ಕೊಪ್ಪಳ ಲೋಕಸಭಾ ಕ್ಷೇತ್ರ : ಬಿಜೆಪಿಯೊಳಗಿನ ಅಸಮಾಧಾನ ಕಾಂಗ್ರೆಸ್ ಗೆ ಗೆಲುವು ತರಲಿದೆಯೇ?

Update: 2024-03-31 04:46 GMT

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿನ ಕದನ ಈ ಬಾರಿ ಹಲವು ಕಾರಣಗಳಿಗಾಗಿ ಕುತೂಹಲ ಕೆರಳಿಸಿದೆ. ಕೊಪ್ಪಳ ಲೋಕಸಭಾ ಕ್ಷೇತ್ರ ಸದ್ಯ ಬಿಜೆಪಿ ವಶದಲ್ಲಿದೆ. ಆದರೆ ಸತತ ಎರಡು ಬಾರಿ ಗೆದ್ದ ಅಭ್ಯರ್ಥಿಯನ್ನು ಬದಲಿಸಿರುವ ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕಿದೆ. ಕಾಂಗ್ರೆಸ್ ಕಳೆದ ಬಾರಿ ಸೋತ ಅಭ್ಯರ್ಥಿಗೇ ಮಣೆ ಹಾಕಿದರೂ, ಅದಕ್ಕೊಂದು ರಾಜಕೀಯ ಮಹತ್ವ ಬಂದಿದೆ. ಹೇಗಾದರೂ ಕ್ಷೇತ್ರವನ್ನು ವಶ ಮಾಡಿಕೊಳ್ಳುವ ಯತ್ನದಲ್ಲಿ ಕಾಂಗ್ರೆಸ್ ಇದೆ. ಬಿಜೆಪಿಯಲ್ಲಿ ಒಳಗೊಳಗೇ ಇರುವ ಅಸಮಾಧಾನದ ಕುದಿಯ ಲಾಭವೂ ಕಾಂಗ್ರೆಸ್ಗೆ ಆಗಬಹುದೇ ಎಂಬುದನ್ನು ಕಾದು ನೋಡಬೇಕಿದೆ.

 

ಪ್ರಾಥಮಿಕ ಮಾಹಿತಿಗಳು:

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿನ ಒಟ್ಟು ವಿಧಾನಸಭೆ ಕ್ಷೇತ್ರಗಳು 8. ಅವೆಂದರೆ, ಸಿಂಧನೂರು, ಮಸ್ಕಿ, ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ, ಕೊಪ್ಪಳ ಹಾಗೂ ಶಿರಗುಪ್ಪಾ. ಇವುಗಳಲ್ಲಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಒಂದರಲ್ಲಿ ಮಾತ್ರ ಬಿಜೆಪಿ, ಒಂದು ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕರಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿನ ಒಟ್ಟು ಮತದಾರರು -18,51,700. ಅವರಲ್ಲಿ ಪುರುಷರು 9,12,818, ಮಹಿಳೆಯರು 9,38,750 ಮತ್ತು ಇತರರು 132

ಹಿಂದಿನ ಚುನಾವಣೆಗಳ ಫಲಿತಾಂಶ:

2019 ಮತ್ತು 2014 ಎರಡೂ ಚುನಾವಣೆಗಳಲ್ಲಿ ಬಿಜೆಪಿಯ ಸಂಗಣ್ಣ ಕರಡಿ ಗೆಲುವು.

 

ಹಿಂದಿನ ಚುನಾವಣೆಗಳಲ್ಲಿನ ಮತ ಹಂಚಿಕೆ ಪ್ರಮಾಣ:

2014 -ಬಿಜೆಪಿಗೆ ಶೇ.48.32, ಕಾಂಗ್ರೆಸ್ಗೆ ಶೇ.45.10

2019 -ಬಿಜೆಪಿಗೆ ಶೇ.49.25, ಕಾಂಗ್ರೆಸ್ಗೆ ಶೇ.46.10

ಈವರೆಗಿನ 17 ಚುನಾವಣೆಗಳಲ್ಲಿ ಕಾಂಗ್ರೆಸ್ 10 ಬಾರಿ ಗೆದ್ದಿದೆ. ಬಿಜೆಪಿ 3 ಬಾರಿ ಗೆಲುವು ಕಂಡಿದೆ.

ಜನತಾದಳ 2 ಬಾರಿ, ಒಮ್ಮೆ ಪಕ್ಷೇತರ ಅಭ್ಯರ್ಥಿ, ಒಮ್ಮೆ ಲೋಕ ಸೇವಕ ಸಂಘದ ಅಭ್ಯರ್ಥಿ ಗೆಲುವು ಕಂಡಿದ್ದಿದೆ.

2009ರಿಂದ ಇಲ್ಲಿ ನೆಲೆ ಕಂಡುಕೊಂಡ ಬಿಜೆಪಿ ಆನಂತರ ಸತತ 3 ಗೆಲುವುಗಳನ್ನು ಸಾಧಿಸಿದ್ದು, ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಂಡಿದೆ.

ಬಿಜೆಪಿಯಿಂದ ಹೊಸ ಮುಖ

ಒಂದು ಕಾಲದಲ್ಲಿ ಕಾಂಗ್ರೆಸ್ ಹಿಡಿತವಿದ್ದ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಮೆರೆಯುತ್ತಿದ್ದು, ಸಂಗಣ್ಣ ಕರಡಿ ಈಗಾಗಲೇ ಸತತ ಎರಡು ಬಾರಿ ಗೆದ್ದಿದ್ದರು. ಹ್ಯಾಟ್ರಿಕ್ ಗೆಲುವಿನ ಆಸೆಯಲ್ಲಿದ್ದ ಅವರಿಗೆ ಟಿಕೆಟ್ ಸಿಕ್ಕಿಲ್ಲ ಮತ್ತು ಈ ಬಗ್ಗೆ ಬಹಳ ಮೊದಲಿನಿಂದಲೇ ಒಂದು ಸುಳಿವು ಸ್ಪಷ್ಟವಿತ್ತು.

ಟಿಕೆಟ್ ಫೈಟ್ನಲ್ಲಿ ಸಂಗಣ್ಣ ಕರಡಿಗೆ ಪೈಪೋಟಿಯೊಡ್ಡಿದ್ದ ಕೆ.ಎಸ್. ಆಸ್ಪತ್ರೆಯ ಮಾಲಕ ಡಾ.ಬಸವರಾಜ ಕ್ಯಾವಟರ್ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ.

ಅವರು ಮೊದಲಿನಿಂದಲೂ ಕ್ಷೇತ್ರದಲ್ಲಿ ಸುತ್ತಾಡಿ, ತಾವೂ ಪ್ರಬಲ ಆಕಾಂಕ್ಷಿ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.

2019ರಲ್ಲೇ ಡಾ.ಬಸವರಾಜ ಕ್ಯಾವಟರ್ ಎಂಪಿ ಟಿಕೆಟ್ಗೆ ಪ್ರಯತ್ನ ನಡೆಸಿದ್ದರು. ಆದರೆ ಆಗ ಕೈ ತಪ್ಪಿತ್ತು. ಈ ಬಾರಿ ಟಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಹೊಸ ಮುಖ ಆಗಿದ್ದರೂ ಅವರ ಕುಟುಂಬ ರಾಜಕಾರಣದಲ್ಲಿದೆ.

ಅವರ ತಂದೆ ಕೆ.ಶರಣಪ್ಪ 1994ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಈಗ ಅವರು ಬಿಜೆಪಿಯಲ್ಲಿದ್ದಾರೆ. ಬಸವರಾಜ್ ಅವರ ಸಹೋದರ ಕೆ. ಮಹೇಶ್ ಬಿಜೆಪಿಯಿಂದಲೇ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. ಹೀಗೆ ಇವರ ಕುಟುಂಬ ಮುಂಚಿನಿಂದಲೂ ರಾಜಕೀಯ ನಂಟು ಹೊಂದಿದೆ.

ಬಸವರಾಜ್ ಕ್ಯಾವಟರ್ ರಾಜಕೀಯದಲ್ಲಿ ನೇರವಾಗಿ ಪಾಲ್ಗೊಂಡಿದ್ದು ಇತ್ತೀಚಿನ ವರ್ಷಗಳಲ್ಲಿ. ತಂದೆಯ ಪ್ರಭಾವದ ನೆರವಿನಿಂದಲೂ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದರು.

ಟಿಕೆಟ್ ಸಿಗದ್ದಕ್ಕೆ ಸಂಗಣ್ಣ ಕರಡಿ ಅಸಮಾಧಾನಗೊಂಡಿದ್ದು, ಅವರ ಬೆಂಬಲಿಗರು ದಾಂಧಲೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಎಲ್ಲವೂ ನಡೆದಿದೆ. ಅವರನ್ನು ಕಾಂಗ್ರೆಸ್ ತನ್ನ ಕಡೆ ಸೆಳೆಯಲಿದೆ ಎಂಬ ಸುದ್ದಿಗಳಿದ್ದವು. ಆದರೆ ಕಾಂಗ್ರೆಸ್ ಸೇರುವುದಿಲ್ಲ ಎಂದು ಸಂಗಣ್ಣ ಕರಡಿ ಅವರೇ ಸ್ಪಷ್ಟಪಡಿಸಿದ್ದಾರೆ.

 

 

ಕಾಂಗ್ರೆಸ್ನಿಂದ ಹಿಟ್ನಾಳ್ ಕುಟುಂಬಕ್ಕೆ ಮಣೆ

ಕಾಂಗ್ರೆಸ್ನಲ್ಲಿ ಕಳೆದ ಬಾರಿ ಸೋತಿದ್ದ ರಾಜಶೇಖರ ಹಿಟ್ನಾಳ್ ಅವರೇ ಮತ್ತೊಮ್ಮೆ ಕಣಕ್ಕಿಳಿಯುವ ಅವಕಾಶ ಪಡೆದಿದ್ದಾರೆ.

ಕಾಂಗ್ರೆಸ್ ಟಿಕೆಟ್ಗಾಗಿ ಹಲವರು ಪೈಪೋಟಿ ನಡೆಸಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಹಿಟ್ನಾಳ್ ಅವರಿಗೇ ಟಿಕೆಟ್ ಘೋಷಣೆ ಮಾಡಿದೆ.

ಸಂಗಣ್ಣ ಕರಡಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟೀತೇನೊ ಎಂಬ ಅನುಮಾನವೂ ಒಂದು ಹಂತದಲ್ಲಿ ಎದ್ದಿತ್ತು. ಆದರೆ ಹಾಗೇನೂ ಆಗಲಿಲ್ಲ.

ಜಿ.ಪಂ. ಮಾಜಿ ಅಧ್ಯಕ್ಷರಾದ ಹಿಟ್ನಾಳ್, ಕಳೆದ ಬಾರಿ ಸಂಗಣ್ಣ ಕರಡಿ ವಿರುದ್ಧ 37,424 ಮತಗಳ ಅಂತರದಿಂದ ಸೋತಿದ್ದರು.

ಕುರುಬ ಸಮುದಾಯದ ರಾಜಶೇಖರ ಅವರು ರಾಜಕೀಯ ಕುಟುಂಬದ ಹಿನ್ನೆಲೆ ಉಳ್ಳವರೇ ಆಗಿದ್ದಾರೆ.ಅವರ ತಂದೆ ಬಸವರಾಜ ಕೆ. ಹಿಟ್ನಾಳ್ 2004ರಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು.

ರಾಜಶೇಖರ ಅವರ ಸಹೋದರ ರಾಘವೇಂದ್ರ ಹಿಟ್ನಾಳ್ ಕೂಡ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸತತ 3 ಬಾರಿ ಶಾಸಕರಾಗಿದ್ದಾರೆ.

ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಕುಟುಂಬ ಅವರದು.ಟಿಕೆಟ್ ಸಿಗುವ ಭರವಸೆ ಇದ್ದುದರಿಂದ ರಾಜಶೇಖರ ಹಿಟ್ನಾಳ್ ಟಿಕೆಟ್ ಘೋಷಣೆಗೂ ಮೊದಲೇ ಪ್ರಚಾರ ಆರಂಭಿಸಿದ್ದರು.

ಬಿಜೆಪಿಗೆ ರೆಡ್ಡಿ ಬಲ

ಇನ್ನು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆಟ ಚುನಾವಣೆಯಲ್ಲಿ ಏನಿರಬಹುದು ಎಂಬ ಪ್ರಶ್ನೆಯೂ ಇತ್ತು. ಆದರೆ ಅವರೀಗ ಬಿಜೆಪಿ ಸೇರಿದ್ದಾರೆ. ಬಿಜೆಪಿ ಸೇರುವುದಕ್ಕಾಗಿ ಹಲವು ಬಾರಿ ಯತ್ನ ಮಾಡಿದ್ದರು. ಅದು ಆಗದ ಹಿನ್ನೆಲೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿ, ಕಳೆದ ವಿಧಾನಸಭೆ ಚುನಾವಣೆ ಗೆದ್ದಿದ್ದು ಅವರೊಬ್ಬರೇ ಆಗಿದ್ದರೂ, ಬಿಜೆಪಿಗೆ ಸ್ವಲ್ಪ ಏಟನ್ನಂತೂ ಕೊಟ್ಟಿದ್ದರು.

ಜನಾರ್ದನ ರೆಡ್ಡಿ ಕಳೆದ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ರಾಜ್ಯಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದರು. ಕಳೆದ ಫೆಬ್ರವರಿಯಲ್ಲಿ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಕೂಡ ಕುತೂಹಲ ಕೆರಳಿಸಿತ್ತು. ಇದಾದ ಬಳಿಕ ಅವರನ್ನು ಅಮಿತ್ ಶಾ ದಿಲ್ಲಿಗೆ ಕರೆಸಿಕೊಂಡು ಮಾತನಾಡಿದ್ಧರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಲು ಅವರಿಗೆ ಸೂಚಿಸಿರಬಹುದು ಎನ್ನಲಾಗುತ್ತಿತ್ತು. ಆದರೆ ಅಂತಿಮವಾಗಿ ಅವರು ಬಿಜೆಪಿಗೆ ಮರಳಿದ್ದಾರೆ. ಒಳಗೊಳಗೇ ಬಿಜೆಪಿಗೆ ಮರಳುವ ಮನಸ್ಸಿದ್ದ ರೆಡ್ಡಿ ಆಸೆ ಈಡೇರಿದ್ದು, ಇನ್ನು ಅವರು ಬಿಜೆಪಿಗೆ ಈ ಚುನಾವಣೆಯಲ್ಲಿ ಬಲವಾಗಲಿದ್ದಾರೆ ಎನ್ನಲಾಗುತ್ತಿದೆ.

ಅದೇನೇ ಇದ್ದರೂ, 6 ಮಂದಿ ಕಾಂಗ್ರೆಸ್ ಶಾಸಕರಿದ್ದು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಅನುಕೂಲ ಸಿಗುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಗ್ಯಾರಂಟಿಗಳೂ ಪಕ್ಷದ ಅಭ್ಯರ್ಥಿಯನ್ನು ಕೈಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.

ಹಾಲಿ ಸಂಸದ ಕರಡಿ ಸಂಗಣ್ಣ ಅವರ ಅಸಮಾಧಾನದ ಲಾಭವನ್ನೂ ಕಾಂಗ್ರೆಸ್ ಪಡೆಯಲಿದೆಯೇ ಎಂದು ಕಾದು ನೋಡಬೇಕು.

ಹೇಗಾದರೂ ಈ ಬಾರಿ ಕೊಪ್ಪಳವನ್ನು ಕೈವಶ ಮಾಡಿಕೊಳ್ಳಲೇಬೇಕೆಂಬ ನಿಟ್ಟಿನಲ್ಲಿ ಕಾಂಗ್ರೆಸ್ ರಣತಂತ್ರ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಹರೀಶ್ ಎಚ್.ಕೆ.

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!