ರಾಜ್ಯ ಕಾಂಗ್ರೆಸ್ ನ ಆಂತರಿಕ ಭಿನ್ನಮತಕ್ಕೆ ಮದ್ದಿಲ್ಲವೇ?
ಸಿಎಂ, ಡಿಸಿಎಂ ವಿಚಾರವಾಗಿ ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳ ಮುಂದೆ ಮಾತನಾಡಕೂಡದು ಎಂದು ಪಕ್ಷದಲ್ಲಿ ಸೂಚನೆಯಿದೆ.
ಅದನ್ನೂ ಮೀರಿ ಕೆ.ಎನ್. ರಾಜಣ್ಣ ಥರದ ನಾಯಕರು ಡಿಸಿಎಂ ಡಿ.ಕೆ. ಶಿವಕುಮಾರ್ಗೆ ಸವಾಲು ಹಾಕುತ್ತಿರುವುದನ್ನೂ ಗಮನಿಸಬಹುದಾಗಿದೆ.
‘‘ಯಾರೇ ಆಗಲಿ ನೋಟಿಸ್ ಕೊಟ್ಟು, ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ’’ ಎಂದು ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ, ‘‘ನೋಟಿಸ್ ಕೊಡ್ತಾರಾ ಕೊಡಲಿ. ಕೊಟ್ಟ ಮೇಲೆ ಮಾತಾಡ್ತೀನಿ. ರಾಜಣ್ಣ ರಾಜಣ್ಣಾನೇ?’’ ಎಂದು ಕೆ.ಎನ್. ರಾಜಣ್ಣ ಗುಡುಗುವುದರೊಂದಿಗೆ ಮತ್ತೊಮ್ಮೆ ಕಾಂಗ್ರೆಸ್ ಒಳಗಿನ ಬಣ ರಾಜಕೀಯ ಸ್ಪಷ್ಟವಾಗಿಯೇ ಮುನ್ನೆಲೆಗೆ ಬಂದಂತಾಗಿದೆ.
ಕರ್ನಾಟಕ ಕಾಂಗ್ರೆಸ್ನೊಳಗೆ ಈಗ ಅಧಿಕಾರಕ್ಕಾಗಿ ಅಕ್ಷರಶಃ ಕಿತ್ತಾಟ ಶುರುವಾದಂತೆ ಕಾಣುತ್ತಿದೆ.
ಸಿಎಂ, ಡಿಸಿಎಂ ವಿಚಾರವಾಗಿ ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳ ಮುಂದೆ ಮಾತನಾಡಕೂಡದು ಎಂದು ಪಕ್ಷದಲ್ಲಿ ಸೂಚನೆಯಿದೆ.
ಅದನ್ನೂ ಮೀರಿ ಕೆ.ಎನ್. ರಾಜಣ್ಣ ಥರದ ನಾಯಕರು ಡಿಸಿಎಂ ಡಿ.ಕೆ. ಶಿವಕುಮಾರ್ಗೆ ಸವಾಲು ಹಾಕುತ್ತಿರುವುದನ್ನೂ ಗಮನಿಸಬಹುದಾಗಿದೆ.
‘‘ಯಾರೇ ಆಗಲಿ ನೋಟಿಸ್ ಕೊಟ್ಟು, ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ’’ ಎಂದು ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ, ‘‘ನೋಟಿಸ್ ಕೊಡ್ತಾರಾ ಕೊಡಲಿ. ಕೊಟ್ಟ ಮೇಲೆ ಮಾತಾಡ್ತೀನಿ. ರಾಜಣ್ಣ ರಾಜಣ್ಣಾನೇ?’’ ಎಂದು ಕೆ.ಎನ್. ರಾಜಣ್ಣ ಗುಡುಗುವುದರೊಂದಿಗೆ ಮತ್ತೊಮ್ಮೆ ಕಾಂಗ್ರೆಸ್ ಒಳಗಿನ ಬಣ ರಾಜಕೀಯ ಸ್ಪಷ್ಟವಾಗಿಯೇ ಮುನ್ನೆಲೆಗೆ ಬಂದಂತಾಗಿದೆ.
ಇಲ್ಲಿಯೇ ಕೇಳಿಬರುತ್ತಿರುವ ಮತ್ತೊಂದು ಮಾತೆಂದರೆ, ಸಮುದಾಯವಾರು ಡಿಸಿಎಂ ಹುದ್ದೆಗೆ ಬೇಡಿಕೆ ಇಡುತ್ತಿರುವುದರ ಹಿಂದೆಯೂ ಡಿ.ಕೆ. ಶಿವಕುಮಾರ್ ಟಾರ್ಗೆಟ್ ಎಂಬುದು.
ಹಾಗೆ ಡಿಸಿಎಂ ಹುದ್ದೆಗಳಿಗಾಗಿ ಒತ್ತಾಯಿಸುತ್ತಿರುವವರು ಸಂಪುಟದಲ್ಲಿರುವುದಕ್ಕಿಂತ ಹೆಚ್ಚಾಗಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಬಯಸಿದವರಾಗಿದ್ದಾರೆ.
ಡಿ.ಕೆ. ಶಿವಕುಮಾರ್ ಒಂದೇ ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿರಬೇಕು ಇಲ್ಲವೇ ಡಿಸಿಎಂ ಆಗಿ ಮಾತ್ರ ಮುಂದುವರಿಯಬೇಕು ಎಂದು ಒತ್ತಾಯಿಸುತ್ತಿರುವವರು ಸಿದ್ದರಾಮಯ್ಯ ಬಣದವರು ಎಂಬುದೇನೂ ಗುಟ್ಟಿನ ವಿಚಾರವಲ್ಲ.
ಇಲ್ಲಿ ಇನ್ನೊಂದು ವಿಚಾರವನ್ನು ಗಮನಿಸಬೇಕು.
ಸಮುದಾಯವಾರು ಡಿಸಿಎಂ ಹುದ್ದೆಗೆ ಬೇಡಿಕೆ ಹೊಸದೇನೂ ಅಲ್ಲ. ಲೋಕಸಭೆ ಚುನಾವಣೆಗೆ ಮೊದಲೇ ಅದು ಶುರುವಾಯಿತು. ಆದರೆ ಆಗ ಅದಕ್ಕಾಗಿ ಒತ್ತಾಯಿಸುವಾಗ, ತಮ್ಮ ತಮ್ಮ ಸಮುದಾಯವನ್ನು ಸೆಳೆಯುವ ಉದ್ದೇಶ ನಾಯಕರದ್ದು ಎಂದು ಹೇಳಲಾಗಿತ್ತು.ಈಗ ಒತ್ತಾಯಿಸಲಾಗುತ್ತಿರುವುದರ ಹಿಂದೆ ದೊಡ್ಡ ಲೆಕ್ಕಾಚಾರಗಳಿವೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟವರು ಒಬ್ಬರಿಗೆ ಒಂದೇ ಹುದ್ದೆ ಎಂಬ ಅಸ್ತ್ರ ತೆಗೆದು, ಆ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ಅವರಿಂದ ಕಿತ್ತುಕೊಳ್ಳಲು ಯತ್ನಿಸುತ್ತಿರುವ ಸುಳಿವುಗಳಿವೆ.
ಡಿಸಿಎಂ ಹುದ್ದೆಗೆ ಆಗ್ರಹಿಸಿದ್ದ ರಾಜಣ್ಣ ಕೂಡ, ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡುವುದಾದರೆ ನಾನೂ ಆಕಾಂಕ್ಷಿ. ಅದಕ್ಕಾಗಿ ಮಂತ್ರಿಗಿರಿ ಬಿಟ್ಟುಕೊಡುವುದಕ್ಕೂ ಸಿದ್ಧ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.
ಹಾಗಾದರೆ ಏಕೆ ಈಗ ಇದು ಮೊದಲಿಗಿಂತಲೂ ತೀವ್ರ ಮಟ್ಟದ ಒತ್ತಾಯವಾಗತೊಡಗಿದೆ? ಅದಕ್ಕೆ ಕಾರಣ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸಾಧನೆಯನ್ನೇನೂ ಮಾಡದೇ ಇರುವುದು.
ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿಯೇ ಕಾಂಗ್ರೆಸ್ ಸೋತಿರುವುದು,
ಒಕ್ಕಲಿಗರ ನಾಯಕನೆಂಬ ಡಿ.ಕೆ. ಶಿವಕುಮಾರ್ ಅವರಿಗಾಗಿರುವ ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಸ್ವತಃ ತಮ್ಮನನ್ನೂ ಗೆಲ್ಲಿಸಿಕೊಳ್ಳಲು ಆಗದೇ ಇರುವುದು ಅವರಿಗೆ ಮುಜುಗರ ತಂದಿರುವ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿ ಮಟ್ಟದಲ್ಲಿ ಶಿವಕುಮಾರ್ ತೀರಾ ಗತ್ತು ತೋರಲಾರದ ಸನ್ನಿವೇಶ ಸೃಷ್ಟಿಯಾಗಿದೆ.
ಇದಲ್ಲದೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳು ಮತ್ತು ಡಿ.ಕೆ. ಶಿವಕುಮಾರ್ ಮಧ್ಯೆ ಸಮನ್ವಯ ಇಲ್ಲದೆ ಇರುವುದೂ ಕಾಂಗ್ರೆಸ್ ಸೋಲಿಗೆ ಕಾರಣ ಎಂಬ ವಾದವೂ ಒಂದು ಬಣದ್ದಾಗಿದೆ. ಅದು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವಂತೆ ಹೈಕಮಾಂಡ್ ಎದುರು ಬೇಡಿಕೆ ಇಟ್ಟಿರುವುದಾಗಿ ಹೇಳಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕಾಂಗ್ರೆಸ್ನ ಲಿಂಗಾಯತ ನಾಯಕರ ಕಣ್ಣೂ ಇದೆ.
ಸಚಿವರಾದ ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ ಮೊದಲಾದವರ ಹೆಸರುಗಳು ಮುನ್ನೆಲೆಯಲ್ಲಿವೆ.
ಒಂದೆಡೆ ಡಿ.ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿ, ಸಿದ್ದರಾಮಯ್ಯ ಪರವಾಗಿ ಮಾತಾಡುವವರಿದ್ದರೆ, ಶಿವಕುಮಾರ್ ಪರ ಬ್ಯಾಟಿಂಗ್ ಮಾಡುವವರೂ ಇದ್ದಾರೆ.ಮುಖ್ಯವಾಗಿ, ರಾಜಣ್ಣ ಅಂತೂ ನೇರವಾಗಿಯೇ ಡಿ.ಕೆ. ಶಿವಕುಮಾರ್ ವಿರುದ್ಧ ನಿಂತುಬಿಟ್ಟಿದ್ದಾರೆ.
‘‘ಹೆಚ್ಚುವರಿ ಡಿಸಿಎಂ ಕೇಳಬಾರದಾ? ಕೇಳಿದ್ರೆ ತಪ್ಪಾಗುತ್ತಾ? ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದಾದರೆ ಎಲ್ಲರೂ ಫಾಲೋ ಮಾಡಲಿ. ಎಲ್ಲರೂ ಸುಮ್ಮನಿದ್ದರೆ ನಾನೂ ಸುಮ್ಮನೆ ಇರ್ತೀನಿ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಬೇರೆಯವರನ್ನು ಸಿಎಂ ಮಾಡಲಿ ಎಂದರೆ ಕೇಳಿಕೊಂಡು ಸುಮ್ಮನೆ ಇರಬೇಕಾ’’ ಎಂದು ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘‘ಶಾಮನೂರು ಶಿವಶಂಕರಪ್ಪ ಅವರನ್ನು ಸಿಎಂ ಮಾಡಿ ಎಂದು ಅವರ ಕಡೆಯ ಸ್ವಾಮೀಜಿ ಕೇಳುತ್ತಾರೆ. ಸತೀಶ್ ಜಾರಕಿಹೊಳಿಯನ್ನು ಮಾಡಿ ಎಂದು ಅವರ ಸ್ವಾಮೀಜಿ ಹೇಳುತ್ತಿದ್ದಾರೆ. ಸ್ವಾಮೀಜಿಗಳು ಹೇಳೋದನ್ನು ಕೇಳೋದಕ್ಕೆ ಆಗುತ್ತಾ? ಸ್ವಾಮೀಜಿಗಳು ಮಾತನಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅವಮಾನ. ನಾನು ಸಿಎಂ ಸಿದ್ದರಾಮಯ್ಯ ಪರ ಎಂದಲ್ಲ, ಪ್ರಜಾಪ್ರಭುತ್ವದ ಪರವಾಗಿದ್ದೀನಿ’’ ಎಂದೂ ಅವರು ಹೇಳಿದ್ದಾರೆ.
ಇಲ್ಲಿ ಸ್ವಾಮೀಜಿಗಳ ರಾಜಕೀಯ ಹೇಳಿಕೆಗಳಂತೂ ಇನ್ನಷ್ಟು ಸಂಚಲನಕ್ಕೆ ಎಡೆಮಾಡಿಕೊಡುತ್ತಿವೆ.
ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಸಿದ್ದರಾಮಯ್ಯನವರು ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಹೇಳಿದ್ದರು. ಈ ಹೇಳಿಕೆ ಸಿಎಂ ಬದಲಾವಣೆ ವಿಚಾರವನ್ನು ಮತ್ತೆ ನೆನಪಿಸಿತು.
ಸ್ವಾಮೀಜಿಯ ಈ ಹೇಳಿಕೆ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಕೂಡ ಕೆಲ ನಾಯಕರು ಆರೋಪಿಸಿದ್ದಾರೆ. ಆದರೆ, ಯಾರೋ ಹೇಳಿಕೊಟ್ಟು ಇದನ್ನು ನಾನು ಹೇಳಿಲ್ಲ ಎಂಬುದು ಸ್ವಾಮೀಜಿ ಪ್ರತಿಕ್ರಿಯೆ.
ಕಾಂಗ್ರೆಸ್ ಪಕ್ಷಕ್ಕೆ ೧೩೫ ಸ್ಥಾನ ಬರಬೇಕಾದರೆ ಅದರ ಹಿಂದೆ ಡಿ.ಕೆ. ಶಿವಕುಮಾರ್ ಅವರ ಶ್ರಮ ಇದೆ. ಹೀಗಾಗಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೇಳಿದ್ದೇನೆ ಎಂಬುದು ಅವರ ಸಮರ್ಥನೆ.
ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ‘‘ಶ್ರೀಗಳು ಅಭಿಮಾನಪೂರ್ವಕವಾಗಿ ಮಾತನಾಡಿದ್ದಾರೆ. ಸ್ವಾಮೀಜಿಗಳು ಮನದಾಳದಿಂದ ಹರಸಿದರೆ ಸಾಕು. ನನ್ನ ಕೆಲಸ ನೋಡಿ ನಮ್ಮ ಪಕ್ಷದ ವರಿಷ್ಠರೇ ತೀರ್ಮಾನಿಸುತ್ತಾರೆ’’ ಎಂದಿದ್ದಾರೆ.
‘‘ಸ್ವಾಮೀಜಿಗಳೇ ಕೈಮುಗಿಯುತ್ತೇನೆ. ಯಾರೂ ಮಾತನಾಡಬೇಡಿ. ರಾಜಕಾರಣದ ಸುದ್ದಿಗೆ ನೀವು ಬರಬೇಡಿ’’ ಎಂದೂ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದೂ ಆಗಿದೆ.
ಯಾರೋ ಹೇಳಿಕೊಟ್ಟು ಸ್ವಾಮೀಜಿಗಳಿಂದ ಹೇಳಿಕೆ ಕೊಡಿಸಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಸಿಎಂ ಸಿದ್ದರಾಮಯ್ಯಗೆ ಹೇಳುತ್ತಿರುವ ವೀಡಿಯೊ ತುಣುಕಿನ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿರುವುದರ ಬಗ್ಗೆಯೂ ವರದಿಯಿದೆ.
ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕೆಂದು ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿರುವುದಕ್ಕೆ ಶಾಸಕ ಜಿ.ಟಿ. ದೇವೇಗೌಡ ಕೂಡ ಪ್ರತಿಕ್ರಿಯಿಸಿದ್ದು, ಡಿ.ಕೆ. ಶಿವಕುಮಾರ್ ಪರ ವಹಿಸಿದ್ದಾರೆ.
‘‘ಒಕ್ಕಲಿಗ ಸ್ವಾಮೀಜಿಗಳು ಬಹಿರಂಗವಾಗಿ ಮನವಿ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಮೇಲಿನ ಅಭಿಮಾನದಿಂದ ಹೇಳಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಕುರುಬ ಸಮುದಾಯದ ಸ್ವಾಮೀಜಿ ದೊಡ್ಡ ಘರ್ಜನೆ ಮಾಡಿರಲಿಲ್ವಾ’’ ಎಂದು ಜಿಟಿಡಿ ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ, ಸ್ವಾಮೀಜಿಗಳು ರಾಜಕೀಯಕ್ಕೆ ಬರಬೇಡಿ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿರುವ ಪ್ರಣವಾನಂದ ಸ್ವಾಮೀಜಿ, ನೀವು ಕೂಡ ಮಠಕ್ಕೆ ಕಾಲಿಡಬೇಡಿ ಎಂದಿದ್ದಾರೆ.
ರಾಜ್ಯದಲ್ಲಿ ಈಡಿಗ ಸಮುದಾಯ ತನ್ನದೇ ರಾಜಕೀಯ ಪ್ರಾಬಲ್ಯ ಹೊಂದಿದ್ದು, ಸಿಎಂ ಸ್ಥಾನ ಬದಲಿಸುವುದಾದರೆ ಬಿ.ಕೆ. ಹರಿಪ್ರಸಾದ್ ಅವರನ್ನೇ ಸಿಎಂ ಅಥವಾ ಡಿಸಿಎಂ ಎಂದು ಘೋಷಿಸುವಂತೆ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಆದರೆ, ಸರಕಾರದಲ್ಲಿನ ಗೊಂದಲಗಳ ಕುರಿತು ಮಾತನಾಡಿರುವ ಹರಿಪ್ರಸಾದ್, ಇಬ್ಬರು ಬಲಾಢ್ಯರು ನಾಯಕತ್ವ ವಹಿಸಿದ್ದರೂ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ನಿರೀಕ್ಷಿತ ಸ್ಥಾನ ಬರಲಿಲ್ಲ. ಮಂತ್ರಿಗಳ ಕ್ಷೇತ್ರಗಳಲ್ಲೇ ಲೀಡ್ ಕಡಿಮೆಯಾಗಿದೆ. ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದ್ದು, ಸಾರ್ವಜನಿಕವಾಗಿ ಚರ್ಚೆ ಅವಶ್ಯಕತೆಯಿಲ್ಲ ಎಂದಿದ್ದಾರೆ.
ಸಂಘಟನೆ ಮಾಡಲು ಜಾತಿ ಬೇಕಾಗುತ್ತದೆ. ಆದರೆ, ಸರಕಾರ ಮಾಡಲು ಎಲ್ಲ ವರ್ಗದವರೂ ಬೇಕು. ಹಿಂದುಳಿದ ವರ್ಗ ಬಹಳ ದೊಡ್ಡದಿದೆ. ಹಾಗಾಗಿ, ಶೇರ್ ಆ್ಯಂಡ್ ಕೇರ್ ಇರಬೇಕು ಎನ್ನುವ ಮೂಲಕ ಸಮುದಾಯವಾರು ಡಿಸಿಎಂ ಹುದ್ದೆ ಬೇಡಿಕೆ ಸಮರ್ಥಿಸಿಕೊಂಡಿದ್ದಾರೆ.
ಇನ್ನು ಗೃಹಸಚಿವ ಪರಮೇಶ್ವರ್ ಕೂಡ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದು, ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಬೇಕು ಎನ್ನುವುದು ಅವರ ಅಭಿಪ್ರಾಯ ಮತ್ತು ಕಾಳಜಿ ಇರಬಹುದು ಎಂದು ಹೇಳಿದ್ದಾರೆ.
ಶಿವಕುಮಾರ್ ಬಳಿ ಎರಡು ಮಹತ್ವದ ಖಾತೆಗಳಿರುವುದರ ಬಗ್ಗೆಯೂ ಮಾತನಾಡಿರುವ ಪರಮೇಶ್ವರ್, ಕೆಪಿಸಿಸಿ ಹುದ್ದೆ ಬದಲಾವಣೆ ವಿಚಾರದ ಚರ್ಚೆಗಳೆಲ್ಲ ಪಕ್ಷದೊಳಗೆ ಸಹಜವಾಗಿ ನಡೆಯುವಂಥವು ಎಂದಿದ್ದಾರೆ.
ಹಾಗೆಯೇ, ಸಿಎಂ, ಡಿಸಿಎಂ ಹುದ್ದೆಗಳ ವಿಚಾರ ಪ್ರಸ್ತುತ ಅಪ್ರಸ್ತುತ ಅಂತ ಅಲ್ಲ. ಹೈಕಮಾಂಡ್ನವರು ಬದಲಾವಣೆ ಮಾಡುವುದಾದರೆ ವೀಕ್ಷಕರನ್ನು ಕಳುಹಿಸಿ ಅಭಿಪ್ರಾಯ ಪಡೆಯುತ್ತಾರೆ. ನಾವು ಸಭೆ ಮಾಡಿದಾಗ ಉನ್ನತ ನಾಯಕರು ಯಾರು ಕೂಡ ಹೆಚ್ಚುವರಿ ಡಿಸಿಎಂ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದಿದ್ದಾರೆ.
ಇಲ್ಲಿ ಗಮನಿಸಬೇಕಾಗಿರುವುದು, ಸಿಎಂ ಬದಲಾವಣೆ ವಿಚಾರ ಮತ್ತು ಕೆಪಿಸಿಸಿ ಆಧ್ಯಕ್ಷ ಹುದ್ದೆ ವಿಚಾರವೆರಡೂ ತಳಕು ಹಾಕಿಕೊಂಡಿರುವಲ್ಲಿನ ಸೂಕ್ಷ್ಮ ಏನು ಎಂಬುದನ್ನು.
ಸಿಎಂ ಹುದ್ದೆ ಮೇಲೆ ಶಿವಕುಮಾರ್ ಕಣ್ಣಿಟ್ಟಿದ್ದಾರೆ ಮತ್ತು ಇದೇ ವೇಳೆ ಅವರಿಂದ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕಿತ್ತುಕೊಳ್ಳಲು ಸಿದ್ದರಾಮಯ್ಯ ಬಣದವರು ಯತ್ನ ನಡೆಸಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾಗುವಾಗ ಎರಡೂವರೆ ವರ್ಷದ ಬಳಿಕ ಡಿಕೆಶಿಯವರಿಗೆ ಬಿಟ್ಟು ಕೊಡುವ ಮಾತಾಗಿದೆ ಎಂಬ ಸುದ್ದಿ ಹರಿದಾಡಿತ್ತು.
ಆದರೆ ಆ ರೀತಿಯ ಒಪ್ಪಂದವೇ ಇಲ್ಲ ಎಂದು ಕ್ರಮೇಣ ಅದನ್ನು ಬದಿಗೆ ಸರಿಸುತ್ತಾ ಬರಲಾಗಿತ್ತು.
ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರಿದರೆ ಮಾತ್ರವೇ ಅಧಿಕಾರ ಹಂಚಿಕೆ ಸೂತ್ರದಡಿ ಅಧಿಕಾರಕ್ಕೇರಲು ಸಾಧ್ಯ ಎಂಬುದು ಡಿ.ಕೆ. ಶಿವಕುಮಾರ್ ಅವರಿಗೂ ಗೊತ್ತಿದೆ.
ಆದರೆ ಲೋಕಸಭಾ ಚುನಾವಣೆ ನಡೆದ ಕೂಡಲೇ ಡಿ.ಕೆ. ಶಿವಕುಮಾರ್ ಪ್ರಭಾವ ಸ್ವಲ್ಪ ಮೆತ್ತಗಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿ ಸೀಟು ಗಳಿಸದೆ ಇದ್ದುದು ಹಾಗೂ ಸ್ವತಃ ಡಿ.ಕೆ. ಸುರೇಶ್ ಸೋತಿದ್ದು ಅವರಿಗೆ ಹಿನ್ನಡೆ ತಂದಿದೆ.
ವಿಶೇಷವಾಗಿ ಒಕ್ಕಲಿಗ ಬೆಲ್ಟ್ನಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಅಲ್ಲಿ ಬಿಜೆಪಿ ಜೆಡಿಎಸ್ ಗೆದ್ದು ಕಾಂಗ್ರೆಸ್ ವಿರುದ್ಧ ಕುದಿಯುತ್ತಿರುವ ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಿದ್ದಾರೆ.
ಹೀಗಿರುವಾಗಲೇ, ಅವರನ್ನು ಆ ಹುದ್ದೆಯಿಂದ ಇಳಿಸುವ ನಿಟ್ಟಿನ ಒತ್ತಾಯ ಮತ್ತು ಒತ್ತಡಗಳು ಅವರನ್ನು ಮುಂದಿನ ದಿನಗಳಲ್ಲಿ ಅಸಹಾಯಕರನ್ನಾಗಿಸುವ ಉದ್ದೇಶ ಉಳ್ಳದ್ದಾಗಿರಬಹುದು.
ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಏಕೆ ಆಂತರಿಕ ಭಿನ್ನಮತವನ್ನು ವಿರೋಧ ಪಕ್ಷದ ಮಾತಿಗೆ ಗ್ರಾಸವಾಗಿಸುತ್ತಿದೆ? ಅದಕ್ಕಿಂತ ಹೆಚ್ಚಾಗಿ, ಇದು ಕೈಮೀರಿ ಹೋಗಬಹುದಾದ ಹಂತವನ್ನು ಮುಟ್ಟುತ್ತಿದೆಯೆ?
ಇದು ಕಾಂಗ್ರೆಸ್ ಕಾರ್ಯಕರ್ತರನ್ನು, ಸ್ಥಳೀಯ ನಾಯಕರನ್ನು ಕಾಡುತ್ತಿರುವ ಆತಂಕವಾಗಿದೆ.