ಸೇನಾ ಪಡೆಗಳ ಮುಖ್ಯಸ್ಥರ ಸಾವಿನ ಸತ್ಯ ದೇಶಕ್ಕೆ ತಿಳಿಯಬೇಡವೇ ?

Update: 2023-12-08 12:48 GMT
Editor : Ismail | Byline : ಆರ್. ಜೀವಿ

ಭಾರತದ ಮೊದಲ ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌, ಜನರಲ್‌ ಬಿಪಿನ್‌ ರಾವತ್‌, ಅವರ ಪತ್ನಿ ಮಧುಲಿಕಾ ರಾವತ್ ಮತ್ತು 12 ಮಂದಿ ಸೇನಾ ಸಿಬ್ಬಂದಿಯನ್ನು ಬಲಿ ಪಡೆದಿದ್ದ ಸೇನಾ ಹೆಲಿಕಾಪ್ಟರ್ ದುರಂತದ ತನಿಖೆ ಸ್ಥಗಿತಗೊಳಿಸಲಾಗಿದೆ. 2021ರ ಡಿಸೆಂಬರ್‌ 8ರಂದು ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್‌ ಪತನ ಅದಾಗಿತ್ತು. ಕೊಯಂಬತ್ತೂರಿನ ಸೂಲೂರು ವಾಯುನೆಲೆಯಿಂದ ನೀಲಗಿರಿಯ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್‌ ಸರ್ವಿಸಸ್‌ ಸ್ಟಾಫ್‌ ಕಾಲೇಜಿನತ್ತ ತೆರಳುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ಗೆ ಕೆಲವೇ ನಿಮಿಷಗಳ ಮೊದಲು ಆಳವಾದ ಕಣಿವೆಗೆ ಅಪ್ಪಳಿಸಿ ಪತನಗೊಂಡಿತ್ತು.

ಆ ದುರಂತದ ಕುರಿತು ತನಿಖೆಯನ್ನು ತಮಿಳುನಾಡು ಪೊಲೀಸರು ಈಗ ಸ್ಥಗಿತಗೊಳಿಸಿದ್ದಾರೆ.

ಸೇನಾ ಪಡೆಗಳ ಮುಖ್ಯಸ್ಥರಿದ್ದ ಹೆಲಿಕಾಪ್ಟರ್ ದುರಂತದ ಬಗ್ಗೆ ಕ್ರಿಮಿನಲ್ ದಂಡಸಂಹಿತೆಯ ಸೆಕ್ಷನ್ 174ರ ಅಡಿಯಲ್ಲಿ ನೀಲಗಿರಿ ಜಿಲ್ಲೆಯ ಅಪ್ಪರ್ ಕುನೂರು ಪೊಲೀಸರು ಪ್ರಕರಣ ದಾಖಲಿಸಿದ್ದರು.

ಆದರೆ, ಪತನಗೊಂಡ ಹೆಲಿಕಾಪ್ಟರ್ ನ ಫ್ಲೈಟ್‌ ಡೇಟಾ ರೆಕಾರ್ಡರ್‌, ಕಾಕ್‌ಪಿಟ್‌ ವಾಯ್ಸ್‌ ರೆಕಾರ್ಡರ್‌ ಹಾಗೂ ಹವಾಮಾನ ಕ್ಲಿಯರೆನ್ಸ್‌ ವರದಿ ಕುರಿತ ಪ್ರಮುಖ ಪುರಾವೆಗಳ ಕುರಿತು ಮಾಹಿತಿ ಕೊರತೆಯಿಂದಾಗಿ ಆವರು ತನಿಖೆ ಬಾಕಿಯಿರಿಸಿದ್ದರು. ಈ ಯಾವುದೇ ಮಾಹಿತಿಯನ್ನು ವಾಯುಪಡೆ ಅಧಿಕಾರಿಗಳು ತನಿಖಾಧಿಕಾರಿಗಳೊಂದಿಗೆ ಹಂಚಿಕೊಂಡಿರದೇ ಇದ್ದುದರಿಂದ ತನಿಖೆ ಸಾಧ್ಯವಾಗಿರಲಿಲ್ಲ.

ರಕ್ಷಣಾ ಗೌಪ್ಯತೆ ವಿಭಾಗದಲ್ಲಿ ಈ ಮಾಹಿತಿ ಬರುತ್ತದೆ ಎಂಬ ಉತ್ತರ ನೀಡಲಾಗಿತ್ತಲ್ಲದೆ ಮಾಹಿತಿಗಾಗಿ ಏರೋಸ್ಪೇಸ್‌ ಸೇಫ್ಟಿ ಡೈರೆಕ್ಟೊರೇಟ್‌ ಅನ್ನು ಸಂಪರ್ಕಿಸುವಂತೆಯೂ ಸೂಚಿಸಲಾಗಿತ್ತು.

ಅಪಘಾತದ ತನಿಖೆಗಾಗಿ ರಚಿಸಲಾಗಿದ್ದ ಟ್ರೈ-ಸರ್ವಿಸ್ ತನಿಖಾ ಮಂಡಳಿ 2022ರ ಜನವರಿ 14ರಂದು ಸಲ್ಲಿಸಿದ್ದ ಪ್ರಾಥಮಿಕ ತನಿಖಾ ವಿವರಗಳು, ಹವಾಮಾನ ಪರಿಸ್ಥಿತಿಯಲ್ಲಿನ ಅನಿರೀಕ್ಷಿತ ಬದಲಾವಣೆಯಿಂದಾಗಿ ಈ ಪತನ ಸಂಭವಿಸಿದೆ ಎಂದು ಹೇಳಿದ್ದವು. ಯಾವುದೇ ಯಾಂತ್ರಿಕ ವೈಫಲ್ಯ, ವಿಧ್ವಂಸಕ ಕೃತ್ಯ ಅಥವಾ ನಿರ್ಲಕ್ಷ್ಯ ಈ ಅಪಘಾತಕ್ಕೆ ಕಾರಣವಲ್ಲ ಎಂದು ಕೋರ್ಟ್ ಆಫ್ ಇಂಕ್ವೈರಿ ಕಂಡುಕೊಂಡಿರೋದಾಗಿ ವಾಯುಪಡೆ ಹೇಳಿತ್ತು.

ಅಂದು ಯಾವುದೇ ಸಂಚು ನಡೆದಿಲ್ಲ ಎಂದು ನಮ್ಮ ತನಿಖೆ ಹೇಳುತ್ತದೆ. ಆದರೆ ಅಂತಿಮ ವರದಿ ಫ್ಲೈಟ್‌ ಡೇಟಾ ರೆಕಾರ್ಡರ್‌, ಕಾಕ್‌ಪಿಟ್‌ ವಾಯ್ಸ್‌ ರೆಕಾರ್ಡರ್‌ ಹಾಗೂ ಹವಾಮಾನ ಕ್ಲಿಯರೆನ್ಸ್‌ ವರದಿ ಕುರಿತ ಮಾಹಿತಿ ಸಿಕ್ಕಿದ ಮೇಲೆಯೇ ಕೊಡಬಹುದು ಎಂದು ದಿ ಹಿಂದೂ ಪತ್ರಿಕೆಗೆ ಹೇಳಿದ್ದಾರೆ ತಮಿಳುನಾಡಿನ ಓರ್ವ ಹಿರಿಯ ಪೊಲೀಸ್ ಅಧಿಕಾರಿ.

ಈಗ ಪೊಲೀಸರು ತನಿಖೆ ಸ್ಥಗಿತಗೊಳಿಸಿದ್ದಾರೆ. ಹಾಗಾದರೆ ಇಷ್ಟು ದೊಡ್ಡ ದುರಂತದ ಕುರಿತ ಸತ್ಯ ಬಯಲಾಗುವುದೇ ಇಲ್ಲವೇ? ಈ ಕುರಿತ ಸತ್ಯ ಜನರಿಗೆ ತಿಳಿಯಬೇಡವೇ? . ಈ ದೇಶದಲ್ಲಿ ಅನೇಕ ಗಂಭೀರ ವಿಚಾರಗಳ ಕುರಿತು ಮೂಡುವ ಅನುಮಾನಗಳು ಬಗೆಹರಿಯದೆ ನಿಗೂಢವಾಗಿಯೇ ಉಳಿಯುತ್ತಿರೋದು ಯಾಕೆ ?​

ಈಗ, ದೇಶದ ಅತ್ಯಂತ ಗಂಭೀರ ಸೇನಾ ದುರಂತವೊಂದರ ವಿಚಾರವೂ ರಹಸ್ಯವಾಗಿಯೇ ಉಳಿಯುವ ಸೂಚನೆಗಳು ಕಾಣಿಸ್ತಿವೆ. ದೇಶದ ಅತ್ಯುನ್ನತ ಮಿಲಿಟರಿ ಅಧಿಕಾರಿಯ ಸಾವಿಗೆ ಕಾರಣ ಏನು ಅನ್ನೋದು ಕೊನೆಗೂ ರಹಸ್ಯವಾಗಿಯೇ ಉಳಿಯಲಿದೆಯೇ ಅನ್ನೋ ಪ್ರಶ್ನೆ ಎದ್ದಿದೆ.

ವಿಚಾರವೇನೆಂದರೆ, ಯಾಕೆಂದರೆ ಬಿಪಿನ್ ರಾವತ್ ಸಾವು ದೇಶದ ಜನರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವುದಕ್ಕೆ ಕಾರಣಗಳಿದ್ದವು.

ಶಿವಸೇನೆ ನಾಯಕ ಸಂಜಯ್ ರಾವುತ್ ಅವತ್ತು ಎತ್ತಿದ್ದ ಅನುಮಾನದಂತೆ, ಬಿಪಿನ್ ರಾವತ್ ಅವರು ಆ ಹೊತ್ತಲ್ಲಿ ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ಭಾರತದ ಮಿಲಿಟರಿ ನಡೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ಭಾರತ ನಡೆಸಿದ್ದ ವೈಮಾನಿಕ ದಾಳಿಯಲ್ಲೂ ರಾವತ್ ಪಾತ್ರ ಪ್ರಮುಖವಾಗಿತ್ತು. ರಾವತ್ ಅವರ ಪ್ರಯಾಣಕ್ಕೆ ಅವತ್ತು ಬಳಸಲಾಗಿದ್ದ ಸೇನಾ ಹೆಲಿಕಾಪ್ಟರ್ ಅತ್ಯಾಧುನಿಕವಾಗಿದ್ದ ಹಿನ್ನೆಲೆಯಲ್ಲಿಯೂ, ಅಂಥದೊಂದು ದುರಂತ ಸಂಭವಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಸಂಜಯ್ ರಾವುತ್ ಎತ್ತಿದ್ದರು.

ಇಡೀ ದೇಶದ ಎದುರು ಆ ಅಪಘಾತದಿಂದ ಮೂಡಿರಬಹುದಾದ ಗೊಂದಲಗಳನ್ನು, ಅನುಮಾನಗಳನ್ನು ರಕ್ಷಣಾ ಮಂತ್ರಿ ಅಥವಾ ಪ್ರಧಾನಿ ಹೋಗಲಾಡಿಸಬೇಕಿದೆ ಎಂದೂ ಅವತ್ತು ಸಂಜಯ್ ರಾವುತ್ ಒತ್ತಾಯಿಸಿದ್ದರು. ಜನರಲ್ ಬಿಪಿನ್ ರಾವತ್ ಅವರ ನಿಧನದ ನಂತರದ, ಎದ್ದಿದ್ದ ಆ ಪ್ರಶ್ನೆಗಳು ಕ್ಷುಲ್ಲಕವಾಗಿರಲಿಲ್ಲ.

ಇಬ್ಬರು ತಜ್ಞರ ವಿಶ್ಲೇಷಣೆಯನ್ನು ಆಧರಿಸಿ ಟೈಮ್ಸ್ ಆಫ್ ಇಂಡಿಯಾದ ಮೀನಲ್ ಬಘೇಲ್ ಡಿಸೆಂಬರ್ 9, 2021 ರಂದು ಒಂದು ವಿಶೇಷ ವರದಿ ಮಾಡಿದ್ದರು. ಅದರಲ್ಲಿನ ಪ್ರಮುಖ ಅಂಶಗಳು ಹೀಗಿದ್ದವು:

ಅವತ್ತು ಎದ್ದಿದ್ದ ಮೊದಲ ಪ್ರಶ್ನೆಯೇ, ಅಪಘಾತಕ್ಕೀಡಾಗಿದ್ದ Mi-17V5 ಹೆಲಿಕಾಪ್ಟರ್‌ಗೆ ಸಂಬಂಧಿಸಿದ್ಧಾಗಿತ್ತು.

ಯಾಕೆಂದರೆ ಅದು ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವವರನ್ನು ಸಾಗಿಸಲು ಬಳಸುವ ಹೆಲಿಕಾಪ್ಟರ್ ಆಗಿತ್ತು.

ರಷ್ಯಾ ನಿರ್ಮಿತ Mi-17V5, ವಾಯುಪಡೆಯ ಅತ್ಯಂತ ವಿಶ್ವಾಸಾರ್ಹ ಹೆಲಿಕಾಪ್ಟರ್. ದುರಂತದ ನಂತರ ಅದರ ಸಂಭಾವ್ಯ ದೌರ್ಬಲ್ಯಗಳ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಲಾಗುವುದು ಎಂಬ ಮಾತುಗಳು ಕೇಳಿಬಂದವು.

ಭಾರತೀಯ ವಾಯುಪಡೆಯಲ್ಲಿ 36 ವರ್ಷಗಳ ಸುದೀರ್ಘ ಸೇವೆಯಲ್ಲಿ ಫ್ರಂಟ್ ಲೈನ್ ಹೆಲಿಕಾಪ್ಟರ್ ಯೂನಿಟ್ ಮತ್ತು ಎರಡು ಹಾರಾಟ ನೆಲೆಗಳಿಗೆ ಕಮಾಂಡರ್ ಆಗಿದ್ದ ಏರ್ ವೈಸ್-ಮಾರ್ಷಲ್ ಮನಮೋಹನ್ ಬಹದ್ದೂರ್ ಅವರ ವಿಶ್ಲೇಷಣೆಯನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.

ಅವರು ಹೇಳುವಂತೆ, ಅದು ಎಲ್ಲಾ ಭಾರತೀಯ ವಿವಿಐಪಿಗಳನ್ನು ಸಾಗಿಸಲು ಬಳಸಲಾಗುತ್ತಿದ್ದ ಹೆಲಿಕಾಪ್ಟರ್ ಆಗಿತ್ತು. ಅದು ಏರ್ ​ಹೆಡ್‌ಕ್ವಾರ್ಟರ್ಸ್ ಕಮ್ಯುನಿಕೇಷನ್ ಸ್ಕ್ವಾಡ್ರನ್‌ನ ಭಾಗವಾಗಿದ್ದು, ರಾಷ್ಟ್ರಪತಿ, ಪ್ರಧಾನಿ, ಉಪರಾಷ್ಟ್ರಪತಿ ಮತ್ತು ಎಲ್ಲಾ ವಿಐಪಿಗಳ ಪ್ರಯಾಣಕ್ಕೆ ಬಳಕೆಯಾಗುತ್ತಿತ್ತು.

ಸುರಕ್ಷತೆ ದೃಷ್ಟಿಯಿಂದಲೂ ಅದು ಉತ್ತಮ ರೆಕಾರ್ಡ್ ಹೊಂದಿದ್ದಾಗಿತ್ತು. ವಿವಿಐಪಿಗಳನ್ನು ಸಾಗಿಸಲೆಂದೇ ಮಾರ್ಪಡಿಸಲಾಗಿದ್ದ ಕೆಲವೇ ಹೆಲಿಕಾಪ್ಟರ್ಗಳಲ್ಲಿ ಅದು ಒಂದಾಗಿತ್ತು.

ಮುಖ್ಯ ಸಂಗತಿಯೇನೆಂದರೆ, ವಿವಿಐಪಿಗಳ ಹಾರಾಟಕ್ಕೆ ಬಳಸುವಾಗ ಅದು ಉನ್ನತ ಮಟ್ಟದ ಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

ಹಾರಾಟಕ್ಕೆ ಮೊದಲು ಕೆಲವು ವಿಶೇಷ ತಪಾಸಣೆಗಳನ್ನು ನಡೆಸಲಾಗುತ್ತದೆ ಮತ್ತು ಅದರ ಸಿಬ್ಬಂದಿ ಕೂಡ ಕೆಲವು ನಿರ್ದಿಷ್ಟ ಅರ್ಹತೆಗಳನ್ನು ಹೊಂದಿರುವವರೇ ಆಗಿರುತ್ತಾರೆ.

ಅದರ ಪೈಲಟ್ ಕೂಡ ಒಂದು ಅಥವಾ ಎರಡು ದಿನಗಳ ಮೊದಲೇ ಗಣ್ಯರು ಪ್ರಯಾಣಿಸುವ ದಾರಿಯಲ್ಲೇ ಪರೀಕ್ಷಾರ್ಥ ಹಾರಾಟ ನಡೆಸಿ ಪರಿಶೀಲಿಸುವ ಮತ್ತು ಆ ದಾರಿಯನ್ನು ಪೂರ್ತಿಯಾಗಿ ಪರಿಚಯಿಸಿಕೊಳ್ಳುವ ಪ್ರಕ್ರಿಯೆ ಕೂಡ ನಡೆದಿರುತ್ತದೆ. ಅಲ್ಲದೆ ಆ ನಿರ್ದಿಷ್ಟ ಹೆಲಿಕಾಪ್ಟರ್‌ನ ದಾಖಲೆಗಳನ್ನು ತಾಂತ್ರಿಕವಾಗಿ ಅತ್ಯಂತ ಅರ್ಹತೆ ಹೊಂದಿರುವ ತಂಡ ಸಂಪೂರ್ಣವಾಗಿ ಪರಿಶೀಲಿಸಿರುತ್ತದೆ.

ಹೀಗಿರುವಾಗ, ಅವತ್ತು ಆ ಅಪಘಾತ ಏಕೆ ಸಂಭವಿಸಿತು ಎಂಬುದು ಬಗೆಹರಿಯದ ಪ್ರಶ್ನೆಯಾಗಿತ್ತು. ಭಾರತದ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಗಂಭೀರ ಅಪಘಾತಗಳಲ್ಲಿ ಅದು ಒಂದಾಗಿತ್ತು. ಇನ್ನು, ರಾವತ್ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಿದ್ದ ಹಿನ್ನೆಲೆಯಲ್ಲೂ ಈ ದುರಂತದ ಬಗ್ಗೆ ಅನುಮಾನಗಳು ಎದ್ದಿದ್ದವು.

ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಉಲ್ಲೇಖಿಸಲಾಗಿದ್ದ ಪತ್ರಕರ್ತ ರಾಹುಲ್ ಬೇಡಿ ಅವರ ಮಾತುಗಳ ಪ್ರಕಾರ, ಸೇನಾ ಮುಖ್ಯಸ್ಥರಾಗಿದ್ದ ಸಮಯದಲ್ಲಿ ಮತ್ತು ನಂತರ ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್ ಆಗಿದ್ದ ವೇಳೆ ರಾವತ್ ಅವರು ವಿವಾದಾತ್ಮಕ ವ್ಯಕ್ತಿತ್ವದವರಾಗಿದ್ದರು.

ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಸಾರ್ವಜನಿಕವಾಗಿ ಸಾಯಿಸಬೇಕೆಂದು ಅವರು ನೀಡಿದ್ದ ಹೇಳಿಕೆ ಸೇನಾ ಸಮವಸ್ತ್ರದಲ್ಲಿರುವ ಮತ್ತು ಅಂಥ ಹಿರಿಯ ಸೇನಾ ಅಧಿಕಾರಿಗೆ ತಕ್ಕದ್ದಾಗಿರಲಿಲ್ಲ ಎಂಬ ಅಭಿಪ್ರಾಯಗಳಿದ್ದವು. 2016ರಲ್ಲಿ ರಾವತ್ ಅವರನ್ನು ಸೇನಾ ಪಡೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದು, ಅವರಿಗಿಂತಲೂ ಹಿರಿಯರಾದ ಇಬ್ಬರು ಅಧಿಕಾರಿಗಳನ್ನು ಕಡೆಗಣಿಸಿದ್ದ ಹಿನ್ನೆಲೆಯಲ್ಲಿ ವಿವಾದವನ್ನು ಹುಟ್ಟುಹಾಕಿತ್ತು.

ಇದೆಲ್ಲ ಏನೇ ಇದ್ದರೂ, ದೇಶದ ಅತ್ಯುನ್ನತ ಸೇನಾಧಿಕಾರಿ, ಅವರ ಪತ್ನಿ, ಸೇನೆಯ ಹಿರಿಯ ಅಧಿಕಾರಿಗಳ ಸಹಿತ 12 ಸೇನಾ ಸಿಬ್ಬಂದಿಗಳ ದುರಂತ ಸಾವಿನ ವಿಚಾರದಲ್ಲಿರುವ ರಹಸ್ಯಗಳು ರಹಸ್ಯಗಳಾಗಿಯೇ ಇರುವಂತಾಗಿರುವುದು ಈಗಿನ ಪ್ರಶ್ನೆಯಾಗಿದೆ.

2019 ರಲ್ಲಿ ಈ ದೇಶದ 40 ವೀರ ಯೋಧರನ್ನು ಬಲಿ ಪಡೆದ ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತ ಹತ್ತು ಹಲವು ಪ್ರಶ್ನೆಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಆ ಸಂದರ್ಭದಲ್ಲಿ ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಅವರೂ ಆ ದಾಳಿ ಬಗ್ಗೆ ಹಲವು ಗಂಭೀರ ಪ್ರಶ್ನೆಗಳಿಗೆ ನನಗೂ ಉತ್ತರ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಆದರೆ ಅಷ್ಟು ದೊಡ್ಡ ದಾಳಿ ನಡೆದು ವರ್ಷ ಐದಾಗುತ್ತಾ ಬಂದರೂ ಇನ್ನೂ ಆ ಪ್ರಶ್ನೆಗಳಿಗೆ ಉತ್ತರವಿಲ್ಲ.

ಸತ್ಯಗಳನ್ನು ಅಡಗಿಸಿಕೊಂಡಿರುವ ದಾಖಲೆಗಳ ವಿವರ ಏಕೆ ಬಹಿರಂಗವಾಗುವುದಿಲ್ಲ, ಮತ್ತು ಆ ಮೂಲಕ ಏಕೆ ದೇಶದ ಜನರಿಂದ ಕೆಲವು ವಿಚಾರಗಳನ್ನು ಮರೆಮಾಚಲಾಗುತ್ತದೆ ಎಂಬುದೇ ಬಗೆಹರಿಯದ ವಿಚಾರವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!