ತುಮಕೂರು ಗ್ಯಾಂಗ್ ರೇಪ್ : ಗೃಹ ಸಚಿವರು, ಎಸ್ಪಿ ಹೇಳಿಕೆಯೇ ಇಲ್ಲ ಯಾಕೆ ?
ಇಂದು ವಿಶ್ವದಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ.ಮೂರು ದಿನಗಳ ಹಿಂದೆ ರಾಜ್ಯದ ಗೃಹಮಂತ್ರಿಯ ತವರು ಜಿಲ್ಲೆಯಲ್ಲಿಯೇ ಒಂದು ಗ್ಯಾಂಗ್ ರೇಪ್ ಆಗುತ್ತದೆ.ಅದೂ ಒಬ್ಬ ಅಪ್ರಾಪ್ತೆಯ ಮೇಲೆ. ತುಮಕೂರು ನಗರದ ಸಿದ್ಧಗಂಗಾ ಮಠದ ಸಮೀಪ ಇರುವ ಬಂಡೆಪಾಳ್ಯದ ಬಳಿ ಸೋಮವಾರ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಮಹಿಳಾ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಾಲಕಿಯು ಸ್ನೇಹಿತನ ಜತೆಗೆ ಸಿದ್ಧಗಂಗಾ ಮಠದ ಜಾತ್ರೆಗೆ ಹೋಗುತ್ತಿದ್ದರು. ಈ ವೇಳೆ ದಣಿದು ದಾರಿ ಮಧ್ಯದ ಮರದ ಕೆಳಗಡೆ ಕುಳಿತಿದ್ದರು. ಆರೋಪಿಗಳು ಇದನ್ನು ವಿಡಿಯೊ ಮಾಡಿಕೊಂಡು, ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ ಬಾಲಕಿಯನ್ನು ಬೈಕ್‌ನಲ್ಲಿ ಮನೆಗೆ ಕರೆದುಕೊಂಡು ಹೋಗಿ ಇಬ್ಬರು ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರವೆಸಗಿದ ನಂತರ ಬಾಲಕಿಯನ್ನು ಮತ್ತೆ ಮಠದ ಹತ್ತಿರ ಕರೆತಂದು ಬಿಟ್ಟು ಹೋಗಿದ್ದಾರೆ. ಬಾಲಕಿಯ ಸ್ನೇಹಿತ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾನೆ.
ಮಾನ್ಯ ಗೃಹ ಮಂತ್ರಿಗಳಿಂದಾಗಲಿ, ಜಿಲ್ಲೆಯ ಎಸ್. ಪಿ ಯವರಿಂದಾಗಲಿ ಆ ಆಘಾತಕಾರಿ ಪ್ರಕರಣದ ಬಗ್ಗೆ ಒಂದೇ ಒಂದು ಹೇಳಿಕೆ ಬರುವುದಿಲ್ಲ.
ಪೊಲೀಸ್ ಅಧಿಕಾರಿಗಳಲ್ಲಿ ಕೇಳಿದರೆ ನಮಗೆ ಯಾವುದೇ ಹೇಳಿಕೆ ಕೊಡಬಾರದು ಎಂಬ ಆದೇಶವಿದೆ ಎನ್ನುತ್ತಾರೆ. ಎಸ್ಪಿಯವರು ಫೋನ್ ರಿಸೀವ್ ಮಾಡೋದೇ ಇಲ್ಲ, ಹೇಳಿಕೆ ಕೊಡೋದೇ ಇಲ್ಲ. ನಂತರ ಮೂವರು ಆರೋಪಿಗಳನ್ನು ಬಂಧಿಸಲಾಗುತ್ತದೆ. ಪ್ರತಾಪ್, ಹನುಮಂತು ಹಾಗು ಅಮೋಘ ಬಂಧಿತರು. ಈ ಆರೋಪಿಗಳು ಕ್ಯಾಟರಿಂಗ್ ಮಾಡಿಕೊಂಡು ಸಿದ್ದಗಂಗಾ ಮಠದಲ್ಲಿ ವಾಸವಿದ್ದರು.
ರಾಜ್ಯ ಮಹಿಳಾ ಆಯೋಗ ಇದರ ಬಗ್ಗೆ ಈವರೆಗೂ ಮಾತನಾಡಿದ , ಅಲ್ಲಿಗೆ ಭೇಟಿ ಕೊಟ್ಟ ವರದಿ ಇಲ್ಲ. ಆರೋಪಿಗಳನ್ನು ಗಲ್ಲಿಗೇರಿಸಿ, ಇಲ್ಲ ಎನ್ ಕೌಂಟರ್ ಮಾಡಿಯೆಂದು ಜನರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುವುದಿಲ್ಲ. ಯಾಕೆಂದರೆ ಅದು ಸುದ್ದಿಯಾಗಿಯೇ ಇಲ್ಲ.
ಯಾವ ಚಾನಲ್ ನ ಆಂಕರ್ ಗಳೂ ತುಮಕೂರಿನ ಈ ಗ್ಯಾಂಗ್ ರೇಪ್ ಬಗ್ಗೆ ಬೊಬ್ಬೆ ಹಾಕ್ತಾ ಇಲ್ಲ, ಚರ್ಚೆ ಮಾಡ್ತಾ ಇಲ್ಲ, ಪ್ರಶ್ನೆ ಕೇಳ್ತಾ ಇಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಆ ಅಪ್ರಾಪ್ತೆಯ ಗ್ಯಾಂಗ್ ರೇಪ್ ಹಿಂದೆ ಯಾವ ಆಂಕರ್ ಗಳಿಗೂ ಲವ್ ಜಿಹಾದ್ ಆಂಗಲ್ ಕಾಣ್ತಾನೆ ಇಲ್ಲ.
ಪ್ರೈಮ್ ಟೈಮ್ ಗಳಲ್ಲಿ ಈ ಗ್ಯಾಂಗ್ ರೇಪ್ ಗೆ ಜಾಗನೇ ಸಿಗೋದಿಲ್ಲ.
ಸರಕಾರದ ವಿರುದ್ಧ ಹರಿಹಾಯುವುದಕ್ಕೆ, ಮತ್ತು ಪ್ರತಿಯೊಂದು ಪ್ರಕರಣಕ್ಕೂ ಕೋಮು ಬಣ್ಣ ಬಳಿಯೋದಕ್ಕೆ, ಅದರಲ್ಲಿ ಲವ್ ಜಿಹಾದ್ ಹುಡುಕೋದಕ್ಕೆ ಸಜ್ಜಾಗಿ ಕೂತಿರುವ ವಿಪಕ್ಷ ಬಿಜೆಪಿ ತುಮಕೂರಿನ ಈ ಗ್ಯಾಂಗ್ ರೇಪ್ ಬಗ್ಗೆ ಚಕಾರ ಕೂಡ ಎತ್ತಿಲ್ಲ. ಉಡುಪಿಯಲ್ಲಿ ಕಾಲೇಜಿನ ಹೆಣ್ಣು ಮಕ್ಕಳು ವೀಡಿಯೊ ಮಾಡಿದ್ದರ ಹಿಂದೆ ಅಂತರ್ ರಾಷ್ಟ್ರೀಯ ಸಂಚನ್ನು ಕಂಡಿದ್ದ ಬಿಜೆಪಿಯ ಮುಖಂಡರಿಂದ, ಅದರಲ್ಲೂ ಆ ಪಕ್ಷದ ಮಹಿಳಾ ನಾಯಕರಿಂದ ಒಂದೇ ಒಂದು ಹೇಳಿಕೆ, ಪ್ರತಿಭಟನೆ, ಖಂಡನೆ ಏನಂದ್ರೆ ಯಾವುದೂ ಇಲ್ಲ.
ಇದರ ಹಿಂದೆ ನಮ್ಮ ಹೆಣ್ಣು ಮಕ್ಕಳನ್ನು ಅಪಹರಿಸುವ ಜಾಲ ಇದೆ, ಅವರನ್ನು ಹಾಗೆ ಮಾಡುವ, ಹೀಗೆ ಮಾಡುವ ಷಡ್ಯಂತ್ರವಿದೇ ಎಂದು ಒಬ್ಬೇ ಒಬ್ಬ ಬಿಜೆಪಿ ಮುಖಂಡ ಆರ್ಭಟಿಸುತ್ತಿಲ್ಲ.
ಇವತ್ತಿನ ಪತ್ರಿಕೆಗಳಲ್ಲೂ ಈ ಘಟನೆ ಬಗ್ಗೆ ಎಲ್ಲೋ ಒಳಗಿನ ಪುಟದಲ್ಲಿ ಒಂದು ಸುದ್ದಿ ಹಾಕಿ ಮುಗಿಸಿಬಿಟ್ಟಿದ್ದಾರೆ.
ಅದಕ್ಕೊಂದು ಮುಖಪುಟದಲ್ಲೇ ದೊಡ್ಡ ಪ್ರಚೋದನಕಾರಿ ಹೆಡ್ ಲೈನ್, ಆ ಹೆಡ್ ಲೈನ್ ಗೆ ಕೆಂಪು ಬಣ್ಣ, ಅದಕ್ಕೊಂದು ಷಡ್ಯಂತ್ರದ ಆಂಗಲ್ ಕುರಿತ ಬಾಕ್ಸ್ ನ್ಯೂಸ್ - ಯಾವುದೂ ಇಲ್ಲ.
ಆ ಧರ್ಮವೇ ಹಾಗೆ, ಅದರ ಗ್ರಂಥವೇ ಹಾಗೆ, ಅವರ ಸಿದ್ಧಾಂತವೇ ಹಾಗೆ ಎಂದು ಯಾರೂ ಎಲ್ಲೂ ವಾಟ್ಸ್ ಆಪ್ ನಲ್ಲಿ, ಫೇಸ್ ಬುಕ್ ನಲ್ಲಿ ಬರೆಯುತ್ತಿಲ್ಲ, ಭಾಷಣ ಮಾಡುತ್ತಿಲ್ಲ. ಬಹಳ ಒಳ್ಳೆಯ ವಿಷಯ ಇದು.
ಆದರೆ ಎಲ್ಲರೂ ಯಾಕೆ ಈ ಪ್ರಕರಣದ ಬಗ್ಗೆ ಮಾತಾಡುತ್ತಲೇ ಇಲ್ಲ ? ಯಾಕೆ ಎಲ್ಲರೂ ಈ ಪ್ರಕರಣದಲ್ಲಿ ಬಹಳ ಸಂಯಮದಿಂದ, ಯಾವುದೇ ಪ್ರಚೋದನೆಗೆ ಆಸ್ಪದವೇ ಇಲ್ಲದಂತೆ ವರ್ತಿಸುತ್ತಿದ್ದಾರೆ ? ಇಷ್ಟೆಲ್ಲಾ ಸಂಯಮಕ್ಕೆ ಕಾರಣ ಆ ಗ್ಯಾಂಗ್ ರೇಪ್ ಪ್ರಕರಣದ ಅಪರಾಧಿಗಳು ಮತ್ತು ಸಂತೃಸ್ತ ಬಾಲಕಿಯ ಧರ್ಮ.
ಇದರಲ್ಲಿ ಚಾನಲ್ ಗಳಿಗೆ ಟಿಆರ್ ಪಿ ಸಿಗಲ್ಲ, ಅದಕ್ಕಿಂತಲೂ ಮುಖ್ಯವಾಗಿ ಬಾಯಿಗೆ ಬಂದಂತೆ ಮಾತಾಡಿ ಬಿಜೆಪಿಗೆ ರಾಜಕೀಯ ಲಾಭ ಮಾಡಿ ಕೊಡಲು ಈ ಪ್ರಕರಣದಲ್ಲಿ ಆಸ್ಪದವೇ ಇಲ್ಲ. ಬಿಜೆಪಿಗೆ ಈ ಪ್ರಕರಣದಲ್ಲಿ ಹೆಣ್ಣು ಮಗು, ಅದರ ಮೇಲಿನ ಅನ್ಯಾಯ, ಅದರ ಹಿಂದಿರುವ ಷಡ್ಯಂತ್ರ ಯಾವುದೂ ಕಾಣಿಸುತ್ತಿಲ್ಲ. ಯಾಕಂದರೆ ಅದಕ್ಕೆ ಇದರಿಂದ ಕೋಮು ರಾಜಕೀಯ ಮಾಡಿ ಓಟು ಬಾಚಿಕೊಳ್ಳಲು ಆಗೋದಿಲ್ಲ. ಕಾರಣ ಸಂತ್ರಸ್ತೆ ಹಾಗು ಆರೋಪಿಗಳ ಧರ್ಮ.
ಹಾಗಾಗಿ ಆ " ಅನ್ಯ ಧರ್ಮೀಯ " ಬಾಲಕಿ ಮೇಲಾಗಿರುವ ಈ ಭಯಾನಕ ಕೃತ್ಯದ ಬಗ್ಗೆ ಬಿಜೆಪಿಯವರಿಗೆ ಮಾತಾಡಲು ಬಾಯೇ ಬರೋದಿಲ್ಲ.
ಇನ್ನೂ ವಿಶೇಷ ಅಂದ್ರೆ, ತಮ್ಮದೇ ತವರು ಜಿಲ್ಲೆಯಲ್ಲಿ, ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿ ಇಷ್ಟು ದೊಡ್ಡ ಅಪರಾಧ ನಡೆದಿದ್ದರೂ ರಾಜ್ಯದ ಗೃಹ ಸಚಿವರು ಈ ಬಗ್ಗೆ ಒಂದು ಹೇಳಿಕೆಯನ್ನೂ ಶುಕ್ರವಾರ ಬೆಳಗ್ಗಿನವರೆಗೂ ಕೊಟ್ಟಿಲ್ಲ. ಯಾಕಂದ್ರೆ ಈ ಪ್ರಕರಣದಲ್ಲಿ ಅವರಿಗೆ ಬಿಜೆಪಿಯಿಂದ ಯಾವ ಒತ್ತಡವೂ ಇಲ್ಲ. ಅವರ ಪಕ್ಷಕ್ಕೂ ಈ ಪ್ರಕರಣದಿಂದ ವೋಟ್ ಕಳೆದುಕೊಳ್ಳುವ ಭಯ ಇಲ್ಲವೇ ಇಲ್ಲ. ಅದಕ್ಕೂ ಕಾರಣ ಆರೋಪಿಗಳು ಹಾಗು ಸಂತ್ರಸ್ತೆಯ ಧರ್ಮ.
ನಾವು , ನಮ್ಮ ಸಮಾಜ, ನಮ್ಮ ರಾಜಕೀಯ, ನಮ್ಮ ಸರಕಾರ - ಅದೆಲ್ಲಿಗೆ ಬಂದು ನಿಂತಿದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಾಗಿಲ್ಲ.
ನಾವು ಊಹಿಸಿದರೂ ಕಂಪಿಸಿ ಬಿಡುವ ಒಂದು ಅತ್ಯಂತ ಆಘಾತಕಾರಿ ಅಪರಾಧ ಒಬ್ಬ ಅಪ್ರಾಪ್ತ ಬಾಲಕಿ ಮೇಲೆ ನಡೆದುಹೋಗಿದೆ.
ಅದನ್ನು ಸ್ಪಷ್ಟವಾಗಿ ಖಂಡಿಸುವ, ಆ ಕೃತ್ಯದ ಹಿಂದಿರುವ ಕಿರಾತಕರನ್ನು ಹೆಡೆಮುರಿ ಕಟ್ಟಿ, ಅವರು ನಮ್ಮ ನಾಗರೀಕ ಸಮಾಜದಲ್ಲಿ ಇರಲು ನಾಲಾಯಕ್, ಅವರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಿ, ಆ ಸಂತ್ರಸ್ತೆ ಬೇರೆಯಲ್ಲ, ನಮ್ಮ ಮನೆಯ ಹೆಣ್ಣು ಮಕ್ಕಳು ಬೇರೆಯಲ್ಲ ಎಂದು ಬಾಯಿ ಬಿಟ್ಟು ಹೇಳುವ ಒಬ್ಬೇ ಒಬ್ಬ ಪ್ರಮುಖ ಪಕ್ಷದ ರಾಜಕಾರಣಿ ಇಲ್ಲಿಲ್ಲ, ಒಬ್ಬೇ ಒಬ್ಬ ಪ್ರಮುಖ ಚಾನಲ್ ಗಳ ಆಂಕರ್ ಗಳು ಕಾಣುತ್ತಿಲ್ಲ.
ಈ ವಿಷಯದಲ್ಲಿ ವಿಪಕ್ಷ ಬಿಜೆಪಿ ಅದೆಷ್ಟು ನಾಚಿಕೆಗೇಡು ಮೌನ ಅನುಸರಿಸಿದೆಯೋ ಅದಕ್ಕಿಂತ ಆಘಾತಕಾರಿ ಮೌನ ಆಡಳಿತಾರೂಢ ಕಾಂಗ್ರೆಸ್ ಹಾಗು ಅದರ ಮುಖಂಡರದ್ದು. ಸಂತ್ರಸ್ತ ಬಾಲಕಿಯ ಹಾಗು ಆರೋಪಿಯ ಧರ್ಮ ನೋಡಿಕೊಂಡು ಮಾತಾಡುವ ಅಥವಾ ಮಾತಾಡದೆ ಇರುವಂತಹ ಸ್ಥಿತಿ ನಮ್ಮ ಸಮಾಜಕ್ಕೆ, ನಮ್ಮ ರಾಜಕೀಯಕ್ಕೆ, ನಮ್ಮ ಮೀಡಿಯಾಕ್ಕೆ ಬಂದಿದೆ ಅಂದರೆ ಅದಕ್ಕಿಂತ ದೊಡ್ಡ ದುರಂತ ಇದೆಯಾ ?
ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಬರೆಯಬೇಕಿದ್ದ ಸಂತ್ರಸ್ತ ಬಾಲಕಿ, ಈ ಅಮಾನವೀಯ ಕ್ರೂರ ಕೃತ್ಯದಿಂದಾಗಿ ತೀವ್ರ ರಕ್ತಸ್ರಾವದಿಂದ ಬಳಲಿರುವ ಕಾರಣ ಪರೀಕ್ಷೆಯಿಂದ ವಂಚಿತಳಾಗಿ, ಕಳೆದೈದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾಳೆ. ಆ ಸಂತ್ರಸ್ತ ಬಾಲಕಿಗೆ ಹ್ಯಾಪಿ ವುಮೆನ್ಸ್ ಡೇ ಎಂದು ಇವತ್ತು ಹೇಳುವ ಧೈರ್ಯ ಯಾರಿಗಾದರೂ ಇದೆಯಾ ?