ನಾರಾಯಣ ಗುರುಗಳ ಪ್ರತಿಮೆಗೆ ಹಾರಾರ್ಪಣೆ ರಾಜಕೀಯದ ಹಿಂದೆ...

Update: 2024-04-16 03:44 GMT
Editor : Ismail | Byline : ಶಿವಾನಿ ಕಾವ

ಇದ್ದಕ್ಕಿದ್ದಂತೆ ಮಂಗಳೂರಿನಲ್ಲಿ ಮೋದಿ ಸಮಾವೇಶವನ್ನು ರದ್ದು ಮಾಡಿ ನಾರಾಯಣ ಗುರುಗಳ ಪ್ರತಿಮೆಗೆ ಹಾರ ಹಾಕಿ ರೋಡ್ ಶೋ ಮಾಡುವ ಅನಿವಾರ್ಯತೆ ಬಿಜೆಪಿಗೆ ಬಂದಿದ್ದು ಹೇಗೆ? ಬಿಲ್ಲವರಲ್ಲಿ ಗಮನಾರ್ಹ ಸಂಖ್ಯೆಯ ಮತದಾರರು ಈಗಾಗಲೇ ಬಿಜೆಪಿ ಬಗ್ಗೆ ಭ್ರಮನಿರಸನಗೊಂಡಿದ್ದಾರೆ ಎಂಬ ಸಂದೇಶ ಬಿಜೆಪಿ ವರಿಷ್ಠರನ್ನು ತಲುಪಿದೆಯೇ? ಈಡೇರದ ರಾಜಕೀಯ ಅಧಿಕಾರದ ಭರವಸೆ ಮತ್ತು ತಮ್ಮನ್ನು ಬಿಜೆಪಿ ಹಗುರವಾಗಿ ತೆಗೆದುಕೊಂಡಿದೆ ಎಂಬ ನೋವು ಬಿಲ್ಲವರನ್ನು ಬಿಜೆಪಿಯಿಂದ ದೂರ ಸರಿಯುವಂತೆ ಮಾಡುತ್ತಿದೆಯೆ?

ಪ್ರಧಾನಿ ಮೋದಿ ರವಿವಾರ ಮಂಗಳೂರಿಗೆ ಬಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಗೆ ಹಾರ ಹಾಕಿ ಹೋಗಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಬಿಲ್ಲವ ಮತದಾರರನ್ನು ಹಿಡಿದಿಟ್ಟುಕೊಳ್ಳಲೆಂದೇ ಪ್ರಧಾನಿ ಮೋದಿ ಇದನ್ನು ಮಾಡಿದ್ದಾರೆ ಎಂಬುದು ಸ್ಪಷ್ಟ. ಈಗ ಇದ್ದಕ್ಕಿದ್ದಂತೆ ಮಂಗಳೂರಿನಲ್ಲಿ ಸಮಾವೇಶವನ್ನು ರದ್ದು ಮಾಡಿ ನಾರಾಯಣ ಗುರುಗಳ ಪ್ರತಿಮೆಗೆ ಹಾರ ಹಾಕಿ ರೋಡ್ ಶೋ ಮಾಡುವ ಅನಿವಾರ್ಯತೆ ಬಿಜೆಪಿಗೆ ಬಂದಿದ್ದು ಹೇಗೆ? ಬಿಲ್ಲವರಲ್ಲಿ ಗಮನಾರ್ಹ ಸಂಖ್ಯೆಯ ಮತದಾರರು ಈಗಾಗಲೇ ಬಿಜೆಪಿ ಬಗ್ಗೆ ಭ್ರಮನಿರಸನ ಗೊಂಡಿದ್ದಾರೆ ಎಂಬ ಸಂದೇಶ ಬಿಜೆಪಿ ವರಿಷ್ಠರನ್ನು ತಲುಪಿದೆಯೇ?

ಕಳೆದ ಮೂರು ದಶಕಗಳಿಂದಲೂ ಬಿಲ್ಲವರ ಬಹುಪಾಲು ಜನರು, ಅದರಲ್ಲೂ ಯುವಜನರು ಬಿಜೆಪಿಯ ಹಿಂದುತ್ವ ಸಿದ್ಧಾಂತದ ಕಟ್ಟಾ ಕಾಲಾಳುಗಳ ಹಾಗೆ ಇದ್ದವರು. ಒಬಿಸಿಗೆ ಸೇರಿರುವ ಬಿಲ್ಲವರಿಗೆ ಬಿಜೆಪಿ ಬಗೆಗಿದ್ದ ಭ್ರಮೆ ಈಗ ನಿಧಾನವಾಗಿ ಒಡೆದುಹೋಗಲು ಶುರುವಾಗಿದೆ. ಸಂಘ ಪರಿವಾರ ಈಗಲೂ ತಮ್ಮನ್ನು ಒಳ್ಳೆಯ ರೀತಿಯಿಂದ ನಡೆಸಿಕೊಳ್ಳುವ ಉದ್ದೇಶ ಹೊಂದಿಲ್ಲ ಎಂಬುದು ಅವರಿಗೆ ಮನವರಿಕೆಯಾಗುತ್ತಿರುವ ಹಾಗಿದೆ.

ಅಸ್ಪಶ್ಯತೆಯ ನೋವು ಉಣ್ಣುತ್ತಲೇ ಬಂದಿದ್ದ ಬಿಲ್ಲವರು, ಈಗಲೂ ಕರಾವಳಿಯ ಗೌಡ ಸಾರಸ್ವತ ಬ್ರಾಹ್ಮಣರ ಪ್ರಾಬಲ್ಯದ ಬಿಜೆಪಿ ಮತ್ತು ಸಂಘ ಪರಿವಾರ ತಮ್ಮನ್ನು ಶೂದ್ರರು ಎಂದೇ ನೋಡುತ್ತಿದೆ ಎಂದು ಭಾವಿಸತೊಡಗಿದ್ದಾರೆ. ಈಡೇರದ ರಾಜಕೀಯ ಅಧಿಕಾರದ ಭರವಸೆ ಮತ್ತು ತಮ್ಮನ್ನು ಬಿಜೆಪಿ ಹಗುರವಾಗಿ ತೆಗೆದುಕೊಂಡಿದೆ ಎಂಬ ನೋವು ಅವರನ್ನು ಬಿಜೆಪಿಯಿಂದ ದೂರ ಸರಿಯುವಂತೆ ಮಾಡುತ್ತಿದೆಯೆ?

ಇದು ಈಗ ಮುಖ್ಯವಾಗುತ್ತಿರುವ ಪ್ರಶ್ನೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬಿಲ್ಲವರ ನಡೆ ಈ ಬಾರಿ ಏನಿರಲಿದೆ ಎಂಬುದು ರಾಜ್ಯದ ಗಮನ ಸೆಳೆದಿದೆ. ವಿವಿಧ ಮಾಧ್ಯಮಗಳೂ ಇದೇ ದೃಷ್ಟಿಕೋನದಲ್ಲಿ ಇಲ್ಲಿನ ಚುನಾವಣೆಯನ್ನು ವರದಿ ಮಾಡುತ್ತಿವೆ.

‘ದಿ ನ್ಯೂಸ್ ಮಿನಿಟ್’ ವರದಿಯೊಂದು ಹೇಳುವ ಪ್ರಕಾರ, ಬಿಜೆಪಿ ಕಾರ್ಯಕರ್ತನಾಗಿದ್ದ ಬಿಲ್ಲವ ಯುವಕ ಪ್ರವೀಣ್ ನೆಟ್ಟಾರು 2022ರ ಜುಲೈನಲ್ಲಿ ಬರ್ಬರವಾಗಿ ಕೊಲೆಯಾದ ನಂತರ ಸಮುದಾಯದೊಳಗೆ ಅಸಮಾಧಾನ ತೀವ್ರಗೊಂಡಿತು. ಮೊದಲ ಬಾರಿಗೆ ಅಂಥದೊಂದು ಭಾರೀ ಪ್ರತಿರೋಧವನ್ನು ಬಿಜೆಪಿ ಎದುರಿಸಬೇಕಾಯಿತು. ಅಲ್ಲಿಗೆ ಭೇಟಿ ನೀಡಿದ್ದ ಸಂಸದ ನಳಿನ್ರ ಕಾರನ್ನು ಬುಡಮೇಲು ಮಾಡಲು ಹೊರಟಿದ್ದರು ಆಕ್ರೋಶಿತ ಜನರು. ಅದರ ಬೆನ್ನಿಗೇ ಕಾರ್ಯಕರ್ತರ ಬಹಿರಂಗ ಪ್ರತಿಭಟನೆ, ದೊಡ್ಡ ಪ್ರಮಾಣದ ರಾಜೀನಾಮೆ ಬಿಜೆಪಿಗೆ ಆಘಾತ ತಂದಿತ್ತು.

ಹಾಗೆ ನೋಡಿದರೆ, ಬಿಲ್ಲವರು ಮಾತ್ರವಲ್ಲ, ಮೊಗವೀರ ಸಮುದಾಯ ಕೂಡ ಬಿಜೆಪಿ ಬಗ್ಗೆ ಅಸಮಾಧಾನ ಇಟ್ಟುಕೊಂಡೇ ಬಂದಿದೆ. ಕೆಳ ವರ್ಗದ ಇವೆರಡೂ ಸಮುದಾಯಗಳು ಕರಾವಳಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ಬಿಜೆಪಿ ಮತ್ತು ಸಂಘ ಪರಿವಾರದ ಅಸ್ತ್ರವಾಗಿ ಬಳಕೆಯಾದವರು. ದಶಕಗಳ ಕಾಲದ ಬಿಜೆಪಿ ಪ್ರೇರಿತ ಹಿಂಸಾಚಾರಗಳಲ್ಲಿ ಜೈಲುಪಾಲಾದವರು ಈ ಸಮುದಾಯದವರು. ಆದರೆ ಅದಕ್ಕಾಗಿ ಅವರಿಗೆ ದಕ್ಕಿದ್ದೇನು? ಹೀಗೆ ಧುಮುಗುಡುತ್ತಲೇ ಇದ್ದ ಅಸಮಾಧಾನ ನೆಟ್ಟಾರು ಕೊಲೆ ಬಳಿಕ ಒಮ್ಮೆಲೇ ಸ್ಫೋಟಗೊಂಡಿತ್ತು. ಆದರೆ ಬಿಲ್ಲವರ ಈ ಅಸಮಾಧಾನದ ಸ್ಫೋಟದ ಹಿಂದೆ ಮತ್ತೊಂದು ಕಾರಣವೂ ಇತ್ತು ಎನ್ನುತ್ತದೆ ‘ದಿ ನ್ಯೂಸ್ ಮಿನಿಟ್’ ವರದಿ.

ನಳಿನ್ ಕುಮಾರ್ ಕಟೀಲು ಅವರನ್ನು ಪಕ್ಷಾಧ್ಯಕ್ಷ ಹುದ್ದೆಯಿಂದ ಇಳಿಸಲು ಈ ಭಾಗದ ಸಂಘದ ಮುಖಂಡರೊಬ್ಬರು ಪ್ರಯತ್ನಿಸುತ್ತಿದ್ದ ಹಿನ್ನೆಲೆಯಲ್ಲಿ ಶುರುವಾಗಿದ್ದ ಕಾರ್ಯಕರ್ತರ ಅಸಮಾಧಾನ ನೆಟ್ಟಾರು ಕೊಲೆ ನೆಪದಲ್ಲಿ ಭುಗಿಲೆದ್ದಿತ್ತು ಎನ್ನಲಾಗುತ್ತದೆ.

2022-23ರ ಶಾಲಾ ಪಠ್ಯದಿಂದ ನಾರಾಯಣ ಗುರುಗಳ ಕುರಿತ ಅಧ್ಯಾಯವನ್ನು ರಾಜ್ಯ ಬಿಜೆಪಿ ಸರಕಾರ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ಕೈಬಿಟ್ಟಾಗ ಮತ್ತೆ ಬಿಲ್ಲವರು ಅಸಮಾಧಾನಗೊಂಡಿದ್ದರು. ಆಗ ಬಿಜೆಪಿ ಸರಕಾರದ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿದ್ದವರಲ್ಲಿ ವಕೀಲ ಮತ್ತು ಬಿಲ್ಲವ ಸಮುದಾಯದ ನಾಯಕ , ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪದ್ಮರಾಜ್ ರಾಮಯ್ಯ ಹಾಗೂ ಬಿಲ್ಲವ ನಾಯಕ ಸತ್ಯಜಿತ್ ಸುರತ್ಕಲ್ ಪ್ರಮುಖರು.

ಅದಾದ ಬಳಿಕ ಬಿಜೆಪಿ ಮತ್ತೆ ಬಿಲ್ಲವರ ಓಲೈಕೆಗೆ ಬಿದ್ದಿದೆ. 2024-25ರ ಮಂಗಳೂರು ಮಹಾನಗರ ಪಾಲಿಕೆ ಬಜೆಟ್ನಲ್ಲಿ ನಾರಾಯಣ ಗುರು ಮಂದಿರಗಳಿಗೆ ಹಣ ಮೀಸಲಿಟ್ಟಿದ್ದು ಕೂಡ ಬಿಲ್ಲವ ಮತಗಳನ್ನು ಸೆಳೆಯುವ ತಂತ್ರದ ಭಾಗವೇ ಆಗಿದೆ.

ದೀರ್ಘಕಾಲದ ಹಿಂದುತ್ವವಾದಿ ಮತ್ತು ಬಿಲ್ಲವ ಸಮುದಾಯದ ನಾಯಕ ಸತ್ಯಜಿತ್ ಸುರತ್ಕಲ್ ಈಚೆಗೆ ಬಿಜೆಪಿಯೊಂದಿಗೆ ಮನಸ್ಸು ಮುರಿದುಕೊಂಡ ಬಳಿಕ, ಬಿಲ್ಲವ ಅಥವಾ ಈಡಿಗ ಅಭ್ಯರ್ಥಿಗಳನ್ನು ಮಾತ್ರ ಪಕ್ಷಾತೀತವಾಗಿ ಬೆಂಬಲಿಸುವಂತೆ ತಮ್ಮ ಸಮುದಾಯದವರನ್ನು ಒತ್ತಾಯಿಸಿದ್ದಾರೆ.

ಈ ಸತ್ಯಜಿತ್ ಸುರತ್ಕಲ್ ಬಿಜೆಪಿ ನಾಯಕ ಅನಂತ ಕುಮಾರ್ ಹೆಗಡೆಯ ಸಮಕಾಲೀನರು. ಇಬ್ಬರೂ ಒಟ್ಟಿಗೆ ಸಂಘ ಪರಿವಾರದಲ್ಲಿ ಕೆಲಸ ಶುರು ಮಾಡಿದವರು. ಹುಬ್ಬಳ್ಳಿ ಈದ್ಗಾ ಮೈದಾನ ವಿವಾದದಲ್ಲಿ ಒಟ್ಟಿಗೆ ಬಿಜೆಪಿಗಾಗಿ ದುಡಿದವರು. ಬ್ರಾಹ್ಮಣ ಸಮುದಾಯದ ಅನಂತ ಕುಮಾರ್ ಹೆಗಡೆ ಆರು ಬಾರಿ ಸಂಸದರಾದರು, ಕೇಂದ್ರ ಸಚಿವರಾದರು. ಆದರೆ ಬಿಲ್ಲವ ಸತ್ಯಜಿತ್ ಮಾತ್ರ ಹಿಂದುತ್ವ ಭಾಷಣಕಾರನಾಗಿಯೇ ಉಳಿದು ಬಿಟ್ಟರು.

ಇತ್ತೀಚೆಗೆ ಬಿಜೆಪಿಯ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಕೂಡಾ ಬಿಲ್ಲವರು ಬಿಲ್ಲವರನ್ನು ಗೆಲ್ಲಿಸಬೇಕು. ಪಕ್ಷ ನೋಡಬಾರದು ಎಂದಿದ್ದು ಬಹಳ ದೊಡ್ಡ ಚರ್ಚೆಗೆ ಕಾರಣವಾಯಿತು. ಆಮೇಲೆ ಸಮುದಾಯದ ಸಮಾವೇಶದಲ್ಲಿ ಹಾಗೆ ಹೇಳಿದ್ದೇನೆ. ಪಕ್ಷದ ವೇದಿಕೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಹೇಳುತ್ತೇನೆ ಅಂದರು.

ಈಗ ಬಿಜೆಪಿ ಉಡುಪಿ-ಚಿಕ್ಕಮಗಳೂರಿನಿಂದ ಬಿಲ್ಲವ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಿದೆ.

ಈ ಮಧ್ಯೆ ಕಾಂಗ್ರೆಸ್ ದಕ್ಷಿಣ ಕನ್ನಡದಲ್ಲಿ ಬಿಲ್ಲವ ಸಮುದಾಯದ ಪದ್ಮರಾಜ್ ಅವರನ್ನು ಕಣಕ್ಕಿಳಿಸಿದ್ದರೆ, ಶಿವಮೊಗ್ಗದಲ್ಲಿ ಈಡಿಗ ಸಮುದಾಯದ ಗೀತಾ ಶಿವರಾಜಕುಮಾರ್ ಅವರಿಗೆ ಟಿಕೆಟ್ ನೀಡಿದೆ.

ಕರಾವಳಿ ಭಾಗದಲ್ಲಿ ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿದ್ದು ರಾಜಕೀಯ ಶಕ್ತಿಯಾಗಿದ್ದಾರೆ. ಅವರನ್ನು ಓಲೈಸುವ ಕಸರತ್ತನ್ನು ಬಿಜೆಪಿ ಮಾಡುತ್ತಲೇ ಇದೆ. ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಆಗಿನ ಬಿಜೆಪಿ ಸರಕಾರ ಬಿಲ್ಲವ ಅಭಿವೃದ್ಧಿ ನಿಗಮ ರಚಿಸಿ, ನಾಲ್ಕು ಸರಕಾರಿ ವಸತಿ ಶಾಲೆಗಳನ್ನು ತೆರೆಯಿತು. ಅವುಗಳಲ್ಲಿ ಮೂರು ಕರಾವಳಿ ಭಾಗದಲ್ಲಿಯೇ ಇದ್ದವು. ಚುನಾವಣೆಗೆ ಮುನ್ನ ಅವುಗಳಿಗೆ ನಾರಾಯಣ ಗುರುಗಳ ಹೆಸರಿಡಲಾಯಿತು. ಪುತ್ತೂರಿನ ಬಸ್ ನಿಲ್ದಾಣವೊಂದಕ್ಕೆ ಸಮುದಾಯದ ಜಾನಪದ ವೀರರಾದ ಕೋಟಿ-ಚೆನ್ನಯರ ಹೆಸರು ಇಡಲಾಯಿತು. ಮಂಗಳೂರು ನಗರದ ಲೇಡಿ ಹಿಲ್ ಸರ್ಕಲ್ಗೂ ನಾರಾಯಣ ಗುರುಗಳ ಹೆಸರಿಡಲಾಯಿತು. ಸೈನ್ಯಕ್ಕೆ ಸೇರಲು ಆಸಕ್ತಿ ಹೊಂದಿರುವವರಿಗೆ ನೆರವಾಗಲು ಉಡುಪಿ ಜಿಲ್ಲೆಯಲ್ಲಿ ಕೋಟಿ-ಚೆನ್ನಯರ ಹೆಸರಿನ ತರಬೇತಿ ಶಾಲೆ ತೆರೆಯಲಾಯಿತು.

ಆದರೆ ಇಷ್ಟೆಲ್ಲದರ ಹೊರತಾಗಿಯೂ, ಬಿಲ್ಲವರಿಗೆ ರಾಜಕೀಯ ಪ್ರಾತಿನಿಧ್ಯ ಇಲ್ಲವಾಗಿದೆ ಎಂಬ ಕೊರಗನ್ನು ಸತ್ಯಜಿತ್ ಅವರಂಥ ಸಮುದಾಯದ ನಾಯಕರು ವ್ಯಕ್ತಪಡಿಸುತ್ತಾರೆ.

ಒಂದು ಕಾಲದಲ್ಲಿ ಅಸ್ಪಶ್ಯತೆಗೆ ತುತ್ತಾಗಿ, ಈಗ ಬಿಜೆಪಿಯ ಹಿಂದುತ್ವದ ಹೆಸರಿನ ಹಿಂಸಾಚಾರಗಳಲ್ಲಿ ಮೊದಲ ಬಲ ಹಾಗೂ ಬಲಿಪಶು- ಎರಡೂ ಬಿಲ್ಲವರೇ. ಹೀಗೆ ಹಿಂದುತ್ವದ ಹೆಸರಿನ ಹೊಡೆದಾಟಗಳಿಗೆ ಬಳಸಿಕೊಳ್ಳುತ್ತಲೇ, ಬಿಜೆಪಿ ಮತ್ತು ಸಂಘ ಪರಿವಾರ ತನ್ನ ಸಾಮಾಜಿಕ, ರಾಜಕೀಯ ಉದ್ದೇಶ ಸಾಧಿಸಿಕೊಳ್ಳುವಲ್ಲಿ ಕೂಡ ಬಿಲ್ಲವರಿಂದ ಲಾಭ ಮಾಡಿಕೊಂಡಿದೆ.

ಕರಾವಳಿಯಲ್ಲಿ ಬಿಜೆಪಿಯ ಹಿಂದುತ್ವ ಅಜೆಂಡಾ ಯಶಸ್ಸಿನ ಹಿಂದೆ ಇರುವವರು ಜಿಎಸ್ಬಿ ಸೇರಿದಂತೆ ಬ್ರಾಹ್ಮಣರು, ಬಂಟರು, ಬಿಲ್ಲವರು ಮತ್ತು ಒಬಿಸಿಗಳು. ಬ್ರಾಹ್ಮಣರು ಮತ್ತು ಬಂಟರು ಹಿಂದುತ್ವದ ಸಾಂಪ್ರದಾಯಿಕ ಬೆಂಬಲಿಗರಾಗಿದ್ದರೆ, ಬಿಲ್ಲವರು ಆನಂತರ ಸೇರಿಕೊಂಡವರು.

ಸ್ವಲ್ಪ ಇತಿಹಾಸದ ಕಡೆ ನೋಡುವುದಾದರೆ, ಅಸ್ಪಶ್ಯತೆಯ ವಿಪರೀತದಿಂದ ತಪ್ಪಿಸಿಕೊಳ್ಳಲು ಬಿಲ್ಲವರಿಗೆ ನೆರವಾದದ್ದು ಬಾಸೆಲ್ ಮಿಷನ್ನಂತಹ ಕ್ರಿಶ್ಚಿಯನ್ ಮಿಷನರಿಗಳು. ಶಿಕ್ಷಣ ಮತ್ತು ಉನ್ನತ ಸಾಮಾಜಿಕ ಸ್ಥಾನಮಾನ ಎರಡೂ ಸಿಕ್ಕಿದ್ದರಿಂದಾಗಿ ಅನೇಕ ಬಿಲ್ಲವರು ಪ್ರೊಟೆಸ್ಟಂಟ್ ಆಗಿ ಮತಾಂತರಗೊಂಡರು. ಇಂದು ಕರಾವಳಿ ಕರ್ನಾಟಕದಲ್ಲಿರುವ ಬಹುತೇಕ ಪ್ರೊಟೆಸ್ಟಂಟರು ಮೂಲತಃ ಬಿಲ್ಲವರು ಎಂಬುದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಸಂಸ್ಥಾಪಕರಲ್ಲಿ ಒಬ್ಬರಾದ ಕೆ. ಫಣಿರಾಜ್ ಅಭಿಪ್ರಾಯ.

ಬಿಲ್ಲವರು ಹೀಗೆ ಉನ್ನತ ಸ್ಥಾನಗಳನ್ನು ಪಡೆಯುವಂತಾದಾಗ, ಮೊದಲು ಚಡಪಡಿಸಿದವರು ಬ್ರಾಹ್ಮಣರು.

ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಬಿಲ್ಲವರಿಗೆ ಪ್ರಮುಖ ಹುದ್ದೆಗಳು ಸಿಕ್ಕಿದ್ದರಿಂದ, ಬಿಲ್ಲವರನ್ನು ಅಸ್ಪಶ್ಯರೆಂದು ದೂರವಿಟ್ಟಿದ್ದ ಬ್ರಾಹ್ಮಣರು ಅವರೊಂದಿಗೆ, ಅನೇಕ ಸಲ ಅವರ ಕೈಕೆಳಗೆ ಕೆಲಸ ಮಾಡುವಂತಾಯಿತು. ಹೀಗಾಗಿ, 1851ರಲ್ಲಿ ಬ್ರಾಹ್ಮಣರು ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ತರಬೇತಿದಾರರಾಗಿ ಬಿಲ್ಲವರ ನೇಮಕ ವಿರೋಧಿಸಿ ಅರ್ಜಿ ಸಲ್ಲಿಸಿದ್ದರು.

ಆನಂತರ ಮಂಗಳೂರಿಗೆ ಬ್ರಹ್ಮಸಮಾಜದ ಆಗಮನವಾಗಿ, ಬಿಲ್ಲವರು ಕ್ರೈಸ್ತ ಧರ್ಮದ ಕಡೆಗೆ ಹೋಗುವುದು ನಿಂತಿತು. ಇವತ್ತಿನ ಕರಾವಳಿ ಕೇಸರೀಕರಣದ ಮೊದಲ ಹಂತವೇ ಬ್ರಹ್ಮಸಮಾಜದ ಆಗಮನ ಎನ್ನಲಾಗುತ್ತದೆ.

ಈ ನಡುವೆ, ನಾರಾಯಣ ಗುರುಗಳ ನೇತೃತ್ವದ ಸಮಾಜ ಸುಧಾರಣಾ ಚಳವಳಿ ಕೇರಳ ಮತ್ತು ದಕ್ಷಿಣ ಕನ್ನಡದಲ್ಲಿ ಕಂಡುಬಂತು.

ಅವರ ಆಂದೋಲನ ಮೂಲತಃ ಕೇರಳದ ಈಳವ ಸಮುದಾಯದ ಮೇಲೆ ಕೇಂದ್ರೀಕೃತವಾಗಿದ್ದರೂ, ಜಾತಿ ತಾರತಮ್ಯ ವಿರುದ್ಧದ ಹೋರಾಟ ಮತ್ತು ಅವರ ಸಾಮಾಜಿಕ ಸಮಾನತೆಯ ಸಂದೇಶ ಬಿಲ್ಲವರನ್ನು ಆಕರ್ಷಿಸಿತು. ಬಿಲ್ಲವರದೇ ಆದ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಸ್ಥಾಪನೆಗೆ ನಾರಾಯಣ ಗುರುಗಳು 1912ರಲ್ಲಿ ಕಾರಣರಾದರು.

ನಾರಾಯಣ ಗುರುಗಳ ಬೋಧನೆಗಳು ಮತ್ತು ಚಳವಳಿ 1900ರ ದಶಕದ ಆರಂಭದಲ್ಲಿ ಬೆಳೆದಿದ್ದರೆ, ಗಮನಾರ್ಹ ಬದಲಾವಣೆ ಸಾಧ್ಯವಾಗುತ್ತಿತ್ತು. ಅವರ ಸಿದ್ಧಾಂತಗಳ ಪ್ರಭಾವ ಮರೆಯಾಗಿ ಹೋಯಿತು. ಹಲವಾರು ಬಿಲ್ಲವ ಸಮಾಜ ಮತ್ತು ನಾರಾಯಣ ಗುರು ಸೇವಾ ಸಂಘಗಳು ಕೂಡ ಪ್ರವರ್ಧಮಾನಕ್ಕೆ ಬರಲಿಲ್ಲ ಎನ್ನುತ್ತಾರೆ ಫಣಿರಾಜ್.

1970ರವರೆಗೆ ಬಿಲ್ಲವರು ಪ್ರಬಲ ಭೂಮಾಲಕರ ಹಿಡುವಳಿದಾರರಾಗಿದ್ದರು. ಭೂ ಸುಧಾರಣೆಗಳು ಬಂದ ನಂತರ ಈ ಪ್ರದೇಶದಲ್ಲಿ ಗಮನಾರ್ಹ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಆಯಿತು. ತಮಾಷೆಯೆಂದರೆ, ದೇವರಾಜ ಅರಸು ತಂದ ಭೂಸುಧಾರಣಾ ಕಾನೂನುಗಳ ಫಲಾನುಭವಿಗಳಾಗಿದ್ದ ಬಿಲ್ಲವರು ಈಗ ಬಿಜೆಪಿಯಲ್ಲಿದ್ದಾರೆ.

ಇದು ಬಿಜೆಪಿಗೆ ಅಥವಾ ಸಂಘ ಪರಿವಾರಕ್ಕೆ ಸಾಧ್ಯವಾದದ್ದು, ಆ ಹಂತದಲ್ಲಿನ ರಾಜಕೀಯ ಸ್ಥಿತ್ಯಂತರಗಳನ್ನು ಅದು ತನಗೆ ಅನುಕೂಲವಾಗುವಂತೆ ಬಳಸಿಕೊಂಡಿದ್ದರಿಂದ.

ಸಿಪಿಐಎಂ ರಾಜ್ಯ ಸಮಿತಿಯ ಸದಸ್ಯ ಮುನೀರ್ ಕಾಟಿಪಳ್ಳ ಪ್ರಕಾರ, ಕಮ್ಯುನಿಸ್ಟರು ಭೂಸುಧಾರಣಾ ಚಳವಳಿಯ ಲಾಭವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರಾದ ಬಿಲ್ಲವ ಸಮುದಾಯದ ಜನಾರ್ದನ ಪೂಜಾರಿ ಮತ್ತು ಹಿಂದುಳಿದ ವರ್ಗದ ವೀರಪ್ಪ ಮೊಯ್ಲಿ ಪ್ರಭಾವಿಗಳಾದರು. ಭೂಮಾಲಕ ಸಮುದಾಯಗಳು ಜನತಾ ಪರಿವಾರದಂತಹ ಪರ್ಯಾಯ ಪಕ್ಷಗಳನ್ನು ಬೆಂಬಲಿಸಲಾರಂಭಿಸಿದವು. ಈ ಮಧ್ಯೆ, ಭೂರಹಿತ ಬಿಲ್ಲವರು ಕೆಲ ಕಾಲ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡರು.

ಈ ನಡುವೆ ಕಾಂಗ್ರೆಸ್ ತನ್ನದೇ ಆದ ತುಮುಲಗಳಲ್ಲಿ ಸಿಕ್ಕಿಹಾಕಿಕೊಂಡು, ಭೂಸುಧಾರಣೆ ತನ್ನ ಕೊಡುಗೆ ಎಂಬುದನ್ನೂ ಮನದಟ್ಟು ಮಾಡಲಾರದೆ ಹೋಯಿತು. ಇದನ್ನೆಲ್ಲ ಗಮನಿಸಿದ ಸಂಘ ಪರಿವಾರ, ಈ ಪ್ರದೇಶದ ರಾಜಕೀಯವನ್ನೇ ಬದಲಿಸುವುದಕ್ಕೆ ತನ್ನದೇ ಆದ ವೇದಿಕೆ ಸಿದ್ಧ ಮಾಡಿತು. ಬಿಲ್ಲವರನ್ನು ಹಿಂದೂಗಳು ಎಂದು ಗುರುತಿಸುವ ಮೂಲಕ ಆರೆಸ್ಸೆಸ್ ತನ್ನ ತೆಕ್ಕೆಗೆ ಸೆಳೆಯಿತು.

ಹಿಂದುತ್ವ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ ಮೊದಲಾದವುಗಳಲ್ಲಿ ಗಣನೀಯ ಪ್ರಮಾಣದಲ್ಲಿರುವವರು ಬಿಲ್ಲವರೇ ಆಗಿದ್ದಾರೆ. ಅವುಗಳಲ್ಲಿ ಕೆಲವೆಡೆ ಬಿಲ್ಲವ ಸಮುದಾಯದವರಿಗೆ ಸ್ಥಳೀಯವಾಗಿ ಪ್ರಮುಖ ಹುದ್ದೆ ನೀಡಲಾಗಿದ್ದರೂ, ರಾಜಕೀಯ ಪ್ರಾತಿನಿಧ್ಯದ ವಿಚಾರ ಬಂದರೆ ಬಿಜೆಪಿಯಿಂದ ಬಿಲ್ಲವರೊಬ್ಬರು ಸಂಸದರಾಗಲು ಈವರೆಗೂ ಆಗಿಲ್ಲ.

ಒಂದು ಕಾಲದಲ್ಲಿ ಆರೆಸ್ಸೆಸ್ನೊಂದಿಗೆ ಕೆಲಸ ಮಾಡಿದ್ದ ಪ್ರಮುಖ ಬಿಜೆಪಿ ನಾಯಕ ಸತ್ಯಜಿತ್ ಅವರಿಗೆ, ಆಶ್ವಾಸನೆಗಳ ಹೊರತಾಗಿಯೂ 2018ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ.

ಈ ಸಲ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಂಟ ಸಮುದಾಯದ ಬ್ರಿಜೇಶ್ ಚೌಟ ಅವರಿಗೆ ಬಿಜೆಪಿ ಟಿಕೆಟ್ ಕೊಡುವುದರೊಂದಿಗೆ ಸತ್ಯಜಿತ್ ನಿರೀಕ್ಷೆ ಹುಸಿಯಾಯಿತು.

ಬಿಲ್ಲವ ಹೋರಾಟಗಾರ ಸುನೀಲ್ ಬಜಿಲಕೇರಿ ಒಂದು ಕಟು ಸತ್ಯವನ್ನು ಬಯಲು ಮಾಡುತ್ತಾರೆ.

ತಮ್ಮ ಸಮುದಾಯದ ಯುವಕರು ಅವಿದ್ಯಾವಂತರಾಗಿದ್ದು, ಹಿಂದುತ್ವ ಸಿದ್ಧಾಂತ ಮೈಗೂಡಿಸಿಕೊಂಡಿದ್ದಾರೆ. ಅವರು ಹೊಡೆದಾಡುತ್ತಾರೆ ಮತ್ತು ಪ್ರಾಣವನ್ನೂ ಕೊಡುತ್ತಾರೆ. ಹಿಜಾಬ್ ಆಂದೋಲನದ ಸಮಯದಲ್ಲಿ ಬಿಲ್ಲವ ಯುವಕರು ಮಾತ್ರ ಧರಣಿ ನಡೆಸುತ್ತಿದ್ದರು. ಶಾಸಕರು, ಸಂಸದರ ಮಕ್ಕಳು ಎಲ್ಲಿಯೂ ಕಾಣಲಿಲ್ಲ. ಈ ಪ್ರಬಲ ಜಾತಿಯ ರಾಜಕಾರಣಿಗಳು ತಮ್ಮ ಕೊಳಕು ಕೆಲಸವನ್ನು ಮಾಡಿಸುವುದು ಬಿಲ್ಲವರಿಂದ ಎನ್ನುತ್ತಾರೆ ಅವರು.

ಸುನೀಲ್ ಈ ಹಿಂದೆ ಸಂಘ ಪರಿವಾರದ ಜತೆ ನಂಟು ಹೊಂದಿದ್ದರು. ಈಗ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ.

ಮುಂದಿನ ವರ್ಷಗಳಲ್ಲಿ, ಈ ಹಿಂದುತ್ವ ಫ್ಯಾಕ್ಟರಿಯಲ್ಲಿ ಅಂಚಿನಲ್ಲಿರುವ ಸಮುದಾಯಗಳ ಯಾರೂ ಇರುವುದಿಲ್ಲ. ನನ್ನ ಮಕ್ಕಳು ಶಿಕ್ಷಣ ಪಡೆದು ಈ ರಾಜಕಾರಣದಿಂದ ದೂರ ಉಳಿಯುವಂತೆ ನೋಡಿಕೊಂಡೆ. ಈ ಸಿದ್ಧಾಂತವನ್ನು ನಾವೇ ಬೆಂಬಲಿಸಿದ್ದು. ಈಗ ನಮ್ಮೊಂದಿಗೇ ಕೊನೆಯಾಗಬೇಕು ಎನ್ನುತ್ತಾರೆ ಅವರು. ಕರಾವಳಿ ಕರ್ನಾಟಕದಲ್ಲಿ ಗಣನೀಯ ಪ್ರಮಾಣದ ಬಿಲ್ಲವ ಜನಸಂಖ್ಯೆಯಿದ್ದರೂ, ಚುನಾವಣಾ ರಾಜಕೀಯದಲ್ಲಿ ಅವರನ್ನು ಬದಿಗೊತ್ತಲಾಗಿದೆ ಎಂಬ ಅಂಶವನ್ನೂ ಸುನೀಲ್ ಗಮನಿಸುತ್ತಾರೆ.

ಪ್ರಭಾಕರ ಭಟ್ ಎಂದಾದರೂ ಜೈಲುವಾಸ ಅನುಭವಿಸಿದ್ದಾರೆಯೇ? ಅವರ ಪ್ರಚೋದನಕಾರಿ ಭಾಷಣಗಳು ಹಿಂದುಳಿದ ಜಾತಿಗಳ ಯುವಕರ ಮೇಲೆ ಪ್ರಭಾವ ಬೀರುತ್ತವೆ. ಅವರು ಜೈಲಿಗೆ ಹೋಗುತ್ತಾರೆ ಇಲ್ಲವೇ ಕೊಲೆಯಾಗುತ್ತಾರೆ. ದೊಡ್ಡವರ ಕೈಯಲ್ಲಿ ಮೈಕ್. ಬಡವರ ಮಕ್ಕಳ ಕೈಯಲ್ಲಿ ತಲವಾರ್ ಎನ್ನುತ್ತಾರೆ ಸುನೀಲ್.

ಜೀವನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಬಿಜೆಪಿಗಾಗಿ ಸವೆಸಿದ ಸತ್ಯಜಿತ್ ಅವರು ಬಿಜೆಪಿ ತನ್ನನ್ನು ಪೇದೆಯಂತೆ ಬಳಸಿಕೊಂಡದ್ದರ ಬಗ್ಗೆ ನೊಂದಿದ್ದಾರೆ. ನಾನು ಪ್ರಬಲ ಜಾತಿಯವನಾಗಿದ್ದರೆ, ಟಿಕೆಟ್ ನೀಡದಿದ್ದರೂ ನನ್ನನ್ನು ಈ ರೀತಿ ನಡೆಸಿಕೊಳ್ಳುತ್ತಿರಲಿಲ್ಲ. ರಾಜ್ಯದ ಎಲ್ಲಾ ಸಮುದಾಯಗಳು ಜಾತಿಯ ಆಧಾರದ ಮೇಲೆ ಮತ ಚಲಾಯಿಸುತ್ತಿರುವಾಗ, ಬಿಲ್ಲವರೂ ಏಕೆ ಹಾಗೆ ಮಾಡಬಾರದು? ಎಂಬುದು ಈಗ ಸತ್ಯಜಿತ್ ಕೇಳುತ್ತಿರುವ ಪ್ರಶ್ನೆಯಾಗಿದೆ.

ಬಿಲ್ಲವರು ಹಿಂದೂ ಅಸ್ಮಿತೆಯಿಂದ ಹೊರಬರಬಲ್ಲರೆ? ಇದು ಈ ಹೊತ್ತಿನ ಮತ್ತೊಂದು ಬಹಳ ಮುಖ್ಯ ಪ್ರಶ್ನೆ. ಹಾಗಾಗಲು ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ಅಗತ್ಯ ಎಂದು ಫಣಿರಾಜ್ ಹೇಳುತ್ತಾರೆ.

ಕೃಪೆ: thenewsminute.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಶಿವಾನಿ ಕಾವ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!