ಕುದ್ಮುಲ್ ರಂಗರಾವ್: ಮಹಿಳೆಯರ ಸಬಲೀಕರಣ ಮತ್ತು ಉನ್ನತಿ

Update: 2024-06-29 06:11 GMT

 ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ರಾಜ್ಯದ ಕರಾವಳಿಯ ಶೋಷಿತ ಸಮುದಾಯಗಳ ಉದ್ಧಾರಕ್ಕಾಗಿ ತನ್ನ ವೃತ್ತಿ ಮತ್ತು ಆಸ್ತಿಯನ್ನು ತ್ಯಜಿಸಿ, ತನ್ನ ಇಡೀ ಬದುಕನ್ನು ಶೋಷಿತರಿಗಾಗಿ ಮುಡಿಪಾಗಿಟ್ಟ, ಕನ್ನಡ ಜನಮನದಿಂದ ಬಹುಮಟ್ಟಿಗೆ ಮರೆಯಾಗಿ ಹೋದ, ಕುದ್ಮುಲ್ ರಂಗರಾಯರ ಬಗ್ಗೆ ಇದೇ ಮೊದಲ ಬಾರಿಗೆ ಕುಟುಂಬದವರೇ ಕಟ್ಟಿಕೊಟ್ಟಿರುವ ಆಪ್ತ ಚಿತ್ರಣ ‘ನೀವು ಕಂಡರಿಯದ ಕುದ್ಮುಲ್ ರಂಗರಾವ್’ ಕೃತಿಯಿಂದ ಈ ಲೇಖನವನ್ನು ಆಯ್ದುಕೊಳ್ಳಲಾಗಿದೆ. ಇತ್ತೀಚೆಗೆ ‘ಬಹುರೂಪಿ’ ಪ್ರಕಾಶನದಿಂದ ಪ್ರಕಟವಾದ ಇದರ ಮೂಲ ಆಂಗ್ಲ ಕೃತಿಯನ್ನು ಬರೆದವರು ಕುದ್ಮುಲ್ ರಂಗರಾವ್ ಅವರ ಮರಿ ಮಕ್ಕಳಾದ ಪ್ರೇಮಿ ಎಂ. ರಾವ್ ಮತ್ತು ಜಿ. ಪಾಂಡುರಂಗ ರಾವ್. ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಹಿರಿಯ ಸಾಹಿತಿ ಬಿ. ಎ. ವಿವೇಕ ರೈ ಅವರು.

ಕುದ್ಮುಲ್ ಪಿಜ್ಜರ ಕಾಲದಲ್ಲಿ ಮಹಿಳೆಯರನ್ನು ಒಂದು ಸೊತ್ತಾಗಿ ಮತ್ತು ಹರಟೆಯ ವಸ್ತುವಾಗಿ ಬಳಸುತ್ತಿದ್ದರು. ಮಹಿಳೆಯರು ಗಂಡಸಿನ ಸಂಪೂರ್ಣ ಕೃಪಾಕಟಾಕ್ಷದಲ್ಲಿ ಬದುಕಬೇಕಾಗಿತ್ತು. ಬಾಲವಿಧವೆಯರು ಮತ್ತು ಅವಿವಾಹಿತ ಮಹಿಳೆಯರನ್ನು ಗುಲಾಮರಂತೆ, ಅಸ್ಪಶ್ಯರಂತೆ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದರು. ಮದುವೆಗಳಲ್ಲಿ ವಿಧವೆಯರನ್ನು ಮತ್ತು ನಿರಾಶ್ರಿತ ಮಹಿಳೆಯರನ್ನು ದಲಿತರು ಹಾಗೂ ಕೊರಗರಿಗೆ ಸಮಾನವಾಗಿ ಕಾಣುತ್ತಿದ್ದರು. ಅವರು ಮುಕ್ತವಾಗಿ ಆಹಾರ ಸೇವಿಸಲು ಅವಕಾಶವಿರದೆ ಇತರರು ಎಲೆಯಲ್ಲಿ ತಿಂದು ಉಳಿಸಿದ ಅನ್ನವನ್ನಷ್ಟೇ ಸೇವಿಸಬೇಕಾಗಿತ್ತು. ಉಳಿದ ಮೇಲ್ಜಾತಿಯವರ ಮನೆಗಳಲ್ಲಿ ಪ್ರವೇಶವಿರಲಿಲ್ಲ ಹಾಗೂ ಅವರು ಉಪಯೋಗಿಸುತ್ತಿದ್ದ ಪಾತ್ರೆಗಳಲ್ಲಿ ನೀರು ಕುಡಿಯಲು ಕೂಡ ಅನುಮತಿಯಿರಲಿಲ್ಲ. ದುರದೃಷ್ಟ ಮಹಿಳೆಯರಿಗೆ ಸೊಂಟದ ಮೇಲ್ಭಾಗವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಲೂ ಬಿಡದೆ ಅವರ ಗೌರವವನ್ನು ಸಂಪೂರ್ಣವಾಗಿ ಕಡೆಗಣಿಸಿ ಹೀನಾಯವಾಗಿ ಅವಮಾನಿಸಲಾಗುತ್ತಿತ್ತು. ಸೊಂಟಕ್ಕೆ ತುಂಡು ಬಟ್ಟೆಯನ್ನು ಕಟ್ಟಿ ತಮ್ಮ ದೇಹದ ಮೇಲ್ಭಾಗವನ್ನು ಬೆತ್ತಲೆಯಾಗಿ ಬಿಡಬೇಕಾಗಿತ್ತು. ವಿಧವೆಯರನ್ನಂತೂ ಬಹಳ ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿತ್ತು.

ಕುದ್ಮುಲ್ ಪಿಜ್ಜರು ಮಹಿಳೆಯರ ಈ ಸಮಸ್ಯೆಗಳನ್ನು ಕಂಡು ಅದರಿಂದ ಪಾರುಮಾಡಲು ಪ್ರಯತ್ನಿಸಿದರು. ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಸಂಚರಿಸಿ, ಮಹಿಳೆಯರೆಂದರೆ ಮೇಲ್ಜಾತಿಯವರ ಶಾಪಕ್ಕೆ ಒಳಗಾದವರೋ ಅಥವಾ ದುರದೃಷ್ಟವಂತರೋ ಅಲ್ಲವೆಂದು ಮನವರಿಕೆ ಮಾಡಿಸಿ ಸಡಿಲವಾದ ಕುಪ್ಪಸ ಧರಿಸುವಂತೆ ಮಾಡುವ ಮೂಲಕ ಜಾಗೃತಿ ಮೂಡಿಸಿದರು. ಮೇಲ್ಜಾತಿಯವರ ಹಬ್ಬಗಳಲ್ಲಿ, ಸಮಾರಂಭಗಳಲ್ಲಿ ತಿಂದುಳಿದ ಎಂಜಲನ್ನು ಆಹಾರವಾಗಿ ಸ್ವೀಕರಿಸುವುದನ್ನು ವಿರೋಧಿಸಿದರು. ಕುದ್ಮುಲ್ ಪಿಜ್ಜ ಋತುಮತಿಯಾದ ವಿಧವೆಯರು ಮರುಮದುವೆಯಾಗುವುದಕ್ಕೆ ಪ್ರೋತ್ಸಾಹವನ್ನಿತ್ತರು. ಅಂತರ್ಜಾತೀಯ ವಿವಾಹವನ್ನು ಪ್ರೋತ್ಸಾಹಿಸಿದರು. ತಾನು ಬೋಧಿಸಿದ್ದಕ್ಕೆ ಬದ್ಧರಾಗಿ ತಮ್ಮ ಕುಟುಂಬದಲ್ಲಿಯೂ ಎರಡು ಅಂತರ್ಜಾತೀಯ ವಿವಾಹಗಳನ್ನು ಅನುಷ್ಠಾನಗೊಳಿಸಿದರು. 1911ರಲ್ಲಿ ತಮ್ಮ ಎರಡನೇ ಮಗಳು ರಾಧಾಬಾಯಿಯನ್ನು ಮೊದಲಿಯಾರ್ ಕುಟುಂಬದ ಸುಬ್ಬರಾಯನ್ ಅವರಿಗೆ ವಿವಾಹ ಮಾಡಿಕೊಡುವುದರ ಮೂಲಕ ಮಂಗಳೂರಿನಲ್ಲಿ ಮೊದಲ ಅಂತರ್ಜಾತೀಯ ಮದುವೆಯನ್ನು ಮಾಡಿಸಿದರು. ಆ ಕಾಲದಲ್ಲಿ ಸಾರಸ್ವತ ಸಮಾಜಕ್ಕಿಂತ ಮೊದಲಿಯಾರ್ ಸಮುದಾಯ ಕೆಳಮಟ್ಟದ್ದೆನ್ನುವ ಕಲ್ಪನೆಯಿತ್ತು. 1898-1899ರ ಕಾಲಕ್ಕೆ ಸಾರಸ್ವತ ಸಮಾಜದ ವಿಧವೆ ತರುಣಿಯನ್ನು ಆಕೆಯ ಹತ್ತಿರದ ಕೆಲವು ಸಂಬಂಧಿಕರ ಒಪ್ಪಿಗೆಯಿಂದ ಅವಳನ್ನು ಬಹುಮಟ್ಟಿಗೆ ಅಪಹರಿಸಿ ಮರುಮದುವೆಯನ್ನು ಶ್ರೇಷ್ಠ ಎಂಬ ಹೆಸರಿನ ಸಾರಸ್ವತ ತರುಣನ ಜೊತೆಗೆ ಮಾಡಿಸುವ ಮೂಲಕ ಮೊದಲನೆಯ ವಿಧವಾ ವಿವಾಹವನ್ನು ನಡೆಸಿಕೊಟ್ಟರು. ಬಾಂಬೆ ಹೈಕೋರ್ಟಿನ ನ್ಯಾಯಾಧೀಶರಾಗಿದ್ದು ಆ ನಂತರ ಬಾಂಬೆ ಯುನಿವರ್ಸಿಟಿಯ ಕುಲಪತಿಗಳಾಗಿದ್ದ ಶ್ರೀ ನಾರಾಯಣ ಚಂದಾವರ್ಕರ್ ಅವರ ಮನೆಯಲ್ಲಿ ಈ ವಿವಾಹ ಸಮಾರಂಭವನ್ನು ಏರ್ಪಡಿಸಿ ಶ್ರೀಮತಿ ಚಂದಾವರ್ಕರ್ ಅವರಿಗೆ ಹುಡುಗಿಯನ್ನು ಒಪ್ಪಿಸಿದರು.

ಕುದ್ಮುಲ್ ಪಿಜ್ಜರು ವಿಧವೆಯರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟರು ಹಾಗೂ ನಿರ್ಗತಿಕ ಮಹಿಳೆಯರ ಪುನರ್ವಸತಿಗಾಗಿ ದುಡಿದರು. ಅನೇಕ ಸಂದರ್ಭಗಳಲ್ಲಿ ಇಂತಹ ಮಹಿಳೆಯರಿಗೆ ಶಿಕ್ಷಣ ಕೊಡಲು ಕುದ್ಮುಲ್ ಪಿಜ್ಜರಲ್ಲಿ ಸರಿಯಾದ ಅನುಕೂಲತೆಗಳಿರಲಿಲ್ಲ. ಅದಕ್ಕಾಗಿ ಉಚಿತ ಶಾಲೆಗಳನ್ನೂ ವಿಧವೆಯರ ವಸತಿಗಾಗಿ ಅನಾಥಾಶ್ರಮಗಳನ್ನೂ ಸ್ಥಾಪಿಸಿದರು. ಸಮಾಜದಲ್ಲಿ ಬಹಿಷ್ಕೃತಗೊಂಡ ಮಹಿಳೆಯರನ್ನು ಸಂರಕ್ಷಿಸಿ ಉದ್ಯೋಗ ತರಬೇತಿಯನ್ನು ಕೊಟ್ಟರು. ಈ ರೀತಿ ಮಹಿಳೆಯರಿಗೆ ಸಹಾಯ ಮಾಡುವಾಗ ಅವರ ಜಾತಿ, ಮತ, ಧರ್ಮಗಳ ನಡುವೆ ಭೇದ ಮಾಡದೆ ಎಲ್ಲ ವರ್ಗದ ಮಹಿಳೆಯರಿಗೆ ಸಹಾಯ ಮಾಡಿದರು. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಹಾಗೂ ಅವರ ಮಕ್ಕಳು ಕೂಡ ತಮ್ಮ ಕಾಲಿನ ಮೇಲೆ ತಾವೇ ನಿಂತುಕೊಳ್ಳಬೇಕೆನ್ನುವ ಆಶಯದಿಂದ ಕಸೂತಿ, ಬುಟ್ಟಿಗಳ ಹೆಣೆಯುವಿಕೆ ಇತ್ಯಾದಿ ಆದಾಯ ಬರುವಂತಹ ಕೌಶಲಗಳನ್ನು ಹೇಳಿಕೊಟ್ಟರು.

ಗಂಡನಿಂದ ಪರಿತ್ಯಕ್ತರಾದ ಹೆಂಗಸರ ಮದುವೆಗೆ ಪ್ರಯತ್ನ ಮಾಡಿದರು. ಇದಕ್ಕಾಗಿ ಅಂತಹ ತರುಣಿಯರ ದಾಖಲೆಗಳನ್ನು ಇಟ್ಟುಕೊಂಡಿದ್ದರು. ಮದುವೆ ವಯಸ್ಸಿಗೆ ಬಂದವರಾಗಿದ್ದರೆ ವಿವಾಹದ ವ್ಯವಸ್ಥೆ ಮಾಡುತ್ತಿದ್ದರು. ಇದಕ್ಕಾಗಿ ಅವರು ನಿಯತವಾಗಿ ಒಂದು ರಿಜಿಸ್ಟರ್ ಇಟ್ಟುಕೊಂಡು ಮದುವೆಯಾಗದ ವಿಧವೆ ತರುಣಿಯರ ಅಂಕೆಸಂಖ್ಯೆಗಳನ್ನು ದಾಖಲಿಸಿಕೊಂಡಿದ್ದರು. ಒಂದು ರೀತಿಯಲ್ಲಿ ಏಕವ್ಯಕ್ತಿ ವಿವಾಹದ ತಿಜೋರಿಯಂತೆ ಕೆಲಸ ಮಾಡಿದರು. ಬಾಲವಿಧವೆಯರ ಬಗ್ಗೆ ಮತ್ತು ಗಂಡನಿಂದ ಪರಿತ್ಯಕ್ತ ಮಹಿಳೆಯರ ಬಗ್ಗೆ ಕೇಳಿ ತಿಳಿದುಕೊಂಡ ಕುದ್ಮುಲ್ ಪಿಜ್ಜರು ಅಂತಹ ಮಹಿಳೆಯರ ಬಳಿಗೆ ಹೋಗಿ ಸಹಾಯ ಮಾಡುತ್ತಿದ್ದರು. ವಿಧವೆ ತರುಣಿಯರು ಹಾಗೂ ಪರಿತ್ಯಕ್ತ ಮಹಿಳೆಯರು ಮರುಮದುವೆಯಾಗಲು ಇಚ್ಛಿಸುವುದಾದರೆ ಸಂಪರ್ಕಿಸಬಹುದೆಂದು ವರ್ತಮಾನ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಕೊಡುತ್ತಿದ್ದರು. ಇಂತಹ ಅಂತರ್ಜಾತೀಯ ಮದುವೆ ಸಮಾರಂಭಗಳಿಗೆ ಬೇರೆಲ್ಲೂ ಸ್ಥಳ ದೊರೆಯದಿದ್ದರೆ ಕುದ್ಮುಲ್ ಪಿಜ್ಜರ ಮನೆ ತೆರೆದುಕೊಂಡಿರುತ್ತಿತ್ತು. ಅಲ್ಲಿ ಅನೇಕ ಸಂದರ್ಭಗಳಲ್ಲಿ ವಿಧವೆಯರ ಮರುಮದುವೆ, ಅಂತರ್ಜಾತೀಯ ವಿವಾಹ ನಡೆಯುತ್ತಿತ್ತು.

ಅಂತಹ ವಿಧವಾ ವಿವಾಹಗಳು ಅಥವಾ ಅಂತರ್ಜಾತೀಯ ವಿವಾಹಗಳು ನಡೆದ ಅನೇಕ ಸಂದರ್ಭಗಳು ಇದ್ದವು. ಕುದ್ಮುಲ್ ಪಿಜ್ಜರು ಒಬ್ಬಳು ನಿರ್ಗತಿಕ ಶೂದ್ರ ಹುಡುಗಿಯನ್ನು ಬ್ರಹ್ಮ ಸಮಾಜದ ಮಿಷನರಿ ಆಗಿದ್ದ ಬಾಯಿ ಬಲದೇವ್ ಅವರ ಜೊತೆಗೆ ಬೊಂಬಾಯಿಗೆ ಕಳುಹಿಸಿದರು. ಆ ಹುಡುಗಿ ಬಾಂಬೆ ಯುನಿವರ್ಸಿಟಿಯಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸಾಗುವ ತನಕ ಅವಳ ಎಲ್ಲಾ ಖರ್ಚನ್ನು ಕುದ್ಮುಲ್ ಪಿಜ್ಜ ನೋಡಿಕೊಂಡರು. ಬಳಿಕ ಅವಳು ಇಂಗ್ಲಿಷ್ ಪ್ರೊಫೆಸರನ್ನು ಮದುವೆಯಾದಳು. ದುರದೃಷ್ಟವಶಾತ್ ಇಂತಹ ನಿರಾಶ್ರಿತ ಮಹಿಳೆಯರಿಗೆ ಮತ್ತು ಬಾಲವಿಧವೆಯರಿಗೆ ಪ್ರತ್ಯೇಕವಾದ ಶಾಲಾಕಟ್ಟಡ ಕಟ್ಟಬೇಕೆನ್ನುವ ಕುದ್ಮುಲ್ ಪಿಜ್ಜರ ಕನಸು ಅವರ ಜೀವಿತಾವಧಿಯಲ್ಲಿ ನೆರವೇರಲಿಲ್ಲ. ಆದರೆ ಅವರ ನಿಧನದ ಬಳಿಕ ಡಾ.ಬೆನಗಲ್ ರಾಘವೇಂದ್ರ ರಾವ್ ಎನ್ನುವ ಪ್ರಸಿದ್ಧ ವೈದ್ಯರ ಹಾಗೂ ಉದಾರ ದಾನಿಗಳ ನೆರವಿನ ಮೂಲಕ ಮಹಿಳೆಯರಿಗಾಗಿ ಕುದ್ಮುಲ್ ಪಿಜ್ಜರ ಸ್ಮಾರಕಾರ್ಥವಾಗಿ ‘ಸ್ವಾಮಿ ಈಶ್ವರಾನಂದ ಸೇವಾಶ್ರಮ’ವನ್ನು ಮಂಗಳೂರಿನಲ್ಲಿ ಕಟ್ಟಲಾಯಿತು. ಬಳಿಕ ಕುದ್ಮುಲ್ ಪಿಜ್ಜರ ಇಬ್ಬರು ಮೊಮ್ಮಕ್ಕಳು, ನಯಂಪಳ್ಳಿ ರಾಮರಾವ್ ಮತ್ತು ನಯಂಪಳ್ಳಿ ಶಿವರಾವ್ ಈ ಸೇವಾಶ್ರಮವನ್ನು ಕಂಕನಾಡಿಯ ಕುದ್ಕೋರಿ ಗುಡ್ಡೆಗೆ ಸ್ಥಾನಾಂತರಿಸಲು ಭೂಮಿಯನ್ನು ದಾನ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!