ಸೆಂಗೋಲ್ ಜಾಗದಲ್ಲಿ ಸಂವಿಧಾನದ ಪ್ರತಿ ಇಡುವಂತೆ ಸ್ಪೀಕರ್ ಗೆ ಪತ್ರ ಬರೆದ ಎಸ್ಪಿ ಸಂಸದ ಆರ್ ಕೆ ಚೌಧರಿ
ಈಗ 18ನೇ ಲೋಕಸಭೆ ಮೊದಲ ಅಧಿವೇಶನದಲ್ಲಿ ಸೆಂಗೋಲ್ ಕುರಿತಾಗಿ ಚರ್ಚೆ ಪುನಃ ಆರಂಭವಾಗಿದೆ. ಈ ಚರ್ಚೆಗೆ ಕಾರಣವಾದದ್ದು ಸಮಾಜವಾದಿ ಪಕ್ಷದ ಮೋಹನ್ ಲಾಲ್ ಗಂಜ್ ಸಂಸದ ಆರ್ ಕೆ ಚೌಧರಿ ಅವರ ಹೇಳಿಕೆ. ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೆಂಗೋಲ್‌ನ ಪ್ರಸ್ತುತತೆಯನ್ನು ಪ್ರಶ್ನಿಸಿದ್ದಾರೆ. ಸೆಂಗೋಲ್ ಜಾಗದಲ್ಲಿ ಸಂವಿಧಾನದ ಪ್ರತಿ ಇಡುವಂತೆ ಸ್ಪೀಕರ್ ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಸಂವಿಧಾನ ಪ್ರಜಾಪ್ರಭುತ್ವದ ಸಂಕೇತ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂಸತ್ತಿನಲ್ಲಿ ಸೆಂಗೋಲ್ ಅನ್ನು ಸ್ಥಾಪಿಸಿತು. ಸೆಂಗೊಲ್ ಎಂಬುದು ರಾಜದಂಡ. ರಾಜಪ್ರಭುತ್ವವನ್ನು ಕೊನೆಗೊಳಿಸಿದ ನಂತರ ದೇಶ ಸ್ವತಂತ್ರವಾಯಿತು. ದೇಶವನ್ನು ರಾಜದಂಡ ನಡೆಸಬೇಕೇ ಸಂವಿಧಾನ ನಡೆಸಬೇಕೇ? ಸಂವಿಧಾನವನ್ನು ಉಳಿಸಲು ಸೆಂಗೋಲ್ ಅನ್ನು ಸಂಸತ್ತಿನಿಂದ ತೆಗೆದುಹಾಕಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಆರ್ ಕೆ ಚೌಧರಿ ಹೇಳಿದ್ದಾರೆ.
ತಮಿಳು ಸಂಸ್ಕೃತಿಯಲ್ಲಿ ಬೇರುಗಳನ್ನು ಹೊಂದಿರುವ ಈ ಸೆಂಗೋಲ್, ಅಧಿಕಾರದ ಸಂಕೇತವಾಗಿದೆ. ತಮಿಳುನಾಡಿನಲ್ಲಿ ಇದು ಸಾಂಪ್ರದಾಯಿಕವಾಗಿ ರಾಜಸತ್ತೆಯನ್ನು ಸೂಚಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ರಾಜಪ್ರಭುತ್ವದ ಸಂಕೇತಗಳಿಗಿಂತ ಹೆಚ್ಚಾಗಿ ರಾಷ್ಟ್ರದ ಮಾರ್ಗದರ್ಶಿ ತತ್ವಗಳನ್ನು ಹೊಂದಿರುವ ಸಂವಿಧಾನವನ್ನು ಪ್ರಮುಖವಾಗಿ ಪ್ರದರ್ಶಿಸಬೇಕು ಎಂದು ಪ್ರತಿಪಕ್ಷಗಳು ವಾದಿಸುತ್ತಿವೆ.
ಸಂವಿಧಾನದ ಅಂಗೀಕಾರವೇ ಭಾರತದಲ್ಲಿ ಪ್ರಜಾಪ್ರಭುತ್ವದ ಆರಂಭವನ್ನು ಗುರುತಿಸಿದೆ. ಹೀಗಾಗಿ ಲೋಕಸಭೆಯಲ್ಲಿ ಪ್ರದರ್ಶಿಸಲಾಗುವ ಚಿಹ್ನೆ ಸಂವಿಧಾನವಾಗಿರಬೇಕೆಂದು ಸ್ಪೀಕರ್ ಗೆ ಬರೆದ ಪತ್ರದಲ್ಲಿ ಆರ್‌ಕೆ ಚೌಧರಿ ಹೇಳಿದ್ದಾರೆ. ಈ ನಿಲುವು ವಿವಿಧ ವಿರೋಧ ಪಕ್ಷಗಳ ನಾಯಕರಿಂದ ಬೆಂಬಲವನ್ನೂ ಪಡೆದಿದೆ.
ಹಿರಿಯ ಕಾಂಗ್ರೆಸ್ ಸಂಸದ ಬಿ ಮಾಣಿಕಂ ಟ್ಯಾಗೋರ್ ಮತ್ತು ಆರ್‌ಜೆಡಿ ಸಂಸದೆ ಮಿಸಾ ಭಾರತಿ ಅವರು ಚೌಧರಿ ಅವರ ಬೇಡಿಕೆಯನ್ನು ಬೆಂಬಲಿಸಿದ್ದಾರೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಮತ್ತು ಸಂವಿಧಾನವನ್ನು ಅನುಸರಿಸುವ ಅಗತ್ಯ ಇದೆ ಎಂದೂ ಅವರು ಹೇಳಿದ್ದಾರೆ. 'ಸೆಂಗೊಲ್' ರಾಜತ್ವದ ಹಿಂದಿನ ಯುಗವನ್ನು ಪ್ರತಿನಿಧಿಸುತ್ತಿದ್ದು ಆಧುನಿಕ ಪ್ರಜಾಪ್ರಭುತ್ವದ ಆದರ್ಶಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಈ ಚರ್ಚೆಯಲ್ಲಿ ಮಹತ್ವದ ಧ್ವನಿಯಾಗಿ ಹೊರಹೊಮ್ಮಿದೆ. ಪ್ರಧಾನಿ ಕಾರ್ಯವೈಖರಿಯಲ್ಲಿನ ಅಸಮಂಜಸತೆಯನ್ನು ಎತ್ತಿ ತೋರಿಸಿದ ಅಖಿಲೇಶ್ ಯಾದವ್, ಪ್ರಧಾನಿಯವರು 'ಸೆಂಗೊಲ್' ಸ್ಥಾಪನೆಯ ಸಮಯದಲ್ಲಿ ಅದಕ್ಕೆ ನಮಸ್ಕರಿಸಿದ್ದರು, ಆದರೆ ಈ ಬಾರಿ ಪ್ರಮಾಣ ವಚನ ಸ್ವೀಕರಿಸುವಾಗ ಅವರು ಹಾಗೆ ಮಾಡಲಿಲ್ಲ ಎಂದರು.
ಆದರೆ , ಬಿಜೆಪಿ 'ಸೆಂಗೊಲ್' ಸ್ಥಾಪನೆಯನ್ನು ಸಮರ್ಥಿಸಿಕೊಂಡಿದೆ ಮತ್ತು ಅದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳನ್ನು ಅದು ಒಳಗೊಂಡಿದೆ ಎಂದು ವಾದಿಸಿದೆ. ಪ್ರತಿಪಕ್ಷಗಳು ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಗೆ ಅಗೌರವ ತೋರುತ್ತಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಆರೋಪಿಸಿದ್ದಾರೆ. ಉನ್ನತ ಗೌರವ ಹೊಂದಿರುವ ತಮಿಳು ಸಂಸ್ಕೃತಿಯ ಸೆಂಗೊಲ್' ಬಗ್ಗೆ ಇಂಡಿಯಾ ಒಕ್ಕೂಟದಲ್ಲಿ ಅಜ್ಞಾನ ಮತ್ತು ಹಗೆತನ ಇದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.
'ಸೆಂಗೊಲ್' ಸ್ಥಾಪನೆ ಭಾರತದ ಸಾಂಸ್ಕೃತಿಕ ಸಂಪ್ರದಾಯಗಳನ್ನು ಅದರ ಆಧುನಿಕ ಆಡಳಿತ ವ್ಯವಸ್ಥೆಯೊಂದಿಗೆ ಜೋಡಿಸುವ ಪ್ರಯತ್ನವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಈ ಹಿಂದೆ ಹೇಳಿಕೆ ನೀಡಿದ್ದರು.
ಸೆಂಗೋಲ್ ಇತಿಹಾಸದ ಕುರಿತಾಗಿ ಎರಡು ಕಥೆಗಳಿವೆ. ಒಂದಕ್ಕೆ ಹೆಚ್ಚು ಪುರಾವೆ ಇದೆಯಾದರೆ, ಇನ್ನೊಂದರಲ್ಲಿ ಭಾವನೆ ಇದೆ. ಮೊದಲು ಭಾವನಾತ್ಮಕ ಆವೃತ್ತಿ ಏನೆಂಬುದನ್ನು ನೋಡುವುದಾದರೆ, ಈ ಕಥೆಯನ್ನು ಅತಿಯಾಗಿ ಪ್ರಚಾರ ಮಾಡಿರುವುದು ಬಿಜೆಪಿಯ ಐ ಟಿ ಸೆಲ್. ದೇಶದ ಸ್ವಾತಂತ್ರ್ಯದ ನಂತರ ಅಧಿಕಾರದ ಹಸ್ತಾಂತರವನ್ನು ಸೂಚಿಸುವ ಏನಾದರೂ ಆಚರಣೆ ನಿಮ್ಮಲ್ಲಿದೆಯೇ ಎಂದು ಮೌಂಟ್ ಬ್ಯಾಟನ್ ನೆಹರೂರಲ್ಲಿ ಕೇಳಿದ್ದರು. ಸಲಹೆಗಳಿಗಾಗಿ ನೆಹರು ಸಿ. ರಾಜಗೋಪಾಲಾಚಾರಿ ಅವರನ್ನು ಸಂಪರ್ಕಿಸಿದರು.
ಒಬ್ಬ ರಾಜನಿಂದ ಮತ್ತೊಬ್ಬ ರಾಜನಿಗೆ ಅಧಿಕಾರದ ವರ್ಗಾವಣೆಯನ್ನು ಗುರುತಿಸಲು ರಾಜದಂಡವನ್ನು ಹಸ್ತಾಂತರಿಸುವ ಚೋಳ ರಾಜವಂಶದ ಅಭ್ಯಾಸವನ್ನು ಅನುಸರಿಸಬಹುದೆಂದು ಅವರು ಶಿಫಾರಸು ಮಾಡಿದರು. ರಾಜಗೋಪಾಲಾಚಾರಿ ಅವರು ಸೆಂಗೋಲ್ ಪತ್ತೆಯ ಜವಾಬ್ಧಾರಿಯನ್ನು ತಮಿಳುನಾಡಿನ ಅಧೀನಂ ಮಠಾಧೀಶರಿಗೆ ವಹಿಸಿದರು.
ಇದಾದ ನಂತರ, ಹೆಚ್ಚು ಪ್ರಚಾರ ಪಡೆದ ಸೆಂಗೋಲ್ ಅನ್ನು ಮೊದಲು ಮೌಂಟ್‌ಬ್ಯಾಟನ್‌ಗೆ ಮತ್ತು ಅಂತಿಮವಾಗಿ ನೆಹರೂಗೆ ಹಸ್ತಾಂತರಿಸಲು ವಿಶೇಷ ವಿಮಾನದಲ್ಲಿ ನವದೆಹಲಿಗೆ ತರಲಾಯಿತು. ಅಂದಿನಿಂದ ರಾಜದಂಡವನ್ನು ಅಲಹಾಬಾದ್ ಮ್ಯೂಸಿಯಂನಲ್ಲಿ ಇರಿಸಲಾಗಿದೆ ಎಂಬುದು ಮೊದಲ ಕಥೆ.
ಆದರೆ ಈ ಕಥೆಗೆ ಹೆಚ್ಚು ಪುರಾವೆಗಳಿಲ್ಲ ಎಂದು ಹಲವು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಲದೆ, ಸೆಂಗೋಲ್ನೊಂದಿಗೆ ದೆಹಲಿಗೆ ಹೊರಟ ನಿಯೋಗ 1947ರ ಆಗಸ್ಟ್ 11ರಂದು ಚೆನ್ನೈನ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿದ್ದ ಫೋಟೊವನ್ನು ದಿ ಹಿಂದೂ ಪತ್ರಿಕೆ ಪ್ರಕಟಿಸಿದೆ. ಅಧೀನಮ್ ನಿಯೋಗ ರೈಲಿನಲ್ಲಿ ಪ್ರಯಾಣಿಸಿರಬಹುದು ಎಂಬುದಕ್ಕೆ ಈ ಫೋಟೊ ಸಾಕ್ಷಿ. ಮೋದಿ ಸರ್ಕಾರ ಹೇಳುತ್ತಿರುವಂತೆ ನಿಯೋಗ ದೆಹಲಿಗೆ ಹೋಗಿದ್ದು ವಿಶೇಷ ವಿಮಾನದಲ್ಲಿ ಅಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ಹೇಳುತ್ತದೆ.
ಇನ್ನೊಂದು ಆವೃತ್ತಿ ಹೀಗಿದೆ.
ಭಾರತದ ಸ್ವಾತಂತ್ರ್ಯ ಸಮೀಪಿಸುತ್ತಿದ್ದಂತೆ, ಜವಾಹರಲಾಲ್ ನೆಹರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಇತರ ಸದಸ್ಯರು ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸಿ ಉಡುಗೊರೆಗಳನ್ನು ಪಡೆಯುತ್ತಿದ್ದ ಸಮಯ ಅದು. ಅಂತಹ ಸಂದರ್ಭದಲ್ಲಿ 14 ಆಗಸ್ಟ್ 1947 ರಂದು, ತಮಿಳುನಾಡಿನ ಹಿಂದೂ ಮಠವಾದ ತಿರುವಡುತುರೈ ಅಧೀನಂ ಮಠದ ರಾಯಭಾರಿಗಳು ನೆಹರು ಅವರ ಮನೆಗೆ ಬಂದು ಸೆಂಗೋಲ್ ಅನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದರು.
ತೇವರಂನ ಸ್ತೋತ್ರಗಳ ಪಠಣದೊಂದಿಗೆ ಅಧೀನಂ ಮಠದ ನಿಯೋಗ ನೆಹರೂಗೆ ರಾಜದಂಡವನ್ನು ಉಡುಗೊರೆಯಾಗಿ ನೀಡಿತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿದ್ದರೂ, ಈ ಆಚರಣೆಯನ್ನು ನೆಹರು ಅಥವಾ ಮೌಂಟ್ ಬ್ಯಾಟನ್ ಅವರು ಸಾಂಕೇತಿಕ ಅಧಿಕಾರದ ವರ್ಗಾವಣೆಯಾಗಿ ಪರಿಗಣಿಸಿದ್ದಾರೆ ಎಂದು ಸೂಚಿಸಲು ಯಾವುದೇ ಆಧಾರವಿಲ್ಲ ಎಂದು ದಿ ಹಿಂದೂ ವರದಿ ಮಾಡಿತ್ತು. ಈಗ 'ಸೆಂಗೊಲ್' ವಿರುದ್ಧ ವಿರೋಧ ಪಕ್ಷಗಳ ಹೇಳಿಕೆಯನ್ನು ದೇಶದ ಸಂವಿಧಾನದ ಕುರಿತಾಗಿ ಅವು ನಡೆಸುತ್ತಿರುವ ಚರ್ಚೆಗಳ ಭಾಗವಾಗಿಯೇ ನೋಡಬೇಕಾಗುತ್ತದೆ.