EVM ಕುರಿತ ಸಂಶಯಗಳ ಬಗ್ಗೆ ಅದರ ತಜ್ಞ ಮಾಧವ್ ದೇಶಪಾಂಡೆ ಹೇಳಿದ್ದೇನು ?

Update: 2024-02-06 05:12 GMT
Editor : Ismail | Byline : ಆರ್. ಜೀವಿ

ಇವಿಎಂಗಳ ಬಗ್ಗೆ ಅನುಮಾನ ಹೊಸದಲ್ಲ. ಒಂದು ಕಾಲದಲ್ಲಿ ಬಿಜೆಪಿಯ ಪ್ರಮುಖ ನಾಯಕರೇ ಅದರ ಬಗ್ಗೆ ಅಪಸ್ವರ ಎತ್ತಿದ್ದಿತ್ತು. ಈಗ ಅದೇ ಇವಿಎಂ ಬಗ್ಗೆ ಮತ್ತೆ ಮತ್ತೆ ಸಂಶಯಗಳು ವ್ಯಕ್ತವಾಗುತ್ತಿವೆ. ಅದರ ಪಾರದರ್ಶಕತೆ ಹಾಗೂ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇವಿಎಂಗಳ ಹ್ಯಾಕಿಂಗ್ ಗೆ ಅವಕಾವಿದೆ ಎಂಬ ಆರೋಪ ಈ ಪೈಕಿ ಅತ್ಯಂತ ಪ್ರಮುಖವಾದುದು.

ಇದೆಲ್ಲದರ ಬಗ್ಗೆ ಭಾರತದ ಅಗ್ರಗಣ್ಯ ಎಲೆಕ್ಟ್ರಾನಿಕ್ ಮತಯಂತ್ರ ತಜ್ಞರಲ್ಲಿ ಒಬ್ಬರಾದ ಮಾಧವ್ ದೇಶಪಾಂಡೆ ದಿ ವೈರ್ ಗಾಗಿ ಖ್ಯಾತ ಪತ್ರಕರ್ತ ಕರಣ್ ಥಾಪರ್ ನಡೆಸುವ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮಾಧವ್ ದೇಶಪಾಂಡೆ ಟುಲಿಪ್ ಸಾಫ್ಟ್ವೇರ್‌ನ ಮಾಜಿ ಸಿಇಒ ಮತ್ತು ಅಮೆರಿಕದ ಒಬಾಮಾ ಆಡಳಿತದಲ್ಲಿ ಸಲಹೆಗಾರರಾಗಿದ್ದವರು. ಇವಿಎಂಗಳ ಕುರಿತ ವ್ಯಾಪಕ ಅನುಮಾನಗಳ ಹಿನ್ನೆಲೆಯಲ್ಲಿ ಅವರು ಇಡೀ ಪ್ರಕ್ರಿಯೆಯನ್ನು ಸಾಧ್ಯವಾದಷ್ಟೂ ಸರಳವಾಗಿ ವಿವರಿಸಿದ್ದಾರೆ.

ಮತ್ತು ಈಗ ಕಾಣಿಸುತ್ತಿರುವ ಸಮಸ್ಯೆಗೆ ಸರಳ ಮತ್ತು ಅಗ್ಗದ ಪರಿಹಾರವನ್ನು ಕೂಡ ಅವರು ಈ ಸಂದರ್ಶನದಲ್ಲಿ ಸೂಚಿಸಿದ್ದಾರೆ. ಅವರು ಹೇಳುವ ಪ್ರಕಾರ, ಭಾರತದ ಇವಿಎಂಗಳು ಇಂಟರ್ನೆಟ್, ವೈಫೈ ಅಥವಾ ಬ್ಲೂಟೂಥ್ ಅಂತಹವಕ್ಕೆ ಸಂಪರ್ಕಿತವಾಗಿಲ್ಲದೆ ಇರುವುದರಿಂದ ಅವನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಆದರೆ ಅವು ಆಂತರಿಕವಾಗಿ ಪರಸ್ಪರ ಸಂಪರ್ಕಿತವಾಗಿರುವುದರಿಂದ, ಬೇಕಾದಂತೆ ತಿರುಚುವುದಕ್ಕೆ ಅವಕಾಶವಿದೆ.

ಸಾಧಾರಣವಾಗಿ ಜನರು ಇವಿಎಂ ಎನ್ನುವುದು ಒಂದೇ ಯೂನಿಟ್ ಎಂದುಕೊಳ್ಳುತ್ತಾರೆ. ಆದರೆ ಅದು ಬ್ಯಾಲೆಟ್ ಯೂನಿಟ್ ಹಾಗೂ ಕಂಟ್ರೋಲ್ ಯೂನಿಟ್ ಅನ್ನು ಹೊಂದಿದೆ. ಜೊತೆಗೆ ವಿವಿಪ್ಯಾಟ್ ಇರುತ್ತದೆ. ಬ್ಯಾಲೆಟ್ ಯೂನಿಟ್ ಮತ ಹಾಕಲು ಬಟನ್ ಒತ್ತುವ ಯೂನಿಟ್ ಆಗಿದ್ದರೆ, ಕಂಟ್ರೋಲ್ ಯೂನಿಟ್ ಇಡೀ ಮತ ಹಾಕುವ ಯಂತ್ರ ಮತ್ತದನ್ನು ಶೇಖರಿಸುವ ವ್ಯವಸ್ಥೆ ಮತ್ತು ವಿವಿಪ್ಯಾಟ್ ಅನ್ನು ನಿಯಂತ್ರಿಸುತ್ತದೆ.

ಹೀಗೆ ಮೂರು ಸ್ವತಂತ್ರ ಯೂನಿಟ್ಗಳಿದ್ದು, ಅವು ಪರಸ್ಪರ ಸಂಪರ್ಕಿತವಾಗಿರುತ್ತವೆ. ನಮ್ಮ ಇವಿಎಂ ವ್ಯವಸ್ಥೆಯನ್ನು ಅವರು ಅಂಡರ್ ಡಿಸೈನ್ಡ್ ಎನ್ನುತ್ತಾರೆ. ಅಂದರೆ ತೀರಾ ಪ್ರಾಥಮಿಕ ಹಂತದ್ದು. ಇದು 1977ರಲ್ಲಿ ವಿನ್ಯಾಸಗೊಂಡಿದ್ದಾಗಿದೆ. ಆಗ ಇಂಟರ್ನೆಟ್ ಇದ್ದಿರಲಿಲ್ಲ. ಅನಂತರ ಇಂಟರ್ನೆಟ್ ಸೇರಿದಂತೆ ಎಲ್ಲವೂ ಬಂದರೂ, ಹೆಚ್ಚಿನ ಸೌಲಭ್ಯಗಳು, ಸಾಧ್ಯತೆಗಳು ಲಭ್ಯವಾದರೂ, ಯಾವುದೂ ನಮ್ಮ ಇವಿಎಂನೊಳಗೆ ಅಳವಡಿಕೆಯಾಗಲಿಲ್ಲ. ತಿರುಚುವಿಕೆಗೆ ಅವಕಾಶವಾಗುವಂಥ ಹಲವು ಲೋಪದೋಷಗಳು ಹಾಗೇ ಉಳಿದುಕೊಂಡವು.

1977ರಲ್ಲಿದ್ದ ಫಿಯಟ್ ಕಾರನ್ನು ಬಿಟ್ಟು ಜನರೆಲ್ಲ ಬೇರೆಯದಕ್ಕೆ ಹೋದರು. ಯಾಕೆಂದರೆ ಹೆಚ್ಚು ಫೀಚರ್ಗಳಿದ್ದ ಇತರ ಕಾರುಗಳನ್ನು ಜನ ಬಯಸಿದ್ದರು. ಹೆಚ್ಚು ಭದ್ರತೆ, ಹೆಚ್ಚು ಸುರಕ್ಷತೆ ಇದ್ದಂಥವು ಬೇಕಿದ್ದವು. ಹಾಗೆಯೇ, ಇವಿಎಂನ ಈ ಯೂನಿಟ್ಗಳು ಅಪ್ ಗ್ರೇಡ್ ಆಗಬೇಕಾದ ಅಗತ್ಯವಿದೆ. ದೇಶಪಾಂಡೆ ವಿವರಿಸುವ ಪ್ರಕಾರ, ಬ್ಯಾಲೆಟ್ ಯೂನಿಟ್ ವಿಚಾರದಲ್ಲಿ ಎರಡು ಸಮಸ್ಯೆಗಳಿವೆ.

ಮೊದಲನೆಯದು, ಮತದಾನದ ಸಾಂವಿಧಾನಿಕತೆಗೆ ಸಂಬಂಧಿಸಿದ್ದು, ಎರಡನೆಯದು ಮತದಾನದ ತಾಂತ್ರಿಕತೆಯನ್ನು ಕುರಿತದ್ದು. ಮತದಾನದ ಸಾಂವಿಧಾನಿಕತೆ ಎನ್ನುವಾಗ, ಮತದಾರ ತಾನು ಮತ ಹಾಕಿದ ಮತಪತ್ರವನ್ನು ತಾನೇ ಮತಪೆಟ್ಟಿಗೆಯಲ್ಲಿ ಹಾಕುತ್ತಿದ್ದ ಕಾಲವಿತ್ತು. ಆದರೆ ಈಗ, ಹಾಕಿದ ಮತ ಮತದಾರನಿಗೆ ಕಾಣದ ಬ್ಯಾಲೆಟ್ ಯೂನಿಟ್ನಿಂದ ನೇರವಾಗಿ ಕಂಟ್ರೋಲ್ ಯೂನಿಟ್ಗೆ ಹೋಗುತ್ತದೆ.

ಈ ನಡುವೆ ಏನೂ ಆಗುವುದಕ್ಕೆ ಅವಕಾಶವಿದೆ. ಇದು ಹೇಗೆಂದರೆ ತಾನು ಮತ ಒತ್ತಿದ ಮತಪತ್ರವನ್ನು ಇನ್ನಾರದೋ ಕೈಗೆ ಕೊಟ್ಟು ಮತಪೆಟ್ಟಿಗೆಗೆ ಹಾಕಲು ಹೇಳಿದ ಹಾಗೆ. ಇನ್ನು, ಮತದಾನದ ತಾಂತ್ರಿಕತೆ. ನಾನು ನನ್ನ ಮತವನ್ನು ಬ್ಯಾಲೆಟ್ ಯೂನಿಟ್ನಲ್ಲಿ ಒತ್ತುತ್ತೇನೆ. ಮತ ಸೀದಾ ಬ್ಯಾಲೆಟ್ ಯೂನಿಟ್ನಿಂದ ವಿವಿಪ್ಯಾಟ್ಗೆ ಹೋಗುತ್ತದೆ.

ನಾನು ಹಾಕಿದ ಮತವನ್ನು ಅದು ತೋರಿಸಬಹುದು. ಆದರೆ ಅಲ್ಲಿಂದ ಕಂಟ್ರೋಲ್ ಯೂನಿಟ್ಗೆ ದಾಟುವಾಗ ಅದೇ ಮತವೇ ಹೋಗಿದೆ ಎಂಬುದಕ್ಕೆ ಯಾವುದೇ ಖಾತ್ರಿ ಇಲ್ಲ. ಅದನ್ನು ನೊಡುವುದಕ್ಕೆ ಮತದಾರನಿಗೆ ಅವಕಾಶವಿಲ್ಲ. ಅದು ಇದರಲ್ಲಿನ ಮೂಲಭೂತ ಸಮಸ್ಯೆ.  ಬ್ಯಾಲೆಟ್ ಯೂನಿಟ್ ಮತ್ತು ಕಂಟ್ರೋಲ್ ಯೂನಿಟ್ ಯಾವುದನ್ನೇ ಆದರೂ ಎಲ್ಲಿಯೂ ಬಳಸಬಹುದು. ಆದರೆ, ವಿವಿಪ್ಯಾಟ್ ಅನ್ನು ನಿರ್ದಿಷ್ಟ ಕ್ಷೇತ್ರಕ್ಕೆ ಅನುಗುಣವಾಗಿ ಕಸ್ಟಮೈಸ್ ಮಾಡಬೇಕಿರುತ್ತದೆ.

ಮತದಾನಕ್ಕೆ ಸುಮಾರು 10-15 ದಿನಗಳಿವೆಯೆನ್ನುವಾಗ ಅಭ್ಯರ್ಥಿಗಳ ವಿವರವನ್ನು ವಿವಿಪ್ಯಾಟ್ಗೆ ಅಪ್ಲೋಡ್ ಮಾಡಲಾಗುತ್ತದೆ. ಸಿಂಬಲ್ ಅಪ್ಲೋಡ್ ಮೊಡ್ಯೂಲ್ ಎಂದು ಚುನಾವಣಾ ಆಯೋಗ ಅದನ್ನು ಕರೆಯುತ್ತದೆ. ಆಯೋಗದ ವೆಬ್ಸೈಟ್ನಲ್ಲಿ ದಾಖಲಾದ ಆಯಾ ಕ್ಷೇತ್ರವಾರು ಅಭ್ಯರ್ಥಿ ವಿವರಗಳನ್ನು ಡೌನ್ಲೋಡ್ ಮಾಡಿ ವಿವಿಪ್ಯಾಟ್ಗೆ ಅಪ್ಲೋಡ್ ಮಾಡಬೇಕಾಗುತ್ತದೆ.  

ಇಲ್ಲಿ ವಿವಿಪ್ಯಾಟ್ನ ಪ್ರೋಗ್ರಾಮಿಂಗ್ ಅನ್ನು ತಿರುಚಲು ಆಗುವುದಿಲ್ಲ. ಆದರೆ ಹೆಚ್ಚುವರಿ ಡೇಟಾ ಮೂಲಕ ಅಂತಿಮವಾಗಿ ಅದು ಬದಲಾಗುವಂತೆ ಮಾಡುವ ಸಾಧ್ಯತೆಯಿದೆ. ಇದಕ್ಕೆ ಬಹಳ ದಾರಿಗಳಿವೆ.

ಸರಳ ಉದಾಹರಣೆಯನ್ನು ನೋಡಬೇಕೆಂದರೆ, ವಿವಿಪ್ಯಾಟ್ನಲ್ಲಿ ನಿರ್ದಿಷ್ಟ ಫಾರ್ಮ್ಯಾಟ್ನಲ್ಲಿ ಡೇಟಾ ಅಪ್ಲೋಡ್ ಆಗಿದೆ ಎಂದುಕೊಳ್ಳಿ. ಸಾಮಾನ್ಯವಾಗಿ ಅದು 3 ಕಾಲಂಗಳಲ್ಲಿ ಇರುತ್ತದೆ. ಅಭ್ಯರ್ಥಿಯ ಸಂಖ್ಯೆ, ಅಭ್ಯರ್ಥಿಯ ಹೆಸರು ಹಾಗೂ ಅಭ್ಯರ್ಥಿಯ ಚಿಹ್ನೆ. ಒಂದು ವೇಳೆ 4ನೇ ಕಾಲಂ ಇದ್ದರೆ ಅದರಲ್ಲಿ ಪಕ್ಷದ ಹೆಸರು ಇರುತ್ತದೆ.

ಒಬ್ಬ ನಿರ್ದಿಷ್ಟ ಅಭ್ಯರ್ಥಿಯ ಪರವಾಗಿ ಏನೋ ಆಗಬೇಕಿದ್ದಲ್ಲಿ, ಡೇಟಾದಲ್ಲಿ ಆ ಅಭ್ಯರ್ಥಿಯ ಹೆಸರಿನ ಮುಂದೆ 5ನೇ ಕಾಲಂನಲ್ಲಿ ನಕ್ಷತ್ರಚಿಹ್ನೆ ಹಾಕಲಾಗುತ್ತದೆ. ಆಗ, ಪ್ರತಿ 3ನೇ, 5ನೇ, 7ನೇ ಮತಗಳ ಕ್ರಮದಲ್ಲಿ ಮತಗಳು ಆ ನಿರ್ದಿಷ್ಟ ಅಭ್ಯರ್ಥಿಯ ಪಾಲಿಗೆ ಹೋಗುತ್ತವೆ.

ಮತದಾರನಿಗೆ ಮಾತ್ರ ತಾನು ಹಾಕಿದ ಅಭ್ಯರ್ಥಿಗೇ ಮತ ಬಿದ್ದಿದೆ ಎಂದು ಪ್ರಿಂಟ್ನಲ್ಲಿ ಕಾಣಿಸಿದರೂ ಕೂಡ ಅಲ್ಲಿ ಬೇರೆಯೇ ಆಗಿರುತ್ತದೆ. ಇಲ್ಲಿ ಮತ್ತೊಂದು ಸಂಗತಿಯೆಂದರೆ, ಈ ಇಡೀ ಡೇಟಾವನ್ನು ವಿವಿಪ್ಯಾಟ್ಗೆ ಅಪ್ಲೋಡ್ ಮಾಡಿದ ವ್ಯಕ್ತಿಗೆ ಕೂಡ ಇದು ಗೊತ್ತಾಗುವುದೇ ಇಲ್ಲ.  

ಅಂದರೆ ಈ ತಿರುಚುವಿಕೆ ವಿವಿಪ್ಯಾಟ್ ಹಂತದಲ್ಲಿಯೇ ಆಗಿರುತ್ತದೆ. ಇಲ್ಲಿ ಬ್ಯಾಲೆಟ್ ಯೂನಿಟ್ ಇತರ ಎರಡರ ನಡುವೆ ಸಂವಹನ ನಡೆಸುತ್ತದೆ ಮತ್ತು ಒತ್ತಲಾದ ಮತವನ್ನು ಏಕಕಾಲದಲ್ಲೇ ಕಂಟ್ರೋಲ್ ಯೂನಿಟ್ಗೂ ವಿವಿಪ್ಯಾಟ್ಗೂ ಕಳಿಸುತ್ತದೆ.

ಹಾಗೂ ಆ ಸಂಕೇತವೇ ವಿವಿಪ್ಯಾಟ್ನಿಂದ ಮುದ್ರಿತವಾಗಿ ಮತದಾರನಿಗೆ ಕಾಣಿಸಿರುತ್ತದೆ. ಅನಂತರ ವಿವಿಪ್ಯಾಟ್ಗೂ ಕಂಟ್ರೋಲ್ ಯೂನಿಟ್ಗೂ ಸಂಪರ್ಕ ಇರುವುದಿಲ್ಲ. ಇನ್ನು ಈ ವ್ಯವಸ್ಥೆಯ ತೀರಾ ಪ್ರಾಥಮಿಕ ಅವಸ್ಥೆಯ ಬಗ್ಗೆ ವಿವರಿಸುವ ದೇಶಪಾಂಡೆ ಹೇಳುವುದು ಹೀಗೆ:

 

ಇವಿಎಂನಲ್ಲಿ ಫೇರಿಂಗ್ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಹೊಸ ಮಾಡೆಲ್ ಕಾರಿನ ಉದಾಹರಣೆಯಿಂದಲೇ ಸರಳವಾಗಿ ಹೇಳುವುದಾದರೆ, ಕಾರು ಕೀಯನ್ನೂ, ಕೀ ಕಾರನ್ನೂ ಗುರುತಿಸುವ ವ್ಯವಸ್ಥೆ ಅದರಲ್ಲಿರುತ್ತದೆ.

ಇದು ಕಾರಿನಲ್ಲಿಯ ಫೇರಿಂಗ್. ಒಂದು ಕಾರಿನ ಕೀಯಿಂದ ಇನ್ನೊಂದು ಕಾರನ್ನು ಅನ್ಲಾಕ್ ಮಾಡಲು ಆಗಲಾರದು. ಆದರೆ, ಬ್ಯಾಲೆಟ್ ಯೂನಿಟ್ ಮತ್ತು ಕಂಟ್ರೋಲ್ ಯೂನಿಟ್ನಲ್ಲಿನ ವ್ಯವಸ್ಥೆಯಲ್ಲಿ ಯಾವುದೇ ಕಂಟ್ರೋಲ್ ಯೂನಿಟ್ಗೆ ಯಾವುದೇ ಬ್ಯಾಲೆಟ್ ಯೂನಿಟ್ ಜೊತೆ ಸಂವಹನ ಸಾಧ್ಯ.

ಇದೇನೊ ಒಳ್ಳೆಯದೇ. ಆದರೆ, ಮತ ಎಣಿಕೆಗೆ ಮೊದಲು ಒಂದು ಕಂಟ್ರೋಲ್ ಯೂನಿಟ್ನ ಬದಲಿಗೆ ಇನ್ನೊಂದನ್ನು ಅಳವಡಿಸುವುದು ಕೂಡ ನಡೆಯಬಹುದು. ಒಮ್ಮೆ ಮತದಾನ ಮುಗಿಯಿತೆಂದರೆ ಅಲ್ಲಿಗೆ ಬ್ಯಾಲೆಟ್ ಯೂನಿಟ್ನ ಕೆಲಸ ಮುಗಿದುಹೋಗಿರುತ್ತದೆ. ಹಾಗಾಗಿ, ಬ್ಯಾಲೆಟ್ ಯೂನಿಟ್ ಮತ್ತು ಕಂಟ್ರೋಲ್ ಯೂನಿಟ್ ನಡುವೆ ವೈರ್ಲೆಸ್ ಪ್ರಕ್ರಿಯೆ ಸಾಧ್ಯವಿಲ್ಲ.

ಅವನ್ನು ಸೀರಿಯಲ್ ಕೇಬಲ್ ಮೂಲಕವೇ ಜೋಡಿಸಬೇಕಿರುತ್ತದೆ. ಹೀಗೆ ಜೋಡಿಸದೇ ಹೋದಲ್ಲಿ ಯಾವುದೋ ಬ್ಯಾಲೆಟ್ ಯೂನಿಟ್ ಇನ್ಯಾವುದೋ ಕಂಟ್ರೋಲ್ ಯೂನಿಟ್ ಜೊತೆ ಹೋಗುವ ಸಾಧ್ಯತೆ ಇರುತ್ತದೆ. ಅದನ್ನು ತಪ್ಪಿಸಲು ಫೇರಿಂಗ್ ಕೇಬಲ್ ಬೇಕು. ಬ್ಯಾಲೆಟ್ ಯೂನಿಟ್ ಮತ್ತು ಕಂಟ್ರೋಲ್ ಯೂನಿಟ್ ಎರಡರ ಫೇರಿಂಗ್ ಪ್ರಕ್ರಿಯೆ ಮತದಾನದ ದಿನ ನಡೆಯುತ್ತದೆ. ಅದನ್ನು ಆ ಫೇರಿಂಗ್ ನ ಎಲೆಕ್ಟ್ರಾನಿಕ್ ಐಡಿ, ತಾರೀಖು ಮತ್ತು ಸಮಯದ ಉಲ್ಲೇಖ ಸಹಿತ ಮಾಡಲಾಗಿರುತ್ತದೆ.

ಆಗ ಡೂಪ್ಲಿಕೇಟ್ ಮಾಡುವ ಸಾಧ್ಯತೆ ಇರುವುದಿಲ್ಲ. ಇದನ್ನು ಮತ ಎಣಿಕೆ ವೇಳೆ ಪುನಃ ಪರಿಶೀಲಿಸಿಕೊಳ್ಳಲಾಗುತ್ತದೆ. ಅಂದರೆ ಮತದಾನಕ್ಕೆ ಮೊದಲು ಹಾಗು ಮತ ಎಣಿಕೆಗೆ ಮೊದಲು ಅವುಗಳ ಫೇರಿಂಗ್ ಅನ್ನು ಪರಿಶೀಲಿಸಲಾಗುತ್ತದೆ.

ಇನ್ನು ಜಿಯೋ ಲೊಕೇಶನ್ ಟ್ರ್ಯಾಕರ್ ಏಕೆ ಅಗತ್ಯವಿರುತ್ತದೆ ಎಂಬ ವಿಚಾರ. ಆಧುನಿಕ ಜಗತ್ತಿನ ಎಲ್ಲ ಸೂಕ್ಷ್ಮ ಸನ್ನಿವೇಶದಲ್ಲೂ ಇದು ಅನ್ವಯವಾಗುತ್ತದೆ. ಬೇರೆ ಬೇರೆ ವಿಧದ ಜಿಯೋ ಟ್ಯಾಗಿಂಗ್ ಇವೆ. ಅವುಗಳಲ್ಲಿ ಸರಳವಾದ ಒಂದೆಂದರೆ ಜಿಪಿಎಸ್ ಟ್ರಾನ್ಸ್ಮೀಟರ್.

ನಮ್ ಫೋನ್ನಲ್ಲಿ ಜಿಪಿಎಸ್ ರಿಸೀವರ್ ಇರುತ್ತದೆ. ಜಿಪಿಎಸ್ ಮೂಲತಃ ಉಪಗ್ರಹದ ವ್ಯವಸ್ಥೆಯಾಗಿದೆ. ಗೂಗಲ್ ಮ್ಯಾಪ್ ಬಳಕೆ ಸಾಧ್ಯವಾಗುವುದು ಈ ಹಿನ್ನೆಲೆಯಿಂದ.

ಮತದಾನ ಮುಗಿಯಿತು ಎಂದಾದ ಬಳಿಕ ಕಂಟ್ರೋಲ್ ಯೂನಿಟ್ಗಳನ್ನು ಆ ಜಾಗದಿಂದ ಬೇರೆಡೆಗೆ ಸ್ಥಳಾಂತರಿಸಲಾಗುತ್ತದೆ. ಅದರ ಬಗ್ಗೆ ಉಸ್ತುವಾರಿ ವಹಿಸಿರುವವರು, ಚುನಾವಣಾ ಆಯೋಗ, ನ್ಯಾಯಾಂಗ, ಅಂತರರಾಷ್ಟ್ರೀಯವಾಗಿ ಗುರುತಾಗಿರುವ ಕೆಲವು ನಾಗರಿಕ ಸಮಾಜಗಳು ಅವುಗಳ ಸ್ಥಳದ ಬಗ್ಗೆ ತಿಳಿದಿರಬೇಕಾಗುತ್ತದೆ.

ಅವೆಲ್ಲಿ ಹೋಗಿವೆ ಎಂಬುದನ್ನು ಪ್ರತಿಕ್ಷಣವೂ  ಗಮನಿಸಬೇಕಾಗುತ್ತದೆ. ಕಂಟ್ರೋಲ್ ಯೂನಿಟ್ಗಳನ್ನು ಬೇರೆಲ್ಲೋ ಹಾದಿ ತಪ್ಪಿಸಿ ಒಯ್ದರೆ ಅದು ತಕ್ಷಣವೇ ಗಮನಕ್ಕೆ ಬರುತ್ತದೆ. ಚುನಾವಣಾ ವ್ಯವಸ್ಥೆ ಮುಕ್ತ, ನ್ಯಾಯಯುತ ಮತ್ತು ಪಾರದರ್ಶಕವಾಗಿರಬೇಕೆಂಬ ಹಿನ್ನೆಲೆಯಲ್ಲಿ ಇದು ಮುಖ್ಯವಾಗುತ್ತದೆ. ಪಾರದರ್ಶಕತೆ ಎನ್ನುವುದು ವಿಶ್ವಾಸಕ್ಕೆ, ನಂಬಿಕೆಗೆ ಬಹಳ ಮುಖ್ಯ.

ಕೆಲ ಸಂದರ್ಭದಲ್ಲಿ ಇವಿಎಂಗಳು ನಾಪತ್ತೆಯಾಗಿರುವುದಿದೆ ಎಂಬ ವಿಚಾರಕ್ಕೆ ದೇಶಪಾಂಡೆಯವರು ಹೇಳುವುದು: ಜಿಪಿಎಸ್ ಉಪಕರಣ ಇವಿಎಂನ ಕಂಟ್ರೋಲ್ ಯೂನಿಟ್ನಲ್ಲಿ ಅಳವಡಿಸಲಾದ ವ್ಯವಸ್ಥೆಯಲ್ಲ. ಪ್ರತ್ಯೇಕ ಜಿಪಿಎಸ್ ಸಾಧನವನ್ನು ಕಂಟ್ರೋಲ್ ಯೂನಿಟ್ ಒಳಗೆ ಇಡಲಾಗುತ್ತದೆ.

ಹ್ಯಾಕ್ ಆಗುವುದನ್ನು ತಪ್ಪಿಸಲು ಅವನ್ನು ಯಾವುದಕ್ಕೂ ಸಂಪರ್ಕಿತವಾಗದಂತೆ ಇಡಬೇಕಿರುವ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವಂತಿಲ್ಲ. ಆದರೆ ಜಿಪಿಎಸ್ ಸಾಧನ ಬಳಕೆ ಮೂಲಕ ಅವನ್ನು, ಅವುಗಳ ಸ್ಥಳವನ್ನು ಪತ್ತೆ ಹಚ್ಚಬಹುದು.

ಚುನಾವಣಾ ವ್ಯವಸ್ಥೆಯ ನಿಖರತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ನಂಬಿಕೆ ಇಡಬಹುದೆ ಎಂಬ ಪ್ರಶ್ನೆಗೆ ಮಾಧವ್ ದೇಶಪಾಂಡೆ ಯವರು ಹೇಳೋದು: ಪಾರದರ್ಶಕತೆ ಇದ್ದಾಗ ನಂಬಿಕೆ, ವಿಶ್ವಾಸಾರ್ಹತೆ, ಗ್ರಹಿಕೆ ಇವೆಲ್ಲವೂ ತಂತಾನೇ ಸಾಧ್ಯವಾಗುತ್ತದೆ. ಪಾರದರ್ಶಕತೆ ಬರುತ್ತಿದ್ದಂತೆಯೇ ಸಹಜವಾಗಿಯೇ ಚುನಾವಣಾ ವ್ಯವಸ್ಥೆ ಹೆಚ್ಚು ವಿಶ್ವಾಸಾರ್ಹವೂ ಆಗುತ್ತದೆ. ಅದು ಬಹಳ ಬೇಗ ಆಗಬೇಕು.

ಚುನಾವಣೆಯನ್ನು ಮುಕ್ತ, ನ್ಯಾಯತಸಮ್ಮತ, ವಿಶ್ವಾಸಾರ್ಹವಾಗಿಸಲು, ಮತದಾರ ತಾನು ಹಾಕಿದ ಮತ ಸರಿಯಾದ ಅಭ್ಯರ್ಥಿಗೆ ಹೋಗಿದೆ ಎಂದು ವಿಶ್ವಾಸ ಇರಿಸುವಂತಾಗಲು ಚುನಾವಣಾ ಆಯೋಗ ಸುಧಾರಣೆಗಳನ್ನು ತರಲೇಬೇಕು. ಈಗಿನದು 20 ವರ್ಷಗಳಷ್ಟು ಹಳೆಯ ವ್ಯವಸ್ಥೆ. ಹೊಸ ತಂತ್ರಜ್ಞಾನ ಲಭ್ಯವಿದೆ. ಹಾಗಾಗಿ ಹೊಸ ಸುಧಾರಣೆಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ.

ಮಾಡದೇ ಇರುವುದಕ್ಕಿಂತ ತಡವಾಗಿಯಾದರೂ ಅದನ್ನು ಮಾಡುವುದು ಒಳ್ಳೆಯದು. ಈಗಲೂ ಅಂಥ ಸುಧಾರಣೆಗಳ ಅಳವಡಿಕೆಯನ್ನು ಶುರು ಮಾಡಬಹುದು. ಒಂದು ಅಥವಾ ಒಂದೂವರೆ ತಿಂಗಳಲ್ಲಿ ಮುಗಿಸಬಹುದಾದ ಕೆಲಸ ಅದು.

ತಿರುಚುವಿಕೆ ಸಾಧ್ಯವಿಲ್ಲ ಎನ್ನಿಸುವಂಥ ಸುಧಾರಣೆಗಳ ಮೂಲಕ ವಿಶ್ವಾಸಾರ್ಹತೆಯನ್ನು ತರುವ ಕೆಲಸ ಆಗಬೇಕು ಎನ್ನುತ್ತಾರೆ ಮಾಧವ್ ದೇಶಪಾಂಡೆ.  ಆದರೆ ಅವರು ಸಲಹೆ ಕೊಟ್ಟ ಹಾಗೆ ಇವಿಎಂ ವ್ಯವಸ್ಥೆಯಲ್ಲಿ ಬದಲಾವಣೆ ತಂದು ಅವನ್ನು ಸಂಪೂರ್ಣ ಸುರಕ್ಷಿತ ಹಾಗೂ ಪಾರದರ್ಶಕ ವಾಗಿಸಲು ಚುನಾವಣಾ ಆಯೋಗ ಸಿದ್ಧವಿದೆಯೆ ?ಅದು ಮುಖ್ಯ ಪ್ರಶ್ನೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!