ದೇಶದ ಯುವಜನತೆಯಲ್ಲಿ ಹತಾಶೆ ತಂದಿರುವ ನಿರುದ್ಯೋಗ | Unemployment | Narendra Modi

Update: 2024-03-06 05:16 GMT

Photo : freepik

ನಿರುದ್ಯೋಗ ಹೇಗೆ ದೇಶದ ಅತಿದೊಡ್ಡ ಸಮಸ್ಯೆ ಹಾಗು ಸವಾಲಾಗಿ ಬೆಳೆದು ನಿಂತಿದೆ ? ಉದ್ಯೋಗ ಸೃಷ್ಟಿ ಬಗ್ಗೆ  ಸರಕಾರ ದಾಖಲೆಗಳಲ್ಲಿ ಹೇಳುವುದಕ್ಕೂ ನಿಜವಾಗಿ ತಳಮಟ್ಟದಲ್ಲಿ ಇರುವ ವಾಸ್ತವಕ್ಕೂ ಅದೆಷ್ಟು ದೊಡ್ಡ ಅಂತರವಿದೆ ? ಈ ಸರಕಾರ ಹಾಗು ಈ ಹಿಂದಿನ ಸರಕಾರಗಳು ಉದ್ಯೋಗ ಸೃಷ್ಟಿ ಬಗ್ಗೆ ಜನರ ಕಿವಿಗೆ ಹೂವಿಡುತ್ತಲೇ ಬಂದಿದ್ದು ಹೇಗೆ ?

ದೇಶದಲ್ಲಿನ ಇವತ್ತಿನ ಸ್ಥಿತಿಯನ್ನು, ಯುವಜನತೆ ದಿಕ್ಕೆಡುತ್ತಿರುವುದನ್ನು, ಹತಾಶರಾಗುತ್ತಿರುವುದನ್ನು, ಕಡೆಗೆ ಹೊಣೆಗೇಡಿಗಳೂ ಆಗಿಬಿಡುತ್ತಿರುವುದನ್ನು ನೋಡಿದಾಗ ಈ ಪ್ರಶ್ನೆಗಳು ಕಾಡುತ್ತವೆ.

ನಾವು ನೋಡುತ್ತಿದ್ದೇವೆ. ಭಾರತದ ಬಹಳಷ್ಟು ಮಂದಿ ಇಸ್ರೇಲ್ನಲ್ಲಿ ಕೂಲಿ ಕೆಲಸಕ್ಕೆ, ಎಲೆಕ್ಟ್ರಿಶಿಯನ್, ಪ್ಲಂಬರಿಂಗ್ ಕೆಲಸಕ್ಕೆ ಅರ್ಜಿ ಹಾಕಿದ್ದಾರೆ.  

ಫೆಲೆಸ್ತೀನಿಯರ ಜಾಗದಲ್ಲಿ ಕೆಲಸ ಮಾಡುವುದಕ್ಕೆಂದು ಅವರೆಲ್ಲ ಅಲ್ಲಿಗೆ ಹೊರಟು ನಿಂತಿದ್ದಾರೆ.

ಇಸ್ರೇಲ್ನಲ್ಲಿ ಪರಿಸ್ಥಿತಿ ಏನೇನೂ ಚೆನ್ನಾಗಿಲ್ಲ ಎನ್ನುವುದು ಅವರಿಗೆಲ್ಲ ಗೊತ್ತಿದೆ. ಆದರೂ ಇಲ್ಲಿ ಹಸಿವಿನಿಂದ ನರಳುವುದಕ್ಕಿಂತ ಅಲ್ಲಿ ಹೋಗಿ ಸಾಯುವುದೇ ಎಷ್ಟೋ ವಾಸಿ ಎಂದು ಅವರು ತೀರ್ಮಾನಿಸಿಬಿಟ್ಟಿದ್ದಾರೆ.23 ವರ್ಷದ ಯುವಕನೊಬ್ಬ ಆರ್ಮಿ ಹೆಲ್ಪರ್ ಆಗಲು ರಷ್ಯಾಗೆ ಹೋಗಿದ್ಧ. ಕ್ಷಿಪಣಿ ದಾಳಿಗೆ ಬಲಿಯಾಗಿ ಹೋದ. ಯುದ್ಧದ ವೇಳೆ ಭಾರತದಿಂದ ಆರ್ಮಿ ಕೆಲಸಕ್ಕೆ ಹೋದವರನ್ನೆಲ್ಲ ಮುಂದಿನ ಸಾಲಿನಲ್ಲಿ ಕಳಿಸಲಾಗುತ್ತದೆ. ಯುದ್ಧ ಮಾಡಲು ಬಲವಂತ ಮಾಡಲಾಗುತ್ತದೆ.

ಗುಂಡಿಗೆ ಎದೆ ಕೊಟ್ಟು ಜೀವ ಕಳೆದುಕೊಳ್ಳುತ್ತಾರೆ. ಅಲ್ಲಿ ಅವರೇನು ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನೂ ಅವರ ಕುಟುಂಬಕ್ಕೆ ಕೊಡಲಾಗುವುದಿಲ್ಲ. ಆ 23 ವರ್ಷದ ಯುವಕನ ಕಥೆಯೂ ಹಾಗೆಯೆ ಆಗಿತ್ತು.ಇತರ ಭಾರತೀಯರು ಈಗ ವಾಪಸ್ ಬರಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಕೂಡ ಅವರನ್ನು ಕರೆಸಿಕೊಳ್ಳುವ ಯತ್ನದಲ್ಲಿದೆ.

ಕಡಿಮೆ ಮಟ್ಟದ ಕೆಲಸಗಳು ಮಾತ್ರ ಅಪಾಯಕಾರಿ ಎಂದುಕೊಂಡರೆ ಅದು ಕೂಡ ತಪ್ಪು. ಈಗ ಇಲ್ಲಿ ಎಂಜಿನಿಯರ್ ಪದವಿಯಿದ್ದರೂ ಕೆಲಸದ ಗ್ಯಾರಂಟಿಯಿರುವುದಿಲ್ಲ.

ಪುಣೆಯಲ್ಲಿ 3,000 ಎಂಜಿನಿಯರ್ ಪದವೀಧರರು ವಾಕ್ ಇನ್ ಇಂಟರ್ವ್ಯೂ ಎದುರಿಸಿದ್ದಾರೆ. ಇದೊಂದೇ ಅಲ್ಲ, ಹೈದರಾಬಾದ್ನಲ್ಲೂ ಇದೇ ಕಥೆ. ಮುಂಬೈನಲ್ಲಿ ಖತರ್ ಏರ್ವೇಸ್ ನೇಮಕಾತಿ ಕ್ಯಾಂಪ್ನಲ್ಲೂ ಹೀಗೆಯೆ.

ಖಾಸಗಿ ಉದ್ಯೋಗಗಳ ಕಥೆ ಇದಾದರೆ, ಉದ್ಯೋಗಗಳ ವಿಚಾರದಲ್ಲಿ ಸರ್ಕಾರ ಮಾಡುತ್ತಿರುವುದೇನು? ಉತ್ತರ ಪ್ರದೇಶದಲ್ಲಿ 60,000 ಕಾನ್ಸ್ಟೇಬಲ್ ಹುದ್ದೆಗಳಿಗೆ ಪರೀಕ್ಷೆ ಬರೆದವರು 50 ಲಕ್ಷ ಆಕಾಂಕ್ಷಿಗಳು. ಇಷ್ಟಾದ ಮೇಲೆ ಏನಾಯಿತು? ಪ್ರಶ್ನೆಪತ್ರಿಕೆ ಸೋರಿಕೆ ಆಯಿತು. ಮತ್ತೆ 6 ತಿಂಗಳ ಬಳಿಕ ಪರೀಕ್ಷೆ ನಡೆಯಲಿದೆ ಎಂದು ಹೇಳಲಾಯಿತು. ನಿರುದ್ಯೋಗದ ಕರಾಳತೆ ನಡುವೆಯೇ ಇದು ಇನ್ನೊಂದು ಬಗೆಯ ಹಗರಣ. ಒಟ್ಟಾರೆ ಯುವಕರ ಸ್ಥಿತಿ ಮಾತ್ರ ಅತಂತ್ರ.

ರಾಜಸ್ಥಾನದಲ್ಲಿ REET ಪೇಪರ್ ಸೋರಿಕೆಯಾಗುತ್ತದೆ, ಬಿಹಾರದಲ್ಲಿ BPSC ಪೇಪರ್ ಸೋರಿಕೆಯಾಗುತ್ತದೆ. UPTET ಪೇಪರ್ ಸೋರಿಕೆಯಾಗುತ್ತದೆ. RRB NTPC ಪರೀಕ್ಷೆ ಪೇಪರ್ ಸೋರಿಕೆಯಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣ ನಡೆಯುತ್ತದೆ.

ಪೇಪರ್ ಲೀಕ್ ಆಗಲಿಲ್ಲವೆಂದೇ ಅಂದುಕೊಳ್ಳೋಣ. ಅರ್ಜಿ ಹಾಕಿದ ಅಷ್ಟು ಲಕ್ಷ ಯುವಕರಲ್ಲಿ ಬಿಟೆಕ್, ಎಂಬಿಎ, ಮಾಸ್ಟರ್ ಡಿಗ್ರಿ ಆದವರೆಲ್ಲ ಇದ್ದಾರೆ. ಯಾಕೆ ? ಗ್ರೂಪ್ ಡಿ ನೌಕರಿಗಾಗಿ. ಅದು ಹೈಸ್ಕೂಲ್ ಪಾಸಾದವರಿಗೆ, ಡಿಪ್ಲೊಮಾ ಮಾಡಿಕೊಂಡವರಿಗಾಗಿ ಇರುವ ನೌಕರಿ.

ಅಂದರೆ ನೋಡಿ, ಮೋದಿ ದರ್ಬಾರಿನಲ್ಲಿ ಹೇಗಿದೆ ಯುವಜನರ ಪರಿಸ್ಥಿತಿ? ಇದು ಯಾವುದೋ ಕೆಲವು ರಾಜ್ಯಗಳಲ್ಲಿನ ಕಥೆಯಲ್ಲ. ಒಬ್ಬ ಕಚೇರಿ ಜವಾನನ ಕೆಲಸಕ್ಕೂ ಕೇರಳದಲ್ಲಿ, ಮಹಾರಾಷ್ಟ್ರದಲ್ಲಿ, ಮಧ್ಯಪ್ರದೇಶದಲ್ಲಿ ಉದ್ದುದ್ದ ಕ್ಯೂ ಇದೆ.

ದೊಡ್ಡ ದೊಡ್ಡ ಡಿಗ್ರಿ ಪಡೆದವರು ಕೂಡ ಸಣ್ಣದೊಂದು ಸರ್ಕಾರಿ ಕೆಲಸ ಸಿಕ್ಕಿದರೂ ಸಾಕು ಎಂಬ ಸ್ಥಿತಿಗೆ ಮುಟ್ಟಿದ್ದಾರೆ. ಯಾಕೆಂದರೆ ಅವರಿಗೆ ಖಾಸಗಿ ವಲಯದಲ್ಲಿನ ಕೆಲಸಗಳ ಮೇಲೆ ನಂಬಿಕೆಯೇ ಇಲ್ಲವಾಗಿದೆ. ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್ ಡಿ ಎಸ್) ಸರ್ವೆ ಪ್ರಕಾರ ಶೇ.65ರಷ್ಟು ಯುವಕರು ಸರ್ಕಾರಿ ಕೆಲಸ ಬಯಸುತ್ತಿದ್ಧಾರೆ.

ಆದರೆ ಸಮಸ್ಯೆ ಏನೆಂದರೆ, ಬರೀ 7 ಲಕ್ಷ ಸರ್ಕಾರಿ ನೌಕರಿಗಳಿಗೆ ಅರ್ಜಿ ಹಾಕಿರುವವರು 22 ಕೋಟಿ ಯುವಕರು. 7 ಲಕ್ಷ ಹುದ್ದೆಗಳಿಗೆ 22 ಕೋಟಿ ಜನ ಕಾಯುತ್ತಿದ್ದಾರೆ ಅಂದ್ರೆ ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂದು ನೀವೇ ಊಹಿಸಿ ನೋಡಿ ಕಟು ವಾಸ್ತವವೇನೆಂದರೆ, ಸರ್ಕಾರಿ ನೌಕರಿಗಳು ಇಲ್ಲವಾಗುತ್ತಿವೆ. ಇನ್ನು ಕೆಲವು ಕಡೆ ಕೆಲಸಗಳು ಖಾಲಿ ಇದ್ದರೂ ಸರ್ಕಾರ ಅವನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ.

ಸ್ಟಾರ್ಟ್ಅಪ್ ವಲಯದಲ್ಲಿ ಒಳ್ಳೆಯ ದಿನಗಳನ್ನು ಕಂಡಿದ್ದವರು ಕೆಟ್ಟ ದಿನಗಳನ್ನೂ ಕಂಡಿದ್ದಾರೆ. ಕಳೆದೆರಡು ವರ್ಷಗಳಲ್ಲಿ 35,000ಕ್ಕೂ ಹೆಚ್ಚು ಉದ್ಯೋಗಗಳು ಇಲ್ಲವಾಗಿವೆ. 2024ರಲ್ಲಂತೂ ಸ್ಥಿತಿ ಇನ್ನಷ್ಟು ಕೆಡುತ್ತಿದೆ. ಪ್ರತಿ ತಿಂಗಳೂ ಇಲ್ಲವಾಗುತ್ತಿರುವ ನೌಕರಿಗಳ ಸಂಖ್ಯೆ ಹೆಚ್ಚುತ್ತಿದೆ.

ಎಲ್ಲದಕ್ಕೂ ನೆಹರೂ ಕಾರಣ ಎಂದು ದೂರುವವರು ಒಂದು ವಿಚಾರ ನೆನಪಿಡಬೇಕಿದೆ. ನಿರುದ್ಯೋಗ ಎನ್ನುವುದು ಈ ದೇಶದಲ್ಲಿ ಅತ್ಯಂತ ಸಂಕೀರ್ಣವಾದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಯಾಗಿದೆ. ಇದನ್ನು ಬಗೆಹರಿಸಲು ಯಾವುದೇ ರಾಜಕೀಯ ಪಕ್ಷದ ಬಳಿ ಯಾವುದೇ ಮ್ಯಾಜಿಕ್ ಥರದ ಸೂತ್ರ ಇಲ್ಲ. ಇದಕ್ಕೆ ಪರಿಹಾರ ಸುಲಭವೂ ಇಲ್ಲ. ಜನಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಅದಕ್ಕೆ ತಕ್ಕಂತೆ ಉದ್ಯೋಗಗಳ ಸಂಖ್ಯೆ ಏರುತ್ತಿಲ್ಲ. ಉದ್ಯೋಗ ಸೃಷ್ಟಿ ಆಗುತ್ತಿಲ್ಲ.

1999ರಿಂದ 2019ರವರೆಗಿನ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸರ್ಕಾರಗಳು ಇದ್ದ ಕಾಲದಲ್ಲಿ ಏನೇನಾಯಿತು? ಜನಸಂಖ್ಯಾ ಬೆಳವಣಿಗೆ ಶೇ.1.44 ಇದ್ದಾಗ ಉದ್ಯೋಗ ಬೆಳವಣಿಗೆ ದರ ಶೇ.1 ಇತ್ತು. 2017-18ರಲ್ಲಿ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಅತಿ ಹೆಚ್ಚು ಇತ್ತು ಎಂದು ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ (ಪಿಎಲ್ಎಫ್ಎಸ್) ಹೇಳಿದೆ. ಕಳೆದೆರಡು ವರ್ಷಗಳಲ್ಲಿ ನಿರುದ್ಯೋಗ ನಿಧಾನವಾಗಿ ತಗ್ಗುತ್ತಿದೆ ಎಂದು ಅದು ಹೇಳುತ್ತಿದೆ.

ಯಾಕೆಂದರೆ ಹೆಚ್ಚಿನವರು ಕೃಷಿಗೇ ಮರಳುತ್ತಿದ್ದಾರೆ. ಅವರು ನಗರಗಳನ್ನು ಬಿಟ್ಟು, ಫ್ಯಾಕ್ಟರಿ ಕೆಲಸ ಬಿಟ್ಟು ಕೃಷಿ ಮಾಡಲು ಹಳ್ಳಿಗಳಿಗೆ ಹಿಂತಿರುಗುತ್ತಿದ್ದಾರೆ. ಹಾಗೆಂದು ಇದರಿಂದ ನಿರುದ್ಯೋಗ ಸಮಸ್ಯೆ ಬಗೆಹರಿಯುವುದಿಲ್ಲ. ಆದರೆ ಆ ಸಮಸ್ಯೆ ಕಡಿಮೆಯಾಗಿದೆ ಎಂಬಂತೆ ಕಾಣಿಸುತ್ತದೆ ಅಷ್ಟೆ. ಕೃಷಿವಲಯದಂಥವುಗಳಲ್ಲಿನ ಕೆಲಸ ಕೆಲವು ತಿಂಗಳುಗಳು ಮಾತ್ರ.

80 ಕೋಟಿ ಜನರು ಹಸಿದು ಸಾಯದಂತಾಗಲು ಉಚಿತ ಪಡಿತರ ನೀಡಬೇಕಾದ ಸ್ಥಿತಿ ದೇಶದಲ್ಲಿದೆ. ಮತ್ತು ಸರ್ಕಾರ ಇದಕ್ಕಾಗಿ 2 ಲಕ್ಷ ಕೋಟಿ ಖರ್ಚು ಮಾಡುತ್ತಿದೆ. ಹಾಗೆ ಒಂದೆಡೆ 80 ಕೋಟಿ ಬಡವರಿಗೆ ಉಚಿತ ಪಡಿತರ ನೀಡುತ್ತಿರುವ ಮೋದಿ ಸರ್ಕಾರ ಇನ್ನೊಂದೆಡೆಯಿಂದ, ಬಡತನ ಕಡಿಮೆಯಾಗಿದೆ ಎಂದು ಹೇಳಿಕೊಳ್ಳುತ್ತಿರುವುದಂತೂ ವಿಚಿತ್ರವಾಗಿದೆ.

ಪದವೀಧರರಲ್ಲಿ ಶೇ.45ರಷ್ಟು ಯುವಕರು ಉದ್ಯೋಗಕ್ಕೆ ಅರ್ಹತೆಯುಳ್ಳವರಿದ್ದಾರೆ. 25 ವರ್ಷದೊಳಗಿನ ಶೇ.42.3ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಈ ಹಂತದಲ್ಲಿನ ನಿರುದ್ಯೋಗ ಪ್ರಮಾಣ ಹೆಚ್ಚುತ್ತಲೇ ಹೋಗುತ್ತಿದೆ.

2.1 ಕೋಟಿ ಮಹಿಳೆಯರು ಕೆಲಸದ ಸ್ಥಳದಿಂದ ದೂರವಾಗಿದ್ದಾರೆ. ಉದ್ಯೋಗ ಹುಡುಕುವುದನ್ನೇ ಅವರು ಬಿಟ್ಟಿದ್ದಾರೆ. ಸುರಕ್ಷತೆ, ಸಮಯ ವ್ಯಯ, ಮನೆಗೆಲಸದ ಹೊಣೆಗಾರಿಕೆ ಇವೆಲ್ಲವೂ ಅವರಿಗಿವೆ. ಸರ್ಕಾರಕ್ಕೆ ಈ ಸಮಸ್ಯೆಯ ಗಂಭೀರತೆಯೇ ಅರ್ಥವಾದಂತಿಲ್ಲ. ನಿರುದ್ಯೋಗ ಪ್ರಮಾಣ 2023ರ ಡಿಸೆಂಬರ್ನಲ್ಲಿ ಶೇ.8.5 ಇದ್ದದ್ದು 2024ರ ಜನವರಿಯಲ್ಲಿ ಶೇ.7.1ಕ್ಕಿ ಇಳಿದಿದೆ ಎಂದು ಸರ್ಕಾರದ ಅಂಕಿಅಂಶಗಳು ಹೇಳುತ್ತಿವೆ.

ಅಂದರೆ ಜನಸಂಖ್ಯೆಯ ಶೇ.92.9ರಷ್ಟು ಮಂದಿ ಉದ್ಯೋಗಸ್ಥರು. 2024ರಲ್ಲಿ ಪರಿಸ್ಥಿತಿ ಇನ್ನೂ ಸುಧಾರಿಸಲಿದೆ ಎಂದು ಸರ್ಕಾರ ಹೇಳುತ್ತಿದೆ.

ಆದರೆ ಇದು ನಿಜವೇ ? ನಿರುದ್ಯೋಗ ಸ್ಥಿತಿಯನ್ನು ತಿಳಿಯುವ ಮಾನದಂಡವೇನು? ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ ತ್ರೈಮಾಸಿಕವಾಗಿ ನಡೆಯುತ್ತದೆ. ಕೆಲಸ ಹುಡುಕುತ್ತಿಲ್ಲ ಎಂದು ಹೇಳುವವರು ನಿರುದ್ಯೋಗಿಗಳ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಈ ಸಮಿಕ್ಷೆಯಲ್ಲಿನ ಸಮಸ್ಯೆ. ಅವರು ಕೆಲಸವೇ ಇಲ್ಲದೆ ಕೂತಿದ್ದರು. ಅದನ್ನು ಪರಿಗಣಿಸಲಾಗುವುದಿಲ್ಲ.

 

ಕಡಿಮೆ ಮಹಿಳೆಯರ ಪಾಲ್ಗೊಳ್ಳುವಿಕೆ, ಯುವಕರ ನಿರುದ್ಯೋಗದ ಸಮಸ್ಯೆ, ಉದ್ಯೋಗದ ಗುಣಮಟ್ಟ ಈ ಯಾವುದರ ಬಗ್ಗೆಯೂ ಅದು ತಲೆಕೆಡಿಸಿಕೊಳ್ಳುವುದಿಲ್ಲ. 2022-23ರಲ್ಲಿ ಶೇ.57ರಷ್ಟು ಮಂದಿ ಸ್ವಯಂ ಉದ್ಯೋಗಿಗಳು ಎನ್ನುತ್ತದೆ ಪಿಎಲ್ಎಫ್ಎಸ್.

ಆದರೆ ಅದು ಹೇಳುವ ಸ್ವಯಂ ಉದ್ಯೋಗಿಗಳು ಯಾರು? ತಳ್ಳುಗಾಡಿ ಇಟ್ಟುಕೊಂಡು ವ್ಯಾಪಾರದಲ್ಲಿ ತೊಡಗಿರುವವರನ್ನೂ ಸ್ವಯಂ ಉದ್ಯೋಗಿಗಳು ಎನ್ನುತ್ತದೆ.

ಪ್ರಧಾನಿ ಮೋದಿಯವರೇ ಹೇಳಿದ್ರಲ್ಲ... ಪಕೋಡ ಮಾರುವುದೂ ಉದ್ಯೋಗವೇ ಅಲ್ವಾ...ಅಂತ. ಹಾಗೆಯೇ ಈ ಪಿಎಲ್ಎಫ್ಎಸ್

ಮಾನದಂಡ.ಹಾಗಾದರೆ ಉದ್ಯೋಗದ ಗುಣಮಟ್ಟ ಎಂಬುದು ಬೇಡವೆ? ಸರ್ಕಾರ ಪರಿಗಣಿಸುವ ಮತ್ತೊಂದು ಅಂಕಿಅಂಶವೆಂದರೆ ಎಂಪ್ಲಾಯ್ಮೆಂಟ್ ಪ್ರಾವಿಡೆಂಟ್ ಫಂಡ್ (ಇಪಿಎಫ್) ಕೊಡುವ ಡೇಟಾ.

ಅದರ ಪ್ರಕಾರ ಬಹಳಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ. ಆದರೆ ಬಹಳಷ್ಟು ಜನ ಕೆಲಸಕ್ಕೆ ಸೇರುತ್ತಾರೆ, ಮತ್ತೆ ಕೆಲಸ ಬಿಟ್ಟುಹೋಗುತ್ತಾರೆ. ಈ ಸತ್ಯವನ್ನು ಅದು ಹೇಳುತ್ತಲೇ ಇಲ್ಲ. ಸತ್ಯವೇನೆಂದರೆ ಪಿಎಚ್ ಡಿ ಪದವೀಧರರು ಜವಾನನ ಕೆಲಸಕ್ಕೆ, ಪದವೀಧರರು ತೋಟದ ಮಾಲಿ ಕೆಲಸಕ್ಕೆ ಅರ್ಜಿ ಹಾಕಬೇಕಾದ ಸ್ಥಿತಿಗೆ ಸಿಲುಕಿದ್ದಾರೆ. ಹಣದುಬ್ಬರ ಏರುತ್ತಿದೆ. ಸಂಬಳದ ಕೆಲಸವುಳ್ಳವರ ಕಥೆ ದಿನಗೂಲಿಗಳ ಹಾಗಾಗಿದೆ. ಇದೆಲ್ಲವೂ ಇನ್ನೊಂದು ರೂಪದ ನಿರುದ್ಯೋಗವೇ ಆಗಿದೆ.

ಮೇಕ್ ಇನ್ ಇಂಡಿಯಾ ಬ್ಯಾನರ್ ಅಡಿಯಲ್ಲಿ ದೊಡ್ಡ ದೊಡ್ಡ ಒಪ್ಪಂದಗಳಾಗುತ್ತವೆ. ಆದರೆ ಅದರಿಂದ ಉದ್ಯೋಗಗಳು  ಎಷ್ಟು ಸೃಷ್ಟಿಯಾದವು, ಎಷ್ಟು ಯುವಕರಿಗೆ ಅನುಕೂಲವಾಯಿತು ಇದಾವುದರ ಬಗ್ಗೆಯೂ ಯಾರೂ ಹೇಳುವುದಿಲ್ಲ. ಪರಿಸ್ಥಿತಿ ಇಷ್ಟು ಹೀನಾಯವಾಗಿದ್ದರೂ ಅದರ ಬಗ್ಗೆ ಯಾರೂ ಮಾತಾಡುವುದಿಲ್ಲ. ಪ್ರಶ್ನಿಸುವುದಿಲ್ಲ. ಮೊಬೈಲ್ ಫೋನ್, ವಾಟ್ಸ್ಯಾಪ್ ಯೂನಿವರ್ಸಿಟಿ, ಇನ್ಸ್ಟಾ ರೀಲ್ಸ್ ಇಷ್ಟೇನಾ ಯುವಕರ ಕಥೆ?

20 ವರ್ಷಗಳ ಹಿಂದೆ 20 ವರ್ಷದ ಯುವಕರು ಪ್ರಶ್ನೆ ಮಾಡುತ್ತಿದ್ದರು, ಪ್ರತಿಭಟಿಸುತ್ತಿದ್ದರು, ಅದರಿಂದಾಗಿ ಅವರು ಕೊಂಚವಾದರೂ ತಮಗೆ ಸಿಗಬೇಕಾದ ನ್ಯಾಯವನ್ನು ಪಡೆಯಬಲ್ಲವರಾಗಿದ್ದರು. ಆದರೆ ಈಗಿನ ಯುವಕರು ? ಅವರು ಏನು ಮಾಡ್ತಾ ಇದ್ದಾರೆ ?

ಪ್ರತಿದಿನ ಅವರ 6 ಗಂಟೆ ಇಂಟರ್ನೆಟ್ನಲ್ಲೇ ಕಳೆದು ಹೋಗುತ್ತದೆ. 2.36 ಗಂಟೆ ಸೋಷಿಯಲ್ ಮೀಡಿಯಾದಲ್ಲಿ ಹೋಗುತ್ತದೆ. ಹಾಗಾಗಿ 45 ಕೋಟಿಗೂ ಹೆಚ್ಚು ಯುವಕರು ಉದ್ಯೋಗ ಹುಡುಕದೇ ಇದ್ದರೆ ಅಚ್ಚರಿಯೇನಿಲ್ಲ. ಅವರು ಉನ್ನತ ಉದ್ಯೋಗಕ್ಕಾಗಿ ನೊಡುತ್ತಾರೆ. ಇಲ್ಲವೆ ಕೆಲಸ ಮಾಡದೇ ಹಾಗೇ ಉಳಿಯುತ್ತಾರೆ.

ಈ ನಡುವೆ ಮಹತ್ವಾಕಾಂಕ್ಷಿ ಯುವಕರು ದೇಶ ಬಿಟ್ಟು ಹೋಗಿದ್ಧಾರೆ. ಎಂಬಿಎ, ಮೆಡಿಕಲ್, ಎಂಜಿನೀರಿಂಗ್ ಹೀಗೆ ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿವರ್ಷವೂ ವಿದೇಶಗಳಿಗೆ ಹೋಗುತ್ತಿದ್ದಾರೆ. ಪ್ರತಿಭಾವಂತರೆಲ್ಲ ವಿದೇಶಕ್ಕೆ ಹೋಗುವುದು ಭಾರತದಿಂದಲೇ ಹೆಚ್ಚು.

ಶೇ.59ರಷ್ಟು ಭಾರತೀಯರು ವಿದೇಶದಲ್ಲಿಯೇ ಕೆಲಸ ಮಾಡುತ್ತಿದ್ಧಾರೆ. ಯುವ ಉದ್ಯಮಿಗಳು ಕೂಡ ವಿದೇಶ ಸೇರಿಕೊಳ್ಳುತ್ತಿದ್ದಾರೆ. ಅವರು ಹೋದರೆ ಹೋಗಲಿ ಎಂದುಕೊಳ್ಳಬಹುದು. ಆದರೆ ಅವರೆಲ್ಲ ಇತರ 10,000 ಜನರಿಗೆ ಕೆಲಸ ಕೊಡಬಲ್ಲಂಥ ಸಾಮರ್ಥ್ಯವುಳ್ಳವರು ಎಂಬುದನ್ನು ಗಮನಿಸಬೇಕು.

ಇಲ್ಲಿಂದ ಅಲ್ಲಿಗೆ ಹೋದ ಉದ್ಯಮಿಗಳು ಅಮೆರಿಕದಲ್ಲಿ 40 ಬಿಲಿಯನ್ ಡಾಲರ್ ತೊಡಗಿಸಿದರೆ ಅಲ್ಲಿ 4 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಸಿಐಐ ವರದಿ ಇದನ್ನು ಹೇಳುತ್ತದೆ. ಅಲ್ಲಿ ನಮ್ಮವರಿಂದ ಉದ್ಯೋಗ ಸೃಷ್ಟಿಯಾಗುತ್ತಿದ್ದರೆ, ನಮ್ಮಲ್ಲಿ ಮಾತ್ರ ಹತಾಶ ಸ್ಥಿತಿಯಿದ್ದು, ಇಸ್ರೇಲ್ನಂಥ ಹಾಳು ಸುರಿಯುತ್ತಿರುವ ದೇಶಕ್ಕೆ ಕೆಲಸಹುಡುಕಿಕೊಂಡು ಹೋಗಬೇಕಾಗಿದೆ.

ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) 2007-08ರಲ್ಲಿ ಇದ್ದ ಮಟ್ಟಕ್ಕೆ ಕುಸಿದಿದೆ. ಪ್ರತಿಶತ ಲೆಕ್ಕದಲ್ಲಿ ನೋಡಿದರೆ ಅದು ನಮ್ಮ ಜಿಡಿಪಿಯ ಶೇ.1ರಷ್ಟು ಮಾತ್ರ. 2005-6ರಲ್ಲಿ ಇದ್ದ ಮಟ್ಟ ಇದು. ನಿರುದ್ಯೋಗದ ಪರಿಣಾಮವಾಗಿ ಮಾನಸಿಕ ಆರೋಗ್ಯದ ಮೇಲೆಯೂ ತೀವ್ರ ಕೆಟ್ಟ ಪರಿಣಾಮಗಳಾಗುತ್ತಿವೆ. ಗೃಹ ಹಿಂಸೆ, ಕಾನೂನು ಸುವ್ಯಸ್ಥೆಯ ಸಮಸ್ಯೆಗಳಿಗೂ ಅದು ಕಾರಣವಾಗುತ್ತದೆ.

ಇನ್ನು ಬ್ಲೂ ಕಾಲರ್ ಉದ್ಯೋಗದಲ್ಲಿದ್ದರೂ, ವೈಟ್ ಕಾಲರ್ ಉದ್ಯೋಗದಲ್ಲಿದ್ದರೂ ಕಳೆದ 5-10 ವರ್ಷಗಳಲ್ಲಿ ಗಳಿಕೆಯ ಮಟ್ಟ ಹೇಗಿದೆ ಎಂದು ನೋಡಿಕೊಂಡರೆ ಅದು ಮತ್ತೊಂದು ಕಟು ವಾಸ್ತವ. ಜಿಡಿಪಿ ಬೆಳವಣಿಗೆಗೆ ಉದ್ಯೋಗ ಬಹಳ ಮುಖ್ಯ. ವಿಶ್ವಬ್ಯಾಂಕ್ ಹೇಳುವ ಪ್ರಕಾರ ಶೇ.1ರಷ್ಟು ಉದ್ಯೋಗ ಹೆಚ್ಚಳವಾದರೆ, ಜಿಡಿಪಿ ತಂತಾನೆ ಶೇ.0.6ರಷ್ಟು ಹೆಚ್ಚುತ್ತದೆ.

ಇಂಥದೊಂದು ಬೆಳವಣಿಗೆ ಉದ್ಯೋಗ ಹೆಚ್ಚಳವಿಲ್ಲದೆ ಸಾಧ್ಯವಿಲ್ಲ. ನಮ್ಮಲ್ಲಿ ಶೇ.43-50ರಷ್ಟು ಮಂದಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಚೀನಾದಲ್ಲಿ ಶೇ.25ರಷ್ಟು ಮಾತ್ರ ಕೃಷಿಯ ಮೇಲೆ ಅವಲಂಬಿಸಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ಪ್ರಮಾಣ ಶೇ.2ರಷ್ಟು ಮಾತ್ರ.

ಕೃಷಿಯೇತರ ಉದ್ಯೋಗಗಳು ಹೆಚ್ಚಬೇಕಿದೆ. ಆದರೆ ರಾಜಕೀಯ ಪಕ್ಷಗಳು ಇದಾವುದರ ಬಗ್ಗೆಯಾದರೂ ಗಂಭೀರವಾಗಿವೆಯೆ?

ಅವು ಚುನಾವಣೆವರೆಗೆ ಹೇಳುವ ಕಥೆ ಒಂದಾದರೆ, ಚುನಾವಣೆ ಮುಗಿದ ಬಳಿಕ ಹೇಳುವ ಕಥೆಯೇ ಇನ್ನೊಂದು. ಇದೆಲ್ಲದರ ನೇರ ಪರಿಣಾಮ ಎದುರಿಸುವವರು ಪ್ರಶ್ನೆಗಳನ್ನೇ ಕೇಳಲಾರದ ಸ್ಥಿತಿ ಮುಟ್ಟಿದ್ದಾರೆ. ಅಥವಾ ಅವರನ್ನು ಪ್ರಶ್ನಿಸದೇ ಇರುವ ಹಾಗೆ ಮಾಡಲಾಗಿದೆ.

ನಮ್ಮ ಯುವಜನರು ಭ್ರಮೆಯಲ್ಲಿ ತೆಲಾಡುತ್ತಿದ್ದಾರೆ. ಅವರಿಗೆ ಫ್ರೀ ಇಂಟರ್ನೆಟ್, ವಾಟ್ಸ್ ಆ್ಯಪ್, instagram, reels ಇವುಗಳ ಖೆಡ್ಡಾಕ್ಕೆ ಬೀಳಿಸ ಲಾಗಿದೆ. ಅಲ್ಲಿ ಅವರ ತಲೆಗೆ ವಿಶ್ವಗುರು, ಮೇಕ್ ಇನ್ ಇಂಡಿಯಾ ದಂತಹ ಪೊಳ್ಳು ಘೋಷಣೆಗಳು ಜೊತೆಗೆ ಕೋಮುವಾದ, ಮುಸ್ಲಿಂ ದ್ವೇಷ, ಗೋ ರಕ್ಷಣೆ , ಧರ್ಮ ರಕ್ಷಣೆ ಇವುಗಳನ್ನು ಒಂದರ ಹಿಂದೆ ಒಂದರಂತೆ ತುಂಬಿಸಲಾಗುತ್ತದೆ. ಅವುಗಳಲ್ಲೆ ಅವರನ್ನು ಬಿಝಿ ಇಡಲಾಗುತ್ತದೆ.

ತಾವು ಎಂತಹ ದೊಡ್ಡ ಪ್ರಪಾತಕ್ಕೆ ಬಿದ್ದಿದ್ದೇವೆ ಎಂಬ ಅರಿವೂ ಅವರಿಗೆ ಆಗದ ಹಾಗೆ ಮಾಡಿ ಬಿಡಲಾಗಿದೆ. ಹಾಗಾಗಿ ಇಲ್ಲಿ

ನಿರುದ್ಯೋಗ ಪರ್ವ ಮುಗಿಯುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!