ಜಲಜೀವನ್ ಮಿಷನ್ ವರದಿ: ರಾಚುವ ಸತ್ಯಗಳು

Update: 2024-05-28 04:40 GMT
Editor : Ismail | Byline : ಕೆ.ಪಿ. ಸುರೇಶ

ಒಂದು ವರದಿ ಮುಖ್ಯವಾಗಿ ಏನನ್ನು ಹೇಳುತ್ತದೆಂಬುದು ಕಣ್ಣಿಗೆ ರಾಚುವಂತಿದ್ದರೂ ಅದನ್ನು ಮರೆಮಾಚಿ ಆಂಶಿಕ/ಅಂಚಿನ ವಿವರಗಳನ್ನು ಹೈ ಲೈಟ್ ಮಾಡುವ ಮಾದರಿ ನೋಡಬೇಕೆಂದಿದ್ದರೆ ಜಲ ಜೀವನ್ ಮಿಶನ್‌ನ ಈ ಒಂದು ವರದಿಯನ್ನು ನೋಡಬೇಕು. (Functionality Assessment of Household Tap Connection under National Jal Jeevan Mission-2022 Karnataka State report)

ಈ ವರದಿ ಜಲ ಜೀವನ್ ಮಿಷನ್‌ನ ಕಾರ್ಯ ವೈಖರಿಗೆ ಹಿಡಿದ ಕನ್ನಡಿ. ಇದು ಬಂದು ವರ್ಷ ಕಳೆದರೂ ವಸ್ತುಶಃ ಗ್ರಾಮ ಮಟ್ಟದಲ್ಲಿ ಸುಧಾರಣೆ ಆಗಿದೆಯೇ ಎಂಬ ಬಗ್ಗೆ ವಿವರಗಳಿಲ್ಲ. ಸರಕಾರವೂ ಈ ವರದಿಯನ್ನು ಆಧರಿಸಿ ತೀವ್ರ ಪರಾಮಶೆರ್, ತಿದ್ದುಪಡಿ ಮಾಡಿದ ಪುರಾವೆಗಳಿಲ್ಲ. ನಾನು ಇತ್ತೀಚೆಗೆ ಓಡಾಡಿದ ಹಲವಾರು ಪಂಚಾಯತ್‌ಗಳಲ್ಲಿ ಪರಿಸ್ಥಿತಿ ಈ ವರದಿಯಲ್ಲಿ ಹೇಳಿದ ರೀತಿಯಲ್ಲೇ ಇದೆ.

ಉದಾ:

ಬಹುತೇಕ ಜಿಲ್ಲೆಗಳಲ್ಲಿ ನೀರಿನ ಪರೀಕ್ಷೆಯ ಸಾಮರ್ಥ್ಯವನ್ನು ಅಲ್ಲಿನ ಪ್ರಯೋಗಾಲಯಗಳು ಹೊಂದಿಲ್ಲ. ಕೇವಲ ಶೇ. 56 ಗ್ರಾಮಗಳಲ್ಲಿ ಪರೀಕ್ಷಾ ಕಿಟ್‌ಗಳು ಲಭ್ಯ ಇವೆ. ಅಂದರೆ ಶೇ. 44 ಹಳ್ಳಿಗಳಲ್ಲಿ ಲಭ್ಯವಿಲ್ಲ!

ಶೇ. 67ರಷ್ಟು ಕುಡಿಯುವ ನೀರಿನ ಮೂಲ ಬೋರ್‌ವೆಲ್ ಅರ್ಥಾತ್ ಅಂತರ್ಜಲ. ಈ ಕೊಳವೆ ಬಾವಿಗಳಿಗೆ ಜಲ ಮರುಪೂರಣ ವ್ಯವಸ್ಥೆ ಮಾಡಬೇಕು ಎಂಬ ನಿರ್ದೇಶನ ಇದೆ. ಆದರೆ ಕೇವಲ ಶೇ. 6 ಪಂಚಾಯತ್‌ಗಳಲ್ಲಿ ಮಾತ್ರ ಈ ಮರುಪೂರಣ ವ್ಯವಸ್ಥೆ ಇದೆ ಎಂದು ವರದಿ ಹೇಳುತ್ತದೆ.

ಇನ್ನು, ನೀರಿನಲ್ಲಿ ಕ್ಲೋರಿನ್ ಇರುವುದು ಅದರ ಸುರಕ್ಷತೆಯ ಸೂಚಿ. ಶೇ. 68 ಹಳ್ಳಿಗಳಲ್ಲಿ ಕ್ಲೋರಿನ್ ಅಂಶವೇ ಇಲ್ಲ. ಅರ್ಥಾತ್ ಆ ನೀರು ಸುರಕ್ಷಿತ ಅನ್ನುವ ವೈಜ್ಞಾನಿಕ ಆಧಾರವೇ ಇಲ್ಲ.

ಕಳೆದ ಒಂದು ವರ್ಷದ ಅವಧಿಯಲ್ಲಿ ಒಮ್ಮೆಯಾದರೂ ನೀರಿನ ಪರೀಕ್ಷೆ ಆಗಿದೆಯೇ ಎಂಬುದಕ್ಕೆ ಆಗಿದೆ ಎಂಬ ಉತ್ತರ ಸಿಕ್ಕಿದ್ದು ಶೇ. 28 ಹಳ್ಳಿಗಳಲ್ಲಿ ಮಾತ್ರ. ಅರ್ಥಾತ್ ಶೇ. 72 ಹಳ್ಳಿಗಳಲ್ಲಿ ಈ ಪರೀಕ್ಷೆಯೇ ನಡೆದಿಲ್ಲ.

ಕುಡಿಯುವ ನೀರಿನ ನಿರ್ವಹಣೆಯನ್ನು ಸಮುದಾಯಾಧಾರಿತ ಪಾನಿ ಸಮಿತಿ ನಿರ್ವಹಿಸಬೇಕು ಎಂಬ ಶರಾ ಇದೆ. ಆದರೆ ರಾಜ್ಯದ ಶೇ. 45 ಪಂಚಾಯತ್‌ಗಳಲ್ಲಿ ಮಾತ್ರ ಪಾನಿ ಸಮಿತಿ ಅಸ್ತಿತ್ವದಲ್ಲಿದೆ. ಅಂದರೆ ಶೇ. 65 ಪಂಚಾಯತ್‌ಗಳಲ್ಲಿ ಇಲ್ಲ. ಈ ಸಮಿತಿಗಳಿರುವ ಪಂಚಾಯತ್‌ಗಳಲ್ಲೂ ಅರ್ಧಕ್ಕರ್ಧ ಸಮಿತಿಗಳು ವರ್ಷಕ್ಕೊಮ್ಮೆ ಮಾತ್ರ ಸಭೆ ಸೇರಿವೆ. ಈ ಸಾಮಾಜಿಕ ಸಮುದಾಯ ವ್ಯವಸ್ಥೆಯನ್ನು ಕುದುರಿಸುವ ಕೆಲಸವನ್ನು ಸರಕಾರವೇ ಆರಿಸಿದ ಸ್ವಯಂ ಸೇವಾ ಸಂಸ್ಥೆಗಳು ನಿಗದಿತ ಕಾಲಾವಧಿಯಲ್ಲಿ ಮಾಡಬೇಕು. ಆದರೆ ಈ ಸಂಸ್ಥೆಗಳು ತಮ್ಮ ಕಾರ್ಯದಲ್ಲಿ ವಿಫಲವಾಗಿರುವುದನ್ನು ವರದಿಯೇ ಸೂಚಿಸುತ್ತದೆ.

ಮನೆಮನೆಗೆ ನೀರು ಎಂಬ ಘೋಷಣೆಯಿದ್ದರೂ ಈ ವರದಿ ಪ್ರಕಾರ ಶೇ. 34 ಮನೆಗಳು ಕುಡಿಯುವ ನೀರಿನ ಅಭಾವವನ್ನು ಎದುರಿಸಿದ್ದಾರೆ ಮಾತ್ರವಲ್ಲ ನೀರಿಗಾಗಿ ಅನ್ಯ ಮೂಲಗಳನ್ನು ಆಶ್ರಯಿಸಿದ್ದಾರೆ. ಹಾವೇರಿ, ಚಿತ್ರದುರ್ಗ, ಗದಗ, ಕೊಪ್ಪಳ ಮುಂತಾದ ಜಿಲ್ಲೆಗಳು ಈ ಅಭಾವದ ಮುಂಚೂಣಿಯಲ್ಲಿವೆ.

ಇನ್ನು ಪಾನಿ ಸಮಿತಿ ಅಸ್ತಿತ್ವದಲ್ಲಿರುವ ಬಹುಪಾಲು ಪಂಚಾಯತ್‌ಗಳಲ್ಲಿ ವರ್ಷಕ್ಕೆ ಒಮ್ಮೆಯೂ ನೀರಿನ ಪರೀಕ್ಷೆ ನಡೆದಿಲ್ಲ. ಬಾಗಲಕೋಟೆ, ಚಾಮರಾಜನಗರ ಜಿಲ್ಲೆಗಳು ಈ ಪಟ್ಟಿಯಲ್ಲಿವೆ. ಕೇವಲ ಶೇ. 6 ಪಂಚಾಯತ್‌ಗಳಲ್ಲಿ ಕ್ಲೋರಿನ್ ಬಳಕೆಯಾಗಿದೆ. ರಾಜ್ಯದಲ್ಲಿ ಪಾನಿ ಸಮಿತಿ ಇರುವುದೇ ಶೇ. 45 ಪಂಚಾಯತ್‌ಗಳಲ್ಲಿ ಅದರಲ್ಲಿ ಕೇವಲ ಶೇ. 16 ಪಂಚಾಯತ್‌ಗಳಲ್ಲಿ ಮಾತ್ರ ಪಾನಿ ಸಮಿತಿಗಳು ನಿರ್ವಹಣೆಯ ಜವಾಬ್ದಾರಿ ಹೊಂದಿವೆ.

ಕೇವಲ ಶೇ. 31 ಪಂಚಾಯತ್‌ಗಳಲ್ಲಿ ನೀರಿನ ದುರ್ಬಳಕೆ, ಅಪವ್ಯಯದ ಉಸ್ತುವಾರಿ ವ್ಯವಸ್ಥೆ ಹೊಂದಿವೆ.

ಈ ಮನೆ ಮನೆ ನೀರು ಸರಬರಾಜು ಉದ್ಯೋಗದ ದಿನಗಳನ್ನು ಹೆಚ್ಚಿಸಿದೆಯೇ, ಹೆಣ್ಣು ಮಕ್ಕಳ ಶಾಲಾ ಹಾಜರಾತಿಯ ಮೇಲೆ ಧನಾತ್ಮಕ ಪರಿಣಾಮ ಬೀರಿದೆಯೇ ಎಂಬುದೂ ಈ ಸರ್ವೇಯ ಮುಖ್ಯ ಸೂಚಿ. ಇದರಲ್ಲೂ ಗಮನಾರ್ಹ ಬದಲಾವಣೆ ಕಂಡಿಲ್ಲ ಎಂದು ವರದಿ ಹೇಳುತ್ತದೆ

ಇನ್ನೂ ತೀವ್ರ ವಿವರಗಳು ಈ ವರದಿಯಲ್ಲಿವೆ, ಇರಲಿ.

ಮೊನ್ನೆ ಮುಖ್ಯಮಂತ್ರಿಗಳು ಕುಡಿಯುವ ನೀರಿನ ಸರಬರಾಜಿನಲ್ಲಿರುವ ಈ ಲೋಪಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಮುಂದುವರಿಕೆಯಾಗಿ ಅವರು ಈ ವರದಿಯ ಬಳಿಕ ಈ ಯೋಜನೆಯಲ್ಲಿ ಏನಾಗಿದೆ ಎಂಬ ತನಿಖೆ/ಅಧ್ಯಯನಕ್ಕೆ ಆದೇಶಿಸಿ ಲೋಪಗಳಿಗೆ ಪರಿಹಾರವನ್ನೂ ಉತ್ತರದಾಯಿತ್ವವನ್ನೂ ಕಂಡುಕೊಳ್ಳಬೇಕಿದೆ.

ಈಗಾಗಲೇ ಭೌತಿಕ ಪೈಪ್ ಅಳವಡಿಕೆಯಲ್ಲಾಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ವರದಿಗಳು ಬಂದಿವೆ. ನಿರ್ವಹಣೆ, ನಿತ್ಯದ ಕರ್ತವ್ಯಗಳು, ಸಮುದಾಯದ ಹೊಣೆಗಾರಿಕೆ ಇತ್ಯಾದಿಗಳನ್ನು ಕಲ್ಪಿಸಬೇಕಾದ ಜವಾಬ್ದಾರಿಯಲ್ಲಿ ಯಾಕೆ ಲೋಪವಾಯಿತು? ಸ್ವಯಂ ಸೇವಾ ಸಂಸ್ಥೆಗಳು ಯಾಕೆ ವಿಫಲವಾದವು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಕ್ಕರಷ್ಟೇ ನೀರು ಪೂರೈಕೆಯನ್ನು ವ್ಯವಸ್ಥಿತ ದೋಷರಹಿತವಾಗಿ ಮಾಡಬಹುದು.

ಒಮ್ಮೆ ರೇಗಾಡಿ ಜಿಲ್ಲಾಧಿಕಾರಿಗಳ ತಲೆಗೆ ಕಟ್ಟುವುದರಿಂದ ಈ ಸಮಸ್ಯೆ ಪರಿಹಾರವಾಗದು. ಇದು ಮೂಲತಃ ಸಮದಾಯವೇ ನಿರ್ವಹಿಸಬೇಕಾದ ಯೋಜನೆ ಎಂಬ ಆಶಯ ಸಾಕಾರಗೊಳ್ಳಬೇಕಿದೆ. ಈ ನೀರಿಗೆ ಮನೆಮನೆಯವರೂ ಶುಲ್ಕ ತೆರುತ್ತಿದ್ದಾರೆ. ಹೀಗೆ ಶುಲ್ಕ ತೆತ್ತವರ ಗ್ರಾಹಕ ಹಕ್ಕುಗಳನ್ನು ಗೌರವಿಸಲು ಉತ್ತಮ ಗುಣಮಟ್ಟದ ಭರವಸೆ ನೀಡಿದ ಪ್ರಮಾಣದ ನೀರಿನ ಪೂರೈಕೆ ನಿರಂತರವಾಗಿರಬೇಕು, ಅಲ್ಲವೇ?

ಪಂಚಾಯತ್‌ಗಳ ಘನತ್ಯಾಜ್ಯ ನಿರ್ವಹಣೆಯನ್ನು ಸ್ಥಳೀಯ ಮಹಿಳಾ ಸಂಘಗಳಿಗೆ ನೀಡಿ ಕ್ರಾಂತಿಕಾರಕ ಹಜ್ಜೆ ಇಟ್ಟಿರುವ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ದಕ್ಷತೆ ತರುವುದು ಕಷ್ಟವಾಗಬಾರದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಕೆ.ಪಿ. ಸುರೇಶ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!