ರಝಾಕಾರ್ ಮುದ್ರೆಯೊಂದಿಗೆ ಕ್ರಿಮಿನಲ್ ಲೇಬಲ್

‘ಡೇಂಜರ್ಸ್ ಆಫ್ ಎ ಸಿಂಗಲ್ ಸ್ಟೋರಿ’ ಈ ಸರಣಿಯು 1948ರ ಹೈದರಾಬಾದ್ ಪೊಲೀಸ್ ಕಾರ್ಯಾಚರಣೆಯನ್ನು ಪರ್ಯಾಯ ದೃಷ್ಟಿಕೋನದಿಂದ ನೋಡುತ್ತದೆ. ಈ ದೃಷ್ಟಿಕೋನಗಳು, ಹೈದರಾಬಾದ್ ವಿಲೀನವನ್ನು ‘ವಿಮೋಚನೆ’ ಎಂಬುದಾಗಿ ಬಿಂಬಿಸುವ ಪ್ರಧಾನವಾಹಿನಿಯ ವ್ಯಾಖ್ಯಾನವನ್ನು ಪ್ರಶ್ನಿಸುತ್ತವೆ, ಮಾರ್ಪಡಿಸುತ್ತವೆ ಮತ್ತು ಅದಕ್ಕೆ ಸೂಕ್ಷ್ಮ ಅಂಶಗಳನ್ನು ಸೇರಿಸುತ್ತವೆ. ಚಾಲ್ತಿಯಲ್ಲಿರುವ ವ್ಯಾಖ್ಯಾನವನ್ನು ವಿಭಜನವಾದಿ ರಾಜಕೀಯವನ್ನು ಇನ್ನಷ್ಟು ಬಲಪಡಿಸಲು ಬಳಸಲಾಗುತ್ತಿದೆ. ‘ಖಿಡ್ಕಿ ಕಲೆಕ್ಟಿವ್’ನ ಸ್ವಾತಿ ಶಿವಾನಂದ್, ಯಾಮಿನಿ ಕೃಷ್ಣ ಮತ್ತು ಪ್ರಮೋದ್ ಮಂಡಾಡೆ ಈ ಸರಣಿಯನ್ನು ನಿರೂಪಿಸಿದ್ದಾರೆ. ‘ಖಿಡ್ಕಿ ಕಲೆಕ್ಟಿವ್’, ಇತಿಹಾಸ, ರಾಜಕೀಯ ಮತ್ತು ಸಂಸ್ಕೃತಿ ಕುರಿತು ಸಾರ್ವಜನಿಕ ಸಂವಾದವನ್ನು ರೂಪಿಸುವುದಕ್ಕೆ ಬದ್ಧವಾಗಿರುವ ವಿದ್ವಾಂಸರ ಬಳಗವಾಗಿದೆ.

Update: 2023-09-17 05:18 GMT

ಪೊಲೀಸ್ ಕಾರ್ಯಾಚರಣೆಯ ಬಗ್ಗೆ ಮಾತಾಡುವಾಗ ಖುದ್ದೂಸ್ ಅವರು ಪದೇಪದೇ ಕರ್ಬಲದ ಕಾಳಗವನ್ನು ಉಲ್ಲೇಖಿಸುತ್ತಿದ್ದರು. ‘‘ಮುಸ್ಲಿಮ್ ಸಮುದಾಯದ ಬಲಿದಾನ ಬೇಡಿದ ಚಾರಿತ್ರಿಕ ಘಟನೆ ಅದು’’ ಎಂದು ಖುದ್ದೂಸ್ ಹೇಳುತ್ತಿದ್ದರು. ಬಹದೂರ್ ಯಾರ್ ಜಂಗ್ ಅವರ ಜೀವನ ಮತ್ತು ಇಮಾಮ್ ಹುಸೇನ್ ರವರ ಬಲಿದಾನದ ಜೊತೆ ಒಂದು ಮುಖ್ಯವಾದ ಕೊಂಡಿಯನ್ನು ಖುದ್ದೂಸ್ ಹೆಣೆಯುತ್ತಿದ್ದರು.

- ಅಫ್ಸರ್ ಮುಹಮ್ಮದ್

- ಆನುವಾದ: ಕೆ.ಪಿ. ಸುರೇಶ

ಈ ಭಾಗ ಅಫ್ಸರ್ ಮುಹಮ್ಮದ್ ಅವರ, ‘‘Remaking History:1948 Police Action and the Muslims of Hyderabad,( 2023 ಕ್ಯಾಂಬ್ರಿಜ್ ಯುನಿವರ್ಸಿಟಿ ಪ್ರೆಸ್ ಪ್ರಕಟಣೆ) ಕೃತಿಯ ಆಯ್ದ ಭಾಗ.

ಈ ಕೃತಿಯಲ್ಲಿ ಲೇಖಕರು 1948ರ ಹಿಂಸಾಚಾರದ ಅಂದಾಜು ನೂರು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಹೆಚ್ಚಿನ ಪ್ರತ್ಯಕ್ಷದರ್ಶಿಗಳು ಈಗ ತೀರಿಕೊಂಡಿದ್ದಾರೆ. ಆದರೆ 1948ರ ಪೊಲೀಸ್ ಕಾರ್ಯಾಚರಣೆಯ ಬಗ್ಗೆ ಚರ್ಚೆಯೇ ಆಗಿಲ್ಲದ ಈ ಸಂದರ್ಭದಲ್ಲಿ ಈ ಪ್ರತ್ಯಕ್ಷದರ್ಶಿ ಕಥನಗಳು 1948ರ ಹೈದರಾಬಾದ್ ಮತ್ತು ತೆಲಂಗಾಣದ ನಿತ್ಯ ಬದುಕಿನ ವಿವಿಧ ಮಗ್ಗುಲುಗಳ ಬಗ್ಗೆ ಹೊಸ ಒಳನೋಟಗಳನ್ನು ನೀಡುತ್ತದೆ.

ಖಿಡ್ಕಿಯ ಟಿಪ್ಪಣಿ: ಮೌಖಿಕ ಚರಿತ್ರೆಯು ಸಂದ ಕಾಲದ ಬಗ್ಗೆ ಭಿನ್ನ ನೋಟವನ್ನು ನೀಡುತ್ತದಷ್ಟೇ ಅಲ್ಲ, ಆ ಕಾಲಘಟ್ಟದಲ್ಲಿ ಬದುಕಿದವರ ಒಳನೋಟಗಳು ಈ ವರ್ತಮಾನದ ಸವಾಲುಗಳನ್ನು ಅರ್ಥ ಮಾಡಿಕೊಳ್ಳಲೂ ಸಹಾಯ ಮಾಡುತ್ತದೆ. ಈ ಆಯ್ದ ಭಾಗದಲ್ಲಿ ಖುದ್ದೂಸ್ ಸಾಹೇಬರ ಮಾತುಗಳು, ಪೊಲೀಸ್ ಕಾರ್ಯಾಚರಣೆಯ ತರುವಾಯ ಹೈದರಾಬಾದಿನ ಮುಸ್ಲಿಮರ ಬದುಕಿನ ಮೇಲೆ ಏನು ಪರಿಣಾಮ ಬೀರಿತು, ರಝಾಕಾರರು ಎಂಬ ಹಣೆಪಟ್ಟಿ ಹೊತ್ತ ಹಲವರಿಗೆ ನಿತ್ಯದ ಬದುಕನ್ನು ನಡೆಸಲು ಹೇಗೆ ಕಷ್ಟವಾಯಿತು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.

ಖುದ್ದೂಸ್ ಪ್ರಕಾರ ವರ್ತಮಾನದ ಭಾರತ ಮುಸ್ಲಿಮರಿಗೆ ಕಷ್ಟದ ಕಾಲ. ಆ ಕಾಲದ ಪರಿಣಾಮದ ನೆನಪು ಕೆದಕುವಂಥದ್ದು ಕೂಡಾ. ಉದಾ: ಮುಸ್ಲಿಮ್ ನಾಯಕತ್ವದ ಸಂಪೂರ್ಣ ನಿರ್ನಾಮ ಈಗಲೂ ಪ್ರತಿಧ್ವನಿಸುತ್ತಿದೆ.

5 ದಿನಗಳ ಪೊಲೀಸ್ ಕಾರ್ಯಾಚರಣೆ ಅವರಿಗೆ ಈಗಲೂ ಹಸಿ ನೆನಪು. ಆದರೆ ಅಧಿಕೃತ ಚರಿತ್ರೆ, ತೆಲುಗು ಭಾಷಾವಾರು ಪ್ರಾಂತದ ಸೃಷ್ಟಿ ಮತ್ತು ತೆಲಂಗಾಣದ ಎಡಪಂಥೀಯ ಸಶಸ್ತ್ರ ಹೋರಾಟಗಳನ್ನು ಸಂಭ್ರಮಿಸುತ್ತದೆ. ಆಂಧ್ರಪ್ರದೇಶದ ರಚನೆಯು ರಾಷ್ಟ್ರೀಯತೆಯ ಘೋಷವಾದರೆ, ತೆಲಂಗಾಣದ ಸಶಸ್ತ್ರ ಹೋರಾಟ 1952ರ ಚುನಾವಣೆಗೆ ಎಡಪಕ್ಷಗಳ ಪ್ರಚಾರ ಆಂದೋಲನವಾಯಿತು.

ಉರ್ದು ಸಾಹಿತ್ಯ ಇತಿಹಾಸಕಾರರಾದ ಶಾಮಲಾಸದಾಶಿವ ಅವರ ಪ್ರಕಾರ: ‘ಆಂಧ್ರ’ ಎಂಬ ಪದ ಪ್ರಯೋಗವೇ ಹೈದರಾಬಾದ್ ಮತ್ತು ತೆಲಂಗಾಣದ ಚರಿತ್ರೆಯನ್ನೇ ಯಾವುದೋ ದೂರದ ಗತಕಾಲಕ್ಕೆ ತಳ್ಳುವ ಯತ್ನ. 1930-40ರಲ್ಲಿ ನಾವು ಬೆಳೆಯುತ್ತಿದ್ದಾಗ ನಾವೆಲ್ಲ ತೆಲಂಗಾಣ ಎಂಬ ಪದದ ಜೊತೆ ಗುರುತಿಸಿಕೊಂಡಿದ್ದೆವು. ಅದು ಉರ್ದು- ತೆಲುಗು ಬೆರೆತ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಆಂಧ್ರ ಎಂಬ ಹೊಸ ಪದದ ಮೂಲಕ, ಪ್ರಭುತ್ವ ಪ್ರಸ್ತುತಪಡಿಸಿದ ಚರಿತ್ರೆಯು ಈ ಹೈದರಾಬಾದ್ ಮತ್ತು ಅಲ್ಲಿನ ಮುಸ್ಲಿಮ್ ಕೇಂದ್ರಿತ ಚರಿತ್ರೆಯನ್ನು ಒರೆಸಿ ಹಾಕಿತು. ಪೊಲೀಸ್ ಕಾರ್ಯಾಚರಣೆಯ ಹತ್ಯಾಕಾಂಡವನ್ನು ದಾಖಲಿತ ಚರಿತ್ರೆಯಿಂದ ಕಿತ್ತು ಹಾಕಲಾಯಿತು.

ಸದಾಶಿವ ಅವರ ಮಾತುಗಳು ನನ್ನನ್ನು ಜಾನಪದ ಹಾಡುಗಾರ ಅಬ್ದುಲ್ ಖುದ್ದೂಸ್ ಸಾಹೇಬ್ ಹೇಳಿದಲ್ಲಿಗೆ ಒಯ್ದವು. 2006ರಲ್ಲಿ ನಾನು ಈ ಕೃತಿಯನ್ನು ಮುಗಿಸುವ ಹಂತದಲ್ಲಿದ್ದಾಗ ಅವರು 1998ರಲ್ಲಿ ಭಾಜಪ ಮಾಡಿದ ಹೇಳಿಕೆಗಳನ್ನು ಉದ್ಧರಿಸಿದರು. ಅವರು ನಿರ್ದಿಷ್ಟವಾಗಿ ಅಂದಿನ ಗೃಹಮಂತ್ರಿ ಎಲ್.ಕೆ. ಅಡ್ವಾಣಿ ಹೈದರಾಬಾದಿನಲ್ಲಿ ಮಾಡಿದ ಭಾಷಣವನ್ನು ಉಲ್ಲೇಖಿಸಿದರು. (ನಾನೂ ಆ ಸಮಾವೇಶಕ್ಕೆ ಹೋಗಿದ್ದೆ)

ಪೊಲೀಸ್ ಕಾರ್ಯಾಚರಣೆಯನ್ನು ಉಲ್ಲೇಖಿಸಿ ಅಡ್ವಾಣಿಯವರು ಸೆಪ್ಟಂಬರ್ 17ನ್ನು ವಿಮೋಚನಾ ದಿನವನ್ನಾಗಿ ಆಚರಿಸಲು ಕರೆ ಕೊಟ್ಟರು. ತೆಲುಗು ಸಾರ್ವಜನಿಕ ವಲಯದಲ್ಲಿ ಇದು ‘ವಿಮೋಚನಾ ದಿನಂ’ ಎಂದು ಪ್ರಕಟವಾಯಿತು. ಅಡ್ವಾಣಿಯವರ ಈ ‘ವಿಮೋಚನೆ’ ಎಂಬ ಪದ ಬಳಕೆ ಸ್ಥಳೀಯ ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪೊಲೀಸ್ ಕಾರ್ಯಾಚರಣೆಯ ಕುರಿತು ಚರ್ಚೆಗಳನ್ನು ಹುಟ್ಟುಹಾಕಿತು.

ಅಡ್ವಾಣಿಯವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಹಲವಾರು ಇತಿಹಾಸಕಾರರು ಮತ್ತು ಸಾಮಾಜಿಕ ಆ್ಯಕ್ಟಿವಿಸ್ಟರು ಪೊಲೀಸ್ ಕಾರ್ಯಾಚರಣೆಯ ಚರಿತ್ರೆಯ ಮರು ಓದಿಗೆ ತೊಡಗಿದರು. ಪೊಲೀಸ್ ಕಾರ್ಯಾಚರಣೆಗೆ ಕಾರಣವಾದ ಘಟನೆಗಳೊಂದಿಗೆ ಹೈದರಾಬಾದಿನ ಮುಸ್ಲಿಮರ ಪ್ರಶ್ನೆಯೂ ಮತ್ತೆ ಚರ್ಚೆಗೆ ಬಂದಿತು. (ಮುಸ್ಲಿಮರೂ ತಮ್ಮ ಭವಿಷ್ಯದ ಬಗ್ಗೆ ಡೋಲಾಯಮಾನ ಮನಃಸ್ಥಿತಿಯಲ್ಲಿದ್ದರು) ಈ ಚರಿತ್ರೆಯ ಕಾಲಘಟ್ಟದ ವಿವರಗಳನ್ನು ಹಲವು ಕ್ಷೇತ್ರಗಳ ಕಾರ್ಯಕರ್ತರು ಸಾರ್ವಜನಿಕವಾಗಿ ಚರ್ಚಿಸಿದರು.

ಖುದ್ದೂಸ್ ಸಾಹೇಬರು ಹೇಳಿದ್ದು:

ಅಡ್ವಾಣಿ ಮತ್ತು ಭಾಜಪ ತಮ್ಮ ರಾಜಕೀಯ ಲಾಭಕ್ಕೆ ಈ ಕಣಜದ ಗೂಡಿಗೆ ಕಲ್ಲೆಸೆದಿದ್ದರು. ನಾವೆಲ್ಲ ಅದನ್ನು ಮರೆತಿದ್ದೇವೆಂದಲ್ಲ; ಆದರೆ ಅಡ್ವಾಣಿ ಇದನ್ನು ಕೆದಕಿದ ರೀತಿ ಮಾತ್ರ ಕಳವಳಕಾರಿಯಾಗಿತ್ತು. ನಾವು ಪೊಲೀಸ್ ಕಾರ್ಯಾಚರಣೆಯ ಬಗ್ಗೆ ಮಾತಾಡಬೇಕು. ಆದರೆ ಅಡ್ವಾಣಿ ಮತ್ತು ಅವರ ಅನುಯಾಯಿಗಳು ಶುದ್ಧ ದ್ವೇಷ ಭಾಷಣವಷ್ಟೇ ಮಾಡಿ ಹಿಂದೂ- ಮುಸ್ಲಿಮರ ನಡುವೆ ಹೊಸ ದ್ವೇಷಕ್ಕೆ ಕಾರಣರಾದರು.

ಅವರು ಮತ್ತು ಅವರ ಪಕ್ಷದವರು ಪೊಲೀಸ್ ಕಾರ್ಯಾಚರಣೆಯ ಚರಿತ್ರೆಯನ್ನು ಹಿಂದೂ ಮತಗಳಿಕೆಗೆ ಬಳಸುವ ಹುನ್ನಾರ ಹೊಂದಿದ್ದರು.

ಇಸ್ಲಾಮಿಕ್, ಹೈದರಾಬಾದ್ ಸಂಬಂಧಿತ ಚರಿತ್ರೆ ಖುದ್ದೂಸ್ ಸಾಹೇಬರಿಗೆ ಬಲು ಭಾವುಕ ಸಂಗತಿಯಾಗಿತ್ತು. 1930-40ರಲ್ಲಿ ಬೆಳೆದ ಅವರಿಗೆ ಉರ್ದು, ತೆಲುಗಿನಲ್ಲಿದ್ದ ಚರಿತ್ರೆ ಕೃತಿಗಳನ್ನು ಓದುವ ಆಸಕ್ತಿ ಇತ್ತು.

1940ರ ದಶಕದಲ್ಲಿ ಚಿರಪರಿಚಿತ ಜಾನಪದ ಕಲಾವಿದರಾಗಿದ್ದ ಖುದ್ದೂಸ್ ಅವರು ಹಲವಾರು ಚಾರಿತ್ರಿಕ ಘಟನೆಗಳ (ನವಾಬ್ ಬಹದೂರ್ ಯಾರ್ ಜಂಗ್ ಅವರ ಭಾಷಣಗಳಿಂದ ಹಿಡಿದು ತೆಲಂಗಾಣ ಪ್ರತ್ಯೇಕತಾ ಚಳವಳಿ ವರೆಗೆ)ಪ್ರತ್ಯಕ್ಷ ದರ್ಶಿಯಾಗಿದ್ದರು.

ಬಹದೂರ್ ಯಾರ್ ಜಂಗ್ ಅವರ ಪಕ್ಷ ಇತ್ತೆಹಾದ್( ತರುವಾಯ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮಾನ್ - ಎಂ.ಐ.ಎಂ.) ಶಕ್ತಿಶಾಲಿಯಾಗಿ ಬೆಳೆದು ಹಲವಾರು ರಾಜಕೀಯ, ಸಾಮಾಜಿಕ ಚಳವಳಿಗಳನ್ನು ಮುನ್ನಡೆಸಿತ್ತು. ಅವರು ಯುವ ಮುಸ್ಲಿಮರಿಗೆ ಎಂಥಾ ಸ್ಫೂರ್ತಿಯಾಗಿದ್ದರೆಂದರೆ, ಅವರ ಭಾಷಣಗಳೆಲ್ಲಾ ನಮಗೆ ಬಾಯಿಗೆ ಬರುತ್ತಿತ್ತು. ನಮ್ಮ ಭಾವನೆ ಮತ್ತು ಚಿಂತನೆಗಳಿಗೆ ಅವರು ಮಾತು ನೀಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಮುಸ್ಲಿಮ್ ಯುವಕರು ವರ್ತಮಾನದ ರಾಜಕೀಯದ ಬಗ್ಗೆ ಮಾತಾಡಬೇಕು, ಅದನ್ನು ಸುಧಾರಿಸಲು ಇಸ್ಲಾಮ್ ಹೇಗೆ ಕೊಡುಗೆ ನೀಡಬಹುದು ಎಂಬುದರ ಬಗ್ಗೆ ಅವರು ನಮಗೆ ಅರಿವು ಮೂಡಿಸಿದರು.

ನಮ್ಮ ಮಾತುಕತೆಗಳ ಸಂದರ್ಭಗಳಲ್ಲಿ ಖುದ್ದೂಸ್ ಅವರು 1990ರ ಸಂದರ್ಭವನ್ನು 1940ರ ಕಾಲಘಟ್ಟದೊಂದಿಗೆ ಹೋಲಿಸುತ್ತಿದ್ದರು. ಮುಖ್ಯವಾಗಿ ಮುಸ್ಲಿಮ್ ಸಮುದಾಯಕ್ಕೆ ಪ್ರಬುದ್ಧ ನಾಯಕತ್ವದ ಕೊರತೆ ಅವರ ಬಹುಮುಖ್ಯ ಕಾಳಜಿಯಾಗಿತ್ತು. ಬಹದೂರ್ ಯಾರ್ ಜಂಗ್ರ ಸಾಧನೆಗಳ ಬಗ್ಗೆ ಹೇಳುವಾಗ ಖುದ್ದೂಸ್ ಅವರ ಕಣ್ಣುಗಳು ಹೊಳೆಯುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ.

ಬಹದೂರ್ ಯಾರ್ ಜಂಗ್ ಅವರ ಭಾಷಣಗಳನ್ನು ಉತ್ಸಾಹದಲ್ಲಿ ಸ್ಮರಿಸುತ್ತಾ, ಖುದ್ದೂಸ್, ‘‘ಈ ಕಾಲದಲ್ಲಿ ನಮ್ಮನ್ನು ಮಾತು- ಕೃತಿಗಳ ಮೂಲಕ ಪ್ರೇರೇಪಿಸಬಲ್ಲ ಅಂಥಾ ಒಬ್ಬ ಭಾಷಣಕಾರ ಮತ್ತು ಆ್ಯಕ್ಟಿವಿಸ್ಟ್ ನಮಗೆ ಬೇಕಾಗಿದ್ದಾರೆ. ತೆಲಂಗಾಣದ ಹಳ್ಳಿಯಿಂದ ನಗರದವರೆಗೆ ಮುಸ್ಲಿಮ್ ಸಮುದಾಯವನ್ನು ಒಗ್ಗೂಡಿಸುವ ಒಂದು ಶಕ್ತಿ ಬೇಕಾಗಿದೆ’’ ಎಂದು ಅಭಿಪ್ರಾಯ ಪಟ್ಟರು.

ಈ ಮಾತುಗಳನ್ನು ಖುದ್ದೂಸ್ ಹೇಳಿದಾಗ ಅವರೇನು ಹಳೆ ನೆನಪನ್ನು ಸವಿಯುತ್ತಾ ಹೇಳಿರಲಿಲ್ಲ. ಬಲು ವಾಸ್ತವದ ದೃಷ್ಟಿಯಿಂದಲೇ ಹೇಳಿದ್ದರು. ಖುದ್ದೂಸ್ ಅವರ ಪ್ರಕಾರ, ಬಹದೂರ್ ಯಾರ್ ಜಂಗ್ ಹಲವಾರು ಆಯಾಮಗಳನ್ನು ಹೊಂದಿದ ನಾಯಕ. ಯಾವುದೇ ಕಾಲದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಬೇಕಾದ, (ಅದರಲ್ಲೂ ಹಿಂದುತ್ವದ ಕೇಸರಿ ಅಲೆಯ ತರುವಾಯ ಬೇಕಾದ) ನಾಯಕತ್ವ, ವಾಗ್ಝರಿ, ರಾಜಕೀಯ ಅರಿವುಗಳನ್ನು ಜಂಗ್ ಹೊಂದಿದ್ದರು.

ಪೊಲೀಸ್ ಕಾರ್ಯಾಚರಣೆಯ ಬಗ್ಗೆ ಮಾತಾಡುವಾಗ ಖುದ್ದೂಸ್ ಅವರು ಪದೇಪದೇ ಕರ್ಬಲದ ಕಾಳಗವನ್ನು ಉಲ್ಲೇಖಿಸುತ್ತಿದ್ದರು. ‘‘ಮುಸ್ಲಿಮ್ ಸಮುದಾಯದ ಬಲಿದಾನ ಬೇಡಿದ ಚಾರಿತ್ರಿಕ ಘಟನೆ ಅದು’’ ಎಂದು ಖುದ್ದೂಸ್ ಹೇಳುತ್ತಿದ್ದರು. ಬಹದೂರ್ ಯಾರ್ ಜಂಗ್ ಅವರ ಜೀವನ ಮತ್ತು ಇಮಾಮ್ ಹುಸೇನ್ ರವರ ಬಲಿದಾನದ ಜೊತೆ ಒಂದು ಮುಖ್ಯವಾದ ಕೊಂಡಿಯನ್ನು ಖುದ್ದೂಸ್ ಹೆಣೆಯುತ್ತಿದ್ದರು.

ಇಮಾಮ್ ಹುಸೇನ್ರವರ ತರಹ ಬಹದೂರ್ ಸಾಹೇಬ್ ಕೂಡ ಕಾಳಗದಲ್ಲಿ ಹುತಾತ್ಮರಾದರು.

ಸ್ವತಃ ಖುದ್ದೂಸ್ ಅವರ ಜೀವನದ ತುಂಬಾ ದುರಂತಮಯ ಘಟನೆಗಳು ತುಂಬಿದ್ದವು. 1948ರ ಹಿಂಸೆಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು, ಗೆಳೆಯರನ್ನು ಅವರು ಕಳೆದುಕೊಂಡಿದ್ದರು.

ಅನಾಮಿಕವಾಗಿ ತಪ್ಪಿಸಿಕೊಂಡಿದ್ದವರ ಬದುಕೂ ಬೇರು ಕಿತ್ತಂತಾಗಿ ನಾಶವಾಗಿದ್ದು, ಹೊಸ ತಲೆಮಾರಿನ ಮುಸ್ಲಿಮರು ಮುಸ್ಲಿಮ್ ಎಂಬ ಕಾರಣಕ್ಕೇ ಹಣೆಪಟ್ಟಿ ಹೊತ್ತು ಬದುಕಬೇಕಾದ ದುರ್ಭರ ಸ್ಥಿತಿಯನ್ನೂ ಖುದ್ದೂಸ್ ನೋಡಿದ್ದರು.

ಈ ಮಸಿ ಹಚ್ಚುವ ಕ್ರಮದ ಬಗ್ಗೆ ವಿವರಿಸುತ್ತಾ, ಅವರು, ‘‘ನಿಮ್ಮನ್ನು ರಝಾಕಾರ್ ಮುದ್ರೆಯೊಂದಿಗೆ ಒಬ್ಬ ಕ್ರಿಮಿನಲ್, ಸಮಾಜ ವಿರೋಧಿ ಶಕ್ತಿ ಎಂದು ಲೇಬಲ್ ಹಚ್ಚಿದಾಗ ಬದುಕುವುದು ಎಷ್ಟು ಕಷ್ಟ ಗೊತ್ತಾ? 18-30ರ ವಯೋಮಾನದ ಎಲ್ಲಾ ಮುಸ್ಲಿಮ್ ಯುವಕರನ್ನೂ ಹೀಗೆ ಮುದ್ರೆ ಒತ್ತಿ ಗುರುತಿಸಿ ಬೇಟೆಯಾಡಲಾಗುತ್ತಿತ್ತು. ತಮ್ಮ ಹುಟ್ಟೂರಲ್ಲೇ ಕೆಲಸ, ಅನ್ನ, ಆಶ್ರಯ, ಮನೆ ಪಡೆಯುವುದೂ ಅವರಿಗೆ ಕಷ್ಟವಾಗಿತ್ತು’’

ಇಂಥ ಕೆಲವು ಅನುಭವದ ಹೇಳಿಕೆಗಳನ್ನು ನಾನು ದಾಖಲಿಸಿದ್ದೇನೆ.

‘‘ಎಲ್ಲಾ ಮುಸ್ಲಿಮರೂ ತೀವ್ರಗಾಮಿ ಅಥವಾ ರಝಾಕಾರರಲ್ಲ’’ ಎಂಬ ಹೇಳಿಕೆಯೂ ಈ ಪ್ರಸ್ತುತಿಯಲ್ಲಿತ್ತು. ಮುಸ್ಲಿಮರನ್ನು ರಝಾಕಾರರೊಂದಿಗೆ ಗುರುತಿಸುವುದು ಹಲವಾರು ರಾಷ್ಟ್ರೀಯವಾದಿ ಕಥನಗಳ ಕಥನ ತಂತ್ರವೂ ಆಗಿತ್ತು. ಖುದ್ದೂಸ್ ಪ್ರಕಾರ ಸರಿಯಾದ ನಾಯಕತ್ವ ಇಲ್ಲದಿದ್ದುದೇ ಈ ರಾಕ್ಷಸೀಕರಣಕ್ಕೆ ಮುಖ್ಯ ಕಾರಣ.

ಖುದ್ದೂಸ್ ಅವರು ಹಮ್ ದರ್ದಿ(ಅನುಕಂಪ) ಎಂಬ ಉರ್ದು ಪದವನ್ನು ಒತ್ತಿ ಹೇಳಿ, ಮುಸ್ಲಿಮರ ಬಗ್ಗೆ, ಮುಸ್ಲಿಮ್ ಸಮಸ್ಯೆಗಳ ಬಗ್ಗೆ ಅನುಕಂಪವೇ ಮಾಯವಾಗಿರುವುದರ ಬಗ್ಗೆ ಸಂಕಟಪಟ್ಟರು. ಖಾಸಗಿ ಬದುಕಲ್ಲಿ ಅಪಾರ ಕಷ್ಟ ಸಂಕಷ್ಟ ಅನುಭವಿಸಿದರೂ ಖುದ್ದೂಸ್ ಅವರು ಹೊಸ ತಲೆಮಾರಿನ ಮುಸ್ಲಿಮರನ್ನು ಬೆಳೆಸುವಲ್ಲಿ ಕೊಡುಗೆ ನೀಡಿದ್ದಾರೆ.

ಅರ್ಪಣಾ ಮನೋಭಾವದ ಕಲಾವಿದರಾದ ಖುದ್ದೂಸ್ ‘ಪೀರ್ಲ ಪಂಡ್’ (ಮುಹರ್ರಂ ಸಂದರ್ಭದ ಜಾನಪದ ಪ್ರಸ್ತುತಿ)ಯಲ್ಲಿ ಹಿಂದೂ- ಮುಸ್ಲಿಮ್ ಎರಡೂ ಕೋಮಿನ ಯುವಕರನ್ನು ತರಬೇತುಗೊಳಿಸಿದ್ದಾರೆ.

ಈ ಪ್ರದರ್ಶನವು ಕರ್ಬಲದ ಕಾಳಗದಲ್ಲಿ ಇಮಾಮ್ ಹುಸೇನ್ ಅವರ ಬಲಿದಾನವನ್ನು ಸ್ಮರಿಸುತ್ತದೆ.

ಮುಹರ್ರಂ ಹಾಡುಗಳ ಕಲಾವಿದರಾಗಿ ಖುದ್ದೂಸ್ ಸಾಹೇಬರು ಅಂದಿನ ಹೈದರಾಬಾದ್ ರಾಜ್ಯದ ಮತ್ತು ಇಂದಿನ ತೆಲಂಗಾಣದ ವಿವಿಧ ಪ್ರದೇಶಗಳನ್ನು ಸುತ್ತಿದ್ದಾರೆ. ಈ ಪ್ರದರ್ಶನವನ್ನು ನಿಲ್ಲಿಸಿ ಬಿಡಬೇಕಾದ ಭಯ ಹುಟ್ಟಿ, ಅವರು ಹೊಸ ತಲೆಮಾರಿಗೆ ಈ ಕಲೆಯ ತರಬೇತಿ ನೀಡಿದರು. ಹತ್ತು ಹನ್ನೆರಡು ಯುವಕರಿಗಾದರೂ ತರಬೇತಿ ನೀಡಬೇಕೆಂಬ ಹಂಬಲ ಹೊತ್ತ ಖುದ್ದೂಸ್ ಸಾಹೇಬರಿಗೆ ಈ ಕಾರಣದಿಂದಲೇ ಹೊಸ ತಲೆಮಾರಿನ ಹಿಂದೂ- ಮುಸ್ಲಿಮರ ಜೊತೆ ಒಡನಾಟ ಹುಟ್ಟಿತು.

‘‘ಇಪ್ಪತ್ತಕ್ಕೂ ಹೆಚ್ಚು ಯುವಕರನ್ನು ತರಬೇತುಗೊಳಿಸಿದ ಹೆಮ್ಮೆ ನನಗಿದೆ. ಈ ಹುಡುಗರನ್ನು ತಯಾರು ಮಾಡಿದ ಕಾಲಕ್ಕೆ, ಈ ಭಾಜಪದ ಕೇಸರಿ/ ಹಿಂದುತ್ವದ ಅಲೆ ಬಂದಿತು. ಯುವ ಮುಸ್ಲಿಮರಿಗೂ ಮುಸ್ಲಿಮರ ಕುರಿತಾದ ಆಚರಣೆಗಳಲ್ಲಿ ಭಾಗವಹಿಸುವ ಧೈರ್ಯ ಬರಲಿಲ್ಲ. ಇದಾದ ಬಳಿಕ ಇನ್ನೊಂದು ಹಂತದ ದ್ವೇಷದ ಅಲೆ ನಾನು ನೋಡಿದೆ. ಭಾರತದ ಮುಸ್ಲಿಮರಿಗೆ ಈಗ ಪ್ರತಿದಿನವೂ ಕರ್ಬಲವೇ. ಕೇವಲ ರಾಜಕೀಯ ಕಾರಣಗಳಿಗೆ ಮುಸ್ಲಿಮರ ಹತ್ಯೆಯಾಗುತ್ತಿದೆ’’

ಹಿಂದುತ್ವದ ನೆರಳಿನಲ್ಲಿ ಮುಸ್ಲಿಮರ ಪಾಡನ್ನು ಕರ್ಬಲಕ್ಕೆ ಖುದ್ದೂಸ್ ಒಬ್ಬರೇ ಹೋಲಿಸಿದ್ದಲ್ಲ. ಹಲವಾರು ರಾಜಕೀಯ ಕಾರ್ಯಕರ್ತರು, ಸಂಧಾನಕಾರರು ಕೂಡಾ ಇದೇ ರೂಪಕಗಳ ಪರಿಭಾಷೆಯಲ್ಲಿ ಮಾತಾಡಿದ್ದರು.

ಅಂಗನಾ ಚಟರ್ಜಿ ಅವರಂಥ ರಾಜಕೀಯ ವಿಜ್ಞಾನಿಗಳು, ‘‘ಸಹಜೀಕರಣಗೊಳಿಸಿದ ಬಹುಸಂಖ್ಯಾತ ಯಜಮಾನಿಕೆ ಮತ್ತು ಮುಸ್ಲಿಮರ ಕುರಿತಾದ ಆಗ್ರಹದ ಕಾಲ ಇದು’’ ಎನ್ನುತ್ತಾರೆ.

ನಮ್ಮ ಹಲವಾರು ಮಾತುಕತೆಗಳಲ್ಲಿ ಖುದ್ದೂಸ್ ಅವರು ಡಿಸೆಂಬರ್ 6, 1992ರಲ್ಲಿ ನಡೆದ ಬಾಬರಿಮಸೀದಿ ಧ್ವಂಸದ ಬಗ್ಗೆ ಉಲ್ಲೇಖಿಸಿದರು. ಅವರ ಪ್ರಕಾರ,

‘‘ಅದು ಇನ್ನೊಂದು ಪೊಲೀಸ್ ಕಾರ್ಯಾಚರಣೆ. ಧರ್ಮ ಮತ್ತು ಸರಕಾರದ ರಾಜಕಾರಣಗಳೆರಡೂ ಕೈ ಜೋಡಿಸಿ ಮುಸ್ಲಿಮ್ ಸಮುದಾಯವನ್ನು ನಾಶಮಾಡಲು ನಡೆಸಿದ ಕಾರ್ಯಾಚರಣೆ. ಇದು ಕೇವಲ ಮಸೀದಿಯ ಧ್ವಂಸವಲ್ಲ, ಇದು ಮುಸ್ಲಿಮರ ಮೇಲೆ ನಡೆದ ನೇರ ಆಕ್ರಮಣ. ಪೊಲೀಸ್ ಕಾರ್ಯಾಚರಣೆಯ ಪ್ರತ್ಯಕ್ಷ ದರ್ಶಿಯಾಗಿದ್ದ ನನಗೆ ಇದು ಇನ್ನೊಂದು ಅಗ್ನಿಪರೀಕ್ಷೆ ಅನ್ನಿಸಿದೆ. ಮುಸ್ಲಿಮರಿಗಷ್ಟೇ ಅಲ್ಲ; ಹಿಂದೂಗಳಿಗೂ.

ನಾವೀಗ 20ನೇ ಶತಮಾನದ ಅಂತ್ಯದಲ್ಲಿದ್ದೇವೆ. ಗುಜರಾತಿನಲ್ಲಿ ನಡೆದ ಮುಸ್ಲಿಮರ ಹತ್ಯೆಯ ಬಗ್ಗೆ ನನಗೀಗ ಸುದ್ದಿಗಳು ಬರುತ್ತಿದೆ.’’

ಅಡ್ವಾಣಿಯವರ ಕರೆಗೆ ಪ್ರತಿಕ್ರಿಯೆಯಾಗಿ ಕೆಲವು ಮುಸ್ಲಿಮ್ ಆಕ್ಟಿವಿಸ್ಟರು ಪೊಲೀಸ್ ಕಾರ್ಯಾಚರಣೆಯ ಸಮಯದಲ್ಲಿ ಮುಸ್ಲಿಮರು ಅನುಭವಿಸಿದ ಹಿಂಸೆಯನ್ನು ಚರ್ಚಿಸಿದರು. ಭಾರತ ಸರಕಾರದ ಪೊಲೀಸ್ ಕಾರ್ಯಾಚರಣೆಯ ‘ಆತುರದ’ ತೀರ್ಮಾನ ತಂದ ದುರಂತಗಳ ಬಗ್ಗೆ ಅವರ ಕಾಳಜಿಯಿತ್ತು. ಸೆಪ್ಟಂಬರ್ 13ರಿಂದ 17ರ ವರೆಗೆ ನಡೆದ ಈ ಐದು ದಿನಗಳ ಕಾರ್ಯಾಚರಣೆ ಹಿಂದುತ್ವದ ಆರಂಭದ ಹಂತವೆಂದು ಕೆಲವರು ಚರ್ಚಿಸುತ್ತಿದ್ದಾರೆ.

(ಅಫ್ಸರ್ ಮುಹಮ್ಮದ್ ಭಾರತದಲ್ಲಿ ಹಿಂದೂ- ಮುಸ್ಲಿಮ್ ಅನುಸಂಧಾನದ ಮೇಲೆ ಅಧ್ಯಯನ ನಡೆಸುತ್ತಿರುವ ಪ್ರಶಸ್ತಿ ವಿಜೇತ ಅಂತರ್ರಾಷ್ಟ್ರೀಯ ಖ್ಯಾತಿಯ ಸ್ಕಾಲರ್. ಅಫ್ಸರ್ ಅವರು ಫಿಲಡೆಲ್ಫಿಯಾದ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ ದಲ್ಲಿ ಬೋಧಕರಾಗಿ ಕೆಲಸ ಮಾಡುತ್ತಿದ್ದಾರೆ.)

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!