ಹೀಗೆ ತಿಪ್ಪರಲಾಗ ಹಾಕಿದರೂ ಅದು ‘ನೀಟ್’ ಆಗಲು ಸಾಧ್ಯವಿಲ್ಲ

Update: 2024-06-29 10:42 GMT

ಇರೋದು ಒಂದು ಮೀಟರ್ ಬಟ್ಟೆ. ಹತ್ತು ಅಂಗಿ ಹೊಲಿಯಬೇಕು. ಅದನ್ನು ಯಾವ ಸ್ಟೈಲಿನಲ್ಲಿ ಹೊಲಿಯಬೇಕು ಎಂಬ ಚರ್ಚೆಯಷ್ಟೇ ಅರ್ಥಪೂರ್ಣ - ಈಗ ನೀಟ್ ಸುಧಾರಣೆಯ ಬಗ್ಗೆ ನಡೆಯುತ್ತಿರುವ ಚರ್ಚೆ. ಕಡೆಗೂ ಅಂಗಿ ಹೊಲಿಯಲು ಸಾಧ್ಯವಾಗುವುದು, ಅಬ್ಬಬ್ಬಾ ಎಂದರೆ ಹತ್ತು ಕೈ ಬೆರಳುಗಳಿಗೇ ಹೊರತು ಹತ್ತು ದೇಹಗಳಿಗಲ್ಲ!

ಕರ್ನಾಟಕದಲ್ಲಿರುವ 58 ವೈದ್ಯಕೀಯ ಕಾಲೇಜುಗಳಲ್ಲಿ, 23-24ನೇ ಸಾಲಿಗೆ ಲಭ್ಯವಿದ್ದದ್ದು 11,595 ಸೀಟುಗಳು. ಆ ಸೀಟುಗಳಿಗಾಗಿ ಕರ್ನಾಟಕದಿಂದ ನೀಟ್ ಪರೀಕ್ಷೆಗೆ ಅರ್ಜಿ ಹಾಕಿದವರು 1,55,148 ಮಂದಿ. ಅವರಲ್ಲಿ, 1,50,171 ಮಂದಿ ಪರೀಕ್ಷೆಗೆ ಹಾಜರಾಗಿ, ಕೊನೆಗೆ, 89,088 ಮಂದಿ ವೈದ್ಯಕೀಯ ಸೀಟಿಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅಂದರೆ ಈ ವರ್ಷ ಒಂದು ಮೆಡಿಕಲ್ ಸೀಟಿಗೆ 13 ಮಂದಿ ಆಸಕ್ತರು; ಎಂಟು ಮಂದಿ ಸ್ಪರ್ಧಾಳುಗಳು! ಇಡಿಯ ಭಾರತವನ್ನು ಪರಿಗಣನೆಗೆ ತೆಗೆದುಕೊಂಡರೂ ಸ್ಥಿತಿ ಇದೇ ರೀತಿ ಇದೆ.

ಕೋಷ್ಠಕದಲ್ಲಿ ಕೊಟ್ಟಿರುವ ಅಂಕಿ-ಅಂಶ ಗಳಲ್ಲಿರುವ ಸರಕಾರಿ ಸೀಟುಗಳಲ್ಲಿ, 313 ವಿಶೇಷ ಕೆಟಗರಿಯವರಿಗೆ (ಸೇನೆ, ಕ್ರೀಡೆ, ಎನ್‌ಸಿಸಿ ಇತ್ಯಾದಿ) ಮೀಸಲಾದರೆ, 963 ಸೀಟುಗಳು ಹೈದರಾಬಾದ್ ಕರ್ನಾಟಕಕ್ಕೆ ಮೀಸಲು. ಉಳಿದ 3,704 ಮೆರಿಟ್ ಸೀಟುಗಳು ಮೀಸಲಾತಿಯ ನಿಯಮಗಳಿಗೆ, ಭಾಷೆ ಮತ್ತು ಧರ್ಮ ಆಧರಿತ ಅಲ್ಪಸಂಖ್ಯಾತರ ಕಾಲೇಜುಗಳಲ್ಲಿರುವ ನಿಯಮಗಳಿಗೆ ಅನುಗುಣವಾಗಿ ಹಂಚಿಕೆ ಆಗಬೇಕಾಗುತ್ತವೆ. ಇವುಗಳಲ್ಲಿ ಅಸಹಜತೆಯೇನಿಲ್ಲ.

ಗಮನಿಸಬೇಕಾದ ಸಂಗತಿ ಎಂದರೆ, ರಾಜ್ಯದಲ್ಲಿ ಕೇವಲ 4,982 ಸೀಟುಗಳು ಸರಕಾರಿ ಮೆರಿಟ್ ಸೀಟುಗಳು. ಅವಕ್ಕೆ ಸೇರ್ಪಡೆಯಾದಾಗ, ವಿದ್ಯಾರ್ಥಿಗಳಿಗೆ ವಾರ್ಷಿಕ 4-5ಲಕ್ಷ ರೂ. ವೆಚ್ಚ ಬರುತ್ತದೆ. ಬಡ ಆಸಕ್ತ ವಿದ್ಯಾರ್ಥಿಗಳಿಗೆ ಆಯ್ಕೆಯ ಬಾಗಿಲು ಈ ಹಂತದಲ್ಲೇ ಮುಚ್ಚಿರುತ್ತದೆ.

ಉಳಿದ ಖಾಸಗಿ ಕಾಲೇಜಿನ ಸೀಟುಗಳು, ವರ್ಷಕ್ಕೆ 10-20 ಲಕ್ಷ ರೂ. ಬೆಲೆ ಬಾಳುತ್ತವೆ; ಡೀಮ್ಡ್ ಕಾಲೇಜಿನ ಸೀಟುಗಳು, ವಾರ್ಷಿಕ ಅಂದಾಜು 25-30 ಲಕ್ಷ ರೂ. ಬೆಲೆಬಾಳುತ್ತವೆ; ಮತ್ತು ಎನ್‌ಆರ್‌ಐ-ಪಾವತಿ ಕೋಟಾದ ಸೀಟುಗಳು, ವಾರ್ಷಿಕ 40 ಲಕ್ಷ ರೂ.ಕ್ಕಿಂತ ಹೆಚ್ಚಿನ ಬೆಲೆ ಹೊಂದಿರುತ್ತವೆ. ಇದರ ಅರ್ಥ, ಪ್ರತೀ ವರ್ಷ ರಾಜ್ಯದ 11,595 ವೈದ್ಯಕೀಯ ಸೀಟುಗಳಲ್ಲಿ 6,613 ಸೀಟುಗಳು (ಶೇ. 57) ಶ್ರೀಮಂತ ವರ್ಗಗಳಿಗೆ ಮೀಸಲಾಗಿರುತ್ತವೆ.

ವಾಸ್ತವ ಹೀಗಿರುವಾಗ, ನೀಟ್ ಪರೀಕ್ಷೆಯಲ್ಲಿ ಯಾವುದೇ ಸುಧಾರಣೆ ಅಥವಾ ನೀಟ್ ವ್ಯವಸ್ಥೆಯ ರದ್ದತಿಯಿಂದ ಅರ್ಹ, ಆಸಕ್ತ ಬಡ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದಲ್ಲಿ ಒಳಗೊಳ್ಳುವುದು ಸಾಧ್ಯವಾಗುವುದಿಲ್ಲ. ಒಂದು ಸೀಟಿಗೆ ಎಂಟಕ್ಕಿಂತ ಹೆಚ್ಚು ಜನ ಸ್ಪರ್ಧಿಸುವ ಸ್ಥಿತಿ ಬದಲಾಗುವುದಿಲ್ಲ. ಇದು ರಾಜ್ಯಕ್ಕೆ ಮಾತ್ರವಲ್ಲ, ದೇಶಕ್ಕೇ ಸತ್ಯ. ಹಾಗಾದರೆ ಪರಿಹಾರ ಏನು?


 



ಪರಿಹಾರ ಸಾಧ್ಯತೆಗಳು

ವೈದ್ಯಕೀಯ ಶಿಕ್ಷಣದ ಸಮಸ್ಯೆಗಳಿಗೆ ನೀತ್ಯಾತ್ಮಕವಾದ ಬದಲಾವಣೆಗಳಾಗದೆ ಪರಿಹಾರ ಸಾಧ್ಯವಿಲ್ಲ. ನೀಟ್ ವ್ಯವಸ್ಥೆ ಸುಧಾರಣೆ, ರದ್ದತಿಗಳೆಲ್ಲವೂ ಮೇಲ್ಪದರದ ತೇಪೆಗಳೇ ಹೊರತು, ಸಮಸ್ಯೆಯನ್ನು ಪರಿಹರಿಸಲಾರವು. ಅಂತಹ ಕೆಲವು ಪರಿಹಾರ ಸಾಧ್ಯತೆಗಳು ಇಲ್ಲಿವೆ:

1. ಭಾರತ ಸರಕಾರವು ದೇಶದ ಪ್ರತಿಯೊಂದು ಜಿಲ್ಲಾ ಮಟ್ಟದ ಸರಕಾರಿ ಆಸ್ಪತ್ರೆಗಳನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಾಗಿ ಪರಿವರ್ತಿಸಿ, ಮೇಲ್ದರ್ಜೆಗೆ ಏರಿಸುವ ಬಯಕೆ ಹೊಂದಿದೆ. ದುರದೃಷ್ಟವಶಾತ್, ಇದನ್ನವರು ಪಬ್ಲಿಕ್ ಪ್ರೈವೇಟ್ ಪಾಲುದಾರಿಕೆಯಲ್ಲಿ (ಪಿಪಿಪಿ) ಮಾಡಿಸಲು ಹೊರಟಿದ್ದಾರೆ. ಹಾಗಾದಾಗ, ಸರಕಾರದ ಕೈಯಲ್ಲಿರುವ ಜಿಲ್ಲಾಸ್ಪತ್ರೆಗಳ ಮೂಲಸೌಕರ್ಯ ಖಾಸಗಿಯವರ ಪಾಲಾಗಲಿದೆಯೇ ಹೊರತು, ಬಡ ವಿದ್ಯಾರ್ಥಿಗಳಿಗೆ ಇದರಿಂದ ಲಾಭವಿಲ್ಲ. ಹಾಗಾಗಿ, ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಜಿಲ್ಲಾಸ್ಪತ್ರೆ ಶುದ್ಧ ಸರಕಾರಿ ವೈದ್ಯಕೀಯ ಕಾಲೇಜು ಆಗುವಂತೆ ರಾಜ್ಯ ಸರಕಾರ ನೀತ್ಯಾತ್ಮಕ ನಿರ್ಧಾರ ಕೈಗೊಳ್ಳಬೇಕು.

2. ವೈದ್ಯಕೀಯ ಶಿಕ್ಷಣಕ್ಕೆ ಸದ್ಯ ಉಂಟಾಗಿರುವ ಒತ್ತಡ, ಬೇಡಿಕೆಯ ಬಾಟಲ್‌ನೆಕ್ ಸ್ಥಿತಿ ಸುಧಾರಿಸಬೇಕೆಂದರೆ, ಕನಿಷ್ಠ ಇನ್ನೂ 100 ಹೆಚ್ಚುವರಿ ವೈದ್ಯಕೀಯ ಕಾಲೇಜುಗಳು (ತಲಾ 250 ಸೀಟುಗಳೆಂದರೆ 25,000 ಸೀಟುಗಳು) ಬೇಕಾಗಬಹುದು. ಆಗ ಒಂದು ಸೀಟಿಗೆ 2-3 ಮಂದಿ ಸ್ಪರ್ಧಿಸುವ ಸ್ಥಿತಿ ಬರುತ್ತದೆ. ಅದು ಸಹನೀಯ. ಇಂತಹದೊಂದು ಸನ್ನಿವೇಶಕ್ಕೆ, ಪ್ರತೀ ಕಾಲೇಜು ಸ್ಥಾಪನೆಗೆ ಬೇಕಾಗುವ ತಲಾ 300-400ಕೋಟಿ ರೂ.ಗಳ ಆರ್ಥಿಕ ಸಂಪನ್ಮೂಲವನ್ನು ವ್ಯಯ ಮಾಡಿದ ಬಳಿಕವೂ, ಶಿಕ್ಷಕ ವೃಂದ, ಬೇರೆ ಮೂಲಸೌಕರ್ಯಗಳನ್ನೆಲ್ಲ ಒದಗಿಸಲು ಹರಸಾಹಸ ಮಾಡಬೇಕಾಗುತ್ತದೆ. ಇದೆಲ್ಲ ಎಷ್ಟರ ಮಟ್ಟಿಗೆ ಕಾರ್ಯಸಾಧ್ಯ?

3. ವೈದ್ಯಕೀಯ ಶಿಕ್ಷಣಕ್ಕೆ ಉಂಟಾಗಿರುವ ಒತ್ತಡದಲ್ಲಿ ಬಲುದೊಡ್ಡ ಪಾಲು 4-5 ವರ್ಷಗಳ ಕಾಲ ಎಡೆ ಬಿಡದೆ ಮರಳಿ ಯತ್ನವ ಮಾಡುವ ವಿದ್ಯಾರ್ಥಿಗಳದು. ಪ್ರತೀ ವರ್ಷ ದೇಶದಲ್ಲಿ ಲಕ್ಷಗಳ ಪ್ರಮಾಣದಲ್ಲಿ ಅವರ ಸಂಖ್ಯೆ ಹೆಚ್ಚುತ್ತಿದೆ. 4-5 ವರ್ಷ ನೀಟ್ ಬರೆಯಲು ತರಬೇತಿ ಪಡೆದಿರುವ ಈ ಹಳಬರ ಎದುರು ಸ್ಪರ್ಧಿಸಲು, ಹೊಸದಾಗಿ ಪಿಯುಸಿ ಮುಗಿಸಿದ ಮಕ್ಕಳು ಹೆಣಗಾಡಬೇಕಾಗುತ್ತದೆ. ಅವರ ಸ್ಪರ್ಧೆಯ ಪ್ರಮಾಣವನ್ನು ಸೀಮಿತಗೊಳಿಸಲು ನೀತ್ಯಾತ್ಮಕ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ, ಈ ಸನ್ನಿವೇಶ ಇನ್ನಷ್ಟು ಹದಗೆಡಲಿದೆ.

4. ನೀಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಯು 3 ಗಂಟೆ 20 ನಿಮಿಷಗಳಲ್ಲಿ, 720 ಅಂಕಗಳಿಗೆ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರಗಳ ಒಟ್ಟು 180 (200ರಲ್ಲಿ) ಪ್ರಶ್ನೆಗಳನ್ನು ಉತ್ತರಿಸಬೇಕಿರುತ್ತದೆ. ಸರಿ ಉತ್ತರಕ್ಕೆ 4 ಅಂಕವಾದರೆ, ತಪ್ಪು ಉತ್ತರಕ್ಕೆ 1 ಅಂಕ ಕಡಿತ. ವೇಗ ಮತ್ತು ಜ್ಞಾಪಕಶಕ್ತಿಗಳನ್ನೇ ಆಧರಿಸಿದ, ಈ MCQ ಮಾದರಿಯ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲ ಕಲಿಸುವುದಕ್ಕಾಗಿಯೇ ಹುಟ್ಟಿಕೊಂಡಿರುವ ನೀಟ್ ಕೋಚಿಂಗ್ ತರಗತಿಗಳೆಂಬ ‘ಕೋಟಾ ಫ್ಯಾಕ್ಟರಿಗಳು’ ವಿದ್ಯಾರ್ಥಿಗಳ ದೈಹಿಕ-ಮಾನಸಿಕ ಸ್ವಾಸ್ಥ್ಯಕ್ಕೆ ಎರವಾಗಿ, ಜೀವ ತಿನ್ನುತ್ತಿವೆ. ಈ ವ್ಯವಸ್ಥೆ ರದ್ದಾಗಲೇಬೇಕು.

5. ಸಾಧ್ಯವಾದಷ್ಟೂ ಜನರನ್ನು ಸ್ಪರ್ಧೆಯಿಂದ ಹೊರತಳ್ಳುವುದೇ ಉದ್ದೇಶ ಆಗಿರುವ ನೀಟ್ ಪರೀಕ್ಷೆಯು ಒಬ್ಬ ವಿದ್ಯಾರ್ಥಿಯ ವೈದ್ಯಕೀಯ ಅರಿವು, ಆಸಕ್ತಿ, ಕೌಶಲ, ಸಹನೆ, ಜ್ಞಾನ ಇತ್ಯಾದಿಗಳತ್ತ ಕಿಂಚಿತ್ತೂ ಗಮನ ಹರಿಸುವುದಿಲ್ಲ. ವೈದ್ಯಕೀಯ ಪ್ರವೇಶ ಪರೀಕ್ಷೆಗಳೇನಾದರೂ ಸುಧಾರಣೆಯಾಗುವುದಿದ್ದರೆ, ಅದು ಆ ವಿದ್ಯಾರ್ಥಿ ಮುಂದೆ ವೈದ್ಯನಾ/ಳಾಗಲು ಅಗತ್ಯವಿರುವ ಬೌದ್ಧಿಕ-ದೈಹಿಕ ಕೌಶಲಗಳನ್ನು ಹೊಂದಿರುವರೇ ಎಂಬುದನ್ನು ಪರೀಕ್ಷಿಸಿ ಆಯ್ಕೆ ಮಾಡುವ ವಿಧಾನಗಳನ್ನು ಅನುಸರಿಸಬೇಕು. ಅದಕ್ಕೆ ಅಗತ್ಯವಿದ್ದರೆ ಹೊಸ ಹಾದಿಗಳನ್ನು ಕಂಡುಕೊಳ್ಳಬೇಕು.

6. ರಾಜಕಾರಣಿಗಳೇ ಹೆಚ್ಚಿನ ಖಾಸಗಿ ವೈದ್ಯಕೀಯ ಕಾಲೇಜುಗಳ ಮಾಲಕರೂ ಆಗಿರುವ ಕಾರಣಕ್ಕೆ, ನೀತ್ಯಾತ್ಮಕ ನಿರ್ಧಾರಗಳ ವೇಳೆ ಹಲವು ಬಾರಿ, ಹಿತಾಸಕ್ತಿ ಸಂಘರ್ಷಗಳು ವೈದ್ಯಕೀಯ ಶಿಕ್ಷಣದ ಹಾದಿ ತಪ್ಪಿಸಿವೆ. ಮೀಸಲಾತಿಯಂತಹ ಸವಲತ್ತುಗಳ ಹೊರತಾಗಿಯೂ ವೈದ್ಯಕೀಯ ಶಿಕ್ಷಣಕ್ಕೆ ಎಲ್ಲರನ್ನೂ ಒಳಗೊಳ್ಳುವುದು ಸಾಧ್ಯವಾಗಿಲ್ಲ; ಅರ್ಹರು ವೈದ್ಯಕೀಯ ಕ್ಷೇತ್ರ ಪ್ರವೇಶಿಸದಿರುವುದು ಈಗಾಗಲೇ ತನ್ನ ಪರಿಣಾಮಗಳನ್ನು ಸಾಮಾಜಿಕವಾಗಿ ಬೀರಲಾರಂಭಿಸಿದೆ.

ಈ ಎಲ್ಲ ಮೂಲಭೂತ ಸಂಗತಿಗಳನ್ನು ಕಾರ್ಪೆಟ್ ಅಡಿ ತೂರಿ, ಕೇವಲ ನೀಟ್ ಸುಧಾರಣೆ/ರದ್ದತಿ ಬಗ್ಗೆ ಚರ್ಚೆ ಮಾಡಿದರೆ, ಅದು ಖಾಸಗಿ ವೈದ್ಯಕೀಯ ಕಾಲೇಜು ಲಾಬಿಗಳು ಹರಡಿರುವ ಬಲೆಗೆ ಎಲ್ಲರೂ ಒಟ್ಟಾಗಿ ಬಿದ್ದಂತೆಯೇ ಸರಿ.

Writer - ವಾರ್ತಾಭಾರತಿ

contributor

Editor - Ismail

contributor

Byline - ರಾಜಾರಾಮ್ ತಲ್ಲೂರ್

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!