ಯುವಜನರನ್ನು ಕ್ರಿಮಿನಲ್ ಗಳಾಗಿಸುವ ಮುಸ್ಲಿಂ ದ್ವೇಷ
ಕೋಮು ದ್ವೇಷದ ರಾಜಕೀಯದ ಮತ್ತೊಂದು ಭಯಾನಕ ಸಂಚು ಬಯಲಾಗಿದೆ. ಅದು ಬಯಲಾಗದೆ ಇದ್ದಿದ್ದರೆ ಅದೆಷ್ಟು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತಿತ್ತು?. ಇಂತಹ ಅದೆಷ್ಟು ಸಾವಿರ ಸಂಚುಗಳು ಇತ್ತೀಚಿನ ವರ್ಷಗಳಲ್ಲಿ ಈ ದೇಶದಲ್ಲಿ ನಡೆದು ಹೋಗಿವೆ ?
ಆದರೆ ಆ ಪೈಕಿ ಬಯಲಾಗಿರೋದು ಎಷ್ಟು?.
ಇಂತಹ ನೂರಾರು ಸಂಚುಗಳ ಮೂಲಕ ಈ ದೇಶವನ್ನು ಅದೆಷ್ಟು ಕಲುಷಿತಗೊಳಿಸಲಾಗಿದೆ?. ಅದೆಷ್ಟು ದ್ವೇಷದ ವಿಷವನ್ನು ಪ್ರತಿದಿನ ಇಂಜೆಕ್ಷನ್ ನಂತೆ , ಸಮಾಜಕ್ಕೆ ಚುಚ್ಚಲಾಗಿದೆ?. ಅದಕ್ಕೆ ದೈಹಿಕವಾಗಿ ಬಲಿಯಾದವರು ಅದೆಷ್ಟು ಮಂದಿ?. ಅದೆಷ್ಟು ಕುಟುಂಬಗಳು ಅದರಿಂದಾಗಿ ನಾಶವಾಗಿ ಹೋದವು?. ಅದೆಷ್ಟು ಅಮಾಯಕರು ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ?. ಮಾನಸಿಕವಾಗಿ ನಮ್ಮ ಸಮಾಜ ಇದರಿಂದಾಗಿ ಅದೆಷ್ಟು ಕೊಳೆತು ಹೋಯಿತು?. ಹೇಗೆ ಕೋಮುದ್ವೇಷ ರಾಜಕೀಯದ ಷಡ್ಯಂತ್ರ ಯುವಕರನ್ನು ಅಪರಾಧಿಗಳಾಗಿ, ಗೂಂಡಗಳಾಗಿ ಮಾರ್ಪಾಡು ಮಾಡುತ್ತಿದೆ?.
ಹೇಗೆ ಹಿಂದೂ ಯುವಕರೇ ಇದಕ್ಕೆ ಅತಿ ಹೆಚ್ಚು ಬಲಿಯಾಗುತ್ತಿದ್ದಾರೆ?.
ಒಂದು ಕಡೆ ಅತ್ಯಂತ ಕಳಪೆ ಉನ್ನತ ಶಿಕ್ಷಣ, ಇನ್ನೊಂದು ಕಡೆ ಸಿಗದ ಉದ್ಯೋಗ, ಜೊತೆಗೆ ಕೋಮು ರಾಜಕೀಯದ ಷಡ್ಯಂತ್ರ - ಇವೆಲ್ಲವುಗಳಿಗೆ ಈ ದೇಶದ ಅದೆಷ್ಟು ಹಿಂದೂ ಯುವಕರು ಬಲಿಯಾಗಿ ಹೋಗುತ್ತಿದ್ದಾರೆ?. ಮುಸ್ಲಿಮರ ವಿರುದ್ಧದ ಈ ದ್ವೇಷ ರಾಜಕೀಯ ಹೇಗೆ ಹಿಂದೂಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ?.
ಆದರೆ ಅಂಧ ಭಕ್ತರಿಗೆ ಇದೇಕೆ ಅರ್ಥವಾಗುತ್ತಿಲ್ಲ?. ತಮ್ಮ ಮನೆಮಕ್ಕಳು ಇಂಥದೊಂದು ರಾಜಕೀಯದ ಬಲಿಪಶುಗಳಾಗಿ ಹಾದಿ ತಪ್ಪುತ್ತಿರುವುದು, ಭವಿಷ್ಯವನ್ನೇ ನಾಶ ಮಾಡಿಕೊಳ್ಳುತ್ತಿರುವುದು ಏಕೆ ಅವರಿಗೆ ತಿಳಿಯುತ್ತಿಲ್ಲ?. ಈಗ ಬಯಲಿಗೆ ಬಂದಿರುವ ಸಂಚಿನಲ್ಲಿಯೂ ಮತ್ತೊಮ್ಮೆ ಅಂಥದೇ ನಡೆದಿದೆ.
ಮುಸ್ಲಿಮರ ವಿರುದ್ದ ದ್ವೇಷ ಮತ್ತು ಕೋಲಾಹಲ ಎಬ್ಬಿಸುವ ಸಂಚಿನಲ್ಲಿ ಭಾಗಿಯಾದ ಇಬ್ಬರು ಯುವಕರು ಬಂಧಿತರಾಗಿ ದ್ವೇಷ ರಾಜಕಾರಣದ ಕರಾಳ ಮುಖ ಮತ್ತೊಮ್ಮೆ ಕಳಚಿಬಿದ್ದಿದೆ. ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಮತ್ತು ಅಯೋಧ್ಯೆಯ ರಾಮ ಮಂದಿರಕ್ಕೆ ಮುಸ್ಲಿಮರ ಹೆಸರಿನಲ್ಲಿ ಬಾಂಬ್ ಬೆದರಿಕೆ ಹಾಕಿದ್ದ ಇಬ್ಬರು ಆರೋಪಿಗಳನ್ನು ಉತ್ತರ ಪ್ರದೇಶದ ಎಸ್‌ಟಿಎಫ್ ಬಂಧಿಸಿದೆ.
ಎಸ್‌ಟಿಎಫ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಭ್ ಯಶ್ ಅವರಿಗೂ ಬಾಂಬ್ ಬೆದರಿಕೆ ಸಂದೇಶ ಕಳಿಸಲಾಗಿತ್ತು. ಯುಪಿ ಪೊಲೀಸರು ಬಂಧಿಸಿರುವ ಇಬ್ಬರು ಯುವಕರಲ್ಲಿ ಒಬ್ಬನ ಹೆಸರು ಓಂ ಪ್ರಕಾಶ್ ಮಿಶ್ರಾ. ಮತ್ತೊಬ್ಬನ ಹೆಸರು ತಹರ್ ಸಿಂಗ್. ಇವರಿಬ್ಬರೂ ಝುಬೇರ್ ಖಾನ್ ಮತ್ತು ಅಸ್ಲಂ ಅನ್ಸಾರಿ ಎಂಬ ಹೆಸರಲ್ಲಿ ಜಿಮೇಲ್ ಖಾತೆ ತೆರೆಯುತ್ತಾರೆ.
ರಾಮ ಮಂದಿರ ಸ್ಫೋಟಿಸುವುದಾಗಿ ಆ ಐಡಿಗಳ ಮೂಲಕ ಬೆದರಿಕೆ ಈಮೇಲ್ ಕಳಿಸುತ್ತಾರೆ. ಯುಪಿ ಸಿಎಂ ಆದಿತ್ಯನಾಥ್ ಮತ್ತು ಎಸ್ಟಿಎಫ್ ಮುಖ್ಯಸ್ಥ ಅಮಿತಾಭ್ ಯಶ್ ಅವರಿಗೂ ಬೆದರಿಕೆ ಒಡ್ಡುತ್ತಾರೆ.
ಯುಪಿಯ ಗೊಂಡಾ ಜಿಲ್ಲೆಯ ಆ ಇಬ್ಬರು ಯುವಕರು ಈಗ ಜೈಲುಪಾಲಾಗಿದ್ದಾರೆ. ಯಾರು ಇವರನ್ನು ಮುಸ್ಲಿಮರ ಹೆಸರು ಬಳಸಿ ದ್ವೇಷ ಹರಡಲು, ಅಲ್ಲೋಲ ಕಲ್ಲೋಲ ಉಂಟಾಗುವಂತೆ ಮಾಡಲು ಪ್ರೇರೇಪಿಸಿದರು?.
ಇಲ್ಲೇ ಇರೋದು ಕರಾಳ ಸಂಚಿನ ಕಥೆ. ಬಾಂಬ್ ಬೆದರಿಕೆ ಈಮೇಲ್ ಯುಪಿ ಸಿಎಂ ಮತ್ತು ಎಸ್ಟಿಎಫ್ ಮುಖಸ್ಥರಲ್ಲದೆ ಮತ್ತೂ ಒಬ್ಬ ವ್ಯಕ್ತಿಗೂ ಬಂದಿರುತ್ತದೆ. ಆತನ ಹೆಸರು ದೇವೇಂದ್ರ ತಿವಾರಿ. ಹಾಗಾದರೆ, ಯಾರು ಈತ?.
ಈಗ ಅಪರಾಧಿಗಳ ಸ್ಥಾನದಲ್ಲಿ ನಿಂತಿರುವ ಆ ಇಬ್ಬರು ಹುಡುಗರಿಗೂ ಮೊಬೈಲ್ ತೆಗೆದುಕೊಟ್ಟು, ಮುಸ್ಲಿಮ್ ಹೆಸರುಗಳಲ್ಲಿ ಈಮೇಲ್ ಐಡಿ ಕ್ರಿಯೇಟ್ ಮಾಡಲು ಹೇಳಿ, ತಾನೇ ಅವರಿಗೆ ಬೆದರಿಕೆ ಮೆಸೇಜ್ ಬರೆದುಕೊಟ್ಟು, ಮುಸ್ಲಿಮ್ ಹೆಸರುಗಳ ಈಮೇಲ್ ಮೂಲಕ ಕಳಿಸಲು ವ್ಯವಸ್ಥೆ ಮಾಡಿ, ಖುದ್ದು ತನಗೂ ಅದೇ ಬೆದರಿಕೆ ಸಂದೇಶ ಕಳಿಸಿಕೊಂಡಿದ್ದವನು - ಇದೇ ದೇವೇಂದ್ರ ತಿವಾರಿ.
ಸೋಷಿಯಲ್ ಮೀಡಿಯಾ ಪ್ರೊಫೈಲ್ನಲ್ಲಿ ಇರುವ ಪ್ರಕಾರ ಆತ ಭಾರತೀಯ ಕಿಸಾನ್ ಮಂಚ್ ರಾಷ್ಟ್ರೀಯ ಅಧ್ಯಕ್ಷ, ಗೋರಕ್ಷಕ, ಸಮಾಜ ಸೇವಕ, ಆರ್ಟಿಐ ಕಾರ್ಯಕರ್ತ. ಇನ್ನೂ ಏನೇನೋ. ಭಾರತೀಯ ಕಿಸಾನ್ ಮಂಚ್ ಮತ್ತು ಭಾರತೀಯ ಗೋ ಸೇವಾ ಪರಿಷತ್ ಎಂಬ ಹೆಸರಿನಲ್ಲಿ ಎನ್‌ಜಿಒಗಳನ್ನು ನಡೆಸುತ್ತಿರುವ ಈ ದೇವೇಂದ್ರ ತಿವಾರಿ ಹೆಸರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಹೆಸರಿನ ಕಾಲೇಜು ಕೂಡ ಇದೆ. ಅದೇ ಅವನ ಅಡ್ಡಾ.
ಆರೋಪಿಗಳ ಪೈಕಿ ತಹರ್ ಸಿಂಗ್ ಈತನ ಸೋಷಿಯಲ್ ಮೀಡಿಯಾ ನಿರ್ವಹಣೆ ಮಾಡುತ್ತಿದ್ದ. ಓಂ ಪ್ರಕಾಶ್ ಇದೇ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್‌ನಲ್ಲಿ ಡಿಪ್ಲೋಮಾ ಓದುತ್ತಿದ್ದ. ತನ್ನ ಈ ಇಬ್ಬರೂ ಚೇಲಾಗಳ ಮೂಲಕ ಇಂಥದೊಂದು ಕೆಲಸ ಮಾಡಿಸಿ, ಅವರೀಗ ಜೈಲುಪಾಲಾಗುವುದಕ್ಕೆ ಕಾರಣನಾಗಿದ್ದಾನೆ ದೇವೇಂದ್ರ ತಿವಾರಿ.
ಹೆಸರಿಗೆ ಮಾತ್ರ ದೇವೇಂದ್ರ ತಿವಾರಿಯದು ಬೇರೆ ಸಂಘಟನೆ. ಆದರೆ ಈತ ಕೆಲಸ ಮಾಡೋದೆಲ್ಲ ಬಿಜೆಪಿಗಾಗಿ, ಮತ್ತದರ ರಾಜಕಾರಣ, ತಂತ್ರಗಳ ಭಾಗವಾಗಿ. ಪ್ರತಿ ಬಾರಿಯೂ ಗೋರಕ್ಷಣೆ, ಹಿಂದುತ್ವದ ಹೆಸರಲ್ಲಿ ಲಾಭ ಮಾಡಿಕೊಳ್ಳುವುದು, ಅವರೆಡಕ್ಕೂ ಅಪಾಯವೆಂದು ಮುಸ್ಲಿಮರ ವಿರುದ್ಧ ದ್ವೇಷ ಹಬ್ಬಿಸುವುದು, ಪ್ರತಿ ಬಾರಿಯೂ ಮುಸ್ಲಿಂ ಹೆಸರು ಬಳಸಿ ದುಷ್ಟ ಕೆಲಸಗಳನ್ನು ಮಾಡುವುದು - ಈಗ ಈ ತಿವಾರಿ ಥರದವರ ದಿನನಿತ್ಯದ ರೂಢಿಯೇ ಆಗಿಬಿಟ್ಟಿದೆ.
ಹಿಂದೂ ರಾಷ್ಟ್ರ ಎಂದು ಹೇಳಿಕೊಳ್ಳುವ ಈ ಜನರಿಗೆ, ತಮ್ಮ ರಾಜಕೀಯ ಲಾಭ ಮಾಡಿಕೊಳ್ಳುವುದಕ್ಕೆ ಮುಸ್ಲಿಂ ಹೆಸರು ಬೇಕೇ ಬೇಕು.
ಸಮಾಜದಲ್ಲಿ ಶಾಂತಿ ಕೆಡಿಸಿ, ಆರೋಪವನ್ನು ತಲೆಗೆ ಕಟ್ಟುವುದಕ್ಕೆ ಮುಸ್ಲಿಂ ಹೆಸರೇ ಬೇಕು. ಇವರಿಗೆ ಇವರದೇ ಸ್ವಂತ ಹೆಸರಿಂದ ನಯಾಪೈಸೆ ಉಪಯೋಗವೂ ಇಲ್ಲ.
ಇವರ ರಾಜಕಾರಣಕ್ಕೆ, ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಮುಸ್ಲಿಂರನ್ನು ವಿಲನ್ಗಳಂತೆ ತೋರಿಸುವುದು ಇವರಿಗೆ ಅನಿವಾರ್ಯವಾಗಿಬಿಟ್ಟಿದೆ.
ಇಂಥ ಸಂಚುಗಳು ಎಲ್ಲೋ ಆಗೀಗೊಮ್ಮೆ ಬಯಲಾಗುತ್ತವೆ. ಆದರೆ ಇಂಥ ಎಷ್ಟೆಲ್ಲ ಘಟನೆಗಳು ಇದೇ ರೀತಿ ನಡೆದು ಹೋಗಿರಲಿಕ್ಕಿಲ್ಲ?.
ಇದೇ ಥರದ ಯುವಕರು ಹೀಗೆ ಮುಸ್ಲಿಂ ಹೆಸರು ಬಳಕೆ ಮಾಡಿಕೊಂಡು ಏನೆಲ್ಲ ಆಟವಾಡಿರಲಿಕ್ಕಿಲ್ಲ?. ಇದು ಇವರ ಮನಃಸ್ಥಿತಿ. ಹೀಗೆ ದಾರಿ ತಪ್ಪಿಸುವುದರಿಂದ ಒಂದು ಸಮುದಾಯದ ವಿರುದ್ಧ ಎಂಥ ದ್ವೆಷವನ್ನು ಇವರು ಹರಡುತ್ತಿದ್ದಾರೆ, ಅಲ್ಲವೆ ?. ಇಡೀ ಸಮುದಾಯದ ಬಗ್ಗೆ ತಪ್ಪು ಕಲ್ಪನೆ ಬೆಳೆಯುವುದಕ್ಕೆ ಕಾರಣರಾಗ್ತಾ ಇದ್ದಾರೆ .
ಹೀಗಾಗುತ್ತಿರುವುದು ಇದೇ ಮೊದಲೇನೂ ಅಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ವಿಕಾಸ್ ಗುಪ್ತಾ ಅನ್ನೋನು ರಶೀದ್ ಖಾನ್ ಎಂಬ ಹೆಸರಲ್ಲಿ ವೀಡಿಯೊ ಮಾಡಿ ಮುಸ್ಲಿಮರ ಹೆಸರಿಗೆ ಕಳಂಕ ಹಚ್ಚುವ ಕೆಲಸ ಮಾಡಿದ್ದ. ಉತ್ತರ ಪ್ರದೇಶದ ವಿಕಾಸ್ ಕುಮಾರ್, ಲಿವ್-ಇನ್ ಗೆಳೆಯನಾಗಿದ್ದ ಮುಸ್ಲಿಂ ವ್ಯಕ್ತಿಯಿಂದ ನಡೆದ ಶ್ರದ್ಧಾ ವಾಕರ್ ಕೊಲೆ ಬಗ್ಗೆ ಯೂಟ್ಯೂಬ್ ವೀಡಿಯೊದಲ್ಲಿ ರಶೀದ್ ಖಾನ್ ಅನ್ನೋ ಹೆಸರಿನಿಂದ ಆಕ್ಷೇಪಾರ್ಹ ಮಾತುಗಳನ್ನಾಡಿದ್ದ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಆ ವೀಡಿಯೋದಲ್ಲಿ, ತನ್ನನ್ನು ಖಾನ್ ಅಂತಾ ಹೇಳಿಕೊಂಡಿದ್ದ ವಿಕಾಸ್ ಕುಮಾರ್, ಕೊಲೆಗಾರ ಕೋಪದಲ್ಲಿದ್ದರೆ ಯಾರನ್ನಾದರೂ ಕೊಲೆ ಮಾಡೋದು ಮತ್ತು ದೇಹವನ್ನ ಕತ್ತರಿಸೋದು ಸಾಮಾನ್ಯ ಅಂದಿದ್ದ. ಆದರೆ ಹಾಗೆ ಮಾತನಾಡಿದ್ದ ಆತ ರಶೀದ್ ಖಾನ್ ಅಲ್ಲ, ಬುಲಂದ್ ಶಹರ್ ವಿಕಾಸ್ ಕುಮಾರ್ ಅನ್ನೋದು ಆಮೇಲೆ ಬಯಲಾಗಿತ್ತು.
ಎಲ್ಲ ದಿಕ್ಕಿನಿಂದಲೂ ಮುಸ್ಲಿಂರ ವಿರುದ್ಧ ದಾಳಿ ನಡೆಸುವ, ಅವರ ಬಗೆಗೆ ತಪ್ಪು ಕಲ್ಪನೆ ಮೂಡಿಸುವ, ಇಡೀ ಸಮುದಾಯಕ್ಕೆ ಕಳಂಕ ಹಚ್ಚುವ ಕೆಲಸಗಳು ಹೀಗೆ ಒಂದರ ಬೆನ್ನಲ್ಲೊಂದರಂತೆ ಆಗುತ್ತಿವೆ. ಎರಡು ತಿಂಗಳುಗಳ ಹಿಂದೆ ಅಂಬಾನಿಗೆ ಬಂದಿದ್ದ ಕೊಲೆ ಬೆದರಿಕೆ ಈಮೇಲ್ಗಳು ಕೂಡ ಮುಸ್ಲಿಂ ವ್ಯಕ್ತಿ ಹೆಸರಲ್ಲೇ ಬಂದಿದ್ದವು. ಕಡೆಗೆ, ಮುಸ್ಲಿಂ ಹೆಸರಿನಲ್ಲಿ ಈಮೇಲ್ ಕಳಿಸಿದವನು ರಾಜವೀರ್ ಖಂತ್ ಎಂಬೊಬ್ಬ ವಿದ್ಯಾರ್ಥಿ ಅನ್ನೋದು ಪೊಲೀಸ್ ತನಿಖೆಯಿಂದ ಬಯಲಾಗಿತ್ತು.
ಮುಸ್ಲಿಮರ ವಿರುದ್ಧ ಅಪಪ್ರಚಾರ ಮಾಡಲೆಂದೇ ರಾಮನವಮಿಗೂ ಮುಂಚಿನ ದಿನ ಹಿಂದೂ ಮಹಾಸಭಾದ ಸದಸ್ಯರೇ ಗೋವನ್ನು ಕೊಂದಿದ್ದ ಘಟನೆಯೂ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಪೊಲೀಸರೇ ಅದನ್ನು ಬಯಲು ಮಾಡಿದ್ದರು. ಹಿಂಸಾಚಾರ ಪ್ರಚೋದಿಸಲೆಂದೇ, ಮುಸ್ಲಿಂರ ವಿರುದ್ಧ ಪುಕಾರು ಹಬ್ಬಲೆಂದೇ ಅಂಥದೊಂದು ಹೀನ ಕೃತ್ಯ ಎಸಗಲಾಗಿತ್ತು.
ಆಗ ಬಂಧಿತನಾದವನು ಸಂಜಯ್ ಜಾಟ್ ಎಂಬಾತ. ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆತನ ಜೊತೆಗೆ ಬ್ರಿಜೇಶ್ ಬದೋರಿಯಾ, ಜಿತೇಂದ್ರ ಕುಶ್ವಾಹ್, ಸೌರಭ್ ಶರ್ಮಾ ಎಂಬವರ ಮೇಲೂ ಕೇಸ್ ಬಿದ್ದಿತ್ತು. ಈಗ ಬಾಂಬ್ ಬೆದರಿಕೆ ಪ್ರಕರಣದಲ್ಲಿ ಈ ಇಬ್ಬರು ಬಂಧಿತರಾದಂತೆ ಅಂದು ಆ ಮೂವರ ವಿರುದ್ಧವೂ ಕೇಸ್ ಆಯಿತು. ಮುಸ್ಲಿಂ ದ್ವೇಷದ ರಾಜಕಾರಣಕ್ಕೆ ಅವರು ಬಳಕೆಯಾಗಿದ್ದರು, ಬಲಿಪಶುಗಳಾಗಿದ್ದರು. ಕಳೆದ ವರ್ಷ ಬುಲಂದ್ ಶಹರ್ ನಲ್ಲಿ ವಿಗ್ರಹ ಧ್ವಂಸ ನಡೆಯಿತು. ಇಂಥದ್ದಕ್ಕೇ ಕಾದುಕೊಂಡಿರುವ ಮಡಿಲ ಮೀಡಿಯಾಗಳು ಮುಸ್ಲಿಂರನ್ನು ಟಾರ್ಗೆಟ್ ಮಾಡಿ ಅರಚಾಡಿದ್ದವು. ಕಡೆಗೆ ಬಂಧಿತರಾದವರು ಯಾರು? ಹರಿಶ್ ಶರ್ಮಾ, ಶಿವಂ, ಕೇಶವ್, ಅಜಯ್ ಎಂಬವರು.
ಮುಸ್ಲಿಂ ಸಮುದಾಯದ ವಿರುದ್ದ ದ್ವೇಷ ಹಬ್ಬಿಸಲೆಂದೇ, ಸಮುದಾಯದ ಹೆಸರು ಕೆಡಿಸಲೆಂದೇ ಅವರು ತಮ್ಮದೇ ದೇವರ ವಿಗ್ರಹ ಧ್ವಂಸ ಮಾಡಿದ್ದರು. ನಾಲ್ಕು ದೇವಾಲಯಗಳಲ್ಲಿ 17 ಮೂರ್ತಿಗಳನ್ನು ಧ್ವಂಸ ಮಾಡಿದ್ದರು. ಕೊನೆಗೆ ಕುಡಿದ ಮತ್ತಿನಲ್ಲಿ ಮಾಡಿದ್ದಾರೆ ಎನ್ನಲಾಯಿತು. ಒಂದು ವೇಳೆ, ಆಗ ಅವರ ಸಂಚಿನ ಪ್ರಕಾರವೇ ಅದು ಮುಸ್ಲಿಂ ಸಮುದಾಯದ ಕಡೆಗಿನ ವಿವೇಚನಾ ಶೂನ್ಯ ದ್ವೇಷವಾಗಿ ಕೋಲಾಹಲ ಎದ್ದಿದ್ದರೆ ಎಂಥ ಅನಾಹುತ ಆಗಿಹೋಗುತ್ತಿತ್ತು ಅಲ್ವಾ ?
ದುಡ್ಡು ಕೊಟ್ಟು, ತಮ್ಮವರಿಂದಲೇ ದೇವಾಲಯದೊಳಗೆ ಮಾಂಸ ಎಸೆಯುವ ಕೆಲಸ ಮಾಡಿಸುವುದು, ಅದನ್ನು ಮುಸ್ಲಿಂರೇ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಅದೆಷ್ಟು ಘಟನೆಗಳು ಈ ದೇಶಾದ್ಯಂತ ನಡೆದು ಹೋಗಿವೆ ?. ಕಳೆದ ವರ್ಷ ಅಕ್ಟೋಬರ್ನಲ್ಲಿ ಜಾವೇದ್ ಹುಸೇನ್ ಎಂಬ ಮುಸ್ಲಿಂ ಹೆಸರಲ್ಲಿ ಹಿಂದೂಗಳ ವಿರುದ್ಧ ಅವಹೇಳನಕಾರಿ ಮಾತನಾಡಿದ ವೀಡಿಯೊ ವೈರಲ್ ಆಯಿತು.
ಆದರೆ ಹಾಗೆ ಮಾತನಾಡಿದ್ದವನು ಹಿಂದೂ ವ್ಯಕ್ತಿಯೇ ಆಗಿದ್ದ. ಆತನ ನಿಜವಾದ ಹೆಸರು ದಿಲೀಪ್ ಬಘೇಲ್ ಆಗಿತ್ತು. 2022ರ ಜುಲೈನಲ್ಲಿ ಕೊಡಗಿನಲ್ಲಿ ಕೂಡ ಇಂಥದೇ ಒಂದು ಘಟನೆ ನಡೆದಿತ್ತು. ಕೊಡಗಿನ ನಿವಾಸಿ ದಿವಿನ್ ದೇವಯ್ಯ. ಕಾವೇರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಹೆಸರಿನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ. ಕಡೆಗೆ ಆತನನ್ನು ಬಂಧಿಸಲಾಗಿತ್ತು. ಇಂಥವರ ಈ ಬಗೆಯ ಅನಾಚಾರಕ್ಕೆ, ದ್ವೇಷ ಹರಡುವ ಕೊಳೆತ ಮನಸ್ಸಿಗೆ ಅದೆಷ್ಟು ಜನ ಅಮಾಯಕ ಮುಸ್ಲಿಂ ಯುವಕರು ಬಲಿಯಾಗುತ್ತಿದ್ದಾರೊ?. ಅದೆಷ್ಟು ಮಂದಿ ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯುತ್ತಾರೊ?. ಅದೆಷ್ಟು ಹುಡುಗರು ಎನ್ಕೌಂಟರ್ಗೆ ಬಲಿಯಾಗಿ ಹೋಗುತ್ತಿದ್ದಾರೊ?.
ಈಚೆಗಂತೂ ನಿರ್ದೋಷಿ ಮುಸ್ಲಿಂ ಯುವಕರನ್ನು ಬಂಧಿಸಿ ಎಷ್ಟೋ ವರ್ಷ ಜೈಲಿನಲ್ಲಿಡುವುದೂ ಒಂದು ಅತಿ ಸಾಮಾನ್ಯ ಸನ್ನಿವೇಶವೇ ಆಗಿಬಿಡುತ್ತಿದೆ. ಗುಜರಾತ್ನಲ್ಲಿ 127 ಮುಸ್ಲಿಮರನ್ನು ಭಯೋತ್ಪಾದನೆ ಆರೋಪದಲ್ಲಿ 20 ವರ್ಷ ಜೈಲಿನಲ್ಲಿಡಲಾಯಿತು. ಯಾವ ಅಪರಾಧವನ್ನೂ ಮಾಡದೆ ಆ ಅಮಾಯಕರು 20 ವರ್ಷ ಜೈಲಿನಲ್ಲಿ ಕೊಳೆಯಬೇಕಾಯಿತು.
ಒಂದು ವರದಿಯ ಪ್ರಕಾರ, ಬಿಹಾರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯಿಂದ ಜೆಡಿಯು ಹೊರಬಂದ ಮೇಲೆ ರಾಜ್ಯದಲ್ಲಿ ಧಾರ್ಮಿಕ ಹಿಂಸಾಚಾರಗಳು ಹೆಚ್ಚಿವೆ. ಅವೆರಡೂ ಕೂಡಿ ಇದ್ದಾಗ ಇಂಥ ಘಟನೆಗಳ ಸಂಖ್ಯೆ ಕಡಿಮೆಯಿತ್ತು. ಇದರ ಮರ್ಮ ಏನೆಂಬುದನ್ನು ಯಾರೂ ಅರ್ಥ ಮಾಡಿಕೊಳ್ಳಬಹುದು. ಹೆಸರು ಬದಲಿಸಿಕೊಂಡು ದ್ವೇಷ ಹರಡುವುದು, ಆ ದ್ವೇಷದಲ್ಲಿ ಹಿಂದುತ್ವದ ನಾಯಕರ ಬೇಳೆ ಬೇಯುವುದು,
ಅವರ ರಾಜಕೀಯ ಬೆಳೆಯುವುದು, ಅವರದೇ ಹುಡುಗರು ಮುಸ್ಲಿಂ ದ್ವೇಷದ ಈ ಅಭಿಯಾನದಲ್ಲಿ ಬಲಿಪಶುಗಳಾಗುವುದು ಈಚೆಗೆ ದೊಡ್ಡ ಮಟ್ಟದಲ್ಲಿ ಕಾಣಿಸುತ್ತಿದೆ.
ಒಂದೆಡೆ, ಈ ದೇಶದ ಸಂಸ್ಕೃತಿಗೆ ಮೆರುಗು ಕೊಟ್ಟ, ವೈವಿಧ್ಯತೆಯನ್ನು ಎರೆದ ಹೆಸರುಗಳನ್ನು ಪೂರ್ತಿ ಮರೆಸುತ್ತ ಬರುವ ಇವರ ಹಿಂದುತ್ವದ ರಾಜಕಾರಣ, ಮತ್ತೊಂದೆಡೆಯಿಂದ ತಮ್ಮ ಉದ್ಧಾರಕ್ಕಾಗಿ ಮುಸ್ಲಿಂ ಹೆಸರು ದುರ್ಬಳಕೆ ಮಾಡಿಕೊಳ್ಳುವ ಸಂಚಿನಲ್ಲಿ ತೊಡಗಿರುವುದು ವಿಪರ್ಯಾಸ. ಮಾತ್ರವಲ್ಲ, ಅದು ಅತ್ಯಂತ ಆತಂಕಕಾರಿ ರಾಜಕಾರಣ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಈ ಸಂಚು ಇನ್ನಷ್ಟು ಕಡೆ ಜಾರಿಯಾಗುವ ಸಾಧ್ಯತೆ ಇದೆ.
ಹಾಗಾಗಿ ವಾಟ್ಸ್ ಆಪ್ ನಲ್ಲಿ ಯಾವುದೇ ಸುದ್ದಿ, ಮೆಸೇಜ್, ವೀಡಿಯೊ, ಆಡಿಯೋ ನೋಡಿದ ಕೂಡಲೇ ಪ್ರತಿಕ್ರಿಯಿಸದೆ, ಫಾರ್ವರ್ಡ್ ಮಾಡದೇ ಜನರು ಸ್ವಲ್ಪ ವಿವೇಚನೆಯಿಂದ ಹೆಜ್ಜೆ ಇಡುವುದು ಬಹಳ ಮುಖ್ಯ.