ಎನ್ ಡಿಎ ಅಧಿಕಾರಾವಧಿ: ಒಂದು ಮೇಲುನೋಟ

ಎನ್ ಡಿಎ ಸರಕಾರದ ಮುಂದಿನ ವರ್ಷಗಳಲ್ಲಿ ಆರ್ಥಿಕತೆ ಮಂದಗೊಳ್ಳುವಲ್ಲಿ ಒಂದು ಪಾತ್ರ, ಅದರ ಎರಡು ಬಲುದೊಡ್ಡ ನೀತ್ಯಾತ್ಮಕ ಪ್ರಮಾದಗಳಲ್ಲಿದೆ - ಒಂದು 2016ರ ನವೆಂಬರ್ ನಲ್ಲಿ ನಡೆದ ನೋಟು ರದ್ದತಿ ಮತ್ತು ಇನ್ನೊಂದು, 2017ರಲ್ಲಿ ಜಿಎಸ್ಟಿಯನ್ನು ಅನುಷ್ಠಾನಗೊಳಿಸಿದ ರೀತಿ.

Update: 2023-09-24 06:20 GMT

ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ

ಕನ್ನಡಕ್ಕೆ: ರಾಜಾರಾಂ ತಲ್ಲೂರು



 ಖ್ಯಾತ ಅರ್ಥಶಾಸ್ತ್ರಜ್ಞ ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ಅವರ ಬ್ಯಾಕ್ಸ್ಟೇಜ್ ಪುಸ್ತಕದ ಒಂದು ಪುಟ್ಟ ಭಾಗದ ಕನ್ನಡ ಅನುವಾದ ಇದು.

ಅವರು ನರೇಂದ್ರ ಮೋದಿ ಅವರ ಎನ್ಡಿಎ ಸರಕಾರದ ಅಧಿಕಾರಾವಧಿಯ ಮೊದಲ ಆರು ವರ್ಷಗಳ ಬಗ್ಗೆ ಮಾಡಿರುವ ವಿಮರ್ಶೆಯ ಒಂದು ಪುಟ್ಟ ಭಾಗ ಇಲ್ಲಿದೆ. ಈ ಪುಸ್ತಕ ಈಗ ‘M ಡಾಕ್ಯುಮೆಂಟ್’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಗೊಂಡಿದೆ.

ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕವನ್ನು ರಾಜಾರಾಂ ತಲ್ಲೂರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪುಸ್ತಕವು ಸೆ.24ರಂದು ಉಡುಪಿಯಲ್ಲಿ ಮೂಲ ಲೇಖಕ ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ಅವರಿಂದ ಬಿಡುಗಡೆಗೊಳ್ಳಲಿದೆ.




2019ರ ‘ಎಕನಾಮಿಕ್ ಟೈಮ್ಸ್’ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ವಾಣಿಜ್ಯೋದ್ಯಮಿ ರಾಹುಲ್ ಬಜಾಜ್ ಅವರು ಆಡಿದ ಮಾತುಗಳು ಮತ್ತೊಂದು ಸಮಸ್ಯೆಯತ್ತ ಜನರ ಗಮನವನ್ನು ಸೆಳೆದವು. ಸರಕಾರವು ಯಾವುದೇ ಟೀಕೆಗಳನ್ನು ಕೇಳಲು ಬಯಸುವುದಿಲ್ಲ ಎಂಬ ಅಭಿಪ್ರಾಯ ಮತ್ತು ಆ ಕಾರಣಕ್ಕಾಗಿಯೇ ಸವಾಲುಗಳು ಎದುರಿರುವಾಗಲೂ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಕುಂದಿರಬಹುದು ಎಂಬ ಕಲ್ಪನೆ ಜನರಲ್ಲಿ ಮೂಡಿತ್ತು. ಬಜಾಜ್ ಅವರು ತಮ್ಮ ಭಾಷಣದಲ್ಲಿ ‘‘ಯುಪಿಎ-2 ಅವಧಿಯಲ್ಲಿ ನಾವು ಯಾರನ್ನೂ ಟೀಕೆ ಮಾಡಬಹುದಿತ್ತು. ಆದರೆ ನಾವು ಈಗ ನಿಮ್ಮನ್ನು ಬಹಿರಂಗವಾಗಿ ಟೀಕೆ ಮಾಡಿದರೆ, ನೀವದನ್ನು ಸ್ವೀಕರಿಸುತ್ತೀರಿ ಎಂಬ ವಿಶ್ವಾಸ ಇಲ್ಲದಾಗಿದೆ’’ ಎಂದರು. ವಾಣಿಜ್ಯೋದ್ಯಮಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ ಮತ್ತು ಅದರ ಅರ್ಥ, ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಯತ್ನ ನಡೆಯುತ್ತಿಲ್ಲ ಎಂಬುದು ಬಜಾಜ್ ಅವರ ಟೀಕೆಯ ಸಾರವಾಗಿತ್ತು. ಅವರು ‘ಒಂದು ಭಯದ ವಾತಾವರಣ ನೆಲೆಸಿದೆ’ ಎಂದೂ ಹೇಳಿದ್ದರು. ಆ ಮೂಲಕ ಅವರು ಹೆಚ್ಚಿನಂಶ, ಉದ್ಯಮಪತಿಗಳು ಬಹಳ ಸುಲಭವಾಗಿ ತೆರಿಗೆ ತಪ್ಪಿಸಿದ ತನಿಖೆ, ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆಯ ಉಲ್ಲಂಘನೆಗಾಗಿ ತನಿಖೆಯಂತಹ ಕ್ರಮಗಳಿಗೆ ಸುಲಭ ತುತ್ತಾಗುತ್ತಿದ್ದಾರೆ ಎಂದು ಬೊಟ್ಟು ಮಾಡಿದ್ದರು. ಒಮ್ಮೆ ಯಾವುದಾದರೂ ಆಪಾದನೆಯ ಕಾರಣಕ್ಕೆ ತನಿಖೆ ಆರಂಭ ಆಯಿತೆಂದರೆ, ಅದು ದೀರ್ಘಕಾಲ ಕಾನೂನಿನ ಜಂಜಾಟ, ಆರ್ಥಿಕ ವೆಚ್ಚ ಮತ್ತು ಗೌರವ ನಷ್ಟಗಳಿಗೆ ಕಾರಣ ಆಗುತ್ತಿತ್ತು.

ಎನ್ಡಿಎ ಸರಕಾರದ ಮುಂದಿನ ವರ್ಷಗಳಲ್ಲಿ ಆರ್ಥಿಕತೆ ಮಂದಗೊಳ್ಳುವಲ್ಲಿ ಒಂದು ಪಾತ್ರ, ಅದರ ಎರಡು ಬಲುದೊಡ್ಡ ನೀತ್ಯಾತ್ಮಕ ಪ್ರಮಾದಗಳಲ್ಲಿದೆ - ಒಂದು 2016ರ ನವೆಂಬರ್ನಲ್ಲಿ ನಡೆದ ನೋಟು ರದ್ದತಿ ಮತ್ತು ಇನ್ನೊಂದು, 2017ರಲ್ಲಿ ಜಿಎಸ್ಟಿಯನ್ನು ಅನುಷ್ಠಾನಗೊಳಿಸಿದ ರೀತಿ.

ನೋಟು ರದ್ದತಿಯಂತೂ ದೇಶದ ಜನತೆಯ ಮೇಲೆ ಅನಿರೀಕ್ಷಿತ ಅಚ್ಚರಿಯಾಗಿ ಬಂದೆರಗಿತ್ತು. 2016ರ ನವೆಂಬರ್ 8ರಂದು, ಸರಕಾರವು 1,000 ಮತ್ತು 500 ರೂ.ಗಳ ಎಲ್ಲ ಕರೆನ್ಸಿಗಳು ತಮ್ಮ ವೌಲ್ಯ ಕಳೆದುಕೊಂಡಿವೆ ಎಂದು ಪ್ರಕಟಿಸಿತು. ಜನರ ಬಳಿ ಇದ್ದ ಕರೆನ್ಸಿಯಲ್ಲಿ ಶೇ. 86 ಭಾಗ ಈ ಎರಡು ವೌಲ್ಯದವು. ಈ ಕರೆನ್ಸಿಗಳನ್ನು ಹೊಂದಿರುವವರು ಡಿಸೆಂಬರ್ 31ಕ್ಕೆ ಮೊದಲು ತಮ್ಮಲ್ಲಿರುವ ಈ ನೋಟುಗಳನ್ನು ಬ್ಯಾಂಕುಗಳಲ್ಲಿ ಒಪ್ಪಿಸಿ, ಅದೇ ವೌಲ್ಯದ ಹೊಸ ನೋಟುಗಳನ್ನು ಪಡೆಯಬೇಕೆಂದು ಸೂಚಿಸಲಾಯಿತು. ಆರಂಭದಲ್ಲಿ ಈ ನಿರ್ಧಾರವನ್ನು ಸರಕಾರ ಕಪ್ಪು ಹಣ ಮತ್ತು ಭ್ರಷ್ಟಾಚಾರಗಳನ್ನು ಬುಡಸಮೇತ ಕಿತ್ತೆಸೆಯಲು ತೆಗೆದುಕೊಂಡ ನಿರ್ಧಾರ ಎಂದು ಸಮರ್ಥಿಸಿಕೊಂಡಿತ್ತು. ಆದರೆ ಆ ಸಮರ್ಥನೆಗೆ ತಳವಿಲ್ಲ ಎಂದು ಅರಿವಾಗುತ್ತಲೇ, ಬೇರೆ ಸಮರ್ಥನೆಗಳನ್ನು ಮುಂದೊಡ್ಡತೊಡಗಿತು.

ಆಗ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ರಘುರಾಂ ರಾಜನ್ ಅವರ ಬಳಿ, ಸರಕಾರ ಈ ಬಗ್ಗೆ ಅನೌಪಚಾರಿಕವಾಗಿ ಸಲಹೆ ಕೇಳಿತ್ತು. ಅದಕ್ಕೆ ಅವರು, ಈ ಕ್ರಮಕೈಗೊಂಡರೆ ಸಿಗಬಹುದಾದ ಯಾವುದೇ ದೀರ್ಘಕಾಲಿಕ ಲಾಭಗಳು ಈಗ ಅಲ್ಪಕಾಲಿಕ ನೆಲೆಯಲ್ಲಿ ತಗಲುವ ವೆಚ್ಚಗಳಿಗೆ ಹೋಲಿಸಿದರೆ ಸಣ್ಣವು ಎಂದು ಹೇಳಿದ್ದರು. ಸರಕಾರ ನೋಟುರದ್ದತಿಯನ್ನು ಜಾರಿಗೆ ತರಲು ನಿರ್ಧರಿಸಿದ್ದಲ್ಲಿ, ಮೊದಲಿಗೆ ಹೊಸ ನೋಟುಗಳ ಸರಬರಾಜಿಗೆ ಸಾಕಷ್ಟು ತಯಾರಿ ಮತ್ತು ಎಚ್ಚರಿಕೆಯ ಯೋಜನೆಗಳು ಅಗತ್ಯವಿದೆ ಎಂದು ಅವರು ಎಚ್ಚರಿಸಿದ್ದರು. ಆದರೆ ಕಡೆಗೆ, ರಘು ಅವರು ಆರ್ಬಿಐ ಗವರ್ನರ್ ಆಗಿ ಅವಧಿ ಪೂರೈಸಿದ ಒಂದೆರಡು ತಿಂಗಳುಗಳ ಒಳಗೆ, ಗಡಿಬಿಡಿಯಲ್ಲಿ ನೋಟು ರದ್ದತಿಯನ್ನು ಪ್ರಕಟಿಸಲಾಗಿತ್ತು.

ರಘುರಾಂ ರಾಜನ್ ಅವರು ವ್ಯಕ್ತಪಡಿಸಿದ್ದ ಆತಂಕಗಳೆಲ್ಲ ಸತ್ಯವೆಂದು ಸಾಬೀತಾದವು. ಜನರು ತಮ್ಮಲ್ಲಿರುವ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳಲು ಬ್ಯಾಂಕುಗಳಿಗೆ ಎಡತಾಕಿದರು. ಆದರೆ ಅಲ್ಲಿ ಹೊಸ ನೋಟುಗಳ ಸರಬರಾಜು ಕೊರತೆ ಇತ್ತು. ಬ್ಯಾಂಕಿಗೆ ಹಸ್ತಾಂತರಿಸಿದ ನೋಟುಗಳನ್ನು, ಬ್ಯಾಂಕುಗಳು ಅವರವರ ಖಾತೆಗಳಿಗೆ ಜಮಾ ಮಾಡಿದವು. ಆದರೆ ತಮ್ಮ ಖಾತೆಯಿಂದ ಹಣವನ್ನು ಹೊರತೆಗೆಯುವುದಕ್ಕೆ, ಸಾರ್ವಜನಿಕರಿಗೆ ಮಿತಿಗಳನ್ನು ಹೇರಲಾಯಿತು. ಹೊಸ ನೋಟುಗಳು ಬೇಡಿಕೆಯಷ್ಟು ಲಭ್ಯವಾಗುವ ತನಕವೂ ಈ ಮಿತಿಗಳನ್ನು ಮುಂದುವರಿಸಲಾಯಿತು. ನಗದು ಕೊರತೆಯ ಕಾರಣದಿಂದಾಗಿ ಕೃಷಿ ಮಾರುಕಟ್ಟೆಗಳು, ಅನೌಪಚಾರಿಕ ವಲಯಗಳು ತತ್ತರಿಸಿದವು. ಏಕೆಂದರೆ, ಅವೆರಡೂ ವಲಯಗಳು ನಗದನ್ನೇ ಅವಲಂಬಿಸಿ ನಡೆಯುತ್ತಿದ್ದವು.

ಎಂಟು ತಿಂಗಳ ಬಳಿಕ, 2017ರ ಜುಲೈ ತಿಂಗಳಿನಲ್ಲಿ ಜಿಎಸ್ಟಿಯನ್ನು ಅನುಷ್ಠಾನಗೊಳಿಸಿದಾಗ, ಆರ್ಥಿಕತೆಗೆ ಎರಡನೆಯ ಹೊಡೆತ ಬಿತ್ತು. ನೋಟು ರದ್ದತಿಗೆ ವೃತ್ತಿಪರ ಅರ್ಥಶಾಸ್ತ್ರಜ್ಞರ ಬೆಂಬಲ ಇರಲಿಲ್ಲ. ಆದರೆ ಜಾಗತಿಕವಾಗಿ ಎಲ್ಲರೂ, ಜಿಎಸ್ಟಿಯನ್ನು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ಎಂದು ಪರಿಗಣಿಸಿದ್ದರು. ಅದರಿಂದಾಗಿ ಆದಾಯ ದೊಡ್ಡ ಪ್ರಮಾಣದಲ್ಲಿ ಹೆಚ್ಚಲಿದೆ ಮತ್ತು ತೆರಿಗೆ ವ್ಯವಸ್ಥೆಯೂ ಸರಳಗೊಳ್ಳಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಆ ಎರಡೂ ರಂಗಗಳಲ್ಲಿ ನಿರೀಕ್ಷೆ ಹುಸಿಯಾಯಿತು. ಅದಕ್ಕೆ ಕಾರಣವಾದದ್ದು ಲೋಪಭರಿತ ವಿನ್ಯಾಸ ಮತ್ತು ಕಳಪೆ ಅನುಷ್ಠಾನ.

 ಒಂದು ಸಮರ್ಪಕವಾದ VAT - ಮಾದರಿಯ ತೆರಿಗೆ ವ್ಯವಸ್ಥೆಯು ಸಾಮಾನ್ಯವಾಗಿ ಬಹಳ ಸ್ಥೂಲವಾದ ತಳಪಾಯ ಹೊಂದಿದ್ದು, ಅದರಲ್ಲಿ ಹೊರತುಪಡಿಸುವಿಕೆಗಳು ತೀರಾಕಡಿಮೆ ಇರುತ್ತವೆ. ಅದರಲ್ಲಿ ಹೆಚ್ಚೆಂದರೆ ಒಂದು ಅಥವಾ ಎರಡು ಹಂತದ ತೆರಿಗೆ ದರಗಳಿರುತ್ತವೆ. ಈ ವಿಧಾನದ ಬದಲು ಭಾರತದಲ್ಲಿ, ಜಿಎಸ್ಟಿಯಿಂದ ಸುಮಾರು 200 ಐಟಂಗಳಿಗೆ ವಿನಾಯಿತಿ ನೀಡಲಾಗಿತ್ತು (ಇದು ವೈಯಕ್ತಿಕ ಬಳಕೆಯ ಸರಕುಗಳ ಸುಮಾರು ಶೇ.40ರಷ್ಟಾಗುತ್ತದೆ). ಅದಲ್ಲದೆ ತೆರಿಗೆ ದರಗಳು ಬಹಳಷ್ಟಿದ್ದವು - ಚಿನ್ನ ಮತ್ತು ಬೆಳ್ಳಿಗೆ ಶೇ. 3 ಮತ್ತು 5, 12, 18 ಮತ್ತು 28 ಎಂಬ ನಾಲ್ಕು ಹಂತದ ತೆರಿಗೆ ದರಗಳು. ನಾಲ್ಕು ಮುಖ್ಯವಾದ ರಂಗಗಳನ್ನು ಜಿಎಸ್ಟಿಯಿಂದ ಹೊರಗಿಡಲಾಗಿತ್ತು. ಪೆಟ್ರೋಲಿಯಂ ಉತ್ಪನ್ನಗಳು, ವಿದ್ಯುತ್, ಆಲ್ಕೋಹಾಲ್ ಮತ್ತು ರಿಯಲ್ ಎಸ್ಟೇಟ್ ಅಭಿವೃದ್ಧಿ. ಪದೇ ಪದೇ ಈ ತೆರಿಗೆ ದರಗಳನ್ನು ಬದಲಾಯಿಸುತ್ತಾ ಹೋದುದು ಗೊಂದಲಗಳಿಗೆ ಹಾದಿ ಮಾಡಿಕೊಟ್ಟಿತು. ಲಾಬಿ ನಡೆಸಿದರೆ, ಈ ದರಗಳನ್ನು ಬದಲಾಯಿಸಲು ಸರಕಾರ ಒಪ್ಪಬಹುದೆನ್ನುವ ಸೂಚನೆ ಅದರಿಂದ ಹೊರಟಂತಾಯಿತು. ಇದು ತೆರಿಗೆಗಳಲ್ಲಿ ಸ್ಥಿರತೆ ತರಬೇಕೆಂಬ ಜಿಎಸ್ಟಿಯ ಮೂಲ ತತ್ವಕ್ಕೇ ತದ್ವಿರುದ್ಧವಾಗಿತ್ತು. ಅದಾಗಿ ಎರಡು ತಿಂಗಳುಗಳಲ್ಲಿ, ಬೆನ್ನು ಬೆನ್ನಿಗೆ ದೊಡ್ಡ ಸಂಖ್ಯೆಯಲ್ಲಿ ಸುತ್ತೋಲೆಗಳು ಹೊರಬಂದವು ಮತ್ತು ಪ್ರತೀ ಸುತ್ತೋಲೆಯೂ ಪ್ರಕ್ರಿಯೆಯಲ್ಲಿ ಒಂದಲ್ಲ ಒಂದು ಬದಲಾವಣೆಗಳನ್ನು ಸೂಚಿಸುತ್ತಾ ಬಂದಿತು. ಇದೆಲ್ಲ ಗೊಂದಲದ ಗೂಡಾಗುತ್ತಾ ಹೋದಂತೆ, ಈ ಹೊಸ ತೆರಿಗೆ ವ್ಯವಸ್ಥೆಯನ್ನು ಅಳವಡಿಸುವ ಮುನ್ನ, ಆ ಎಲ್ಲ ವಿಚಾರಗಳನ್ನು ಎಚ್ಚರಿಕೆಯಿಂದ ಗಮನಿಸಿರಲಿಲ್ಲ ಎಂಬ ವಿಚಾರ ಅನಾವರಣಗೊಳ್ಳುತ್ತಾ ಸಾಗಿತು.

ಔಪಚಾರಿಕ ವಲಯದ ದೊಡ್ಡ ಗಾತ್ರದ ವ್ಯವಹಾರಗಳು ಹೊಸ ಜಿಎಸ್ಟಿ ವ್ಯವಸ್ಥೆಯನ್ನು ಸುಮಾರಿಗೆ ಚೆನ್ನಾಗಿಯೇ ಸ್ವೀಕರಿಸಿದವಾದರೂ, ಸಣ್ಣ ವ್ಯವಹಾರಗಳಿಗೆ ಜಿಎಸ್ಟಿಯ ಸಂಕೀರ್ಣ ನಿಯಮಗಳನ್ನು ಪಾಲಿಸುವುದು ಬಹಳ ಜಟಿಲವೆನ್ನಿಸತೊಡಗಿತು. ವಿಶೇಷವಾಗಿ ರಫ್ತು ಉದ್ಯಮಿಗಳಿಗೆ, ಅವರು ಪಾವತಿ ಮಾಡಿದ ಒಳಸುರಿ ತೆರಿಗೆಯನ್ನು ಮರುಪಾವತಿ ಪಡೆದುಕೊಳ್ಳುವಲ್ಲಿ ಸಿಕ್ಕಾಪಟ್ಟೆ ವಿಳಂಬವಾಗತೊಡಗಿತು. ರಫ್ತು ಕ್ಷೇತ್ರವೇ ಕಂಗೆಟ್ಟಿದ್ದ ಆ ಹಂತದಲ್ಲಿ, ಇಂತಹದೊಂದು ಬೆಳವಣಿಗೆ ಸಂಭವಿಸಿದ್ದು ದುರದೃಷ್ಟವೇ ಸರಿ.

ನೋಟು ರದ್ದತಿ ಮತ್ತು ಜಿಎಸ್ಟಿಗಳೆರಡೂ ಅನೌಪಚಾರಿಕ ವ್ಯವಹಾರ ರಂಗಗಳ ಮೇಲೆ ತೀವ್ರ ದುಷ್ಪರಿಣಾಮ ಬೀರಿದವು. ದೇಶದ ಕೃಷಿಯೇತರ ಜಿಡಿಪಿಯಲ್ಲಿ ಅನೌಪಚಾರಿಕ ಕ್ಷೇತ್ರದ ಪಾಲು ಸುಮಾರು ಶೇ. 25 ಇದೆ. ಈ ಕ್ಷೇತ್ರದ ಬಗ್ಗೆ ನಮಗೆ ನೇರ ಮಾಹಿತಿ ಸಿಗುವುದು ಕೇವಲ 5 ವರ್ಷಗಳಿಗೊಮ್ಮೆ ಎನ್ಎಸ್ಎಸ್ಒ ಎಂಟರ್ಪ್ರೈಸ್ ಸರ್ವೇ ನಡೆಸಿದಾಗ. ಮಧ್ಯಂತರದ ವರ್ಷಗಳಲ್ಲಿನ್ಯಾಷನಲ್ ಅಕೌಂಟ್ಸಿನ ಅಂದಾಜುಗಳು, ಡೇಟಾ ಲಭ್ಯವಿರುವ ಔಪಚಾರಿಕ ವಲಯದ ಉತ್ಪಾದನೆಗಳ ದರದಲ್ಲೇ ಅನೌಪಚಾರಿಕ ವಲಯದ ಉತ್ಪಾದನೆಗಳು ಕೂಡ ಏರಿವೆ ಎಂದು ಊಹಿಸಿಕೊಂಡಿದ್ದವು. ಈ ಊಹೆಯ ಕಾರಣದಿಂದಾಗಿ, ಜಿಡಿಪಿಯ ಅಧಿಕೃತ ಅಂದಾಜುಗಳು ವಾಸ್ತವಕ್ಕಿಂತ ತೀರಾ ಹೆಚ್ಚು ಬಿಂಬಿತವಾದವು ಮತ್ತು ಆ ವರ್ಷಗಳಲ್ಲಿನ ಜಿಡಿಪಿಯಲ್ಲಿ ಏರಿಕೆ ಕಾಣಿಸಿಕೊಂಡಿತು.

ನೀತ್ಯಾತ್ಮಕ ರಂಗದಲ್ಲಿ ಸಂಭವಿಸಿದ ಒಂದು ಋಣಾತ್ಮಕ ವಿದ್ಯಮಾನ ಎಂದರೆ, ಆಮದು ಸುಂಕಗಳನ್ನು ಹಂತ ಹಂತವಾಗಿ ತಗ್ಗಿಸಿ, ASEAN ದೇಶಗಳ ಆಮದು ಸುಂಕದ ಮಟ್ಟಕ್ಕೆ ತರುವ ಹಿಂದಿನ ಸರಕಾರದ ನೀತಿಯನ್ನು ಬದಲಾಯಿಸಿದ್ದು. ಹಿಂದಿನ ಸರಕಾರದ ನೀತಿಯನ್ನು ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರ ಸಹಿತ ಎಲ್ಲ ಸರಕಾರಗಳೂ ಅನುಸರಿಸಿದ್ದವು. ನೀತಿ ಆಯೋಗವು ಅದರ ಮೊದಲ ಉಪಾಧ್ಯಕ್ಷ ಅರವಿಂದ ಪನಗಾರಿಯಾ ಅವರ ನೇತೃತ್ವದಲ್ಲಿ ಸಿದ್ಧಪಡಿಸಿದ ಮೂರು ವರ್ಷಗಳ ಕ್ರಿಯಾ ಯೋಜನೆಯಲ್ಲಿ, ಎಲ್ಲ ಕ್ಷೇತ್ರಗಳಿಗೆ ಆಮದು ಸುಂಕವನ್ನು ಸಮಾನವಾಗಿ ಶೇ. 7ಕ್ಕೆ ತಗ್ಗಿಸಿ ನಿಗದಿಪಡಿಸಲು ಪ್ರಸ್ತಾಪಿಸಿತ್ತು. ಆದರೆ, ಎನ್ಡಿಎ ಸರಕಾರವು ಅದಕ್ಕೆ ವ್ಯತಿರಿಕ್ತ ದಿಕ್ಕಿನಲ್ಲಿ ಸಾಗಿ, ಹಲವಾರು ಆಮದು ಸುಂಕಗಳನ್ನು ಏರಿಸಿತು. ಆಮದಿನಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಈ ಸುಂಕ ಏರಿಕೆಗೆ ಬೇಡಿಕೆ ಇತ್ತಾದರೂ, ಅವು ಭಾರತೀಯ ಕೈಗಾರಿಕೆಗಳ ಸ್ಪರ್ಧಾತ್ಮಕತೆಯನ್ನು ತಗ್ಗಿಸಿದವು.

ಹೆಚ್ಚಿನಂಶ, ವಿನಿಮಯ ದರದ ಉತ್ತಮ ನಿರ್ವಹಣೆಯ ಮೂಲಕ, ಆಮದು ಸುಂಕಗಳನ್ನು ಹೆಚ್ಚಿಸಬೇಕೆಂಬ ರಕ್ಷಣಾತ್ಮಕ ಒತ್ತಡಗಳನ್ನು ನಿಭಾಯಿಸಿ, ಸ್ಪರ್ಧಾತ್ಮಕತೆಯನ್ನು ಗಳಿಸಿಕೊಳ್ಳಬಹುದಿತ್ತು. ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್ಸಿಇಪಿ) ಒಪ್ಪಂದಕ್ಕೆ ಸಹಿ ಹಾಕದಿರುವಂತೆ, ದೇಶದ ಒಳಗಿನ ಕೈಗಾರಿಕೆಗಳಲ್ಲಿ ಒಂದು ವಲಯವು ಹೂಡಿದ ಒತ್ತಡವನ್ನು ಅದು ತಗ್ಗಿಸುತ್ತಿತ್ತು. ಏಶ್ಯದ ಹೊಸ ಪ್ರಮುಖ ವಾಣಿಜ್ಯ ಗುಂಪೊಂದರಿಂದ ಹೊರಗುಳಿಯುವುದು, ಭಾರತಕ್ಕೆ ಜಾಗತಿಕ ವೌಲ್ಯ ಸರಪಣಿಯೊಂದಿಗೆ ಸಂಪರ್ಕ ಕಲ್ಪಿಸಿಕೊಳ್ಳುವುದನ್ನು ಕಠಿಣಗೊಳಿಸುತ್ತದೆ. ಭಾರತ ಈಗಲೂ ಆರ್ಸಿಇಪಿಯನ್ನು ಸೇರಿಕೊಳ್ಳಬಹುದು; ನನ್ನ ದೃಷ್ಟಿಕೋನದಲ್ಲಿ ನಾವದನ್ನು ಮಾಡಬೇಕು. ಆರ್ಸಿಇಪಿ ಸದಸ್ಯರಿಗೆ ಆಮದು ತೆರಿಗೆಗಳನ್ನು ತಗ್ಗಿಸುವುದಕ್ಕೆ ಮುನ್ನ ಕೊಡಲಾಗುವ ಸಮಯವನ್ನು, ನಾವು ನಮ್ಮ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿಕೊಳ್ಳಲು ಇರುವ ಅಡಚಣೆ ಗಳನ್ನು ನೀಗಿಕೊಳ್ಳುವುದಕ್ಕೆ ಬಳಕೆ ಮಾಡಿಕೊಳ್ಳಬೇಕು.

ಎನ್ಡಿಎ ಅವಧಿಯ ರಫ್ತು ಸಾಧನೆಗಳು ನಿರಾಶಾದಾಯಕವಾಗಿದ್ದವು. ಯುಪಿಎ-1ರ ಅವಧಿಯಲ್ಲಿ ಸರಕುಗಳು ಮತ್ತು ಸೇವೆಗಳ ರಫ್ತಿನ ಸರಾಸರಿ ಬೆಳವಣಿಗೆಯು ಅಮೆರಿಕನ್ ಡಾಲರ್ಗಳಲ್ಲಿ ಶೇ. 24.5ರಷ್ಟು ಏರಿಕೆ ಕಂಡಿತ್ತು. ಅದು ಯುಪಿಎ-2 ಅವಧಿಯಲ್ಲಿ ಶೇ. 9.8ಕ್ಕೆ ಇಳಿಯಿತು. ಅದಕ್ಕೆ ಜಾಗತಿಕ ಆರ್ಥಿಕತೆಯಲ್ಲಿ ಮಂದಗತಿ ಕಾರಣವಾಗಿತ್ತು. ಎನ್ಡಿಎ ಅವಧಿಯಲ್ಲಿ ಇದು ಮತ್ತಷ್ಟು ತಗ್ಗಿ ಶೇ. 3.4ಕ್ಕೆ ಕುಸಿಯಿತು. ಈ ಅವಧಿಯಲ್ಲಿ ಜಾಗತಿಕ ವಾಣಿಜ್ಯ ವ್ಯವಹಾರಗಳು ಮಂದಗತಿಯಲ್ಲಿ ಇತ್ತಾದರೂ, ಭಾರತದ ಮಂದಗತಿ ತೀವ್ರ ಸ್ವರೂಪದ್ದಾಗಿತ್ತು. ಯಾವುದೇ ದೇಶಕ್ಕೆ ತನ್ನ ರಫ್ತು ಸಾಮರ್ಥ್ಯವನ್ನು ಬೆಳೆಸಿಕೊಳ್ಳದೆ ಕ್ಷಿಪ್ರವಾಗಿ ಬೆಳವಣಿಗೆ ಕಾಣುವುದು ಸಾಧ್ಯವಿಲ್ಲ. ಹಾಗಾಗಿ ದೇಶದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರುವ ಯಾವುದೇ ಪ್ರಯತ್ನದಲ್ಲಿ ರಫ್ತು ಸಾಧನೆಗಳನ್ನು ಸುಧಾರಿಸಿಕೊಳ್ಳಲು ಒಂದು ನಂಬಿಗಸ್ಥ ಯೋಜನೆ ಅಗತ್ಯವಿರುತ್ತದೆ.

ದೇಶದ ಬೆಳವಣಿಗೆಯಲ್ಲಿ ತೀವ್ರ ಇಳಿಕೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗಗಳು ಇತ್ತೀಚಿನ ವರ್ಷಗಳಲ್ಲಿ ಗಂಭೀರ ಸಮಸ್ಯೆಗಳಾಗಿದ್ದು, ಅವನ್ನು ಸರಿಪಡಿಸಲು ತುರ್ತುಕ್ರಮಗಳು ಅಗತ್ಯವಿವೆ. ದುರದೃಷ್ಟವಶಾತ್, ಸರಕಾರವು ಎಲ್ಲವೂ ಸರಿಯಾಗಿದೆ ಎಂಬ ನಿರಾಕರಣೆಯ ವಾದಗಳಲ್ಲೇ ದೀರ್ಘಕಾಲ ಕಳೆದುದರಿಂದ, ಈ ಸಮಸ್ಯೆಗಳನ್ನು ಸರಿಪಡಿಸುವ ನೀತ್ಯಾತ್ಮಕ ಪ್ರತಿಕ್ರಿಯೆಗಳು ವಿಳಂಬಗೊಂಡವು. ಈ ನಿರಾಕರಣೆ ಯಾವ ಮಟ್ಟಿಗಿತ್ತು ಎಂಬುದು, 2019ರ ಅವಧಿಯಲ್ಲಿ ಆರ್ಬಿಐ ಮುಂದಿಟ್ಟ ಬೆಳವಣಿಗೆಯ ಮುನ್ನೋಟಗಳಲ್ಲಿ ಸ್ಪಷ್ಟವಾಗುತ್ತದೆ. 2019ರ ಫೆಬ್ರವರಿಯಲ್ಲಿ ಹಣಕಾಸು ನೀತಿ ಸಮಿತಿ(ಎಮ್ಪಿಸಿ)ಯ ಸಭೆಯಲ್ಲಿ ಆರ್ಬಿಐಯು 2019-20ನೇ ಸಾಲಿಗೆ ಬೆಳವಣಿಗೆಯ ದರವು ಶೇ. 7.4 ರಷ್ಟಿರಲಿದೆ ಎಂದು ಮುನ್ನೋಟ ನೀಡಿತ್ತು. ಅಂದರೆ, 2018-19ರಲ್ಲಿ ದಾಖಲಿಸಲಾಗಿದ್ದ ಶೇ. 6.8ರ ಬೆಳವಣಿಗೆಯ ದರಕ್ಕೆ ಹೋಲಿಸಿದರೆ, ಗಮನಾರ್ಹ ಏರುಗತಿಯನ್ನು ಸಾಧಿಸಲಾಗಿದೆ ಎಂದು ಈ ಮುನ್ನೋಟ ಹೇಳುತ್ತಿತ್ತು. ಇದನ್ನು ಅದೇ ಎಪ್ರಿಲ್ ತಿಂಗಳಿನಲ್ಲಿ ಶೇ. 7.2 ಎಂದು ತಿದ್ದುಪಡಿ ಮಾಡಿಕೊಳ್ಳಲಾಯಿತು. ಆ ಬಳಿಕ ಜೂನ್ ತಲುಪುವಾಗ, ಶೇ. 7 ಎಂದು ಮತ್ತೆ ತಿದ್ದಿಕೊಳ್ಳಲಾಯಿತು. ಅಕ್ಟೋಬರ್ ತಿಂಗಳಿನ ಎಮ್ಪಿಸಿ ಸಭೆಯ ಹೊತ್ತಿಗೆ, ಮೊದಲ ತ್ರೈಮಾಸಿಕದ ಬಗ್ಗೆ ನ್ಯಾಷನಲ್ ಅಕೌಂಟ್ಸ್ ಡೇಟಾಗಳು, ಆ ತ್ರೈಮಾಸಿಕದಲ್ಲಿ ಸಾಧಿಸಲಾಗಿರುವ ಬೆಳವಣಿಗೆಯ ದರ ಕೇವಲ ಶೇ. 5 ಎಂದು ತೋರಿಸಿದ್ದವು. ಪರಿಸ್ಥಿತಿ ಹೀಗಿದ್ದರೂ, ಆರ್ಬಿಐ ತನ್ನ ಮುನ್ನೋಟವನ್ನು ಶೇ. 7ರಿಂದ ಶೇ. 6.9ಕ್ಕೆ ತಗ್ಗಿಸಿಕೊಂಡಿತು. ಅದರ ಅರ್ಥ, 2019-20ರ ಮುಂದಿನ ತ್ರೈಮಾಸಿಕಗಳಲ್ಲಿ ದೇಶದ ಆರ್ಥಿಕತೆ ಕ್ಷಿಪ್ರವಾಗಿ ಸುಧಾರಿಸುತ್ತದೆ ಎಂದು. ಆದರೆ ಡಿಸೆಂಬರ್ನ ಎಮ್ಪಿಸಿ ಸಭೆಯ ಹೊತ್ತಿಗೆ ನ್ಯಾಷನಲ್ ಅಕೌಂಟ್ಸ್ ಡೇಟಾಗಳು, ಆ ತ್ರೈಮಾಸಿಕದ ಬೆಳವಣಿಗೆಯ ದರ ಕೇವಲ ಶೇ. 4.5 ಇತ್ತೆಂದು ತೋರಿಸಿದವು. ಆ ಬಳಿಕ ಆರ್ಬಿಐ, ಕಡೆಗೂ 2019-20ನೇ ಸಾಲಿಗೆ ತನ್ನ ಬೆಳವಣಿಗೆಯ ಮುನ್ನೋಟದ ದರವನ್ನು ಶೇ. 5ಕ್ಕೆ ಇಳಿಸಿಕೊಂಡಿತು!

2019-20ನೇ ಸಾಲಿನ ಜಿಡಿಪಿ ಬೆಳವಣಿಗೆಗೆ ಸಂಬಂಧಿಸಿದಂತೆ ಎನ್ಎಸ್ಒದ ಮುಂಗಡ ಅಂದಾಜು ಶೇ. 4.9 ಎಂದಿದ್ದುದು ತೀರಾ ಮಹತ್ವಾಕಾಂಕ್ಷೆಯದಾಗಿತ್ತು. ವರ್ಷದ ದ್ವಿತೀಯಾರ್ಧದಲ್ಲಿ ಗಮನಾರ್ಹವಾಗಿ ವೇಗ ಹೆಚ್ಚಿದ್ದರೆ ಮಾತ್ರ ಅದನ್ನು ಸಾಧಿಸಲು ಸಾಧ್ಯವಾಗುತ್ತಿತ್ತು. ಅಂತಹ ಯಾವುದೇ ಸೂಚನೆಗಳು ವಾಸ್ತವದಲ್ಲಿ ಇರಲಿಲ್ಲ. ಒಂದು ವೇಳೆ ಅದು ಸಾಧನೆ ಆಯಿತೆಂದೇ ಇಟ್ಟುಕೊಂಡರೂ, ತನ್ನ ಆರನೇ ವರ್ಷದಲ್ಲಿ ಎನ್ಡಿಎ ಬೆಳವಣಿಗೆಯ ದರವು ಯುಪಿಎ-2ರ 2012-13ರ ಅತ್ಯಂತ ಕೆಳಮಟ್ಟದ ಸಾಧನೆಗಿಂತಲೂ ಕಡಿಮೆ (ಬೆಳವಣಿಗೆಯ ಎರಡೂ ದರಗಳು ಹೊಸ ಸೀರೀಸ್ನ್ನು ಆಧರಿಸಿವೆ) ಮಟ್ಟದಲ್ಲಿ ದಾಖಲಾಗುತ್ತದೆ. ಕಾಲಚಕ್ರ ಒಂದು ಸಂಪೂರ್ಣ ಸುತ್ತು ಬಂದಂತಾಗಿದೆ!

ಆರ್ಥಿಕತೆಯ ಈ ಮಂದಗತಿ ಸೈಕ್ಲಿಕಲ್ಲೋ ಅಥವಾ ಸ್ಟ್ರಕ್ಟರಲ್ಲೋ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಸೈಕ್ಲಿಕಲ್ ಅಂಶಗಳೂ ಕಾರಣವಾಗಿದ್ದು, ಸರಿಪಡಿಸುವ ಕ್ರಮಗಳನ್ನು ತೆಗೆದುಕೊಂಡರೆ ಮತ್ತೆ ವೇಗ ಪಡೆದುಕೊಳ್ಳುವುದು ಸಾಧ್ಯವಿದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ತಿದ್ದುಪಡಿಗಳ ಹೊರತಾಗಿಯೂ ಆರ್ಥಿಕತೆ ಅಬ್ಬಬ್ಬಾ ಎಂದರೆ, ಇನ್ನೊಂದು ವರ್ಷ ದಾಟುವ ಹೊತ್ತಿಗೆ ಶೇ. 6ಕ್ಕೆ ತಲುಪಬಹುದು. ಶೇ. 7ರ ಬೆಳವಣಿಗೆಯ ದರ ಸಾಧಿಸಲು ಹರಸಾಹಸವೇ ಅಗತ್ಯವಿರುತ್ತದೆ. ಇನ್ನು ಹಣಕಾಸು ಸಚಿವ ಅರುಣ್ ಜೇಟ್ಲಿಯವರು 2015ರಲ್ಲಿ ಹೇಳಿದ್ದ ಎರಡಂಕೆಗಳ ಬೆಳವಣಿಗೆಯಂತೂ ಕನಸಿನ ಮಾತು. ಆ ಮಟ್ಟದ ಬೆಳವಣಿಗೆ ಬೇಕೆಂದಾದರೆ, ಆಳವಾದ ಸಂರಚನಾತ್ಮಕ ಸುಧಾರಣೆಗಳು ಅಗತ್ಯವಿವೆ.

ಇದೆಲ್ಲದರ ಜೊತೆಗೆ, ಸಾಮಾಜಿಕ ಸಾಮರಸ್ಯದ ವಾತಾವರಣವೊಂದು ನಿರ್ಮಾಣಗೊಳ್ಳುವುದು ಅಗತ್ಯವಿದೆ. ಸರಕಾರ ಇತ್ತೀಚೆಗೆ ತೆಗೆದುಕೊಂಡ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪ್ರಸ್ತಾವಿತ ಪೌರರ ರಾಷ್ಟ್ರೀಯ ರಿಜಿಸ್ಟರ್ನಂತಹ ಕ್ರಮಗಳು ದೇಶದಾದ್ಯಂತ ಹಲವು ಭಾಗಗಳಲ್ಲಿ ವಿದ್ಯಾರ್ಥಿಗಳು ಮತ್ತು ಎಳೆಯರಿಂದ ಪ್ರತಿಭಟನೆಗಳನ್ನು ಎದುರಿಸಿದೆ. ಪ್ರಭುತ್ವ ಈ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ. ಜವಾಹರಲಾಲ್ ನೆಹರೂ ವಿವಿಯಲ್ಲಿ ಇಂತಹ ಒಂದು ಪ್ರತಿಭಟನೆಯ ವೇಳೆ ಪೊಲೀಸರ ಉಪಸ್ಥಿತಿಯಲ್ಲೇ ಮುಖಮುಚ್ಚಿಕೊಂಡ ಗೂಂಡಾಗಳು ಪ್ರತಿಭಟನೆ ನಿರತ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ಘಟನೆ ನಡೆಯಿತು. ಈ ಬೆಳವಣಿಗೆಗಳೆಲ್ಲ ಮುಂದೆ ಯಾವ ತಿರುವು ಪಡೆಯಬಹುದೆಂಬುದನ್ನು ನನ್ನ ಬರವಣಿಗೆಯ ಈ ಹಂತದಲ್ಲಿ ನಾನು ನಿರೀಕ್ಷಿಸುವುದು ಕಷ್ಟ. ಯುವ ಸಮುದಾಯಗಳ ಧ್ವನಿಯನ್ನು ಅಷ್ಟು ಸುಲಭದಲ್ಲಿ ಹತ್ತಿಕ್ಕುವುದು ಕಷ್ಟ. ಯಾವುದೇ ಸಮಾಜದಲ್ಲಿ ಎಳೆಯರು ಪ್ರಭುತ್ವದ ಎದುರು ಸತ್ಯವನ್ನು ಆಡುವುದಕ್ಕೆ ಧೈರ್ಯ ತಳೆಯುತ್ತಾರೆ. ಏಕೆಂದರೆ ಅವರಿಗೆ ಅದರಿಂದ ಕಳೆದುಕೊಳ್ಳುವುದಕ್ಕೆ ಹೆಚ್ಚೇನೂ ಇರುವುದಿಲ್ಲ. ಅದರಿಂದ ಅವರಿಗೆ ಸಿಗುವುದೇ ಹೆಚ್ಚು.

ಹೂಡಿಕೆಗಳಿಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಾಣ ಮಾಡಲು, ಸರಕಾರ ಈ ಧ್ವನಿಗಳನ್ನು ಆಲಿಸಬೇಕು ಮತ್ತು ಎದ್ದಿರುವ ಸಮಸ್ಯೆಗಳನ್ನು ಶಮನ ಮಾಡಬೇಕು. ಭಾರತದ ಕಲ್ಪನೆಯನ್ನು ಜೀವಂತವಾಗಿ ಇರಿಸಿಕೊಳ್ಳಲು ಸಾಮಾಜಿಕ ಸಾಮರಸ್ಯ ಮತ್ತು ಶಾಂತಿಯ ವಾತಾವರಣವನ್ನು ಮೂಡಿಸಬೇಕಾಗುತ್ತದೆ. ನಿರಂಕುಶವಾದಿ ವ್ಯವಸ್ಥೆಗಳಲ್ಲಿ, ಹೂಡಿಕೆಯ ವಾತಾವರಣಕ್ಕೆ ಹಾನಿ ಆಗದಂತೆ ಭಿನ್ನಮತವನ್ನು ಹತ್ತಿಕ್ಕುವುದು ಸಾಧ್ಯವಾಗುತ್ತದೆ. ಏಕೆಂದರೆ, ಹೂಡಿಕೆದಾರರ ಪ್ರಾಥಮಿಕ ಆಸಕ್ತಿ ಇರುವುದು ಸಾಮಾಜಿಕ ಸ್ಥಿರತೆಯಲ್ಲಿ. ಆದರೆ ಒಂದು ಪ್ರಜಾಸತ್ತಾತ್ಮಕ ಸಮಾಜದಲ್ಲಿ ಭಿನ್ನಮತವನ್ನು ಹತ್ತಿಕ್ಕಲು ಆಗುವುದಿಲ್ಲ. ಪ್ರತಿಭಟನೆಯ ಧ್ವನಿಗಳನ್ನು ಕೇಳಿಸಿಕೊಂಡು, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಸಾಮರಸ್ಯದಿಂದ ಮುಂದೆ ಹೆಜ್ಜೆ ಇಡಬೇಕಾಗುತ್ತದೆ. ಭಾರತದ ಪ್ರಜಾಸತ್ತಾತ್ಮಕ ನಿಲುವುಗಳ ಬಗ್ಗೆ ವ್ಯಾಪಕವಾದ ಶ್ಲಾಘನೆಗಳಿವೆ. ಈ ಗೌರವವನ್ನು ನಾವು ಉಳಿಸಿಕೊಳ್ಳಬೇಕು. 2019ರ ಚುನಾವಣೆಗಳು ಎನ್ಡಿಎ ಸರಕಾರಕ್ಕೆ ಭಾರೀ ಬಹುಮತದ ಜನಾಭಿಪ್ರಾಯವನ್ನು ನೀಡುವ ಮೂಲಕ, ಪ್ರಧಾನಮಂತ್ರಿಗಳಿಗೆ ರಾಜಕೀಯವಾಗಿ ಅಪಾರ ಶಕ್ತಿ ತುಂಬಿವೆ. ಅವರು ಅದನ್ನು ಮೂಡುತ್ತಿರುವ ಆರ್ಥಿಕ ಸವಾಲುಗಳನ್ನು ನಿಭಾಯಿಸುವಲ್ಲಿ ಬಳಸಬೇಕೇ ಹೊರತು ವಿಭಾಜಕ ಸಂಗತಿಗಳು ನಡುಮನೆಯನ್ನು ಆವರಿಸಿಕೊಳ್ಳಲು ಅವಕಾಶ ನೀಡಬಾರದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!