ಡಾ.ಅಂಬೇಡ್ಕರ್ ಹಿಂದುಳಿದ ಜಾತಿಗಳಿಗೆ ಮಾಡಿದ್ದೇನು?

Update: 2024-05-13 04:54 GMT

ಯಥಾಸ್ಥಿತವಾದಿಗಳ ವಿರುದ್ಧ ದಲಿತರು ನಿರಂತರವಾಗಿ ಬಂಡಾಯವೆದ್ದಿರುವಾಗ ಹಿಂದುಳಿದ ಜಾತಿಗಳು ಯಥಾಸ್ಥಿತವಾದಿಗಳ ಕಪಿಮುಷ್ಟಿಯಲ್ಲಿ ಸಿಕ್ಕಿಬಿದ್ದಿರುವುದು ಉಲ್ಲೇಖಾರ್ಹ. ಸಾಮಾಜಿಕ ಮೇಲುಗೈ ಎಂಬ ಭ್ರಮೆಯಿಂದ ಹಿಂದುಳಿದ ಜಾತಿಗಳು ಡಾ.ಅಂಬೇಡ್ಕರ್ ಅವರನ್ನು ತಮ್ಮ ನಾಯಕನ ಬದಲು ದಲಿತರ ನಾಯಕ ಎಂದು ಪರಿಗಣಿಸುತ್ತಿವೆ. ಏಕೆಂದರೆ ಬಹುತೇಕ ಹಿಂದುಳಿದ ಜಾತಿಗಳು ಮೇಲ್ಜಾತಿ ಹಿಂದೂಗಳ ಪ್ರಭಾವಕ್ಕೆ ಒಳಗಾಗಿದ್ದು, ಡಾ.ಅಂಬೇಡ್ಕರ್ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ದಲಿತರೊಂದಿಗೆ ಒಗ್ಗಟ್ಟನ್ನು ಸ್ಥಾಪಿಸದಂತೆ ನಿರಂತರವಾಗಿ ನೋಡಿಕೊಳ್ಳಲಾಗುತ್ತಿದೆ. ಜಾತಿ ರಾಜಕಾರಣ ಮಾಡುತ್ತಾ ಹಿಂದುಳಿದ ಮತ್ತು ದಲಿತರ ನಡುವಿನ ಈ ಅಂತರಕ್ಕೆ ದಲಿತ ಮತ್ತು ಹಿಂದುಳಿದ ನಾಯಕರೂ ಕಾರಣರಾಗಿದ್ದಾರೆ.

ವರ್ತಮಾನದ ಭಾರತದಲ್ಲಿ ಮಹಾಪುರುಷರನ್ನು ಅವರ ಕೊಡುಗೆಗಳನ್ನು ಪರಿಗಣಿಸದೆ ಪ್ರಸಕ್ತ ತಮಗೆ ಬೇಕಾದ ಹಾಗೆ ಅಸ್ತಿತ್ವದಲ್ಲಿರುವ ಹಿತಾಸಕ್ತಿಗಳೊಂದಿಗೆ ಸಂಯೋಜಿಸುವುದು ಹೆಚ್ಚು ಪ್ರಚಲಿತವಾಗುತ್ತಿದೆ. ಈ ಪ್ರಕ್ರಿಯೆಯು ಜನರನ್ನು ಅವರ ಮಹಾಪುರುಷರ ಹಿನ್ನೆಲೆ ಮತ್ತು ಪ್ರಮುಖ ನಂಬಿಕೆಗಳಿಂದ ವಂಚಿತಗೊಳಿಸಲಾಗುತ್ತಿದೆ. ಇದಕ್ಕೆ ಅಂಬೇಡ್ಕರರು ಹೊರತಾಗಿಲ್ಲ, ಅವರನ್ನು ಅತಿರೇಕದ ರಾಷ್ಟ್ರೀಯತೆಯ ರಾಜಕೀಯ ವ್ಯವಸ್ಥೆಯೊಳಗೆ ಸೇರಿಸುವುದು ಹೊಸ ಬೌದ್ಧಿಕ ಪ್ರಕ್ರಿಯೆಯ ಪ್ರಾರಂಭವನ್ನು ಸೂಚಿಸುತ್ತಿದೆ. ಭಾರತದ ಚರಿತ್ರೆಯ ನಿರೂಪಣೆಯಲ್ಲಿ ಮೇಲ್ಜಾತಿ ಪ್ರಭುತ್ವಗಳನ್ನು ವೈಭವೀಕರಿಸುವ ಮತ್ತು ಶೋಷಿತ ಜನವರ್ಗಗಳ ಕೊಡುಗೆಯನ್ನು ನಿರ್ಲಕ್ಷಿಸುವ ಕೆಲಸವನ್ನು ಇತಿಹಾಸಕಾರರು ಇದುವರೆಗೂ ಮಾಡಿದ್ದಾರೆ. ಬ್ರಾಹ್ಮಣ್ಯದ ರಾಜಕೀಯದ ಸಂದರ್ಭದಲ್ಲಿ ಶ್ರೇಷ್ಠ ಮಾನವತಾವಾದಿ ವ್ಯಕ್ತಿಗಳನ್ನು ತಮ್ಮ ಸೈದ್ಧಾಂತಿಕ ನಾಯಕರ ಆದರ್ಶಗಳನ್ನು ಸಾಕಾರಗೊಳಿಸಲು ಕಾಸ್ಮೆಟಿಕ್ ಸರ್ಜರಿ ಮೂಲಕ ಬಲವಂತವಾಗಿ ರೂಪಾಂತರಿಸಿ ಡಿಜಿಟಲ್ ಮ್ಯಾನಿಪುಲೇಟ್ ಮಾಡುವ ಅಭ್ಯಾಸವು ಈಗ ಅಂಬೇಡ್ಕರ್ ಅವರನ್ನು ಸುತ್ತುವರಿದಿದೆ. ಇದಕ್ಕೂ ಮೊದಲು ದಲಿತರು ಮತ್ತು ಹಿಂದುಳಿದ ವರ್ಗಗಳ ನಡುವೆ ದ್ವೇಷ ಬಿತ್ತುವ ಪ್ರಕ್ರಿಯೆಯಲ್ಲಿ ಸ್ವಲ್ಪ ಮುನ್ನಡೆ ಸಾಧಿಸಿದರು. ಆದರೆ ಪ್ರಸಕ್ತ ದಲಿತರು ಮತ್ತು ಮುಸ್ಲಿಮರ ನಡುವೆ ಕಂದಕ ಸೃಷ್ಟಿಗೆ ಪ್ರಯತ್ನಿಸುತ್ತಿರುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ದಲಿತರು, ಮುಸ್ಲಿಮರು ಮತ್ತು ಹಿಂದುಳಿದ ವರ್ಗಗಳು ಬಹಳ ಎಚ್ಚರಿಕೆಯ ಹೆಜ್ಜೆಗಳನ್ನಿಡುವುದು ವರ್ತಮಾನದಲ್ಲಿ ಅವಶ್ಯಕತೆಯಿದೆೆ.

ಭಾರತದ ಶೂದ್ರ ಸಮುದಾಯಗಳ ಅಭಿವೃದ್ಧಿಗಾಗಿ ಅನೇಕ ಸಂವಿಧಾನಾತ್ಮಕ ಬದ್ಧತೆಗಳು ಮತ್ತು ವಿಶೇಷ ಕಾನೂನುಗಳನ್ನು ರೂಪಿಸಿದ ಫಲವಾಗಿ ಒಬಿಸಿಗಳ ಸಮಗ್ರ ಅಭಿವೃದ್ಧಿಗಾಗಿ ಹೊಸ ನೀತಿ, ವ್ಯವಸ್ಥೆ ಮತ್ತು ಅಭಿವೃದ್ಧಿ ಯೋಜನೆಗಳು ಸ್ವತಂತ್ರ ಭಾರತದಲ್ಲಿ ಅಸ್ತಿತ್ವಕ್ಕೆ ಬಂದಿವೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ಸ್ವಾತಂತ್ರ್ಯಾನಂತರದಲ್ಲಿ ಸಂವಿಧಾನದತ್ತವಾಗಿ ಅಳವಡಿಸಿಕೊಂಡಿರುವ ಮತ್ತು ಅನುಷ್ಠಾನಗೊಳಿಸಲ್ಪಟ್ಟಿರುವ ಸಮಾನತೆ ಮತ್ತು ಸಾಮಾಜಿಕ ನ್ಯಾಯ ವಿತರಣೆಯ ಅವಿಭಾಜ್ಯ ಅಂಗವಾಗಿರುವುದಕ್ಕೆ ಅಂಬೇಡ್ಕರ್ರವರ ಕ್ರಾಂತಿಕಾರಕ ದೃಷ್ಟಿಕೋನ ಬಹುಮುಖ್ಯ ಕಾರಣವಾಗಿದೆ. ಪ್ರಸ್ತುತದಲ್ಲಿ ನಾವು ಅರ್ಥಮಾಡಿಕೊಳ್ಳಬೇಕಿರುವುದು ದೀನದಲಿತ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಡಾ.ಅಂಬೇಡ್ಕರ್ ಅವರನ್ನು ದಲಿತರ ಸಂರಕ್ಷಕ ಎಂದು ಗುರುತಿಸಲಾಗುತ್ತದೆ. ಹುಟ್ಟಿನಿಂದ ಅಸ್ಪಶ್ಯರಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ದಮನಕ್ಕೆ ಒಳಗಾಗಿರುವ ಭಾರತೀಯ ಜನಸಮುದಾಯವನ್ನು ದಲಿತರು ಎಂದು ಪ್ರಗತಿಶೀಲ ಚಿಂತಕರು ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸಿದ್ದಾರೆ. ಆದರೆ ವರ್ಣ ವ್ಯವಸ್ಥೆಯಿಂದಾಗಿ, ಶೂದ್ರರಾದ ಹಿಂದುಳಿದ ಜಾತಿಗಳು ಅಸ್ಪಶ್ಯರಿಗಿಂತ (ದಲಿತರು) ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯಲ್ಲಿ ತಮ್ಮನ್ನು ತಾವು ಉನ್ನತವೆಂದು ಹಿಂದುಳಿದ ಜಾತಿಗಳು ಪರಿಗಣಿಸುತ್ತಾರೆ. ಹಿಂದುಳಿದ ಜಾತಿಗಳು ಎಂದರೆ ಶೂದ್ರರು ಮತ್ತು ದಲಿತ ಜಾತಿಗಳು ಎಂದರೆ ಅತೀ ಶೂದ್ರರು. ಒಂದೇ ವ್ಯತ್ಯಾಸವೆಂದರೆ ಹಿಂದುಳಿದ ಜಾತಿಗಳನ್ನು ಸ್ಪಶ್ಯ ಮತ್ತು ದಲಿತ ಜಾತಿಗಳನ್ನು ಅಸ್ಪಶ್ಯ ಎಂದು ಪರಿಗಣಿಸಲಾಗುತ್ತದೆ.

ಯಥಾಸ್ಥಿತವಾದಿಗಳ ವಿರುದ್ಧ ದಲಿತರು ನಿರಂತರವಾಗಿ ಬಂಡಾಯವೆದ್ದಿರುವಾಗ ಹಿಂದುಳಿದ ಜಾತಿಗಳು ಯಥಾಸ್ಥಿತವಾದಿಗಳ ಕಪಿಮುಷ್ಟಿಯಲ್ಲಿ ಸಿಕ್ಕಿಬಿದ್ದಿರುವುದು ಉಲ್ಲೇಖಾರ್ಹ. ಸಾಮಾಜಿಕ ಮೇಲುಗೈ ಎಂಬ ಭ್ರಮೆಯಿಂದ ಹಿಂದುಳಿದ ಜಾತಿಗಳು ಡಾ.ಅಂಬೇಡ್ಕರ್ ಅವರನ್ನು ತಮ್ಮ ನಾಯಕನ ಬದಲು ದಲಿತರ ನಾಯಕ ಎಂದು ಪರಿಗಣಿಸುತ್ತಿವೆ. ಏಕೆಂದರೆ ಬಹುತೇಕ ಹಿಂದುಳಿದ ಜಾತಿಗಳು ಮೇಲ್ಜಾತಿ ಹಿಂದೂಗಳ ಪ್ರಭಾವಕ್ಕೆ ಒಳಗಾಗಿದ್ದು, ಡಾ.ಅಂಬೇಡ್ಕರ್ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ದಲಿತರೊಂದಿಗೆ ಒಗ್ಗಟ್ಟನ್ನು ಸ್ಥಾಪಿಸದಂತೆ ನಿರಂತರವಾಗಿ ನೋಡಿಕೊಳ್ಳಲಾಗುತ್ತಿದೆ. ಜಾತಿ ರಾಜಕಾರಣ ಮಾಡುತ್ತಾ ಹಿಂದುಳಿದ ಮತ್ತು ದಲಿತರ ನಡುವಿನ ಈ ಅಂತರಕ್ಕೆ ದಲಿತ ಮತ್ತು ಹಿಂದುಳಿದ ನಾಯಕರೂ ಕಾರಣರಾಗಿದ್ದಾರೆ.

ಡಾ. ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ದೀನದಲಿತ, ಹಿಂದುಳಿದ ಜಾತಿಗಳ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದರು. ಈ ಸತ್ಯವು ಈ ಕೆಳಗಿನ ಸಂಗತಿಗಳಿಂದ ದೃಢೀಕರಿಸಲ್ಪಟ್ಟಿದೆ. ಹಿಂದುಳಿದ ಜಾತಿಗೆ ಸೇರಿದ ಬರೋಡಾದ ಮಹಾರಾಜ ಸಯ್ಯಾಜಿ ರಾವ್ ಗಾಯಕ್ವಾಡ್ರವರು ಡಾ. ಅಂಬೇಡ್ಕರ್ರವರ ಉನ್ನತ ಶಿಕ್ಷಣಕ್ಕೆ ಗಣನೀಯ ಕೊಡುಗೆ ನೀಡಿದರು ಮತ್ತು ಅವರಿಗೆ ಅಮೆರಿಕದಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿವೇತನವನ್ನು ನೀಡಿದರು. ಛತ್ರಪತಿ ಸಾಹು ಮಹಾರಾಜ್ ಅವರು ಡಾ.ಅಂಬೇಡ್ಕರ್ ಅವರಿಗೆ ಸಹಾಯ ಮಾಡಿದ ಎರಡನೇ ಹಿಂದುಳಿದ ಸಮುದಾಯದ ಮಹಾನ್ ಮಾನವತಾವಾದಿ. ದಕ್ಷಿಣ ಭಾರತದಲ್ಲಿ ಬ್ರಾಹ್ಮಣೇತರ ಚಳವಳಿಯ ನಾಯಕರಾಗಿದ್ದ ರಾಮಸ್ವಾಮಿ ನಾಯ್ಕರ್ ಅವರೊಂದಿಗೆ ಡಾ. ಅಂಬೇಡ್ಕರ್ ಉತ್ತಮ ಸಂಬಂಧವನ್ನು ಹೊಂದಿದ್ದರು. ಹಿಂದುಳಿದ ಜಾತಿಗಳ ಸಮಾಜ ಸುಧಾರಕ ಜ್ಯೋತಿ ರಾವ್ ಫುಲೆಯವರ ಸಾಮಾಜಿಕ ಸಿದ್ಧಾಂತದಿಂದ ಡಾ.ಅಂಬೇಡ್ಕರ್ ಹೆಚ್ಚು ಪ್ರಭಾವಿತರಾಗಿದ್ದರು. ಡಾ.ಅಂಬೇಡ್ಕರ್ ಅವರು ತಿರುವಾಂಕೂರಿನಲ್ಲಿ (ಕೇರಳ) ಹಿಂದುಳಿದ ಜಾತಿಯಾದ ಈಳವರ ಸಮಾನತೆಗಾಗಿ ಚಳವಳಿಯನ್ನು ಬೆಂಬಲಿಸಿದರು.

1928ರಲ್ಲಿ ಸೈಮನ್ ಆಯೋಗದ ಮುಂದೆ ಭಾರತದ ಭವಿಷ್ಯದ ಸಂವಿಧಾನದಲ್ಲಿ ಹಿಂದುಳಿದ ಜಾತಿಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಪ್ರತಿಪಾದಿಸಿದವರು ಡಾ.ಅಂಬೇಡ್ಕರ್. ಅವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿ, ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಸಂವಿಧಾನದ 15(4)ನೇ ವಿಧಿಯಲ್ಲಿ ‘ಹಿಂದುಳಿದ’ ಪದವನ್ನು ಸೇರಿಸಿದ್ದರು, ಇದು ನಂತರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿಗೆ ಆಧಾರವಾಯಿತು. ಅವರ ಪ್ರಯತ್ನದಿಂದ, ಹಿಂದುಳಿದ ಜಾತಿಗಳನ್ನು ಗುರುತಿಸಲು ಆಯೋಗವನ್ನು ಸ್ಥಾಪಿಸಲು ಸಂವಿಧಾನದ 340ನೇ ವಿಧಿಯಲ್ಲಿ ಅವಕಾಶವನ್ನು ಮಾಡಲಾಯಿತು.

ಅಂಬೇಡ್ಕರ್ ಅವರು 1942ರಲ್ಲಿ ಸ್ಥಾಪಿಸಿದ ರಾಜಕೀಯ ಪಕ್ಷವನ್ನು ಪರಿಶಿಷ್ಟ ಜಾತಿಗಳ ಒಕ್ಕೂಟ ಎಂದು ಕರೆಯಲಾಯಿತು. ಪಕ್ಷದ ನೀತಿಯು ಅಂಚಿನಲ್ಲಿರುವ ಜಾತಿಗಳು ಮತ್ತು ಬುಡಕಟ್ಟುಗಳನ್ನು ಪ್ರತಿನಿಧಿಸುವ ಪಕ್ಷಗಳೊಂದಿಗೆ ಮೈತ್ರಿಗಳಿಗೆ ಆದ್ಯತೆ ನೀಡುವುದನ್ನು ಒತ್ತಿಹೇಳಿತು. ಅಗತ್ಯವಿದ್ದರೆ, ಹಿಂದುಳಿದ ವರ್ಗಗಳ ಹಿತಾಸಕ್ತಿಗಳನ್ನು ಉತ್ತಮವಾಗಿ ಪ್ರತಿನಿಧಿಸಲು ಪಕ್ಷವು ತನ್ನ ಹೆಸರನ್ನು ‘ಹಿಂದುಳಿದ ವರ್ಗಗಳ ಒಕ್ಕೂಟ’ ಎಂದು ಬದಲಾಯಿಸಲು ಸಹ ಪರಿಗಣಿಸುತ್ತದೆ. ಪರಿಣಾಮವಾಗಿ, ಆ ಅವಧಿಯಲ್ಲಿ ಪಕ್ಷವು ಸಮಾಜವಾದಿ ಪಕ್ಷದೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡಿತು.

1951ರಲ್ಲಿ, ಡಾ. ಅಂಬೇಡ್ಕರ್ ಅವರು ಹಿಂದೂ ಕೋಡ್ ಮಸೂದೆಗೆ ಸಂಬಂಧಿಸಿದಂತೆ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅಂದಿನ ಸರಕಾರಕ್ಕೆ ‘‘ಈ ಸರಕಾರದ ಬಗ್ಗೆ ನನ್ನ ಅತೃಪ್ತಿಗೆ ಕಾರಣವಾಗಿರುವ ಇನ್ನೊಂದು ಸಮಸ್ಯೆಯನ್ನು ನಾನು ತಿಳಿಸಲು ಬಯಸುತ್ತೇನೆ. ಹಿಂದುಳಿದ ಜಾತಿಗಳು ಮತ್ತು ಮೀಸಲು ಜಾತಿಗಳ ಬಗ್ಗೆ ಈ ಸರಕಾರ ನಡೆಸುತ್ತಿರುವ ರೀತಿ ಚರ್ಚೆಯ ವಿಷಯವಾಗಿದೆ. ಹಿಂದುಳಿದ ಜಾತಿಗಳಿಗೆ ಸಾಂವಿಧಾನಿಕ ಭದ್ರತೆಗಳಿಲ್ಲದಿರುವುದು ನನಗೆ ನಿರಾಶೆ ತಂದಿದೆ. ರಾಷ್ಟ್ರಪತಿಗಳು ರಚಿಸಿರುವ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಆಡಳಿತಕ್ಕೆ ವಹಿಸಲಾಗಿದೆ. ಸಂವಿಧಾನ ರಚನೆಯಾಗಿ ಒಂದು ವರ್ಷ ಕಳೆದರೂ ಆಯೋಗದ ನೇಮಕಕ್ಕೆ ಸಂಬಂಧಿಸಿದಂತೆ ಆಡಳಿತ ಯಾವುದೇ ಪರಿಗಣನೆಗೆ ಮುಂದಾಗಿಲ್ಲ’’ ಎಂದು ತಮ್ಮ ಅಸಮಾಧಾನವನ್ನು ತಿಳಿಸಿರುವುದು ಹಿಂದುಳಿದ ವರ್ಗಗಳ ಬಗ್ಗೆ ಅವರಿಗಿದ್ದ ಕಾಳಜಿಯನ್ನು ತೋರುತ್ತದೆ.

ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಲಕ್ನೊ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅಂಬೇಡ್ಕರ್, ಸಾಮಾಜಿಕವಾಗಿ ಹಿಂದುಳಿದ ಜಾತಿಗಳನ್ನು ಕಡೆಗಣಿಸುವುದರ ವಿರುದ್ಧ ಎಚ್ಚರಿಕೆ ನೀಡಿದರು. ಈ ಜಾತಿಗಳು ಸಮಾನತೆಯ ಅನ್ವೇಷಣೆಯಲ್ಲಿ ಭರವಸೆ ಕಳೆದುಕೊಂಡರೆ, ಪರಿಶಿಷ್ಟ ಜಾತಿಗಳ ಒಕ್ಕೂಟ ಕಮ್ಯುನಿಸ್ಟ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಆದ್ಯತೆ ನೀಡುತ್ತದೆ, ಇದು ರಾಷ್ಟ್ರದ ಅವನತಿಗೆ ಕಾರಣವಾಗಬಹುದು ಎಂದು ಅವರು ಒತ್ತಿ ಹೇಳಿದರು. ಬಾಂಬೆಯ ನಾರೆ ಪಾರ್ಕ್ನಲ್ಲಿ ನಡೆದ ಮಹತ್ವದ ಸಾರ್ವಜನಿಕ ಸಭೆಯಲ್ಲಿ ಹಿಂದುಳಿದ ಗುಂಪುಗಳ ಕಾಳಜಿಯನ್ನು ಕಡೆಗಣಿಸುವ ವಾದವನ್ನು ಅವರು ಪುನರುಚ್ಚರಿಸಿದರು. ಹಿಂದುಳಿದ ಜಾತಿಗಳ ಹಕ್ಕುಗಳಿಗಾಗಿ ಡಾ. ಅಂಬೇಡ್ಕರ್ ಅವರ ಪ್ರತಿಪಾದನೆಯು ನೆಹರೂ ಸರಕಾರವನ್ನು 1951ರಲ್ಲಿ ಮೊದಲ ಹಿಂದುಳಿದ ವರ್ಗಗಳ ಆಯೋಗವನ್ನು ಸ್ಥಾಪಿಸಲು ಒತ್ತಾಯಿಸಿತು. ಕಾಕಾ ಕಾಲೇಲ್ಕರ್ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಆದರೆ, ಈ ಆಯೋಗದ ಶಿಫಾರಸುಗಳನ್ನು ಸರಕಾರ ಅಂಗೀಕರಿಸಲಿಲ್ಲ, ಬದಲಿಗೆ ಜಾತಿ ಆಧಾರದ ಮೀಸಲಾತಿಗಾಗಿ ಆಯೋಗದ ಶಿಫಾರಸುಗಳಿಗೆ ವ್ಯತಿರಿಕ್ತವಾಗಿ ಅಭಿಪ್ರಾಯವನ್ನು ನೀಡಲು ಆಯೋಗದ ಅಧ್ಯಕ್ಷರನ್ನು ಒತ್ತಾಯಿಸಲಾಯಿತು.

1970ರ ದಶಕದಲ್ಲಿ ಉತ್ತರ ಪ್ರದೇಶದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಡಾ. ಛೇದಿಲಾಲ್ಸಾಥಿ ಹೇಳುವಂತೆ 1951ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಾಬಾಸಾಹೇಬರು ತಾವು ಕೈಗೊಂಡ ಕೆಲಸವು ಅಪೂರ್ಣವಾಯಿತೆಂದು ಅನೇಕ ಹಿಂದುಳಿದ ವರ್ಗದ ನಾಯಕರಾದ ರಾಮ್ಲಖಾನ್ ಚಂದಾಪುರಿ, ಎಸ್.ಡಿ. ಸಿಂಗ್ ಚೌರಾಸಿಯಾ ಮತ್ತು ಇತರ ನಾಯಕರುಗಳನ್ನು ಭೇಟಿ ಮಾಡಿ ಚರ್ಚಿಸಿದಾಗ ಆ ಹಿಂದುಳಿದ ನಾಯಕರ ಭರವಸೆಯ ಮೇಲೆ ಮತ್ತೆ ಪಾಟ್ನಾದಲ್ಲಿ ಅನೇಕ ತಳಸಮುದಾಯಗಳನ್ನು ಸಂಘಟಿಸಿ ಸಭೆಯನ್ನು ಆಯೋಜಿಸಿದ ನಂತರ ನೆರೆದಿದ್ದ ಜನಸ್ತೋಮವನ್ನು ನೋಡಿ ಪ್ರಭಾವಿತರಾಗಿ ಮತ್ತೊಮ್ಮೆ ದಲಿತರು ಮತ್ತು ಹಿಂದುಳಿದವರ ರಾಜಕೀಯದಲ್ಲಿ ಸಕ್ರಿಯರಾದರು.

ಡಾ.ಛೇದಿಲಾಲ್ ಸಾಥಿ ಅವರು ತಮ್ಮ ‘ಸಿಚ್ಯುಯೇಶನ್ ಆಫ್ ದಲಿತ್ಸ್ ಆ್ಯಂಡ್ ಬ್ಯಾಕ್ವರ್ಡ್ ಕ್ಯಾಸ್ಟ್ಸ್’ ಪುಸ್ತಕದ ಪುಟ 113ರಲ್ಲಿ, ಬಾಬಾಸಾಹೇಬರು ಪಾಟ್ನಾದಿಂದ ಹಿಂದಿರುಗಿದ ನಂತರ ತಮ್ಮ ಸಹೋದ್ಯೋಗಿಗಳೊಂದಿಗೆ ಸಮಾಲೋಚಿಸಿ ಭಾರತೀಯ ಪರಿಶಿಷ್ಟ ಜಾತಿಗಳ ಒಕ್ಕೂಟವನ್ನು ವಿಸರ್ಜಿಸಿದರು ಎಂದು ಹೇಳುತ್ತಾ, 1952 ಮತ್ತು 1954ರ ಚುನಾವಣೆಗಳಲ್ಲಿ ಸೋತ ನಂತರ, ಬಾಬಾಸಾಹೇಬರು ಪರಿಶಿಷ್ಟ ಜಾತಿಗಳು ಜನಸಂಖ್ಯೆಯ ಶೇ. 20ರಷ್ಟಿದೆ ಎಂದು ಅರಿತುಕೊಂಡರು. ಶೇ. 52 ಹಿಂದುಳಿದ ವರ್ಗಗಳ ಬೆಂಬಲದ ಅಗತ್ಯವನ್ನು ಗುರುತಿಸಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾವನ್ನು ಪರ್ಯಾಯವಾಗಿ ಸ್ಥಾಪಿಸುವ ನಿರ್ಧಾರವನ್ನು ಮಾಡಿದರು. ಏಕೆಂದರೆ ಅಂಬೇಡ್ಕರರು ದಲಿತರು ಮತ್ತು ಹಿಂದುಳಿದ ವರ್ಗಗಳು ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸದ ಹೊರತು ಗೆಲುವು ಸಾಧಿಸಲು ಸಾಧ್ಯವಿಲ್ಲವೆಂಬುದನ್ನು ಅಂದೇ ಅರಿತಿದ್ದರು. ಪರಿಣಾಮವಾಗಿ, ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ ನಾಯಕರ ಸಹಯೋಗದೊಂದಿಗೆ, (ಶಿವದಯಾಳ್ ಸಿಂಗ್ ಚೌರಾಸಿಯಾ) ಹಿಂದುಳಿದ ವರ್ಗಗಳ ಶೇ.52 ಜನರು ಮತ್ತು ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಸಿಖ್ಖರನ್ನು ಒಳಗೊಂಡಿರುವ ಶೇ. 12 ಜನಸಂಖ್ಯೆಯನ್ನು ರಿಪಬ್ಲಿಕನ್ ಪಕ್ಷಕ್ಕೆ ಸೇರಿಸುವ ನಿರ್ಧಾರವನ್ನು ಮಾಡಿದರು. ದಲಿತ ವರ್ಗದ ಅಸ್ತಿತ್ವದಲ್ಲಿರುವ ಶೇ. 20 ಪ್ರಾತಿನಿಧ್ಯದ ಜೊತೆಗೆ ರಿಪಬ್ಲಿಕನ್ ಪಕ್ಷದ ಸಂವಿಧಾನದ ಕರಡು ಮತ್ತು ಸಮಾಲೋಚನೆಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಸಮಯವನ್ನು ಕಳೆದರು.

ಪಾಟ್ನಾದಲ್ಲಿ ನಡೆದ ಈ ರ್ಯಾಲಿಯು ಐತಿಹಾಸಿಕ ಮಹತ್ವವನ್ನು ಹೊಂದಿದ್ದು ಅದು ದಲಿತರು ಮತ್ತು ಒಬಿಸಿಗಳ ಒಕ್ಕೂಟಕ್ಕೆ ಅಡಿಪಾಯವನ್ನು ಸ್ಥಾಪಿಸಿತು. ಬಾಬಾಸಾಹೇಬ್ ಅವರು ಅಕ್ಟೋಬರ್ 15, 1956ರಂದು ನಾಗ್ಪುರದಲ್ಲಿ ಭಾರತೀಯ ಪರಿಶಿಷ್ಟ ಜಾತಿಗಳ ಒಕ್ಕೂಟವನ್ನು ಕೊನೆಗೊಳಿಸಿದರು ಮತ್ತು ಅದರ ಬದಲಿಯಾಗಿ ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ’ದ ರಚನೆಯನ್ನು ಘೋಷಿಸಿದರು. 1957 ಮತ್ತು 1967ರ ನಡುವೆ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾವು ಈ ಸಾಮಾಜಿಕ ಸ್ತರಗಳ ಒಗ್ಗಟ್ಟಿನ ಲಾಭವನ್ನು ಪಡೆಯುವ ಮೂಲಕ ಗಮನಾರ್ಹ ರಾಜಕೀಯ ಪ್ರಭಾವವನ್ನು ಗಳಿಸಿತು. ಆದರೆ, ಅಂದಿನ ಕಾಂಗ್ರೆಸ್ ಪಕ್ಷದಲ್ಲಿದ್ದ ಕೋಮುವಾದಿಗಳು ರಿಪಬ್ಲಿಕನ್ ಪಕ್ಷವನ್ನು ಗಂಭೀರ ಅಪಾಯವೆಂದು ಪರಿಗಣಿಸಿ, ರಿಪಬ್ಲಿಕನ್ ಪಕ್ಷದೊಂದಿಗೆ ಸಂಬಂಧ ಹೊಂದಿರುವ ದಲಿತ ನಾಯಕರ ದುರ್ಬಲತೆಗಳನ್ನು ಬಳಸಿಕೊಂಡಿತು. ಅವುಗಳನ್ನು ಖರೀದಿಸಿತು ಮತ್ತು ಈ ಸಭೆಯು ಹಲವಾರು ಭಾಗಗಳಾಗಿ ವಿಭಜಿಸಲ್ಪಟ್ಟಿತು. ನಂತರ ಹುಟ್ಟಿಕೊಂಡ ಬಿಎಸ್ಪಿಯಂತಹ ಪಕ್ಷವೂ ಈ ಮೈತ್ರಿಯನ್ನು ನಾಶಪಡಿಸಿತು. ಬಾಬಾಸಾಹೇಬರು ತಮ್ಮ ಜೀವನದ ಕೊನೆಯ ವರ್ಷಗಳಲ್ಲಿ ದಲಿತರು ಮತ್ತು ಹಿಂದುಳಿದವರ ಐಕ್ಯತೆಯನ್ನು ಸ್ಥಾಪಿಸಲು ಹಿಂದುಳಿದ ವರ್ಗಗಳ ನಾಯಕ ರಾಮ್ ಮನೋಹರ ಲೋಹಿಯಾ ಮೊದಲಾದವರೊಂದಿಗೆ ಸಂಪರ್ಕವನ್ನು ಸ್ಥಾಪಿಸಿದರು ಮತ್ತು ಅವರ ನಡುವೆ ಪತ್ರವ್ಯವಹಾರಗಳು ನಡೆದವು. ಆದರೆ ದುರದೃಷ್ಟವಶಾತ್, ಬಾಬಾಸಾಹೇಬರು ಶೀಘ್ರದಲ್ಲೇ ನಿಧನರಾದರು ಮತ್ತು ಆ ಮೈತ್ರಿಯನ್ನು ರಚಿಸಲಾಗಲಿಲ್ಲ.

ಡಾ.ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ದಲಿತರ ಹಿತಾಸಕ್ತಿಗಾಗಿ ಮಾತ್ರವಲ್ಲದೆ ಹಿಂದುಳಿದ ವರ್ಗಗಳ ಹಿತಾಸಕ್ತಿಗಳಿಗಾಗಿ ಹೋರಾಡಿದರು ಎಂಬುದು ಮೇಲಿನ ವಿವರಣೆಯಿಂದ ಸ್ಪಷ್ಟವಾಗುತ್ತದೆ. ಅವರ ಪ್ರಯತ್ನದಿಂದಾಗಿಯೇ ಹಿಂದುಳಿದ ವರ್ಗಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಸಂವಿಧಾನದಲ್ಲಿ ಕಲ್ಪಿಸಲಾಯಿತು ಮತ್ತು ಅವರ ಒತ್ತಡದಿಂದಾಗಿ, ಮೊದಲ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಲಾಯಿತು. ನಂತರ ಮಂಡಲ್ ಆಯೋಗ ರಚನೆಯಾಗಿ ಹಿಂದುಳಿದ ವರ್ಗದವರಿಗೆ ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಸಿಕ್ಕಿದ್ದು, ಇದಕ್ಕಾಗಿ ಹಿಂದುಳಿದ ವರ್ಗದವರು ಬಾಬಾಸಾಹೇಬರಿಗೆ ಋಣಿಯಾಗಿರಬೇಕು.

ಆದ್ದರಿಂದ ಹಿಂದುಳಿದ ವರ್ಗದವರು ತಮ್ಮ ಅಭ್ಯುದಯಕ್ಕೆ ಬಾಬಾಸಾಹೇಬರ ಕೊಡುಗೆಯನ್ನು ಸ್ವೀಕರಿಸಬೇಕು. ವರ್ತಮಾನದ ಹೊಸ ಸವಾಲುಗಳ ಸಂದರ್ಭದಲ್ಲಿ ಈ ವರ್ಗಗಳ ಏಕತೆಯನ್ನು ಮರುಸ್ಥಾಪಿಸುವ ಅಗತ್ಯವಿದೆ. ದಲಿತರು ಮತ್ತು ಒಬಿಸಿಗಳ ನಡುವೆ ಕೆಲವು ವರ್ಗ ವಿರೋಧಾಭಾಸಗಳಿವೆ ಮತ್ತು ಅವುಗಳನ್ನು ಪರಿಹರಿಸದೆ ಅವರ ಏಕತೆಯನ್ನು ಸ್ಥಾಪಿಸಲಾಗುವುದಿಲ್ಲ ಎಂಬುದಂತೂ ನಿಜ. ದಲಿತರು, ಅತ್ಯಂತ ಹಿಂದುಳಿದವರು (ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು) ಸಹಜ ಮಿತ್ರರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಸಮೀಕರಣವು ಸಾಮಾನ್ಯ ಸಮಸ್ಯೆಗಳನ್ನು ಆಧರಿಸಿರಬಹುದು ಮತ್ತು ಕೇವಲ ಜಾತಿಯ ಮೇಲೆ ಅಲ್ಲ, ಇದು ದೇಶದಲ್ಲಿ ಧರ್ಮಾಧಾರಿತ ರಾಜಕೀಯವನ್ನು ಎದುರಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ಡಾ. ಡಿ. ಶ್ರೀನಿವಾಸ ಮಣಗಳ್ಳಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!