ಹಂಸಲೇಖ ಅವರಿಂದ ಈ ಬಾರಿ ಮೈಸೂರು ದಸರಾ ಉದ್ಘಾಟನೆ

Update: 2023-09-01 16:23 GMT
Editor : Ismail | Byline : ಆರ್. ಜೀವಿ

ಹಂಸಲೇಖ

"​ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ

ಭೂಮಿಯಲ್ಲಿ ಹಾಡಿ ತಿಳಿಸೋಣ

ಪ್ರೀತಿ ಹಂಚೋಣ

ಆನಂದ ಪಡೆಯೋಣ

ಬನ್ನಿ ಪ್ರೇಮ ರಹಸ್ಯ ಹೇಳೋಣ"

ಎಂದು ಮೂರೂವರೆ ದಶಕಗಳ ಬಳಿಕವೂ ನವನವೀನ ಎನಿಸುವ ಹಾಡು ಬರೆದವರು ನಮ್ಮೆಲ್ಲರ ಪ್ರೀತಿಯ ಹಂಸಲೇಖ.

ಅದೇ ಹಂಸಲೇಖ ಅವರ ಈ ಸಾಲುಗಳನ್ನೂ ನಾವು ಅದೆಷ್ಟು ಬಾರಿ ನೆನಪಿಸಿಕೊಂಡಿದ್ದೇವೆ , ಹಾಡಿದ್ದೇವೆ.

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…

ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…

ಕಲಿಯೋಕೆ ಕೋಟಿ ಬಾಷೆ

ಆಡೋಕೆ ಒಂದೇ ಬಾಷೆ…

ಕನ್ನಡ ಕನ್ನಡ

ಕಸ್ತೂರಿ ಕನ್ನಡಾ…​

ಇಂತಹ ಎಂದೂ ಮರೆಯದ ಸಾಲುಗಳ ಹಿಂದಿನ ಹಂಸಲೇಖ ಅವರನ್ನು ಕರ್ನಾಟಕ ಸರಕಾರ ಗುರುತಿಸಿ ಗೌರವಿಸಿದೆ. ಮೈಸೂರು ದಸರಾ ಉದ್ಘಾಟಿಸುವ ಗೌರವ ಈ ಸಲ​ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರ ಪ್ರಕಟಿಸಿದ್ದಾರೆ. ಇದರೊಂದಿಗೆ, ಸಮಾಜದ ಇವತ್ತಿನ ಬಿಕ್ಕಟ್ಟುಗಳಿಗೆ, ಸಂಕಟಗಳಿಗೆ ಸ್ಪಂದಿಸುವ ಒಬ್ಬರನ್ನು ಈ ನಾಡಿನ ಸಾಂಸ್ಕೃತಿಕ ಹಬ್ಬದ ಹಿನ್ನೆಲೆಯಲ್ಲಿ ಗೌರವಿಸಿದಂತಾಗಲಿದೆ.

ದಸರಾ ಉದ್ಘಾಟನೆಗೆ ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಹಂಸಲೇಖ ಖುಷಿಯಾಗಿದ್ದಾರೆ. ತಮ್ಮ ಖುಷಿಯನ್ನು ಮಾಧ್ಯಮಗಳೆದುರು ಹಂಚಿಕೊಂಡಿದ್ದಾರೆ. ​"ದಸರಾ ಸಂಭ್ರಮ ಉದ್ಘಾಟಿಸಲು ಒಬ್ಬ ಸಾಮಾನ್ಯ ಸ್ಟ್ರೀಟ್‌ ಫೈಟರ್‌ನನ್ನು ಗುರುತಿಸಿದ್ದಾರೆ. ಸರ್ಕಾರಕ್ಕೆ ಧನ್ಯವಾದ​" ಎಂದಿದ್ದಾರೆ. ಈ ಖುಷಿ ಹಂಚಿಕೊಳ್ಳುವಾಗಲೂ ಅವರ ಮನಸ್ಸಿನಲ್ಲಿ ಸಂವಿಧಾನದ ಬಗೆಗಿನ ಯೋಚನೆಯೇ ಇತ್ತೆಂಬುದು ಅವರ ಮಾತುಗಳಿಂದ ಗೊತ್ತಾಗುತ್ತದೆ.

​"ನಮ್ಮ ನಾಡಿನಲ್ಲಿ ಒಕ್ಕೂಟ ವ್ಯವಸ್ಥೆ ಬರುವುದಕ್ಕೂ ಮುಂಚೆ, ಸಂವಿಧಾನದಲ್ಲಿ ಏನೆಲ್ಲ ಇರಬೇಕು ಎಂದು ಯೋಚಿಸುವುದಕ್ಕೂ ಮುಂಚೆ, ನಾಲ್ವಡಿ ಕೃಷ್ಣರಾಜ ಒಡೆಯರು ಆ ಯೋಜನೆಗಳನ್ನು ಜಾರಿಗೆ ತಂದಿದ್ದರು. ಪ್ರಜಾ ಪ್ರತಿನಿಧಿ ಸಭೆಯೆಂದರೆ ಇಡೀ ರಾಜ್ಯದ ಸಮುದಾಯ ಅಂದರೆ ಕೃಷಿಕ, ಕಾರ್ಮಿಕ, ಶ್ರಮಿಕ ಈ ಮೂರೂ ವರ್ಗದ ತಲಾ ಒಬ್ಬೊಬ್ಬ ಪ್ರತಿನಿಧಿ ಅರಮನೆಯಲ್ಲಿ ಕಾಣಬೇಕು. ಅವನು ರಾಜನಿಗೆ ಪ್ರಶ್ನೆಗಳನ್ನು ಕೇಳಬೇಕು. ರಾಜ್ಯದ ಯೋಜನೆಗಳಲ್ಲಿ ಆತ ಭಾಗವಹಿಸಬೇಕು. ಮಹಾರಾಜನ ಮಟ್ಟಕ್ಕೆ ಅವನೂ ತನ್ನ ಅನಿಸಿಕೆಗಳನ್ನು ಮಂಡಿಸಬೇಕು. ಈ ರೀತಿ ನಾಲ್ವಡಿ ಕೃಷ್ಣರಾಜರು ಕನಸು ಕಂಡಿದ್ದರು. ಆ ಕನಸು ಈಗ ನನಸಾಗಿದೆ. ಕನ್ನಡ ಚಿತ್ರರಂಗದ ಎಲ್ಲ ಲೇಖಕರ ಪರವಾಗಿ ನಾನು ಈ ಗೌರವ ಸ್ವೀಕರಿಸುತ್ತಿದ್ದೇನೆ​ " ಎಂದಿದ್ದಾರೆ.

ಪ್ರಜಾಪ್ರಭುತ್ವ, ಈ ನೆಲದ ಸಂವಿಧಾನ, ಈ ದೇಶದ ಜನಸಾಮಾನ್ಯರು ಇವೆಲ್ಲದರ ಬಗೆಗಿನ ಕಳಕಳಿಯ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಹೊಣೆಗಾರಿಕೆಯನ್ನು ತೋರಿಸುತ್ತಲೇ ಬಂದವರು ಹಂಸಲೇಖ. ಸತ್ಯವನ್ನು ಹೇಳಬೇಕಾಗಿ ಬಂದಾಗ ಹಿಂಜರಿಯದೆ, ಗಟ್ಟಿದನಿಯಲ್ಲಿ ಹೇಳಿದವರು. ಪ್ರಶ್ನಿಸುವ ದಿಟ್ಟತನದಿಂದಲೂ ಹಲವರ ಕೆಂಗಣ್ಣಿಗೆ ಗುರಿಯಾದವರು.

​ಕೆಲ ಸಮಯದ ಹಿಂದೆ ಅವರೊಂದು ಮಾತು ಹೇಳಿದ್ದರು. ದೇಶದ ಎಲ್ಲ ನಿಘಂಟುಗಳಿಂದಲೂ ಶೂದ್ರ ಪದವನ್ನು ಕಿತ್ತುಹಾಕಬೇಕೆಂಬ ಮಾತಾಗಿತ್ತು ಅದು. ​"ನಾವೆಲ್ಲರೂ ಶುದ್ಧರೇ ಹೊರತು ಶೂದ್ರರಲ್ಲ. ಶೂದ್ರ ಪದಕ್ಕೆ ಪರ್ಯಾಯವಾಗಿ ಶುದ್ಧ ಎಂಬ ಪದ ಬಳಕೆಗೆ ಬರಬೇಕು​" ಎಂದು ಪ್ರತಿಪಾದಿಸಿದ್ದರು. ಸಿಂಹಾಸನದಲ್ಲಿ ಕುಳಿತವರ ಕಾಲು ನೆಲಕ್ಕೆ ತಾಗುತ್ತಿರಬೇಕು. ಅಂಥ ಪ್ರಭುವಿಗೆ ಮಾತ್ರ ಪ್ರಜೆಗಳು ಅರ್ಥವಾಗುತ್ತಾರೆ. ಪ್ರಜಾಪ್ರಭುತ್ವದಲ್ಲಿ ರಾಜ, ದಳವಾಯಿ ಇಬ್ಬರೂ ಒಬ್ಬರೇ ಆಗಬೇಕು ಎಂಬ ಹಂಸಲೇಖ ಮಾತುಗಳು, ಪ್ರಜಾಪ್ರಭುತ್ವದ ನಿಜವಾದ ನೆಲೆಯನ್ನು ವಿವರಿಸುವಂಥವಾಗಿವೆ.

ಅಧಿಕಾರಕ್ಕೆ ಬರುವ ಎಲ್ಲರಿಂದಲೂ ಪ್ರಜಾಪ್ರಭುತ್ವ ಗೆಲ್ಲಲಾರದು. ಹೊಣೆಗಾರಿಕೆ ಅರಿತವರು ಅಧಿಕಾರಕ್ಕೆ ಬಂದಾಗ ಮಾತ್ರವೇ ಪ್ರಜಾಪ್ರಭುತ್ವ ಗೆಲ್ಲುತ್ತದೆ ಎಂಬುದು ಅವರ ಮಾತು. ಮತ್ತೊಂದು ಕಾರ್ಯಕ್ರಮದಲ್ಲಿ ಅವರು ತಮ್ಮ ಜಾತಿ ಯಾವುದು ಎಂಬುದನ್ನೂ ಯೋಚಿಸದೇ ಇರುವ ತಮ್ಮ ನಿಲುವಿನ ಬಗ್ಗೆ ಹೇಳಿದ್ದರು. ದೇಶದಲ್ಲಿ ಹಿಂದುಳಿದ ವರ್ಗದವರ ಸ್ಥಿತಿ ಎಂಥದು ಎಂಬುದನ್ನು ವಿವರಿಸಿದ್ದರು.ಹಿಂದುಳಿದವರ ಪ್ರತಿಭೆಯನ್ನು ಗುರುತಿಸದ, ಹಿಂದುಳಿದವರ ಜೀವನ ಮಟ್ಟವೆಂದೂ ಸುಧಾರಿಸಲಾರದ ಸನ್ನಿವೇಶ ಇರುವುದಕ್ಕೆ ಅವರು ನೊಂದಿದ್ದರು. ನಾವೇ ಎದ್ದು ಬರಬೇಕಾದ, ನಾವೇ ನಮ್ಮನ್ನು ಸುಧಾರಿಸಿಕೊಳ್ಳಬೇಕಾದ ಅಗತ್ಯದ ಬಗ್ಗೆ ಹೇಳಿದ್ದರು.

ಸಂವಿಧಾನವನ್ನು ಹಾಡಾಗಿಸಿ ಪ್ರಚುರ ಪಡಿಸುವ ಮತ್ತೊಂದು ಮಹತ್ವದ ಹಂಬಲದ ಬಗ್ಗೆಯೂ ಅವರು ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಇದು ಬಹಳ ದೊಡ್ಡ ಸಂಕಲ್ಪ ಎಂಬುದರಲ್ಲಿ ಎರಡನೇ ಮಾತಿಲ್ಲ. 72 ವರ್ಷ ವಯಸ್ಸಿನ ಹಂಸಲೇಖ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ​ಬಹಳ ದೊಡ್ಡದು. ಹಾಗೆಯೇ ಸಾಮಾಜಿಕ ನೆಲೆಯಲ್ಲಿಯೂ ಅವರ ನಡೆ ನುಡಿ ಗಮನೀಯ ಸಂಗತಿ.

ಕಳೆದ ವರ್ಷ ಪಠ್ಯಪುಸ್ತಕ ಪರಿಷ್ಕರಣೆಯಾದಾಗ, ಅದನ್ನು ಕೇಸರಿಮಯವಾಗಿಸುವ ಯತ್ನ ನಡೆದಾಗ ಅವರು ಅದರ ವಿರುದ್ಧದ ಕುಪ್ಪಳಿಯಲ್ಲಿನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಚಲಚಚಿತ್ರ ರಂಗದಲ್ಲಿ ಗೀತರಚನೆಕಾರರಾಗಿ, ಸಂಗೀತ ನಿರ್ದೇಶಕರಾಗಿ ಹಂಸಲೇಖ ಅವರದು ದೊಡ್ಡ ಹೆಸರು. ಹಲವು ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಅವರು ಅನೇಕರ ಪಾಲಿಗೆ ಮಾನಸ ಗುರು.

ರಾಷ್ಟ್ರಪ್ರಶಸ್ತಿ, ಆರು ಬಾರಿ ಫಿಲ್ಮ್ಫೇರ್ ಪ್ರಶಸ್ತಿ, ಹತ್ತು ಬಾರಿ ರಾಜ್ಯ ಪ್ರಶಸ್ತಿ ಪಡೆದಿರುವ ಹೆಗ್ಗಳಿಕೆ ಅವರದು. ಹಂಸಲೇಖ ಮೂಲ ಹೆಸರು ಗಂಗರಾಜು. ​ಅವರು ಮೈಸೂರಿನಲ್ಲಿ 1951ರಲ್ಲಿ ಜನಿಸಿದರು. ತಂದೆ ಕೆ.ಹೆಚ್.ಗೋವಿಂದರಾಜು, ತಾಯಿ ರಾಜಮ್ಮ. ಓದಿನ ನಂತರ ತಂದೆಯ ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದ ಅವರು, ನಂತರ ಸಹೋದರ ಬಾಲಕೃಷ್ಣ ಅವರ ಆರ್ಕೆಸ್ಟ್ರಾ ಸೇರಿದರು.

ಹಂಸಲೇಖ ಎಂದು ಅವರ ಹೆಸರು ಬದಲಿಸಿದವರು ಗುರು ಲಾವಣಿ ನೀಲಕಂಠಪ್ಪ. 1973ರಲ್ಲಿ ತ್ರಿವೇಣಿ ಚಿತ್ರಕ್ಕೆ ​"ನೀನಾ ಭಗವಂತ​" ಎಂಬ ಹಾಡು ಬರೆಯುವ ಮೂಲಕ ಚಿತ್ರರಂಗಕ್ಕೆ ಪ್ರವೇಶವಾಯಿತು. ಈವರೆಗೆ ಮೂರುವರೆ ಸಾವಿರಕ್ಕೂ ಹೆಚ್ಚು ಹಾಡುಗಳನ್ನು​ ಅವರು ಬರೆದಿದ್ದಾರೆ. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಮಲಯಾಳಂ ಭಾಷಾ ಚಿತ್ರಗಳಿಗೆ ಸಂಗೀತ, ಸಾಹಿತ್ಯ ನೀಡಿದ್ದಾರೆ.

ನಾದಬ್ರಹ್ಮ ಎಂದೇ ಕನ್ನಡ ಚಿತ್ರರಂಗದಲ್ಲಿ ಹೆಸರಾಗಿದ್ದಾರೆ ಹಂಸಲೇಖ.​ ಅವರಿಗೆ, ಅವರ ಹಾಡುಗಳಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರು ಹಲವಾರು ಸಿನಿಮಾಗಳಿಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿದ್ಧಾರೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಹೀಗೆ 300ಕ್ಕೂ ಹೆಚ್ಚು ಚಿತ್ರಗಳಿಗೆ ಅವರು ಕೆಲಸ ಮಾಡಿದ್ದಾರೆ.

ಪ್ರೇಮಲೋಕ ಚಿತ್ರದ ಮೂಲಕ ರವಿಚಂದ್ರನ್ ಅವರ ಜೊತೆ ಹಂಸಲೇಖ ಹೊಸದೇ ಟ್ರೆಂಡ್ ಒಂದನ್ನು ಸೃಷ್ಟಿಸಿದರು. ಇಷ್ಟು ಕಾಲದ ನಂತರವೂ ಆ ಚಿತ್ರದ ಗುಂಗು ಸಿನಿಪ್ರಿಯರಲ್ಲಿ ಇದ್ದೇ ಇದೆ. ಅನಂತರ ರಾಮಾಚಾರಿ, ರಣಧೀರ ಅಂಥ ಸಿನಿಮಾಗಳಲ್ಲೂ ರವಿಚಂದ್ರನ್ ಮತ್ತು ಹಂಸಲೇಖ ಮಾಯೆ ಮುಂದುವರಿದಿತ್ತು. ಚಿತ್ರರಂಗದಲ್ಲಿನ ಅವರ ಈ ಎಲ್ಲ ಹೆಗ್ಗಳಿಕೆಗಳ ಜೊತೆಗೇ ವಿವಾದಗಳೂ ಹಂಸಲೇಖ ಅವರನ್ನು ಸುತ್ತಿಕೊಂಡವು. ಆದರೆ, ಅವು ಹಂಸಲೇಖ ಅವರ ಸಾಮಾಜಿಕ ಕಳಕಳಿಯ ಹಿನ್ನೆಲೆಯ ಪರಿಣಾಮವಾಗಿ, ಅವರ ಧೋರಣೆಯನ್ನು ಸಹಿಸದವರ ಕಾರಣದಿಂದಾಗಿ ಹುಟ್ಟಿಕೊಂಡಂಥವಾಗಿದ್ದವು.

ಕೇಳಲೇಬೇಕೆನ್ನಿಸಿದ್ದನ್ನು, ಪ್ರಶ್ನಿಸಬೇಕೆನ್ನಿಸಿದ್ದನ್ನು ಯಾವ ಮುಲಾಜಿಲ್ಲದೆ ಕೇಳಬಲ್ಲ ಹಂಸಲೇಖ ಅವರ ದಿಟ್ಟತನವೇ ಅನೇಕ ಸಲ ಅವರನ್ನು ವಿವಾದದ ಕೇಂದ್ರಕ್ಕೆ ತಂದು ನಿಲ್ಲಿಸಿದ್ದಿತ್ತು. ದೊಡ್ಡ ಮಟ್ಟದಲ್ಲಿ ಅವರು ವಿವಾದಕ್ಕೆ ಸಿಲುಕಿದ್ದು ಪೇಜಾವರಶ್ರೀಗಳ ವಿಚಾರವಾಗಿ ಮಾತನಾಡಿದಾಗ. ಮೈಸೂರಿನಲ್ಲಿ 2021ರ ನವೆಂಬರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಪೇಜಾವರಶ್ರೀ ಮತ್ತು ಬಿಳಿಗಿರಿ ರಂಗನಾಥನ ಕುರಿತು ನೀಡಿದ್ದ ಹೇಳಿಕೆಗಳು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದವು.

ಮೇಲ್ಜಾತಿಯವರು ದಲಿತರನ್ನು ಮನೆಗೆ ಕರೆದು ಉಪಚರಿಸುವ ಕಾಲ ಬಂದರೆ ಅದು ಸಮಾನತೆಯಾಗುತ್ತದೆ ಎಂದಿದ್ದರು.

ಇ​ದು ಬಿಜೆಪಿ ಮತ್ತು ಸಂಘ ಪರಿವಾರದವರ ಆಕ್ರೋಶಕ್ಕೆ ಕಾರಣವಾಗಿತ್ತು. ಪರ ವಿರೋಧ ಚರ್ಚೆಗಳ ನಡುವೆಯೇ ಹಂಸಲೇಖ ವಿರುದ್ಧ ಪ್ರತಿಭಟನೆಯ ಕೂಗೂ ಕೇಳಿಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಅನೇಕರು ಅವರ ವಿರುದ್ಧ ತಿರುಗಿಬಿದ್ದಿದ್ದರು.

ಅಷ್ಟು ಮಾತ್ರವಲ್ಲ, ಬೆಂಗಳೂರಿನ ಬಸವನಗುಡಿ ಠಾಣೆಯಲ್ಲಿ ಎರಡು ಎಫ್ಐಆರ್ಗಳೂ ದಾಖಲಾಗಿದ್ದವು. ಕಡೆಗೆ ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಚಿತ್ರರಂಗಕ್ಕೆ ಹಂಸಲೇಖ ಕೊಟ್ಟ ಎವರ್ಗ್ರೀನ್ ಹಾಡುಗಳು, ಆ ಮಾಧುರ್ಯವನ್ನೆಲ್ಲ ಯಾರೂ ಮರೆಯುವುದು ಸಾಧ್ಯವಿಲ್ಲ. ಪ್ರೇಮಗೀತೆಗಳಲ್ಲದೆ, ನಾಡು ನುಡಿ ಅಭಿಮಾನದ ಹಾಡುಗಳನ್ನೂ​ ಅವರು ಕಟ್ಟಿ ಕೊಟ್ಟಿದ್ದಾರೆ. ತಾತ್ವಿಕತೆಯವರೆಗೂ ಅವರ ಗೀತೆಗಳ ವ್ಯಾಪ್ತಿ ಹಬ್ಬಿದೆ. ಅವರೊಬ್ಬ​ ಅತ್ಯಂತ ಅಪರೂಪದ ಸಂಗೀತ ಸಾಧಕ.

ಹಾಗೆಯೇ, ಒಬ್ಬ ವ್ಯಕ್ತಿಯಾಗಿ ಅವರು ತೋರಿಸುತ್ತಿರುವ ಸಾಮಾಜಿಕ ಹೊಣೆಗಾರಿಕೆ, ಸಾಂಸ್ಕೃತಿಕ ಜವಾಬ್ದಾರಿ ​- ಇವುಗಳ ಕಾರಣದಿಂದಾಗಿಯೂ ಅವರು ಮುಖ್ಯರಾಗಿದ್ದಾರೆ. ಸಂಘಪರಿವಾರದ ಮಂದಿ ಟೀಕಿಸುವ ಹಾಗೆ ಪ್ರಗತಿಶೀಲ ಎಂದು ಕರೆಸಿಕೊಳ್ಳುವುದಕ್ಕಾಗಿ ಹೇಳಿಕೆ ಕೊಟ್ಟವರೇನೂ ಅಲ್ಲ ಅವರು. ಅಂಥ ರಾಜಕೀಯದ ಹಂಗು ಕೂಡ ಅವರಿಗಿಲ್ಲ.

ಅಂಥ ಶುದ್ಧ ಅಂತಃಕರಣದ ಹಂಸಲೇಖ ಅವರನ್ನು​ ಸಿದ್ದರಾಮಯ್ಯ ಸರ್ಕಾರ ಈ ಬಾರಿ ದಸರಾ ಉದ್ಘಾಟಕರೆಂದು ಪ್ರಕಟಿಸಿರುವುದು ಉತ್ತಮ ತೀರ್ಮಾನ.​ ಇದು ಈ ನಾಡಿನ ಮಹಾನ್ ಸಾಂಸ್ಕೃತಿಕ ಸಾಧಕರೊಬ್ಬರಿಗೆ ಹಾಗು ಅವರ ಸಮಾಜಮುಖಿ ನಿಲುವಿಗೆ ನೀಡಿರುವ ಗೌರವ. ಹಂಸಲೇಖ ಅವರಿಗೆ ಹಾರ್ದಿಕ ಅಭಿನಂದನೆಗಳು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!