ರಾಜ್ ಕೋಟ್ ಬಿಜೆಪಿ ಜಿಲ್ಲಾಧ್ಯಕ್ಷರಿಗೆ EVM ತಯಾರಿಕಾ ಕಂಪೆನಿಯಲ್ಲಿ ಏನು ಕೆಲಸ ?

Update: 2024-02-06 05:29 GMT
Editor : Ismail | Byline : ಆರ್. ಜೀವಿ

ಇವಿಎಂ ಬಗ್ಗೆ ಈ ದೇಶದಲ್ಲಿ ಅದೆಷ್ಟೋ ಪ್ರಶ್ನೆಗಳನ್ನು ಕೇಳುತ್ತಲೇ ಬರಲಾಗಿದೆ. ಹಲವಾರು ಸಂಶಯಗಳು ವ್ಯಕ್ತವಾಗುತ್ತಲೇ ಇದೆ.

ಆದರೆ ಚುನಾವಣಾ ಆಯೋಗ ಆ ಎಲ್ಲ ಪ್ರಶ್ನೆಗಳು ನಿರಾಧಾರ, ಇವಿಎಂ ಅತ್ಯಂತ ಸುರಕ್ಷಿತ ಎಂದು ಹೇಳುತ್ತಲೇ ಇದೆ. ಚುನಾವಣಾ ಆಯೋಗ ಹೇಳಿದಂತೆಯೇ ಇವಿಎಂ ಗಳು ಸುರಕ್ಷಿತವೇ ಆಗಿವೆ, ಅದರಲ್ಲಿ ಯಾವುದೇ ತಿರುಚುವಿಕೆಗೆ ಅವಕಾಶವೇ ಇಲ್ಲ, ಅದು ಹಂಡ್ರೆಡ್ ಪರ್ಸೆಂಟ್ ಪರ್ಫೆಕ್ಟ್ ಆಗಿದೆ, ಎಂದು ಈ ದೇಶದ ಮತದಾರರಿಗೆ ವಿಶ್ವಾಸ ಮೂಡಿಸುವ ಕೆಲಸವೂ ಚುನಾವಣಾ ಆಯೋಗದಿಂದಲೇ ಆಗಬೇಕಲ್ವಾ ?

ಆದರೆ ದಿನದಿಂದ ದಿನಕ್ಕೆ ಐವಿಎಂ ಕುರಿತ ಪ್ರಶ್ನೆಗಳಿಗೆ , ಸಂಶಯಗಳಿಗೆ, ಚುನಾವಣಾ ಆಯೋಗವೇ ಸೂಕ್ತ ಉತ್ತರ ಕೊಡುತ್ತಿಲ್ಲ ಯಾಕೆ ?. ಅದಕ್ಕೆ ಸಂಬಂಧಿಸಿದ ಮತದಾರರ ಸಂಶಯಗಳನ್ನು ನಿವಾರಿಸುತ್ತಿಲ್ಲ ಯಾಕೆ ?

​ಇಡೀ ಚುನಾವಣೆಯ ಅತ್ಯಂತ ಮುಖ್ಯ ಘಟಕವಾಗಿರುವ ಇವಿಎಂ​ ಗಳನ್ನು ತಯಾರಿಸುವ ಕಂಪೆನಿಯಲ್ಲಿ ಬಿಜೆಪಿ ಮುಖಂಡರು ಯಾಕಿದ್ದಾರೆ ?

ಇದೆಂತಹ ಪಾರದರ್ಶಕತೆ ?. ​ಇದೆಂತಹ ವ್ಯವಸ್ಥೆ ?.

ಒಂದು ರಾಜಕೀಯ ಪಕ್ಷದ ಮುಖಂಡರೇ ಚುನಾವಣೆಗೆ ಬಳಸುವ ಇವಿಎಂ ತಯಾರಿಕಾ ಕಂಪೆನಿಯಲ್ಲಿ ಹೇಗಿರಲು ಸಾಧ್ಯ ?.

ಯಾವುದೇ ಮುಚ್ಚು ಮರೆ ಇಲ್ಲದೆ ಖುಲ್ಲಂ ಖುಲ್ಲಾ ಬಿಜೆಪಿಯವರೇ ಆ ಕಂಪೆನಿಯಲ್ಲಿ ಇದ್ದಾರೆ. ಆದರೆ ಅವರನ್ನು ಚುನಾವಣಾ ಆಯೋಗ ಪ್ರಶ್ನಿಸುತ್ತಿಲ್ಲ, ಅವರನ್ನು ವಜಾ ಮಾಡುತ್ತಿಲ್ಲ ಯಾಕೆ ?. ಒಂದು ರಾಜಕೀಯ ಪಕ್ಷಕ್ಕೆ ಬೇಕಾದ ಹಾಗೆ ​ಇಲ್ಲಿ ​ಎಲ್ಲವೂ ನಡೆಯುತ್ತಿದೆ ಎಂಬ ಅನುಮಾನಗಳು ಮತ್ತೆ ಮತ್ತೆ ದಟ್ಟವಾಗುತ್ತಲೇ ಇವೆ.

ಮತ್ತು ಆ ಪಕ್ಷವು ಯಾರು ಏನೇ ಅಂದುಕೊಂಡರೂ ಅದರ ಬಗ್ಗೆ ತನಗೆ ಭಯವಿಲ್ಲ ಎಂದುಕೊಳ್ಳುತ್ತ ಭಂಡತನದಿಂದ ವರ್ತಿಸುತ್ತಿರುವು​ದು ಇನ್ನೂ ಅಪಾಯಕಾರಿಯಾಗಿದೆ.​ ಪ್ರತಿಪಕ್ಷಗಳು​ ಇವಿಎಂ ಬಗ್ಗೆ ತಕರಾರು ತೆಗೆದಾಗಲೆಲ್ಲ​, ​ಅವುಗಳನ್ನು ಲೇವಡಿ ಮಾಡುವ ಆಡಳಿತಾರೂಢ ಬಿಜೆಪಿ, ಇವಿಎಂ ಸಮಸ್ಯೆಗಳು , ಮತ ಎಣಿಕೆಯಲ್ಲಿ ಲೋಪದೋಷ ಕುರಿತ ಹಲವಾರು ಸಂಶೋಧನೆಗಳು, ವರದಿಗಳ ಬಗ್ಗೆ ಮಾತ್ರ ಮಾತಾಡುವುದೇ ಇಲ್ಲ.

ಹೀಗಿರುವಾಗ, ಇವಿಎಂ ತಯಾರಿಕೆ ಮತ್ತು ಪೂರೈಕೆಯಲ್ಲಿ ತೊಡಗಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ​ಕಂಪೆನಿಯ ಮಂಡಳಿಯಲ್ಲಿ ಕೂಡ ಬಿಜೆಪಿಯ ಜನರೇ ಇದ್ದಾರೆಂದರೆ ಇದಕ್ಕೆ ಏನೆನ್ನಬೇಕು?. ಇವಿಎಂ ಮುಖಾಂತರವೇ ಈ ದೇಶದ ಭವಿಷ್ಯ ನಿರ್ಧಾರವಾಗುತ್ತದೆ. ಹಾಗಿರುವಾಗ, ಅಂಥ ಮಷಿನ್ ​ತಯಾರಿಸುವ, ಅದರ ಸಂಪೂರ್ಣ ನಿಯಂತ್ರಣ ಇರುವ ಕಂಪೆನಿಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಪಕ್ಷದವರು ಏನು ಮಾಡುತ್ತಿದ್ದಾರೆ ?.

​ಈ ಹಿಂದೆ 19 ಲಕ್ಷ ಎವಿಎಂಗಳು ನಾಪತ್ತೆಯಾದ ​ವರದಿಯ ಬಗ್ಗೆ ಇವತ್ತಿಗೂ ಸ್ಪಷ್ಟನೆಗಳಿಲ್ಲ. ಇಂಥದ್ದೆಲ್ಲವೂ ನಡೆಯುತ್ತಿರುವಾಗ, ಬಿಜೆಪಿಯ ಜನರೇ​ ಇವಿಎಂ ತಯಾರಿಸುವ ಬಿಇಎಲ್​ ನಲ್ಲಿಯೂ ಆಯಕಟ್ಟಿನ ಜಾಗದಲ್ಲಿರುವುದು ಪ್ರಜಾಸತ್ತೆಯ ದೃಷ್ಟಿಯಿಂದ ಅಪಾಯಕಾರಿಯಲ್ಲವೆ?

ಇದು ಸರಿಯಲ್ಲ ಎಂದು ಚುನಾವಣಾ ಆಯೋಗಕ್ಕೆ ಅನ್ನಿಸಿಲ್ಲವೆ?ಇಂಥದೇ ಪ್ರಶ್ನೆಗಳನ್ನು ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ​, ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಇವಿಎಸ್ ಶರ್ಮ ಎತ್ತಿದ್ದಾರೆ. ಈ ಸಂಬಂಧ ಅವರು ಭಾರತೀಯ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹಾಗೂ ಇಬ್ಬರು ಆಯುಕ್ತರಿಗೆ ಪತ್ರ ಬರೆದಿದ್ಧಾರೆ.

ಬಿಇಎಲ್ ಮಂಡಳಿಯಲ್ಲಿ ನಿರ್ದೇಶಕರಾಗಿರುವ ಬಿಜೆಪಿ ವ್ಯಕ್ತಿಗಳನ್ನು ವಜಾಗೊಳಿಸುವಂತೆ ಸಂಬಂಧಿತ ಪ್ರಾಧಿಕಾರಗಳಿಗೆ ಸೂಚಿಸಬೇಕು ಮತ್ತು ಅವರ ಮೇಲೆ ಕೈಗೊಂಡಿರುವ ಕ್ರಮಗಳ ಬಗ್ಗೆ ದೇಶದ ಜನತೆಗೆ ಗೊತ್ತಾಗುವಂತೆ ಸಾರ್ವಜನಿಕ ತಾಣದಲ್ಲಿ ಪ್ರಕಟಿಸಬೇಕು ಎಂದು ಶರ್ಮ ಒತ್ತಾಯಿಸಿದ್ದಾರೆ.

ಬಿಇಎಲ್​ ಕಂಪೆನಿ ಇವಿಎಂ ಉತ್ಪಾದನೆ, ಸರಬರಾಜು ಹಾಗು ಇವಿಎಂ ಗಳಲ್ಲಿ​ ಅತ್ಯಂತ ಮುಖ್ಯ ಪಾತ್ರವಹಿಸುವ ಚಿಪ್ ಗಳಲ್ಲಿ ಎಂಬೆಡ್ ಮಾಡುವ ರಹಸ್ಯ ಎನ್ಕ್ರಿಪ್ಟೆಡ್ ಕೋಡ್ ಗಳನ್ನು ರಚಿಸುವಲ್ಲಿಯೂ ತೊಡಗಿಸಿಕೊಂಡಿರುವ ಸಂಸ್ಥೆಯಾಗಿದೆ.

ಹಾಗಿರುವಾಗ ಬಿಇಎಲ್ ವ್ಯವಹಾರಗಳನ್ನು ಬಿಜೆಪಿಯೇ ನೋಡಿಕೊಳ್ಳುತ್ತಿದೆಯೆ? ಅಲ್ಲಿ ತನ್ನವರನ್ನೇ ಇಟ್ಟು ಎಲ್ಲವನ್ನೂ ತನ್ನ ಅಂಕೆಯಲ್ಲಿಡಲು ಬಯಸುತ್ತಿದೆಯೆ​?

ಬಿಇಎಲ್ ನಲ್ಲಿ ಬಿಜೆಪಿಯವರಿರುವುದರಿಂದ ಇಂಥದೇ ಭಾವನೆ ಬರುವಂತಾಗಿದೆ ಎಂದು ಶರ್ಮಾ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ವಿದ್ಯುನ್ಮಾನ ಮತ ಯಂತ್ರಗಳಿಗೆ ಅತ್ಯಂತ ಸೂಕ್ಷ್ಮ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಬಿಇಎಲ್ ನ ಮಂಡಳಿಗೆ ಕನಿಷ್ಠ ಪಕ್ಷ ಬಿಜೆಪಿಯ ನಾಲ್ವರು ಸ್ವತಂತ್ರ ನಿರ್ದೇಶಕರನ್ನು ನಾಮ ನಿರ್ದೇಶನ ಮಾಡಲಾಗಿದೆ ಎಂಬ ಸಂಗತಿಯನ್ನು ತಾವು ಈ ಮೊದಲು ಕೂಡ ಆಯೋಗದ ಗಮನಕ್ಕೆ ತಂದಿದ್ದುದನ್ನು ಅವರು ಪತ್ರದಲ್ಲಿ ನೆನಪಿಸಿದ್ದಾರೆ. ಆದರೆ ಆಯೋಗ ಅದರ ಬಗ್ಗೆ ಉದ್ದೇಶಪೂರ್ವಕವಾಗಿಯೇ ಕ್ರಮ ಕೈಗೊಳ್ಳದಿರಲು ನಿರ್ಧರಿಸಿದೆ ಎಂಬ ಆಕ್ಷೇಪವನ್ನೂ ಶರ್ಮಾ ಎತ್ತಿದ್ದಾರೆ.

ಇದು, ಚುನಾವಣೆಗಳನ್ನು ಆಡಳಿತಾರೂಢ ಬಿಜೆಪಿ ಪರವಾಗಿ ತಿರುಗಿಸುವ ನಿರ್ದಾಕ್ಷಿಣ್ಯ ಉದ್ದೇಶವಲ್ಲವೆ ಎಂಬ​ ಗಂಭೀರ ಅನುಮಾನವನ್ನು ಶರ್ಮಾ ವ್ಯಕ್ತಪಡಿಸಿದ್ದಾರೆ. ಸ್ವತಂತ್ರ ನಿರ್ದೇಶಕರ ಪೈಕಿ ಒಬ್ಬರಾದ ಮನ್ಷುಕ್ ಭಾಯಿ ಶಮ್ಜಿಭಾಯಿ ಖಚಾರಿಯಾ ಕುರಿತು ಬಿಇಎಲ್ ವೆಬ್ಸೈಟ್ನಲ್ಲಿ ಬಿಜೆಪಿ ರಾಜ್​ ಕೋಟ್ ಜಿಲ್ಲಾಧ್ಯಕ್ಷ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಇದು ಬಿಇಎಲ್ ಪಾಲಿಗೆ ಹೆಮ್ಮೆಯ ವಿಚಾರವೇ?

ಬಿಜೆಪಿಯ ಪದಾಧಿಕಾರಿಯೊಬ್ಬರನ್ನು ಬಿಇಎಲ್ ಮಂಡಳಿಯ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದು,

​ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕಿರುವ ಜವಾಬ್ದಾರಿ ಹೊತ್ತ ಚುನಾವಣಾ ಆಯೋಗಕ್ಕೆ ಯಾಕೆ ಆಕ್ಷೇಪಾರ್ಹವಾಗಿ ಕಾಣಿಸಲಿಲ್ಲ?

ವಿದ್ಯುನ್ಮಾನ ಮತ ಯಂತ್ರದ ತಂತ್ರಜ್ಞಾನ ಹಾಗೂ ತಿರುಚುವಿಕೆಯ ಅಪಾಯದ ಕುರಿತು ಟೀಕೆಗಳು​, ಸಂಶಯಗಳು ಹೆಚ್ಚುತ್ತಿ​ವೆ.

​ಅದೇ ಹೊತ್ತಿನಲ್ಲಿ ​ಆ ಮತ ಯಂತ್ರಗಳನ್ನು ಉತ್ಪಾದಿಸಿ, ಪೂರೈಸುವ​ ಸಂಸ್ಥೆಯಲ್ಲಿಯೇ ಬಿಜೆಪಿಯ ಜನರಿದ್ದಾರೆ ಎಂದರೆ ಇದೆಲ್ಲವೂ ಏನನ್ನು ಸೂಚಿಸುತ್ತಿದೆ?

ವಿದ್ಯುನ್ಮಾನ ಮತ ಯಂತ್ರಗಳ ಕುರಿತು ಕೇಳಿ ಬರುತ್ತಿರುವ ಪ್ರಶ್ನೆಗಳ ಕುರಿತು ಮರು ಪರಿಶೀಲಿಸುವ ಬದಲು​,

ಭಾರತೀಯ ಚುನಾವಣಾ ಆಯೋಗ ಅದನ್ನು ಸಮರ್ಥಿಸಿಕೊಳ್ಳುವ,

ಅಕ್ಷರಶಃ ಅಲ್ಲಗಳೆಯುವ,

ಇತರ ದೇಶಗಳಲ್ಲೂ ಅವನ್ನು ತಪ್ಪಾಗಿ ಕಾರ್ಯನಿರ್ವಹಿಸಿರುವ ಕಾರಣಕ್ಕೆ ನಿಷೇಧಿಸಿರುವ ಕಟು ವಾಸ್ತವಕ್ಕೆ ಕುರುಡಾಗುವ ಅತಿರೇಕದ ಹಂತ ತಲುಪಿದೆ ಎಂಬ ಆಕ್ಷೇಪವನ್ನು ಶರ್ಮ ಎತ್ತಿದ್ದಾರೆ.

ಈಗಾಗಲೇ ಇವಿಎಂ ಮತ ಎಣಿಕೆಯನ್ನು ಮತಪತ್ರದ ಎಣಿಕೆಯೊಂದಿಗೆ ತಾಳೆ ಮಾಡಬೇಕು ಎಂಬ ಮನವಿಯನ್ನು ಚುನಾವಣಾ ಆಯೋಗ ತಳ್ಳಿ ಹಾಕಿದ್ದು, ಸಾರ್ವಜನಿಕರ ಆತಂಕವನ್ನು ದುಪ್ಪಟ್ಟುಗೊಳಿಸಿದೆ.

ಹೀಗಿರುವಾಗಲೇ, ಖಚಾರಿಯಾ ಮಾತ್ರವಲ್ಲದೆ ಇನ್ನೂ ಕನಿಷ್ಠ ಮೂವರು ಬಿಜೆಪಿಯ​ದ್ದೇ ಮಂದಿ ಸ್ವತಂತ್ರ ನಿರ್ದೇಶಕರಾಗಿ ಬಿಇಎಲ್ ನಲ್ಲಿರುವುದು ನಿಜಕ್ಕೂ ಇನ್ನಷ್ಟು ಆತಂಕ್ಕೆ ಎಡೆ ಮಾಡಿಕೊಡುತ್ತದೆ.

ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗಳನ್ನು ಸ್ವತಂತ್ರ ನಿರ್ದೇಶಕರನ್ನಾಗಿಸುವ ಮೂಲಕ ಬಿಇಎಲ್ ರಾಜಿ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ ಎಂದೂ ಶರ್ಮ ಹೇಳಿದ್ದಾರೆ.

ಶರ್ಮ ಅವರು ಎತ್ತಿರುವ ತಕರಾರುಗಳು ಹೀಗಿವೆ:

1. ಖಚಾರಿಯಾ ಅವರ ಬಿಜೆಪಿ ಹಿನ್ನೆಲೆಯನ್ನು ಬಿಇಎಲ್ ಹೆಮ್ಮೆಯಿಂದ ಪ್ರಕಟಿಸುವ ಮೂಲಕ, ಬಿಜೆಪಿ ಹಾಗೂ ಬಿಇಎಲ್ ನ ಕಾರ್ಯನಿರ್ವಹಣೆಯ ನಡುವಿನ ಮಧ್ಯಂತರ ರೇಖೆ ಮಸುಕಾದಂತಾಗಿದೆ. ಪ್ರಭುತ್ವದ ಅಸ್ತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಅದು, ಇವಿಎಂಗಳಲ್ಲಿ ತಿರುಚುವಿಕೆಗೆ ಆಸ್ಪದವಿಲ್ಲ ಎಂಬುದನ್ನು ಖಾತ್ರಿಗೊಳಿಸಬೇಕಿದೆ.

2. ಬಿಇಎಲ್, ತನ್ನ ಸೋರ್ಸ್ ಕೋಡ್ ಕುರಿತು ಸ್ವತಂತ್ರ ಪರಿಶೋಧನೆಗೆ ನಿರಾಕರಿಸುವ ಮೂಲಕ, ಇವಿಎಂಗಳ ಕುರಿತು ಸಾರ್ವಜನಿಕರು ವ್ಯಕ್ತಪಡಿಸುತ್ತಿರುವ ಕಳವಳ ಹಾಗೂ ಅದರ ತಿರುಚುವಿಕೆ ಕುರಿತ ಪ್ರಶ್ನೆಗಳನ್ನು ತಳ್ಳಿಹಾಕಿದೆ.

3. ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಚುನಾವಣೆಗಳನ್ನು ನಡೆಸಬೇಕಾದ ಹೊಣೆ ಹೊಂದಿರುವ ಚುನಾವಣಾ ಆಯೋಗ, ಬಿಇಎಲ್ ನ ವ್ಯವಹಾರಗಳನ್ನು ಆಡಳಿತಾರೂಢ ಪಕ್ಷದ ನಾಲ್ವರು ಸ್ವತಂತ್ರ ಪ್ರತಿನಿಧಿಗಳು ನಡೆಸುತ್ತಿರುವುದಕ್ಕೆ ಕುರುಡಾಗುವ ಮೂಲಕ, ತಾನೇ ಆಡಳಿತಾರೂಢ ಪಕ್ಷದ ಪರವಾಗಿಬಿಟ್ಟಿದೆ. ಅಂದಮೇಲೆ, ಚುನಾವಣಾ ಆಯೋಗವೇ ತಾನು ಸ್ವತಂತ್ರ ಸಾಂವಿಧಾನಿಕ ಪ್ರಾಧಿಕಾರವಲ್ಲ ಎಂದು ಒಪ್ಪಿಕೊಂಡಂತಾಗಿದೆಯೆ?

4. ಬಿಇಎಲ್ ಮಂಡಳಿಯ ಸ್ಥಿತಿ ಕುರಿತು ಒಂದು ವರ್ಷಕ್ಕಿಂತ ಮುಂಚೆಯೇ ಚುನಾವಣಾ ಆಯೋಗದ ಗಮನಕ್ಕೆ ತಂದರೂ, ಇದರಿಂದ ಹಾಲಿ ನಿಯೋಜಿಸಲಾಗುತ್ತಿರುವ ವಿದ್ಯುನ್ಮಾನ ಮತ ಯಂತ್ರಗಳು ಹಾಗೂ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯೇ ನಾಶವಾಗಲಿದೆ ಎಂಬುದು ಆಯೋಗಕ್ಕೆ ಚೆನ್ನಾಗಿಯೇ ತಿಳಿದಿದ್ದರೂ, ಆಯೋಗ ಮಾತ್ರ ಲಜ್ಜೆಗೆಟ್ಟ ಹಿತಾಸಕ್ತಿ ಸಂಘರ್ಷದ ಪರವಾಗಿ ಉಳಿದಿದೆ.

ಚುನಾವಣಾ ಆಯೋಗಕ್ಕೆ ಏನಾದರೂ ಸ್ವಯಂಗೌರವವಿದ್ದರೆ ಹಾಗೂ ಚುನಾವಣಾ ಪ್ರಕ್ರಿಯೆ ಕುರಿತು ಸಮಗ್ರತೆಯನ್ನು ಕಾಪಾಡುವ ಕಾಳಜಿ ಇದ್ದರೆ, ಬಿಇಎಲ್ ಮಂಡಳಿಯಿಂದ ಪಕ್ಷಕ್ಕೆ ಸಂಬಂಧಿಸಿರುವ ನಿರ್ದೇಶಕರನ್ನು ವಜಾಗೊಳಿಸಬೇಕು ಹಾಗೂ ತಾನು ತೆಗೆದುಕೊಂಡಿರುವ ಕ್ರಮಗಳ ವಿವರಗಳನ್ನು ದೇಶದ ಜನರಿಗೆ ತಿಳಿಯುವಂತೆ ಸಾರ್ವಜನಿಕ ತಾಣದಲ್ಲಿ ಪ್ರಕಟಿಸಬೇಕು ಎಂದು ಶರ್ಮ ಒತ್ತಾಯಿಸಿದ್ದಾರೆ.

ಇಂತಹ ಪ್ರಮುಖ ವಿಷಯದಲ್ಲಿ ಚುನಾವಣಾ ಆಯೋಗವು ತನ್ನ ಅಧಿಕಾರವನ್ನು ಚಲಾಯಿಸಲು ವಿಫಲವಾದರೆ, ಈಗಾಗಲೇ ಸಾರ್ವಜನಿಕರ ಟೀಕೆಗೆ ಗುರಿಯಾಗಿರುವ ಅದರ ವಿಶ್ವಾಸಾರ್ಹತೆ ಮತ್ತಷ್ಟು ನಾಶವಾಗಲಿದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಈ ಪರಿಸ್ಥಿತಿಯು ಭವಿಷ್ಯದ ನಮ್ಮ ಪ್ರಜಾಪ್ರಭುತ್ವಕ್ಕೆ ಒಳಿತಾಗುವುದಿಲ್ಲ ಎಂಬ ಶರ್ಮ ಅವರ ಮಾತು ಅಕ್ಷರಶಃ ಸತ್ಯ.

ಆದರೆ, ದೇಶವನ್ನು ಆಳುತ್ತ ಪ್ರಜಾಸತ್ತೆಯ ಮೂಲತತ್ವಗಳನ್ನೇ ನಾಶಗೊಳಿಸುತ್ತಿರುವ ಬಿಜೆಪಿಗೂ. ಸ್ವಾಯತ್ತ ಸಂಸ್ಥೆಯಾಗಿದ್ದರೂ ತನ್ನ ಘನತೆ ಮತ್ತು ಹೊಣೆಗಾರಿಕೆಯನ್ನೇ ಮರೆತು ಬಿಜೆಪಿಯ ದಾಸ್ಯಕ್ಕೆ ಒಳ​ಗಾದಂತೆ ವರ್ತಿಸುತ್ತಿರುವ ಚುನಾವಣಾ ಆಯೋಗಕ್ಕೂ ಚುನಾವಣೆಯ ಮೌಲಿಕತೆ ಬಗ್ಗೆ ಯಾವ ಕಾಳಜಿಯೂ ಇಲ್ಲವಾಗಿದೆ ಎಂಬುದು ಸ್ಪಷ್ಟ.

ಶರ್ಮ ಅವರೇ ಹೇಳಿರುವಂತೆ ಚುನಾವಣಾ ಆಯೋಗವು ಬಿಜೆಪಿಗಾಗಿ ಚುನಾವಣೆ ನಡೆಸುವ ಮಟ್ಟಕ್ಕೆ ಬಂದು ಮುಟ್ಟಿದೆ​ಯೇ ?

ಇನ್ನು ಪಾರದರ್ಶಕತೆಯ ಮಾತೆಲ್ಲಿ?

​ಒಂದು ಕಡೆ ಯಾರು ಎಷ್ಟು ಸೀಟು ಗೆದ್ದರೂ ಬಿಜೆಪಿಯೇ ಅಧಿಕಾರ ಹಿಡಿಯುವ ಸ್ಥಿತಿ.

ಇನ್ನೊಂದೆಡೆ ಚುನಾವಣೆ ನಡೆಸುವ ವ್ಯವಸ್ಥೆಯಲ್ಲೇ ಇಂತಹ ದುಸ್ಥಿತಿ.

ಈ ದೇಶವನ್ನು ಇಂಥವರೆಲ್ಲ ಒಟ್ಟಾಗಿ ಎಲ್ಲಿಗೆ ತೆಗೆದುಕೊಂಡು ಹೋಗಿ ಮುಟ್ಟಿಸಲಿದ್ದಾರೆ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!