ಮುಸ್ಲಿಮರ ಅಲ್ಪಾಧಿಕಾರಕ್ಕೆ ಮುಖ್ಯ ಕಾರಣ ಅಲ್ಪ ಮತದಾನ

Update: 2024-04-22 05:35 GMT

ಡಾಕ್ಟರ್ ಅಬೂ ಸಾಲೆಹ್ ಶರೀಫ್

ಆರ್ಥಿಕ ಮತ್ತು ಸಾಮಾಜಿಕ ವಿಷಯಗಳ ತಜ್ಞರು ಮತ್ತು ಸಂಶೋಧಕರು.

2005ರಿಂದ 2010ರ ತನಕ ದೇಶದ ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರಿಗೆ ಸಲಹೆಗಾರರಾಗಿದ್ದವರು.

ಸದ್ಯ ಅವರು ವಾಶಿಂಗ್ಟನ್ನಲ್ಲಿರುವ ಯುಎಸ್ ಇಂಡಿಯಾ ಪಾಲಿಸಿ ಇನ್ಸ್ಟಿಟ್ಯೂಟ್ನ ನಿರ್ದೇಶಕರಾಗಿದ್ದಾರೆ.

ಭಾರತದಲ್ಲಿ ಒಂದೆಡೆ ಎಲ್ಲ ಅಧಿಕಾರಗಳನ್ನು ಕೇಂದ್ರ ಸರಕಾರದ ಮುಷ್ಟಿಯಲ್ಲಿ ಕೇಂದ್ರೀಕರಿಸುವ ಅಪೂರ್ವ ಪ್ರಕ್ರಿಯೆ ನಡೆಯುತ್ತಿದ್ದರೆ ಇನ್ನೊಂದೆಡೆ ದೇಶದ ರಾಜಕೀಯ, ಆರ್ಥಿಕ ಮತ್ತು ಕಾನೂನು ಸಂಬಂಧಿ ಪ್ರಮುಖ ನೀತಿಗಳನ್ನೆಲ್ಲಾ ಪ್ರಧಾನಿ ನರೇಂದ್ರ ಮೋದಿ ವ್ಯಕ್ತಿತ್ವಕ್ಕೆ ಅಧೀನಗೊಳಿಸಿಡುವ ಶ್ರಮವೂ ನಡೆಯುತ್ತಿದೆ. ಬಹುತ್ವ ಮತ್ತು ಜಾತ್ಯತೀತತೆಗಳನ್ನು ಅಪರಾಧೀಕರಿಸುವುದರ ಜೊತೆಗೆ ಅಖಿಲ ಭಾರತ ಮಟ್ಟದಲ್ಲೂ ಪ್ರಾಂತೀಯ ಮಟ್ಟದಲ್ಲೂ ಮುಸ್ಲಿಮ್ ಸಮಾಜದ

ರಾಜಕೀಯ ಸಹಭಾಗಿತ್ವ ಹಾಗೂ ಸಬಲೀಕರಣವನ್ನು ತಡೆಯುವ ಕಾರ್ಯತಂತ್ರವನ್ನು ಮೋದಿಯವರು ಬಹಿರಂಗವಾಗಿಯೇ ಅನುಷ್ಠಾನಿಸುತ್ತಿದ್ದಾರೆ. ಸಂಸತ್ತಿನಲ್ಲಿ, ಅವರ ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾಗಿರುವ ಒಬ್ಬನೇ ಒಬ್ಬ ಮುಸ್ಲಿಮ್ ಸಂಸತ್ ಸದಸ್ಯನಿಲ್ಲ, ಮಾತ್ರವಲ್ಲ, ಆ ಪಕ್ಷವು ಅಧಿಕಾರದಲ್ಲಿರುವ ಯಾವುದೇ ರಾಜ್ಯದಲ್ಲಿ ಆ ಪಕ್ಷದಿಂದ ಆಯ್ಕೆಯಾದ ಒಬ್ಬನೇ ಒಬ್ಬ ಶಾಸಕನಿಲ್ಲ.

ಇಂತಹ ಧ್ರುವೀಕರಣದ ಧೋರಣೆಯನ್ನಿಟ್ಟುಕೊಂಡು ಬಿಜೆಪಿ 2019ರ ಮಹಾ ಚುನಾವಣೆಯಲ್ಲಿ 38 ಶೇ. ಮತಗಳನ್ನು ಮಾತ್ರ ಗಳಿಸಿತು. ಆದರೆ ಭಾರತದ ಬಹುಪಕ್ಷೀಯ ವ್ಯವಸ್ಥೆಯಲ್ಲಿ ಒಂದು ಪಕ್ಷಕ್ಕೆ ಶೇಕಡಾವಾರು ಮೂರನೇ ಒಂದಕ್ಕಿಂತ ಕಡಿಮೆ ಮತಗಳು ಸಿಕ್ಕಿದ್ದರೂ, ಅದಕ್ಕೆ ಸಿಕ್ಕ ಮತಗಳೇ ಅತ್ಯಧಿಕವಾಗಿದ್ದರೆ ಅದು ಅಧಿಕಾರಕ್ಕೆ ಬಂದು ಬಿಡುತ್ತದೆ. ಹೀಗೆ ಬಿಜೆಪಿಯು ತನಗೆ ಅಲ್ಪಸಂಖ್ಯಾತರ ಮತ್ತು ವಿಶೇಷವಾಗಿ ಮುಸ್ಲಿಮರು ಮತ್ತು ಕ್ರೈಸ್ತರ ಮತಗಳು ಸಿಗದಿದ್ದರೂ, ಧರ್ಮದ ಹೆಸರಲ್ಲಿ ಸಮಾಜವನ್ನು ಧ್ರುವೀಕರಿಸಿ ಆ ಮೂಲಕ ತಾನು ಅಧಿಕಾರಕ್ಕೆ ಬರಲು ಮತ್ತು ಅದನ್ನು ಉಳಿಸಿಕೊಳ್ಳಲು ಅವಕಾಶ ಇದೆ ಎಂಬ ಆತ್ಮ ವಿಶ್ವಾಸವನ್ನು ಬೆಳೆಸಿಕೊಂಡಿದೆ.

2009ರ ಮಹಾ ಚುನಾವಣೆಯಲ್ಲಿ 58 ಶೇ. ಹಿಂದೂಗಳು ಮತ್ತು 59 ಶೇ. ಮುಸ್ಲಿಮರು ಮತ ಚಲಾಯಿಸಿದ್ದರು. ಅಂದರೆ ಅವರಿಬ್ಬರ ಭಾಗವಹಿಸುವಿಕೆ ಬಹುತೇಕ ಸಮಾನವಾಗಿತ್ತು. ಆದರೆ 2014ರ ಮಹಾ ಚುನಾವಣೆಯಲ್ಲಿ ಮತ ಚಲಾಯಿಸಿದ ಹಿಂದೂಗಳ ಪ್ರಮಾಣದಲ್ಲಿ 10 ಶೇ. ವೃದ್ಧಿಯಾಗಿ percentage points to 68 ಶೇ.ವನ್ನು ತಲುಪಿತು. ಆದರೆ ಆ ವರ್ಷ ಮತ ಚಲಾಯಿಸಿದ ಮುಸ್ಲಿಮ್ ಮತದಾರರ ಸಂಖ್ಯೆ 59 ಶೇ.ದಲ್ಲೇ ಉಳಿದುಕೊಂಡಿತು. 2019ರ ಮಹಾ ಚುನಾವಣೆಯಲ್ಲಿ 70 ಶೇ. ಹಿಂದೂ ಮತದಾರರು ಮತ್ತು 60 ಶೇ. ಮುಸ್ಲಿಮ್ ಮತದಾರರು ಮತ ಚಲಾಯಿಸಿದರು. ಅಂದರೆ ಎರಡು ಸಮುದಾಯಗಳಲ್ಲಿ ಮತ ಚಲಾಯಿಸುವವರ ಸಂಖ್ಯೆಯ ನಡುವೆ 10 ಶೇ. ವ್ಯತ್ಯಾಸ ಉಳಿದುಕೊಂಡಿತು. ಅಂದರೆ ಇಲ್ಲಿ ಹಿಂದೂ ಮತದಾರರ ಮೇಲೆ ಧ್ರುವೀಕರಣದ ಪ್ರಭಾವವು ಸ್ಪಷ್ಟವಾಗಿ ಕಾಣಿಸುತ್ತಿದ್ದು ಸತತ ಮೂರು ಮಹಾ ಚುನಾವಣೆಗಳಲ್ಲಿ ಮುಸ್ಲಿಮ್ ಮತದಾರರ ಸಂಖ್ಯೆ ಬಹುತೇಕ ಹಾಗೆಯೇ ಉಳಿದುಕೊಂಡಿದೆ.

ಅಚ್ಚರಿ ಮೂಡಿಸುವ ಒಂದು ಅಂಶವೇನೆಂದರೆ 2024ರಲ್ಲಿ ನಡೆಯುತ್ತಿರುವ 18ನೇ ಮಹಾ ಚುನಾವಣೆಯಲ್ಲಿ ಸಾಕ್ಷಾತ್ ಪ್ರಧಾನಿ ಮೋದಿಯವರು ರಂಗಕ್ಕಿಳಿದು ಮುಸ್ಲಿಮ್ ಸಮಾಜದೊಳಗೆ ಬಿರುಕು ಮೂಡಿಸಿ ಅವರಲ್ಲಿನ ಒಂದು ವರ್ಗದ ಮತಗಳನ್ನು ಬಿಜೆಪಿ ಪರ ತಿರುಗಿಸುವ ಅಭಿಯಾನ ನಡೆಸುತ್ತಿದ್ದಾರೆ. ಅವರು ಮುಸ್ಲಿಮರ ನಡುವೆ ‘ಫಾಸ್ಮಾಂದಾ’ (ಹಿಂದುಳಿದವರು) ಎಂಬೊಂದು ಹೊಸ ಗುರುತನ್ನು ಸೃಷ್ಟಿಸಿ, ವಿಶೇಷವಾಗಿ ಮಹಿಳೆಯರನ್ನು ಗುರಿ ಮಾಡಿ, ನಾನು ನಿಮ್ಮನ್ನು ಟ್ರಿಪಲ್ ತಲಾಕ್ನ ಸಮಸ್ಯೆಯಿಂದ ಪಾರುಗೊಳಿಸಿರುವುದಕ್ಕಾಗಿ ನನಗೆ ಮತ ನೀಡಿ ಎಂದು ಆಗ್ರಹಿಸುತ್ತಿದ್ದಾರೆ.

2022 ಸೆಪ್ಟಂಬರ್ ನಲ್ಲಿ ಕೇಂದ್ರ ಸರಕಾರವು, ಇಸ್ಲಾಮ್ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ದಲಿತರಿಗೆ ಮೀಸಲಾತಿ ಒದಗಿಸುವ ಸಾಧ್ಯತೆಯ ಕುರಿತು ಅಧ್ಯಯನಕ್ಕಾಗಿ ಒಂದು ರಾಷ್ಟ್ರೀಯ ಆಯೋಗವನ್ನು ರಚಿಸುವುದಾಗಿ ಘೋಷಿಸಿತು. ಇದು ಕೆಲವರಲ್ಲಿ ಅಚ್ಚರಿ ಮೂಡಿಸಿದರೆ ಹಲವರಿಗೆ ತಮಾಷೆಯೆನಿಸಿತು. ಬಿಜೆಪಿ ಸದಾ ತಾಳುತ್ತಾ ಬಂದಿರುವ ಅಲ್ಪಸಂಖ್ಯಾತ ವಿರೋಧಿ ಮತ್ತು ವಿಶೇಷವಾಗಿ ಮುಸ್ಲಿಮ್ ವಿರೋಧಿ ನಿಲುವನ್ನು ಗಮನಿಸಿದವರಿಗೆ ಅಚ್ಚರಿಯಾಗಿದ್ದರೆ, ಸ್ವಾತಂತ್ರ್ಯ ನಂತರ ಈ ತನಕ ದಲಿತ ಮುಸ್ಲಿಮ್ ಅಥವಾ ದಲಿತ ಕ್ರೈಸ್ತ ಎಂಬ ಗುರುತುಗಳ ಅಸ್ತಿತ್ವವನ್ನೇ ಎಂದೂ ಅಧಿಕೃತವಾಗಿ ಗುರುತಿಸಲಾಗಿಲ್ಲ ಎಂಬುದನ್ನು ಬಲ್ಲವರಿಗೆ ಇದೊಂದು ತಮಾಷೆ ಎನಿಸಿತ್ತು.

ಇಲ್ಲಿ ಒಂದಂಶ ಗಮನಾರ್ಹವಾಗಿದೆ. ಜನಗಣತಿ ಮತ್ತು ರಾಷ್ಟ್ರೀಯ ಸ್ಯಾಂಪಲ್ ಸರ್ವೇ ನಡೆಸುವವರ ಮುಂದೆ ಒಂದು ಕುಟುಂಬದವರು ತಾವು ಮುಸ್ಲಿಮರು ಅಥವಾ ಕ್ರೈಸ್ತರು ಎಂದು ಗುರುತಿಸಿಕೊಂಡ ಬಳಿಕ ಅವರಿಗೆ ತಾವು ದಲಿತರು ಎಂದು ಗುರುತಿಸಿಕೊಳ್ಳುವ ಅವಕಾಶ ಇರುವುದಿಲ್ಲ. ಯಾವುದೇ ಸರಕಾರಿ ಇಲಾಖೆ ಅಥವಾ ಸಂಸ್ಥೆಯು ಮುಸ್ಲಿಮರು ಅಥವಾ ದಲಿತರ ಕುರಿತು ಅವರು ದಲಿತರು ಎಂದು ಗುರುತಿಸಿರುವ ದಾಖಲೆಯೂ ಇಲ್ಲ. ಜಾತಿ ಪ್ರಮಾಣ ಪತ್ರಗಳನ್ನು ನೀಡುವ ಅಥವಾ ದೃಢೀಕರಿಸುವ ಅಧಿಕಾರಿಗಳು, ಯಾರಾದರೂ ತಮ್ಮನ್ನು ಮುಸ್ಲಿಮ್ ಅಥವಾ ಕ್ರೈಸ್ತ ಎಂದು ಗುರುತಿಸಿಕೊಂಡ ಬಳಿಕ ಅಂಥವರಿಗೆ ಅವರು ದಲಿತರೆಂಬ ಪ್ರಮಾಣ ಪತ್ರ ನೀಡಿದ ದಾಖಲೆ ಕೂಡಾ ಇಲ್ಲ.

ಇಂದು ಮುಸ್ಲಿಮರು ರಾಜಕೀಯವಾಗಿ ಒಂದು ಅಧಿಕಾರ ರಹಿತ ಸಮುದಾಯವಾಗಿ ಬಿಟ್ಟಿದ್ದಾರೆಂಬುದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾದ ಅನೇಕ ಪುರಾವೆಗಳಿವೆ. ಸದ್ಯ ಚುನಾವಣಾ ಋತುವಿನಲ್ಲಿ CAA ಮತ್ತು UCC ಎಂಬ ಭೂತಗಳನ್ನು ಬಚ್ಚಿಡಲಾಗಿರುವುದು ನಿಜ. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸದ್ಯ ತೆರೆ ಮರೆಯಲ್ಲಿರುವ 1. ರಾಷ್ಟ್ರೀಯ ಜನಸಂಖ್ಯಾ ದಾಖಲೆ (NPR)ಯ ತಯಾರಿ ಮತ್ತು 2. ರಾಷ್ಟ್ರೀಯ ಪೌರತ್ವ ದಾಖಲೆ (NRC) ಎಂಬ ಎರಡು ರಕ್ತ ಪಿಪಾಸು ಪಿಶಾಚಿಗಳನ್ನು ರಂಗಕ್ಕಿಳಿಸಿ ದೊಡ್ಡ ಮಟ್ಟದ ಹಿಂಸೆ ಮತ್ತು ಪ್ರಕ್ಷೋಭೆಯನ್ನು ಸೃಷ್ಟಿಸಲಾಗುವುದು ಎಂಬುದು ಹಲವರ ಖಚಿತ ಅಭಿಪ್ರಾಯವಾಗಿದೆ.

ಪ್ರಸ್ತುತ ಅಭಿಪ್ರಾಯದವರ ಪ್ರಕಾರ, ಅಂತಹ ಸಾಧ್ಯತೆಯನ್ನು ನಿವಾರಿಸುವುದಕ್ಕಿರುವ ಒಂದೇ ಮಾರ್ಗವೇನೆಂದರೆ, ಮುಸ್ಲಿಮರು ಪಾರ್ಲಿಮೆಂಟ್, ಅಸೆಂಬ್ಲಿ, ಪಂಚಾಯತ್ ಮತ್ತು ನಗರ ನಿಗಮ ಸಹಿತ ಎಲ್ಲ ಸ್ತರದ ಚುನಾವಣೆಗಳಲ್ಲಿ ಬಹಳ ಸಕ್ರಿಯವಾಗಿ ಭಾಗವಹಿಸಿ ಗರಿಷ್ಠ ಪ್ರಮಾಣದಲ್ಲಿ ತಮ್ಮ ಮತ ಚಲಾಯಿಸಬೇಕು. ಸದ್ಯ ಹಿಂದೂಗಳ ಮತದಾನ ಪ್ರಮಾಣ 70 ಶೇ.ದಷ್ಟಿದ್ದು ಮುಸ್ಲಿಮರ ಮತದಾನ ಪ್ರಮಾಣ ಕೇವಲ 60 ಶೇ.ದಲ್ಲಿದೆ. 10 ಶೇ. ಈ ಅಂತರ ನಿಜಕ್ಕೂ ದೊಡ್ಡ ಅಂತರವಾಗಿದೆ. ಮುಸ್ಲಿಮರು ತಮ್ಮ ರಾಜಕೀಯ ನಾಯಕರನ್ನು ಆರಿಸುವಾಗ ಕೇವಲ ತಮ್ಮ ಸಮುದಾಯಕ್ಕೆ ಪ್ರಾಶಸ್ತ್ಯ ನೀಡಬಾರದು. ಸಂವಿಧಾನದ ಪ್ರಕಾರ ಚುನಾವಣೆಯ ಸಂದರ್ಭದಲ್ಲಿ ಜಾತಿ, ಮತ ಇತ್ಯಾದಿ ಸಾಮಾಜಿಕ ಗುರುತುಗಳು ಮುಖ್ಯವಾಗಿರಬಾರದು. ದೇಶದ ಹಿತರಕ್ಷಣೆ, ಸಂವಿಧಾನ, ರಾಷ್ಟ್ರೀಯತೆ, ಜಾತ್ಯತೀತತೆ ಶಾಂತಿ ಮತ್ತು ದೇಶದ ಬೆಳವಣಿಗೆಯೇ ಎಲ್ಲರ ಪ್ರಾಶಸ್ತ್ಯವಾಗಿರಬೇಕು.

ಸದ್ಯ ದೇಶದ ರಾಜಕೀಯದಲ್ಲಿ ವ್ಯಾಪಕವಾಗಿ ಮೆರೆಯುತ್ತಿರುವ ವಿಭಾಜಕ ರಾಜಕೀಯ ಕಾರ್ಯ ತಂತ್ರ, ಅಧಿಕಾರದ ಕೇಂದ್ರೀಕರಣ, ಸರ್ವಾಧಿಕಾರಿ ನಿರ್ಧಾರಗಳು ದೇಶದ ಪಾಲಿಗೆ ಮಾರಕವಾಗಿವೆ. ಇವೆಲ್ಲಾ ಪ್ರಧಾನಿ ಮೋದಿಯವರ ನೇತೃತ್ವದಲ್ಲೇ ನಡೆಯುತ್ತಿದ್ದು ಅವರ ಧೋರಣೆಗಳಿಂದಾಗಿ ದೇಶವು ಆರ್ಥಿಕವಾಗಿ ದುರ್ಬಲಗೊಂಡಿರುವುದು ಮಾತ್ರವಲ್ಲ ಜಾಗತಿಕ ಮಟ್ಟದಲ್ಲೂ ದೇಶದ ಪ್ರತಿಷ್ಠೆಗೆ ಧಕ್ಕೆ ಒದಗಿದೆ.

ನಮ್ಮ ದೇಶದಲ್ಲಿ ಬಹುಪಕ್ಷೀಯ ಮತ್ತು ವಯಸ್ಕ ಮತದಾನದ ಆಧಾರದಲ್ಲಿ ಪ್ರಥಮ ಮಹಾ ಚುನಾವಣೆಯು 1951-1952ರಲ್ಲಿ ನಡೆದಿತ್ತು. ಆಗ 17.2 ಕೋಟಿ ಮಂದಿ ಮತ ಚಲಾಯಿಸಿದ್ದರು. ಈ ಬಾರಿ (2024)ಮತದಾರ ಸಂಖ್ಯೆ ಶತಕೋಟಿ ಆಸುಪಾಸಿನಲ್ಲಿದೆ. ಈ ಚುನಾವಣೆಯಲ್ಲಿ ಭಾಷೆ, ಪ್ರದೇಶ, ಆದಾಯ, ಧರ್ಮ, ಜಾತಿ, ಸಂಸ್ಕೃತಿ ಹೀಗೆ ವಿವಿಧ ಆಯಾಮಗಳಿಂದ, ವೈವಿಧ್ಯತೆಯ ಪಾತ್ರವು ಮಹತ್ವದ್ದಾಗಿದೆ. ದೇಶದಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿವೆ. ಕಳೆದ ಮೂರ್ನಾಲ್ಕು ಚುನಾವಣೆಗಳಲ್ಲಿ ಬಿಜೆಪಿಯು ಧರ್ಮದ ಆಧಾರದಲ್ಲಿ ಮತದಾರರನ್ನು ಧ್ರುವೀಕರಿಸುವ ಅಭಿಯಾನ ನಡೆಸುತ್ತಾ ಬಂದಿದೆ. ಮುಸ್ಲಿಮರು ಪರಕೀಯರು ಎಂದು ಚಿತ್ರಿಸಿ ಅವರ ವಿರುದ್ಧ ಹಲವು ಬಗೆಯ ಅಪಪ್ರಚಾರಗಳನ್ನು ನಡೆಸಿದೆ. ಅವರೆಲ್ಲ ಭಯೋತ್ಪಾದಕರು, ಅವರಿಂದಾಗಿ ದೇಶಕ್ಕೆ ಅಪಾಯವಿದೆ ಎಂದೆಲ್ಲಾ ಹೇಳಿ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಮತ್ತು ಹಿಂದೂಗಳ ಮತಗಳನ್ನು ಲಪಟಾಯಿಸಲು ಪ್ರಯತ್ನಿಸಿದೆ. ಸುಮಾರು 79 ಶೇ.ದಷ್ಟಿರುವ ಬಹುಸಂಖ್ಯಾತರಲ್ಲಿ ಹೆಚ್ಚಿನವರು ಈ ಪ್ರಚಾರದ ಮುಂದೆ ಮಂತ್ರಮುಗ್ಧರಾಗಿ 15 ಶೇ.ದಷ್ಟಿರುವ ಮುಸ್ಲಿಮರು ಮತ್ತು ಕೇವಲ 4 ರಿಂದ 5 ಶೇ.ದಷ್ಟಿರುವ ಇತರ ಅಲ್ಪಸಂಖ್ಯಾತ ವರ್ಗಗಳಿಂದ ತಮಗೆ ಭಾರೀ ಅಪಾಯವಿದೆ ಎಂದು ನಂಬಿಬಿಟ್ಟರು. ಈ ಸುಳ್ಳಿನ ಅಭಿಯಾನದ ಫಲವಾಗಿಯೇ 2014 ರಿಂದ ಈವರೆಗೂ ಅಧಿಕಾರದ ಗದ್ದುಗೆಗೆ ಅಂಟಿಕೊಂಡಿರುವ ಪ್ರಧಾನಿ ಮೋದಿಯವರು ಕ್ರಮೇಣ ಸರ್ವಾಧಿಕಾರದ ಕಡೆಗೆ ಹೆಜ್ಜೆ ಹಾಕುತ್ತ ಬಂದಿದ್ದು ಇದೀಗ ಆ ಗುರಿಯನ್ನು ಸಾಧಿಸುವ ಅಂಚಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ದೇಶವನ್ನು ಮತ್ತು ಪ್ರಜಾಸತ್ತೆಯನ್ನು ರಕ್ಷಿಸಬೇಕಾದುದು ಎಲ್ಲ ನಾಗರಿಕರ ಪರಮ ಕರ್ತವ್ಯವಾಗಿದೆ.

(ಕನ್ನಡಕ್ಕೆ- ಪಿ.ಎ.ರೈ)


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾಕ್ಟರ್ ಅಬೂ ಸಾಲೆಹ್ ಶರೀಫ್

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!