ರಾಜ್ಯದಲ್ಲಿ ಅತೀ ಕಡಿಮೆ ಅಪೌಷ್ಟಿಕತೆ ಹೆಗ್ಗಳಿಕೆಗೆ ಕೊಡಗು ಪಾತ್ರ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆರು ವರ್ಷದೊಳಗಿನ ಮಕ್ಕಳಲ್ಲಿ ಸಾಧಾರಣ ಮತ್ತು ತೀವ್ರ ಅಪೌಷ್ಟಿಕ ಮಕ್ಕಳನ್ನು ಪತ್ತೆ ಹಚ್ಚಲಾಗಿದ್ದು, ಜಿಲ್ಲೆಯಲ್ಲಿ ಫೆಬ್ರವರಿ ಅಂತ್ಯದವರೆಗೆ ಕೇವಲ 359 ಮಕ್ಕಳಲ್ಲಿ ಮಾತ್ರ ಅಪೌಷ್ಟಿಕತೆ ಕಂಡುಬಂದಿವೆ. ಈ ಮೂಲಕ ರಾಜ್ಯದಲ್ಲಿಯೇ ಕೊಡಗು ಅತೀ ಕಡಿಮೆ ಅಪೌಷ್ಟಿಕತೆ ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಂಗನವಾಡಿಗಳ ಮೂಲಕ 8 ಸಾವಿರಕ್ಕೂ ಅಧಿಕ ಮಕ್ಕಳನ್ನು ತೂಕ ಮಾಡಲಾಗಿದ್ದು, ಇದರಲ್ಲಿ ಕೇವಲ 46 ಮಕ್ಕಳಲ್ಲಿ ಮಾತ್ರ ತೀವ್ರ ಅಪೌಷ್ಟಿಕತೆ ಕಂಡು ಬಂದಿದೆ. ಉಳಿದಂತೆ 313 ಮಕ್ಕಳಲ್ಲಿ ಸಾಧಾರಣ ಪ್ರಮಾಣದ ಅಪೌಷ್ಟಿಕತೆ ಕಂಡು ಬಂದಿದ್ದು, ಅಪೌಷ್ಟಿಕತೆ ನಿಯಂತ್ರಿಸುವಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ.
ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ನಿಯಂತ್ರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿವೆ. ಮಕ್ಕಳ ತಾಯಿಯಂದಿರಿಗೆ ಮಕ್ಕಳಿಗೆ ನೀಡಬೇಕಾದ ಆಹಾರದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅಪೌಷ್ಟಿಕ ಮಕ್ಕಳು ಕಂಡಬಂದರೆ ಅವರಿಗೆ ಆರೋಗ್ಯ ಇಲಾಖೆಯ ಸಹಕಾರದಿಂದ ವಿಶೇಷ ಆರೋಗ್ಯ ತಪಾಸಣೆ ನಡೆಸಿ ಅವರ ಆರೋಗ್ಯ ಮತ್ತು ಆಹಾರದ ಬಗ್ಗೆ ಅಂಗನವಾಡಿ ಕಾರ್ಯಕರ್ತರ ನಿರಂತರವಾಗಿ ಸಂಪರ್ಕದಲ್ಲಿ ಇರುವುದರಿಂದ ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ನಿಯಂತ್ರಣದಲ್ಲಿವೆ.
ಅದಲ್ಲದೆ ಪ್ರತೀ ತಿಂಗಳು ಆಯಾ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ಮುಖಾಂತರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಮಕ್ಕಳ ಅಪೌಷ್ಟಿಕತೆ ಬಗ್ಗೆ ನಿರಂತರವಾಗಿ ಅರಿವು ಮೂಡಿಸುತ್ತಿದೆ. ಜೊತೆಗೆ ಇತರ ಜಿಲ್ಲೆಗಳಲ್ಲಿ ‘ಕ್ಷೀರ ಭಾಗ್ಯ’ ಯೋಜನೆಯಡಿಯಲ್ಲಿ ವಿತರಿಸುತ್ತಿರುವ ಹಾಲಿನ ಪುಡಿಯನ್ನು ಕೆಲವು ಜಿಲ್ಲೆಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಕೊಡಗಿನಲ್ಲಿ ಕ್ಷೀರ ಭಾಗ್ಯ ಯೋಜನೆಯಲ್ಲಿ ವಿತರಿಸುತ್ತಿರುವ ಹಾಲಿನ ಪುಡಿಯ ವಿತರಣೆ ಸ್ಥಗಿತಗೊಂಡಿಲ್ಲ. ಅದಲ್ಲದೆ ಮಕ್ಕಳಿಗೆ ಮೊಟ್ಟೆಯನ್ನೂ ವಿತರಿಸಲಾಗುತ್ತಿವೆ.
2023 ಡಿಸೆಂಬರ್ ಅಂತ್ಯದವರೆಗೆ ರಾಜ್ಯದ ಜಿಲ್ಲೆಗಳಲ್ಲಿ ಅಂಗನವಾಡಿಗಳ ಮೂಲಕ ಆರು ವರ್ಷದೊಳಗಿನ 27.73 ಲಕ್ಷ ಮಕ್ಕಳ ತೂಕ ಮಾಡಲಾಗಿದ್ದು, ಈ ಪೈಕಿ ಸಾಧಾರಣ ಅಪೌಷ್ಟಿಕ ಮಕ್ಕಳ ಸಂಖ್ಯೆ 1,46,749, ತೀವ್ರ ಅಪೌಷ್ಟಿಕತೆಯುಳ್ಳ ಮಕ್ಕಳ ಸಂಖ್ಯೆ 73,300 ಇರುವುದು ಪತ್ತೆಯಾಗಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿ-ಅಂಶಗಳೇ ಹೇಳುತ್ತಿವೆ.
ಸಾಧಾರಣ ಮತ್ತು ತೀವ್ರ ಅಪೌಷ್ಟಿಕ ಮಕ್ಕಳನ್ನು ಪತ್ತೆ ಮಾಡಲು ಇಲಾಖೆಯು ಅಂಗನವಾಡಿಗಳ ಮೂಲಕ ತೂಕ ಮಾಡುವ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಅತೀ ಹೆಚ್ಚು ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬಂದಿದ್ದು, ಮೊದಲ ಸ್ಥಾನದಲ್ಲಿದ್ದರೆ, ಕೊಡಗು ಅತಿ ಕಡಿಮೆ ಅಪೌಷ್ಟಿಕತೆ ಹೊಂದಿರುವ ಜಿಲ್ಲೆಯಾಗಿದೆ.
ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗಲು ಕಾರಣವೇನು?
ಗರ್ಭಾವಸ್ಥೆಯಲ್ಲಿದ್ದಾಗಿನ ಪೌಷ್ಟಿಕ ಆಹಾರದ ಕೊರತೆ, ಅವಧಿಪೂರ್ವ ಜನನ, ವಯಸ್ಸಿಗೆ ತಕ್ಕಂತೆ ಮಕ್ಕಳ ದೈಹಿಕ ಬೆಳವಣಿಗೆ ಕ್ಷೀಣ, ಬಾಲ್ಯ ವಿವಾಹ, ಬಡತನ, ವಯಸ್ಸಿಗೆ ತಕ್ಕ ತೂಕವಿರದಿರುವುದು ಹೀಗೆ ನಾನಾ ಕಾರಣಗಳಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬರುತ್ತಿದೆ. ತೀವ್ರ ಅಪೌಷ್ಟಿಕತೆಯಿಂದ ಐದು ವರ್ಷದೊಳಗಿನ ಮಕ್ಕಳು ಮರಣ ಹೊಂದುವ ಸಾಧ್ಯತೆಯೂ ಇದೆ. ರಾಜ್ಯದಲ್ಲಿ ಕೋವಿಡ್ ಬಳಿಕ ಮಕ್ಕಳಲ್ಲಿ ಅತೀ ಹೆಚ್ಚು ಅಪೌಷ್ಟಿಕತೆ ಕಂಡುಬರುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯ ಮೂಲಕ ಅಪೌಷ್ಟಿಕ ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಇಲಾಖೆಯ ವತಿಯಿಂದ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಪೂರಕ ಪೌಷ್ಟಿಕ ಆಹಾರ ಶಿಬಿರವನ್ನು ಏರ್ಪಡಿಸಲಾಗುತ್ತಿದೆ. ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸಲಾಗುತ್ತಿದೆ. ಅಪೌಷ್ಟಿಕತೆ ಮಕ್ಕಳು ಪತ್ತೆಯಾದರೆ ಜಿಲ್ಲೆಯಲ್ಲಿ ತಕ್ಷಣ ಅಂಗನವಾಡಿ ಕಾರ್ಯಕರ್ತೆಯರು ಅವರನ್ನು ವೈದ್ಯರ ಮೂಲಕ ತಕ್ಷಣ ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಮಾಡುವುದರಿಂದ ಮತ್ತು ಅಪೌಷ್ಟಿಕತೆ ಪತ್ತೆಯಾದ ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸುವುದರಿಂದ ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.
ನಟರಾಜು ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ, ಕೊಡಗು