ಪೇಟಿಎಂ ಎಂಬ ‘ಮೆರೆಬೊಂಬೆ’

Update: 2024-02-12 10:10 GMT
Editor : Ismail | Byline : ಟಿ.ಆರ್.ಭಟ್

 

ಸೈಬರ್ ಕ್ರೈಂಗಳು, ಅಂತರ್ಜಾಲದ ಮೂಲಕ ವಂಚನೆಗಳು, ಅಮಾಯಕರನ್ನು ಹೊಸ ಹೊಸ ಮೊಬೈಲು ಆ್ಯಪ್ಗಳ ಮೂಲಕ ವಂಚಿಸುವ ಘಟನೆಗಳು ನಿರಂತರವಾಗಿ ನಡೆಯುವ ಕಾಲಾವಧಿಯಲ್ಲಿ ಪೇಟಿಎಂ ಕಂಪೆನಿಯ ಬೆಳವಣಿಗೆ ಜನರ ವಿಶ್ವಾಸಕ್ಕೆ ಹೊಡೆತ ನೀಡುವ ಸಾಧ್ಯತೆಯು ನಿಚ್ಚಳ. ಕಾರಣಕ್ಕಾಗಿ ಸರಕಾರವು ಎಚ್ಚರಿಕೆಯಿಂದ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು. ಪೇಟಿಎಂ ಬ್ಯಾಂಕಿನ ಕುರಿತಾಗಿ ಆರ್ಬಿಐ ಕೈಕೊಂಡ ಕ್ರಮಗಳು ಅತ್ಯಂತ ಪ್ರಬುದ್ಧ ಮತ್ತು ಸಹಜ ನ್ಯಾಯಕ್ಕೆ ಅನುಗುಣವಾಗಿಯೇ ಇದೆ. ಹಾಗಾಗಿ ಆರ್ಬಿಐಯ ಕಾರ್ಯದಲ್ಲಿ ಸರಕಾರ ಹಸ್ತಕ್ಷೇಪ ನಡೆಸಬಾರದು.

 

ಜನವರಿ 31ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ), ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949 ಸೆ.35ಎ (Banking Regulation Act 1949, Section 35A)ಯಲ್ಲಿ ತನಗೆ ಹೊಂದಿರುವ ಅಧಿಕಾರವನ್ನು ಉಪಯೋಗಿಸಿ, ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನ (Paytm Payments Bank)ವ್ಯವಹಾರದ ಮೇಲೆ ವಿಭಿನ್ನ ನಿರ್ಬಂಧಗಳನ್ನು ಹೇರಿದೆ. ನಿರ್ದೇಶನದಂತೆ ಫೆಬ್ರವರಿ 29ರ ನಂತರ ಅದು ಯಾವುದೇ ಖಾತೆಗಳಲ್ಲಿ ಹೊಸ ಠೇವಣಿಯನ್ನು ಸ್ವೀಕರಿಸುವಂತಿಲ್ಲ, ಸಾಲಕ್ಕೆ ಸಂಬಂಧಿಸಿದ ವ್ಯವಹಾರವನ್ನು ಮಾಡುವಂತಿಲ್ಲ,
ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುವ ಹಾಗೂ ವರ್ಗಾಯಿಸುವ ಕೆಲಸವನ್ನು ಮುಂದುವರಿಸುವಂತಿಲ್ಲ. ಗ್ರಾಹಕರು ತಮ್ಮ  ಖಾತೆಗಳಿಂದ ಠೇವಣಿಗಳನ್ನು ಶರತ್ತುಗಳಿಗನುಗುಣವಾಗಿ ಹಿಂಪಡೆಯಬಹುದು.

ಬೆಳವಣಿಗೆಯು ಹಣಕಾಸು ರಂಗದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಹುಟ್ಟುತ್ತಿರುವ ಹೊಸ ತಂತ್ರಜ್ಞಾನ ಆಧಾರಿತ ಪಾವತಿ ಸಂಸ್ಥೆಗಳ ವ್ಯವಹಾರದ ಬಗ್ಗೆ  ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತದೆ. ಮಾತ್ರವಲ್ಲ ನಗದುರಹಿತ ಅರ್ಥವ್ಯವಸ್ಥೆಯಲ್ಲಿ ಆಗಬಹುದಾದ ಅವ್ಯವಹಾರಗಳ ಬಗ್ಗೆ ಕ್ಷಕಿರಣವನ್ನು ಬೀರುತ್ತದೆ.

 

  ಫಿನ್ಟೆಕ್ ಉದ್ದಿಮೆ:

2014-15ರ ಕೇಂದ್ರ ಸರಕಾರದ ಮುಂಗಡಪತ್ರವನ್ನು ಮಂಡಿಸುವಾಗ  ಅಂದಿನ ಹಣಕಾಸು ಮಂತ್ರಿ ಅರುಣ್ ಜೇಟ್ಲಿಯವರು ಬಹುತೇಕವಾಗಿ ತಂತ್ರಜ್ಞಾನದ ಮೂಲಕವೇ ವ್ಯವಹರಿಸುವ ಹೊಸ ಪೀಳಿಗೆಯ ಹಣಕಾಸು ಸೇವಾ ಸಂಸ್ಥೆಗಳನ್ನು ಆರಂಭಿಸುವ ಉದ್ದೇಶವನ್ನು ತಮ್ಮ ಭಾಷಣದಲ್ಲಿ ತಿಳಿಸಿದ್ದರು. ಇವಕ್ಕೆ ಮೂರು ಉದಾಹರಣೆಗಳುಸಣ್ಣ ಹಣಕಾಸು ಬ್ಯಾಂಕುಗಳು (Small Finance Banks), ಸ್ಥಳೀಯ ಬ್ಯಾಂಕುಗಳು (Local Banks)ಮತ್ತು ಪಾವತಿ ಬ್ಯಾಂಕುಗಳು  (Payments Banks).

ಹಣಕಾಸು ಸೇವಾ ಸಂಸ್ಥೆಗಳು ತಂತ್ರಜ್ಞಾನವನ್ನು ತಮ್ಮ ಬಂಡವಾಳವಾಗಿರಿಸಿ ವ್ಯವಹರಿಸುವುದರಿಂದ ಅವುಗಳಿಗೆ ಫಿನ್ಟೆಕ್ (Financial Technology-FinTech) ಕಂಪೆನಿಗಳೆಂದು ಹೆಸರು. ಫಿನ್ಟೆಕ್ ಕಂಪೆನಿಗಳ ವ್ಯವಹಾರವು ಅಂತರ್ಜಾಲಕ್ಕೆ ಅಳವಡಿಸಲ್ಪಟ್ಟ ಮೊಬೈಲು/ಕಂಪ್ಯೂಟರುಗಳ ಮೂಲಕವೇ ನಡೆಯುತ್ತದೆ; ಸಾಂಪ್ರದಾಯಿಕ ಹಣಕಾಸು ಸಂಸ್ಥೆಯಂತೆ ಅವುಗಳಿಗೆ ಶಾಖೆಗಳು, ಭೌತಿಕ ದಾಖಲೆ ಪತ್ರಗಳು, ನಗದು ವಹಿವಾಟು ಇರುವುದಿಲ್ಲ. ಗ್ರಾಹಕರ ಮಾಹಿತಿಯನ್ನು ತನ್ನ ಪ್ರತಿನಿಧಿಗಳ ಮೂಲಕ ಸಂಗ್ರಹಿಸಿ ಅವೆಲ್ಲವನ್ನೂ ಸಂಸ್ಥೆಯು ತನ್ನ ಕೇಂದ್ರೀಕೃತ ಗಣಕಯಂತ್ರಗಳಲ್ಲಿ ದಾಖಲಿಸಿಕೊಂಡು, ಗ್ರಾಹಕರಿಗೆ ತನ್ನ ಮೊಬೈಲ್ ಆ್ಯಪ್ನ್ನು ಉಪಯೋಗಿಸಲು ಪರವಾನಿಗೆ ಕೊಡುತ್ತದೆ ವ್ಯವಸ್ಥೆಯಲ್ಲಿ ಗ್ರಾಹಕನಿಗೂ ಹಣಕಾಸು ಸಂಸ್ಥೆಯ ಸಿಬ್ಬಂದಿಗೂ ಯಾವುದೇ ನೇರ ರೀತಿಯ ವ್ಯಕ್ತಿಗತ ಸಂಪರ್ಕಕ್ಕೆ ಅವಕಾಶವಿಲ್ಲ. ಅಂತಹ ಒಂದು ಕಂಪೆನಿಯೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕು (ಪೇಟಿಎಂ).

 




 


  ಪೇಟಿಎಂ ಬ್ಯಾಂಕಿನ ಹುಟ್ಟು ಮತ್ತು ಬೆಳವಣಿಗೆ:

ಕಂಪೆನಿಯನ್ನು 2009ರಲ್ಲಿ ಸ್ಥಾಪಿಸಲಾಗಿತ್ತು. ಇದರ ಸ್ಥಾಪಕರು ವಿಜಯ ಶೇಖರ ಶರ್ಮ. ಕಂಪೆನಿಯ ಮೂಲ ಹೆಸರು ವನ್ 97 ಕಮ್ಯುನಿಕೇಶನ್ಸ್ (One97 Communications). ಆಗ ದೇಶದಾದ್ಯಂತ ಬಿಎಸ್ಎನ್ನೆಲ್ ಸಹಾಯವಾಣಿ ಸಂಖ್ಯೆ 197 ಜನಪ್ರಿಯವಾಗಿತ್ತು ಎಂಬ ವಿಷಯವು ಇಲ್ಲಿ ಸಾಂದರ್ಭಿಕಪೇಟಿಎಂನ ವ್ಯವಹಾರವು ಮೊಬೈಲು ಫೋನುಗಳಿಗೆ ಮುನ್ನಾಗಿ ಹಣವನ್ನು ತುಂಬಿಸಿಕೊಡುವ ಮತ್ತು ಮನೆಗಳಲ್ಲಿಯೇ ಕುಳಿತು ಟಿವಿಯಲ್ಲಿ ಸಿನೆಮಾಗಳನ್ನು ನೋಡುವ ಸೌಲಭ್ಯ (DTH-ಡಿಟಿಎಚ್) ಪಡಕೊಂಡವರಿಗೆ ಅದರ ಕಾಲಾವಧಿ ಶುಲ್ಕವನ್ನು ಪುನರ್ಭರ್ತಿಮಾಡುವುದಾಗಿತ್ತು. ಕ್ರಮೇಣ ಬಿಲ್ಲುಗಳ ಪಾವತಿ ಮತ್ತು ಅಂತರ್ಜಾಲದ ಮೂಲಕ ವ್ಯಾಪಾರದ ಒಂದು ವೇದಿಕೆಯಾಗಿ ಬೆಳೆಯಿತು.

ಅದು 2015ರಲ್ಲಿ ವ್ಯಾಲೆಟ್ (Wallet)  ವ್ಯವಹಾರವನ್ನು ಆರಂಭಿಸಿತುವ್ಯಾಲೆಟ್ ಅಂದರೆ ನಮ್ಮ ದೈನಂದಿನ ಉಪಯೋಗಕ್ಕೆ ಇರುವ, ಕಣ್ಣಿಗೆ ಕಾಣದ, ಒಂದು ಪರ್ಸ್. ಪರ್ಸ್ ನಲ್ಲಿ ನೀವು ಹೇಗೆ ನೋಟುಗಳನ್ನು ತುಂಬಿಸಿಕೊಂಡು ಅಂಗಡಿಗೆ ಹೋಗುತ್ತೀರೋ ಅದೇ ರೀತಿ ಅಗತ್ಯವಿದ್ದಷ್ಟು ಹಣವನ್ನು ನಿಮ್ಮ ಬ್ಯಾಂಕು ಖಾತೆಯಿಂದ  ಅಂತರ್ಜಾಲದ ಮುಖಾಂತರ ವ್ಯಾಲೆಟ್ಗೆ ವರ್ಗಾಯಿಸಿ ಅದನ್ನು ನಿಮ್ಮ ಮೊಬೈಲು ಮೂಲಕ ಅಂಗಡಿಗಳಲ್ಲಿ ಹಣಪಾವತಿಸಲು ಉಪಯೋಗಿಸಬಹುದಾಗಿದೆ.

2016ರ ನೋಟು ರದ್ದತಿಯು  ಪೇಟಿಎಂನ ವಹಿವಾಟಿಗೆ  ಸುವರ್ಣಾವಕಾಶವನ್ನು ಒದಗಿಸಿತುನೋಟು ರದ್ದತಿಯ ನಿರ್ಧಾರ ಹೊರಬರುತ್ತಿದ್ದಂತೆಯೇ ಕಂಪೆನಿಯು ಪ್ರಮುಖ ಪತ್ರಿಕೆಗಳ ಮುಖಪುಟಗಳಲ್ಲಿ ಪ್ರಧಾನ ಮಂತ್ರಿಯವರ ಭಾವಚಿತ್ರದೊಂದಿಗೆ ತಮ್ಮ ಸೇವೆಯ ಕುರಿತಂತೆ ಜಾಹೀರಾತುಗಳನ್ನು ಪ್ರಕಟಿಸಿತು. ಅವರ ನಿರ್ಧಾರವನ್ನು ಮುಕ್ತ ಕಂಠದಿಂದ ಹೊಗಳಿ, ಇನ್ನು ಎಟಿಎಂ ಬೇಡ, ಪೇಟಿಎಂನ ಮೂಲಕ ಪಾವತಿಸಿ ಎಂದಿತು (ಇಂಗ್ಲಿಷ್  pay through mobile ಸಂಕ್ಷಿಪ್ತ ರೂಪ)

2014ರ ಬಜೆಟ್ ಘೋಷಣೆ ಮತ್ತು ಬಳಿಕದ ಆರ್ ಬಿಐಯ ಹೊಸ ನೀತಿಯ ಅಡಿಯಲ್ಲಿ ವನ್97 ಕಂಪೆನಿಯು ಮೇ 2017ಕ್ಕೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಸ್ಥಾಪಿಸಿ ಹಣಕಾಸಿನ ವ್ಯವಹಾರವನ್ನು ಅದಕ್ಕೆ ಒಪ್ಪಿಸಿತು. ಡಿಜಿಟಲ್ ಬ್ಯಾಂಕಿಂಗ್ ಮೂಲಕ ಉಳಿತಾಯ, ಚಾಲ್ತಿ ಮತ್ತು ಸಾವಧಿ ಠೇವಣಿಗಳನ್ನು ಸ್ವೀಕರಿಸಲು ಆರಂಭಿಸಿತು; ವ್ಯಾಲೆಟ್ ಮತ್ತು ಕಾರುಗಳಿಗೆ ಅಗತ್ಯವಾದ ಫಾಸ್ಟ್ಯಾಗ್ ಸೌಲಭ್ಯಗಳನ್ನು ಒದಗಿಸಲು ಆರಂಭಿಸಿತು. ಅಂದಿನ ದಿನಗಳಲ್ಲಿ ದೇಶದ ಅರ್ಥವ್ಯವಸ್ಥೆಯಲ್ಲಿ ಆಗುತ್ತಿದ್ದ ಬದಲಾವಣೆಗಳು ಕಂಪೆನಿಯ ಅಭೂತಪೂರ್ವ ಯಶಸ್ಸಿಗೆ ದಾರಿ ಮಾಡಿಕೊಟ್ಟವು. ಕಂಪೆನಿಯ ಮಾಲಕ ವಿಜಯ ಶೇಖರ ಶರ್ಮ ಅವರು ಫಿನ್ಟೆಕ್ ರಂಗದ ಪೋಸ್ಟರ್ ಬಾಯ್  ಅಂದರೆ ಮೆರೆಬೊಂಬೆಯಾಗಿ ಮೂಡಿಬಂದರು ಮಾತ್ರವಲ್ಲ ನವಭಾರತ ಡಾರ್ಲಿಂಗ್ ಆದರು.

ಯಶಸ್ಸಿನ ಹಿನ್ನೆಲೆಯಲ್ಲಿ ವಿದೇಶಿ ಬಂಡವಾಳಗಾರರೂ ಕಂಪೆನಿಯಲ್ಲಿ ಹಣವನ್ನು ಹೂಡಿದರು. ಅಮೆರಿಕದ ವಾರೆನ್ ಬಫೆಟ್, ಚೀನಾದ ಜ್ಯಾಕ್ ಮಾ (ಆಲಿ ಬಾಬಾ ಕಂಪೆನಿಯ ಪ್ರವರ್ತಕ), ಜಪಾನಿನ ಸಾಫ್ಟ್ ಬ್ಯಾಂಕ್ ಮತ್ತು ಮಸಯೊಶಿ ಸೊನ್ ಮತ್ತು ಭಾರತದ ರತನ್ ಟಾಟಾ ಅವರು ಪೇಟಿಎಂ ಶೇರುಗಳನ್ನು ಖರೀದಿಸಿದರು. ನವೆಂಬರ್ 2021ರಲ್ಲಿ ವನ್97 ಕಂಪೆನಿಯು ಶೇರು ಮಾರುಕಟ್ಟೆಯನ್ನು ಪ್ರವೇಶಿಸಿದಾಗ ಹೂಡಿಕೆದಾರರಿಂದ ಅಭೂತಪೂರ್ವವಾದ ಬೆಂಬಲ ಸಿಕ್ಕಿತು.

 

   ಸಮಸ್ಯೆಯ ಹಿನ್ನೆಲೆ:

ಪೇಟಿಎಂ ಬ್ಯಾಂಕು ತನ್ನ ವ್ಯವಹಾರವನ್ನು ನಡೆಸುತ್ತಿದ್ದ ಪರಿ ಆರಂಭದಿಂದಲೇ ಪ್ರಶ್ನಾರ್ಹವಾಗಿತ್ತುಬ್ಯಾಂಕು ಆರ್ಬಿಐಯ ನೀತಿ ನಿಯಮಗಳಿಗೆ ಅನುಗುಣವಾಗಿ ತನ್ನ ವ್ಯವಹಾರಗಳನ್ನು ನಡೆಸುತ್ತಿರಲಿಲ್ಲ. ವೈಫಲ್ಯಕ್ಕೆ ನವೆಂಬರ್ 2021ರಲ್ಲಿ ಕಂಪೆನಿಯ ಮೇಲೆ 1 ಕೋಟಿ ರೂ. ಜುಲ್ಮಾನೆಯನ್ನು ಆರ್ಬಿಐ ವಿಧಿಸಿತ್ತು. 2022ರಲ್ಲಿ ಆಂತರಿಕ ದಾಖಲೆಗಳು, ವ್ಯವಹಾರ ಮತ್ತು ನಿರ್ದೇಶಕ ಮಂಡಳಿಯ ಕಾರ್ಯನಿರ್ವಹಣೆಯ ಬಗ್ಗೆ ಗಂಭೀರವಾದ ಲೋಪಗಳನ್ನು ಗಮನಿಸಿದ ಆರ್ಬಿಐ ತಾನು ಸೂಚಿಸಿದ ಬಾಹ್ಯ ಲೆಕ್ಕ ಪರಿಶೋಧಕರ ಮೂಲಕ ಪೇಟಿಎಂನ ಇಡೀ ವ್ಯವಹಾರವನ್ನು ಪರಿಶೀಲಿಸಿ ಹೊಸ ನಿರ್ದೇಶನಗಳನ್ನು ನೀಡಿತು ನಿರ್ದೇಶನಗಳನ್ನು ಪಾಲಿಸುತ್ತೇನೆಂದು ವಚನವಿತ್ತ ಪೇಟಿಎಂ ತನ್ನ ವರ್ತನೆಯನ್ನು ಬದಲಾಯಿಸಲಿಲ್ಲ. 2023 ನವೆಂಬರ್ನಲ್ಲಿ ಆರ್ಬಿಐ ಮತ್ತೆ5.39 ಕೋಟಿ ರೂ. ಜುಲ್ಮಾನೆ ವಿಧಿಸಿತು. ಬಳಿಕವೂ ಪರಿಸ್ಥಿತಿ ಹತೋಟಿಗೆ ಬರುವ ಲಕ್ಷಣಗಳು ಗೋಚರಿಸದೆ ಬಂದಾಗ ವರ್ಷ ಜನವರಿಯಲ್ಲಿ ಬ್ಯಾಂಕಿನ ವ್ಯವಹಾರದ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಆರ್ಬಿಐ ಹೇರಿತು.

 

   ಬಯಲಿಗೆ ಬಂದ ಅವ್ಯವಹಾರಗಳು:

ಆರ್ಬಿಐಯ ಸಮಗ್ರ ಪರಿಶೀಲನೆಯ ಕುರಿತಂತೆ ಮಾಧ್ಯಮಗಳಲ್ಲಿ ವಿಸ್ತೃತ ವರದಿಗಳು ಬಂದವು. ಅವುಗಳ ಪ್ರಕಾರ ಪೇಟಿಎಂನ ವ್ಯವಹಾರಗಳಲ್ಲಿ ಕಂಡುಬಂದ ಕೆಲವು ಅಕ್ರಮಗಳು ಹೀಗಿವೆ:

ಕೆವೈಸಿ ನಿಯಮಗಳ ಉಲ್ಲಂಘನೆ: ಖಾತೆಯನ್ನು ತೆರೆಯುವಾಗ ಗ್ರಾಹಕರ ಗುರುತು, ವಿಳಾಸ, ಭಾವಚಿತ್ರ, ಆದಾಯ ತೆರಿಗೆಯ ಪ್ಯಾನ್ ಕಾರ್ಡು ಮುಂತಾದ ದಾಖಲೆಗಳನ್ನು ಸಂಗ್ರಹಿಸಿ ತಮ್ಮ ಗ್ರಾಹಕನನ್ನು ತಿಳಿದಿರಬೇಕು  ಎಂಬ ನಿಯಮವನ್ನು ಅನುಸರಿಸಿರಲಿಲ್ಲ. 2023ರಲ್ಲಿ ಪೇಟಿಎಂನ ವ್ಯಾಲೆಟ್ ಹೊಂದಿದ್ದ  ೩೫ ಕೋಟಿ ಗ್ರಾಹಕರಲ್ಲಿ ಸುಮಾರು 10 ಕೋಟಿ ಗ್ರಾಹಕರ ಮಾಹಿತಿಯನ್ನು ಮಾತ್ರ ಬ್ಯಾಂಕು ಪಡೆದಿತ್ತು.

 ಆದಾಯ ತೆರಿಗೆಗೆ ಸಂಬಂಧಿಸಿದ ಪ್ಯಾನ್ ಕಾರ್ಡ್ : ನಿಯಮದಂತೆ ಗ್ರಾಹಕರ ಖಾತೆಗಳನ್ನು ಪ್ಯಾನ್ ಕಾರ್ಡಿಗೆ ಜೋಡಿಸಬೇಕಿತ್ತು. ಪ್ರಕ್ರಿಯೆ ಅಸಮರ್ಪಕವಾಗಿತ್ತು. ಕೆಲವು ಸಾವಿರ ಖಾತೆಗಳಿಗೆ ಒಂದೇ ಪ್ಯಾನ್ ನಂಬರವನ್ನು ದಾಖಲಿಸಲಾಗಿತ್ತು.

ನಿಷ್ಕ್ರಿಯವಾದ ಖಾತೆಗಳಲ್ಲಿ ವ್ಯವಹಾರ:  ದೀರ್ಘಾವಧಿಯಲ್ಲಿ ವ್ಯವಹಾರ ನಡೆಯದಿರುವ (Dormant account) ನಿಷ್ಕ್ರಿಯ ಖಾತೆಗಳನ್ನು, ಬ್ಯಾಂಕು ಕಪ್ಪು ಹಣವನ್ನು ವರ್ಗಾಯಿಸಲು ಉಪಯೋಗಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಬ್ಯಾಂಕಿಂಗ್ ಪರಿಭಾಷೆಯಲ್ಲಿ ಅವುಗಳನ್ನು ಮ್ಯೂಲ್ ಅಕೌಂಟ್(Mule account = ಹೇಸರಗತ್ತೆ ಖಾತೆ) ಅನ್ನಲಾಗುತ್ತದೆ. ಮನಿ-ಲಾಂಡರಿಂಗ್ (Money-laundering) ತಡೆ ಕಾಯ್ದೆಯಿಂದ ಜಾರಿಕೊಳ್ಳಲು ಮ್ಯೂಲ್ ಖಾತೆಗಳನ್ನು ಬಳಸಲಾಗುತ್ತದೆ.

 

ಗ್ರಾಹಕರ ಖಾಸಗಿ ಮಾಹಿತಿಗಳ ಸೋರಿಕೆ:  ತನ್ನ ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ಬೇರೆ ವಾಣಿಜ್ಯ ಸಂಸ್ಥೆಗಳಿಗೆ ಮಾರಿದ ಆರೋಪಗಳೂ ಪೇಟಿಎಂ ಬ್ಯಾಂಕಿನ ಮೇಲಿದೆ.

ಪ್ರಶ್ನಾರ್ಹವಾದ ವ್ಯವಹಾರಗಳ ಬಗ್ಗೆ ಆರ್ಬಿಐಗೆ ನಿಖರವಾದ ಮಾಹಿತಿಗಳು ಲಭಿಸಿದ್ದವು.

 

   ಅಗತ್ಯದ ಕ್ರಮಗಳು:

ಇಡೀ ಹಣಕಾಸು ರಂಗದ ಒಟ್ಟು ವ್ಯವಹಾರಕ್ಕೆ ಹೋಲಿಸಿದರೆ ಪೇಟಿಎಂ ಬ್ಯಾಂಕಿನ ಗಾತ್ರ ಬಹಳ ಚಿಕ್ಕದು. ಆದರೆ ಅದರ ಭೌಗೋಳಿಕ ವಿಸ್ತಾರ ಮತ್ತು ಕೋಟ್ಯಂತರವಿರುವ ಗ್ರಾಹಕರ ಸಂಖ್ಯೆಗಳನ್ನು ಗಮನಿಸಿದರೆ ಆರ್ಬಿಐಯ ನಿರ್ಧಾರದಿಂದ ಅರ್ಥವ್ಯವಸ್ಥೆಯ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮವಾಗಬಹುದು.

ಫೆಬ್ರವರಿ 29ರ ಮೊದಲು ಪೇಟಿಎಂ ವ್ಯಾಲೆಟ್ ಹೊಂದಿದವರು ಅದರಲ್ಲಿರುವ ಹಣವನ್ನು ವ್ಯಯಿಸಬೇಕು. ಪರ್ಸ್ ಖಾಲಿಯಾದರೆ ಹಣ ತುಂಬಿಸುವಂತಿಲ್ಲ! ಉಳಿತಾಯ, ಚಾಲ್ತಿ ಖಾತೆಗಳಲ್ಲಿಯೂ ಹಣ ತುಂಬಿಸುವಂತಿಲ್ಲಬ್ಯಾಂಕಿನ ಮೂಲಕ  ವ್ಯವಹರಿಸುವ ಲಕ್ಷಾಂತರ ವ್ಯಾಪಾರಿಗಳು ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಪೇಟಿಎಂಗೆ ಪರ್ಯಾಯವಾದ ಪಾವತಿ ಮಾಧ್ಯಮಗಳಿಗೆ ಬಳಕೆದಾರರು ಮೊರೆಹೋಗಬೇಕು. ಕಂಪೆನಿ ಮುಚ್ಚಿದರೆ ಅದರ ಶೇರುದಾರರು ಹೂಡಿದ ಹಣ ನಷ್ಟವಾಗುತ್ತದೆ.

ವಿಶಾಲ ದೃಷ್ಟಿಯಿಂದ ಗಮನಿಸಿದರೆ ನೋಟು ರದ್ದತಿಯ ಬಳಿಕ ಡಿಜಿಟಲ್ ವ್ಯವಹಾರಕ್ಕೆ ಅನೇಕ ವೇದಿಕೆಗಳು ಹುಟ್ಟಿಕೊಂಡವು; ಕೋಟ್ಯಂತರ ನಾಗರಿಕರು ಮತ್ತು ವ್ಯಾಪಾರ ಸಂಸ್ಥೆಗಳು, ಅಂಗಡಿಗಳು, ಸೇವಾ ಕೇಂದ್ರಗಳು ಅವುಗಳನ್ನು ಬಳಸಲು ಪ್ರಯತ್ನಿಸಿದರು; ಮೂಲಕ ನಗದುರಹಿತ ವ್ಯವಸ್ಥೆಗೆ ಒಗ್ಗಿಕೊಳ್ಳುವ ಅಭ್ಯಾಸ ಬೆಳೆಯಿತು. ಪೇಟಿಎಂ ಬ್ಯಾಂಕಿನ ಬೆಳವಣಿಗೆಯಿಂದ ಮತ್ತೆ  ಆತಂಕಗಳು ಹುಟ್ಟುತ್ತವೆ. ಹೊಸ ಪೀಳಿಗೆಯ ಹಣಕಾಸು ಕಂಪೆನಿಗಳ ಮೇಲೆ, ಫಿನ್ಟೆಕ್ ಕಂಪೆನಿಗಳ ಕುರಿತು ಜನರ ವಿಶ್ವಾಸಕ್ಕೆ ಹಿನ್ನಡೆಯುಂಟಾಗುತ್ತದೆ. ಒಂದು ಸಂಸ್ಥೆಯೇ ಅವ್ಯವಹಾರದಲ್ಲಿ ತೊಡಗಿದಾಗ ಅರ್ಥವ್ಯವಸ್ಥೆಯು ಹಳಿತಪ್ಪುತ್ತದೆ.

ಪೇಟಿಎಂ ಕಂಪೆನಿಯ ಅವ್ಯವಹಾರಗಳು ಇನ್ನು ಕೆಲವು ಪ್ರಶ್ನೆಗಳನ್ನೂ ನಮ್ಮ ಮುಂದಿಡುತ್ತವೆ. ಮನಿ ಲಾಂಡರಿಂಗ್, ಕಾನೂನು ರೀತ್ಯ ಒಂದು ಗುರುತರ ಅಪರಾಧ. ಕೇಂದ್ರ ಸರಕಾರವು ಅದನ್ನು ತಡೆಗಟ್ಟಲು ಅನೇಕ ಕ್ರಮಗಳನ್ನು ಕೈಗೊಂಡಿದೆ. ಪೇಟಿಎಂ ಬ್ಯಾಂಕಿನ ಪ್ರವರ್ತಕರಿಗೆ ಕಾನೂನು ಅನ್ವಯವಾಗುತ್ತದೆಯೇ? ಚೀನಾದ ಬಗ್ಗೆ ರಾಜಕೀಯ ಮಟ್ಟದಲ್ಲಿ ಒಂದು ನಿರ್ದಿಷ್ಟವಾದ ಧೋರಣೆ ಇರುವ ಹಿನ್ನೆಲೆಯಲ್ಲಿ ವನ್97 ಕಂಪೆನಿ ಚೀನಾದ ಆಲಿ ಬಾಬ ಕಂಪೆನಿಯ ಜೊತೆ ಕೈ ಜೋಡಿಸಿದ್ದು ಸಮರ್ಥನೀಯವೇ? ಆರ್ಬಿಐಯ ನಿರ್ಧಾರಗಳು ಅಗತ್ಯಕ್ಕಿಂತ ಹಾನಿಕಾರಕವಾಗುವುದರಿಂದ ಅವುಗಳನ್ನು ಸರಕಾರವು ಪುನರ್ವಿಮರ್ಶಿಸಬೇಕೆಂದು, ಇಲ್ಲದಿದ್ದರೆ ಹೊಸ ಉದ್ದಿಮೆಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ಕಲುಷಿತವಾಗುತ್ತದೆ ಎಂದು ಕೆಲವು  ಹೊಸ ಪೀಳಿಗೆಯ ಉದ್ದಿಮೆದಾರರು (ನವೋದ್ದಿಮೆಗಳ ಪ್ರವರ್ತಕರು) ಸರಕಾರಕ್ಕೆ ಮನವಿ ಮಾಡಿದ್ದಾರೆಆದರೆ ಕಾನೂನು ವಿರುದ್ಧವಾಗಿ ವರ್ತಿಸಿದ ಯಾವುದೇ ಉದ್ದಿಮೆದಾರರಿಗೆ ಕಾನೂನುರೀತ್ಯ ಕ್ರಮಗಳಿಂದ ವಿನಾಯಿತಿ ನೀಡುವುದು ಎಷ್ಟು ಸಮಂಜಸ?.

ಸೈಬರ್ ಕ್ರೈಂಗಳು, ಅಂತರ್ಜಾಲದ ಮೂಲಕ ವಂಚನೆಗಳು, ಅಮಾಯಕರನ್ನು ಹೊಸ ಹೊಸ ಮೊಬೈಲು ಆ್ಯಪ್ಗಳ ಮೂಲಕ ವಂಚಿಸುವ ಘಟನೆಗಳು ನಿರಂತರವಾಗಿ ನಡೆಯುವ ಕಾಲಾವಧಿಯಲ್ಲಿ ಪೇಟಿಎಂ ಕಂಪೆನಿಯ ಬೆಳವಣಿಗೆ ಜನರ ವಿಶ್ವಾಸಕ್ಕೆ ಹೊಡೆತ ನೀಡುವ ಸಾಧ್ಯತೆಯು ನಿಚ್ಚಳ. ಕಾರಣಕ್ಕಾಗಿ ಸರಕಾರವು ಎಚ್ಚರಿಕೆಯಿಂದ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು.

ಪೇಟಿಎಂ ಬ್ಯಾಂಕಿನ ಕುರಿತಾಗಿ ಆರ್ಬಿಐ ಕೈಕೊಂಡ ಕ್ರಮಗಳು ಅತ್ಯಂತ ಪ್ರಬುದ್ಧ ಮತ್ತು ಸಹಜನ್ಯಾಯಕ್ಕೆ ಅನುಗುಣವಾಗಿಯೇ ಇದೆ. ಹಾಗಾಗಿ ಆರ್ಬಿಐಯ ಕಾರ್ಯದಲ್ಲಿ ಸರಕಾರ ಹಸ್ತಕ್ಷೇಪ ನಡೆಸಬಾರದು.

ಹೊಸ ಫಿನ್ಟೆಕ್ ಕಂಪೆನಿಗಳ ಮೇಲೆ ಮತ್ತು ಈಗಿರುವ ಕಂಪೆನಿಗಳ ಮೇಲೆ ಇನ್ನೂ ದಕ್ಷವಾದ ಉಸ್ತುವಾರಿಯ ಅಗತ್ಯ ಇಂದಿದೆ.

ಉದ್ದಿಮೆದಾರರು ಪೋಸ್ಟರ್ ಬಾಯ್ ಗಳಾಗಿದ್ದರೂ- ನಿಯಮ-ನೀತಿಗಳಿಗೆ ವಿರುದ್ಧವಾಗಿ ವ್ಯವಹಾರ ನಡೆಸಿ ಅಕ್ರಮಗಳಾದಾಗ ಕಾನೂನಾತ್ಮಕ  ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳುವ ಬದ್ಧತೆ ಸರಕಾರ ಮತ್ತು ಅದರ ಅಂಗಸಂಸ್ಥೆಗಳಿಗೆ ಬೇಕು.

 

 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಟಿ.ಆರ್.ಭಟ್

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!