ಟಿಕೆಟ್ ವಂಚಿತ ಹಿರಿಯ ಮುಖಂಡರಿಗೆ ಕಾಂಗ್ರೆಸ್ ಗಾಳ

Update: 2024-03-27 06:25 GMT
Editor : Ismail | Byline : ಆರ್. ಜೀವಿ

ಸಾಂದರ್ಭಿಕ ಚಿತ್ರ

ಲೋಕಸಭೆ ಚುನಾವಣೆಗೆ ಟಿಕೆಟ್ ಘೋಷಣೆ ಬಳಿಕ ರಾಜ್ಯ ಬಿಜೆಪಿಯೊಳಗೆ ಅಸಮಾಧಾನಿತರ ಪಟ್ಟಿ ಹೆಚ್ಚುತ್ತಲೇ ಇದೆ.

ಎಷ್ಟವರೆಗೆ ಅಂದ್ರೆ ಸ್ವತಃ ಪ್ರಧಾನಿ ಮೋದಿಯೇ ರಾಜ್ಯಕ್ಕೆ ಬಂದರೂ ಬಗೆಹರಿಯಲಾರದಂತಹ ಬಿಕ್ಕಟ್ಟಾಗಿ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇದೇ ರೀತಿ ಟಿಕೆಟ್ ವಂಚಿತ ನಾಯಕರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದರು.

ಅದರ ಸಂಪೂರ್ಣ ಲಾಭ ಬಾಚಿಕೊಂಡಿದ್ದು ಕಾಂಗ್ರೆಸ್

ಈಗಲೂ ಅದೇ ರೀತಿ ಬಿಜೆಪಿಯ ಅತೃಪ್ತರನ್ನು ಸೆಳೆಯಲು ಕಾಂಗ್ರೆಸ್ ಗೇಮ್ ಪ್ಲಾನ್ ಒಂದನ್ನು ಹೆಣೆದಿದೆ ಎಂದು ವರದಿಯಾಗಿದೆ.

ಈ ಮೂಲಕ ೨೮ ಕ್ಕೆ ೨೮ ಸೀಟು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಬಿಜೆಪಿಗೆ ಅಖಾಡಕ್ಕಿಳಿಯುವ ಮುನ್ನವೇ ಆಘಾತ ನೀಡುವುದು ಕಾಂಗ್ರೆಸ್ ಪ್ಲ್ಯಾನ್ ಎಂದು ಹೇಳಲಾಗುತ್ತಿದೆ

ಈ ನಿಟ್ಟಿನಲ್ಲಿ ಮಾಜಿ ಸಿಎಂ ಡಿವಿ ಸದಾನಂದ ಗೌಡ, ಎಂಪಿ ರೇಣುಕಾಚಾರ್ಯ, ಸಂಗಣ್ಣ ಕರಡಿ, ಜೆ.ಸಿ ಮಾಧುಸ್ವಾಮಿ ಸೇರಿ ಹಲವರನ್ನು ಕಾಂಗ್ರೆಸ್ ತನ್ನತ್ತ ಸೆಳೆಯಲು ಮುಂದಾಗಿದೆ.

ವಿಧಾನಸಭೆ ಚುನಾವಣೆ ವೇಳೆ ಅಸಮಾಧಾನಿತರಾಗಿದ್ದ ಟಿಕೆಟ್ ವಂಚಿತ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಅವರನ್ನು ಕಾಂಗ್ರೆಸ್ ಸೆಳೆದುಕೊಂಡಿತ್ತು. ಬಿಜೆಪಿ ಲಿಂಗಾಯುತ ವಿರೋಧಿ ಎಂದು ಆಗ ಕಾಂಗ್ರೆಸ್ ದೊಡ್ಡ ಮಟ್ಟದಲ್ಲೇ ಅಭಿಪ್ರಾಯ ಮೂಡಿಸುವ ಕೆಲಸ ಮಾಡಿತ್ತು. ಬಿ ಎಸ್ ವೈ ಯನ್ನೂ ಆಗ ಬಿಜೆಪಿ ಬದಿಗೆ ಸರಿಸಿದ್ದರಿಂದ ಕಾಂಗ್ರೆಸ್ ಆರೋಪಕ್ಕೂ ಪುಷ್ಟಿ ಸಿಕ್ಕಿತು. ಇದೆಲ್ಲವೂ ಆ ಕ್ಷಣಕ್ಕೆ ಕಾಂಗ್ರೆಸ್ ಗೆ ನೆರವಾಗಿತ್ತು. ಸವದಿ ಗೆದ್ದು ಶಾಸಕರಾದರೂ, ಶೆಟ್ಟರ್ ಸೋತರೂ ಮಾಜಿ ಸಿಎಂ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು ಕೈಗೆ ಪ್ಲಸ್ ಆಗಿತ್ತು.

ಈಗ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್‌ ಕೈತಪ್ಪಿದ್ದರಿಂದ ಮುನಿಸಿಕೊಂಡಿರುವ ಸಂಸದ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಅವರನ್ನು ಕಾಂಗ್ರೆಸ್‌ ಸಂಪರ್ಕಿಸಿದ್ದು, ತಮ್ಮ ನಿರ್ಧಾರವನ್ನು ಇಂದು ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ.

‘ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಹೇಳಿದ್ದ ಡಿ.ವಿ.ಸದಾನಂದಗೌಡ ಅವರನ್ನು ಬಿಜೆಪಿಯ ಕೆಲವು ನಾಯಕರೇ ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ತಾವೂ ಟಿಕೆಟ್‌ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಪಕ್ಷ ಅವರ ಕೈ ಬಿಟ್ಟಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ಘೋಷಿಸಿದ ಬೆನ್ನಲ್ಲೇ ಸದಾನಂದಗೌಡರು ಮುನಿಸಿಕೊಂಡಿದ್ದಾರೆ. ‘ತಮಗೆ ಟಿಕೆಟ್‌ ತಪ್ಪಿದ ಕಾರಣ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿದೆ‘ ಎಂದು ದೂರಿದ್ದ ಗೌಡರು, ಇದೀಗ ತಮ್ಮ ಮುಂದಿನ ರಾಜಕೀಯ ನಡೆಯನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸುವುದಾಗಿ ಹೇಳಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಂಸದ ಸದಾನಂದಗೌಡ ಅವರಿಗೆ ಬೆಂ.ಉತ್ತರ ಕ್ಷೇತ್ರದಿಂದಲೇ ಟಿಕೆಟ್‌ ನೀಡುವ ಬಗ್ಗೆ ಕಾಂಗ್ರೆಸ್ಸಲ್ಲಿ ಪ್ರಾಥಮಿಕ ಚರ್ಚೆ ನಡೆದಿದೆ ಎನ್ನಲಾಗಿದೆ. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹಾಲಿ ಕಾಂಗ್ರೆಸ್ ಶಾಸಕ ಪ್ರಿಯಕೃಷ್ಣ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ಹೀಗಾಗಿ ಸದಾನಂದ ಗೌಡ ಹೆಸರು ಪರಿಶೀಲಿಸಲಾಗಿದೆ. ಆದರೆ ಸದಾನಂದ ಗೌಡ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇನ್ನು, ಬಿಜೆಪಿ ಟಿಕೆಟ್ ಘೋಷಣೆಗೂ ಮುನ್ನವೇ ದಾವಣಗೆರೆ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಕುಟುಂಬಕ್ಕೆ ಯಾವ ಕಾರಣಕ್ಕೂ ಈ ಬಾರಿ ಟಿಕೆಟ್ ನೀಡಬಾರದು. ಟಿಕೆಟ್ ನೀಡಿದರೆ ಅವರಿಗೆ ನಮ್ಮ ಬೆಂಬಲ ಇರುವುದಿಲ್ಲ. ಈಗಿರೋ ಲೋಕಸಭಾ ಸದಸ್ಯರು ನಾಲ್ಕು ಬಾರಿ ಗೆದ್ದಿದ್ದಾರೆ, ನಾವು ಸೋತಿರಬಹುದು. ಮಾಜಿ ಶಾಸಕರು, ಮಾಜಿ ಸಚಿವರಿಂದ ಈಗಿರೋ ಸಂಸದರಿಗೆ ವಿರೋಧ ಇದೆ. ದಾವಣಗೆರೆಯಲ್ಲಿ ನನ್ನ ಬಿಟ್ಟರೆ ಯಾರೂ ಇಲ್ಲ. ಶಾಮನೂರು ಶಿವಶಂಕರಪ್ಪ ವಿರುದ್ಧ ಹೋರಾಟ ಮಾಡಿರುವವನು ನಾನೊಬ್ಬನೇ. ನನಗೆ ಟಿಕೆಟ್ ಕೊಡಿ, ನನ್ನ ಹೆಂಡತಿಗೆ ಕೊಡಿ, ಇಲ್ಲ ಮಕ್ಕಳಿಗೆ ಕೊಡಿ ಅಂತ ಹೇಳ್ತಿದ್ದಾರೆ. ಅವರ ದುರಹಂಕಾರದ ಮಾತುಗಳ ಬಗ್ಗೆ ವಿರೋಧ ಇದೆ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಬಹಿರಂಗವಾಗಿ ಹೇಳಿದ್ದರು.

ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರಗೆ ಲೋಕಸಭಾ ಟಿಕೆಟ್‌ ಪ್ರಕಟವಾಗುತ್ತಿದ್ದಂತೆ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಮನೆಯಲ್ಲಿ ಅಸಮಾಧಾನಿತರ ಸಭೆ ಸೇರಲಾಗಿದೆ. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್, ಮಾಜಿ ಶಾಸಕ ಗುರುಸಿದ್ದನಗೌಡ ಪುತ್ರ ಡಾ. ರವೀಂದ್ರ ಸಭೆ ಸೇರಿದ್ದಾರೆ ಎನ್ನಲಾಗಿತ್ತು. ಯಾವ ಕಾರಣಕ್ಕೂ ಗಾಯತ್ರಿ ಸಿದ್ದೇಶ್ವರ್ ರನ್ನು ಬೆಂಬಲಿಸಲು ಈ ನಾಯಕರು ಸಿದ್ಧರಿಲ್ಲ.

ಮತ್ತೋರ್ವ ಹಾಲಿ ಸಂಸದ ಕೊಪ್ಪಳದ ಸಂಗಣ್ಣ ಕರಡಿ ಲೋಕಸಭಾ ಚುನಾವಣೆಗೆ ನನಗೆ ಟಿಕೆಟ್‌ ತಪ್ಪಿದರೂ ರಾಜ್ಯದ ಒಬ್ಬ ನಾಯಕ ಕೂಡ ಸೌಜನ್ಯಕ್ಕೂ ಫೋನ್‌ ಕರೆ ಮಾಡಲಿಲ್ಲ. ಅವರೆಲ್ಲರೂ ನನ್ನನ್ನು ಗುಜರಿ ರಾಜಕಾರಣಿ ಅಂದುಕೊಂಡಿದ್ದಾರೆಯೇ’ ಎಂದು ಪ್ರಶ್ನಿಸುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

ಬಿಜೆಪಿ ವರಿಷ್ಠರ ವಿರುದ್ಧ ಗರಂ ಆಗಿರುವ ಅವರು ‘ಟಿಕೆಟ್‌ ತಪ್ಪಿದರೂ ಯಾಕೆ ಒಬ್ಬರೂ ಕರೆ ಮಾಡಿಲ್ಲ, ಯಾಕೆ ಟಿಕೆಟ್ ತಪ್ಪಿಸಲಾಯಿತು ಹಾಗೂ ಯಾರು ನನಗೆ ಟಿಕೆಟ್‌ ತಪ‍್ಪಿಸಿದರು ಎನ್ನುವ ಪ್ರಶ್ನೆಗಳಿಗೆ ಉತ್ತರ ಬೇಕೇ ಬೇಕು. ಉತ್ತರ ಬಂದ ಬಳಿಕವಷ್ಟೇ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುವೆ. ರಾಜಕೀಯವಾಗಿ ನಿವೃತ್ತಿಯಾಗುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿಯೇ ಇರುವೆ. ಮಾಡಬೇಕಾದ ಸಾಕಷ್ಟು ಕೆಲಸಗಳು ಇವೆ’ ಎಂದಿದ್ದಾರೆ. ಇದೆ ವೇಳೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಮಾತನಾಡಿದ್ದಾರೆ ಎಂದು ಹೇಳುವ ಮೂಲಕ ಬಂಡಾಯದ ಸೂಚನೆ ನೀಡಿದ್ದಾರೆ.

ತುಮಕೂರಿನಲ್ಲಿ ಸೋಮಣ್ಣರಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಮುನಿಸಿಕೊಂಡಿರುವ ಜೆಸಿ ಮಾಧುಸ್ವಾಮಿ ಅವರು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ವಿ.ಸೋಮಣ್ಣ ಅವರ ಪರವಾಗಿ ಪ್ರಚಾರ ಮಾಡುವುದಿಲ್ಲ. ಈ ವಿಷಯವನ್ನು ಯಡಿಯೂರಪ್ಪ ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನನಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ ಬಿ.ಎಸ್. ಯಡಿಯೂರಪ್ಪ ನನ್ನನ್ನು ಬಲಿಕೊಟ್ಟರು ಎಂದಿರುವ ಜೆ.ಸಿ.ಮಾಧುಸ್ವಾಮಿ, ಅಭ್ಯರ್ಥಿಯ ಪರ ಪ್ರಚಾರ ಮಾಡುವುದಿಲ್ಲ. ಅಪ್ಪ ಮಕ್ಕಳಿಗೆ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯೊಳಗೆ ತನ್ನ ವಿವಾದಿತ ಹೇಳಿಕೆಗಳಿಂದಾಗಿ ಫೈರ್ ಬಾಂಡ್ ಎಂದೇ ಕರೆಸಿಕೊಂಡಿದ್ದ ಹಿರಿಯ ನಾಯಕ ಈಶ್ವರಪ್ಪ ತನ್ನ ಮಗನಿಗೆ ಟಿಕೆಟ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಕೆರಳಿ ಕೆಂಡವಾಗಿರೋದು ಮತ್ತು ಪಕ್ಷದಲ್ಲಿ ಇದ್ದೇನೆ, ಮೋದಿ ಬೇಕು ಎಂದುಕೊಂಡೇ ಪಕ್ಷೇತರನಾಗಿ ಸ್ಪರ್ಧಿಸಲು ನಿಂತಿರೋದು ಒಂದೆಡೆ ಇದೆ. ಯಡಿಯೂರಪ್ಪ ಕುಟುಂಬದ ವಿರುದ್ಧ ಬಹಿರಂಗವಾಗಿ ಹರಿಹಾಯ್ದಿರುವ ಅವರು ನಿನ್ನೆ ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಬಂದಾಗಲೂ ಅಲ್ಲಿಗೆ ಹೋಗಿಲ್ಲ. ನಾನು ಸ್ಪರ್ಧಿಸಿಯೇ ಸಿದ್ಧ ಎಂದು ಈಶ್ವರಪ್ಪ ಘೋಷಿಸಿದ್ದಾರೆ.

ಈ ಎಲ್ಲಾ ಅತೃಪ್ತರನ್ನು ತನ್ನತ್ತ ಸೆಳೆದುಕೊಳ್ಳುವ ಕಾಂಗ್ರೆಸ್ ತಂತ್ರಗಾರಿಕೆ ಎಷ್ಟು ಫಲ ನೀಡಲಿದೆ ಅನ್ನೋದನ್ನು ಕಾದುನೋಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!