ರಾಜ್ಯದಲ್ಲಿ ತಣಿಯದ ಅಸಮಾಧಾನ , ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ

Update: 2024-03-27 06:40 GMT
Editor : Ismail | Byline : ಆರ್. ಜೀವಿ

ಲೋಕಸಭಾ ಚುನಾವಣೆಗೆ ಟಿಕೆಟ್ ಘೋಷಿಸಿದ ಬೆನ್ನಿಗೇ ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಅಸಮಾಧಾನ ತಣಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.ವಿಧಾನಸಭಾ ಚುನಾವಣೆ ಸಂದರ್ಭ ಎದುರಿಸಿದ್ದ ಕಠಿಣ ಪರಿಸ್ಥಿತಿಯನ್ನೇ ಬಿಜೆಪಿ ಈಗ ಮತ್ತೆ ಎದುರಿಸುವ ಹಾಗಾಗಿದೆ.

ಹಿರಿಯ ನಾಯಕರಿಗೆ ಟಿಕೆಟ್ ಮಿಸ್ ಆದ ಬೇಸರ ಒಂದೆಡೆಯಾದರೆ, ನಮಗೆ ಮೊದಲೇ ಹೇಳಲಿಲ್ಲ, ಪ್ರಕಟಣೆ ಬಳಿಕವೇ ಗೊತ್ತಾಗಿ ಅವಮಾನವಾಗಿದೆ ಎಂಬ ಅಸಮಾಧಾನವೂ ಸೇರಿಕೊಂಡಿದೆ. ಹಿರಿಯರಾದ ಡಿ ವಿ ಸದಾನಂದ ಗೌಡ, ಈಶ್ವರಪ್ಪ ಜೊತೆ ಸಂಗಣ್ಣ ಕರಡಿ, ಮಾಧುಸ್ವಾಮಿ , ರೇಣುಕಾಚಾರ್ಯ, ರವೀಂದ್ರನಾಥ ಪಕ್ಷದ ವಿರುದ್ಧ ಭಾರೀ ಸಿಟ್ಟಲ್ಲಿದ್ದಾರೆ.

ಈ ನಡುವೆ ಪಕ್ಷಕ್ಕೆ ಮರಳಿರುವ ಇನ್ನೊಬ್ಬ ಹಿರಿಯ ಜಗದೀಶ್ ಶೆಟ್ಟರ್ ಅವರಿಗೆ ಪಕ್ಷ ಮತ್ತೆ ಕೈಕೊಡುವ ಭಯ ಕಾಡತೊಡಗಿದೆ.

ಹಾವೇರಿ ಅಥವಾ ಧಾರವಾಡ ಟಿಕೆಟ್ ಬಯಸಿದ್ದ ಅವರಿಗೆ ಬೆಳಗಾವಿ ಟಿಕೆಟ್ ಕೊಡುವ ಮಾತು ನಡೆಯುತ್ತಿದೆ. ಆದರೆ ಅಲ್ಲಿ ಅವರ ಸ್ಪರ್ಧೆಗೆ ತೀವ್ರ ವಿರೋಧ ಇದೆ. ಸ್ಪರ್ಧಿಸಿದರೆ ಸೋಲು ಗ್ಯಾರಂಟಿ ಎಂಬಂತಹ ವಾತಾವರಣ ಕೂಡ ಇದೆ. ಇದು ಶೆಟ್ಟರ್ ರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಮಾಡಿದ ಆಟ ಎಂದು ಮಾಜಿ ಬಿಜೆಪಿ ಮುಖಂಡ ಲಕ್ಷ್ಮಣ ಸವದಿ ಹೇಳಿದ್ದೂ ಆಗಿದೆ.

ಪಕ್ಷದ ವರಿಷ್ಠರು ರಾಜ್ಯ ನಾಯಕತ್ವವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಅಸಮಾಧಾನ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ.

ಪಕ್ಷದ ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸುವ ನಿರ್ಧಾರ ಕೈಗೊಂಡರೂ ಅದನ್ನು ಮುಂಚಿತವಾಗಿಯೇ ಆಯಾ ನಾಯಕರನ್ನು ಕರೆದು ಗೌರವಯುತವಾಗಿ ತಿಳಿಸುವ ಬದಲು taken for granted ಎಂಬಂತೆ ಕೊನೆಯ ಕ್ಷಣದವರೆಗೂ ಏನನ್ನೂ ಹೇಳದೆ ನಿರ್ಲಕ್ಷ್ಯ ವಹಿಸುತ್ತಿರುವುದು ಅಪಮಾನ ಮಾಡಿದಂತೆ ಎಂಬ ಆಕ್ಷೇಪ ಬಲವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯ ಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಹಲವು ಮಾಜಿ ಸಚಿವರು, ಹಿರಿಯ ಮುಖಂಡರಿಗೆ ಟಿಕೆಟ್ ನೀಡುವುದಿಲ್ಲ ಎಂಬುದನ್ನು ಯಾರೊಬ್ಬರೂ ಅಧಿಕೃತವಾಗಿ ಕರೆದು ಹೇಳಲೇ ಇಲ್ಲ. ಅವರ ಹಿರಿತನಕ್ಕೆ ಸಲ್ಲಬೇಕಾದ ಗೌರವ ವರಿಷ್ಠರಿಂದ ಸಲ್ಲಲೇ ಇಲ್ಲ. ಈ ಕಾರಣಕ್ಕಾಗಿಯೇ ಹಲವರು ಪಕ್ಷ ತೊರೆದು ಹೋದದ್ದು ಕಣ್ಣಮುಂದೆಯೇ ಇದೆ.

ಈಗ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಂಥದ್ದೇ ಆರಂಭವಾಗಿದೆ.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಹಾಲಿ ಸಂಸದರಾದ ಪ್ರತಾಪ್ ಸಿಂಹ, ಕರಡಿ ಸಂಗಣ್ಣ, ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್

ಅವರಿಗೆ ಟಿಕೆಟ್ ನೀಡುವುದಿಲ್ಲ ಎಂಬುದನ್ನು ಮುಂಚಿತವಾಗಿಯೇ ಸುಳಿವು ನೀಡಿದ್ದರೆ ಇಷ್ಟೊಂದು ಗೊಂದಲ ಉಂಟಾಗುತ್ತಿರಲಿಲ್ಲ ಎಂಬ ಚರ್ಚೆ ಪಕ್ಷದಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಹಾಗಾಗಿ ಬಾಕಿ ಉಳಿದಿರುವ ಐದು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವುದು ಬಿಜೆಪಿ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ. ಈಗಾಗಲೇ ಟಿಕೆಟ್ ಘೋಷಣೆ ಮಾಡಿ ಸಾಕಷ್ಟು ಅಸಮಾಧಾನಿತರನ್ನು ಗಳಿಸಿಕೊಂಡಿರುವ ಬಿಜೆಪಿ ಮುಂದಿನ ಬಾರಿಯೂ ಎಡವಿದರೆ, ಅದು ಪಕ್ಷಕ್ಕೆ ಇರಿಸುಮುರಿಸು ಉಂಟು ಮಾಡುವ ಸಾಧ್ಯತೆಗಳೇ ಹೆಚ್ಚು ಅನ್ನೋದು ಅದಕ್ಕೆ ಚೆನ್ನಾಗಿ ಗೊತ್ತಿದೆ. ಆ ಬಗ್ಗೆ ಯೋಚಿಸಿರುವ ವರಿಷ್ಠರು ಒಂದು ಕ್ಷೇತ್ರದ ಅಭ್ಯರ್ಥಿಯನ್ನೇ ಬದಲಾಯಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಯಾವುದಕ್ಕೂ ಇಂದು ನಡೆಯಲಿರುವ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಯಾವ ನಿರ್ಧಾರಗಳು ಅಂತಿಮಗೊಳ್ಳುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ಸಿಇಸಿಗೆ ಪೂರ್ವಭಾವಿಯಾಗಿ ನಡೆಯುವ ಪ್ರಮುಖರ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಮಂಗಳವಾರ ದಿಲ್ಲಿಗೆ ತೆರಳಿದ್ದು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತಿತರ ಪ್ರಮುಖರ ಜತೆಗೆ ಚರ್ಚೆ ನಡೆಸಿದ್ದಾರೆ.

ಇದೆಲ್ಲದರ ಮಧ್ಯೆ ದಿಲ್ಲಿಯಲ್ಲಿ ಬಿಡಾರ ಹೂಡಿ ಟಿಕೆಟ್ ವಿಷಯದಲ್ಲಿ ವರಿಷ್ಠರ ಜತೆಗೆ ಸಮಾಲೋಚನೆಗೆ ಅಪೇಕ್ಷಿಸುತ್ತಿದ್ದ ಜಗದೀಶ್ ಶೆಟ್ಟರ್, ಸುಮಲತಾ ಅಂಬರೀಶ್ ರಾಜ್ಯಕ್ಕೆ ಮರಳಿದ್ದಾರೆ. ಬಾಕಿ ಇರುವ ಐದರ ಪೈಕಿ ರಾಯಚೂರು, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಹೆಸರು ಮಾತ್ರ ಪ್ರಕಟವಾಗುವ ಸಾಧ್ಯತೆ ಇದ್ದು ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳನ್ನು ಅಂತಿಮಗೊಳಿಸದೆ ಕೆಲವು ದಿನ ಕಾದುನೋಡುವ ಸಾಧ್ಯತೆ ಇದೆ ಎನ್ನಲಾಗಿದೆ.

ನಿನ್ನೆ ರಾಜ್ಯಕ್ಕೆ ಹಿಂದಿರುಗಿರುವ ಜಗದೀಶ್ ಶೆಟ್ಟರ್ ಅವರು ಮಾಧ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ' ಬಿಜೆಪಿ ವರಿಷ್ಠರು ಹಾಗೂ ಬೆಳಗಾವಿಯ ಸ್ಥಳೀಯ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಸಮಾಲೋಚನೆ ಮಾಡಿದ್ದೇನೆ. ಜೊತೆಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿಗಳೊಂದಿಗೆ ಮಾತನಾಡಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ಆಗಿದೆ . ಪ್ರಧಾನಿ ನೇತೃತ್ವದಲ್ಲಿ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಈ ವೇಳೆ ಅಭ್ಯರ್ಥಿಗಳ ಲಿಸ್ಟ್ ಫೈನಲ್ ಆಗುತ್ತದೆ. ಪಕ್ಷದ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಿದಾಗ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನುವ ವಿಶ್ವಾಸವಿದೆ. ನಾಳೆ ಅಥವಾ ನಾಡಿದ್ದು ಟಿಕೆಟ್ ಫೈನಲ್ ಆಗುತ್ತದೆ' ಎಂದಿದ್ದಾರೆ.

ಬೆಳಗಾವಿ ಅಭ್ಯರ್ಥಿಯ ಆಯ್ಕೆ ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿರುವಂತೆಯೇ ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ನಾಯಕರು ಮಂಗಳವಾರ ಬೆಂಗಳೂರಿಗೆ ತೆರಳಿ ಪಕ್ಷದ ರಾಜ್ಯ ನಾಯಕರ ಜತೆ ಅಭ್ಯರ್ಥಿ ಆಯ್ಕೆ ಕುರಿತು ಸುದೀರ್ಘ‌ ಚರ್ಚೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಶೆಟ್ಟರ್‌ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರಿಗೆ ಟಿಕೆಟ್‌ ನೀಡುವಂತೆ ಮನವಿ ಮಾಡಿದ್ದಾರೆ.

ರಾಜ್ಯದ ಟಿಕೆಟ್ ವಿಚಾರದಲ್ಲಿ ಪಕ್ಷದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ಕಡೆಗಣಿಸದೆಯೇ ನಿರ್ಧಾರ ಕೈಗೊಳ್ಳುತ್ತಾ ಬಂದಿರುವ ಬಿಜೆಪಿ ವರಿಷ್ಠರು, ಶೆಟ್ಟರ್ ಅವರು ಬೆಳಗಾವಿಯಿಂದಲೇ ಸ್ಪರ್ಧಿಸಬೇಕೆಂದು ಬಯಸಿರುವ ಯಡಿಯೂರಪ್ಪ ಅವರ ನಿರೀಕ್ಷೆಯಂತೆಯೇ ನಿರ್ಧಾರ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿರುವ ಬಿಜೆಪಿ ಹೈಕಮಾಂಡ್ ಇಂದಿನ ಸಭೆಯಲ್ಲಿ ರಾಜ್ಯ ಹಿರಿಯ ಬಿಜೆಪಿ ನಾಯಕರ ಜೊತೆ ಸಮಾಲೋಚನೆ ನಡೆಸಿ ಯಾವ ನಿರ್ಧಾರಕ್ಕೆ ಬರುತ್ತೆ ಅನ್ನೋದೇ ಸದ್ಯದ ಕುತೂಹಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!