ಸುಳ್ಳಿನ ಸರದಾರನ ಪಡಿಪಾಟಲು
ನೀವು ಅಧಿಕಾರಕ್ಕೆ ಬಂದ ನಂತರ ಮಾಡಿದ್ದೇನು. ಸ್ವಾತಂತ್ರ್ಯ ನಂತರದ ಸರಕಾರಗಳು ಕಟ್ಟಿದ್ದ ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರಿಗೆ ಅಗ್ಗದ ಬೆಲೆಗೆ ಧಾರೆ ಎರೆದು ಕೊಟ್ಟಿರಿ. ಅಲ್ಲಿದ್ದ ದಲಿತ, ಹಿಂದುಳಿದ ಸಮುದಾಯಗಳ ಮೀಸಲಾತಿ ಅವಕಾಶವನ್ನು ನಾಶ ಮಾಡಿದಿರಿ. ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ 42 ಸಾವಿರ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಂಡಿಲ್ಲ. ಇದಕ್ಕೆ ನಿಮ್ಮ ಬಳಿ ಏನು ಉತ್ತರವಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈಗ 74 ವರ್ಷ, ಅವರು ಅಧಿಕಾರಕ್ಕೆ ಬಂದು ಹತ್ತು ವರ್ಷಗಳಾಗುತ್ತ ಬಂತು. ಈ ಸಲದ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುವ ಮಾತುಗಳನ್ನು ಅವರು ಆಡುತ್ತಿದ್ದಾರೆ. ಆದರೆ ಇದು ಆಗದ ಮಾತು ಎಂಬುದು ಅವರಿಗೂ ಗೊತ್ತು. ಆದರೆ ಚುನಾವಣೆಯ ಸಂದರ್ಭದಲ್ಲಿ ಒಂದು ಅಲೆಯನ್ನು ಸೃಷ್ಟಿಸಲು, ಕಾರ್ಯಕರ್ತರನ್ನು ಹುರಿದುಂಬಿಸಲು ಅವರು ಈ ಮಾತುಗಳನ್ನು ಆಡಲೇ ಬೇಕಾಗುತ್ತದೆ.
ಈ ಸಲದ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಈಗಾಗಲೇ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.ವೈಫಲ್ಯಗಳ ಸರಮಾಲೆಯನ್ನೇ ಕೊರಳಿಗೆ ಸುತ್ತಿಕೊಂಡಿರುವ ಮೋದಿಯವರು ಹಗಲಿರುಳು ಕಡು ಬಿಸಿಲಿನಲ್ಲಿ ದೇಶವನ್ನು ಸುತ್ತುತ್ತಿದ್ದಾರೆ. ಗೃಹಮಂತ್ರಿ ಅಮಿತ್ ಶಾ ಅವರಿಗೆ ಸಾಥ್ ಕೊಡುತ್ತಿದ್ದಾರೆ. ಜನರ ಮನಸ್ಸಿನಲ್ಲಿ ಉದ್ಭವವಾಗುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡುವ ಸ್ಥಿತಿಯಲ್ಲಿ ಇಲ್ಲದ ಮಹಾಪ್ರಭುಗಳು ಕಳೆದ ಹತ್ತು ವರ್ಷಗಳಿಂದ ನೀವು ನೋಡುತ್ತಿರುವುದು ಅಭಿವೃದ್ಧಿಯ ಟ್ರೈಲರ್, ಈಗ ಅಧಿಕಾರ ನೀಡಿದರೆ ನೈಜ ಅಭಿವೃದ್ಧಿ ಕಾರ್ಯಗಳ ಆರಂಭ ಎಂದು ಅಮಾಯಕ ಭಾರತೀಯರ ಕಿವಿಯ ಮೇಲೆ ಹೂವಿಡುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲ ದೇಶದ ಅನೇಕ ಭಾಗಗಳಲ್ಲಿ ಒಡೆದ ಮನೆಯಾದ ಬಿಜೆಪಿಯನ್ನು ಸರಿ ಪಡಿಸಲು ಗುರು, ಶಿಷ್ಯ ಇಬ್ಬರೂ ಹೆಣಗಾಡುತ್ತಿದ್ದಾರೆ.
ಸಾಮಾನ್ಯವಾಗಿ ಯಾವುದೇ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಯಾವ ಪಕ್ಷ ಎಷ್ಟು ಸೀಟು ಗೆಲ್ಲುತ್ತದೆ ಎಂಬ ಬಗ್ಗೆ ತನ್ನ ಕಾರ್ಯಕರ್ತರಿಂದ ಸಮೀಕ್ಷೆ ಮಾಡಿಸುತ್ತದೆ. ಈ ಬಾರಿ ನಡೆಸಿದ ಸಮೀಕ್ಷೆಯ ಪ್ರಕಾರ ಬಿಜೆಪಿ ಗೆಲ್ಲುವುದು 200 ಸ್ಥಾನಗಳನ್ನು ಮಾತ್ರ ಎಂದು ಹೇಳಲಾಗುತ್ತಿದೆ. ಈ ವರದಿ ಬಹಿರಂಗವಾಗಿಲ್ಲ. ಇದು ಆಂತರಿಕ ಸಮೀಕ್ಷೆ.
ಜನಸಾಮಾನ್ಯರ ಬದುಕಿಗೆ ಸಂಬಂಧಿಸಿದ ಯಾವ ಪ್ರಶ್ನೆಗಳಿಗೂ ಈ ಪ್ರಧಾನಿಯ ಬಳಿ ಉತ್ತರವಿಲ್ಲ. ಈತ ಹೇಳುವುದೆಲ್ಲ ಸುಳ್ಳು ಎಂದು ಜನರಿಗೆ ತಡವಾಗಿಯಾದರೂ ಗೊತ್ತಾಗಿರುವುದರಿಂದ ಜನ ಈ ಸಲ ಪಾಠ ಕಲಿಸಲು ತೀರ್ಮಾನಿಸಿದ್ದಾರೆಂಬ ಸುದ್ದಿ ನಾಗಪುರದ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ರಿಗೂ ತಲುಪಿದೆ. ಸಂಘಟನೆಯನ್ನ್ನೂ ಮೀರಿ ಬೆಳೆಯುತ್ತಿರುವ ವಿಶ್ವಗುರುವಿನ ಬಗ್ಗೆ ಸಂಘದಲ್ಲಿ ಒಳಗೊಳಗೆ ಅಸಮಾಧಾನವಿದೆ. ಅಂತಲೇ ಈ ಬಾರಿ ವಾಟ್ಸ್
ಆ್ಯಪ್ ಯುನಿವರ್ಸಿಟಿ ಅಷ್ಟು ಕ್ರಿಯಾಶೀಲವಾಗಿಲ್ಲ.
2014ಕ್ಕೆ ಅಧಿಕಾರಕ್ಕೆ ಬರುವ ಮುನ್ನ ಜನರಿಗೆ ನೀಡಿದ್ದ ಭರವಸೆಗಳು ಏನಾದವು? 2022ರಲ್ಲಿ ಎಲ್ಲರಿಗೂ ಸ್ವಂತ ಮನೆ ನೀಡುವ ಭರವಸೆ ಈಡೇರಿತೇ? ವಿದೇಶದಿಂದ ಕಪ್ಪುಹಣ ತಂದು ಎಲ್ಲರ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ರೂ. ಹಾಕುವ ಆಶ್ವಾಸನೆ ಏನಾಯಿತು? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಎಲ್ಲಿಗೆ ಬಂತು?
ಹೋಗಲಿ ಜನರು ನೆಮ್ಮದಿಯಿಂದ ತಮ್ಮ ಪಾಡಿಗೆ ತಾವಿರಲಾದರೂ ಬಿಟ್ಟಿರಾ? ಸರಕಾರದ ಜನ ವಿರೋಧಿ ನೀತಿಗಳನ್ನು ಪ್ರಶ್ನಿಸಿದ 16 ಮಂದಿ ಪತ್ರಕರ್ತರು, ಲೇಖಕರನ್ನು ಯುಎಪಿಎ ಕೇಸು ಹಾಕಿ ಬಂಧಿಸಿದಿರಿ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗಳು ರಮಾಬಾಯಿ ಅವರನ್ನು ವಿವಾಹವಾಗಿರುವ ಅಂತರ್ರಾಷ್ಟ್ರೀಯ ಮಟ್ಟದ ಚಿಂತಕ ಆನಂದ ತೇಲ್ತುಂಬ್ಡೆ, ಪತ್ರಕರ್ತ ಗೌತಮ ನವ್ಲಾಖಾ, ಕವಿ ವರವರರಾವ್ ಸೇರಿದಂತೆ ಅನೇಕರನ್ನು ಸೆರೆಮನೆಗೆ ತಳ್ಳಿದಿರಿ. ಇವರನ್ನು ಜೈಲಿಗೆ ತಳ್ಳಿ ನೀವು ಬೆಳೆಸಿದ್ದು ಯಾರನ್ನು ಅಂಬಾನಿ, ಅದಾನಿಗಳನ್ನಲ್ಲವೇ? 2014ರಲ್ಲಿ 2,360 ಕೋಟಿ ಡಾಲರ್ ಇದ್ದ ಅಂಬಾನಿ ಆಸ್ತಿ 2024ರಲ್ಲಿ 11,690 ಕೋಟಿ ರೂ. ಆಯಿತು. 2014ರಲ್ಲಿ 800 ಕೋಟಿ ಡಾಲರ್ ಇದ್ದ ಗೌತಮ್ ಅದಾನಿ ಆಸ್ತಿ 2024ರಲ್ಲಿ 8,560 ಕೋಟಿ ಡಾಲರ್ ಆಯಿತು.
ಈ ‘ಪವಾಡ’ ನಡೆದದ್ದು ನಿಮ್ಮಿಂದಲ್ಲವೇ ಮಹಾಪ್ರಭುಗಳೇ.
ಬಾಯಿ ಬಿಟ್ಟರೆ ಭಾತ್ ಮಾತಾಕಿ ಜೈ ಎಂದು ರಾಷ್ಟ್ರ ಭಕ್ತಿಯ ಪೋಜು ಕೊಡುತ್ತೀರಿ. ಕಳೆದ 2019 ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪುಲ್ವಾಮಾದಲ್ಲಿ 40 ಮಂದಿ ಸಿಆರ್ಪಿಎಫ್ ಯೋಧರು ಹತ್ಯೆಗೀಡಾಗಲು ಯಾರು ಕಾರಣ? ನಮ್ಮ ಸೈನಿಕರ ಹೆಣಗಳ ರಾಶಿಯ ಮೇಲೆ ಈ ಚುನಾವಣೆ ನಡೆಯಿತು ಎಂದು ಹೇಳಿದ ಜಮ್ಮು ಮತ್ತು ಕಾಶ್ಮೀರ ದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕರು ಮಾಡಿರುವ ಆರೋಪಕ್ಕೆ ನಿಮ್ಮ ಬಳಿ ಏನು ಉತ್ತರವಿದೆ? ಈ ದುರಂತ ನಮ್ಮ ತಪ್ಪಿನಿಂದಾಗಿದೆ. ಸಕಾಲದಲ್ಲಿ ವಿಮಾನ ಕಳಿಸಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಪ್ರಧಾನಿ ಮೋದಿಯವರಿಗೆ ರಾಜ್ಯಪಾಲರು ಫೋನ್ನಲ್ಲಿ ತಿಳಿಸಿದರೆ ‘‘ನೀನು ಸುಮ್ಮನಿರು’’ ಎಂದು ಅವರ ಬಾಯಿಯನ್ನು ಮುಚ್ಚಿ
ಸಲಾಯಿತು.ಚುನಾವಣೆ ಗೆಲ್ಲಲು ನಮ್ಮ ಸೈನಿಕರು ಹೆಣವಾಗಿ ಬಿದ್ದರು. ಇದಕ್ಕೂ ವಿಶ್ವ ಗುರುಗಳ ಬಳಿ ಉತ್ತರವಿಲ್ಲ.
‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ರೈಲು ಬಿಟ್ಟಿರಿ. ಗುಜರಾತ್ ನಲ್ಲಿ ಎರಡು ಸಾವಿರ ಜನ ಹತ್ಯಾಕಾಂಡಕ್ಕೆ ಬಲಿಯಾದರು. 2002ರಲ್ಲಿ ಬಿಲ್ಕಿಸ್ ಬಾನು ಕುಟುಂಬದವರನ್ನು ಕೊಂದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಈ ಪ್ರಕರಣದಲ್ಲಿ ಹನ್ನೊಂದು ಮಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಜೈಲು ಸೇರಿದ್ದ ಈ ಅತ್ಯಾಚಾರಿಗಳನ್ನು ಗುಜರಾತ್ ಬಿಜೆಪಿ ಸರಕಾರ 2022ರ ಆಗಸ್ಟ್ 15ರಂದು ಕ್ಷಮಾದಾನ ನೀಡಿ ಬಿಡುಗಡೆ ಮಾಡಿತು. ಆಗ ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಅತ್ಯಾಚಾರಿಗಳನ್ನು ಹೂ ಮಾಲೆ ಹಾಕಿ ಸ್ವಾಗತಿಸಿದರು. ಇದೇ ಏನು ನಿಮ್ಮ ಸಬ್ ಕಾ ವಿಕಾಸ್?
ಮೋದಿಯವರೇ, ಈಶಾನ್ಯ ಭಾರತ ನಮ್ಮ ಹೃದಯದ ಭಾಗ ಎಂದು ಹೋದಲ್ಲಿ, ಬಂದಲ್ಲಿ ಹೇಳುತ್ತ್ತಿರಿ. ಆದರೆ ವಾಸ್ತವವೇನು? 2023 ಮೇ ತಿಂಗಳಿನಿಂದ ಈಶಾನ್ಯ ಭಾರತದ ಮುಕುಟ ಮಣಿಪುರದಲ್ಲಿ ನಿಮ್ಮ ಸೈದ್ಧಾಂತಿಕ ಪರಿವಾರ ಹಚ್ಚಿದ ಜನಾಂಗೀಯ ಕಲಹದ ಬೆಂಕಿಯಿಂದ ನೂರಾರು ಜನ ಹತ್ಯೆಗೀಡಾಗಿದ್ದಾರೆ.ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಸುಮಾರು ಐದು ಸಾವಿರ ಮನೆಗಳು ಸುಟ್ಟುಭಸ್ಮವಾಗಿವೆ. ಪೊಲೀಸರು ಮತ್ತು ಸೈನಿಕರ ಕಣ್ಣೆದುರೇ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದಿದೆ. ಆದರೂ ಜಗತ್ತನ್ನು ಸುತ್ತುವ ನೀವು ಮಣಿಪುರಕ್ಕೆ ಹೋಗಿ ನೊಂದ ಜನರಿಗೆ ಯಾಕೆ ಸಾಂತ್ವನ ಹೇಳಲಿಲ್ಲ. ಅಲ್ಲಿ ಸರಕಾರ ಎಂಬುದಿದೆಯೇ?
ನೀವು ಅಧಿಕಾರಕ್ಕೆ ಬಂದ ನಂತರ ಮಾಡಿದ್ದೇನು. ಸ್ವಾತಂತ್ರ್ಯ ನಂತರದ ಸರಕಾರಗಳು ಕಟ್ಟಿದ್ದ ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರಿಗೆ ಅಗ್ಗದ ಬೆಲೆಗೆ ಧಾರೆ ಎರೆದು ಕೊಟ್ಟಿರಿ. ಅಲ್ಲಿದ್ದ ದಲಿತ, ಹಿಂದುಳಿದ ಸಮುದಾಯಗಳ ಮೀಸಲಾತಿ ಅವಕಾಶವನ್ನು ನಾಶ ಮಾಡಿದಿರಿ. ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ 42 ಸಾವಿರ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಂಡಿಲ್ಲ. ಇದಕ್ಕೆ ನಿಮ್ಮ ಬಳಿ ಏನು ಉತ್ತರವಿದೆ.
ಕಪ್ಪುಹಣ ಹೊರಗೆ ತೆಗೆಯಲು ನೋಟು ಅಮಾನ್ಯೀಕರಣ ಮಾಡಿದಿರಿ. ಎಷ್ಟು ಕಪ್ಪು ಹಣ ಹೊರಗೆ ಬಂತು. ಯಾಕೆ ಜನಸಾಮಾನ್ಯರಿಗೆ ತೊಂದರೆ ಕೊಟ್ಟಿರಿ.
ಆಗ ಎಟಿಎಂ ಎದುರು ಪಾಳಿ ಹಚ್ಚಿ ಉರಿ ಬಿಸಿಲಿನಲ್ಲಿ ಕುಸಿದು ಬಿದ್ದ ಹಿರಿಯ ಮತ್ತು ಕಿರಿಯ ಜೀವಿಗಳ ಜೀವವನ್ನು ವಾಪಸ್ ತಂದು ಕೊಡುವಿರಾ?
ಕೋವಿಡ್ ಕಾಲದಲ್ಲಿ ಯಾವ ಪೂರ್ವ ಸಿದ್ಧತೆ ಇಲ್ಲದೆ ಒಂದು ರಾತ್ರಿ ಟಿವಿಯ ತೆರೆಯ ಮೇಲೆ ಬಂದು ನಾಳಿನಿಂದ ಲಾಕ್ಡೌನ್ ಎಂದು ದಿಢೀರ್ ಘೋಷಣೆ ಮಾಡಿದಿರಿ. ಆಗ ದೂರದ ಮುಂಬೈ, ದಿಲ್ಲಿ, ಬೆಂಗಳೂರು ಮುಂತಾದ ಊರುಗಳಿಗೆ ದುಡಿಯಲು ಹೋದವರು ವಾಪಸ್ ಬರಲು ರೈಲು, ಬಸ್ ಸೇರಿದಂತೆ ಯಾವುದೇ ವಾಹನ ಸೌಕರ್ಯಗಳೂ ಇರಲಿಲ್ಲ. ಸಾವಿರಾರು ಜನ ಕೆಂಡದಂಥ ಬಿಸಿಲಿನಲ್ಲಿ ಮಕ್ಕಳು ಮರಿಗಳನ್ನು ಹೊತ್ತುಕೊಂಡು ಸಾವಿರಾರು ಮೈಲಿ ನಡೆದು ಊರು ಸೇರಿದರು. ಕೆಲವರು ಬೀದಿ ಹೆಣವಾದರು. ಇದಕ್ಕೇನು ಹೇಳುತ್ತೀರಿ.
ಏನಿದು ನಿಮ್ಮ ಚುನಾವಣಾ ಬಾಂಡ್ ಹಗರಣ? ಇದನ್ನು ಸುಪ್ರೀಂ ಕೋರ್ಟ್ ಅಸಾಂವಿಧಾನಿಕ ಎಂದು ಇದೇ ಫೆಬ್ರವರಿ 15ರಂದು ಹೇಳಿದೆ. ಇದರ ನೂರಕ್ಕೆ ತೊಂಬತ್ತೊಂಬತ್ತರಷ್ಟು ಫಲಾನುಭವಿ ಬಿಜೆಪಿ. ಚುನಾವಣಾ ಬಾಂಡ್ ಮೂಲಕ 2,471 ಕೋಟಿ ರೂ.ಗಳನ್ನು ಬಿಜೆಪಿ ಪಡೆದಿದೆ ಎಂದು ತನಿಖೆಯಿಂದ ಗೊತ್ತಾಗಿದೆ. ಇದರ ಬಗ್ಗೆ ನೀವೇಕೆ ಬಾಯಿ ಬಿಡುತ್ತಿಲ್ಲ.
ಇದೆಲ್ಲ ಜನರಿಗೆ ಈಗ ಕ್ರಮೇಣ ಗೊತ್ತಾಗಿದೆ. ಇದನ್ನು ಮುಚ್ಚಿ ಹಾಕಲು ನೀವು ಅಯೋಧ್ಯೆಯ ರಾಮ ಮಂದಿರದ ನಾಟಕ ನಡೆಸಿದರೆ, ದೇಶದ ತುಂಬಾ ಅಲೆಯೆಬ್ಬಿಸಲು ಮಸಲತ್ತು ನಡೆಸಿದಿರಿ. ಅದು ಠುಸ್ ಆಯಿತು . ಈಗ ಜನ ಪಾಠ ಕಲಿಸುತ್ತಾರೆಂದು ಗೊತ್ತಾಗಿದೆ. ರಾಮಲಲ್ಲಾ ಬಗ್ಗೆ ಎಲ್ಲೂ ಮಾತಾಡುವುದಿಲ್ಲ. ಜನರ ಪ್ರಶ್ನೆಗಳಿಗೆ ನಿಮ್ಮಬಳಿ ಉತ್ತರವಿಲ್ಲ. ಜನರೇ ಈ ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ. ಇದು ಬಹುತ್ವ ಭಾರತ, ಇಲ್ಲಿ ನಿಮ್ಮ ಹಿಟ್ಲರ್ ಆಟ ಬಹಳ ದಿನ ನಡೆಯುವುದಿಲ್ಲ, ಕಾಯ್ದು ನೋಡಿ.