EVM ವಿರುದ್ಧ ಬೀದಿಗೆ ಬಂದ ಜನ : ದಿಲ್ಲಿಯಲ್ಲಿ EVM ವಿರುದ್ಧ ಭಾರೀ ಪ್ರತಿಭಟನೆ, ಜಾಥಾ

Update: 2024-01-19 03:46 GMT
Editor : Ismail | Byline : ಆರ್. ಜೀವಿ

Photo: alt news

ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಗಳ ವಿರುದ್ಧ ಮತ್ತೆ ಪ್ರತಿಭಟನೆ ಶುರುವಾಗಿದೆ. ಈ ಬಾರಿ ಆರೋಪ ಮಾಡಿರುವುದು, ಆಕ್ಷೇಪ ವ್ಯಕ್ತಪಡಿಸಿರುವುದು ಯಾವುದೇ ರಾಜಕೀಯ ಪಕ್ಷವಲ್ಲ. ಈಗ ಇವಿಎಂ ವಿರುದ್ಧ ಬೀದಿಗಿಳಿದಿರುವುದು ಜನರು. ಮೊನ್ನೆ ಜನವರಿ 5 ರಂದು ಶುಕ್ರವಾರ ದಿಲ್ಲಿಯಲ್ಲಿ ಚುನಾವಣೆಯಲ್ಲಿ ಇವಿಎಂ ಬಳಕೆಯ ವಿರುದ್ಧ ದೊಡ್ಡದೊಂದು ಪ್ರತಿಭಟನೆ ನಡೆದಿದೆ.

ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದ ಆ ಪ್ರತಿಭಟನೆ ಈಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ವಿಶೇಷ ಅಂದ್ರೆ ಯಾವುದೇ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಈ ಪ್ರತಿಭಟನೆಯಲ್ಲಿ ಇರಲಿಲ್ಲ. ಇದರಲ್ಲಿ ಭಾಗವಹಿಸಿ ಇವಿಎಂ ಅನ್ನು ಹಿಂಪಡೆಯಲೇ ಬೇಕು ಎಂದು ಆಗ್ರಹಿಸಿದ್ದು ಜನರು.

ಅದರಲ್ಲೂ ವಿಶೇಷವಾಗಿ ಸುಪ್ರೀಂ ಕೋರ್ಟ್ ನ ವಕೀಲರು. ಎಂದಿನಂತೆ ಈ ಪ್ರತಿಭಟನೆ ದೇಶಾದ್ಯಂತ ಜನರ ಗಮನಕ್ಕೆ ಬಂದಿದ್ದು ಪರ್ಯಾಯ ಯೂಟ್ಯೂಬ್ ಚಾನಲ್ ಗಳ ಮೂಲಕ. ದೇಶದ ಯಾವುದೇ ಪ್ರಮುಖ ಪತ್ರಿಕೆಗಳು , ಟಿವಿ ಚಾನಲ್ ಗಳು ಈ ಬಗ್ಗೆ ದೊಡ್ಡ ಸುದ್ದಿ ಮಾಡಲೇ ಇಲ್ಲ, ಈ ಬಗ್ಗೆ ಯಾವುದೇ ಚರ್ಚೆಯೂ ಕಂಡು ಬರಲಿಲ್ಲ.

ಅದು ನಿರೀಕ್ಷಿತ. ಆದರೆ ನೂರಾರು ಯೂಟ್ಯೂಬ್ ಚಾನಲ್ ಗಳು ಈ ಪ್ರತಿಭಟನೆಯ ವೀಡಿಯೊವನ್ನು ಪ್ರಸಾರ ಮಾಡಿವೆ. ಅಲ್ಲಿ ಏನು ನಡೆಯಿತು ಎಂಬುದನ್ನು ದೇಶದ ಜನರಿಗೆ ತೋರಿಸಿವೆ. ಸುಪ್ರೀಂ ಕೋರ್ಟ್ ನ ಖ್ಯಾತ ವಕೀಲರಾದ ಭಾನು ಪ್ರತಾಪ್ ಹಾಗು ಮಹಮೂದ್ ಪ್ರಾಚಾ ಅವರು ಈ ಪ್ರತಿಭಟನೆಯ ಮುಂಚೂಣಿಯಲ್ಲಿದ್ದಾರೆ.

ಇವರ ಜೊತೆ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ಹಿಂಜಮ್ ರಾಜೇನ್, ಡಿ ಸಿ ಕಪಿಲ್, ಪ್ರೇಮ್ ಪ್ರತಾಪ್, ಕೃಷ್ಣಪಾಲ್ ಸಿಂಗ್, ವಿನಯ್ ಕುಮಾರ್ ಸಹಿತ ಇನ್ನೂ ಹಲವು ವಕೀಲರು, ಸಾಮಾಜಿಕ ಕಾರ್ಯಕರ್ತರು ಕೈ ಜೋಡಿಸಿದ್ದಾರೆ. ಈ ಆಂದೋಲನಕ್ಕಾಗಿ ಅವರು 'ಮಿಷನ್ ಸೇವ್ ಕಾನ್ಸ್ಟಿಟ್ಯೂಶನ್' ಎಂಬ ಸಂಘಟನೆಯನ್ನೂ ಕಟ್ಟಿದ್ದಾರೆ. ಜೊತೆಗೆ 'ರಾಷ್ಟ್ರೀಯ ಜನಹಿತ ಸಂಘರ್ಷ ಪಾರ್ಟಿ' ಎಂಬ ಪಕ್ಷವನ್ನೂ ಕಟ್ಟಿದ್ದಾರೆ.

ಈ ಗುಂಪಿನ ಪ್ರಕಾರ " ಬಿಜೆಪಿ ಚುನಾವಣೆಗೆ ಮೊದಲೇ ಸಮಾಜದಲ್ಲಿ ಒಂದು ನಿರೂಪಣೆಯನ್ನು ರೂಪಿಸುತ್ತದೆ. ಅದರಲ್ಲಿ ಬಿಜೆಪಿಗೆ, ಮೋದಿಗೆ, ಹಿಂದುತ್ವಕ್ಕೆ ಭಾರೀ ಬೆಂಬಲವಿದೆ ಎಂದು ಬೇರೆ ಬೇರೆ ಕಾರಣಗಳನ್ನು ಪ್ರಚಾರ ಮಾಡಲಾಗುತ್ತದೆ. ಸೋಷಿಯಲ್ ಮೀಡಿಯಾ ಹಾಗು ನ್ಯೂಸ್ ಚಾನಲ್ ಗಳು, ಪತ್ರಿಕೆಗಳನ್ನು ಇದಕ್ಕಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಪ್ರತಿ ಚುನಾವಣೆಗೆ ಮೊದಲು ಇಂತಹ ಒಂದೆರಡು ಪ್ರಮುಖ ಕಾರಣಗಳನ್ನು ಹೈಲೈಟ್ ಮಾಡಿ ಬಿಜೆಪಿಯೇ ಈ ಬಾರಿ ಭರ್ಜರಿ ಬಹುಮತದೊಂದಿಗೆ ಗೆಲ್ಲಲಿದೆ ಎಂದು ಮೊದಲೇ ವಾತಾವರಣ ನಿರ್ಮಿಸಲಾಗುತ್ತದೆ. ಮತದಾನ ಮುಗಿದ ಕೂಡಲೇ ಬರುವ ಎಕ್ಸಿಟ್ ಪೋಲ್ ಗಳೂ ಅದನ್ನೇ ಪುನರಾವರ್ತಿಸುತ್ತವೆ. ಕೊನೆಗೆ ಅದೇ ರೀತಿ ಫಲಿತಾಂಶ ಬರುತ್ತದೆ."

ಇದು ಹೇಗೆ ಸಾಧ್ಯ ? ಚುನಾವಣೆಗೆ ಮೊದಲೇ ನಿಖರವಾಗಿ ಫಲಿತಾಂಶ ಹೇಳಿ ಬಿಡೋದು ಹೇಗೆ ? ಎಂಬುದು ಈ ಪ್ರತಿಭಟನಾಕಾರರ ಪ್ರಶ್ನೆ. ಬಿಜೆಪಿಯ ರಾಮ ಮಂದಿರ ಆಂದೋಲನ ಉತ್ತುಂಗದಲ್ಲಿರುವಾಗಲೂ ಬಿಜೆಪಿ ಇಷ್ಟು ದೊಡ್ಡ ಮಟ್ಟದಲ್ಲಿ ಚುನಾವಣೆಯಲ್ಲಿ ಮತ ಬೆಂಬಲ ಗಳಿಸಿಲ್ಲ. ಹಾಗಾದರೆ ಈಗ ಮಾತ್ರ ಯಾಕೆ ಅದು ಹೇಳಿದಂತೆಯೇ ಫಲಿತಾಂಶ ಬರುತ್ತದೆ ಎಂಬುದು ಇವರ ಪ್ರಶ್ನೆ.

ಈಗ ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ , ರೈತರ ಸಂಕಷ್ಟ ಇತ್ಯಾದಿ ಇಷ್ಟು ತಾಂಡವವಾಡುತ್ತಿರುವಾಗ ಬಿಜೆಪಿ ಹೇಗೆ ಪ್ರತಿ ಚುನಾವಣೆಯಲ್ಲೂ ತಾನು ಮೊದಲೇ ಹೇಳಿದಷ್ಟು ಸೀಟು ಗಳಿಸುತ್ತದೆ ಎಂಬುದು ಇವರ ತಕರಾರು. ಜನವರಿ ಒಂದರಂದು ಪತ್ರಿಕಾ ಗೋಷ್ಠಿ ಮಾಡಿದ್ದ ಭಾನು ಪ್ರತಾಪ್ ಹಾಗು ಮಹಮೂದ್ ಪ್ರಾಚಾ ಅವರು ಜನವರಿ 5 ರಂದು ಚುನಾವಣಾ ಆಯೋಗಕ್ಕೆ ಜಾಥಾದಲ್ಲಿ ಹೋಗಿ , ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿಯಾಗಿ " ಇವಿಎಂ ನಿಂದ ಚುನಾವಣೆ ನಡೆಸಿದರೆ ಅದು ನ್ಯಾಯ ಸಮ್ಮತವಾಗಲು ಸಾಧ್ಯವೇ ಇಲ್ಲ, ಹಾಗಾಗಿ ಇವಿಎಂ ಅನ್ನು ವಾಪಸ್ ಪಡೆದು ಹಳೆಯ ಮತ ಪತ್ರದ ವ್ಯವಸ್ಥೆಯನ್ನೇ ಅಳವಡಿಸಿಕೊಳ್ಳಬೇಕು" ಎಂದು ಆಗ್ರಹಿಸುವುದಾಗಿ ಹೇಳಿದ್ದರು.

ಅದರಂತೆ ಮೊನ್ನೆ ಜನವರಿ 5 ರಂದು ಪಟಿಯಾಲ ಹೌಸ್ ಕೋರ್ಟ್ಸ್ ನ ಗೇಟ್ ನಂಬರ್ 4 ರಲ್ಲಿ ಜನರು ಸೇರಿ ಅಲ್ಲಿಂದ ಚುನಾವಣಾ ಆಯೋಗಕ್ಕೆ ಜಾಥಾ ಹೊರಟರು. ಆದರೆ ಸ್ವಲ್ಪ ದೂರ ಹೋಗುವಷ್ಟರಲ್ಲೇ ಅವರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು. ಈ ನಡುವೆ ಪ್ರತಿಭಟನೆಯಲ್ಲಿ ಇವಿಎಂ ಅನ್ನು ಹೇಗೆ ತಿರುಚಬಹುದು ? ಪಾರದರ್ಶಕ ವ್ಯವಸ್ಥೆ ಎಂದು ಹೇಳಲಾದ ವಿವಿ ಪ್ಯಾಟ್ ಅನ್ನು ಕೂಡ ಹೇಗೆ ದುರ್ಬಳಕೆ ಮಾಡಬಹುದು ಎಂಬ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಲಾಯಿತು.

ತಮ್ಮನ್ನು ಪೊಲೀಸರು ವಶಕ್ಕೆ ಪಡೆಯುವಾಗ ಮಾತನಾಡಿದ ವಕೀಲ ಭಾನು ಪ್ರತಾಪ್ " ಚುನಾವಣಾ ಆಯೋಗಕ್ಕೆ ಹೋಗದಂತೆ, ಇವಿಎಂ ಬಗ್ಗೆ ಮಾತನಾಡದಂತೆ ಪೊಲೀಸರು ನಮ್ಮನ್ನು ತಡೆಯುತ್ತಿರುವುದೇ ಇವಿಎಂ ಸರಿಯಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ನಮ್ಮ ಪ್ರತಿಭಟನೆ ಸರಿಯಿದೆ ಎಂದು ಇದರಿಂದಲೇ ಸಾಬೀತಾಗಿದೆ. ನರೇಂದ್ರ ಮೋದಿ ನಮ್ಮಿಂದ ಹೆದರಿದ್ದಾರೆ. ಅವರು ಇವಿಎಂ ನಿಂದಲೇ ಮತ್ತೆ ಮತ್ತೆ ಗೆಲ್ಲುತ್ತಿದ್ದಾರೆ " ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ವಶಕ್ಕೆ ಪಡೆಯುವಾಗ ಮಾತನಾಡಿದ ಮಹಮೂದ್ ಪ್ರಾಚಾ " ನಾನು ಅಮಿತ್ ಷಾ ಗೆ ಹೆದರೋದಿಲ್ಲ. ಪೊಲೀಸರಿಗೆ ಗೌರವ ನೀಡಿ ಅವರ ಜೊತೆ ಹೋಗುತ್ತಿದ್ದೇನೆ " ಎಂದು ಹೇಳಿದ್ದಾರೆ.

ಇವಿಎಂ ಬಗ್ಗೆ ಆಕ್ಷೇಪ , ದೂರುಗಳು ಬಹಳ ಹಳೆಯದು. ಬಿಜೆಪಿಯೂ ಸೇರಿದಂತೆ ದೇಶದ ಬಹುತೇಕ ಎಲ್ಲ ಪಕ್ಷಗಳೂ ಇವಿಎಂ ಬಳಕೆ ಸರಿಯಲ್ಲ ಎಂದು ಬೇರೆ ಬೇರೆ ಸಂದರ್ಭಗಳಲ್ಲಿ ತಗಾದೆ ತೆಗೆದಿವೆ. ಆದರೆ ವಿಶೇಷ ಅಂದ್ರೆ, ಯಾವ ಪಕ್ಷವೂ ಗಟ್ಟಿ ಧ್ವನಿಯಲ್ಲಿ ಇವಿಎಂ ಬಳಸುವುದು ಬೇಡ ಎಂದು ಹೇಳೋದಿಲ್ಲ.

ಕಾಂಗ್ರೆಸ್ ಸೇರಿದಂತೆ ಹೆಚ್ಚಿನ ಪಕ್ಷಗಳು ಚುನಾವಣೆಯಲ್ಲಿ ಸೋತ ಬೆನ್ನಿಗೆ ಇವಿಎಂ ಬಗ್ಗೆ ಅಪಸ್ವರ ಎತ್ತಿ ಸುಮ್ಮನಾಗುತ್ತವೆ. ಯಾವುದೇ ಪ್ರಮುಖ ಪಕ್ಷವೂ ಇವಿಎಂ ಬಳಸಬಾರದು ಎಂದು ಗಟ್ಟಿಯಾಗಿ ಆಗ್ರಹಿಸುವುದಿಲ್ಲ. ಬಿಎಸ್ಪಿಯ ಮಾಯಾವತಿ ಮಾತ್ರ ಆಗಾಗ ಇವಿಎಂ ಬಗ್ಗೆ ದೂರುತ್ತಾರೆ. ತಮ್ಮ ಪಕ್ಷ ಪ್ರಮುಖ ಪಾತ್ರ ವಹಿಸದ ಪಂಜಾಬ್ , ತೆಲಂಗಾಣ ಚುನಾವಣಾ ಫಲಿತಾಂಶಗಳ ಬಳಿಕವೂ ಅವರು ಇವಿಎಂ ಬಗ್ಗೆ ದೂರಿದ್ದಾರೆ. 2009 ರ ಚುನಾವಣೆ ಬಳಿಕ ಬಿಜೆಪಿಯ ಪ್ರಮುಖ ನಾಯಕರು ಇವಿಎಂ ವಿರುದ್ಧ ಪುಸ್ತಕವನ್ನೇ ಬರೆದಿದ್ದಾರೆ. ಆಮ್ ಆದ್ಮಿ ಪಕ್ಷ ದಿಲ್ಲಿ ವಿಧಾನ ಸಭೆಯಲ್ಲೇ ಇವಿಎಂ ಅನ್ನು ತಿರುಚಬಹುದು ಎಂದು ಪ್ರಾತ್ಯಕ್ಷಿಕೆ ಮಾಡಿ ತೋರಿಸಿತ್ತು.

ಆದರೆ ಚುನಾವಣಾ ಆಯೋಗ ಇವಿಎಂ ಕುರಿತ ಎಲ್ಲ ಆರೋಪಗಳನ್ನು, ದೂರುಗಳನ್ನು ಸಂಪೂರ್ಣವಾಗಿ ನಿರಾಧಾರ ಎಂದು ತಿರಸ್ಕರಿಸಿದೆ. ಇವಿಎಂ ಅನ್ನು ಹಾಗೆ ತಿರುಚುವುದು ಸಾಧ್ಯವೇ ಇಲ್ಲ ಎಂದು ಹೇಳಿದೆ. ಇವಿಎಂ ನಿಂದ ಮತದಾನ ನಡೆಸುವುದು ಸಂಪೂರ್ಣ ಸುರಕ್ಷಿತ ಎಂದು ಸಾರಿದೆ. ವಿವಿ ಪ್ಯಾಟ್ ಕೂಡ ಅತ್ಯಂತ ಪಾರದರ್ಶಕ ವಿಧಾನ ಎಂದು ಹೇಳಿದೆ.

ಇಲ್ಲಿ ಪ್ರಶ್ನೆ ಇರುವುದು ಇವಿಎಂ ಸುರಕ್ಷಿತವೋ ಅಲ್ಲವೋ ಎಂಬುದಕ್ಕಿಂತ ಮುಖ್ಯವಾಗಿ, ಇವಿಎಂ ಬಗ್ಗೆ ದೇಶದ ಜನರಿಗೆ, ಮತದಾರರಿಗೆ ಹಾಗು ಹೆಚ್ಚಿನ ರಾಜಕೀಯ ಪಕ್ಷಗಳಿಗೆ ನಂಬಿಕೆ, ವಿಶ್ವಾಸ ಇದೆಯೇ ಇಲ್ಲವೇ ಎಂಬುದು. ದೇಶದ ಭವಿಷ್ಯ ನಿರ್ಧರಿಸುವ ಪ್ರಕ್ರಿಯೆಗೆ ಬಳಸುವ ತಂತ್ರಜ್ಞಾನವೊಂದರ ಬಗ್ಗೆ ದೇಶದ ಜನರಿಗೆ ಗಟ್ಟಿ ನಂಬಿಕೆ ಇಲ್ಲ ಎಂದಾದರೆ , ಅದರ ಬಗ್ಗೆ ಅಪಸ್ವರ , ಸಂಶಯಗಳು ಇವೆ ಎಂದಾದರೆ ಯಾವುದೇ ಸಂಶಯಕ್ಕೆ ಎಡೆ ಇಲ್ಲದಂತಹ ತಂತ್ರಜ್ಞಾನವನ್ನು ಬಳಸಬೇಕು ಎಂಬುದು ಇಲ್ಲಿರುವ ಆಗ್ರಹ.

ಆದರೆ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಹಿಂಜರಿಯುತ್ತವೆ. ಇವಿಎಂ ಬಗ್ಗೆ ಅಲ್ಲಲ್ಲಿ ಅಪಸ್ವರ ಎತ್ತುವುದನ್ನು ಬಿಟ್ಟರೆ ಅದರ ವಿರುದ್ಧ ಒಂದು ಸ್ಪಷ್ಟ ನಿಲುವು ತೆಗೆದುಕೊಂಡು ಅದನ್ನು ಚುನಾವಣಾ ಆಯೋಗಕ್ಕೆ ತಿಳಿಸಲು ಅವು ಸಿದ್ಧವಿಲ್ಲ. ಅವುಗಳ ಹಿಂಜರಿಕೆಗೆ ಬೇರೆ ಬೇರೆ ಕಾರಣಗಳೂ ಇವೆ. ಇನ್ನು ರಾಜಕೀಯ ಪಕ್ಷಗಳನ್ನು ನಂಬಿ ಕೂತರೆ ಆಗದು ಎಂದು ಈಗ ಜನರೇ ಬೀದಿಗಿಳಿದಿದ್ದಾರೆ. 2024 ರಲ್ಲಿ ಸೋತರೆ ಮತ್ತೆ ರಾಜಕೀಯ ಪಕ್ಷಗಳು ಇವಿಎಂ ಬಗ್ಗೆ ಅಪಸ್ವರ ಎತ್ತಿ ಸುಮ್ಮನಾಗುತ್ತವೆ. ಹಾಗಾಗಿ ಜನರೇ ಪ್ರತಿಭಟಿಸಬೇಕು ಎಂದು ಈಗ ಬೀದಿಗಿಳಿದಿದ್ದಾರೆ.

ಜನವರಿ 13 ರಿಂದ ದಿಲ್ಲಿಯ ಈ ಪ್ರತಿಭಟನೆ ದೇಶಾದ್ಯಂತ ನಡೆಯಲಿದೆ. ಪ್ರತಿ ಜಿಲ್ಲೆಯ ಲೋಕಸಭಾ ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ. ಜನವರಿ 14 ರಂದು ಸುಪ್ರೀಂ ಕೋರ್ಟ್ ಗೆ ವಕೀಲರು ಹಾಗು ಸಾಮಾಜಿಕ ಕಾರ್ಯಕರ್ತರ ಒಂದು ನಿಯೋಗ ಭೇಟಿ ನೀಡಿ ಇವಿಎಂ ವಿರುದ್ಧ ಪ್ರತಿಭಟನೆ ದಾಖಲಿಸಲಿದೆ. ಪಟಿಯಾಲ ಹೌಸ್ ಕೋರ್ಟ್ಸ್ ನಿಂದ ಹೊರಡುವ ಜಾಥಾ ಸುಪ್ರೀಂ ಕೋರ್ಟ್ ಗೆ ಹೋಗಲಿದೆ. ಈ ಜಾಥಾವನ್ನು ವಕೀಲರೇ ಮುನ್ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಮಹಮೂದ್ ಪ್ರಾಚಾ. "ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಸುಪ್ರೀಂ ಕೋರ್ಟ್ ಗೆ ಹೋಗಲು ನೆರವಾಗುವಂತೆ ಹಾಗು ಪೋಲೀಸರ ಕಿರುಕುಳ ತಪ್ಪಿಸಲು ವಕೀಲರ ತಂಡವೇ ಜಾಥಾವನ್ನು ಮುನ್ನಡೆಸಲಿದೆ" ಎಂದು ಹೇಳಿದ್ದಾರೆ.

ಈ ತಂಡ ಈಗಾಗಲೇ ರಾಹುಲ್ ಗಾಂಧಿ ಸಹಿತ ದೇಶದ ಎಲ್ಲ ಪ್ರಮುಖ ವಿಪಕ್ಷ ನಾಯಕರಿಗೆ ಪತ್ರ ಬರೆದು ಇವಿಎಂ ವಿರುದ್ಧ ನಿಲುವು ತೆಗೆದುಕೊಳ್ಳುವಂತೆ ಆಗ್ರಹಿಸಿದೆ. ದಿಲ್ಲಿಯಲ್ಲಿ ವಕೀಲರು, ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ಶುರುವಾಗಿರುವ ಈ ಪ್ರತಿಭಟನೆ ದೇಶಾದ್ಯಂತ ತಳ ಮಟ್ಟದಲ್ಲಿ ನಡೆಯಲಿದೆಯೇ ?.

ದಿಲ್ಲಿಯಲ್ಲಿ ಹೇಳಿರುವ ಹಾಗೆ ಜನರು ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಇವಿಎಂ ವಿರುದ್ಧ ಪ್ರತಿಭಟನೆ ನಡೆಸುತ್ತಾರಾ ?. ಅದು ಎಷ್ಟು ಪರಿಣಾಮಕಾರಿಯಾಗಿ ನಡೆಯಲಿದೆ ?. ಹಾಗೆ ದೇಶಾದ್ಯಂತ ಜನರು ಇವಿಎಂ ವಿರುದ್ಧ ಬೀದಿಗಿಳಿದರೆ ಅದರಿಂದ ಏನಾದರೂ ಬದಲಾವಣೆ ಆಗಲಿದೆಯೇ ?. ಇವಿಎಂ ವಿರುದ್ಧ ಈ ಹಿಂದೆಯೂ ಹಲವು ಬಾರಿ ಪ್ರತಿಭಟನೆ ನಡೆದಿದೆ. ಆದರೆ ಅದರಿಂದ ಪ್ರಯೋಜನ ಆಗಿಲ್ಲ. ಈ ಬಾರಿ ಏನಾಗಲಿದೆ. ಕಾದು ನೋಡಬೇಕು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!