ಕೋಲಾರ ಲೋಕಸಭಾ ಕ್ಷೇತ್ರ | ಮೈತ್ರಿ ಪಕ್ಷಗಳ ಹೊಂದಾಣಿಕೆಯ ಕೊರತೆ ಕಾಂಗ್ರೆಸ್ ಗೆ ಲಾಭ ತರಲಿದೆಯೇ?

Update: 2024-04-15 05:14 GMT




 

ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಿನ ಭದ್ರಕೋಟೆಯಾಗಿದೆ. ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಕೆ.ಎಚ್. ಮುನಿಯಪ್ಪ ಅವರ ವಿರುದ್ಧ ಸ್ವಪಕ್ಷೀಯರೇ ತಿರುಗಿಬಿದ್ದ ಕಾರಣ ಸೋಲು ಅನುಭವಿಸಬೇಕಾಯಿತು. ಹಾಗಾಗಿ ಕ್ಷೇತ್ರ ಬಿಜೆಪಿ ಅಭ್ಯರ್ಥಿಯ ಪಾಲಾಯಿತು. ಬಿಜೆಪಿಯ ಎಸ್. ಮುನಿಸ್ವಾಮಿ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಮುನಿಯಪ್ಪನವರು ರಾಜ್ಯ ಸರಕಾರದ ಸಚಿವರಾಗಿದ್ದು ಲೋಕಾ ಸ್ಪರ್ಧೆಗೆ ನಿರುತ್ಸಾಹ ತೋರಿದ್ದರಿಂದ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಫೈಟ್ ಜೋರಾಗಿಯೇ ನಡೆಯಿತು. ಈಗ ಅಭ್ಯರ್ಥಿಗಳು ಅಂತಿಮಗೊಂಡು ಅಖಾಡ ಸಿದ್ಧವಾಗಿದೆ.

ಕೋಲಾರ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳು 8. ಇವುಗಳಲ್ಲಿ ಕೆಜಿಎಫ್, ಬಂಗಾರಪೇಟೆ, ಮುಳಬಾಗಿಲು, ಶ್ರೀನಿವಾಸಪುರ, ಮಾಲೂರು ಹಾಗೂ ಕೋಲಾರ ವಿಧಾನಸಭಾ ಕ್ಷೇತ್ರಗಳು ಕೋಲಾರ ಕಂದಾಯ ಜಿಲ್ಲಾ ವ್ಯಾಪ್ತಿಗೆ ಸೇರಿದರೆ, ಶಿಡ್ಲಘಟ್ಟ ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳು ಚಿಕ್ಕಬಳ್ಳಾಪುರ ಕಂದಾಯ ಜಿಲ್ಲೆಯ ವ್ಯಾಪ್ತಿಗೆ ಸೇರಿವೆ.

ಮೂರು ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರಗಳಾಗಿದ್ದರೆ, ಇನ್ನುಳಿದ ಐದು ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾಗಿವೆ.

ಶಿಡ್ಲಘಟ್ಟ, ಶ್ರೀನಿವಾಸಪುರ ಹಾಗೂ ಮುಳಬಾಗಿಲು ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಶಾಸಕರಿದ್ಧಾರೆ.

ಇನ್ನುಳಿದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ಧಾರೆ.

ಕೋಲಾರ ಲೋಕಸಭಾ ಕ್ಷೇತ್ರದ ಒಟ್ಟು ಅಂದಾಜು ಮತದಾರರು 13 ಲಕ್ಷ. ಅವರಲ್ಲಿ ಪುರುಷ ಮತದಾರರು ಶೇ.49.67 ಮತ್ತು ಮಹಿಳಾ ಮತದಾರರು ಶೇ.50.33.

ಕ್ಷೇತ್ರದ ಪರಿಚಯ

ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾದ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗಿನ 17 ಲೋಕಸಭಾ ಚುನಾವಣೆಗಳಲ್ಲಿ 15 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ.

ಎರಡು ಬಾರಿ ಮಾತ್ರ ಜನತಾ ಪರಿವಾರದ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ. ಅದೂ ಕಾಂಗ್ರೆಸ್ ಅಧಿಕೃತ ಆಭ್ಯರ್ಥಿ ವಿರುದ್ಧ ಸ್ವಪಕ್ಷೀಯರೇ ತಿರುಗಿಬಿದ್ದ ಕಾರಣದಿಂದ ಕಾಂಗ್ರೆಸ್ ಸೋಲು ಅನುಭವಿಸಿದ್ದು, ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿ ಗುರುತಿಸಿಕೊಂಡಿದೆ.

ಕೋಲಾರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ 1952 ಹಾಗೂ 1957ರ ಎರಡು ಅವಧಿಗೆ ದ್ವಿಸದಸ್ಯ ಕ್ಷೇತ್ರವಾಗಿತ್ತು. 1952ರಲ್ಲಿ ದೊಡ್ಡ ತಿಮ್ಮಯ್ಯ ಹಾಗೂ ಎಂ.ವಿ.ಕೃಷ್ಣಪ್ಪ ಆಯ್ಕೆಯಾಗಿದ್ದರು. 1957ರಲ್ಲಿ ದೊಡ್ಡ ತಿಮ್ಮಯ್ಯ ಅವಿರೋಧವಾಗಿ ಪುನರಾಯ್ಕೆಯಾದರೆ, ಮತ್ತೊಂದು ಸ್ಥಾನಕ್ಕೆ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದ ಕೆ.ಚಂಗಲರಾಯ ರೆಡ್ಡಿ ಆಯ್ಕೆಯಾಗಿದ್ದರು.

1962ರಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಪ್ರತ್ಯೇಕ ಕ್ಷೇತ್ರಗಳಾಗಿ ವಿಂಗಡಿಸಲಾಯಿತು. ದೊಡ್ಡ ತಿಮ್ಮಯ್ಯನವರು ಮತ್ತೆ ಮೂರನೇ ಬಾರಿಗೆ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು.

1967ರಿಂದ ಕೋಲಾರ ಲೋಕಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿ ಬದಲಾಯಿತು. 1967ರಲ್ಲಿ ಮೊದಲ ಬಾರಿಗೆ ಮೀಸಲು ಅಭ್ಯರ್ಥಿಯಾಗಿ ಕಾಂಗ್ರೆಸ್ನ ಜಿ.ವೈ. ಕೃಷ್ಣನ್ ಗೆಲುವು ಪಡೆದಿದ್ದರು. ಆನಂತರ 1984ರವರೆಗೆ ಸತತವಾಗಿ ಜಿ.ವೈ.ಕೃಷ್ಣನ್ ಅವರೇ ಗೆಲುವು ಪಡೆದಿದ್ದರು.

1984ರಲ್ಲಿ ಸ್ವಪಕ್ಷದಲ್ಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿ.ವೈ.ಕೃಷ್ಣನ್ ಪರಾಭವಗೊಂಡರು. ಜನತಾ ಪರಿವಾರದ ಡಾ.ವೆಂಕಟೇಶ್ ಗೆಲುವು ಪಡೆದರು.

ಆನಂತರ 1991ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಕೆ.ಎಚ್. ಮುನಿಯಪ್ಪ ಸತತ ಏಳು ಬಾರಿ ಸಂಸತ್ತಿಗೆ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರನೆಂದು ಗುರುತಿಸಿಕೊಂಡರು.

2019ರ ಚುನಾವಣೆಯಲ್ಲಿ ಕೆ.ಎಚ್. ಮುನಿಯಪ್ಪ ವಿರುದ್ದ ಸ್ವಪಕ್ಷೀಯರಿಂದಲೇ ಭಾರೀ ವಿರೋಧವಿದ್ದ ಕಾರಣ ಬಿಜೆಪಿಯ ಎಸ್.ಮುನಿಸ್ವಾಮಿ ಆಯ್ಕೆಯಾದರು.

ಅಹಿಂದ ಮತಗಳೇ ನಿರ್ಣಾಯಕ

ಕೋಲಾರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಮತದಾರರು ಶೇ.38ರಷ್ಟು ಇದ್ದು, ಅವರ ಸಂಖ್ಯೆ ಸುಮಾರು 5 ಲಕ್ಷಕ್ಕೂ ಹೆಚ್ಚು. ಹೀಗಾಗಿ ಇವರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇವರೊಂದಿಗೆ ಅಲ್ಪಸಂಖ್ಯಾತರು ಹಾಗೂ ಅತಿ ಹಿಂದುಳಿದ ಜಾತಿಗಳ ಜನ ಸಂಖ್ಯೆ ಅಂದಾಜು ಶೇ.45ರಷ್ಟಿದೆ. ಒಟ್ಟಾರೆಯಾಗಿ ಅಹಿಂದ ಸಮುದಾಯಗಳು ಶೇ. 80ಕ್ಕೂ ಹೆಚ್ಚು ಇದ್ದು ಇವರ ಮತಗಳೇ ಅಂತಿಮ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತವೆ. ಒಕ್ಕಲಿಗರೂ ಗಮನಾರ್ಹ ಸಂಖ್ಯೆಯಲ್ಲಿದ್ದು ಪ್ರಭಾವ ಬೀರುತ್ತಾರಾದರೂ ಕೊನೆಗೆ ನಿರ್ಣಾಯಕ ಪಾತ್ರ ವಹಿಸುವುದು ಅಹಿಂದ ಮತಗಳೇ.

ಕ್ಷೇತ್ರದ ವಿಶೇಷತೆಗಳು

ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಈವರೆಗೂ ಹದಿನಾರು ಚುನಾವಣೆಗಳು ನಡೆದಿದ್ದರೂ ಆರಂಭದ ಎರಡು ಚುನಾವಣೆಗಳಲ್ಲಿ ದ್ವಿಸದಸ್ಯ ಕ್ಷೇತ್ರವಿತ್ತು. ಹಾಗಾಗಿ ಈವರೆಗೂ ಕ್ಷೇತ್ರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸಿದವರು ಕೇವಲ 8 ಮಂದಿ.

ಒಟ್ಟು 17 ಲೋಕಸಭಾ ಚುನಾವಣೆಯಲ್ಲಿ ದೊಡ್ಡ ತಿಮ್ಮಯ್ಯ 3 ಬಾರಿ, ಇವರೊಂದಿಗೆ ದ್ವಿಸದಸ್ಯ ಕ್ಷೇತ್ರಗಳನ್ನು ಹಂಚಿಕೊಂಡ ಎಂ.ವಿ.ಕೃಷ್ಣಪ್ಪ, ಕೆ.ಚಂಗಲರಾಯರೆಡ್ಡಿ, ಆನಂತರ ನಾಲ್ಕು ಬಾರಿ ಗೆದ್ದ ಜಿ.ವೈ.ಕೃಷ್ಣನ್, ತಲಾ ಒಂದು ಬಾರಿ ಗೆದ್ದ ಡಾ.ಜಿ. ವೆಂಕಟೇಶ್, ವೈ.ರಾಮಕೃಷ್ಣ ಹಾಗೂ ಎಸ್.ಮುನಿಸ್ವಾಮಿ. ಇವರೊಂದಿಗೆ ಕೆ.ಎಚ್.ಮುನಿಯಪ್ಪ ಸತತ ಏಳು ಬಾರಿ ಗೆಲುವು ಪಡೆದು ದಾಖಲೆ ಬರೆದಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರದ ಮತ್ತೊಂದು ವಿಶೇಷವೆಂದರೆ, ಲೋಕಸಭಾ ಚುನಾವಣೆಯಲ್ಲಿ ಒಮ್ಮೆ ಸೋತವರು ಮತ್ತೆ ಚುನಾವಣೆ ಗೆದ್ದಿದ್ದೇ ಇಲ್ಲ.

ಗೆಲ್ಲುವವರು ಗೆಲ್ಲುತ್ತಲೇ ಇರುತ್ತಾರೆ. ಗೆದ್ದವರು ಒಮ್ಮೆ ಸೋತರೆಂದರೆ ಜನ ಅವರನ್ನು ಪುನರಾಯ್ಕೆ ಮಾಡಿದ್ದೇ ಇಲ್ಲ.




 

ಕ್ಷೇತ್ರದ ಜನರು ಎದುರಿಸುತ್ತಿರುವ ಸಮಸ್ಯೆಗಳು

ಬಯಲುಸೀಮೆ ಜಿಲ್ಲೆಗಳಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿ ಉಳಿದಿರುವ ಕೋಲಾರ ಜಿಲ್ಲೆ ಕಳೆದ 3 ದಶಕಗಳಿಂದ ಬರಪೀಡಿತ ಜಿಲ್ಲೆಯೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಶಾಶ್ವತ ನೀರಾವರಿ ಯೋಜನೆ ರೂಪಿಸಬೇಕೆಂಬ ಜಿಲ್ಲೆಯ ಬಹು ನಿರೀಕ್ಷಿತ ಹೋರಾಟ ಇನ್ನೂ ಕನಸಾಗಿಯೇ ಉಳಿದಿದೆ.

ಎತ್ತಿನಹೊಳೆ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆಯಾದರೂ ಕೋಲಾರ ಜಿಲ್ಲೆಗೆ ಇದರಿಂದ ಸಿಗುವ ನೀರಿನ ಪಾಲು ಮಾತ್ರ ರಾಕ್ಷಸನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ. ಕೃಷ್ಣಾ ಬೀ ಸ್ಕೀಂನಲ್ಲಿ ಕೋಲಾರ ಜಿಲ್ಲೆಯ ಪಾಲು ದಕ್ಕಿಸಿಕೊಡುವಲ್ಲಿ ರಾಜ್ಯ ಸರಕಾರದ ನಿರ್ಲಕ್ಷ್ಯದ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಅದು ಗಗನಕುಸುಮವಾಗಿದೆ.

ಮತ್ತೊಂದೆಡೆ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ನರಸಾಪುರ, ವೇಮಗಲ್ ಹಾಗೂ ಮಾಲೂರು ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಸರಕಾರ ವಿಫಲವಾಗಿದೆ. ಇಲ್ಲಿನ ಕೈಗಾರಿಕೆಗಳಲ್ಲಿ ಜಮೀನು ನೀಡಿದವರಿಗೆ ಸೆಕ್ಯೂರಿಟಿ ಗಾರ್ಡ್, ಗಾರ್ಡನ್ ಮಾಲಿ, ಅಟೆಂಡರ್, ಹೌಸ್ ಕೀಪಿಂಗ್ ಮೊದಲಾದ ಕೊನೆಯ ದರ್ಜೆಯ ಉದ್ಯೋಗಗಳನ್ನು ನೀಡಿರುವುದು ಬಿಟ್ಟರೆ, ಸ್ಥಳೀಯ ನಿರುದ್ಯೋಗಿಗಳಿಗಿಂತ ಹೊರ ರಾಜ್ಯದವರಿಗೆ ಹೆಚ್ಚಿನ ಉದ್ಯೋಗ ನೀಡಲಾಗಿದೆ. ಸ್ಥಳೀಯರನ್ನು ಗುತ್ತಿಗೆ ಆಧಾರದ ಕೆಲಸಗಳಿಗೆ ಮಾತ್ರ ಬಳಸಿಕೊಂಡು, ಹನ್ನೊಂದು ತಿಂಗಳಿಗೊಮ್ಮೆ ಲೇ ಆಫ್ ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ಹಾಗೆಯೇ ಇದೆ.

ಜಿಲ್ಲೆಯಲ್ಲಿ ಸರಕಾರಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸುವ ಬೇಡಿಕೆ, ಬೇಡಿಕೆಯಾಗಿಯೇ ಉಳಿದಿದೆ. ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಈ ಎರಡೂ ಕಾಲೇಜುಗಳನ್ನು ಮಂಜೂರು ಮಾಡುವುದು ಅಗತ್ಯವಾಗಿದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಬೇಡಿಕೆ ಈಡೇರಲೇ ಇಲ್ಲ.

 

 

ಟಿಕೆಟ್ಗಾಗಿ ಭಾರೀ ಫೈಟ್

ಕೋಲಾರದಲ್ಲಿ 2024ರ ಚುನಾವಣೆ ಟಿಕೆಟ್ಗಾಗಿ ಕಾಂಗ್ರೆಸ್ನಲ್ಲಿ ದೊಡ್ಡ ಕೋಲಾಹಲವೇ ನಡೆದು ಹೋಯಿತು.

ಕೆ.ಎಚ್. ಮುನಿಯಪ್ಪ ಕಳೆದ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದರೂ ಪಕ್ಷದಲ್ಲಿ ತಮಗಿರುವ ವರ್ಚಸ್ಸನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಪಡೆದಿದ್ದು, ಸಚಿವರೂ ಆಗಿದ್ಧಾರೆ.

ಈ ಬಾರಿ ಅವರು ತಮ್ಮ ಅಳಿಯ ಕೆ.ಜಿ. ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದರು. ಗೆಲ್ಲಿಸುವ ಭರವಸೆಯನ್ನೂ ವರಿಷ್ಠರಿಗೆ ನೀಡಿದ್ದರು.

ಇನ್ನೊಂದೆಡೆ, ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬುದು ರಮೇಶ್ ಕುಮಾರ್ ಬಣದ ಒತ್ತಾಯವಾಗಿತ್ತು.

ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಸಿಗುವುದು ಖಾತರಿಯಾಗುತ್ತಲೇ ಜಿಲ್ಲೆಯ ಕಾಂಗ್ರೆಸ್ ಶಾಸಕರು ಬಂಡೆದ್ದು ರಾಜೀನಾಮೆ ನೀಡುವ ಪ್ರಹಸನವೂ ನಡೆದು ಹೋಯಿತು. ಅವರನ್ನೆಲ್ಲ ಸಮಾಧಾನ ಪಡಿಸಲು ಕಾಂಗ್ರೆಸ್ ಮುಖಂಡರು ಹೆಣಗಾಡಬೇಕಾಯಿತು.

ಕೊನೆಗೆ ರಾಜಿ ಅಭ್ಯರ್ಥಿಯಾಗಿ ಬೆಂಗಳೂರು ಕೇಂದ್ರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ವಿ.ಗೌತಮ್ ಅವರಿಗೆ ಟಿಕೆಟ್ ನೀಡಲಾಯಿತು.

ಜೆಡಿಎಸ್ಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ಬಿಜೆಪಿ

ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಕೋಲಾರ ಕ್ಷೇತ್ರವನ್ನು ಜೆಡಿಎಸ್ಗೆ ಕೊಡಲಾಗಿದೆ.

ಬಿಜೆಪಿಯಿಂದ ಹಾಲಿ ಸಂಸದ ಎಸ್. ಮುನಿಸ್ವಾಮಿ ಮತ್ತೊಮ್ಮೆ ಕಣಕ್ಕಿಳಿಯಲು ಬಯಸಿದ್ದರು. ಆದರೆ ಈಗ ಬಿಜೆಪಿ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟು ಅಲ್ಲಿ ಜೆಡಿಎಸ್ನಿಂದ ಮಲ್ಲೇಶ್ ಬಾಬು ಅಭ್ಯರ್ಥಿಯಾಗಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು, ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ ಇಬ್ಬರೂ ಹೊಸ ಅಭ್ಯರ್ಥಿಗಳಾಗಿದ್ದು ಮತದಾರರಿಗೆ ಆಭ್ಯರ್ಥಿಗಳ ಬಗ್ಗೆ ಹೆಚ್ಚು ಗೊತ್ತಿಲ್ಲದ ಪರಿಸ್ಥಿತಿ ಯಲ್ಲಿ ಮತಚಲಾವಣೆಗೆ ಸಜ್ಜಾಗಿದ್ದಾರೆ. ಈ ಬಾರಿ ತಮ್ಮ ಮತ ಯಾರಿಗೆ ಎಂಬುದು ಅಲ್ಲಿನ ಮತದಾರರಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಒಂದು ಕಡೆ ಈ ಬಾರಿ ಗೆದ್ದೇ ಗೆಲ್ಲಬೇಕು ಎಂದು ಹೊರಟಿರುವ ಕಾಂಗ್ರೆಸ್ ಮತ್ತು ಇನ್ನೊಂದೆಡೆ ಕ್ಷೇತ್ರವನ್ನು ಉಳಿಸಿಕೊಳ್ಳುವ ಹಠದಲ್ಲಿರುವ ಜೆಡಿಎಸ್, ಬಿಜೆಪಿ ಮೈತ್ರಿ ಕೂಟ ದೊಡ್ಡ ಮಟ್ಟದಲ್ಲೇ ಚುನಾವಣಾ ಪ್ರಚಾರಕ್ಕೆ ಇಳಿದಿವೆ.

ಕಾಂಗ್ರೆಸ್ನಿಂದ ಸಿಎಂ, ಡಿಸಿಎಂ ಈಗಾಗಲೇ ಒಂದು ಸುತ್ತಿನ ಪ್ರಚಾರ ನಡೆಸಿದ್ದಾರೆ. ಮೈತ್ರಿ ಅಭ್ಯರ್ಥಿಯ ಪರವಾಗಿ ಬಿಜೆಪಿಯ ವರಿಗೆ ಇರುವ ಉತ್ಸಾಹ ಜೆಡಿಎಸ್ ಕಾರ್ಯಕರ್ತರಲ್ಲಿ ಕಾಣುತ್ತಿಲ್ಲ, ಈ ಬೆಳವಣಿಗೆ ಉಭಯ ಪಕ್ಷಗಳಲ್ಲಿ ಹೊಂದಾಣಿಕೆಯ ಕೊರತೆ ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನದ ಹೊಗೆಯಾಡು ತ್ತಿರುವಂತೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ತಳ ಮಟ್ಟದ ಕಾರ್ಯಕರ್ತರನ್ನು ಜೆಡಿಎಸ್ ಕಡೆಗಣಿಸಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಬಿಜೆಪಿ ಅವಕಾಶ ಕಳೆದು ಕೊಂಡರೂ ಸಹ ತಮ್ಮದೇ ಅಭ್ಯರ್ಥಿ ಎಂಬಂತೆ ಅತಿ ಉತ್ಸಾಹದಲ್ಲಿ ಚುನಾವಣೆಯಲ್ಲಿ ಭಾಗವಹಿಸುತ್ತಿರುವುದು ಕಂಡುಬರುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇರುವುದು ಆ ಪಕ್ಷದ ಅಭ್ಯರ್ಥಿಗೆ ಶಕ್ತಿಗಿದ್ದರೆ, ಕೇಂದ್ರದಲ್ಲಿ ಬಿಜೆಪಿ ಸರಕಾರ ಹಾಗೂ ಮೋದಿ ಮುಖ, ಮೈತ್ರಿ ಆಭ್ಯರ್ಥಿಗೆ ಬಲವಾಗಿದೆ.

ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷ ತಮ್ಮ ಸರಕಾರದ ಗ್ಯಾರಂಟಿ ಯೋಜನೆಗಳನ್ನೇ ನೆಚ್ಚಿಕೊಂಡು ಮತ ಕೇಳುತ್ತಿದ್ದರೆ, ಮೈತ್ರಿ ಪಕ್ಷಗಳು ಮೋದಿ ಹೆಸರಿನಲ್ಲಿ ಮತ ಕೇಳುತ್ತಿವೆ. ಅಂತಿಮವಾಗಿ ಮತದಾರ ಪ್ರಭು ತನ್ನ ಮತ ಯಾರಿಗೆ ಅನ್ನುವ ಗುಟ್ಟು ಇನ್ನು ಬಿಟ್ಟುಕೊಡದೆ ಇರುವುದು ಕುತೂಹಲಕ್ಕೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಸಿ.ವಿ. ನಾಗರಾಜ್

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!