ಪರಿಶಿಷ್ಟ ಜಾತಿಗಳ ಶಾಸನಬದ್ಧ ಸ್ಥಾನ ಮತ್ತು ಸೇರಲಿರುವ ಮಾನದಂಡ

Update: 2024-01-14 06:30 GMT

ಪ್ರತ್ಯೇಕತೆ ಮತ್ತು ಅಸ್ಪಶ್ಯತೆಯ ಅನುಭವ ಮತ್ತು ಸಾಮಾಜಿಕ- ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯೊಂದಿಗೆ, ಇತರ ರೀತಿಯ ತಾರತಮ್ಯಗಳು ಜಾತಿಯನ್ನು ಪರಿಶಿಷ್ಟ ಜಾತಿ ಎಂದು ಘೋಷಿಸಲು ಮತ್ತು ಪಟ್ಟಿ ಮಾಡಲು ಪ್ರಮುಖ ಮಾನದಂಡಗಳಾಗಿವೆ. ಈ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಸಾಂದರ್ಭಿಕವಾಗಿ, ಹಿಂದೂಗಳ ಜಾತಿಯ ಕೆಲವು ಪಂಗಡಗಳನ್ನು ಅಥವಾ ಮೇಲ್ವರ್ಗದ ಜಾತಿಗಳನ್ನು ಪರಿಶಿಷ್ಟ ಜಾತಿಯ ಸುಳ್ಳು ಪ್ರಮಾಣ ಪತ್ರವನ್ನು ಪಡೆಯಲು ಮತ್ತು ಮೀಸಲಾತಿ ಒದಗಿಸುವ ಪ್ರಯೋಜನಗಳನ್ನು ಪಡೆಯಲು ಪ್ರಚೋದಿಸುತ್ತದೆ. ಆದರೂ ಅವರು ಯಾವುದೇ ರೀತಿಯ ಅಸ್ಪಶ್ಯತೆ ಮತ್ತು ಇತರ ತಾರತಮ್ಯಗಳಿಗೆ ಒಳಗಾಗಿರುವುದಿಲ್ಲ.

ಕೆ.ಎನ್. ಲಿಂಗಪ್ಪ,

ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ತುಳಿತ ಮತ್ತು ಶೋಷಣೆಗೆ ಒಳಗಾದ ವರ್ಗಗಳು ಪರಿಶಿಷ್ಟ ಜಾತಿ ಎಂದು ನಾಮಕರಣಗೊಂಡ ನಂತರ ಮೊದಲ ಬಾರಿಗೆ ಬ್ರಿಟಿಷ್ ಸರಕಾರದ ಕಾಯ್ದೆ-1935ರಂತೆ ಶಾಸನಾತ್ಮಕ ಸ್ಥಾನ ಪಡೆದುಕೊಂಡವು. ಅಲ್ಲಿ ಅವುಗಳನ್ನು ಹಿಂದೂ ಧರ್ಮದೊಳಗಿನ ಜಾತಿಗಳು ಎಂದು ಪರಿಗಣಿಸಲಾಗಿದ್ದರೂ, ಆ ಜಾತಿಗಳಲ್ಲಿ ಕೆಲವರು ಶತ ಶತಮಾನಗಳಿಂದ ಬಹಿಷ್ಕಾರ ಮತ್ತು ಶೋಷಣೆಗೆ ಒಳ ಪಟ್ಟು, ಬೌದ್ಧ ಮತ್ತು ಸಿಖ್ ಧರ್ಮಕ್ಕೆ ಮತಾಂತರಗೊಂಡರು. ಭಾರತ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಎಂಬ ಮೊದಲ ಆದೇಶವನ್ನು 1936ರಲ್ಲಿ ಹೊರಡಿಸಿತು. ಆದರೆ ಬಹಿಷ್ಕಾರ ಮತ್ತು ಶೋಷಣೆಯನ್ನು ಯಾವ ನಿರ್ದಿಷ್ಟ ರೀತಿಯಲ್ಲಿ ವಿವರಿಸಲಾಗಿದೆ ಮತ್ತು ಆ ಸಮಯದಲ್ಲಿ ಹಾಗೂ ನಂತರದ ವರ್ಷಗಳಲ್ಲಿ ದೇಶಾದ್ಯಂತ ಎಷ್ಟು ಜಾತಿಗಳನ್ನು ಸೇರಿಸಲಾಗಿದೆ ಎಂಬುದು ಈ ಹಂತದಲ್ಲಿ ಸುಲಭವಾಗಿ ತಿಳಿದು ಬಂದಿಲ್ಲ.ಆದರೂ ಬಹುಶಃ ಅದೇ ಮಾನದಂಡಗಳ ಜೊತೆಗೆ ಅಸ್ಪಶ್ಯತೆ ಆಚರಣೆಯೂ ಹೆಚ್ಚೇ ಇದ್ದಿತು. ಸ್ವತಂತ್ರ ಭಾರತದ ಸಂವಿಧಾನದಲ್ಲಿ ರಾಜ್ಯಗಳು ಒದಗಿಸಿದ ಪಟ್ಟಿಯನ್ನು ಭಾರತದ ರಾಷ್ಟ್ರಪತಿಗಳು ಅನುಮೋದಿಸಿದರು. ಅಂತಹ ಮೊದಲ ಆದೇಶವನ್ನು ಸಂವಿಧಾನದ (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ) ಆದೇಶ ಎಂದು ಹೆಸರಿಸಲಾಯಿತು. ಅಧ್ಯಕ್ಷರ ಒಪ್ಪಿಗೆಯೊಂದಿಗೆ 1950ರಲ್ಲಿಯೇ ಅದನ್ನು ಹೊರಡಿಸಲಾಯಿತು. ಮತ್ತೆ ಇದನ್ನು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಆದೇಶ (ತಿದ್ದುಪಡಿ) ಕಾಯ್ದೆ 1976 ಎಂದು ಮಾರ್ಪಡಿಸಲಾಯಿತು. ಸಂವಿಧಾನದ ಇತ್ತೀಚಿನ ತಿದ್ದುಪಡಿ, (ಪರಿಶಿಷ್ಟ ಜಾತಿಗಳು) ಆದೇಶ (ತಿದ್ದುಪಡಿ)1990, ಈ ಆದೇಶ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಗಳಿಗೂ ಒಳಪಡುತ್ತದೆ.

ನಿರ್ದಿಷ್ಟವಾಗಿ ದಕ್ಷಿಣ ಭಾರತದಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಕೆಲವು ಜಾತಿಗಳನ್ನು ಸೇರಿಸಲು ಕೆಲವು ಸಾಮಾಜಿಕ-ಜನಸಂಖ್ಯಾ ಮಾನದಂಡಗಳನ್ನು ಸಂಕ್ಷಿಪ್ತವಾಗಿ ಪರಿಶೋಧಿಸಬಹುದು. ಆದರೆ ಅದಕ್ಕೂ ಮೊದಲು ಆಂಧ್ರ ಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿಯನ್ನು ಒಳಗೊಂಡಿರುವ ದಕ್ಷಿಣ ಭಾರತದಲ್ಲಿ, ಪಟ್ಟಿಗೆ ಸೇರಿಸಲಾದ ಜಾತಿಗಳ ಸಂಖ್ಯೆಯನ್ನು ನೋಡುವುದು ಅವಶ್ಯಕ. ಆಂಧ್ರಪ್ರದೇಶ 60 ಜಾತಿಗಳು, ಕರ್ನಾಟಕದಲ್ಲಿ 101 ಜಾತಿಗಳು, ಕೇರಳ 69, ತಮಿಳುನಾಡಿನಲ್ಲಿ 75 ಮತ್ತು ಪಾಂಡಿಚೇರಿಯಲ್ಲಿ ಕೇವಲ 16 ಜಾತಿಗಳು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿವೆ. ಹೀಗಾಗಿ, ದಕ್ಷಿಣ ಭಾರತದಲ್ಲಿ ಪರಿಶಿಷ್ಟ ಜಾತಿಗಳ ಸಂಖ್ಯೆ 320 ಇವೆ. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಿಂದ ಯಾವುದೇ ಹೊಸ ಜಾತಿ(ಗಳು) ಪಟ್ಟಿಯಲ್ಲಿ ಸೇರ್ಪಡೆ ಗೊಂಡಿಲ್ಲ. ಆದರೆ ಒಂದು ರಾಜ್ಯದಲ್ಲಿ ಅಧಿಸೂಚಿಸಲಾದ ಪರಿಶಿಷ್ಟ ಜಾತಿಗಳ ಸಂಖ್ಯೆಯನ್ನು ಇತರ ರಾಜ್ಯ(ಗಳು) ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೂ ಸಹ ಅಧಿಸೂಚಿಸಲಾಗಿದೆ ಎಂಬುದು ನಿಜ. ಉದಾಹರಣೆಗೆ ಮೂಲತಃ ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಕಂಡುಬರುವ ಆದಿ ಆಂಧ್ರ ಮತ್ತು ಆದಿದ್ರಾವಿಡರನ್ನು ಅನುಕ್ರಮವಾಗಿ ಎಲ್ಲಾ ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೇರಿಯಲ್ಲಿ ಅಧಿ ಸೂಚಿಸಲಾಗಿದೆ. ಸರಾಸರಿ, ದಕ್ಷಿಣ ಭಾರತದಲ್ಲಿ ಪರಿಶಿಷ್ಟ ಜಾತಿಗಳು ಪ್ರತ್ಯೇಕವಾಗಿ ಸುಮಾರು 295 ಜಾತಿಗಳಿವೆ. ಆದಾಗ್ಯೂ, ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪರಿಶಿಷ್ಟ ಜಾತಿಗಳ ಸಮಾನಾರ್ಥಕ ಪದಗಳಿಂದಾಗಿ ಅವುಗಳ ನಿಖರ ಸಂಖ್ಯೆ ಕೇವಲ 112 ಇದೆ. 2011ರ ಜನಗಣತಿಯ ಪ್ರಕಾರ, ಆಂಧ್ರ ಪ್ರದೇಶದಲ್ಲಿ 1,38,78,078, ಕರ್ನಾಟಕದಲ್ಲಿ 1,04,74,992, ಕೇರಳದಲ್ಲಿ 30,39,941, ತಮಿಳುನಾಡಿನಲ್ಲಿ 1,44,38,445 ಮತ್ತು ಪಾಂಡಿಚೇರಿಯಲ್ಲಿ 1,57,771 ಜನರಿರುವರು. ಆದ್ದರಿಂದ ದಕ್ಷಿಣ ಭಾರತದಲ್ಲಿ ಪರಿಶಿಷ್ಟ ಜಾತಿಗಳಿಗೆ ಸೇರಿದ ಒಟ್ಟು ಜನಸಂಖ್ಯೆ 4,20,27,413 ಮತ್ತು ಅವರಲ್ಲಿ ಸುಮಾರು 80 ಪ್ರತಿ ಶತದಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

ದಕ್ಷಿಣ ಭಾರತದಲ್ಲಿ ಈ ಜಾತಿಗಳನ್ನು ಪರಿಶಿಷ್ಟ ಜಾತಿಗಳೆಂದು ಘೋಷಿಸಲು ಸಾಮಾಜಿಕ-ಜನಸಂಖ್ಯಾ ಮಾನದಂಡಗಳ ಪ್ರಕಾರ ಕೇವಲ ಜನಸಂಖ್ಯೆ ಗಾತ್ರವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಹೆಚ್ಚಿನ ಸಂಖ್ಯೆಯನ್ನು ಹೊಂದಿರುವ ಜಾತಿಯು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲು ಒತ್ತಡವನ್ನು ಉಂಟು ಮಾಡಬಹುದು. ಕರ್ನಾಟಕ ಮತ್ತು ಕೇರಳದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಒಟ್ಟು ಜನಸಂಖ್ಯೆ ಆಂಧ್ರ ಪ್ರದೇಶ ಮತ್ತು ತಮಿಳು ನಾಡುಗಳಿಗಿಂತ ಕಡಿಮೆ ಇದೆ ಎಂಬ ಅಂಶ ಸ್ಪಷ್ಟವಾಗಿದೆ.

ಆದರೆ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಲಾದ ಜಾತಿಗಳ ಸಂಖ್ಯೆ ಹೆಚ್ಚಿದೆ. ರಾಜ್ಯಗಳಲ್ಲಿ ಅಂತೆಯೇ, ಅಸ್ಪಶ್ಯತೆ ಮತ್ತು ವಿವಿಧ ರೀತಿಯ ತಾರತಮ್ಯವನ್ನು ಪರಿಶಿಷ್ಟ ಜಾತಿ ಎಂದು ಪಟ್ಟಿ ಮಾಡಲು ಮಾನದಂಡವಾಗಿ ತೆಗೆದುಕೊಂಡರೂ, ದಕ್ಷಿಣ ಭಾರತದಲ್ಲಿ ಸದ್ಯ ಪರಿಶಿಷ್ಟ ಜಾತಿ ಎಂದು ಅಧಿಸೂಚಿತ ಎಲ್ಲಾ ಜಾತಿಗಳು ಅಸ್ಪಶ್ಯತೆಯ ಕಳಂಕದಿಂದ ಕಂಗಲಾಗಿಲ್ಲ. ಅಂತಹ ಕೆಲವು ಜಾತಿಗಳು ಆಂಧ್ರಪ್ರದೇಶದ ಬಾರಿಕಿ, ಕೇರಳ ಮತ್ತು ತಮಿಳುನಾಡಿನ ಕಕ್ಕಾಲನ್, ಕರ್ನಾಟಕದ ಮಹಿಲಾ(ಕ್ರ. ಸಂ-64)ಮತ್ತು ಮಾವಿಲನ್(ಕ್ರ. ಸಂ. -76) ಕೇರಳ ಮತ್ತು ತಮಿಳುನಾಡಿಗೆ ಸೇರಿದ ಕೊಲಿಯನ್ ಮತ್ತು ತಮಿಳುನಾಡಿನ ವತಿರಿಯನ್ ಮತ್ತು ಈ ರಾಜ್ಯಗಳಲ್ಲಿ ಇಂತಹ ಹಲವಾರು ಜಾತಿಗಳಿವೆ. ಆದರೆ, ಹೆಚ್ಚಿನ ಜಾತಿಗಳು ಜನಸಂಖ್ಯೆಯ ಗಾತ್ರದಲ್ಲಿ 10,000ಕ್ಕಿಂತ ಕಡಿಮೆ ಇವೆ,(ಅವರಲ್ಲಿ ದೊಡ್ಡ ಸಂಖ್ಯೆಯು 1,000ಕ್ಕಿಂತ ಕಡಿಮೆ ಜನರನ್ನು ಹೊಂದಿವೆ) ಅಲ್ಲದೆ, ತಮ್ಮದೇ ಆದ ಪರಿಣಾಮಕಾರಿ ನಾಯಕತ್ವವನ್ನು ಹೊಂದಿಲ್ಲದ ಕಾರಣ ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸುವಂತೆ ಒತ್ತಡ ಹೇರಲು ಅವುಗಳಿಗೆ ಕಷ್ಟ ಸಾಧ್ಯ. ಆದ್ದರಿಂದ ಉದ್ದೇಶಕ್ಕಾಗಿ ಅಳವಡಿಸಿಕೊಂಡ ಮಾನದಂಡಗಳಲ್ಲಿನ ಅಸ್ಪಷ್ಟತೆಯ ಅಳಿಸುವ ಬದಲು, ರಾಜ್ಯಗಳಲ್ಲಿ ಜಾತಿಯನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಲು ಮತ್ತು ಪಟ್ಟಿ ಮಾಡಲು ಮಾನದಂಡಗಳನ್ನು ಸಂಕೀರ್ಣಗೊಳಿಸಲಾಗಿದೆ.

ಪ್ರತ್ಯೇಕತೆ ಮತ್ತು ಅಸ್ಪಶ್ಯತೆಯ ಅನುಭವ ಮತ್ತು ಸಾಮಾಜಿಕ- ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯೊಂದಿಗೆ, ಇತರ ರೀತಿಯ ತಾರತಮ್ಯಗಳು ಜಾತಿಯನ್ನು ಪರಿಶಿಷ್ಟ ಜಾತಿ ಎಂದು ಘೋಷಿಸಲು ಮತ್ತು ಪಟ್ಟಿ ಮಾಡಲು ಪ್ರಮುಖ ಮಾನದಂಡಗಳಾಗಿವೆ. ಈ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಸಾಂದರ್ಭಿಕವಾಗಿ, ಹಿಂದೂಗಳ ಜಾತಿಯ ಕೆಲವು ಪಂಗಡಗಳನ್ನು ಅಥವಾ ಮೇಲ್ವರ್ಗದ ಜಾತಿಗಳನ್ನು ಪರಿಶಿಷ್ಟ ಜಾತಿಯ ಸುಳ್ಳು ಪ್ರಮಾಣ ಪತ್ರವನ್ನು ಪಡೆಯಲು ಮತ್ತು ಮೀಸಲಾತಿ ಒದಗಿಸುವ ಪ್ರಯೋಜನಗಳನ್ನು ಪಡೆಯಲು ಪ್ರಚೋದಿಸುತ್ತದೆ. ಆದರೂ ಅವರು ಯಾವುದೇ ರೀತಿಯ ಅಸ್ಪಶ್ಯತೆ ಮತ್ತು ಇತರ ತಾರತಮ್ಯಗಳಿಗೆ ಒಳಗಾಗಿರುವುದಿಲ್ಲ.

ಸುಳ್ಳು ಪ್ರಮಾಣ ಪತ್ರ ಪಡೆಯುವಲ್ಲಿ ಕರ್ನಾಟಕದ ಕೆಲವು ಮೇಲ್ಜಾತಿಗಳ ಜನ ಎಂದೂ ಹಿಂದೆ ಬಿದ್ದಿಲ್ಲ. ಶಿಕ್ಷಣ ಮತ್ತು ಉದ್ಯೋಗ ಹಾಗೂ ರಾಜಕೀಯ ಸ್ಥಾನ ತುಂಬಲು ಪರಿಶಿಷ್ಟ ಜಾತಿಯ ದೃಢೀಕರಣ ಪತ್ರವನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿದ್ದಾರೆ. ಅದನ್ನು ಆಗಾಗ ವೃತ್ತಪತ್ರಿಕೆಗಳು ಬಯಲು ಮಾಡುತ್ತಿವೆ. ವೃತ್ತ ಪತ್ರಿಕೆಗಳಲ್ಲಿ ನಿರ್ದಿಷ್ಟವಾಗಿ ‘ಇಂಥವರೇ’ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದು ಕೊಂಡಿರುತ್ತಾರೆ ಎಂಬುದು ಬಹಿರಂಗವಾಗಿದ್ದರೂ ಸರಕಾರ ಮಾತ್ರ ಜಾಣ ಮೌನ ತಾಳಿದೆಯೋ ಅಥವಾ ಕಣ್ಣು ಮುಚ್ಚಿ ಕುಳಿತಿದೆಯೋ ಯಾವುದೊಂದೂ ಗೊತ್ತಾಗುತ್ತಿಲ್ಲ. ಒಮ್ಮೊಮ್ಮೆ ಸರಕಾರದ ಪ್ರಭಾವಿ ವ್ಯಕ್ತಿಗಳ ಶಿಫಾರಸಿನಿಂದ ಅಂತಹ ಪ್ರಕರಣಗಳನ್ನು ಮುಚ್ಚಿ ಹಾಕಲಾಗುತ್ತಿದೆ. ಇಂಥವು ಪರಿಶಿಷ್ಟ ಜಾತಿಯ ಮುಖಂಡರುಗಳಿಗೆ ತಿಳಿದು ಬಂದರೂ ಅಸಹಾಯಕ ಸ್ಥಿತಿ ಅವರದು. ಯಾವುದೂ ತಾರ್ಕಿಕ ಅಂತ್ಯ ಮುಟ್ಟುವುದೇ ಇಲ್ಲ!

ಕೆಲವೊಂದನ್ನು ಇಲ್ಲಿ ಉದಾರಿಸಬಹುದು: ಚಿತ್ರದುರ್ಗ ಜಿಲ್ಲೆಯ ಜಂಗಮ ಜಾತಿಗೆ ಸೇರಿದ ಒಬ್ಬರು ‘ಬೇಡ ಜಂಗಮ’ ಎಂಬ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡು ಜಿಲ್ಲಾ ಪಂಚಾಯತ್ ಕ್ಷೇತ್ರ ಒಂದರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಇವರು ಈ ನಾಡಿನ ಪ್ರಸಿದ್ಧ ಮಠಾಧೀಶರೊಬ್ಬರ ಸಹೋದರ ಎಂಬುದು ತಿಳಿದ ವಿಷಯ. ಹಾಗೆ ಇತ್ತೀಚೆಗೆ ಮಾಜಿ ಮಂತ್ರಿ ಒಬ್ಬರು(ಇವರು ‘ಜಂಗಮ’ರು) ತಮ್ಮ ಮಗಳಿಗೂ ‘ಬೇಡ ಜಂಗಮ’ ಪ್ರಮಾಣ ಪತ್ರ ಪಡೆದು ತಾಂತ್ರಿಕ ಕಾಲೇಜೊಂದರಲ್ಲಿ ಪ್ರವೇಶ ಪಡೆದಿದ್ದರು ಎಂಬುದು ಪತ್ರಿಕೆಗಳಲ್ಲಿ ಜಗಜ್ಜಾಹೀರಾಗಿರುವುದನ್ನು ನಾಡಿನ ಪತ್ರಿಕಾ ವಾಚಕರು ಗಮನಿಸಿರುತ್ತಾರೆ. ಮತ್ತೊಂದು ಪ್ರಕರಣದಲ್ಲಿ, ಮೂಡಲ ಸೀಮೆಯ ವಿಧಾನಸಭಾ ಕ್ಷೇತ್ರ ಒಂದರಲ್ಲಿ ‘ಸುಡುಗಾಡು ಸಿದ್ಧ’ನೆಂದು ಹೇಳಿಕೊಂಡು ಪ್ರಮಾಣ ಪತ್ರ ಪಡೆದು ಮೀಸಲು ಕ್ಷೇತ್ರದಿಂದ ಗೆದ್ದು ಬಂದ ಒಬ್ಬರನ್ನು ಉಚ್ಚ ನ್ಯಾಯಾಲಯ ಛೀಮಾರಿ ಹಾಕಿದೆ. ಇಂಥವುಗಳ ಬಗ್ಗೆ ಮುಂದೆ ಏನೂ ಹೇಳುವುದೇ ಬೇಡ!. ಇಲ್ಲಿ ಕೇವಲ ಮೂರು ಉದಾಹರಣೆಗಳನ್ನು ಮಾತ್ರ ಕೊಡಲಾಗಿದೆ. ಆದರೆ ವಾಸ್ತವವೇ ಬೇರೆ ಇದೆ. ಇಂಥವು ನೂರಾರು ಪ್ರಕರಣಗಳು ‘ಹೀಗೇ ಬಂದು ಹಾಗೇ ಕಣ್ಮರೆಯಾಗುತ್ತವೆ’!

ಸಹಸ್ರಾರು ವರ್ಷಗಳಿಂದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಬಹಿಷ್ಕೃತರಾಗಿ, ಅಸ್ಪಶ್ಯರೆನಿಸಿಕೊಂಡು, ನೋವು-ಯಾತನೆಯನ್ನು ಅನುಭವಿಸುತ್ತಾ ಬದುಕುತ್ತಿರುವವರ ಅನ್ನದ ಗಂಗಳಕ್ಕೆ ಕೈಚಾಚುವ ಕ್ರೂರ ಸ್ವಭಾವದ ಜನರ ಮನಸ್ಥಿತಿಗೆ ಮಂಗಳ ಹಾಡುವ ದಾರ್ಶನಿಕನ್ನೊಬ್ಬ ಹುಟ್ಟಿ ಬರಬೇಕಾಗಿದೆ. ಎಂದೋ ಹುಟ್ಟಿ ಬಂದ ಬಾಬಾ ಸಾಹೇಬರು, ಪೆರಿಯಾರ್, ನಾರಾಯಣಗುರು ಅಂತಹ ಮಹಾನುಭಾವರ ಅಗತ್ಯ ಹಿಂದೆಂದಿಗಿಂತಲೂ ಈಗ ಇದೆ.

ಸದ್ಯ ಕರ್ನಾಟಕದಲ್ಲಿ ಬಹಳ ವರ್ಷಗಳಿಂದ ಯಾವುದೇ ಜಾತಿಯನ್ನೂ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿರುವುದಿಲ್ಲ. ಆದರೆ ಪರಿಶಿಷ್ಟ ಜಾತಿಯೊಳಗೆ ಉಪವರ್ಗೀಕರಣಕ್ಕಾಗಿ ಎರಡು ದಶಕಗಳಿಂದ ಹೋರಾಟವಂತೂ ನಡೆದಿದೆ. ಈ ನಿಟ್ಟಿನಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆಯೋಗ ಒಂದನ್ನು ರಚಿಸಲಾಗಿತ್ತು ಕೂಡ. ದೀರ್ಘ ಕಾಲದ ನಂತರ ಆಯೋಗವೇನೋ ವರದಿಯನ್ನು ಸರಕಾರಕ್ಕೆ ಸಲ್ಲಿಸಿತು. ಆದರೆ ವರದಿಯಲ್ಲೇನಿದೆ ಎಂಬುದನ್ನು ಸರಕಾರ ಬಯಲು ಮಾಡಲಿಲ್ಲ. ಆ ದಿಸೆಯಲ್ಲಿ ಬೇಡಿಕೆ ಯನ್ನಿಟ್ಟಿದ್ದ ಕೆಲವು ವರ್ಗಗಳ ಒತ್ತಾಯಕ್ಕೆ ಮಣಿದು ಹಿಂದಿನ ಸರಕಾರ ‘ಆದೇಶ’ ಹೊರಡಿಸಿ ಕೈ ತೊಳೆದುಕೊಂಡಿತು. ಅದೊಂದು ಗೊಂದಲದ ಆದೇಶವಾಗಿತ್ತು ಎಂದು ಆ ವರ್ಗದ ಜನರೇ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೆ ಇಂದಿಗೂ ಕೆಲವರು ಆಯೋಗದ ವರದಿಯನ್ನು ಜಾರಿಗೆ ಕೊಡಿ ಎಂದು ಸರಕಾರವನ್ನು ಕೋರುತ್ತಿರುವುದು ಮತ್ತು ಅದಕ್ಕಾಗಿ ಅಲ್ಲಲ್ಲಿ ಚಳವಳಿಗಳನ್ನು ಹಮ್ಮಿಕೊಳ್ಳುತ್ತಿರುವುದು ಹಿಂದಿನ ಸರಕಾರದ ‘ಆದೇಶ’ ರಾಜಕಾರಣದ ಉದ್ದೇಶದಿಂದ ಕೂಡಿತ್ತು ಎಂಬುದಕ್ಕೆ ಪುರಾವೆ ಬೇಕೇ?

ಇಂದಿಗೂ ಕೆಲವು ಜಾತಿಗಳು ಪರಿಶಿಷ್ಟ ಜಾತಿಗೆ ಸೇರಲು, ‘ಕುಲ ಶಾಸ್ತ್ರೀಯ ಅಧ್ಯಯನ’ದ ಆಧಾರದ ಮೇಲೆ ಸರಕಾರಕ್ಕೆ ಒತ್ತಡ ತರುತ್ತಿರುವ ದೃಶ್ಯ ನಮ್ಮ ಮುಂದಿದೆ. ಸರಕಾರ ಮಾತ್ರ, ನೆಂಟು ಮತ್ತು ಗಂಟು ಎರಡನ್ನೂ ಉಳಿಸಿಕೊಳ್ಳುವ ರೀತಿಯಲ್ಲಿ ವರ್ತಿಸುತ್ತಾ ಕಾಲ ದೂಡುತ್ತಿದೆ.

ಪರಿಶಿಷ್ಟ ಜಾತಿಗೆ ಸೇರ ಬಯಸುವವರು, ನಿಯಮವೋ ಅಥವಾ ಎಂಥದ್ದೋ ಗೊತ್ತಿಲ್ಲ; ಯಾವುದಾದರೂ ಒಂದು ವಿಶ್ವವಿದ್ಯಾನಿಲಯದ ಮೊರೆ ಹೋಗಿ ಮಾನವ ಶಾಸ್ತ್ರಜ್ಞರೊಬ್ಬರಿಂದ ‘ಕುಲ ಶಾಸ್ತ್ರೀಯ ಅಧ್ಯಯನ’ ಮಾಡಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಿ, ಒತ್ತಾಯ ತರುತ್ತಾರೆ. ಸರಕಾರ ಇಚ್ಛೆ ಪಟ್ಟಲ್ಲಿ ಶಿಫಾರಸಿನೊಡನೆ ಕುಲ ಶಾಸ್ತ್ರೀಯ ಅಧ್ಯಯನವನ್ನೂ, ರಿಜಿಸ್ಟರ್ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತರಿಗೆ ಕಳುಹಿಸಿ ಕೊಡುತ್ತದೆ. ಮತ್ತೆ ಆಯುಕ್ತರು ಸರಕಾರದ ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ವರದಿ ನಿಯಮಿತವಾಗಿದ್ದಲ್ಲಿ, ಕೇಂದ್ರ ಸರಕಾರದ ಗೃಹ ಇಲಾಖೆಗೆ ಕಳುಹಿಸುವರು. ಸಚಿವ ಸಂಪುಟದಲ್ಲಿ ಅನುಮೋದನೆಗೊಂಡ ನಂತರ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕೃತವಾಗಿ ರಾಷ್ಟ್ರಪತಿಗಳ ಮುದ್ರೆ ಬಿದ್ದ ಬಳಿಕ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಲ್ಪಡುವುದು. ಇವು ಸೇರುವಿಕೆಯ ಮಾನದಂಡಗಳು; ಆದರಿದು ಕಡು ಕಷ್ಟ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಕೆ.ಎನ್. ಲಿಂಗಪ್ಪ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!