ದೇವಸ್ಥಾನ, ರೈಲ್ವೇ ನಿಲ್ದಾಣಗಳನ್ನು ಮಾತ್ರ ಬೆಳಗಿಸುವ ರಾಜಕೀಯ ! | Temple | Railway Station | Politics

Update: 2024-03-06 05:08 GMT
Editor : Ismail | Byline : ಆರ್. ಜೀವಿ

ಅಮೃತ ಕಾಲದಲ್ಲಿ ಹೆಸರುಗಳಷ್ಟೇ ಚಂದ. ಒಳಗೆಲ್ಲ ಹುಳುಕೋ ಹುಳುಕು. ಈಗ ರೈಲ್ವೆ ವಿಚಾರದಲ್ಲಿಯೂ ಮೋದಿ ಅಭಿವೃದ್ಧಿಯ ಮಾದರಿ ಅದೇ ತಂತ್ರದ ಮೊರೆಹೋಗಿದೆ. ಬಣ್ಣ ಹಚ್ಚುವುದು, ಕಣ್ಣು ಕೋರೈಸುವ ಬೆಳಕು ಹರಡುವುದು, ನೋಡುವ ಕಣ್ಣುಗಳು ಭ್ರಮೆಗೆ ಮಂಕಾಗುವಂತೆ ಮಾಡುವುದು ಮೋದಿ ಸರ್ಕಾರ ಆಡುತ್ತಲೇ ಬಂದಿರುವ ಆಟ.

ಇಂಥ ಶೋಕಿಯ ಮೋದಿ ಅಭಿವೃದ್ಧಿ ಮಾದರಿ ಅದೆಷ್ಟು ಟೊಳ್ಳಾಗಿದೆ ? ಎಲ್ಲ ಕಡೆ ಕೇವಲ ದೇವಸ್ಥಾನಗಳು ಹಾಗು ರೈಲ್ವೆ ನಿಲ್ದಾಣಗಳನ್ನು ಮಾತ್ರ ಝಗಮಗಿಸುವಂತೆ ಮಾಡಿ ಇಡೀ ನಗರವನ್ನೇ ಉದ್ದಾರ ಮಾಡಲಾಗಿದೆ ಎಂಬಂತೆ ಪೋಸು ಕೊಡುವ ಈ ಮಾದರಿ ಅದೆಷ್ಟು ಜನದ್ರೋಹಿಯಾಗಿದೆ ? ರೈಲ್ವೆ ನಿಲ್ದಾಣಗಳು ವಿಮಾನ ನಿಲ್ದಾಣಗಳು ಆಧುನಿಕೀಕರಣ ಆಗುತ್ತಿವೆ ಎಂದು ಹೇಳುತ್ತಲೇ ರೈಲ್ವೆ ಪ್ರಯಾಣವನ್ನು ಅದೆಷ್ಟು ದುಬಾರಿ ಮಾಡಲಾಗುತ್ತಿದೆ ?

ಅದೇ ರೀತಿ ಸರಕಾರಿ ಆಸ್ಪತ್ರೆ, ಸರಕಾರಿ ಶಾಲಾ ಕಾಲೇಜು ಇತ್ಯಾದಿಗಳನ್ನು ಯಾಕೆ ಆಧುನಿಕೀಕರಣ ಮಾಡಿ ತೋರಿಸುತ್ತಿಲ್ಲ ?  ಇದು ಅಭಿವೃದ್ಧಿಯ ಯಾವ ಮಾದರಿ ? ಎಲ್ಲಿಯ ಮಾದರಿ ?

ನೋವಿನಿಂದಲೇ ಇಂಥ ಪ್ರಶ್ನೆಗಳನ್ನು ಎತ್ತಬೇಕಾಗಿದೆ. ನೀವೊಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗಿಬಿಡುತ್ತದೆ.ದೇವಸ್ಥಾನ ಮತ್ತು ರೈಲು ನಿಲ್ದಾಣ ಇವೆರಡರ ಬಗ್ಗೆಯೇ ಮೋದಿ ಸರ್ಕಾರ ಹೆಚ್ಚಿನ ಗಮನ ಹರಿಸುತ್ತಿದೆ.

ದೇವಸ್ಥಾನದ ಪುನರ್ನಿರ್ಮಾಣ ಮತ್ತು ಜೀರ್ಣೋದ್ಧಾರ ಒಂದು ತಂತ್ರವಾದರೆ, ಇನ್ನೊಂದೆಡೆಯಿಂದ ರೈಲು ಮತ್ತು ರೈಲು ನಿಲ್ದಾಣಗಳನ್ನು ಮರುವಿನ್ಯಾಸಗೊಳಿಸಲಾಗುತ್ತಿದೆ. ಭವ್ಯ ವಿನ್ಯಾಸಗಳ ಮೂಲಕ ಜನರನ್ನು ಮರುಳು ಮಾಡುವ ತಂತ್ರವೊಂದು ಜಾರಿಯಲ್ಲಿದೆ.

ಯಾವುದೇ ಒಂದು ನಗರದಲ್ಲಿ ರೈಲು ನಿಲ್ದಾಣ ಮತ್ತು ದೇವಸ್ಥಾನದ ಸುತ್ತ ಸ್ವಚ್ಛಗೊಳಿಸಿದರೆ, ಆ ನಗರದ ಉಳಿದ ಭಾಗವೆಲ್ಲ ಮೊದಲಿನ ಹಾಗೆಯೇ ಉಳಿದಿದ್ದರೂ, ನೋಡುವವರ ಕಣ್ಣಿಗೆ ಆ ರೈಲು ನಿಲ್ದಾಣ ಮತ್ತು ದೇವಸ್ಥಾನದ ಝಗಮಗ ಮಾತ್ರವೇ ಕಾಣಿಸುತ್ತದೆ. ಎಷ್ಟು ದೊಡ್ಡ ಕೆಲಸ ಮಾಡಲಾಗಿದೆ ನೋಡಿ ಎಂದು ನಗರದ ಲಕ್ಷಾಂತರ ಜನರಿಗೆ ತೋರಿಸುವುದು ಮತ್ತವರನ್ನು ಭ್ರಮೆಯಲ್ಲಿ ಬೀಳಿಸುವುದು ಇಲ್ಲಿ ನಡೆದಿದೆ.

ಇಡೀ ಒಂದು ನಗರವನ್ನು ಬೆಳಗಿಸಲು ಎಲ್ಲಾ ಶಕ್ತಿ ಮತ್ತು ಸಂಪನ್ಮೂಲಗಳನ್ನು ವ್ಯಯಿಸುವ ಬದಲು, ಅತ್ಯಂತ ಕಡಿಮೆ ಸಮಯದಲ್ಲಿ ದೇವಾಲಯ ಮತ್ತು ರೈಲು ನಿಲ್ದಾಣವನ್ನು ಬೆಳಗಿಸಿ, ಇಡೀ ನಗರವನ್ನೇ ಅಭಿವೃದ್ಧಿ ಮಾಡಿದ್ದೇವೆ ಎಂದು ತೋರಿಸಿಕೊಳ್ಳುವುದು.

ಮೋದಿ ಸರ್ಕಾರ ಎಷ್ಟೊಂದು ಕೆಲಸ ಮಾಡಿಬಿಟ್ಟಿದೆಯಲ್ಲವೆ ಎಂದು ಬಂದುಹೋಗುವ ಲಕ್ಷಾಂತರ ಜನರು ಭಾವಿಸುತ್ತಾರೆ. ಆದರೆ ಅವರದೇ ಬೀದಿಯಲ್ಲಿ, ಅವರದೇ ಊರಿನಲ್ಲಿ ಅಂಥ ಯಾವ ಅಭಿವೃದ್ಧಿಯೂ, ಝಗಮಗವೂ ಕಾಣಿಸುವುದೇ ಇಲ್ಲ.

ದೇವಸ್ಥಾನ ಮತ್ತು ರೈಲು ನಿಲ್ದಾಣದ ಬಳಿ ಮಾತ್ರವೇ ಅದು ಗೋಚರಿಸುತ್ತದೆ. ಆದರೆ ಅದೇ ನಗರದ ಸರ್ಕಾರಿ ಕಾಲೇಜುಗಳು, ಆಸ್ಪತ್ರೆಗಳು, ಶಾಲೆಗಳು ಮತ್ತು ಕಚೇರಿಗಳಲ್ಲಿ ಯಾವ ಅಭಿವೃದ್ಧಿಯೂ ಇಲ್ಲ.

ಹೀಗೇಕೆ ಎಂದು ಕೇಳಿದರೆ ಅದಕ್ಕೆ ಉತ್ತರ ಸಿಗುವ ನಿರೀಕ್ಷೆಯೂ ಇಲ್ಲ.

ಸಾವಿರಾರು ಕೋಟಿ ಹಾಕಿ ರೈಲು ನಿಲ್ದಾಣಗಳನ್ನು ಝಗಮಗಗೊಳಿಸಲಾಗುತ್ತಿದೆ. ಹೆಸರು ಬದಲಿಸಲಾಗುತ್ತದೆ.

ಆದರೆ ಹೀಗೆ ಝಗಮಗಗೊಳಿಸುವ ಮೂಲಕ ಮೋದಿ ಸರ್ಕಾರ ಈ ದೇಶದ ಜನರಿಗೆ, ಜನಸಾಮಾನ್ಯರಿಗೆ ಏನನ್ನು ಕೊಟ್ಟಂತಾಯಿತು?

ವಿಕಸಿತ ಭಾರತ – ವಿಕಸಿತ ರೇಲ್ವೆ. ಅಮೃತ್ ಭಾರತ್ ಸ್ಟೇಷನ್. ಆದರೆ ಇದರ ಮೂಲಕ ಆಗಿರುವುದು, ಆಗುತ್ತಿರುವುದು ಯಾರ ವಿಕಾಸ?

ಅಮೃತ್ ಭಾರತ್ ಸ್ಟೇಷನ್ ಮೂಲಕ ಯಾವ ಬಡವರಿಗೆ, ಯಾವ ಜನಸಾಮಾನ್ಯರಿಗೆ ಮೋದಿ ಸರ್ಕಾರ ಉಪಕಾರ ಮಾಡಿತು?

ನಿತ್ಯವೂ ಆ ನಿಲ್ದಾಣಗಳ ಮೂಲಕ ಹಾದುಹೋಗುವ ಲಕ್ಷಾಂತರ ಮಂದಿ, ಮೋದಿ ಎಷ್ಟೆಲ್ಲ ಮಾಡಿದ್ದಾರೆ ಎಂದುಕೊಳ್ಳುತ್ತಾರೆ. ಆದರೆ ಮೋದಿ ಮಾಡಿರುವುದು ಪ್ಯಾಸೆಂಜರ್ ರೈಲಿನ ಹೆಸರನ್ನು ಬದಲಿಸಿ ಎಕ್ಸ್ಪ್ರೆಸ್ ಎಂದು ಇಟ್ಟಿರುವುದು ಮಾತ್ರ ಎಂಬುದು ಅವರಿಗೆ ಹೊಳೆಯುವುದೇ ಇಲ್ಲ.

ಹೀಗೆ ಹೆಸರು ಬದಲಿಸಿ ಮೋದಿ ಸರ್ಕಾರ ತಮ್ಮ ಜೇಬಿಗೇ ಕನ್ನ ಹಾಕಿದೆಯೆಂಬುದು ಕೂಡ, ಝಗಮಗದ ಭ್ರಮೆಯಲ್ಲಿ ಮಂಕಾದ ಅವರ ಬುದ್ಧಿಗೆ ತಕ್ಷಣಕ್ಕೆ ಹೊಳೆಯುವುದೇ ಇಲ್ಲ. ಮಂದಿರ ಮತ್ತು ನಿಲ್ದಾಣಗಳನ್ನು ಒಂದರಂತೆ ಇನ್ನೊಂದು ಎಂಬಂತೆ ಬೆರೆಸಿ ವಿನ್ಯಾಸಗೊಳಿಸುವುದು, ನಿಲ್ದಾಣವನ್ನು ಮಂದಿರದಂತೆ ಕಾಣುವ ಹಾಗೆ ಮಾಡುವುದು ಇಲ್ಲಿನ ಒಂದು ಚಮತ್ಕಾರ.

ಟೈಮ್ಸ ಆಫ್ ಇಂಡಿಯಾ ವರದಿಯೊಂದರ ಪ್ರಕಾರ, ಲಖ್ನೋದಲ್ಲಿನ ಗೋಮ್ತಿನಗರ ರೈಲುನಿಲ್ದಾಣವನ್ನು ನ್ಯೂಯಾರ್ಕ್ನಲ್ಲಿನ ಮ್ಯಾನ್ ಹಟನ್ ಗ್ರ್ಯಾಂಡ್ ಸೆಂಟ್ರಲ್ ಹಾಗೂ ಲಂಡನ್ನ ಕಿಂಗ್ಸ್ ಕ್ರಾಸ್ ಸ್ಟೇಷನ್ನಿಂದ ಪ್ರೇರಿತವಾಗಿ ವಿನ್ಯಾಸಗೊಳಿಸಲಾಗಿದೆ.

ಅದರಲ್ಲಿ ಆಗಮನ, ನಿರ್ಗಮನಕ್ಕೆ ಪ್ರತ್ಯೇಕ ಪಾಯಿಂಟ್ ಇದ್ದು ಭಾರತದಲ್ಲಿಯೇ ವಿಶೇಷ ಎಂದು ಪ್ರಚಾರ ಪಡೆಯಲಾಗುತ್ತಿದೆ.

ಆದರೆ ಹಾಗೆ ಮಾಡುವಾಗ, ನ್ಯೂಯಾರ್ಕ್ನಲ್ಲಿನ ಸೌಲಭ್ಯಕ್ಕೂ ಲಖ್ನೋದಲ್ಲಿನ ಸೌಲಭ್ಯಕ್ಕೂ ಇರುವ ಅಗಾಧ ಅಂತರವನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕಲ್ಲವೆ?

ಲಖ್ನೋದಲ್ಲಿ ಈವರೆಗೆ ಇರುವುದು ಒಂದೇ ಮೆಟ್ರೋ ಲೈನ್. ನ್ಯೂಯಾರ್ಕ್ನಲ್ಲಿ ಭಾರೀ ದೊಡ್ಡ ಮೆಟ್ರೋ ಜಾಲವಿದೆ. ಹಾಗಾಗಿ ಆಗಮನ, ನಿರ್ಗಮನ ಪ್ರತ್ಯೇಕವಾಗಿದ್ದರೂ ಅಲ್ಲಿ ಜನರಿಗೆ ಮುಂದಿನ ಪ್ರಯಾಣಕ್ಕೆ ಸಮಯ ಹಿಡಿಯುವುದಿಲ್ಲ. ಆದರೆ ಇಲ್ಲಿ ನಿಜವಾಗಿ ಆಗಬೇಕಾದ ವ್ಯವಸ್ಥೆಯಿಲ್ಲದೆ, ಆಗಮನ, ನಿರ್ಗಮನಕ್ಕೆ ಪ್ರತ್ಯೇಕ ಪಾಯಿಂಟ್ ಮಾತ್ರ ಮಾಡಿಬಿಟ್ಟು ಅದನ್ನೇ ಸಾಧನೆ, ವಿಶೇಷತೆ ಎಂದುಕೊಂಡರೆ ಹೇಗೆ?

ನ್ಯೂಯಾರ್ಕ್ನ ಭವ್ಯತೆಯಿಂದ ಇಲ್ಲಿನ ಜನಸಾಮಾನ್ಯರಿಗೆ ಏನು ಪ್ರಯೋಜನ? ಅವರನ್ನು ಇನ್ನಷ್ಟು ಪರದಾಡುವಂತೆ ಮಾಡುವುದೇ ಮೋದಿ ಸಾಧನೆಯೆ? ಜನಸಾಮಾನ್ಯರನ್ನು ತಲುಪುವುದು ಮೋದಿ ಸರ್ಕಾರದ ಉದ್ದೇಶವೊ ಅಥವಾ ಅವರಿಂದ ದೂರ ಹೋಗುವುದು ಉದ್ದೇಶವೊ?

ಮತ್ತೊಂದು ಬಹು ಮುಖ್ಯ ಪ್ರಶ್ನೆಯಿದೆ. ಏನೆಂದರೆ, ಇಷ್ಟು ದೊಡ್ಡ ಪ್ರಾಜೆಕ್ಟ್ಗಳನ್ನು ಎತ್ತಿಕೊಳ್ಳುವಾಗೆಲ್ಲ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯಾಗುವ ಬಗ್ಗೆ ಹೇಳಲಾಗುತ್ತದೆ. ಆದರೆ ಎಷ್ಟು ಉದ್ಯೋಗಗಳು ಸೃಷ್ಟಿಯಾದವು? ಅದರ ಸ್ಪಷ್ಟ ಚಿತ್ರ ಸಿಗಬೇಕಲ್ಲವೆ?

ಲಖ್ನೋ, ಪ್ರಯಾಗ್ ರಾಜ್ ನಲ್ಲಿ ಉದ್ಯೋಗಗಳ ಕಥೆ ಏನಾಗಿದೆ? ಪರೀಕ್ಷೆ ಬರೆದು ಪಾಸಾದರೂ ನೇಮಕಾತಿ ಪತ್ರಕ್ಕಾಗಿ ಹೋರಾಡಬೇಕಾದ ಸ್ಥಿತಿ ಯುವಕರದು. ರೈಲ್ವೆಯಲ್ಲಿನ ಕೆಲವೇ ಕೆಲವು ಸಾವಿರ ಹುದ್ದೆಗಳಿಗಾಗಿ ಅದೆಷ್ಟು ಲಕ್ಷ ಯುವಕರು ಅರ್ಜಿ ಹಾಕಿದ್ದಾರೆ, ಎಂಥ ಸಂಘರ್ಷದಲ್ಲಿ ತೊಡಗಿದ್ಧಾರೆ ಎಂಬುದು ಗೊತ್ತಿರುವ ಸಂಗತಿ.

ಉದ್ಯೋಗಗಳ ಸಂಖ್ಯೆ ಹೆಚ್ಚಿಸಬೇಕೆಂದು ಯುವಕರು ಪ್ರತಿಭಟಿಸಿದರೆ, ಹಾಗೆ ನ್ಯಾಯಯುತ ಬೇಡಿಕೆ ಇಟ್ಟಿದ್ದಕ್ಕಾಗಿ ಪೊಲೀಸರಿಂದ ಲಾಠಿಯೇಟು ತಿಂದಿದ್ದು ಅವರಿಗೆ ಮೋದಿ ಸರ್ಕಾರದಿಂದ ಸಿಕ್ಕ ಬಳುವಳಿ. ಮಾತೆತ್ತಿದರೆ ವಿಕಾಸದ ಮಾತಾಡುವ, ಉದ್ಯೋಗದ ಭ್ರಮೆಗಳನ್ನು ಬಿತ್ತುವ ಮೋದಿ ಮತ್ತವರ ಮಾತುಗಳನ್ನೆಲ್ಲ ಯಾವ ಅನುಮಾನವೂ ಇಲ್ಲದೆ, ಯಾವ ಪ್ರಶ್ನೆಗಳೂ ಇಲ್ಲದೆ ಪ್ರಸಾರ ಮಾಡುವ ಮಡಿಲ ಮೀಡಿಯಾಗಳು.

ಯಾಕೆ ಮೋದಿ ಸರ್ಕಾರಕ್ಕಾಗಲೀ, ಅದರ ಗುಣಗಾನದಲ್ಲಿ ಮುಳುಗೇಳುತ್ತಿರುವ ಮೀಡಿಯಾಗಳಿಗಾಗಲೀ ಜನಸಾಮಾನ್ಯರ ಬದುಕಿನ ಕಡೆಗೆ ಗಮನವೇ ಇಲ್ಲ. ಯಾಕೆ ಜನಸಮಾನ್ಯರ ಕಷ್ಟಗಳು ಅರ್ಥವಾಗುವುದಿಲ್ಲ? ಯಾಕೆ ನಿರುದ್ಯೋಗದ ಕಾರಣಕ್ಕೆ ಹತಾಶ ಸ್ಥಿತಿ ಮುಟ್ಟಿರುವ ಈ ದೇಶದ ಯುವಕರ ಸಂಕಟ ಅವರನ್ನು ಕಾಡುವುದಿಲ್ಲ?

ರೈಲು ಎಕೊ ಸಿಸ್ಟಮ್ ಮೂಲಕ ವರ್ಷವರ್ಷವೂ 10 ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುವುದು. ಇದಕ್ಕಾಗಿ 150 ಬಿಲಿಯನ್ ಡಾಲರ್ ಅಂದರೆ 12 ಲಕ್ಷ ಕೋಟಿ ರೂ. ಹಣವನ್ನು ಮುಂದಿನ 5 ವರ್ಷ ತೊಡಗಿಸಲಾಗುವುದು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ 2017ರಲ್ಲಿಯೇ ಹೇಳಿದ್ದರು.

ಆದರೆ ಎಲ್ಲವೂ ಮಾತಲ್ಲೇ ಮುಗಿದಿದೆ. ರೈಲ್ವೆಯಲ್ಲಿ ನೇಮಕಾತಿ ವಿವರ ಗಮನಿಸಿದರೆ,

2021-2022 – 4860 ಹುದ್ದೆಗಳು ಭರ್ತಿಯಾಗಿವೆ

2022-2023 – 83,888 ಹುದ್ದೆಗಳು

2023-2024ರಲ್ಲಿ 2023ರ ಸೆಪ್ಟೆಂಬರ್ 30ರವರೆಗೆ 53,182 ಹುದ್ದೆಗಳು.

ಹಾಗಾದರೆ ಎಲ್ಲಿ ಹೋದವು ವಾರ್ಷಿಕ 10 ಲಕ್ಷ ಉದ್ಯೋಗಗಳು?

ಹೀಗೆ ಉದ್ಯೋಗಗಳೇ ಇಲ್ಲದಿರುವಾಗ ಇಷ್ಟೊಂದು ವೆಚ್ಚ ಮಾಡಿ ಕಟ್ಟಡಗಳನ್ನು ಮಾತ್ರ ಕಟ್ಟಿ ವಿಜೃಂಭಣೆ ಮಾಡಲಾಗುತ್ತಿರುವುದು ಏಕೆ?

ಇದರಿಂದ ಉದ್ಯೋಗಗಳೇನಾದರೂ ಹೆಚ್ಚಿದವೆ? ಯುವ ಜನತೆಗೇನಾದರೂ ಉಪಯೋಗವಾಯಿತೆ?

ಬೆಂಗಳೂರು, ಹೈದರಾಬಾದ್, ಮುಂಬೈನಂಥ ನಗರಗಳಲ್ಲಿ ಇರುವ ಮಾಲ್ಗಳೇ ಪಾಳುಬಿದ್ದ ಸ್ಥಿತಿಯಲ್ಲಿರುವಾಗ ಇವರು ರೈಲು ನಿಲ್ದಾಣಗಳಲ್ಲಿ ಮತ್ತೊಂದು ಶಾಪಿಂಗ್ ಮಾಲ್ ಕಟ್ಟಿ ಏನು ಮಾಡುತ್ತಾರೆ?

ರೈಲು ನಿಲ್ದಾಣವನ್ನು ಇಷ್ಟು ವಿಜೃಂಭಿಸುವಂತೆ ಮಾಡುವುದು ಎಲ್ಲ ಸುಧಾರಣೆ ಆಗಿದೆ ಎಂಬ ಭ್ರಮೆ ಸೃಷ್ಟಿಸುವುದಕ್ಕೆ ಮಾತ್ರವೆ?

ಪ್ಯಾಸೆಂಜರ್ ರೈಲುಗಳನ್ನು ಎಕ್ಸ್ಪ್ರೆಸ್ ರೈಲುಗಳೆಂದು ಹೆಸರು ಬದಲಿಸಲಾಗಿದೆ. ಅದೇ ಪ್ರಯಾಣದ ಅವಧಿ, ಅಷ್ಟೇ ಸೌಲಭ್ಯಗಳು, ಅಷ್ಟೇ ನಿಲ್ದಾಣಗಳು. ಆದರೆ ಹೆಸರು ಮಾತ್ರ ಎಕ್ಸ್ಪ್ರೆಸ್. ಮತ್ತು ಹೀಗೆ ಎಕ್ಸ್ಪ್ರೆಸ್ ಆಗಿರುವುದಕ್ಕೆ ಪ್ರಯಾಣಿಕರ ಜೇಬಿಗೂ ಕತ್ತರಿ. ಎರಡನೇ ದರ್ಜೆಯ ಸಾಮಾನ್ಯ ದರದ ಬದಲಿಗೆ ಎಕ್ಸ್ಪ್ರೆಸ್ ದರಗಳನ್ನು ಪ್ರಯಾಣಿಕರು ಕೊಡಬೇಕಿದೆ.

ಹೆಸರೊಂದನ್ನು ಮಾತ್ರ ಬದಲಿಸಿ, ಅಭಿವೃದ್ಧಿ ಎಂದು ಅದನ್ನೇ ಕರೆದು, ಪ್ರಯಾಣಿಕರು ದುಪ್ಪಟ್ಟು ದುಡ್ಡು ತೆರುವ ಹಾಗೆ ಮಾಡುವುದು ಎಂಥ ನ್ಯಾಯ? ಸಣ್ಣ ಸಣ್ಣ ಕನಸುಗಳನ್ನು ಕಾಣುವುದನ್ನು ಬಿಡಬೇಕಂತೆ. ದೊಡ್ಡ ದೊಡ್ಡ ಕನಸುಗಳನ್ನು ನಿಜ ಮಾಡುವುದಕ್ಕಾಗಿ ಹಗಲೂ ರಾತ್ರಿಯೂ ಕೆಲಸ ನಡೆಯುತ್ತಿದೆಯಂತೆ.

ಹೀಗೆಲ್ಲ ಮೋದಿ ಟೆಲಿಪ್ರಾಂಪ್ಟರ್ ನೋಡಿ ಹೇಳುತ್ತಿದ್ದರೆ, ಯಾವುದೂ ಬದಲಾಗದ, ಜನರಿಗೆ ಯಾವ ಉಪಯೋಗವೂ ಇಲ್ಲದ ಈ ಸ್ಥಿತಿಯಲ್ಲಿ ಜನರು ಹೇಗಾದರೂ ದೊಡ್ಡ ದೊಡ್ಡ ಕನಸು ಕಾಣಲು ಸಾಧ್ಯ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!