ಆ 600 ವಕೀಲರ ಪತ್ರದ ಹಿಂದಿನ ಮರ್ಮವೇನು?

Update: 2024-03-31 04:39 GMT

ರಾಜಕೀಯ ನಾಯಕರಿರುವ ಪ್ರಕರಣಗಳಲ್ಲಿ ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಯತ್ನ ನಡೆಯುತ್ತಿದೆ ಎಂದು ಹೇಳುತ್ತಿರುವ ಸಾಳ್ವೆ ಮತ್ತಿತರ 600 ವಕೀಲರು, ಯಾವ ರಾಜಕೀಯದ ನೆರಳಿನಲ್ಲಿ ಹಾಗೆ ಹೇಳುತ್ತಿದ್ದಾರೆ?

ವಕೀಲರ ಪತ್ರ ಅತ್ತ ಹೋಗುತ್ತಿದ್ದಂತೆ ಇತ್ತ ಮೋದಿ ಅದನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡುವುದರ ಮರ್ಮ ಏನು?

ಕೇಜ್ರಿವಾಲ್ ಪ್ರಕರಣದಲ್ಲಿ ಅವರೇ ದಿಲ್ಲಿಯ ರೋಸ್ ಅವೆನ್ಯೂ ಕೋರ್ಟ್ನಲ್ಲಿ ಆರೋಪಿಸಿರುವಂತೆ, ಅವರನ್ನು ಜೈಲಿನಲ್ಲಿಡಲಾಗಿದ್ದರೂ, ಅವರ ವಿರುದ್ಧ ಆರೋಪ ಸಾಬೀತು ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ ನಾಲ್ವರ ಹೇಳಿಕೆಗಳನ್ನು ಮಾತ್ರ ಆಧರಿಸಿ ಅವರನ್ನು ಬಂಧಿಸಲಾಗಿದೆ.

ಇದೇ ವೇಳೆ, ತಮ್ಮನ್ನೇಕೆ ಬಂಧಿಸಲಾಗಿದೆ ಎಂಬ ಅವರ ಪ್ರಶ್ನೆಗೆ ಉತ್ತರಿಸಲು, ಅವರ ಮಧ್ಯಂತರ ಜಾಮೀನು ವಿಚಾರವಾಗಿ ಪ್ರತಿಕ್ರಿಯಿಸಲು ಈ.ಡಿ. ವಿಳಂಬ ತಂತ್ರವನ್ನು ಅನುಸರಿಸುತ್ತಿದೆ.

ಇವಿಷ್ಟು ಒಂದೆಡೆಯಾದರೆ, ಇನ್ನೊಂದೆಡೆ 600 ವಕೀಲರು ಸಿಜೆಐಗೆ ಬರೆದ ಪತ್ರದ ವಿಚಾರವಾಗಿ ತಕ್ಷಣ ಪ್ರತಿಕ್ರಿಯೆ ಕೊಟ್ಟಿರುವ ಪ್ರಧಾನಿ ಮೋದಿ, ‘‘ಬೇರೆಯವರನ್ನು ಹೆದರಿಸುವುದು, ಬೊಬ್ಬೆ ಹೊಡೆಯುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ’’ ಎಂದಿದ್ದಾರೆ.

ತಮ್ಮ ಟ್ವೀಟ್ ಜೊತೆ ಮೋದಿ ವಕೀಲರು ಸಿಜೆಐಗೆ ಬರೆದ ಪತ್ರವನ್ನು ಟ್ಯಾಗ್ ಮಾಡಿದ್ದಾರೆ ಇದು ಏನನ್ನು ಸೂಚಿಸುತ್ತದೆ? ವಕೀಲರ ಪತ್ರದ ಮೂಲಕ ವ್ಯಕ್ತವಾಗಿರುವುದು ನಿಜವಾಗಿಯೂ ಯಾರ ಭಾವನೆ ಎಂಬ ಪ್ರಶ್ನೆಯೂ ಏಳುತ್ತದೆಯಲ್ಲವೆ?

ಕೇಜ್ರಿವಾಲ್ ಬಂಧನದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಭುಗಿಲೆದ್ದಿದ್ದ ಪ್ರತಿಭಟನೆಗಳ ನಂತರ ಜರ್ಮನಿ ಹೇಳಿಕೆ ನೀಡಿತ್ತು. ಅದರ ಬೆನ್ನಲ್ಲೇ ಅಮೆರಿಕ ಕೂಡ ತನ್ನ ಪ್ರತಿಕ್ರಿಯೆ ನೀಡಿತ್ತು.

ಕೇಜ್ರಿವಾಲರಂತೆ ಯಾರೇ ಆರೋಪಗಳನ್ನು ಎದುರಿಸುತ್ತಿದ್ದರೂ ನ್ಯಾಯೋಚಿತ ಹಾಗೂ ನಿಷ್ಪಕ್ಷಪಾತ ವಿಚಾರಣೆ ನಡೆಸಬೇಕು ಎಂದು ಜರ್ಮನಿಯ ವಿದೇಶಾಂಗ ಇಲಾಖೆ ವಕ್ತಾರ ಸೆಬಾಸ್ಟಿನ್ ಫಿಸ್ಚೇರ್ ಹೇಳಿದ್ದರು.

ಆ ಹೇಳಿಕೆಯ ನಂತರ ಭಾರತ ಸರಕಾರ ಜರ್ಮನಿ ರಾಯಭಾರಿ ಕಚೇರಿಯ ಉಪ ಮುಖ್ಯಸ್ಥ ಜಾರ್ಜ್ ಎಂಜ್ವೇಲಿಯರ್ ಅವರನ್ನು ಕರೆಸಿಕೊಂಡು ಮಾತಾಡಿತ್ತು.

 

ಇದಾದ ಬಳಿಕ ಅಮೆರಿಕ ರಾಯಭಾರಿ ಕಚೇರಿಯ ವಕ್ತಾರರು, ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಅರವಿಂದ ಕೇಜ್ರಿವಾಲ್ ಬಗ್ಗೆ ನ್ಯಾಯೋಚಿತ ಹಾಗೂ ಪಾರದರ್ಶಕ ನ್ಯಾಯ ಪ್ರಕ್ರಿಯೆಯನ್ನು ನಿರೀಕ್ಷಿಸುವುದಾಗಿ ಹೇಳಿದ್ದರು.

ಅದರ ಹಿನ್ನೆಲೆಯಲ್ಲಿ ಭಾರತದ ರಾಯಭಾರಿ ಕಚೇರಿ ಅಮೆರಿಕ ರಾಯಭಾರಿ ಕಚೇರಿಯ ಉಪಮುಖ್ಯ ಅಧಿಕಾರಿ ಗ್ಲೋರಿಯಾ ಬಾರ್ಬೇನಾ ಅವರಿಗೆ ಸಮನ್ಸ್ ನೀಡಿತ್ತು.

ಅಮೆರಿಕ ಕೇಜ್ರಿವಾಲ್ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿರುವುದರ ಜೊತೆಗೇ ಕಾಂಗ್ರೆಸ್ ಬ್ಯಾಂಕ್ ಖಾತೆ ಸ್ಥಗಿತ ವಿಚಾರದ ಬಗ್ಗೆಯೂ ಮಾತಾಡಿದೆ.

ಭಾರತದ ಪ್ರತಿಕ್ರಿಯೆ ಏನೇ ಇದ್ದರೂ, ಕೇಜ್ರಿವಾಲ್ ಪ್ರಕರಣದ ಕುರಿತಾಗಿ ಭಾರತ ಸರಕಾರದ ಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರುವುದಾಗಿ ಹೇಳಿರುವ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್, ಕಾಂಗ್ರೆಸ್ ಬ್ಯಾಂಕ್ ಖಾತೆ ಸ್ಥಗಿತ ವಿಚಾರವನ್ನೂ ಎತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಆರೋಪಗಳ ಕುರಿತು ನಮಗೆ ಅರಿವಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ ತೆರಿಗೆ ವಂಚನೆ ಆರೋಪ ಮಾಡಲಾಗಿದೆ. ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತ ಮಾಡಲಾಗಿದೆ. ಹೀಗಾಗಿ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಪಕ್ಷಕ್ಕೆ ಅಡೆತಡೆ ಎದುರಾಗಿದೆ ಎಂದು ಮಿಲ್ಲರ್ ಹೇಳಿದ್ದಾರೆ.

ಅಲ್ಲಿಗೆ, ಭಾರತದಲ್ಲಿನ ಚುನಾವಣೆ ಮೇಲೆ ಮತ್ತು ಚುನಾವಣೆ ಹೊತ್ತಿನಲ್ಲಿ ಮೋದಿ ಸರಕಾರ ಆಡುತ್ತಿರುವ ಆಟಗಳ ಮೇಲೆ ಅಮೆರಿಕ, ಜರ್ಮನಿಯಂಥ ದೇಶಗಳೂ ಕಣ್ಣಿಟ್ಟಿವೆ ಎಂದಾಯಿತು,

ಯಾರ ವಿಷಯದಲ್ಲಿಯೇ ಆಗಲಿ ಪಾರದರ್ಶಕ ಮತ್ತು ನಿಷ್ಪಕ್ಷಪಾತ ನ್ಯಾಯ ಪ್ರಕ್ರಿಯೆ ನಡೆಯಲಿ ಎಂದು ಅವೆರಡೂ ದೇಶಗಳು ಒತ್ತಿ ಹೇಳಿರುವುದು ಕೂಡ ಮೋದಿ ಸರಕಾರಕ್ಕೆ ಮುಜುಗರ ತಂದಿರಬೇಕು.

ಈ ಎರಡೂ ಪ್ರಮುಖ ದೇಶಗಳ ಬೆನ್ನಿಗೆ ಈಗ ವಿಶ್ವಸಂಸ್ಥೆಯೇ ಕೇಜ್ರಿವಾಲ್ ಬಂಧನದ ಕುರಿತು ಮಾತಾಡಿಬಿಟ್ಟಿದೆ.

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯ ವಕ್ತಾರರು ‘‘ಚುನಾವಣೆ ನಡೆಯುವ ಬೇರೆ ಯಾವುದೇ ದೇಶಗಳಂತೆ ಭಾರತದಲ್ಲೂ ಪ್ರತಿಯೊಬ್ಬ ರಾಜಕೀಯ ಹಾಗೂ ನಾಗರಿಕ ವ್ಯಕ್ತಿಯ ಹಕ್ಕುಗಳ ರಕ್ಷಣೆಯಾಗಲಿದೆ, ಹಾಗೂ ಪ್ರತಿಯೊಬ್ಬರೂ ಮುಕ್ತ ಹಾಗೂ ನ್ಯಾಯಯುತ ವಾತಾವರಣದಲ್ಲಿ ಮತ ಚಲಾಯಿಸುವಂತೆ ಆಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ’’ ಎಂದು ಹೇಳಿದ್ದಾರೆ.

ಚುನಾವಣೆ ಹೊತ್ತಿನಲ್ಲಿ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಎಎಪಿ ವಿಚಾರವಾಗಿ ಮೋದಿ ಸರಕಾರ ಹೇಗೆ ನಡೆದುಕೊಳ್ಳುತ್ತಿದೆ ಎಂಬುದನ್ನು ವಿಶ್ವ ಸಂಸ್ಥೆ ಸಹಿತ ಜಗತ್ತಿನ ಪ್ರಮುಖ ದೇಶಗಳು ಸೂಕ್ಷ್ಮವಾಗಿ ಗಮನಿಸಿವೆ ಮತ್ತು ಭಾರತದ ಪ್ರತಿಕ್ರಿಯೆ ಏನೇ ಇದ್ದರೂ ತಾವು ಸೂಕ್ಷ್ಮವಾಗಿ ಇದನ್ನೆಲ್ಲ ಗಮನಿಸುವುದನ್ನು ಮುಂದುವರಿಸುವುದಾಗಿ ಹೇಳಿರುವುದು ಮೋದಿ ಸರಕಾರಕ್ಕೆ ಉಂಟಾಗಿರುವ ಮತ್ತೊಂದು ಮುಜುಗರ.

ವಿದೇಶಗಳೂ ಹೇಳಿಕೆ ಕೊಡುವ ಮಟ್ಟಿಗೆ ಮೋದಿ ಸರಕಾರ ಈ ದೇಶದ ಪ್ರಜಾಸತ್ತೆಗೆ ಏಟು ಕೊಡುವಂಥ ಕೆಲಸಗಳಲ್ಲಿ ಮುಳುಗಿದೆ ಮತ್ತು ಅದನ್ನು ನಿರ್ಲಜ್ಜವಾಗಿ ಮಾಡುತ್ತಲೇ ಬಂದಿದೆ. ಈಗ ಇವೆಲ್ಲ ಒತ್ತಡಗಳನ್ನು ತಡೆದುಕೊಳ್ಳಲಾರದ ಸ್ಥಿತಿ ಅದಕ್ಕೆ ಎದುರಾದ ಹಾಗಿದೆ.

ಚುನಾವಣಾ ಬಾಂಡ್ ವಿವರಗಳನ್ನು ಕೊಡಲು ನಾಟಕವಾಡುತ್ತಿದ್ದ ಎಸ್ಬಿಐಗೆ ಕೇಳಿದಷ್ಟು ಸಮಯವನ್ನು ಕೋರ್ಟ್ ನೀಡಿದ್ದಿದ್ದರೆ ಸಾಳ್ವೆ ನೇತೃತ್ವದಲ್ಲಿ 600 ವಕೀಲರು ಇಂಥದೊಂದು ಪತ್ರವನ್ನು ಸಿಜೆಐಗೆ ಬರೆಯುತ್ತಿದ್ದರೆ? ಇದ್ದಕ್ಕಿದ್ದಂತೆ ಅವರಿಗೆ ಏಕೆ, ನ್ಯಾಯಾಂಗದ ಮೇಲೆ ಒತ್ತಡ ಹೇರಲಾಗುತ್ತಿದೆ, ಪ್ರಭಾವ ಬೀರಲಾಗುತ್ತಿದೆ ಎಂಬೆಲ್ಲ ಅನುಮಾನಗಳು ಬಂದವು? ಯಾರಿಗೋಸ್ಕರ ಅವರು ಈ ಮಾತುಗಳನ್ನೆಲ್ಲ ದೇಶದ ಮುಖ್ಯ ನ್ಯಾಯಾಧೀಶರ ಎದುರು ಇಡಲು ಮುಂದಾದರು?

ರಾಜಕೀಯ ನಾಯಕರಿರುವ ಪ್ರಕರಣಗಳಲ್ಲಿ ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಯತ್ನ ನಡೆಯುತ್ತಿದೆ ಎಂದು ಹೇಳುತ್ತಿರುವ ಸಾಳ್ವೆ ಮತ್ತಿತರ 600 ವಕೀಲರು, ಯಾವ ರಾಜಕೀಯದ ನೆರಳಿನಲ್ಲಿ ಹಾಗೆ ಹೇಳುತ್ತಿದ್ದಾರೆ?

ವಕೀಲರ ಪತ್ರ ಅತ್ತ ಹೋಗುತ್ತಿದ್ದಂತೆ ಇತ್ತ ಮೋದಿ ಅದನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡುವುದರ ಮರ್ಮ ಏನು?

Writer - ವಾರ್ತಾಭಾರತಿ

contributor

Editor - Ismail

contributor

Byline - ಎಚ್. ವೇಣುಪ್ರಸಾದ್

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!