ಸಂವಿಧಾನದ ವಿರುದ್ಧ ಸಂಚು ನಡೆದಿಲ್ಲವೇ?

Update: 2024-04-15 03:23 GMT

ಈ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮಹಾಪ್ರಭುಗಳು ಬೆವತಷ್ಟು ಹಿಂದೆಂದೂ ಬೆವತಿರಲಿಲ್ಲ. ಸೋಲಿನ ಭೀತಿಯಿಂದ ತತ್ತರಿಸಿದ ’ವಿಶ್ವಗುರು’ ಮಾನಸಿಕ ಸ್ತಿಮಿತ ಕಳೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಹೌಹಾರಿ ದೇಶದ ಉದ್ದಗಲಕ್ಕೆ ವಿಶೇಷ ವಿಮಾನದ ಮೂಲಕ ಹಾರಾಡುತ್ತಿದ್ದಾರೆ.

ಇಷ್ಟು ಮಾತ್ರವಲ್ಲ ಚುನಾವಣಾ ಪ್ರಚಾರವನ್ನು ಅವರು ಎಷ್ಟು ಕೆಳ ಮಟ್ಟಕ್ಕೆ ಒಯ್ದಿದ್ದಾರೆ ಎಂದರೆ, ಕಳೆದ ಸೆಷ್ಟಂಬರ್ ತಿಂಗಳಲ್ಲಿ ಶ್ರಾವಣ ಮಾಸದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದಿಲ್ಲಿಯ ಲಾಲು ಪ್ರಸಾಸೆ ಯಾದವ್ರ ನಿವಾಸಕ್ಕೆ ಭೇಟಿ ನೀಡಿ ಕುರಿ ಮಾಂಸದ ಅಡುಗೆ ಮಾಡಿಸಿ ತಿಂದರು ಇದರಿಂದ ಬಹುಸಂಖ್ಯಾತರ ಭಾವನೆಗೆ ನೋವಾಗಿದೆ. ಇದು ಮೊಗಲರ ಮನಸ್ಥಿತಿ’ ಎಂದು ಟೀಕಿಸಿದರು.

ಬಹುಶಃ ಭಾರತದ ಸ್ವಾತಂತ್ರ್ಯಾ ನಂತರದ ಇತಿಹಾಸದಲ್ಲಿ ಯಾವ ಪ್ರಧಾನಿ ಅಥವಾ ಮುಖ್ಯಮಂತ್ರಿಯಾಗಲಿ, ಇಷ್ಟು ಕೀಳು ಮಟ್ಟಕ್ಕೆ ಇಳಿದು ಯಾರ ಮನೆಯಲ್ಲಿ ಯಾವ ಊಟ ಮಾಡಿದರು ಎಂಬ ಬಗ್ಗೆ ಎಂದೂ ಕುಚೇಷ್ಟೆಯ ಮಾತು ಆಡಿಲ್ಲ.

10 ವರ್ಷ ಅಧಿಕಾರದಲ್ಲಿ ಇದ್ದಾಗ ವಿದೇಶ ಸುತ್ತಿದ್ದು, ಕಾರ್ಪೊರೇಟ್ ಕಂಪೆನಿಗಳ ಸೇವೆ ಮಾಡಿದ್ದು ಬಿಟ್ಟರೆ, ಯಾವ ಸಾಧನೆ ಮಾಡದ, ಓದಿನ ಸಂಸ್ಕಾರವಿಲ್ಲದ ವ್ಯಕ್ತಿ ಮಾತ್ರ ಇಂಥ ಮಾತುಗಳನ್ನು ಆಡಬಲ್ಲ. ನರೇಂದ್ರ ಮೋದಿಯವರು ಸೋಲಿನ ಭೀತಿಯಿಂದ ಕಂಗಾಲಾಗಿದ್ದಾರೆ. ಜನರ ಗಮನ ಬೇರೆಡೆ ಸೆಳೆಯಲು ಇಂಥ ಮಾತುಗಳನ್ನಾಡಿ ನಗೆಗೀ

ಡಾಗುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ 5 ವರ್ಷದೊಳಗಿನ ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ಶೇ. 10 ರಷ್ಟು ಹೆಚ್ಚಾಗಿದೆ. 15 ರಿಂದ 19 ವಯಸ್ಸಿನ ಹೆಣ್ಣುಮಕ್ಕಳಲ್ಲಿ ರಕ್ತ ಹೀನತೆಯ ಪ್ರಮಾಣ ಶೇ. 9.2 ಹೆಚ್ಚಾಗಿದೆ.ಇದರ ಬಗ್ಗೆ ಪ್ರಧಾನಿ ಮಾತನಾಡಲ್ಲ.

ಜನ ಬೆಂಬಲವನ್ನು ಎಂದೋ ಕಳೆದುಕೊಂಡ ಇವರು ಅಧಿಕಾರವನ್ನು ಉಳಿಸಿಕೊಂಡಿದ್ದು ಮತ್ತು ರಾಜ್ಯಗಳಲ್ಲಿ ಇರುವ ಬಿಜೆಪಿಯೇತರ ಸರಕಾರಗಳನ್ನು ಉರುಳಿಸಿ ಆಪರೇಷನ್ ಕಮಲದ ಮೂಲಕ ಆ ರಾಜ್ಯಗಳಲ್ಲಿ ಅಧಿಕಾರ ಹಿಡಿದದ್ದು ಸಿಬಿಐ , ಈ.ಡಿ. ಐಟಿಯಂಥ ತನಿಖಾ ಸಂಸ್ಥೆಗಳ ಬಲದಿಂದ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿಯನ್ನೇ ಜೈಲಿಗೆ ಹಾಕಿ, ಅವರು ಎಲ್ಲೂ ಪ್ರಚಾರಕ್ಕೆ ಹೋಗದಂತೆ ಮಾಡಿದ್ದು ಮತ್ತು ಪ್ರತಿಪಕ್ಷಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಚುನಾವಣಾ ಪ್ರಚಾರಕ್ಕೆ ಹಣವಿಲ್ಲದಂತೆ ಮಾಡಿದ್ದು ಇವರ ಫ್ಯಾಶಿಸ್ಟ್ ನಿರಂಕುಶ ವರ್ತನೆಗೆ ಉದಾಹರಣೆಯಾಗಿದೆ.

ಸುಳ್ಳು ಹೇಳುವುದರಲ್ಲಿ ನಮ್ಮ ಪ್ರಧಾನಿ ಜೊತೆ ಸ್ಪರ್ಧೆಗೆ ಇಳಿಯುವ ಸಾಮರ್ಥ್ಯ ಯಾರಿಗೂ ಇಲ್ಲ. ’ಭಾರತದ ಒಂದೇ ಒಂದು ಇಂಚು ನೆಲವನ್ನು ಚೀನಾ ಆಕ್ರಮಿಸಲು ಬಿಡುವುದಿಲ್ಲ ಎಂದು ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳಿದ್ದಾರೆ. ಆದರೆ, ಪೂರ್ವ ಲಡಾಖ್ ನಲ್ಲಿ ಚೀನಾ ಸೇನಾಪಡೆಗಳು ನುಸುಳಿವೆ. ಸಾವಿರಾರು ಚದರ ಕಿ.ಮೀ.ನಷ್ಟು ಪ್ರದೇಶವನ್ನು ಭಾರತ ಬಿಟ್ಟುಕೊಟ್ಟಿದೆ ಎಂಬುದು ಲಡಾಖ್ ನಿವಾಸಿಗಳು ಮತ್ತು ಪ್ರತಿಪಕ್ಷಗಳ ಆರೋಪಕ್ಕೆ ಪ್ರಧಾನಿ ಬಳಿ ಉತ್ತರವಿಲ್ಲ. ಬಹಿರಂಗವಾಗಿ ಮೋದಿಯವರು ಇದನ್ನು ನಿರಾಕರಿಸುತ್ತಾರಾದರೂ ಭಾರತ ಸರಕಾರ ಲಡಾಖ್ನ ಹಲವು ಪ್ರದೇಶಗಳನ್ನು ಚೀನಾಕ್ಕೆ ಬಿಟ್ಟುಕೊಟ್ಟಿರುವುದು ನಿಜ.ಬಫರ್ ಝೋನ್ ಹೆಸರಿನಲ್ಲಿ ಕೇಂದ್ರ ಸರಕಾರ ನೀಡಿರುವ ಪ್ರಕಟನೆಗಳೇ ಇದಕ್ಕೆ ಸಾಕ್ಷಿ.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತದೆ ಎಂಬ ಪ್ರತಿಪಕ್ಷ ಗಳ ಆರೋಪವನ್ನು ತಳ್ಳಿ ಹಾಕಿರುವ ಮೋದಿಯವರು ತಮ್ಮ ಪಕ್ಷ ಸಂವಿಧಾನವನ್ನು ಪೂಜ್ಯ ಭಾವನೆಯಿಂದ ನೋಡುತ್ತದೆ ಎಂಬ ಇನ್ನೊಂದು ಸುಳ್ಳು ಹೇಳಿದ್ದಾರೆ. ವಾಸ್ತವವಾಗಿ ಸಂಘ ಪರಿವಾರ ಬಾಬಾಸಾಹೇಬರ ಸಂವಿಧಾನವನ್ನು ಎಂದೂ ಒಪ್ಪಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಬಂದರೆ ಸಂವಿಧಾನವನ್ನು ಬದಲಿಸುವುದಾಗಿ ಬಿಜೆಪಿ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಹೇಳಿದ್ದು ಅವರ ವೈಯಕ್ತಿಕ ಅಭಿಪ್ರಾಯವಲ್ಲ. ಸಂಘದ ಬೈಠಕ್ಗಳಲ್ಲಿ ನಡೆದ ಮಾತು ಕತೆಗಳನ್ನೇ ಅವರು ಬಹಿರಂಗವಾಗಿ ಹೇಳಿದ್ದಾರೆ.

ಭಾರತದ ಸಂವಿಧಾನವನ್ನು ಆರೆಸ್ಸೆಸ್ ಎಂದಿಗೂ ಒಪ್ಪಿಲ್ಲ. ಪ್ರಜಾಪ್ರಭುತ್ವ ಎಂಬ ಶಬ್ದ ಕೇಳಿದರೆ ಅದಕ್ಕೆ ಆಗುವುದಿಲ್ಲ. ಪ್ರಜಾಪ್ರಭುತ್ವ ಮತ್ತು ಸಮಾಜವಾದ ಎಂಬ ಶಬ್ದಗಳು ಈ ದೇಶಕ್ಕೆ ಹೊರಗಿನಿಂದ ಬಂದ ವಿಚಾರಧಾರೆಗಳೆಂದು ಆರ್ಸ್ಸೆಸ್ ನ ಎರಡನೇ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ ಹೇಳುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬರುವುದು ಅವರಿಗೆ ಗುರಿಯಾಗಿರಲಿಲ್ಲ. ಹಿಂದೂ ರಾಷ್ಟ್ರ ನಿರ್ಮಾಣ ಅವರ ಕನಸಾಗಿತ್ತು. ಅಂತಲೇ ಸ್ವಾತಂತ್ರ್ಯ ಚಳವಳಿಯಲ್ಲಿ ಸಂಘ ಭಾಗವಹಿಸಲಿಲ್ಲ. ಸ್ವಾತಂತ್ರ್ಯಾ ನಂತರ ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನ, ಇವರ ಹಿಂದೂ ರಾಷ್ಟ್ರ ನಿರ್ಮಾಣದ ಕನಸಿಗೆ ಅಡ್ಡಿಯಾಗಿತ್ತು. ಅಂತಲೇ ತಮಗೆ ಅಡ್ಡಿಯಾದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ನೆಲಸಮಗೊಳಿಸುವುದು ಸಂಘ ಪರಿವಾರದ ಕಾರ್ಯಸೂಚಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತೋರಿಕೆಗೆ ಒಪ್ಪಿಕೊಂಡು ಅದರೊಳಗೆ ಇದ್ದುಕೊಂಡು ಸಂಸತ್ತಿನಲ್ಲಿ ಬಹುಮತ ಗಳಿಸಿ, ಅದನ್ನು ನಾಶಪಡಿಸಲು ಸಂಘ ಪರಿವಾರ ತಂತ್ರ ರೂಪಿಸುತ್ತಲೇ ಬಂದಿದೆ.

ಡಾ. ಅಂಬೇಡ್ಕರ್ ನೇತೃತ್ವದ ರಾಜ್ಯಾಂಗ ರಚನಾ ಸಮಿತಿ ಸಿದ್ಧಪಡಿಸಿದ ಸಂವಿಧಾನ ಈಗ ನಮ್ಮ ದೇಶವನ್ನು ಮುನ್ನಡೆಸುವ ಬೆಳಕಾಗಿದೆ. ಇಲ್ಲಿ ಎಷ್ಟೇ ಜಾತಿ, ಧರ್ಮಗಳಿರಲಿ ಪ್ರಜಾಪ್ರಭುತ್ವವೇ ನಮ್ಮ ರಾಷ್ಟ್ರಧರ್ಮವಾಗಿದೆ. ಸಂವಿಧಾನವೇ ನಮ್ಮ ಧರ್ಮಗ್ರಂಥವಾಗಿದೆ. ಇದನ್ನು ಒಪ್ಪಿಕೊಳ್ಳಲು ಸಂಘ ಪರಿವಾರ ಇಂದಿಗೂ ಸಿದ್ಧವಿಲ್ಲ. ಈ ಸಂವಿಧಾನದ ಬದಲಾಗಿ, ಮನುಸ್ಕೃತಿಯ ಕಾನೂನನ್ನು ದೇಶ ಅಂಗೀಕರಿಸಬೇಕೆಂದು ಆರೆಸ್ಸೆಸ್ ಪ್ರತಿಪಾದಿಸುತ್ತ ಬಂದಿದೆ. 1949ರ ಜನವರಿ 26ರಂದು ಭಾರತೀಯ ಸಂವಿಧಾನ ರಚನಾ ಸಭೆ ಅಂತಿಮವಾಗಿ ನಮ್ಮ ಸಂವಿಧಾನವನ್ನು ಸ್ವೀಕರಿಸಿತು. ಆಗ ಈ ಸಂವಿಧಾನ ಟೀಕಿಸಿ, ಆರೆಸ್ಸೆಸ್ ಮುಖಪತ್ರವಾದ ಆರ್ಗನೈಸರ್ಕಟುವಾದ ಲೇಖನ ಬರೆಯಿತು. ಸಂವಿಧಾನ ಎಂಬ ಶೀರ್ಷಿಕೆಯಡಿ ಬರೆದ ಸಂಪಾದಕೀಯದಲ್ಲಿ, ಅಂಬೇಡ್ಕರ್ ನೇತೃತ್ವದಲ್ಲಿ ರೂಪುಗೊಂಡ ಹೊಸ ಸಂವಿಧಾನದಲ್ಲಿ ಭಾರತೀಯ ಎಂಬುದಕ್ಕೆ ಸ್ಥಾನವೇ ಇಲ್ಲ. ಇದು ಅದರಲ್ಲಿನ ಅಸಂಗತ ಸಂಗತಿ. ನಮ್ಮ ಪ್ರಾಚೀನ ಭಾರತದ ನಿಯಮಗಳು, ಭಾವನೆಗಳು ಮತ್ತು ಪದನಾಮಗಳಿಗೆ ಈ ಸಂವಿಧಾನದಲ್ಲಿ ಜಾಗವಿಲ್ಲ. ಬೇರೆ ದೇಶಗಳ ಕಾನೂನುಗಳಿಗಿಂತ ಮುಂಚೆಯೇ ಮನುಧರ್ಮ ನಮ್ಮಲ್ಲಿ ನೆಲೆಗೊಂಡಿತ್ತು. ಈ ಸಂವಿಧಾನ ಅದನ್ನು ಪರಿಗಣಿಸಿಲ್ಲ ಎಂದು ಟೀಕಿಸಲಾಗಿತ್ತು.

ಹಿಂದುತ್ವವಾದಿ ಬಲಪಂಥೀಯರಿಗೆ ಮನುಸ್ಮತಿ ಅತ್ಯಂತ ಪವಿತ್ರವಾದ ಗ್ರಂಥ ಎಂಬುದನ್ನು ಹಿಂದುತ್ವ ಸಿದ್ದಾಂತದ ಜನಕ ವಿನಾಯಕ ದಾಮೋದರ ಸಾವರ್ಕರ್ ಕೂಡ ಹೇಳಿದ್ದಾರೆ. ಮನುಸ್ಮತಿಗಿಂತ ಮುಂಚೆಯೇ ಈ ದೇಶದಲ್ಲಿದ್ದ ಬೌದ್ಧ ಮತ್ತು ಜೈನ ಧರ್ಮಗಳ ಬಗ್ಗೆ ಮತ್ತು 12ನೇ ಶತಮಾನದಲ್ಲಿ ಬಂದ ಶರಣ ಚಳವಳಿ ಬಗ್ಗೆ, ಮಹಾರಾಷ್ಟ್ರದ ಸಂತ ಚಳವಳಿ ಬಗ್ಗೆ ಎಲ್ಲಿಯೂ ಉಲ್ಲೇಖಿಸದ ಸಾವರ್ಕರ್ ಮನುಸ್ಮೃತಿ ಹಿಂದೂ ರಾಷ್ಟ್ರದ ಆರಾಧ್ಯ ಗ್ರಂಥವೆಂದು ಹೇಳುತ್ತಾರೆ. 1950ರ ಜನವರಿ 26ರಂದು ಭಾರತದೇಶವು ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯವೆಂದು ಘೋಷಿಸಲ್ಪಟ್ಟಿತು. ಅದರ ಮುನ್ನಾ ದಿನಗಳಲ್ಲಿ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿದ್ದ ಶಂಕರ ಸುಬ್ಬ ಅವರ ಮೂಲಕ ಆರೆಸ್ಸೆಸ್ ಮನುಧರ್ಮವನ್ನು ಕೂಡಲೇ ಜಾರಿಗೆ ತರಬೇಕೆಂದು ಒತ್ತಾಯಿಸಿತ್ತು.

ಭಾರತದ ಗಣರಾಜ್ಯವನ್ನು ಮನುಧರ್ಮ ಶಾಸ್ತ್ರ ಆಧಾರಿತ ಬ್ರಾಹ್ಮಣ್ಯ ಅಧಿನಾಯಕ ವ್ಯವಸ್ಥೆಯನ್ನಾಗಿ ಬದಲಿಸಬೇಕು ಎಂಬುದು ಸಂಘದ ಹಳೆಯ ಕನಸು. ಕೊನೆಯ ಆಂಗ್ಲ ಮರಾಠಾ ಯುದ್ಧದಲ್ಲಿ ಪುಣೆಯ ಪೇಶ್ವೆ ಸಾಮ್ರಾಜ್ಯ ಕುಸಿದು ಬಿದ್ದ ನಂತರ ಮಹಾರಾಷ್ಟ್ರದಲ್ಲಿ ಜ್ಯೋತಿಬಾ ಫುಲೆ, ಶಾಹು ಮಹಾರಾಜ, ನಂತರ ಅಂಬೇಡ್ಕರ್ ಸಾಮಾಜಿಕ ಸಮಾನತೆಯ ಜ್ಯೋತಿ ಹೊತ್ತಿಸಿದರು. ಇದರಿಂದ ದಿಗ್ಭ್ರ ಮೆಗೊಂಡ ಪೇಶ್ವೆ ಪಳೆಯುಳಿಕೆಗಳು ಹಿಂದುತ್ವದ ವೇಷ ಹಾಕಿ, ಆರೆಸ್ಸೆಸ್ ಎಂಬ ಹೊಸ ಸಂಘಟನೆ ಕಟ್ಟಿದವು. ಪೇಶ್ವೆಗಳ ಕೇಸರಿ ಬಾವುಟವೇ ಇವರ ಬಾವುಟವಾಯಿತು. ಜರ್ಮನಿ ಮತ್ತು ಇಟಲಿಯಿಂದ ತಂದ ಫ್ಯಾಶಿಸ್ಟ್ ಮತ್ತು ನಾಝಿ ಸಿದ್ಧಾಂತಕ್ಕೆ ಮನುವಾದದ ಲೇಪನ ಮಾಡಿ, ಹಿಂದುತ್ವದ ಸಿದ್ಧಾಂತ ಹುಟ್ಟು ಹಾಕಿದರು.

ಈ ಹಿನ್ನೆಲೆಯಲ್ಲಿ ದೇಶದ ಇಂದಿನ ವಿದ್ಯಮಾನಗಳನ್ನು ಗಮನಿಸಬೇಕಿದೆ. ಈಗಿರುವ ಸರ್ವರಿಗೂ ಸಮಾನಾವಕಾಶ ಒದಗಿಸಿದ ಸಂವಿಧಾನವನ್ನು ಒಮ್ಮೆಲೇ ನಾಶ ಮಾಡಲು ಬರುವುದಿಲ್ಲ ಎಂದು ಅದನ್ನು ಹಂತಹಂತವಾಗಿ ಮುಳುಗಿಸುವ ಹುನ್ನಾರ ನಡೆದಿದೆ. ಮೋದಿಯವರು ಅಧಿಕಾರಕ್ಕೆ ಬಂದ ನಂತರ ಸಂವಿಧಾನದ ಆಧಾರಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ಹಂತಹಂತವಾಗಿ ನಿಷ್ಕ್ರಿಯಗೊಳಿಸಲಾಗುತ್ತಿದೆ. ಚುನಾವಣೆ ಮೂಲಕ ಶಾಸಕಾಂಗ ಗೆದ್ದುಕೊಂಡರೂ ನ್ಯಾಯಾಂಗ ತಮ್ಮ ಹಿಡಿತಕ್ಕೆ ಸಿಗಲಿಲ್ಲವೆಂದು ಇವರಿಗೆ ಅಸಮಾಧಾನವಿದೆ. ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಿಸುವ ಅಧಿಕಾರವನ್ನು ತೆಗೆದುಕೊಳ್ಳಲು ಸರಕಾರ ಬಯಸಿದೆ. ಇದಕ್ಕೆ ಪ್ರತಿಯಾಗಿ ಸರ್ವೋಚ್ಚ ನ್ಯಾಯಾಲಯ ಮತ್ತು ವಿವಿಧ ಹೈಕೋರ್ಟ್ ಗಳ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸರಕಾರ ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ನ್ಯಾಯಮೂರ್ತಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ನ್ಯಾಯಮೂರ್ತಿಗಳ ಕೊರತೆ ಎದ್ದು ಕಾಣುತ್ತಿದೆ. ಸುಪ್ರೀಂ ಕೋರ್ಟ್

ವೊಂದರಲ್ಲೇ ನ್ಯಾಯಮೂರ್ತಿಗಳ ಕೊರತೆಯಿಂದಾಗಿ 59 ಸಾವಿರ ಪ್ರಕರಣಗಳು ಬಾಕಿಯುಳಿದಿವೆ. ಹೈಕೋರ್ಟ್

ಗಳಲ್ಲಿ 40 ಲಕ್ಷ ಮತ್ತು ಕೆಳಗಿನ ಕೋರ್ಟ್ ಗಳಲ್ಲಿ 2.5 ಕೋಟಿ ಪ್ರಕರಣಗಳು ಬಾಕಿಯುಳಿದಿವೆ. ಆದರೂ ನ್ಯಾಯಮೂರ್ತಿ ಗಳ ನೇಮಕಾತಿಗೆ ಒಪ್ಪಿಗೆ ನೀಡಲು ಮೋದಿ ಸರಕಾರ ಸಿದ್ಧವಿಲ್ಲ.

ಕಾಂಗ್ರೆಸ್ ಮುಕ್ತ ಭಾರತದ ಘೋಷಣೆಯಡಿ ಪ್ರತಿಪಕ್ಷ ಮುಕ್ತ ಭಾರತವನ್ನು ಸರ್ವಾಧಿಕಾರಿ ಫ್ಯಾಶಿಸ್ಟ್ ಆಡಳಿತ ಹೇರಲು ಹೊರಟಿರುವ ಸರಕಾರ ಸಂವಿಧಾನಾತ್ಮಕ ಸಂಸ್ಥೆಗಳನ್ನು ಒಂದೊಂದಾಗಿ ನಿಷ್ಕ್ರಿಯಗೊಳಿಸುತ್ತಿದೆ. ರಿಸರ್ವ್

ಬ್ಯಾಂಕ್ ಗಮನಕ್ಕೆ ತಾರದೇ ನೋಟು ಅಮಾನ್ಯೀಕರಣ ಮಾಡಿದ್ದು, ಯಾವುದೇ ಪೂರ್ವಸಿದ್ಧತೆಯಿಲ್ಲದೇ ಜಿಎಸ್ಟಿ

ಜಾರಿಗೆ ತಂದಿದ್ದು, ಸಂಘ ಪರಿವಾರದ ಸಿದ್ಧಾಂತ ಒಪ್ಪದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವನ್ನು ನಾಶ ಮಾಡಲು ಯತ್ನಿಸುತ್ತಿರುವುದು ಇದೆಲ್ಲವೂ ಸರಕಾರದ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿವೆ.

ಭಾರತದ ಜನತೆ ಚುನಾಯಿಸಿದ ಸಂಸತ್ತಿಗೆ ಪ್ರತಿಯಾಗಿ ಸಂಘ ಪರಿವಾರ ಧರ್ಮ ಸಂಸತ್ತು ಸ್ಥಾಪಿಸಿದೆ. ಈ ಧರ್ಮ ಸಂಸತ್ತು ರಹಸ್ಯವಾಗಿ ಮನುಸ್ಮತಿ ಆಧಾರಿತ ಸಂವಿಧಾನ ರೂಪಿಸಿದ್ದು, ಅದನ್ನು ದೇಶದ ಮೇಲೆ ಹೇರುವ ಸಂಚು ನಡೆಯುತ್ತಿದೆ. ಈ ಧರ್ಮ ಸಂಸತ್ತು ಇತ್ತೀಚೆಗೆ ಉಡುಪಿಯಲ್ಲಿ ಸಮಾವೇಶಗೊಂಡಾಗ, ಹಿಂದೂಗಳು ತಮ್ಮ ರಕ್ಷಣೆಗಾಗಿ ತಲವಾರ್ ಹಿಡಿಯಬೇಕೆಂದು ಸಂಘದ ನಾಯಕರೊಬ್ಬರು ಕರೆ ನೀಡಿದ್ದರು. ಈ ದೇಶದ ಎಲ್ಲಾ ಪ್ರಜೆಗಳ ರಕ್ಷಣೆಗೆ ಪೊಲೀಸ್ ಪಡೆ ಮತ್ತು ರಕ್ಷಣಾ ಪಡೆಗಳು ಇರುವಾಗ, ಅದಕ್ಕೆ ಪರ್ಯಾಯವಾಗಿ ಪ್ರಜೆಗಳು ತಲವಾರ ಹಿಡಿಯಬೇಕೆಂದು ಕರೆ ನೀಡುವುದು ರಾಷ್ಟ್ರದ್ರೋಹವಲ್ಲದೆ ಮತ್ತೇನು?. ಇವರಿಗೂ ಕಾಶ್ಮೀರದ ಭಯೋತ್ಪಾದಕರಿಗೂ ಏನು ವ್ಯತ್ಯಾಸವಿದೆ? ಅಂತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವರನ್ನು ಉಗ್ರಗಾಮಿಗಳೆಂದು ಕರೆದ ಕೂಡಲೇ ಇವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ.

ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಗೋರಕ್ಷಣೆ ಹೆಸರಿನಲ್ಲಿ ನಡೆದಿರುವ ಕಗ್ಗೊಲೆಗಳು, ಅದನ್ನು ಸಮರ್ಥಿಸುವ ಹೇಳಿಕೆಗಳು, ಇದನ್ನು ತಡೆಯಲಾಗದ ಪ್ರಧಾನಿಯ ಮೊಸಳೆ ಕಣ್ಣೀರು ಇವೆೆಲ್ಲವನ್ನೂ ದೇಶದ ಜನರು ನೋಡುತ್ತಿದ್ದಾರೆ. ಪ್ರಜಾಪ್ರಭುತ್ವವನ್ನು ಹೆಸರಿಗೆ ಇಟ್ಟುಕೊಂಡು ಸಂವಿಧಾನವನ್ನು ಸರ್ವನಾಶ ಮಾಡುವ ಭಾರೀ ಸಂಚು ಈ ದೇಶದಲ್ಲಿ ನಡೆದಿದೆ. ನಾವು ಸಂವಿಧಾನವನ್ನು ಬದಲಿಸಲು ಬಂದಿದ್ದೇವೆಯೆಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಬಹಿರಂಗವಾಗಿ ಹೇಳಿದ್ದನ್ನು ಇಲ್ಲಿ ಗಮನಿಸಬಹುದು.

ಇದೆಲ್ಲ ಒತ್ತಟ್ಟಿಗಿರಲಿ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಸುಪ್ರೀಂ ಕೋರ್ಟಿನ ನಾಲ್ವರು ನ್ಯಾಯಮೂರ್ತಿ ಗಳು ಬಹಿರಂಗವಾಗಿ ಹೇಳಿದರೆ, ಅವರನ್ನು ತೇಜೋವಧೆ ಮಾಡಿ, ಬಾಯಿ ಮುಚ್ಚಿಸುವ ಮಸಲತ್ತು ನಡೆಯಿತು. ಈ ನ್ಯಾಯಮೂರ್ತಿ ಗಳು ಪ್ರಾಮಾಣಿಕತೆಗೆ ಹೆಸರಾದವರು ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯಸ್ವಾಮಿಯವರೇ ಹೊಗಳಿದ್ದಾರೆ. ಇವರು ಯಾಕೆ ಬೀದಿಗೆ ಬಂದರು ಎಂಬ ಬಗ್ಗೆ ಅಧಿಕಾರದಲ್ಲಿದ್ದವರು ಸಹಾನುಭೂತಿಯಿಂದ ಯೋಚಿಸಬೇಕಿದೆ. ಇವರು ಬರೀ ಬೀದಿಗೆ ಬಂದಿಲ್ಲ. ಭಾರತದ ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

ನರೇಂದ್ರ ಮೋದಿ ಸರಕಾರ ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ತನ್ನ ಹಿತಾಸಕ್ತಿ ರಕ್ಷಿಸಿಕೊಳ್ಳಲು ನ್ಯಾಯಾಂಗವನ್ನು ಬಳಸಿಕೊಳ್ಳುತ್ತಿದೆ ಎಂಬುದು ಪ್ರತಿಪಕ್ಷದ ಆರೋಪ ಮಾತ್ರವಾಗಿ ಉಳಿದಿಲ್ಲ. ಅಮಿತ್ ಶಾ ಗುಜರಾತ್ ಗೃಹ ಮಂತ್ರಿಯಾಗಿದ್ದಾಗ ನಡೆದ ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಮೂರ್ತಿ ಲೋಯಾ ಅವರ ಸಂಶಯಾಸ್ಪದ ಸಾವಿನ ಪ್ರಕರಣ ಈಗ ಸರ್ವೋಚ್ಚ ನ್ಯಾಯಾಲಯದ ಅಂಗಳದಲ್ಲಿದೆ. ಈ ಪ್ರಕರಣವನ್ನು ಹಿಂದಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ತಮ್ಮೊಂದಿಗೆ ಸಮಾಲೋಚಿಸದೆ ಮನಸೋಇಚ್ಛೆ ಇನ್ನೊಂದು ಪೀಠಕ್ಕೆ ವರ್ಗಾಯಿಸಿದ್ದಾರೆಂದು ನಾಲ್ವರು ನ್ಯಾಯಮೂರ್ತಿ ಗಳು ಮಾಡಿದ್ದ ಆರೋಪದಲ್ಲಿ ಹುರುಳಿಲ್ಲದಿಲ್ಲ. ಈ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಗುಜರಾತ್ ನಿಂದ ಗಡಿಪಾರು ಮಾಡಲಾಗಿತ್ತು.

ಮೋದಿ ಅಧಿಕಾರಕ್ಕೆ ಬಂದ ಬಳಿಕ ದೋಷಮುಕ್ತರಾಗಲು ನ್ಯಾಯಾಂಗವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ.

ಒಟ್ಟಾರೆ, ಈ ವಿದ್ಯಮಾನಗಳಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಭಾರತದ ಜನಸಾಮಾನ್ಯರು ಶಾಸಕಾಂಗ ಮತ್ತು ಕಾರ್ಯಾಂಗ ಗಳಂಥ ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ಈಗಾಗಲೇ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಇರುವ ಏಕೈಕ ಭರವಸೆ ನ್ಯಾಯಾಂಗ. ಸುಪ್ರೀಂ ಕೋರ್ಟಿಗೆ ಹೋದರೆ, ನ್ಯಾಯ ಸಿಗಬಹುದು ಎಂಬ ನಂಬಿಕೆ ಅವರಿಗೆ ಇದೆ. ಆ ನಂಬಿಕೆಯನ್ನು ನಾಶ ಪಡಿಸುವುದು ಸಂಘ ಪರಿವಾರ ನಿಯಂತ್ರಿತ ಮೋದಿ ಸರಕಾರದ ಹುನ್ನಾರವಾಗಿದೆ.

ಈ ರೀತಿ ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ಜನರು ಹಂತಹಂತವಾಗಿ ನಂಬಿಕೆ ಕಳೆದುಕೊಳ್ಳುವಂತೆ ಮಾಡಿ, ಕೊನೆಗೆ ಈ ಸಂವಿಧಾನವೇ ನಿರುಪಯುಕ್ತವೆಂದು ಜನರು ರೋಸಿ ಹೋಗುವಂತೆ ಮಾಡಿ, ಕೊನೆಗೆ ದೇಶದ ಮೇಲೆ ಶ್ರೇಣೀಕೃತ ಜಾತಿ ಪದ್ಧತಿಯನ್ನು ಪ್ರತಿಪಾದಿಸುವ ಮನುವಾದವನ್ನು ಹೇರುವುದು ಸಂಘ ಪರಿವಾರದ ಒಳಸಂಚು ಆಗಿದೆ. ಆ ಸಂಚಿನ ಭಾಗವಾಗಿಯೇ ಜನತಂತ್ರದ ಸಂಸ್ಥೆಗಳನ್ನು ಇಂಚುಇಂಚಾಗಿ ಕೊಲ್ಲುವ ಕೆಲಸ ನಡೆದಿದೆ.

ಒಮ್ಮೆ ಸಂವಿಧಾನದ ಮೇಲೆ ನಂಬಿಕೆ ಕಳೆದುಕೊಂಡರೆ, ಆ ಅವಕಾಶ ಬಳಸಿಕೊಂಡು ಪೇಜಾವರ ಸ್ವಾಮೀಜಿ ನೇತೃತ್ವದ ಸಂಘ ನಿಯಂತ್ರಿತ ಧರ್ಮ ಸಂಸತ್ತು ರೂಪಿಸಿದ ಪರ್ಯಾಯ ಸಂವಿಧಾನವನ್ನು ಅಂದರೆ ಮನುವಾದವನ್ನು ದೇಶದ ಮೇಲೆ ಹೇರುವುದು ಇವರ ಮಸಲತ್ತು ಆಗಿದೆ. ಅದನ್ನು ಈಗ ತಡೆಯದಿದ್ದರೆ, ಈ ಭಾರತ ಒಡೆದು ಚೂರುಚೂರಾಗಿ ಹೋಗುತ್ತದೆ. ಅದಕ್ಕೆ ಈ ಬಾರಿ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಇದೇ ಕೊನೆಯ ಚುನಾವಣೆಯಾಗಲಿದೆ ಎಂಬ ಪ್ರತಿಪಕ್ಷ ನಾಯಕರು ಹಾಗೂ ಸಂವಿಧಾನ ಪರಿಣಿತರ ಆತಂಕದಲ್ಲಿ ಹುರುಳಿದೇ ಇಲ್ಲ.

Writer - ವಾರ್ತಾಭಾರತಿ

contributor

Editor - Ismail

contributor

Byline - ಸನತ್ ಕುಮಾರ ಬೆಳಗಲಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!