ನಮಾಝ್ ಮಾಡುವವರನ್ನು ಕಾಲಲ್ಲಿ ಒದ್ದು ಎಬ್ಬಿಸಬೇಕೇ ?

Update: 2024-03-18 05:55 GMT
Editor : Ismail | Byline : ಆರ್. ಜೀವಿ

Photo: thewire

ಮೊನ್ನೆ​ ಮಂಗಳೂರಿನ​ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಅಯೋಧ್ಯೆಗೆ ಹೊರಟ ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರ ಗುಂಪು ಮಂಗಳೂರಿನ ರೈಲ್ವೆ ನಿಲ್ದಾಣವನ್ನೇ ಆರೆಸ್ಸೆಸ್ ಸಭಾಂಗಣ ಮಾಡಿಬಿಟ್ಟಿತ್ತು. ಅದರಲ್ಲಿ ಬಿಜೆಪಿ ಶಾಸಕರೂ ಕೇಸರಿ ಶಾಲು ಹಾಕಿಕೊಂಡು ​ ಆರೆಸ್ಸೆಸ್ ಕಾರ್ಯಕರ್ತರ ಜೊತೆ ಕೈ ಎತ್ತಿ ನಿಂತು ಆರೆಸ್ಸೆಸ್ ಪ್ರಾರ್ಥನಾ ಗೀತೆ ಹಾಡಿದ್ದರು. ​

ಅಲ್ಲಿನ ವೀಡಿಯೊ ವೈರಲ್ ಆಯಿತು. ಆದರೆ ಯಾರಿಗೂ ಅದರಲ್ಲಿ ಯಾವ ಸಮಸ್ಯೆಯೂ ಕಾಣಲಿಲ್ಲ. ಇಂತಹ ದೃಶ್ಯಗಳು ಇಡೀ ದೇಶದಲ್ಲಿ ಎಲ್ಲಿ ಹೋದರೂ ಸರ್ವೇ ಸಾಮಾನ್ಯ. ಆದರೆ ಯಾರೂ ಅದಕ್ಕೆ ಆಕ್ಷೇಪಿಸೋದಿಲ್ಲ. ಆದರೆ ದಿಲ್ಲಿಯಲ್ಲಿ ರಸ್ತೆಯಲ್ಲಿ ನಿಂತು ಮೂರ್ನಾಲ್ಕು ನಿಮಿಷ ನಮಾಜ್ಹ್ ಮಾಡಿದವರಿಗೆ ಬೂಟು ಗಾಲಿನಿಂದ ಒದೆಯಲಾಗಿದೆ.

ಈ ದೇಶದಲ್ಲಿ ಮುಸ್ಲಿಮರ ವಿರುದ್ಧದ ದ್ವೇಷ ಯಾವ ಮಟ್ಟವನ್ನು ಮುಟ್ಟಿಬಿಟ್ಟಿದೆ? ಅವರ ಬಗ್ಗೆ ಸಣ್ಣ ಸಹನೆಯನ್ನೂ ತೋರದಷ್ಟು ಮಟ್ಟಿಗೆ ಯಾವುದಾದರೂ ನೆಪದಲ್ಲಿ ಅವರನ್ನು ಅವಹೇಳನ ಮಾಡುವ, ಥಳಿಸುವ ಈ ಮನಃಸ್ಥಿತಿ ಎಷ್ಟು ಭ​ಯಾನಕವಾದುದು? ಮುಸ್ಲಿಂರು ನಮಾಝ್ ಮಾಡುವುದನ್ನು ಕೂಡ ಇಷ್ಟು ದ್ವೇಷದಿಂದ, ಅಸಹನೆಯಿಂದ ನೋಡುವ ಈ ರೀತಿ ಕಳೆದ ಹಲವು ವರ್ಷಗಳಿಂದ ಈ ದೇಶದ ರಾಜಕಾರಣದಲ್ಲಿ ಕಾಣಿಸುತ್ತಲೇ ಬಂದಿದೆ​.

ನಮಾಝ್ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಯೊಬ್ಬ ಬೂಟುಗಾಲಿನಿಂದ ಒದೆಯುವ ವೀಡಿಯೊ ವೈರಲ್ ಆಗಿದೆ. ದೆಹಲಿಯ ಇಂದ್ರಲೋಕ್ ಪ್ರದೇಶದಲ್ಲಿ​ ​ ಶುಕ್ರವಾರ ಮಧ್ಯಾಹ್ನ ಮಸೀದಿಯ ಹೊರಗೆ ರಸ್ತೆಯಲ್ಲಿ ನಮಾಜ್ಹ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಆ ವೀಡಿಯೊ ನೋಡುವಾಗ, ಈ ದೇಶದಲ್ಲಿ ಮುಸ್ಲಿಮರ ಮೇಲಿನ ದ್ವೇಷವು ಎಷ್ಟು ಅತಿರೇಕ ಮುಟ್ಟಿದೆಯಲ್ಲವೆ ಎಂದು ತೀವ್ರ ವಿಷಾದ ಕಾಡುತ್ತದೆ.

ಅದಕ್ಕಿಂತಲೂ ಹೆಚ್ಚಾಗಿ ಆ ಮನಃಸ್ಥಿತಿಯ ಬಗ್ಗೆ ಅತ್ಯಂತ ಹೇಸಿಗೆ​ಯೆನ್ನಿಸುತ್ತದೆ. ವೈವಿಧ್ಯತೆಯ ನೆಲವಾಗಿದ್ದ ಈ ದೇಶವನ್ನು ಇವತ್ತಿನ ರಾಜಕಾರಣ ಎಲ್ಲಿಗೆ ತಂದು ಮುಟ್ಟಿಸಿಬಿಟ್ಟಿದೆಯಲ್ಲವೆ ಎಂಬ ತೀವ್ರ ದುಗುಡವೊಂದು ಬಾಧಿಸುತ್ತದೆ.

ಪೊಲೀಸ್ ಸಮವಸ್ತ್ರದಲ್ಲಿದ್ದೂ ಒಬ್ಬ ಹೀಗೆ ಮಾಡುತ್ತಾನೆಂದರೆ ಆತನಿಗೆ ಹೀಗೆ ಮಾಡಲು ಧೈರ್ಯ ಕೊಟ್ಟ ರಾಜಕೀಯದ ಬಗ್ಗೆ ತಿರಸ್ಕಾರದ ಭಾವನೆ ಬರುತ್ತದೆ. ಇಂಥ ವರ್ತನೆ ಈ ದೇಶದ ಪಾಲಿನ ಒಂದು ಕಳಂಕವಾಗಿ ಮಾತ್ರ ಕಾಣಿಸುತ್ತದೆ. ಯಾರ ರಾಜಕೀಯ, ದೇಶವನ್ನು ಈ ಮಟ್ಟಕ್ಕೆ ಕೊಂಡೊಯ್ದಿದೆಯೋ ಅವರಿಗೆ ನಾಚಿಕೆಯಾಗುವುದಿಲ್ಲವೆ ಎಂದು ಕೇಳಬೇಕೆನ್ನಿಸುತ್ತದೆ.

ಪೊಲೀಸ್ ಅಧಿಕಾರಿ​ ಮನೋಜ್ ಕುಮಾರ್ ತೋಮರ್ ಸ್ಥಳಕ್ಕೆ ಬಂದಾಗ ಜನರ ಗುಂಪು ರಸ್ತೆಯಲ್ಲಿ ನಮಾಝ್ ಮಾಡುತ್ತಿತ್ತು. ಈ ವೇಳೆ ಪೊಲೀಸ್ ಅಧಿಕಾರಿ​ ಮನೋಜ್ , ನಮಾಝ್ನಲ್ಲಿ ತೊಡಗಿದ್ದ ವ್ಯಕ್ತಿಗೆ ಹಿಂದಿನಿಂದ ಬೂಟುಗಾಲಿನಿಂದ ಒದ್ದಿದ್ದಾನೆ. ದಿಲ್ಲಿಯ ಇಂದ್ರಲೋಕ ಪ್ರದೇಶದ​ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆಗಾಗಿ ಭಾರಿ ಸಂಖ್ಯೆಯಲ್ಲಿ ಮುಸ್ಲಿಮರು ಸೇರಿದ್ದರು.

ಮಸೀದಿಯಲ್ಲಿ ಜನಜಂಗುಳಿ ಹೆಚ್ಚಿದ್ದರಿಂದ ಕೆಲವರು ರಸ್ತೆಯಲ್ಲಿಯೇ ಸಾಲಾಗಿ ಕುಳಿತು ನಮಾಜ್ ಸಲ್ಲಿಸಿದ್ದರು. ಆ ಕೆಲ ನಿಮಿಷಗಳಲ್ಲೇ ಪೊಲೀಸ್ ಅಧಿಕಾರಿ ಈ ದ್ವೇಷ​ದ ವರ್ತನೆ ತೋರಿಸಿದ್ದಾನೆ. ಪೊಲೀಸ್ ಸಿಬ್ಬಂದಿಯ ಈ ಕೃತ್ಯ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದ ಹಾಗೆಯೇ ಎಚ್ಚೆತ್ತ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದರು.

ಈ ವಿಚಾರದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ಮೀನಾ ತಿಳಿಸಿದರು. ಅದಾದ ಬಳಿಕ ಆ ತಪ್ಪಿತಸ್ಥ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನೋಜ್ ಕುಮಾರ್ ತೋಮರ್ ನನ್ನು ಅಮಾನತು ಮಾಡಲಾಗಿರುವುದಾಗಿ ವರದಿಯಾಗಿದೆ. ಘಟನೆ ಕುರಿತು ತನಿಖೆ ಆರಂಭಿಸಲಾಗಿದ್ದು, ಶಿಸ್ತು ಕ್ರಮಕ್ಕೂ ಸೂಚಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಈ ವೀಡಿಯೊ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀ​ನೇತ್ , ಅಮಿತ್ ಶಾ ಅವರ ದಿಲ್ಲಿ ಪೊಲೀಸರ ಧ್ಯೇಯ ಶಾಂತಿ, ಸೇವೆ, ನ್ಯಾಯ ಎಂ​ದು ವ್ಯಂಗ್ಯವಾಡಿದ್ದಾರೆ. ಈ ಇಡೀ ಘಟನೆ ಸಂಪೂರ್ಣ ನಾಚಿಕೆಗೇಡಿನ ಸಂಗತಿಯಾಗಿದೆ. ದ್ವೇಷದ ರಾಜಕಾರಣದ ವಿಷ ಪೊಲೀಸರನ್ನೂ ತಲುಪಿದೆ. ನಾವು ಎಲ್ಲಿಗೆ ಬಂದು ಮುಟ್ಟಿದ್ದೇವೆ ಎಂದರೆ, ಈ ದ್ವೇಷಕ್ಕೆ ಸರ್ಕಾರ ಮತ್ತು ಮಾಧ್ಯಮಗಳ ರಕ್ಷಣೆ ಸಿಕ್ಕಿದೆ.

ಇದೆಲ್ಲದರ ಹಿಂದೆ ಇರುವುದು ಈ ದೇಶದ ರಾಜಕೀಯ ಮನಃಸ್ಥಿತಿ ಎಂಬುದು​ ಅತ್ಯಂತ ಸ್ಪಷ್ಟ. ಮುಸ್ಲಿಮರನ್ನು ದ್ವೇಷಿಸುವ ರಾಜಕೀಯ ಮನಸ್ಥಿತಿ ಆ ಅಧಿಕಾರಿಯ ಮನಸ್ಸಿನಲ್ಲಿಯೂ ಅಂಥದೇ ದ್ವೇಷವನ್ನು ತುಂಬಿದೆ. ಶಾಲೆಯಲ್ಲಿನ ಶಿಕ್ಷಕರಿಂದ ಹಿಡಿದು ಆಸ್ಪತ್ರೆಯಲ್ಲಿನ ವೈದ್ಯರುಗಳ ವಾಟ್ಸ್ಯಾಪ್ ಗ್ರೂಪ್ವರೆಗೂ ಇದೇ ದ್ವೇಷದ ಮನಸ್ಥಿತಿ​ ವ್ಯಾಪಕವಾಗಿ ಹಬ್ಬಿಬಿಟ್ಟಿದೆ.

ಇವರು ಮಂದಿರದ ಹೆಸರಿನಲ್ಲಿ ರಾಜಕಾರಣ ಮಾಡಬಹುದು. ಆದರೆ​ ಮೂರ್ನಾಲ್ಕು ನಿಮಿಷ ನಮಾಝ್ನಲ್ಲಿ ನಿರತರಾದವರ ಜೊತೆ ಇಷ್ಟೊಂದು ​ಕೆಟ್ಟ ರೀತಿಯಲ್ಲಿ ವರ್ತಿಸುವುದಕ್ಕೆ ಇವರಿಗೆ ಮನಸ್ಸಾದರೂ ಹೇಗೆ ಬರುತ್ತದೆ?

ಇಲ್ಲಿ ರಸ್ತೆಯಲ್ಲೇಕೆ ಬಂದರು ಎಂದು ಕೇಳುತ್ತಿರುವರು ​ಇತರ ಧರ್ಮದ ಧಾರ್ಮಿಕ ಕೇಂದ್ರಗಳ ಹೊರಗೆ​, ರಸ್ತೆಯಲ್ಲಿ ಅವರ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವುದೇ ಇಲ್ಲವೆ? ಗಂಟೆಗಟ್ಟಲೆ ಡಿಜೆ ಅಬ್ಬರ ನಡೆಸಿ ಜನರಿಗೆ ತೊಂದರೆ ಕೊಡುವುದಿಲ್ಲವೆ? ಅಷ್ಟಕ್ಕೂ ಇಲ್ಲಿ ಒದೆಯುವ ಅಗತ್ಯವೇನಿತ್ತು? ಅಷ್ಟೊಂದು ಸಿಟ್ಟು ಏಕೆ​, ಹೇಗೆ ಬರುತ್ತದೆ? ಅವರು ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕಾಗಿಯೆ? ಅವರ ಮೇಲೆ ಏನೇ ದೌರ್ಜನ್ಯ ಮಾಡಿದರೂ ನಡೆಯುತ್ತದೆ ಎಂತಲೆ?

ಮುಸ್ಲಿಂರನ್ನು ಜೈಶ್ರೀರಾಮ್ ಘೋಷಣೆ ಕೂಗಲು ಬಲವಂತ ಮಾಡಲಾಗುತ್ತದೆ. ಅದಕ್ಕಾಗಿ ಥಳಿಸಲಾಗುತ್ತದೆ. ಮರಕ್ಕೆ ಕಟ್ಟಿ ಹಾಕಿ ಹೊಡೆದು ಜೈಶ್ರೀರಾಂ ಕೂಗಲು ಹೇಳಲಾಗುತ್ತದೆ. ಮಧ್ಯಪ್ರದೇಶದ ಉಜ್ಜೈನಿ, ಯುಪಿಯ ಬುಲಂದ​ ಶಹರ್ , ಗಾಜಿಯಾಬಾದ್, ಕರ್ನಾಟಕದ ಬೆಂಗಳೂರು, ಕೊಪ್ಪಳ, ಬೀದರ್, ರಾಜಸ್ಥಾನದ ಭಿಲ್ವಾಡಾ, ಮತ್ತು ಮುಂಬೈನಲ್ಲಿ​ ಅಂಥ ಘಟನೆಗಳ ಬಗ್ಗೆ ​ವರದಿಗಳು ಬಂದಿವೆ.

ಅಂಥ ಘಟನೆಗಳು ದೇಶದುದ್ದಕ್ಕೂ ನಡೆದಿವೆ, ನಡೆಯುತ್ತಲೂ ಇವೆ. ದಿಲ್ಲಿಯಲ್ಲಿ ಟ್ರಾಫಿಕ್ ಜಾಮ್ ಆಗಲು ಅದರದೇ ಕಾರಣಗಳಿವೆ. ಹಾಗೆಂದು ಪ್ರಯಾಣಿಕರಾರೂ ಮುಂದಿರುವವರನ್ನು ಒದೆಯುವುದಿಲ್ಲವಲ್ಲ. ನಿಮಗೆ ನೆನಪಿರಬಹುದು. ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಸಿಬ್ಬಂದಿ ಚೇತನ್ ಸಿಂಗ್ ರೈಲಿನಲ್ಲಿ ಹೋಗುತ್ತಿದ್ದಾಗ ತನ್ನ ಕೈಯಲ್ಲಿನ ಬಂದೂಕಿನಿಂದಲೇ ಗುಂಡಿಟ್ಟು ಇಬ್ಬರು ಮುಸ್ಲಿಮರನ್ನೂ ತನ್ನ ಹಿರಿಯ ಅಧಿಕಾರಿಯನ್ನೂ ಕೊಂದಿದ್ದ.

ಮೀಡಿಯಾ ಆಗ, ಆತ ಮಾನಸಿಕ ರೋಗಿಯಾಗಿದ್ದ ಎಂದುಬಿಟ್ಟಿತ್ತು. ಆದರೆ ಸತ್ಯ ಬಹಳ ಬೇಗ ಬಯಲಾಗಿತ್ತು. ಏನೆಂದರೆ, ಆತನ ಕಾಯಿಲೆ ಮಾನಸಿಕವಾದುದಾಗಿರಲಿಲ್ಲ, ಅದು ರಾಜಕೀಯ ಕಾರಣದ್ದಾಗಿತ್ತು ಎಂಬುದು.

ಈ ರಾಜಕಾರಣ ಮುಸ್ಲಿಂರನ್ನು ದ್ವೇಷಿಸಲು ಕಲಿಸುತ್ತದೆ. ಗುಜರಾತ್ನಲ್ಲಿ ಒಂದು ಘಟನೆ ಇದೇ ವರ್ಷದ ಆರಂಭದಲ್ಲಿ ನಡೆಯಿತು. ಗುಜರಾತ್ನ ಖೇಡಾದಲ್ಲಿ 4 ಪೊಲೀಸರು 5 ಮುಸ್ಲಿಮರನ್ನು ಕಂಬಕ್ಕೆ ಕಟ್ಟಿಹಾಕಿ ಹೊಡೆದಿದ್ದರು. ಅದನ್ನು ಮಡಿಲ ಮೀಡಿಯಾದ ಆಂಕರ್ ಗಳು ಸಂಭ್ರಮಿಸಿ ಇದಕ್ಕೆ ಮ್ಯೂಸಿಕ್ ಕೊಟ್ಟು ನೋಡಬೇಕು ಎಂದು ಹೇಳಿದ್ದರು. ​ಆದರೆ ಜನರನ್ನು ಕಂಬಕ್ಕೆ ಕಟ್ಟಿ ಹೊಡೆಯುವ ಅಧಿಕಾರವನ್ನು ಕಾನೂನು ಅವರಿಗೆ ಕೊಟ್ಟಿದೆಯೆ ಎಂದು ಸುಪ್ರೀಂ ಕೋರ್ಟ್ ಪೀಠ ಪ್ರಶ್ನಿಸಿತ್ತು.

ಇದು ಇಂಥ ಮೊದಲ ಘಟನೆಯೇನೂ ಅಲ್ಲ. ದಿಲ್ಲಿ ಗಲಭೆ ವೇಳೆ 7 ಪೊಲೀಸರು 5 ಮುಸ್ಲಿಂರನ್ನು ರಾಷ್ಟ್ರಗೀತೆ ಹಾಡಲು ಬಲವಂತಪಡಿಸಿ​ ತೀವ್ರವಾಗಿ ಥಳಿಸಿದ್ದ ವೀಡಿಯೊ ವೈರಲ್ ಆಗಿತ್ತು. ಎಷ್ಟು ಹೊಡೆದಿದ್ದರೆಂದರೆ ಅವರಲ್ಲಿ ಫೈಝಾನ್ ಎಂಬ ಯುವಕ ಸಾವನ್ನಪ್ಪಿದ್ದ.

ಆದರೆ ಆರೋಪಿ ಯಾರು ಎಂಬುದರ ಬಗ್ಗೆ ಒಂದು ಸಾಲೂ ಇರಲಿಲ್ಲ. ಈಗ ಇಂದ್ರಲೋಕ್ ಘಟನೆ ವೀಡಿಯೊ ವಿಚಾರವಾಗಿಯೂ ವೀಡಿಯೊ ಬಂದು ಬಹಳ ಹೊತ್ತಾದರೂ ತಪ್ಪಿತಸ್ಥನ ಹೆಸರನ್ನು ವರದಿಗಳು ಹೇಳಿಯೇ ಇರಲಿಲ್ಲ. ಮುಸ್ಲಿಂರ ವಿರುದ್ಧದ ದ್ವೇಷ ಮತ್ತು ದೌರ್ಜನ್ಯದ ವಿಚಾರದಲ್ಲಿ ತಪ್ಪಿತಸ್ಥರನ್ನು ರಕ್ಷಿಸುವುದಕ್ಕೆ ಈ ​ಮಡಿಲ ಮಾಧ್ಯಮಗಳು ಅದೆಷ್ಟು ಕಸರತ್ತು ಮಾಡುತ್ತವಲ್ಲವೆ?

ಹೇಗೆಲ್ಲ ಮುಸ್ಲಿಂರನ್ನು ಹೊಡೆದು, ಹಿಂಸಿಸಿ, ಅವಮಾನಿಸಿ ಸಂಭ್ರಮಿಸಲಾಗುತ್ತದೆ ಮತ್ತದನ್ನು ಸರಿ ಸರಿ ಎಂದು ಸಮರ್ಥಿಸಿಕೊಳ್ಳುವುದು ನಡೆಯುತ್ತದಲ್ಲವೆ? ​ಮುಸ್ಲಿಮರನ್ನು ಸಂಶಯದಿಂದ ನೋಡುವುದು, ಅವರನ್ನು ಅವಮಾನಿಸುವುದು, ಅವರ ಮೇಲೆ ಗುಂಪು ಹಲ್ಲೆ ನಡೆಸುವುದು, ಅವರ ಧಾರ್ಮಿಕ ಸಂಕೇತಗಳನ್ನು ಅವಮಾನಿಸುವುದು - ಇವೆಲ್ಲ ಈಗ ಸಾಮಾನ್ಯ ಎಂಬಂತಾಗಿ ಹೋಗಿರುವುದು ಹೇಗೆ ?

ಒಂದು ಅಪರಾಧದಲ್ಲಿ ಒಬ್ಬ ಆರೋಪಿ ಮುಸ್ಲಿಮನಿದ್ದರೆ ಇಡೀ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುವುದು, ಅದೇ ಮುಸ್ಲಿಮರ ಮೇಲೆಯೇ ಹಲ್ಲೆ, ಕೊಲೆ, ಅತ್ಯಾಚಾರದಂತಹ ಭಯಾನಕ ಅಪರಾಧ ನಡೆದಾಗ ಮಾತೇ ಆಡದೆ ಸುಮ್ಮನಿರುವುದು - ಇದೆಲ್ಲವನ್ನು ನಮ್ಮ ಸಮಾಜಕ್ಕೆ ಹೇಳಿ ಕೊಟ್ಟವರು ಯಾರು ? ಇದು ಕಳೆದ 10 ವರ್ಷಗಳಲ್ಲಿ ಬಿಜೆಪಿ​ ಹಾಗು ಮೋದಿಯವರು ಕಟ್ಟಿದ​ ವಿಶ್ವಗುರು ಭಾರತವೆ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!