ಖತರ್ ನಲ್ಲಿ ಇಸ್ರೇಲ್ ಪರ ಬೇಹುಗಾರಿಕೆ ಆರೋಪ: 8 ಅಧಿಕಾರಿಗಳ ಬಿಡುಗಡೆ

Update: 2024-02-19 05:58 GMT
Editor : Ismail | Byline : ಆರ್. ಜೀವಿ

ಖತರ್ ನಲ್ಲಿ ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ್ದ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ಎಲ್ಲ 8 ಅಧಿಕಾರಿಗಳು ಬಿಡುಗಡೆಯಾಗುವುದರೊಂದಿಗೆ ಭಾರತೀಯ ರಾಜತಾಂತ್ರಿಕತೆ ದೊಡ್ಡ ಗೆಲುವು ಕಂಡಿದೆ. ಈ ನಡುವೆ, ಬಿಜೆಪಿ ಹಿರಿಯ ನಾಯಕ ,ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ಹೇಳಿಕೆಯೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ಹಾಗಾದರೆ ನಿಜವಾಗಿಯೂ ನಡೆದಿದ್ದೇನು? ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದವರ ವಿಚಾರದಲ್ಲಿ ನಡೆದ ರಾಜತಾಂತ್ರಿಕ ಪ್ರಕ್ರಿಯೆಗಳು ಏನೇನು?

ಅಂತಿಮವಾಗಿ ಹೇಗೆ ಆ ಎಂಟು ಮಂದಿ ನೌಕಾ ದಳ ಅಧಿಕಾರಿಗಳನ್ನು ಮರಣ ದಂಡನೆಯ ಕುಣಿಕೆಯಿಂದ ತಪ್ಪಿಸಿ, ಅಲ್ಲಿಂದ ಬಿಡುಗಡೆ ಮಾಡಿಸಲಾಯಿತು ? ಸರಕಾರ ಅದನ್ನು ತನ್ನ ರಾಜತಾಂತ್ರಿಕ ಗೆಲುವು ಎನ್ನುತ್ತಿರುವಾಗ, ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಏಕೆ ಬಂತು ಮತ್ತು ಅನಂತರ ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆಗಳೇನು? ಸುಬ್ರಮಣಿಯನ್ ಸ್ವಾಮಿ ಹೇಳಿರುವಂತೆ ಈ ಬಿಡುಗಡೆಯಲ್ಲಿ ಸೂಪರ್ ಸ್ಟಾರ್ ಶಾರೂಕ್ ಖಾನ್ ಅವರ ಪಾತ್ರವಿರುವುದು ಹೌದೇ?.

ಮೊದಲು, ಆ ಎಂಟು ಅಧಿಕಾರಿಗಳು ಶಿಕ್ಷೆಯಿಂದ ಪಾರಾಗಿ ಬಿಡುಗಡೆಯಾದ ಸಂದರ್ಭವನ್ನು ಗಮನಿಸೋಣ. ಕಳೆದ ಒಂದೂವರೆ ವರ್ಷದಿಂದ ಖತರ್ ಜೈಲಿನಲ್ಲಿದ್ದ ಭಾರತೀಯ ನೌಕಾಪಡೆಯ ಆ ಎಲ್ಲ 8 ಅಧಿಕಾರಿಗಳು ಬಿಡುಗಡೆಯಾದದ್ದು ಮೊನ್ನೆ ಫೆಬ್ರವರಿ 12ರಂದು. ಫೆಬ್ರವರಿ 12ರ ಬೆಳಗಿನ ಜಾವ 2 ಗಂಟೆಗೆ ಅವರಲ್ಲಿ 7 ಮಂದಿ ಭಾರತಕ್ಕೆ ವಾಪಸಾಗಿದ್ದಾರೆ. ಮರಣದಂಡನೆಗೆ ಒಳಗಾಗಿದ್ದವರು ಕಡೆಗೆ ಯಾವ ಶಿಕ್ಷೆಯೂ ಇಲ್ಲದೆ ಬಿಡುಗಡೆಯಾಗುವವರೆಗಿನ ಆ ಹಾದಿ ಎಂಥದಾಗಿತ್ತು ?

ಹೇಗೆ ಅದೆಲ್ಲವೂ ಸಾಧ್ಯವಾಯಿತು? 18 ತಿಂಗಳ ಕಾಲ ಸಾವಿನ ದವಡೆಯಲ್ಲಿ ಸಿಲುಕಿ ಕಂಗೆಟ್ಟಿದ್ದವರು ಕಡೆಗೂ ಮರಣದಂಡನೆಯಿಂದ ಪಾರಾಗಿ ಬಿಡುಗಡೆಯಾಗುವಲ್ಲಿ ನಿರ್ಣಾಯಕ ಪಾತ್ರ ಯಾರದ್ದು ? ಇದನ್ನು ಭಾರತದ ಅತಿ ದೊಡ್ಡ ರಾಜತಾಂತ್ರಿಕ ಗೆಲುವು ಎಂದೇ ಹೇಳಲಾಗುತ್ತಿದೆ.

ಅಂತರರಾಷ್ಟ್ರೀಯ ಮಾಧ್ಯಮಗಳು ಅದರ ಬಗ್ಗೆ ಬರೆಯುತ್ತಿವೆ. ಮರಣದಂಡನೆಯ ಇಳಿಕೆ ಮಾತ್ರವಲ್ಲ, ಅವರ ಬಿಡುಗಡೆಯೇ ಸಾಧ್ಯವಾದದ್ದು ಮಹತ್ವದ ವಿದ್ಯಮಾನವಾಗಿದೆ. ಏನಿದು ಪ್ರಕರಣ ಎಂದು ಮೊದಲು ನೋಡೋಣ. ಇಸ್ರೇಲ್ ಗಾಗಿ ಗೂಢಚರ್ಯೆ ನಡೆಸಿದ್ದರೆಂಬ ಆರೋಪದ ಮೇಲೆ 2022ರ ಆಗಸ್ಟ್ನಲ್ಲಿ ಭಾರತೀಯ ನೌಕಾಪಡೆಯ ಆ 8 ಮಂದಿ ಮಾಜಿ ಅಧಿಕಾರಿಗಳನ್ನು ಖತರ್ನಲ್ಲಿ ಬಂಧಿಸಲಾಗಿತ್ತು.

ನೌಕಾಪಡೆಯ ಆ ಮಾಜಿ ಅಧಿಕಾರಿಗಳು ಖತರ್ ಸೇನಾಪಡೆಗಳಿಗೆ ತರಬೇತಿ ಮತ್ತಿತರ ಸೇವೆಗಳನ್ನು ಒದಗಿಸುವ ಖಾಸಗಿ ಸಂಸ್ಥೆ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಎಂಡ್ ಕನ್ಸಲ್ಟನ್ಸಿ ಸರ್ವೀಸಸ್ ಗೆ ಸೇವೆ ಸಲ್ಲಿಸುತ್ತಿದ್ದರು. ಅವರಲ್ಲಿ ಕೆಲವರು ಅತಿ ಸೂಕ್ಷ್ಮವೆಂದು ತಿಳಿಯಲಾಗುವ ಖತರ್ ಸಬ್ಮರೀನ್ ಯೋಜನೆಯಲ್ಲಿ ಸೇವೆಯಲ್ಲಿದ್ದರು.

ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಠ್, ಕಮಾಂಡರ್ ಅಮಿತ್ ನಾಗಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಕರ್ ಪಕಲ, ಕಮಾಂಡರ್ ಸಂಜೀವ್ ಗುಪ್ತಾ ಹಾಗೂ ನಾವಿಕ ರಾಗೇಶ್ ಬಂಧಿತರಾಗಿದ್ದವರು.

ಅವರ ಜಾಮೀನು ಅರ್ಜಿಗಳು ಹಲವು ಬಾರಿ ತಿರಸ್ಕೃತಗೊಂಡಿದ್ದವು. ಅವರ ಮೊದಲ ವಿಚಾರಣೆ 2023ರ ಮಾರ್ಚ್ 29ರಂದು ನಡೆದಿತ್ತು.

2023ರ ಅಕ್ಟೋಬರ್ನಲ್ಲಿ ಖತರ್ ಕೋರ್ಟ್ ಎಲ್ಲ 8 ಮಂದಿಗೆ ಮರಣದಂಡನೆ ವಿಧಿಸಿತ್ತು. ತೀರ್ಪಿನ ಬಗ್ಗೆ ಭಾರತ ತೀವ್ರ ಆಘಾತ ವ್ಯಕ್ತಪಡಿಸಿತ್ತು.

ಕಾನೂನು ಹೋರಾಟದ ಎಲ್ಲ ಆಯ್ಕೆಗಳನ್ನು ಪರಿಗಣಿಸುತ್ತಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿತ್ತು. ಯಾಕೆ ಅದೊಂದು ಸಂಕೀರ್ಣ ವಿಷಯವಾಗಿತ್ತು? ಯಾಕೆ ಅವರಿಗೆ ಅಷ್ಟು ದೊಡ್ಡ ಶಿಕ್ಷೆ ವಿಧಿಸಲಾಗಿತ್ತು?

ಭಾರತೀಯ ನೌಕಾಪಡೆಯ ಈ ಮಾಜಿ ಅಧಿಕಾರಿಗಳ ಮೇಲಿನ ಆರೋಪಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿಲ್ಲ. ಆರೋಪಗಳ ಕುರಿತು ಕೋರ್ಟ್ ವಿಚಾರಣೆ ವೇಳೆ ಉಲ್ಲೇಖಿಸಿದ್ದರೂ, ಖತರ್ ಅಥವಾ ಭಾರತ ಸರ್ಕಾರ ಅವುಗಳನ್ನು ಬಹಿರಂಗಪಡಿಸಿಲ್ಲ. ಈ 18 ತಿಂಗಳಲ್ಲಿ ಖತರ್ ಇದರ ವಿವರಗಳನ್ನು ಬಹಿರಂಗಪಡಿಸಿಯೇ ಇಲ್ಲ.

ಭಾರತೀಯ ನೌಕಾಪಡೆಯಲ್ಲಿ 20 ವರ್ಷಗಳಲ್ಲಿ ಅವರ ಮೇಲೆ ಯಾವ ಕಳಂಕವೂ ಇದ್ದಿರಲಿಲ್ಲ. ಇಲ್ಲಿಯೂ ಅವರದು ರಕ್ಷಣಾ ಪಡೆಗಳ ಜೊತೆಗಿನ ಮಹತ್ವದ ಹೊಣೆಗಾರಿಕೆಯೆ ಆಗಿತ್ತು. ಆದರೆ, ಖತರ್ನಲ್ಲಿ ಅಂಥದೊಂದು ಶಿಕ್ಷೆ ವಿಧಿಸಿದಾಗ, ಗೂಢಚಾರಿಕೆ ಸಾಬೀತುಪಡಿಸುವ ನಿಜವಾದ ಪುರಾವೆಗಳು ಇದ್ದಿರಬಹುದೆ ಎನ್ನುವಂತಾಗಿತ್ತು.

ಡಿಜಿಟಲ್ ಪುರಾವೆಗಳಿವೆ ಎಂದು ಹೇಳಲಾಗಿತ್ತು. ಗಲ್ಫ್ ನಲ್ಲಿ ಇಂಥದೊಂದು ಆಪತ್ತನ್ನು ಭಾರತ ಮೊದಲ ಬಾರಿಗೆ ಎದುರಿಸಬೇಕಾಗಿ ಬಂದದ್ದು ಖತರ್ನಲ್ಲೇ ಆಗಿತ್ತು. ಅದಾದ ಬಳಿಕ ಮರಣದಂಡನೆಯಿಂದ ಸೀದಾ ಅವರ ಬಿಡುಗಡೆ ವರೆಗಿನ ಹಾದಿ ಎಂಥದಾಗಿತ್ತು?

2023ರ ನವೆಂಬರ್ 9 - ಮರಣದಂಡನೆ ವಿರುದ್ಧದ ಮೇಲ್ಮನವಿ

2023 ನವೆಂಬರ್ 16 – ಮೇಲ್ಮನವಿ ಪ್ರಕ್ರಿಯೆ ಅಂಗೀಕೃತವಾಗಿದೆ ಎಂದು ಭಾರತದ ಹೇಳಿಕೆ

2023 ನವೆಂಬರ್ 23 – ಮರಣದಂಡನೆ ವಿರುದ್ಧದ ಭಾರತದ ಮೇಲ್ಮನವಿ ಖತರ್ ಕೋರ್ಟ್ನಿಂದ ಅಂಗೀಕಾರ

2023 ಡಿಸೆಂಬರ್ 7 – ಖತರ್ನ ಭಾರತೀಯ ರಾಯಭಾರಿಯಿಂದ ಜೈಲಿನಲ್ಲಿದ್ದ ಆ ಮಾಜಿ ಅಧಿಕಾರಿಗಳ ಭೇಟಿ

ಅಷ್ಟರ ಮಟ್ಟಿಗೆ ಭಾರತ ಸರ್ಕಾರ ಉನ್ನತ ಮಟ್ಟದಲ್ಲಿ ಮಧ್ಯಪ್ರವೇಶ ಮಾಡುವುದು ಸಾಧ್ಯವಾಗಿತ್ತು.

2023 ಡಿಸೆಂಬರ್ 27 – ಅತಿ ಮಹತ್ವದ ಬೆಳವಣಿಗೆಯಾಗಿತ್ತು. ಮರಣದಂಡನೆಯನ್ನು ಕೋರ್ಟ್ ಜೀವಾವಧಿಗೆ ಇಳಿಸಿತ್ತು.

2024 ಫೆಬ್ರವರಿ 12 – ಎಲ್ಲ 8 ಮಂದಿಯನ್ನು ಯಾವ ಶಿಕ್ಷೆಯೂ ಇಲ್ಲದೆ ಬಿಡುಗಡೆ ಮಾಡಲಾಯಿತು.

ಹೇಗೆ ಇದು ಸಾಧ್ಯವಾಯಿತು? ಇದರ ಹಿಂದೆ ಹಲವು ಕಾರಣಗಳಿರಬಹುದು. ಅವುಗಳಲ್ಲಿ ಬಹಿರಂಗವಾಗಬಹುದಾದಂಥವು ಕೆಲವಾದರೆ, ಎಂದಿಗೂ ರಹಸ್ಯವಾಗಿಯೇ ಉಳಿಯುವಂಥವೂ ಇನ್ನು ಕೆಲವು. ಮೊದಲನೆಯದಾಗಿ, ಖತರ್ ದೊರೆ ಜೊತೆಗಿನ ಮೋದಿಯ ಉತ್ತಮ ಬಾಂಧವ್ಯ ಎನ್ನಲಾಗುತ್ತಿದೆ.

ಅದರ ಹಿನ್ನೆಲೆಯಲ್ಲಿ ರಾಜತಾಂತ್ರಿಕತೆಯ ಪಾತ್ರ, ಮುಖ್ಯವಾಗಿ ಅಜಿತ್ ಧೋವಲ್ ಮತ್ತು ಜೈಶಂಕರ್ ಪಾತ್ರ ಕೂಡ ಇದೆ.

8 ಅಧಿಕಾರಿಗಳ ಮರಣದಂಡನೆ ಜೀವಾವಧಿಗೆ ಇಳಿದದ್ದು ಮೋದಿ ಖತರ್ನ ಶೇಖ್ ತಮೀಮ್ ಬಿನ್ ಹಮದ್ ಅಲ್ ತಾನಿ ಅವರನ್ನು ಭೇಟಿಯಾದ ಕೆಲ ದಿನಗಳ ಬಳಿಕ. ಎರಡನೆಯದಾಗಿ, ವಾರಗಳ ಹಿಂದಷ್ಟೇ ಮಹತ್ವದ ಎಲ್ಎನ್ ಜಿ ಒಪ್ಪಂದಕ್ಕೆ ಭಾರತ ಸಹಿ ಹಾಕಿದ್ದು. 78 ಬಿಲಿಯನ್ ಡಾಲರ್ ಎಲ್ಎನ್ ಜಿ ಆಮದು ಒಪ್ಪಂದ ಅದಾಗಿದ್ದು, 20 ವರ್ಷಗಳ ಕಾoಟ್ರ್ಯಾಕ್ಟ್ ಆಗಿದೆ.

ಇಂಥ ದೊಡ್ಡ ಒಪ್ಪಂದಗಳು ಪರಸ್ಪರ ಸಂಧಾನಕ್ಕೆ ಹೆಚ್ಚು ಅವಕಾಶಗಳು ತೆರೆಯುತ್ತವೆ ಎಂಬುದೊಂದು ಸಾಧ್ಯತೆಯಾಗಿ ಇಲ್ಲಿ ಕಂಡಿದೆ. ಇದೆಲ್ಲದರ ನಡುವೆಯೇ ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ಟ್ವೀಟ್ ಒಂದು ಚರ್ಚೆ ಹುಟ್ಟುಹಾಕಿದೆ. ಭಾರತೀಯ ನೌಕಾಪಡೆಯ ಅಧಿಕಾರಿಗಳ ಬಿಡುಗಡೆಗೆ ಮೋದಿ ಬಾಲಿವುಡ್ ನಟ ಶಾರೂಕ್ ಖಾನ್ ಅವರ ಮೊರೆ ಹೋಗಿದ್ದರು ಎಂಬ ಹೇಳಿಕೆ ಅದು.

ಅಧಿಕಾರಿಗಳ ಬಿಡುಗಡೆಗೆ ಖತರ್ ಮನವೊಲಿಸಲು ವಿದೇಶಾಂಗ ಸಚಿವಾಲಯ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ವಿಫಲವಾಗಿದ್ದರು. ಈ ವಿಷಯದಲ್ಲಿ ಮಾತುಕತೆ ನಡೆಸುವಂತೆ ಶಾರೂಕ್ ಖಾನ್ ಅವರಿಗೆ ಮೋದಿ ಮನವಿ ಮಾಡಿದ್ದರು. ಶಾರೂಕ್ ಮಧ್ಯಪ್ರವೇಶದಿಂದ ದುಬಾರಿ ಸೆಟ್ಲ್ ಮೆಂಟ್ ಮೂಲಕ ನೌಕಾಪಡೆ ಅಧಿಕಾರಿಗಳ ಬಿಡುಗಡೆಯಾಗಿದೆ. ಹಾಗಾಗಿ ಮೋದಿ ಖತರ್ ಗೆ ಹೋಗುವಾಗ ಶಾರುಖ್ ರನ್ನೂ ಕರೆದುಕೊಂಡು ಹೋಗಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಎಕ್ಸ್ನಲ್ಲಿ ಬರೆದುಕೊಂಡಿದ್ದರು.

ಇದು ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಆದರೆ ಶಾರೂಕ್ ಖಾನ್ ಅವರ ಸೋಷಿಯಲ್ ಮೀಡಿಯಾ ಟೀಂ ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಇದರಲ್ಲಿ ಶಾರೂಕ್ ಪಾತ್ರವಿಲ್ಲ ಎಂದು ಹೇಳಿದೆ. ಈ ಕುರಿತ ಹೇಳಿಕೆ ಪ್ರತಿಯನ್ನು ಶಾರೂಕ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅದೇನೇ ಇದ್ದರೂ, ವರ್ಷಗಟ್ಟಲೆ ಜೀವಭಯದಲ್ಲೇ ಕಳೆದಿದ್ದ ಭಾರತದ ಮಾಜಿ ಅಧಿಕಾರಿಗಳು ಮನೆಗೆ ಮರಳಿದ್ದಾರೆ ಎಂಬುದೇ ಅತ್ಯಂತ ಸಂತಸದ ವಿಷಯ. ಅಂತರರಾಷ್ಟ್ರೀಯ ರಾಜತಾಂತ್ರಿಕತೆ, ಅಂತರರಾಷ್ಟ್ರೀಯ ಕೈದಿ ಹಸ್ತಾಂತರ, ಅಂತರರಾಷ್ಟ್ರೀಯ ರಾಜಕಾರಣ ಇಂಥವನ್ನೆಲ್ಲ ಸಾಮಾನ್ಯವಾಗಿ ಸಿನಿಮಾಗಳಲ್ಲಿ ನೋಡಿರುತ್ತೇವೆ. ಅಂಥ ಘಟನೆಯೊಂದು ವಾಸ್ತವದಲ್ಲೇ ನಡೆದಿದೆ. ಅದರ ಹಿನ್ನೆಲೆಯಲ್ಲಿ ಏನೇನೆಲ್ಲಾ ನಡೆದಿದೆ ಎಂಬುದು ಬಹುಶಃ ಬಹಿರಂಗವಾಗಲಿಕ್ಕೆ ಇಲ್ಲ. ಆದರೆ ಭಾರತದ ನೌಕಾದಳ ಅಧಿಕಾರಿಗಳ ಬಿಡುಗಡೆ ಖಂಡಿತ ಒಂದು ಅಂತರರಾಷ್ಟ್ರೀಯ ರಾಜತಾಂತ್ರಿಕತೆಯ ಗೆಲುವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!