್ರೆಸ್ನವರಾಗಿದ್ದರೆ, ಇಬ್ಬರು ಜೆಡಿಎಸ್ನವರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಬಿಜೆಪಿ 65 ಮತ್ತು ಜೆಡಿಎಸ್ 19 ಸ್ಥಾನಗಳನ್ನು ಗೆದ್ದಿವೆ.

ಕಾಂಗ್ರೆಸ್ನ ಈ ದೊಡ್ಡ ಗೆಲುವಿನ ಹಿಂದೆ ನಿರ್ಣಾಯಕ ಕೊಡುಗೆ ನೀಡಿರುವುದು ಮುಸ್ಲಿಮರ ಬೆಂಬಲ ಎನ್ನುವುದು ಸ್ಪಷ್ಟ.

ಶೇ.11ರಷ್ಟು ಮುಸ್ಲಿಮ್ ಜನಸಂಖ್ಯೆಯನ್ನು ಹೊಂದಿರುವ ಹಳೆ ಮೈಸೂರು ಪ್ರದೇಶದಲ್ಲಿ ಜೆಡಿಎಸ್ ಮುಸ್ಲಿಮರ ಬಲವಾದ ಬೆಂಬಲ ಹೊಂದಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಮುಸ್ಲಿಮ್ ಮತಬ್ಯಾಂಕ್ ಪೂರ್ತಿಯಾಗಿ ಕಾಂಗ್ರೆಸ್ ಕಡೆಗೆ ತಿರುಗಿತ್ತು ಎಂಬುದನ್ನು ಗಮನಿಸಬೇಕು.

2024ರ ಲೋಕಸಭೆ ಚುನಾವಣೆ ಫಲಿತಾಂಶದ ವಿಶ್ಲೇಷಣೆಗಳು ಹೇಳುವ ಪ್ರಕಾರ, ದೇಶಾದ್ಯಂತ ವಿಶೇಷವಾಗಿ ಮುಸ್ಲಿಮ್ ಮತದಾರರು ಸಂವಿಧಾನ ಉಳಿಸುವುದಕ್ಕಾಗಿ, ಆ ಮೂಲಕ ಪ್ರಜಾಸತ್ತೆಯ ಉಳಿವಿಗಾಗಿ ಮತ ಹಾಕಿದ್ದಾರೆ ಎಂಬುದು. ಮುಸ್ಲಿಮ್ ಮತದಾನದ ಈ ಮಾದರಿ, 1952ರಿಂದ ಈವರೆಗಿನ ಚುನಾವಣಾ ಇತಿಹಾಸದಲ್ಲಿಯೇ ಬಹಳ ಮಹತ್ವದ ಬೆಳವಣಿಗೆ.

ಮುಸ್ಲಿಮ್ ಸಮುದಾಯ ಪ್ರಜಾಪ್ರಭುತ್ವದ ಸಂಪೂರ್ಣ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವುದು ಎದ್ದು ಕಾಣುತ್ತದೆ ಎಂದು ವಿಶ್ಲೇಷಣೆಗಳು ಹೇಳುತ್ತಿವೆ.

ಮುಸ್ಲಿಮ್ ಪ್ರಾಬಲ್ಯದ ಪ್ರದೇಶಗಳಲ್ಲಿ ಕಾಂಗ್ರೆಸ್ ಸೇರಿದಂತೆ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಉತ್ತಮ ಸಾಧನೆ ಮಾಡುವುದು ಸಾಧ್ಯವಾಗಿದೆ. ಹೆಚ್ಚು ಜಾಗೃತ ಮತ್ತು ಆತ್ಮಸಾಕ್ಷಿಯ ಮತ ಚಲಾಯಿಸುವ ಮೂಲಕ ಮುಸ್ಲಿಮ್ ಸಮುದಾಯ ವಿಪಕ್ಷಗಳ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ.

ಲೋಕಸಭಾ ಚುನಾವಣೆಯ ಸಮಯದಲ್ಲಿ ಮುಸ್ಲಿಮರನ್ನು ಪ್ರಚೋದಿಸುವಂತೆ ಹೇಳಿಕೆಗಳನ್ನು ನೀಡಲಾಯಿತು. ಅವರ ಭಾವನೆಗಳನ್ನು ನೋಯಿಸುವ ತಂತ್ರವೂ ಜಾರಿಯಲ್ಲಿತ್ತು. ಆದರೆ ಮುಸ್ಲಿಮ್ ಮತದಾರರು ಅಂತಹ ಎಲ್ಲವನ್ನೂ ಬುದ್ಧಿವಂತಿಕೆಯಿಂದ ನಿರ್ಲಕ್ಷಿಸಿದರು. ಅದರ ಬದಲಾಗಿ ಪ್ರಜಾಪ್ರಭುತ್ವ ಪರಂಪರೆಯನ್ನು, ಜಾತ್ಯತೀತತೆಯನ್ನು ಎತ್ತಿಹಿಡಿಯಲು ಸಾಮೂಹಿಕವಾಗಿ ಮತ ಚಲಾಯಿಸಿದರು. ಧಾರ್ಮಿಕ ಪಕ್ಷಪಾತವನ್ನು ಬದಿಗಿರಿಸಿ, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು.

ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಮುಸ್ಲಿಮರು ಕಾಂಗ್ರೆಸ್ ಹಾಗೂ ಬೇರೆ ಸಮರ್ಥ ಜಾತ್ಯತೀತ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಅದಕ್ಕಾಗಿ ಜೆಡಿಎಸ್ನಂತಹ ಪಕ್ಷಗಳ ವಿರೋಧವನ್ನೂ ಕಟ್ಟಿಕೊಳ್ಳಬೇಕಾಯಿತು.

ಮುಸ್ಲಿಮ್ ಮತಗಳು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಹಿಂದೆ ಕ್ರೋಡೀಕರಣಗೊಂಡಿದ್ದರ ಪರಿಣಾಮವಾಗಿಯೇ ‘ಇಂಡಿಯಾ’ ಒಕ್ಕೂಟ ಬಿಜೆಪಿಯನ್ನು ಕಟ್ಟಿಹಾಕುವುದು ಸಾಧ್ಯವಾಯಿತು ಮತ್ತು ದೊಡ್ಡ ಮಟ್ಟದ ಗೆಲುವು ಅದಕ್ಕೆ ಸಿಕ್ಕಿತ್ತು.

ಆದರೂ ಕಾಂಗ್ರೆಸ್ ಮಾತ್ರ ಮುಸ್ಲಿಮರು ನೀಡಿದ ಬೆಂಬಲವನ್ನು ಮನಪೂರ್ವಕವಾಗಿ ಒಪ್ಪಿಕೊಳ್ಳುವ ಸೌಜನ್ಯವನ್ನೂ ತೋರಿಸುವುದಿಲ್ಲ ಯಾಕೆ ?

ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮುಸ್ಲಿಮ್ ಶಾಸಕರಲ್ಲಿ ಮಂಗಳೂರು ಕ್ಷೇತ್ರದ ಯು.ಟಿ. ಖಾದರ್, ಚಾಮರಾಜಪೇಟೆಯ ಝಮೀರ್, ಶಾಂತಿನಗರದ ಹಾರಿಸ್, ಶಿವಾಜಿ ನಗರದ ರಿಝ್ವಾನ್ ಅರ್ಷದ್, ರಾಮನಗರದ ಇಕ್ಬಾಲ್ ಹುಸೈನ್, ನರಸಿಂಹರಾಜ ಕ್ಷೇತ್ರದ ತನ್ವೀರ್ ಸೇಟ್, ಬೀದರ್ನ ರಹೀಮ್ ಖಾನ್, ಗುಲ್ಬರ್ಗಾ ಉತ್ತರದ ಕನೀಝ್ ಫಾತಿಮಾ ಇವೆರಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಲೀಡ್ ನೀಡಿದ್ದಾರೆ.

ಕೇವಲ ಬೆಳಗಾವಿ ಉತ್ತರ ಆಸೀಫ್ ಸೇಟ್ ಕ್ಷೇತ್ರದಲ್ಲಿ ಮಾತ್ರ ಬಿಜೆಪಿಗೆ ಲೀಡ್ ಸಿಕ್ಕಿದೆ. ಅದೂ ಕೇವಲ 4 ಸಾವಿರ ಮಾತ್ರ.

ಇದಲ್ಲದೆ ಮುಸ್ಲಿಮ್ ಮತದಾರರು ಹೆಚ್ಚಿರುವ ಕ್ಷೇತ್ರಗಳಾದ ರಾಯಚೂರು, ಬಿಜಾಪುರ, ಗಂಗಾವತಿ, ಹುಬ್ಬಳ್ಳಿ-ಧಾರವಾಡ ಪೂರ್ವ, ಶಿಗ್ಗಾಂವ, ದಾವಣಗೆರೆ ದಕ್ಷಿಣ, ಸರ್ವಜ್ಞ ನಗರ, ಪುಲಕೇಶಿ ನಗರ, ಹೆಬ್ಬಾಳ, ಚಿಕ್ಕಪೇಟೆ, ಬಳ್ಳಾರಿ ಗ್ರಾಮಾಂತರ, ಬಸವಕಲ್ಯಾಣ, ಬೀದರ್ ದಕ್ಷಿಣ, ಹುಮನಾಬಾದ್ ಈ ಎಲ್ಲಾ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಲೀಡ್ ಸಿಕ್ಕಿದೆ.

ಇಷ್ಟಿದ್ದರೂ ಬಿಜೆಪಿಯ ತುಷ್ಟೀಕರಣದ ಆರೋಪದಿಂದ ಸದಾ ಭಯದಲ್ಲಿರುವ ಕಾಂಗ್ರೆಸ್ ಮುಸ್ಲಿಮರಿಗೆ ಅವರ ನೈಜ ಮತ್ತು ನ್ಯಾಯಯುತ ಹಕ್ಕು ಮತ್ತು ಪ್ರಾತಿನಿಧ್ಯ ಸೌಲಭ್ಯ ಕೊಡಲು ಹಿಂಜರಿಯುತ್ತಿದೆ.

ಈ ಕಡೆ ತನಗೆ ಮುಸ್ಲಿಮರು ನೀಡಿದ ಬೆಂಬಲವನ್ನು ಸ್ಮರಿಸಿ ಕಾಂಗ್ರೆಸ್ ಅವರಿಗೆ ಸೂಕ್ತ ಪ್ರಾತಿನಿಧ್ಯ ಕೊಡುವುದಿಲ್ಲ, ಆ ಕಡೆ ಜೆಡಿಎಸ್, ಬಿಎಸ್ಪಿಯಂತಹ ಪಕ್ಷಗಳು ಮುಸ್ಲಿಮರು ನಮಗೆ ಕೈಕೊಟ್ಟರು ಎಂದು ಅಸಹನೆಯ ಮಾತಾಡುತ್ತವೆ. ಹಾಗಾಗಿ ಕಾಂಗ್ರೆಸ್ಗೆ ಒಗ್ಗಟ್ಟಾಗಿ ವೋಟು ಹಾಕಿ ಮುಸ್ಲಿಮರಿಗೆ ಆದ ಲಾಭವೇನು?.

ಬಿಜೆಪಿಯವರು ಹೇಗೂ ಮುಸ್ಲಿಮರು ತಮಗೆ ವೋಟು ಹಾಕುವುದಿಲ್ಲ ಅನ್ನುತ್ತಾರೆ. ಕುಮಾರಸ್ವಾಮಿ ವಿಧಾನಸಭಾ ಚುನಾವಣೆ ಬಳಿಕ ಮುಸ್ಲಿಮರ ವಿರುದ್ಧ ಎಷ್ಟೆಲ್ಲಾ ಅಸಹನೆ ತೋರಿಸಿದರು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಯುಪಿಯಲ್ಲಿ ಮಾಯಾವತಿಯೂ ತಮ್ಮ ಪಕ್ಷದ ಸೋಲಿಗೆ ಮುಸ್ಲಿಮರನ್ನೇ ದೂಷಿಸುತ್ತಿದ್ದಾರೆ.

ಯುಪಿಯಲ್ಲಿ ಮುಸ್ಲಿಮರು ಮೋದಿ ಪಡೆಯನ್ನು ಸೋಲಿಸಲು ಶಕ್ತವಾದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಮೈತ್ರಿಗೆ ಬೆಂಬಲವಾಗಿ ಒಗ್ಗೂಡಿದರು. 2019ರಲ್ಲಿ ಅಲ್ಲಿ ಮುಸ್ಲಿಮ್ ಮತಗಳು ವಿಭಜನೆಯಾದ ಕಾರಣ ಬಿಜೆಪಿ ಗೆಲುವಿಗೆ ಅನುಕೂಲವಾಗಿತ್ತು.

ಅಸ್ಸಾಮ್ನಲ್ಲಿ ಕೂಡ ಬಿಜೆಪಿ ವಿರುದ್ಧ ನಿಲ್ಲುವುದಕ್ಕಾಗಿ, ಎಐಯುಡಿಎಫ್ನ ಸಾಂಪ್ರದಾಯಿಕ ಮತದಾರರೆಲ್ಲ ಕಾಂಗ್ರೆಸ್ಗೆ ಮತ ನೀಡಿದ್ದಾರೆ.

ಚುನಾವಣೆಯಲ್ಲಿ ಮುಸ್ಲಿಮ್ ಮತಗಳ ವಿಚಾರಕ್ಕೆ ಮಾತ್ರ ತುಷ್ಟೀಕರಣ ಎಂಬ ಟೀಕೆ ಬರುತ್ತದೆ. ಆದರೆ ಇದೇ ಪ್ರಶ್ನೆ ಬೇರೆ ಯಾವ ಸಮುದಾಯದ ಕುರಿತು ಏಳುವುದಿಲ್ಲ.

ಒಟ್ಟಿನಲ್ಲಿ ಮುಸ್ಲಿಮರು ತಮ್ಮ ಪಕ್ಷಕ್ಕೆ ವೋಟ್ ನೀಡಬೇಕೆಂದು ಎಲ್ಲರೂ ನಿರೀಕ್ಷಿಸುತ್ತಾರೆ. ಆದರೆ ಅವರ ನ್ಯಾಯಯುತ ಬೇಡಿಕೆಗಳ ಕುರಿತು ಮಾತನಾಡಲು ಯಾರೂ ಸಿದ್ಧರಿಲ್ಲ

2023ರ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರು ನಮಗೆ ಎಷ್ಟು ಮತ ನೀಡಿದ್ದಾರೆಂದು ನನಗೆ ಗೊತ್ತಿಲ್ಲವೆಂದು ಡಿ.ಕೆ. ಶಿವಕುಮಾರ್ ಹೇಳುತ್ತಾರೆ.

ಆದರೆ ಕಾಂಗ್ರೆಸ್ಗೆ ಬಂದಿದ್ದ ಮತಗಳಲ್ಲಿ ಶೇ. 25ರಷ್ಟು ಮತಗಳು ಮುಸ್ಲಿಮ್ ಸಮುದಾಯದ ಮತಗಳೇ ಆಗಿವೆ. ಒಟ್ಟು ಶೇ. 88ರಷ್ಟು ಮುಸ್ಲಿಮರು ಕಾಂಗ್ರೆಸ್ಗೆ ಮತ ಹಾಕಿದ್ದಾರೆ.

‘ಇಂಡಿಯಾ ಟುಡೇ’ ಲೆಕ್ಕಾಚಾರದ ಪ್ರಕಾರ ವಿವಿಧ ಸಮುದಾಯಗಳಿಂದ ಕಾಂಗ್ರೆಸ್ಗೆ ಬಂದ ಮತಗಳನ್ನು ನೋಡುವುದಾದರೆ, ಎಸ್ಟಿ-ಶೇ. 44, ಎಸ್ಸಿ ಶೇ. 60, ಕುರುಬ ಶೇ. 63, ಮುಸ್ಲಿಮ್ ಶೇ. 88, ಒಕ್ಕಲಿಗ ಶೇ. 24, ಇತರ ಹಿಂದುಳಿದ ವರ್ಗದ ಶೇ. 31, ಲಿಂಗಾಯತ ಶೇ. 20 ಮತಗಳು.

ಸಿದ್ದರಾಮಯ್ಯನವರೇ ಸಿಎಂ ಆಗಲಿದ್ದಾರೆ ಎಂಬ ಖಾತ್ರಿಯಿದ್ದೂ ಕುರುಬ ಸಮುದಾಯದವರ ಮತಗಳು ಕಾಂಗ್ರೆಸ್ಗೆ ಬಂದಿರುವುದು ಮುಸ್ಲಿಮ್ ಸಮುದಾಯಕ್ಕೆ ಹೋಲಿಸಿಕೊಂಡರೆ ಬಹಳ ಕಡಿಮೆ. ಯಾಕೆಂದರೆ ಕುರುಬ ಸಮುದಾಯದ ಶೇ. 22ರಷ್ಟು ವೋಟುಗಳು ಬಿಜೆಪಿಗೆ ಹೋಗಿವೆ. ಆದರೆ ಮುಸ್ಲಿಮ್ ಸಮುದಾಯದ ಕೇವಲ ಶೇ. 2ರಷ್ಟು ಮತಗಳು ಮಾತ್ರವೇ ಬಿಜೆಪಿಯ ಪಾಲಾಗಿವೆ.

ಮುಸ್ಲಿಮ್ ಸಮುದಾಯ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಹಿಂದೆ ನಿಂತಿತ್ತು ಎಂಬುದು ಸ್ಪಷ್ಟ.

ಆದರೆ ಮುಸ್ಲಿಮರ ವೋಟ್ ಬೇಕು, ಆದರೆ ಏನೂ ಕೇಳಬಾರದು ಎಂಬಂಥ ನಡವಳಿಕೆಯನ್ನು ಕಾಂಗ್ರೆಸ್ ತೋರಿಸುತ್ತಿದೆ ಎಂಬುದೇ ವಿಪರ್ಯಾಸ.

ಬಾಯಿ ಬಿಟ್ಟರೆ ಸಂವಿಧಾನ ವಿರೋಧಿ ಮಾತಾಡುವ ಬಿಜೆಪಿಯ ಯತ್ನಾಳ್ರಂತಹ ನಾಯಕರು ಝಮೀರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸುವಾಗ ಝಮೀರ್ ಹೇಳಿಕೆ ಸರಿ, ಮುಸ್ಲಿಮರು ಒಗ್ಗಟ್ಟಾಗಿ ನಮ್ಮನ್ನು ಬೆಂಬಲಿಸಿದ್ದರಿಂದ ನಾವು ಗೆದ್ದಿದ್ದೇವೆ ಎಂದು ಯಾವುದೇ ಕಾಂಗ್ರೆಸ್ ನಾಯಕ ಹೇಳುವುದಿಲ್ಲ ಯಾಕೆ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಎಸ್. ಸುದರ್ಶನ್

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!