ಮಾಯಾವತಿ, ಉವೈಸಿ ಆಯ್ದ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕುತ್ತಿರುವ ಹಿಂದಿನ ಆಟವೇನು ?

Update: 2024-03-18 04:43 GMT
Editor : Ismail | Byline : ಆರ್. ಜೀವಿ

 ಉವೈಸಿ, ಮಾಯಾವತಿ | Photo: NDTV 

​ಒಂದು ಕಡೆ ಬಿಜೆಪಿಯಿಂದ ಈ ಬಾರಿ 400 ಸೀಟು ಎಂಬ ಅಬ್ಬರ, ಇನ್ನೊಂದೆಡೆ ಈ ಬಾರಿ 370 ದಾಟುತ್ತೇವೆ ಎಂಬ ಪ್ರಚಾರದ ಭರಾಟೆ.

ಅದರ ಜೊತೆಜೊತೆಗೆ ನಡೆಯುತ್ತಿರುವ ಆಟ ಮಾತ್ರ ಈ ಬಾರಿ ಹೇಗಾದರೂ 272ಕ್ಕೆ ತಲುಪಿದರೆ ಸಾಕು ಎಂಬಂತಹ ಹೆಣಗಾಟವನ್ನೇ ಢಾಳಾಗಿ ಕಾಣಿಸುತ್ತಿದೆ. ಒಂದೊಂದು ಸೀಟನ್ನು ಹೇಗೆ ಉಳಿಸಿಕೊಳ್ಳೋದು ಅಥವಾ ಹೊಸತಾಗಿ ಗೆಲ್ಲೋದು , ಅದಕ್ಕಾಗಿ ಏನೇನು ರಣತಂತ್ರ ಅನುಸರಿಸಬೇಕು ಎಂದು ಬಿಜೆಪಿ ಭಾರೀ ತಲೆಕೆಡಿಸಿಕೊಂಡಿದೆ.

ವಿಪಕ್ಷ ಸರಕಾರ ಉರುಳಿಸುವುದು, ವಿಪಕ್ಷ ಮೈತ್ರಿ ಒಡೆಯುವುದು, ವಿಪಕ್ಷ ನಾಯಕರನ್ನು ತಮ್ಮತ್ತ ಸೆಳೆಯುವುದು, ಅಥವಾ ಅವರನ್ನು ತಟಸ್ಥರಾಗಿಸುವುದು ಇವೆಲ್ಲವೂ ಒಂದೊಂದೇ ರಾಜ್ಯದಲ್ಲಿ ನಡೆಯುತ್ತಲೇ ಇದೆ. ಅಂದ್ರೆ ಒಂದು ವಿಷಯ ಮಾತ್ರ ಇಲ್ಲಿ ಅತ್ಯಂತ ಸ್ಪಷ್ಟ. ಬಿಜೆಪಿಯದ್ದು ಈ ಬಾರಿ 370 ಅಥವಾ 400 ಸೀಟು ಗಳಿಸುವ ಉಮೇದು ಅಲ್ವೇ ಅಲ್ಲ. ಇದು 272 ನ್ನು ತಲುಪಲೇಬೇಕಾದ ಇನ್ನಿಲ್ಲದ ಪ್ರಯತ್ನ ಮಾತ್ರ.

ಅದಕ್ಕಾಗಿ ಈಗ ಒಂದು ರಾಜ್ಯದಲ್ಲಿ ತನ್ನದೇ ಪಕ್ಷದ ಸರಕಾರವನ್ನು ದಿಢೀರನೆ ಉರುಳಿಸಿ ಅಲ್ಲಿ ತನ್ನದೇ ಹೊಸ ಸರಕಾರ ತಂದಿದೆ ಬಿಜೆಪಿ.

ಈಗ ಬಿಜೆಪಿಯ ಇನ್ನೊಬ್ಬ ಸಿಎಂ​ ಇದ್ದಕ್ಕಿದ್ದಂತೆ ಮನೆಗೆ ಹೋಗಿದ್ದಾರೆ. ಹರ್ಯಾಣದಲ್ಲಿ ​ಸರಕಾರ ಬದಲಾವಣೆಯಾಗಿದೆ. ಮನೋಹರ ಲಾಲ್ ಖಟ್ಟರ್ ಅವರನ್ನು ಮೋದಿ ಹಾಡಿ ಹೊಗಳಿದ ಮಾರನೇ ದಿನವೇ ಖಟ್ಟರ್ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ಹಿಂದಿನ ದಿನ ಅವರನ್ನು​ ಎರ್ರಾಬಿರ್ರಿ ಪ್ರಶಂಸಿಸಿದ ಪ್ರಧಾನಿ, ಮರುದಿನವೇ ಅವರನ್ನು ಮನೆಗೆ ಕಳಿಸಿದ್ದಾರೆ.

ಜೊತೆಗೆ​ ಅಷ್ಟೇ ಹಠಾತ್ ಆಗಿ ಮೈತ್ರಿ ಪಕ್ಷ​ ಜೆಜೆಪಿಯ ಡಿಸಿಎಂ ದುಷ್ಯಂತ್ ಚೌಟಾಲಾ ಅವರನ್ನೂ ಬಿಜೆಪಿ ಮನೆಗೆ ಕಳಿಸಿದೆ.

​ಹಾಗಾದರೆ ಇದರಲ್ಲೂ ಏನೋ ಒಂದು ಆಟ ಇದೆಯೆ? ​2018ರಲ್ಲಿ ಕುಟುಂಬಕ್ಕೆ ಸೆಡ್ಡು ಹೊಡೆದು ದುಷ್ಯಂತ್ ಹೊಸ ಪಕ್ಷ ಸ್ಥಾಪನೆ,​ ಅದರ ಭರ್ಜರಿ ಪ್ರಚಾರ, ಮತ್ತೆ ಬಿಜೆಪಿಯನ್ನು ವಿರೋಧಿಸಿ ​ರಾಜ್ಯಾದಂತ ಚುನಾವಣಾ ಪ್ರಚಾರ , ಚುನಾವಣೆ ಆದ ಕೂಡಲೇ ಬಿಜೆಪಿ ಜೊತೆ ಮೈತ್ರಿ ಸರಕಾರ ಮಾಡಿದ್ದ ದುಷ್ಯಂತ್ ​- ಇವೆಲ್ಲದರ ಹಿಂದೆ ಬಿಜೆಪಿಯೇ ಇತ್ತು ಎಂದು ಹೇಳಲಾಗುತ್ತಿತ್ತು.

ಈಗ ಮತ್ತೆ ಜಾಟರ ಓಟು ವಿಭಜಿಸಲೆಂದೇ​ ದುಷ್ಯಂತ್ ಅನ್ನು ಮನೆಗೆ ಕಳಿಸಿದ ನಾಟಕ ಆಡಲಾಗುತ್ತಿದೆಯೇ ? ಹರ್ಯಾಣದ ಸಿಎಂ ಖಟ್ಟರ್ ಅವಧಿಯಲ್ಲಿ ಅಲ್ಲಿನ ಮೇವಾತ್ ಹಾಗು ನೂಹ್ ನಲ್ಲಿ ಅಲ್ಪಸಂಖ್ಯಾತರ ಮೇಲೆ ಭಾರೀ ಅನ್ಯಾಯ ನಡೆದಿತ್ತು. ದೌರ್ಜನ್ಯ ನಡೆದಿತ್ತು.​ ನರಮೇಧದ ಮಾದರಿಯಲ್ಲಿ ಅಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರು, ಚಿಂತಕರು ದೂರಿದ್ದರು.

ಇಷ್ಟೆಲ್ಲಾ ಅನ್ಯಾಯ ಆಗುವಾಗ ಅದಕ್ಕೆ ಪರೋಕ್ಷ ಪ್ರೋತ್ಸಾಹ ಕೊಟ್ಟಿದ್ದ ಖಟ್ಟರ್ ಮನೆಗೆ ಹೋಗುವಾಗ ಇನ್ ಶಾ ಅಲ್ಲಾಹ್, ಗಾಂಧೀಜಿ ಎಂದೆಲ್ಲ ಇದ್ದಕ್ಕಿದ್ದಂತೆ ಸೆಕ್ಯುಲರ್ ಆದವರಂತೆ ಮಾತಾಡಿ ಹೋಗಿ​ದ್ದಾರೆ. ಮಾರ್ಚ್ 9ರಂದು ಮೇವಾತ್‌ನಲ್ಲಿ ನಡೆದ ರ್ಯಾಲಿಯಲ್ಲಿ, ಖಟ್ಟರ್, ಮತ್ತೆ ಮೇವಾತ್​ ಗೆ ಬರುತ್ತೇನೆ, ಇನ್ಶಾ ಅಲ್ಲಾಹ್ ಎಂದಿದ್ದರು. ಅದಾಗಿ ಎರಡು ದಿನಗಳ ನಂತರ ಮಾರ್ಚ್ 11ರಂದು ದ್ವಾರಕಾ ಎಕ್ಸ್ ಪ್ರೆಸ್ ವೇ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ತಮ್ಮ ಮತ್ತು ಖಟ್ಟರ್ ಅವರ ಸ್ನೇಹದ ಕಥೆಯನ್ನು ವೇದಿಕೆಯ ಮೇಲೆ ಹೇ​ಳಿದ್ದರು.

ಖಟ್ಟರ್​ ಅವರ ಬೈಕ್ನಲ್ಲಿ ಹಿಂದೆ ಕೂತು ಹರ್ಯಾಣ​ದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದ ನೆನಪನ್ನು ಮೋದಿ ಹೇಳಿಕೊಂಡ ಮಾರನೇ ದಿನವೇ ಅದೇ ಖಟ್ಟರ್ ಅನ್ನು ಯಾವ ಮಮಕಾರವೂ ಇಲ್ಲದೆ ಮನೆಗೆ ಕಳಿಸಲಾಗಿದೆ. ಇದು ಮೋದಿ ರಾಜಕಾರಣ, ​ಇದೇ ಇವತ್ತಿನ ಬಿಜೆಪಿ ರಾಜಕಾರಣ.

ಬಿಜೆಪಿಯಲ್ಲಿ ಯಾರ ಕುರ್ಚಿ ಹೀಗೆ ಯಾವಾಗ ಹೋಗುತ್ತದೆ ಎಂದು ಹೇಳುವುದೇ ಸಾಧ್ಯವಿಲ್ಲ. ಹೊಗಳುತ್ತ ಹೊಗಳುತ್ತಲೇ ಕರೆದು ಕೂರಿಸುತ್ತಾರೆ. ಹೊಗಳುತ್ತ ಹೊಗಳುತ್ತಲೇ ಇದ್ದಕ್ಕಿದ್ದಂತೆ ಮನೆಗೆ ಕಳಿಸಿಬಿಡುತ್ತಾರೆ.ಖಟ್ಟರ್ ಅವರಿಗೆ ಇನ್ನೂ ಅಧಿಕಾರದಲ್ಲಿರುವ ಬಗ್ಗೆ ಭರವಸೆಯಿತ್ತು ಎನ್ನುವುದು ಅವರ ಮೇವಾತ್ ಕಾರ್ಯಕ್ರಮದ ಮಾತಿನಿಂದಲೇ ಗೊತ್ತಾಗುತ್ತದೆ.

ಆದರೆ ಅದಾದ ಬೆನ್ನಲ್ಲೇ ಅವರು ಕುರ್ಚಿಯಿಂದ ಇಳಿಯಬೇಕಾಯಿತು. ಬಿಜೆಪಿಗಾಗಿ ಏನೆಲ್ಲ ಮಾಡಿದ ಮೇಲೆಯೂ ಅವರ ಕುರ್ಚಿ ಹೋಗಿದೆ. ಬಿಜೆಪಿಗೆ ತನ್ನ ಮಿತ್ರಪಕ್ಷವನ್ನು ಹೊರ ಕಳಿಸುವುದಕ್ಕೆ ಕೂಡ ಯಾವುದೇ ದಾಕ್ಷಿಣ್ಯವಿಲ್ಲ. ಅಷ್ಟೇ ಕಟುವಾಗಿ ತನ್ನ ಮುಖ್ಯಮಂತ್ರಿಯನ್ನೂ ತೆಗೆದುಹಾಕಬಲ್ಲದು. ಈಗ ಖಟ್ಟರ್ ಅವರನ್ನು ಕೆಳಗಿಳಿಸಲಾಗಿದೆ, ಬಿಜೆಪಿ ರಾಜ್ಯಾಧ್ಯಕ್ಷ ನಯಾಬ್ ಸಿಂಗ್ ಸೈನಿ ನೂತನ ಸಿಎಂ ಆಗಿದ್ದಾರೆ.

2019ರ ಹರಿಯಾಣ ವಿಧಾನಸಭೆ ಚುನಾವಣೆಯ ನಂತರ ಜೆಜೆಪಿ ನಾಯಕ ದುಷ್ಯಂತ್ ಚೌಟಾಲಾ ಬಿಜೆಪಿಯ ಬೆಂಬಲಕ್ಕೆ ನಿಂತಿದ್ದರು.

ಜೆಜೆಪಿ ಜೊತೆ ಸೇರಿ ಬಿಜೆಪಿ ಸರ್ಕಾರವನ್ನು ರಚಿಸಿತ್ತು. ಬಿಜೆಪಿ 90ರಲ್ಲಿ 40 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸರಳ ಬಹುಮತಕ್ಕೆ 6 ಸ್ಥಾನಗಳ ಕೊರತೆ ಇತ್ತು. ಆಗ 10 ಸ್ಥಾನಗಳನ್ನು ಗೆದ್ದಿದ್ದ ಜನನಾಯಕ ಜನತಾ ಪಕ್ಷದೊಂದಿಗೆ ಸೇರಿ ಮೈತ್ರಿ ಸರ್ಕಾರ ರಚಿಸಿತ್ತು.

ಅಲ್ಲಿನ ರಾಜಕೀಯ ಗಣಿತವೇ ಕುತೂಹಲಕಾರಿ. ಈಗ ಒಬಿಸಿಗಳ ಓಲೈಕೆಗೆ, ಒಬಿಸಿಗೆ ಸಿಎಂ ಹುದ್ದೆ ಕೊಟ್ಟಿದ್ದೇವೆ ಎಂದು ಹೇಳುವುದಕ್ಕೆ ಸೈನಿ ಸಮಾಜಕ್ಕೆ ಸಿಎಂ ಹುದ್ದೆ ನೀಡಲಾಗಿದೆ. ಜಾಟ್ ಬಲವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು, ಕಡೆಗೆ ಆ ಸಮುದಾಯವನ್ನೇ ನಿರ್ಲಕ್ಷಿಸಿ ರಾಜಕಾರಣ ಮಾಡಲು ನೋಡುವುದು, ಅದಕ್ಕಾಗಿ ಒಬಿಸಿ ಹೆಸರಿನಲ್ಲಿ ಆಟವಾಡುವುದು ಇದನ್ನೇ ಮಾಡಿಕೊಂಡು ಬಂದಿದೆ ಬಿಜೆಪಿ.

ಬಿಜೆಪಿ ಇದ್ದಕ್ಕಿದ್ದಂತೆ ಮುಖ್ಯಮಂತ್ರಿಗಳನ್ನು ಬದಲಿಸುವುದನ್ನು ನೋಡುತ್ತ ಬಂದಿದ್ದೇವೆ. ಈಗ ಹರ್ಯಾಣದಲ್ಲಿ ಖಟ್ಟರ್ ಕೆಳಗಿಳಿಸಿ ಸೈನಿ ಸಮುದಾಯದ ವ್ಯಕ್ತಿಯನ್ನು ಆ ಹುದ್ದೆಗೆ ಏರಿಸಿರುವಂತೆ, ಗುಜರಾತ್ನಲ್ಲಿ ವಿಜಯ್ ರೂಪಾನಿಯನ್ನು ಇದ್ದಕ್ಕಿದ್ದಂತೆ ಕೆಳಗಿಳಿಸಲಾಗಿತ್ತು. ಮಧ್ಯಪ್ರದೇಶದಲ್ಲಿ ಚುನಾವಣೆಯಲ್ಲಿ ದೊಡ್ಡ ಗೆಲುವಿನ ​ಬಳಿಕವೂ ಅಲ್ಲಿನ ಆಗಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬದಲಿಸಲಾಯಿತು.

ಹೀಗೆ ಇದ್ದಕ್ಕಿದ್ದಂತೆ ಮುಖ್ಯಮಂತ್ರಿಗಳನ್ನು ಬದಲಿಸುವುದರ ಹಿಂದೆ ಇರುವುದು ಜಾತಿ ರಾಜಕಾರಣ ಮಾತ್ರವೆ? ಅಥವಾ ಬೇರೆ ಏನಾದರೂ ಕಾರಣಗಳಿವೆಯೆ? ಬಿಜೆಪಿ ಜಾತಿ ರಾಜಕಾರಣ ಮಾಡುವುದಿಲ್ಲ ಎಂದಾದರೆ ಯುಪಿಯಲ್ಲಿ ಯಾದವ ಸಮ್ಮೇಳನ ಯಾಕಾಗು​ತ್ತಿದೆ​ ? ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಅಲ್ಲಿ ಯಾದವ್ ಸಮ್ಮೇಳನ ಮಾಡುವಲ್ಲಿನ ರಾಜಕಾರಣ ಏನು?

ಹಿಂದುತ್ವದ ನಾಯಕ ಆದಿತ್ಯನಾಥ್ ಸಿಎಂ ಆಗಿರುವ ರಾಜ್ಯದಲ್ಲಿ ಬೇರೆ ರಾಜ್ಯದ ಮುಖ್ಯಮಂತ್ರಿ ಹೋಗಿ ಯಾದವ ಸಮ್ಮೇಳನ, ಸೈನಿ ಸಮ್ಮೇಳನ ಮಾಡುವುದು ಏಕೆ? ಖಟ್ಟರ್ ಇಟ್ಟುಕೊಂಡು ಚುನಾವಣೆಗೆ ಹೋಗುವ ಸಾಹಸವನ್ನು ಬಿಜೆಪಿ ​ಮಾಡಲು ರೆಡಿ ಇರಲಿಲ್ಲ.

2014ರಲ್ಲಿ ಖಟ್ಟರ್ ಹೆಸರಿನಲ್ಲಿ ಬಿಜೆಪಿ ಚುನಾವಣೆ ಎದುರಿಸಿರಲಿಲ್ಲ. 2019ರಲ್ಲಿ ಖಟ್ಟರ್ ಮುಂದಿಟ್ಟುಕೊಂಡು ಚುನಾವಣೆಗೆ ಹೊದ ಬಿಜೆಪಿಗೆ ಶೇ.22 ಮತಗಳು ಕಡಿಮೆಯಾದವು. ಹಿಂದಿನ ಚುನಾವಣೆಯಲ್ಲಿ ಗೆದ್ದುದಕ್ಕಿಂತ 7 ಸ್ಥಾನಗಳು ಕಡಿಮೆಯಾದವು. ಜಾಟ್ ಸಮುದಾಯವನ್ನು ನಿರ್ಲಕ್ಷಿಸಿದ್ದರ ಪರಿಣಾಮ ಅದಾಗಿತ್ತು.

ಬಿಜೆಪಿಯಿಂದ ದೂರ ಸರಿದಿದ್ದ ಜಾಟ್ ಸಮುದಾಯದ ಬೆಂಬಲವನ್ನು ಪಡೆಯಲು ದುಷ್ಯಂತ್ ಚೌಟಾಲ ಜೊತೆಗಿನ ಮೈತ್ರಿಯಿಂದ ಬಿಜೆಪಿಗೆ ಸಾಧ್ಯವಾಗಿತ್ತು. ಈಗಲೂ ಅಂಥದೇ ಏನಾದರೂ ತಂತ್ರ ಇದೆಲ್ಲದರ ಹಿಂದೆ ಅಡಗಿದೆಯೆ? ಅವರನ್ನು ಹೊರಹಾಕಿದಂತೆ ಮಾಡಿರುವುದು, ಅವರು ಭಾವುಕ ನಾಟಕವಾಡುವುದು, ಜಾಟ್ ಮತಗಳನ್ನು ಒಡೆಯುವುದು ಇಲ್ಲಿ ನಡೆಯಲಿದೆಯೆ? ​ಹರ್ಯಾಣದ ಹತ್ತರಲ್ಲಿ ಎರಡು ಸೀಟು ದುಷ್ಯಂತ ಕೇಳಿದರು. ನಾವು ಒಂದೇ ಕೊಡುತ್ತೇವೆ ಎಂದರೆ ಅವರು ಒಪ್ಪಲಿಲ್ಲ. ಹಾಗಾಗಿ ಹೋಗಿದ್ದಾರೆ ಎಂದು ಸಬೂಬು ಹೇಳಲಾಗುತ್ತಿದೆ. ಆದರೆ ಅದೆಷ್ಟು ನಿಜ ?

​ರೈತ ಆಂದೋಲನದ ಬಳಿಕ ಜಾಟರು ಬಿಜೆಪಿಯಿಂದ ಸಂಪೂರ್ಣ ದೂರ ಸರಿಯುತ್ತಿದ್ದಾರೆ ಎಂಬ ವರದಿಗಳಿದ್ದವು. ಅವರು ಕಾಂಗ್ರೆಸ್ ಗೆ ಹತ್ತಿರವಾಗುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಹಾಗಾಗಿ ಈಗ ತನಗೆ ಬಾರದ ಆ ಸಮುದಾಯದ ಓಟುಗಳನ್ನು ಒಡೆಯುವುದು ಬಿಜೆಪಿಗೆ ಅನಿವಾರ್ಯ. ​ಕಾಂಗ್ರೆಸ್ ನ ಭೂಪೇಂದ್ರ ಸಿಂಗ್ ಹೂಡಾ, ಅಭಯ್ ಸಿಂಗ್ ಚೌಟಾಲಾ, ದುಷ್ಟಂತ್ ಚೌಟಾಲಾ ಮಧ್ಯೆ ಜಾಟ್ ಮತಗಳು ಒಡೆದರೆ ಬಿಜೆಪಿಗೆ ದಾರಿ ಸುಗಮವಾಗಲಿದೆ. ದುಷ್ಯಂತ್ ಚೌಟಾಲಾ ಭಾವುಕ ಭಾಷಣ ಮಾಡುತ್ತಾರೆ.​ ಬಿಜೆಪಿಯನ್ನು ದೂರುತ್ತಾರೆ. ನಾವೇ ಎಲ್ಲ ಹತ್ತು ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ ಎನ್ನುತ್ತಾರೆ. ​ಮಡಿಲ ಮೀಡಿಯಾದಲ್ಲಿ ಹೆಚ್ಚಿನ ಜಾಗ ಪಡೆಯುತ್ತಾರೆ.

ದುಷ್ಯಂತ್ ಹಿಂದೆ ಯಾರಿದ್ದಾರೆ? ಯಾರಿಗೋಸ್ಕರ ದುಷ್ಯಂತ್ ಇದನ್ನೆಲ್ಲ ಮಾಡುತ್ತಿದ್ಧಾರೆ? ಜಾಟ್ ಮತಗಳನ್ನು ದುಷ್ಯಂತ್ ಒಡೆಯುವ ಮೂಲಕ ಬಿಜೆಪಿಗಾಗಿಯೇ ಕೆಲಸ ಮಾಡಿದಂತಾಗಲಿದೆ. ಮೈತ್ರಿಯಿದ್ಧಾಗಲೂ ಜೆಜೆಪಿ ಜೊತೆ ಸೇರಿ ಬಿಜೆಪಿ ಚುನಾವಣೆ ಎದುರಿಸಿರಲಿಲ್ಲ. ಬೇರೆಯಾಗಿಯೇ ಸ್ಪರ್ಧಿಸಿದ್ದವು.

ಈಗ ಅದರೊಂದಿಗೆ ಮೈತ್ರಿ ಸಾಧ್ಯವಿಲ್ಲ ಎನ್ನಿಸಿ, ಹೊರಹಾಕಿದೆ. ಇನ್ನೊಂದೆಡೆ, ಬಿಹಾರದಲ್ಲಿ ಹೊರಗಿದ್ದ ನಿತೀಶ್ ಕುಮಾರ್ ಅವರೊಡನೆ ಮತ್ತೆ ಮೈತ್ರಿ ಮಾಡಿಕೊಂಡಿದೆ. ದೇಶದಲ್ಲೀಗ ಧರ್ಮ ರಾಜಕಾರಣ ನಡೆದಿದೆ.

ಮೈತ್ರಿಗೂ ಒಂದು ಧರ್ಮ ಇರುತ್ತದೆ. ಆದರೆ ಅದನ್ನು ಪಾಲಿಸಲು ರಾಜಕಾರಣಕ್ಕೆ ಸಮಯವಿಲ್ಲ. ಖಟ್ಟರ್ ಅವರನ್ನು ಮನೆಗೆ ಕಳಿಸಿರುವ ಬಿಜೆಪಿ, ಆಡಳಿತ ವಿರೋಧಿ ಅಲೆಯನ್ನು ನಿವಾರಿಸಿಕೊಂಡಿದೆ. ಅದೇ ವೇಳೆ ದುಷ್ಯಂತ್ ಚೌಟಾಲಾ ಅವರನ್ನು ಮನೆಗೆ ಕಳಿಸಿ ಜಾಟ್ ಮತಗಳನ್ನು ಒಡೆಯಲಿದೆ. ಅಂದರೆ ಬಿಜೆಪಿ ಈಗ ಒಂದೊಂದೇ ಸಮುದಾಯದ ಮತಗಳನ್ನು ತನ್ನತ್ತ ಸೆಳೆಯುವ ರಾಜಕಾರಣ ಮಾತ್ರ ಮಾಡುತ್ತಿಲ್ಲ. ಅದರ ಜೊತೆಜೊತೆಗೆ ತನ್ನ ಕಡೆ ಬರುವುದಿಲ್ಲ ಎಂಬಂತಹ ಸಮುದಾಯದ ಮತಗಳನ್ನು ಒಡೆಯುವುದಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಉತ್ತರ ಪ್ರದೇಶದಲ್ಲಿ ಚುನಾವಣಾ ಅಖಾಡದಲ್ಲಿ ಸಕ್ರಿಯವಾಗಿಯೇ ಇಲ್ಲದ ಮಾಯಾವತಿ ಮೂರು ಸೀಟೀಗೆ ಅಭ್ಯರ್ಥಿ ಘೋಷಿಸಿದ್ದು ಮೂರೂ ಮುಸ್ಲಿಂ ಅಭ್ಯರ್ಥಿಗಳು. ಇನ್ನೂ ಹತ್ತಿಪ್ಪತ್ತು ಮುಸ್ಲಿಂ ಅಭ್ಯರ್ಥಿಗಳಿಗೆ ಮಾಯಾವತಿ ಟಿಕೆಟ್ ಕೊಡ್ತಾರೆ ಎನ್ನಲಾಗುತ್ತಿದೆ. ಅದೇ ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷದ ಸಂಘಟನೆಯೇ ಇಲ್ಲದ ಅಸದುದ್ದೀನ್ ಉವೈಸಿ ಸಮಾಜವಾದಿ ಪಕ್ಷದ ಮುಸ್ಲಿಂ ಅಭ್ಯರ್ಥಿಗಳಿರುವ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಹಾಕ್ತಾ ಇದ್ದಾರೆ. ಅಂದರೆ ಇದರ ಹಿಂದೆ ಇರುವ ಆಟ ಏನು ? ಈ ಆಟ ಆಡುತ್ತಿರುವವರು ಯಾರು ? ಓಟು ಸೆಳೆಯುವ ಜೊತೆಜೊತೆಗೇ ವಿಪಕ್ಷಗಳ ಓಟು ಒಡೆಯುವ ಈ ರಾಜಕಾರಣ ಯಾರದ್ದು ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!