ಪ್ರಧಾನಿ ಜೊತೆ ಬಹಿರಂಗ ಚರ್ಚೆಗೆ ಸವಾಲು ಹಾಕಿದ ಕರ್ನಾಟಕ ಸಿಎಂ

Update: 2024-02-09 04:46 GMT
Editor : Ismail | Byline : ಆರ್. ಜೀವಿ

ರಾಜ್ಯಕ್ಕೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದಿಂದ ಪದೇ ಪದೇ ಅನ್ಯಾಯವಾಗುತ್ತಲೇ ಇದೆ. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಮತ್ತು ಕನ್ನಡಿಗರಿಗೆ ಕೇಂದ್ರದ ಬಿಜೆಪಿ ಸರಕಾರದಿಂದ ಆಗುತ್ತಿರುವ ಅನ್ಯಾಯಗಳನ್ನು ಹೇಳುತ್ತಲೇ ಬಂದಿದ್ದೇನೆ. ಇದಕ್ಕೆ ಉತ್ತರ ನೀಡಬೇಕಾಗಿರುವವರು ಪ್ರಧಾನಿ ನರೇಂದ್ರ ಮೋದಿಯವರೇ ಹೊರತು ಬಿಜೆಪಿಯ ಐಟಿ ಸೆಲ್ ಅಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿಯವರು ಒಪ್ಪಿ ದಿನ ಮತ್ತು ಸ್ಥಳವನ್ನು ನಿಗದಿಪಡಿಸಿದರೆ ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಸಿದ್ಧವಿರುವುದಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

ಕೇಂದ್ರದ ವಿರುದ್ದ ಸಿದ್ದರಾಮಯ್ಯ ಆಕ್ರೋಶಕ್ಕೂ ಸಕಾರಣವಿದೆ.

ಸತತವಾಗಿ ಕರ್ನಾಟಕವನ್ನು ಕಡೆಗಣಿಸುತ್ತಿರುವ ಮೋದಿ ನಡೆ ಖಂಡಿತವಾಗಿಯೂ ರಾಜಕೀಯ ದ್ವೇಷದ್ದೆಂಬಂತೆ ಕಾಣಿಸುತ್ತಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ರಾಜ್ಯಕ್ಕೆ ಮೇಲಿಂದ ಮೇಲೆ ಬಂದು ತಮ್ಮ ಮುಖ ತೋರಿಸಿದ ಮೇಲೂ ಬಿಜೆಪಿ ಮುಖ ತೋರಿಸಲಾರದ ಹಾಗೆ ಸೋತಿದ್ದಕ್ಕೆ ಕಾಂಗ್ರೆಸ್ ಸರ್ಕಾರ ಮತ್ತು ರಾಜ್ಯದ ಜನರ ವಿರುದ್ಧ ಮೋದಿ ಸೇಡು ತೀರಿಸಿಕೊಳ್ಳುತ್ತಿದ್ದಾರೆಯೆ?

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯವೊಂದರ ನ್ಯಾಯಯುತ ಬೇಡಿಕೆಗಳನ್ನು ಪ್ರಧಾನಿ ಸ್ಥಾನದಲ್ಲಿದ್ದವರು ಈ ಮಟ್ಟಿಗೆ ಕಡೆಗಣಿಸುತ್ತಿರುವುದು ಬಹು ದೊಡ್ಡ ವಿಪರ್ಯಾಸವಾಗಿದೆ.

ಪ್ರಧಾನಿಯೂ ಸೇರಿದಂತೆ ಬಿಜೆಪಿಯವರ ಈ ಮನಃಸ್ಥಿತಿಯೇ ಸಿದ್ದರಾಮಯ್ಯನವರಲ್ಲಿ ಪ್ರಧಾನಿ ಬಗ್ಗೆ ಸಿಟ್ಟು ಉಂಟಾಗಲು ಕಾರಣವಾಗಿದೆ. ಮತ್ತದು ನ್ಯಾಯಯುತ ಸಿಟ್ಟು.

ಕೇಂದ್ರದ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಒಂದೆರಡಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿರುವ ಹಾಗೆ ರಾಜ್ಯದಲ್ಲಿ ಬರ ಉಂಟಾಗಿ ಆರು ತಿಂಗಳುಗಳೇ ಆಗಿವೆ. 18,177 ಕೋಟಿ ಹಣ ನೀಡುವಂತೆ 3 ತಿಂಗಳಿಂದ ರಾಜ್ಯ ಸರ್ಕಾರ ಒತ್ತಾಯಿಸುತ್ತಿದೆ. ಪತ್ರ ಬರೆದದ್ದು ಮಾತ್ರವಲ್ಲ, ಸ್ವತಃ ಹೋಗಿ ಮೋದಿಯವರನ್ನು ಭೇಟಿಯಾಗಿ ಸಮಸ್ಯೆ ವಿವರಿಸಲಾಗಿದೆ.

ಇಷ್ಟಾದ ಮೇಲೂ ಒಂದು ಪೈಸೆ ಹಣ ಕೇಂದ್ರದಿಂದ ಬಿಡುಗಡೆಯಾಗಿಲ್ಲ ಎಂಬುದು ಸಿದ್ದರಾಮಯ್ಯ ಅವರ ಆಕ್ಷೇಪ.

ಇನ್ನು ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲಿನಲ್ಲಂತೂ ದೊಡ್ಡ ಮಟ್ಟದ ಅನ್ಯಾಯವಾಗಿದೆ.

15ನೇ ಹಣಕಾಸು ಆಯೋಗದ ನೆಪದಲ್ಲಿ ಕರ್ನಾಟಕಕ್ಕೆ ಕೇಂದ್ರದ ತೆರಿಗೆ ಪಾಲು ಭಾರೀ ಪ್ರಮಾಣದಲ್ಲಿ ಕಡಿತಗೊಂಡಿದೆ.

ತೆರಿಗೆ ಪಾಲು ಹಂಚುವಲ್ಲೂ ತನ್ನ ರಾಜಕೀಯ ಲಾಭ ನೋಡಿಕೊಂಡಿರುವ ಅದು, ಇತರೆಲ್ಲ ರಾಜ್ಯಗಳಿಗೂ ಲಾಭವಾಗುವಂತೆ ಮಾಡಿ, ಕರ್ನಾಟಕವನ್ನು ಮಾತ್ರ ಉದ್ದೇಶಪೂರ್ವಕವಾಗಿಯೇ ಸತಾಯಿಸಿದೆ.

ರಾಜ್ಯದ ತೆರಿಗೆ ಪಾಲನ್ನು ಕಡಿತ ಮಾಡಿ, ಗುಜರಾತ್ ಅಭಿವೃದ್ಧಿಗೆ ಕೊಡಲಾಗಿದೆ ಎಂದು ಈಗಾಗಲೇ ಟೀಕಿಸಿರುವ ಸಿದ್ದರಾಮಯ್ಯ, ಮೋದಿ ದೇಶಕ್ಕೆ ಪ್ರಧಾನಿಯೊ ಗುಜರಾತಿಗೆ ಮಾತ್ರ ಪ್ರಧಾನಿಯೊ ಎಂದು ಪ್ರಶ್ನಿಸಿದ್ದರು.

ಕನ್ನಡಿಗರು ಬೆವರು ಸುರಿಸಿ ಕಟ್ಟಿದ ತೆರಿಗೆ ಹಣ ಕಂಡವರ ಪಾಲಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು.

15ನೇ ಹಣಕಾಸು ಆಯೋಗದ ಲೆಕ್ಕಾಚಾರದಲ್ಲಿ ಬದಲಾಗಿರುವ ಸ್ಥಿತಿಯಂತೆ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಿಗೂ ಹೆಚ್ಚು ತೆರಿಗೆ ಪಾಲು ಸಿಕ್ಕಿದೆ.

ಆದರೆ ಅನ್ಯಾಯವಾಗಿರುವುದು ಕರ್ನಾಟಕಕ್ಕೆ ಮಾತ್ರ.

2018-19ರಲ್ಲಿ ಕರ್ನಾಟಕಕ್ಕೆ 35,894 ಕೋಟಿ ತೆರಿಗೆ ಪಾಲು ಸಿಕ್ಕಿದ್ದರೆ, 2022-23ರಲ್ಲಿ ಸಿಕ್ಕಿರುವುದು 34,496 ಕೋಟಿ ರೂ. ಮಾತ್ರ.

ಅಂದರೆ ಐದು ವರ್ಷಗಳ ಹಿಂದೆ ಸಿಕ್ಕಿದ್ದಕ್ಕಿಂತ ಕಡಿಮೆ ಪಾಲು.

14 ನೇ ಹಣಕಾಸು ಆಯೋಗ ಹೇಳಿದ್ದಂತೆ 2019-20ರವರೆಗೂ ಕರ್ನಾಟಕಕ್ಕೆ ಶೇ.4.74ರಷ್ಟು ತೆರಿಗೆ ಪಾಲು ಸಿಗುತ್ತಿತ್ತು.

15ನೇ ಹಣಕಾಸು ಆಯೋಗ ಅದನ್ನು ಶೇ.3.64ಕ್ಕೆ ಇಳಿಸಿತು.

14ನೇ ಹಣಕಾಸು ಆಯೋಗದ ಶಿಫಾರಸಿನಷ್ಟೇ ಪಾಲು ಸಿಗುವಂತಿದ್ದರೆ 2023-24ರಲ್ಲಿ ಕರ್ನಾಟಕಕ್ಕೆ ಬರಬೇಕಿದ್ದ ತೆರಿಗೆ ಪಾಲು 48,517 ಕೋಟಿ ಇರುತ್ತಿತ್ತು.

ಆದರೆ 15ನೇ ಹಣಕಾಸು ಆಯೋಗದ ನೀತಿಯಿಂದಾಗಿ 2023-24ರ ಆರ್ಥಿಕ ವರ್ಷವೊಂದರಲ್ಲಿಯೇ ಕರ್ನಾಟಕಕ್ಕೆ 11,265 ಕೋಟಿಯಷ್ಟು ಕಡಿತವಾಗಿದೆ.

ಇದು ಮೋದಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರೋ ಕಡಿತ ಕೊಡುಗೆ.

ಒಡಿಶಾ ಈ ಹಿಂದೆ ಪಡೆಯುತ್ತಿದ್ದ ತೆರಿಗೆ ಪಾಲಿನ ಮೊತ್ತ ಗಮನಿಸಿದರೆ, 2023-24ರಲ್ಲಿ ಅದು ಪಡೆಯಲಿರುವ ತೆರಿಗೆ ಪಾಲು 10,000 ಕೋಟಿಗಿಂತಲೂ ಹೆಚ್ಚು ಏರಿದೆ.

ಇದೇ ಅವಧಿಯಲ್ಲಿ ಆಂಧ್ರದ ತೆರಿಗೆ ಪಾಲಿನಲ್ಲಿ 8,551 ಕೋಟಿ ಏರಿಕೆಯಾಗಿದೆ.

ತಮಿಳುನಾಡಿನ ಪಾಲು 11,026 ಕೋಟಿಯಷ್ಟಾಗಿದೆ.

ಆದರೆ ಇದೇ ಅವಧಿಯಲ್ಲಿ ಕರ್ನಾಟಕದ ತೆರಿಗೆ ಪಾಲಿನಲ್ಲಾದ ಏರಿಕೆ 1,358 ಕೋಟಿ ಮಾತ್ರ. ಅಂದರೆ, ಶೇ.3.8ರಷ್ಟು ಮಾತ್ರ.

ಈ ಅನ್ಯಾಯದ ಬಗ್ಗೆ ಮನವರಿಕೆಯಾದ ಬಳಿಕ 15ನೇ ಹಣಕಾಸು ಆಯೋಗ ರಾಜ್ಯಕ್ಕೆ ವಿಶೇಷ ಅನುದಾನದ ರೂಪದಲ್ಲಿ 5,495 ಕೋಟಿ ನೀಡುವಂತೆ ಶಿಫಾರಸು ಮಾಡಿತ್ತು.

ಆದರೆ, ಕನ್ನಡಿಗರ ಜನಪ್ರತಿನಿಧಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಆ ಶಿಫಾರಸನ್ನು ನಿರಾಕರಿಸಿದ್ದರಿಂದ ಆ ಹಣವೂ ಬರದೇ ಹೋಗಿದೆ ಎಂಬುದನ್ನು ಸಿದ್ದರಾಮಯ್ಯ ಹೇಳಿದ್ದಾರೆ.

ಹಣಕಾಸು ಆಯೋಗದಿಂದ ಹೀಗಾದರೆ, NDRFನಿಂದಲೂ ಇದೇ ಥರ ಆಗಿದೆ. ಬರ ಪರಿಹಾರಕ್ಕಾಗಿ ಕೋರಿದ ಹಣ ಕೇಂದ್ರದಿಂದ ಬರುತ್ತಲೇ ಇಲ್ಲ.

ಈ ಅನ್ಯಾಯ ಇದೇ ಮೊದಲಲ್ಲ ಎಂಬುದರ ಕಡೆಗೂ ಸಿದ್ದರಾಮಯ್ಯ ಗಮನ ಸೆಳೆಯುತ್ತಾರೆ.

2017ರಲ್ಲಿಯೂ ಕರ್ನಾಟಕದಲ್ಲಿ ಬರ ಬಂದಿತ್ತು. ಅಂದಾಜು 30,000 ಕೋಟಿಯಷ್ಟು ನಷ್ಟ ಉಂಟಾಗಿತ್ತು. ಆದರೆ ಕೇಂದ್ರದಿಂದ ಬಂದದ್ದು 1,435 ಕೋಟಿ ಮಾತ್ರ.

ಡಬಲ್ ಎಂಜಿನ್ ಎಂದು ಹೇಳಿಕೊಂಡಿದ್ದ ಸರ್ಕಾರದ ಸಮಯದಲ್ಲಿಯೂ ಅತಿವೃಷ್ಟಿ ಹಾನಿಗೆ ಪರಿಹಾರ ಕೊಡಲು ಹೀಗೆಯೇ ಸತಾಯಿಸಲಾಗಿತ್ತು.

ಇದೊಂದು ಕಡೆಯಾದರೆ, ಕರ್ನಾಟಕಕ್ಕೆ ಸಂಬಂಧಿಸಿದ ಯೋಜನೆಗಳ ವಿಚಾರದಲ್ಲಿಯೂ ಮೋದಿ ಸರ್ಕಾರದ್ದು ದಿವ್ಯ ನಿರ್ಲಕ್ಷ್ಯ.

ಆರ್ಥಿಕ ವರ್ಷ ಆರಂಭವಾಗಿ 6 ತಿಂಗಳುಗಳೇ ಕಳೆದಿದ್ದರೂ, ಕೇಂದ್ರ ಸರಕಾರದ ಸಹಯೋಗದ 61 ಯೋಜನೆಗಳಿಗೆ ಸಂಬಂಧಿಸಿದಂತೆ 23 ಇಲಾಖೆಗಳಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ.

ಕೃಷ್ಣಾ ಮೇಲ್ದಂಡೆ ಮತ್ತು ಮಹಾದಾಯಿ ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಏಮ್ಸ್ ಸಂಸ್ಥೆ ಬೇಕೆಂಬ ಕನ್ನಡಿಗರ ಕನಸು ಇನ್ನೂ ಕನಸಾಗಿಯೇ ಉಳಿದಿದೆ.

ಕನ್ನಡಿಗರು ಶ್ರಮದಿಂದ ಕಟ್ಟಿದ ಬ್ಯಾಂಕುಗಳನ್ನು ವಿಲೀನದ ಹೆಸರಲ್ಲಿ ಬೇರೆ ರಾಜ್ಯಗಳ ನಷ್ಟದಲ್ಲಿರುವ ಬ್ಯಾಂಕುಗಳ ಜೊತೆ ವಿಲೀನ ಮಾಡಿ ಕನ್ನಡಿಗರಿಗೆ ದ್ರೋಹ ಬಗೆಯಲಾಗಿದೆ.

ಇನ್ನೂ ಅನೇಕ ತಕರಾರುಗಳನ್ನು ಸಿದ್ದರಾಮಯ್ಯ ಎತ್ತಿದ್ದಾರೆ.

 

ನಮ್ಮ ಹಿರೀಕರು ಕಷ್ಟಪಟ್ಟು ನಿರ್ಮಾಣ ಮಾಡಿದ್ದ ವಿಮಾನ ನಿಲ್ದಾಣವನ್ನು ಖಾಸಗಿಯವರಿಗೆ ಮಾರಲಾಗಿದೆ.

ಹದಿನೆಂಟು ಸಾವಿರ ಕೋಟಿ ರೂಪಾಯಿಯ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಅನುದಾನ ಇಲ್ಲದೆ ಸೊರಗಿ ಹೋಗಿದೆ.

ಇನ್ನು ರಾಜ್ಯದ ಇತರೆ ರೈಲ್ವೇ ಯೋಜನೆಗಳನ್ನು ಮೂಲೆಗೆ ತಳ್ಳಲಾಗಿದೆ.

ಇದನ್ನೆಲ್ಲ ಪ್ರಸ್ತಾಪಿಸಿರುವ ಸಿದ್ದರಾಮಯ್ಯನವರು, ತೆರೆದ ಪುಸ್ತಕದಲ್ಲಿ ಕಾಣುವ ಈ ಅನ್ಯಾಯಗಳನ್ನು ಕಂಡು ಮೌನವಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕ್ರಿಯೆಯನ್ನು ಹೇಗೆ ವ್ಯಾಖ್ಯಾನಿಸಲಿ?

ಉದ್ದೇಶಪೂರ್ವಕವಾದ ನಿರ್ಲಕ್ಷ್ಯ ಎನ್ನಲೇ? ಸಹಜವಾದ ನಿದ್ರಾ ಸ್ಥಿತಿ ಎನ್ನಲೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿನ ಬಿಜೆಪಿ ಸಂಸದರಂತೂ ಕರ್ನಾಟಕದ ಪರವಾಗಿ ಮೋದಿಯೆದುರು ನಿಂತು ಕೇಳುವ ಹೊಣೆಗಾರಿಕೆಯನ್ನೇ ತೋರುತ್ತಿಲ್ಲ.

ಆದರೆ ಕಾಂಗ್ರೆಸ್ ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನೆಲ್ಲ ಟೀಕಿಸುವುದರಲ್ಲಿ, ಅವುಗಳ ಬಗ್ಗೆ ಅಪಪ್ರಚಾರ ಮಾಡುವುದರಲ್ಲಿ ಮಾತ್ರ ಅವರು ಮುಂದಿದ್ದಾರೆ.

ಕರ್ನಾಟಕದಿಂದ ಆಗುವ ಲಾಭವೆಲ್ಲವೂ ಬೇಕು. ಇಲ್ಲಿನ ಗರಿಷ್ಠ ಎಂಪಿ ಸೀಟುಗಳು ಬೇಕು. ಆದರೆ ಕನ್ನಡಿಗರ ನ್ಯಾಯಯುತ ಬೇಡಿಕೆಗಳ ಬಗ್ಗೆ ಮಾತ್ರ ಇಷ್ಟೊಂದು ಕಡೆಗಣನೆ.

ಕೇಂದ್ರದಲ್ಲಿ ತನ್ನ ಸರಕಾರ ರಚನೆಯಾಗಲು 25 ಸಂಸದರನ್ನು ಗೆಲ್ಲಿಸಿ ಕಳುಹಿಸಿದ ಕರ್ನಾಟಕಕ್ಕೆ ಮೋದಿಯವರು ಈ ರೀತಿ ಅನ್ಯಾಯ ಮಾಡೋದು ಸರಿಯೇ ?

ಕರ್ನಾಟಕಕ್ಕೆ ನ್ಯಾಯವಾಗಿ ತಾನು ಕೊಡಬೇಕಿರುವುದನ್ನು ಕೊಡಲು ಮೋದಿ ಸರ್ಕಾರಕ್ಕೆ ಮನಸ್ಸಿಲ್ಲ.

ಇಲ್ಲಿರುವ 25 ಬಿಜೆಪಿ ಸಂಸದರು ರಾಮ ಮಂದಿರದ ಹೆಸರಲ್ಲಿ ಮಂತ್ರಾಕ್ಷತೆ ಹಂಚುವುದರಲ್ಲಿ, ದ್ವೇಷ ಭಾಷಣ ಮಾಡುವಲ್ಲಿ, ಜನರನ್ನು ವಿಭಜಿಸುವಲ್ಲಿ, ಕಾಂಗ್ರೆಸ್ ಸರಕಾರದ ಬಗ್ಗೆ ಅಪಪ್ರಚಾರ ಮಾಡುವಲ್ಲಿ ಫುಲ್ ಬಿಝೀಯಾಗಿದ್ದಾರೆ.

ಇಂಥ ಸಂದರ್ಭದಲ್ಲಿ ಈಗ ಮುಖ್ಯಮಂತ್ರಿಯವರ ಪ್ರಶ್ನೆಗಳಾದರೂ ಮೋದಿಯವರನ್ನು ಎಚ್ಚರಿಸಿಯಾವೆ ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!