ದಲಿತ ಚಳವಳಿಯ ಇಂದಿನ ಹಿನ್ನಡೆಗೆ ಕಾರಣ ಯಾರು?

Update: 2024-07-02 03:58 GMT

75ರ ದಶಕದಲ್ಲಿ ನಡೆದ ದಲಿತ ಚಳವಳಿಯ ಒಗ್ಗಟ್ಟಿನ ವೈಭವವನ್ನು ನೋಡಲು ಇಂದು ಸಾಧ್ಯವಿಲ್ಲ. ನಿಜಾರ್ಥದಲ್ಲಿ ಸಂದರ್ಭ ಹಾಗೂ ಸನ್ನಿವೇಶಕ್ಕೆ ಅನುಗುಣವಾಗಿ ಪ್ರಥಮ ತಲೆಮಾರಿನ ದಲಿತಪರ ಚಿಂತಕರು ಹಾಗೂ ಹೋರಾಟಗಾರರು ತಮ್ಮ ಸಾಧನೆಗಳನ್ನೇ ಮೆಲುಕು ಹಾಕುವ ಮಾದರಿಯಿಂದ ಮೌನಕ್ಕೆ ಶರಣಾದರೆ, ಎರಡನೇ ಮತ್ತು ಮೂರನೇ ತಲೆಮಾರಿನ ದಲಿತ ಚಿಂತಕರು ಹಾಗೂ ಹೋರಾಟಗಾರರು ಪ್ರಥಮ ತಲೆಮಾರಿನ ವಾರಸುದಾರಿಕೆಯಿಂದ ಭಿನ್ನಭಿನ್ನವಾಗಿ ತಮ್ಮ ಐಡೆಂಟಿಟಿಯನ್ನು ಗುರುತಿಸಿಕೊಳ್ಳುವುದರಲ್ಲಿಯೇ ಕಾಲ ಕಳೆದರು. ಕಳೆಯುತ್ತಿರುವರು.

ಕನ್ನಡ ನೆಲದಲ್ಲಿ 1974ರಲ್ಲಿ ಜನ್ಮ ತಾಳಿದ ದಲಿತ ಚಳವಳಿಗೆ ಈಗ 2024ರ ಹೊತ್ತಿಗೆ 50 ವರ್ಷಗಳು.

ಇಂದು ನಮ್ಮ ದೇಶ ಸಹಜವಾಗಿ ಆಧುನಿಕತೆಗೆ ತನ್ನನ್ನು ತೆರೆದುಕೊಂಡಿರಬಹುದು. ಇದಕ್ಕೆ ಪೂರಕವಾಗಿ ಆಧುನಿಕ ಸಾಮಾಜಿಕ ಜಾಲತಾಣಗಳ ತಂತ್ರಜ್ಞಾನದಿಂದಾಗಿ ಪ್ರಪಂಚವೇ ಒಂದು ಗ್ಲೋಬಲ್ ವಿಲೇಜ್ ರೂಪದಲ್ಲಿ ಅಂಗೈಯಲ್ಲಿ ಹಿಡಿದಿಟ್ಟಿರಲೂ ಬಹುದು. ಆದರೆ ಈ ನೆಲದಲ್ಲಿ ಸಮಸಮಾಜದ ಸಂವಿಧಾನಾತ್ಮಕವಾಗಿ ಜನಸಂಸ್ಕೃತಿಯನ್ನು ಪ್ರತಿಪಾದನೆ ಮಾಡಿದ ಬುದ್ಧ, ಬಸವ, ಅಂಬೇಡ್ಕರ್ ಅವರು ಬಯಸಿದ ಬದಲಾವಣೆಯನ್ನು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನಾತ್ಮಕ ನಾಡಿನಲ್ಲಿಯೂ ಸಹ ಅಸಂವಿಧಾನಾತ್ಮಕ ತತ್ವ ಸಿದ್ಧಾಂತಗಳನ್ನೇ ಪಾಲಿಸುತ್ತಾ ಇರುವುದು ನಮ್ಮ ನಡುವಿನ ಶತಶತಮಾನಗಳ ಅಭೌದ್ಧಿಕತೆಗೆ ಮೂಕಸಾಕ್ಷಿಯಾಗಿದೆ.

ಭಾರತ ದೇಶದಲ್ಲಿ ಬದಲಾವಣೆಯಾಗದೆ ಇರುವುದೆಂದರೆ ಅದು, ಜಾತಿ ವ್ಯವಸ್ಥೆ ಮಾತ್ರ ಅಥವಾ ಮುಂದುವರಿದು ಹೇಳುವುದಾದರೆ ಸಂವಿಧಾನದ ಭಾರತದಲ್ಲಿ ಜಾತಿ ವ್ಯವಸ್ಥೆ ಇನ್ನೂ ಗಟ್ಟಿಯಾಗುತ್ತಿದೆ. ನಾನು ಮೇಲ್ಜಾತಿ ಎಂದು ಹೇಳಿಕೊಳ್ಳುವವರಿಗೆ ತಾವು ಶೋಷಣೆ ಮಾಡುವ ಶೋಷಿತರ ಬದುಕಿನ ಚಿತ್ರಣ ಮಾತ್ರ ಗೊತ್ತು. ಆದರೆ ತಾವು ಶೋಷಣೆ ಮಾಡಿದ, ಮಾಡುತ್ತಿರುವುದರ ವಾಸ್ತವದ ಚಿತ್ರಣ ಕಿಂಚಿತ್ತೂ ಗೊತ್ತಿಲ್ಲ.

ಏಕೆಂದರೆ ಅವರು ಶೋಷಣೆ ಮಾಡುವುದು-ಇವರು ಶೋಷಣೆ ಮಾಡಿಸಿಕೊಳ್ಳುವುದು ಅವರವರ ಮೂಲಭೂತ ಹಕ್ಕು ಎಂದು ತಿಳಿದುಕೊಂಡಿರುವುದೇ ಕಾರಣವಾಗಿದೆ. ಇಂತಹ ಪಾರಂಪರಿಕ ಅಜ್ಞಾನದಿಂದ 75 ವರ್ಷದ ಪ್ರಜಾಪ್ರಭುತ್ವ ಭಾರತದ ಸಂವಿಧಾನದಿಂದಲೇ ಬದಲಾವಣೆಯನ್ನು ಬಯಸುವುದು ತುಂಬಾ ಕಷ್ಟ. ಇದನ್ನೇ ಮನಶಾಸ್ತ್ರಜ್ಞರು ನಮ್ಮ ಭಾರತ ದೇಶದ ಸಾಮಾಜಿಕ ವ್ಯವಸ್ಥೆಯನ್ನು ವಿವಿಧ ಸ್ಥಳಗಳಲ್ಲಿ ಅಧ್ಯಯನಕ್ಕೆ ಒಳಪಡಿಸಿ ಭಾರತ ದೇಶದ ಧರ್ಮ ಹಾಗೂ ಸಮಾಜ ಹಿನ್ನೆಲೆಯ ಮಾನಸಿಕ ಬದಲಾವಣೆ ಎಂದಿಗೂ ಚಲನೆಗೊಳ್ಳದೆ ಶಾಶ್ವತವಾಗಿ ತಟಸ್ಥವಾಗಿದೆ ಅಥವಾ ಚಲನೆಗೊಳ್ಳದೆ ಇರುವುದನ್ನೇ ಇವರು ತಮ್ಮ ದೇಶದ ಐಕ್ಯತೆ, ಸಂಸ್ಕೃತಿ ಎಂದು ಹೇಳಿಕೊಳ್ಳುವುದರ ಜೊತೆಗೆ - ಅದನ್ನೇ ಅಭಿವೃದ್ಧಿ ಎಂದು ಸಹ ಕರೆದುಕೊಳ್ಳುತ್ತಾರೆ ಎಂದು ಹೇಳಿರುವುದು ವಾಸ್ತವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಜಾತೀಯತೆ ಕಾಲ ಕಾಲಕ್ಕೆ ಗಟ್ಟಿಯಾಗುತ್ತಲೇ ಇದೆ. ಜಾತಿ ಹಿನ್ನೆಲೆಯಿಂದ ಶೋಷಿತರಾದವರು ಮೂಲಭೂತ ಹಕ್ಕುಗಳನ್ನು ಸಂವಿಧಾನಾತ್ಮಕವಾಗಿ ಕೇಳಲು ಮುಂದಾದಾಗ ನಡೆಯುವ ದೈಹಿಕ ಹಾಗೂ ಮಾನಸಿಕ ಹಿನ್ನೆಲೆ ವಿಕೃತ ದೌರ್ಜನ್ಯ ಹಾಗೂ ಅದರ ವಿಕೃತ ಸ್ವರೂಪಗಳೇ ಇಲ್ಲಿ ಬದಲಾವಣೆ ಅಥವಾ ಸುಧಾರಣೆ ಎಂದು ಶೋಷಕರು ಭಾವಿಸುತ್ತಾರೆ ಹಾಗೆಯೇ ಬಯಸುತ್ತಿದ್ದಾರೆ. ಸಂವಿಧಾನ ಬಯಸಿದ್ದು ಈ ಬದಲಾವಣೆ ಅಥವಾ ಸುಧಾರಣೆಯನ್ನಲ್ಲ ಎಂಬುದು ನಮ್ಮೆಲ್ಲರಿಗೂ ಸ್ಪಷ್ಟವಾಗಿ ಗೊತ್ತಿದ್ದರೂ ಕೆಲವರು ಮಾತ್ರ ಅಸಂವಿಧಾನಾತ್ಮಕವಾಗಿ ಬದುಕಲು ಹಂಬಲಿಸುತ್ತಿದ್ದಾರೆ. ಈ ಮಾದರಿಯ ಬದುಕೆ ಬದಲಾವಣೆ ಎಂಬ ಕಲ್ಪನೆಯು ಜಾತಿ ಅಂಧಕಾರದ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಿದೆ. ಭಾರತದಲ್ಲಿ ಅಂದಿನಿಂದ ಇಂದಿನವರೆಗೂ ಕಾಲಕಾಲಕ್ಕೆ ಪರಿಷ್ಕರಣೆಗೊಂಡು ಬದಲಾವಣೆಯನ್ನು ಬಯಸಿದ ಹಾಗೂ ಬಯಸುತ್ತಿರುವ ಪದ್ಧತಿ ಎಂದರೆ ಅದು ಜಾತಿ ವ್ಯವಸ್ಥೆ ಮಾತ್ರ. ಇಲ್ಲಿ ಸಮಸಂಸ್ಕೃತಿ ಪ್ರತಿಪಾದನೆ ಮಾಡುವ ಧರ್ಮ ಹಾಗೂ ಸಂಸ್ಕೃತಿಗೆ ಜಾಗವೇ ಇಲ್ಲ.

ಯಾವ ಅನಿಷ್ಟ ಪದ್ಧತಿಯನ್ನು ನಿರ್ಮೂಲ ಮಾಡಿ ಸಮಸಮಾಜದ ಭಾರತವನ್ನು ಧರ್ಮದ ಹಿನ್ನೆಲೆಯಿಂದ ನಿರ್ಮಾಣ ಮಾಡಬೇಕೆಂದು ಬಯಸಿದ ಬುದ್ಧ-ಬಸವಾದಿ ಶರಣ-ಶರಣೆಯರು, ಸಮಾಜಮುಖಿ ಚಿಂತನೆಯ ಕೀರ್ತನೆಕಾರರು, ಸೂಫಿಗಳು, ಸಂತರು, ಸಮಾಜ ಸುಧಾರಕರು ಹಾಗೂ ಇವರೆಲ್ಲರ ವಾರಸುದಾರಿಕೆಯಂತೆ ಈ ನೆಲದಲ್ಲಿ ಜನ್ಮ ತಾಳಿದ ಧೀಮಂತ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಇಲ್ಲಿ ಭೌತಿಕವಾಗಿ ಹಾಗೂ ಬೌದ್ಧಿಕವಾಗಿ ಎರಡನೇ ಸ್ಥಾನದಿಂದಲೂ ಕೆಳಗೆ ದೂಡಲ್ಪಟ್ಟವು. ಆದರೆ ಕೆಲವೇ ಕೆಲವು ಧಾರ್ಮಿಕ ಪ್ರತಿಪಾದನೆ ಹಿನ್ನೆಲೆಯ ಹೊಗಳುಭಟರಿಂದ ಹೊರಬಂದ ಸಂದೇಶಗಳು ಧಾರ್ಮಿಕ ಸುಧಾರಕರು ಹೇಳಿದ ಮಾತುಗಳು ಎಂಬ ಅರ್ಥದಲ್ಲಿ ದೇವರ ರೂಪವನ್ನು ಪಡೆದು ಮುಖ್ಯವಾಹಿನಿಗೆ ಪ್ರಶ್ನೆ ಮಾಡದೆ ಬಂದವು. ಸಾಮಾಜಿಕ ಸುಧಾರಣೆಯ ಹಿನ್ನೆಲೆಯಿಂದ ಧರ್ಮ ಪ್ರತಿಪಾದಕರನ್ನು ಪ್ರಶ್ನೆ ಮಾಡಿದ ಸಂಪ್ರದಾಯಗಳು ಮುಖ್ಯವಾಹಿನಿಯಲ್ಲಿ ಮರೆಯಾದವು. ದೇವರ ಹೆಸರಿನಲ್ಲಿ ಧರ್ಮ ಸಂಸ್ಥಾಪಕರು ಹೇಳಿದ ಅಸಮಾನತೆಯ ಸಮಾಜ ಮೆರೆಯಿತು.

ನಿಜವಾದ ಸಮಾಜ ಸುಧಾರಕರು, ಆ ಮೂಲಕ ಧರ್ಮ ಪ್ರತಿಪಾದನೆ ಮಾಡಿದವರು ಹೇಳಿದ ಸಮಸಮಾಜ ಸಿದ್ಧಾಂತದ ‘ಆಸೆಯೇ ದುಃಖಕ್ಕೆ ಮೂಲ’, ‘ದಯೆಯೇ ಧರ್ಮದ ಮೂಲವಯ್ಯ, ‘ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು’ ಎಂಬ ತತ್ವ ಸಿದ್ಧಾಂತವನ್ನು, ಜನಸಂಸ್ಕೃತಿಯ ಒಳಿತಿಗಾಗಿ ಹೇಳಿದ ಮಾತುಗಳನ್ನು ಧರ್ಮದ ಅಂಧಕಾರದಲ್ಲಿ ಹಾಗೂ ಜಾತಿಯ ಶ್ರೇಣೀಕೃತ ವ್ಯವಸ್ಥೆಯಿಂದಲೇ ಮೊದಲ ಸ್ಥಾನವನ್ನೇ ಉಳಿಸಿಕೊಳ್ಳಲು ಹಂಬಲಿಸಿದವರು ಒಪ್ಪಲೇ ಇಲ್ಲ. ಇವರು ಧರ್ಮ, ಜಾತಿ ಹಿನ್ನೆಲೆಯಿಂದ ಜನತೆಯ ನಡುವೆ ಅಸಮಾನತೆಯನ್ನು ಹಾಗೂ ಅಮಾನವೀಯ ಪದ್ಧತಿಗಳನ್ನು ಜಾರಿಗೊಳಿಸಿ ತಮ್ಮನ್ನು ಮಾತ್ರ ಶ್ರೇಷ್ಠರು ಎಂದು ಹೇಳಿಕೊಳ್ಳುವ ಧರ್ಮದ ಉಳಿವಿಗಾಗಿ ಅನೇಕ ಸುಳ್ಳು - ಕಟ್ಟುಕಥೆಗಳ ಪುರಾಣಗಳನ್ನು ಸೃಷ್ಟಿ ಮಾಡಿ ಅವುಗಳ ಆಧಾರದಿಂದಲೇ ಬಹುಜನರನ್ನು ತಮ್ಮ ತೋಳ್ತೆಕ್ಕೆಗೆ ತೆಗೆದುಕೊಂಡದ್ದು ಎಂಬುದಕ್ಕೆ ಜ್ವಲಂತ ನಿದರ್ಶನಗಳು ಇವೆ. ಈ ಅನ್ಯಾಯದ ವಿರುದ್ಧವೇ ಬುದ್ಧ-ಬಸವ -ಅಂಬೇಡ್ಕರ್ ಅವರು ಪ್ರಜ್ಞಾಪೂರ್ವಕವಾಗಿ ಹೋರಾಡಿದ್ದು.

ಭಾರತದ ಪ್ರಜಾಪ್ರಭುತ್ವ ಸಂವಿಧಾನದ ನೀತಿಗಳು ಕೂಡು-ಕಟ್ಟುವ ಮಾದರಿಯ ಗಟ್ಟಿತನದ ಭಾರತವನ್ನು ಬಯಸುತ್ತದೆ. ಈ ಬಯಕೆಯನ್ನು ಬಯಸದವರು ಇದನ್ನು ಬದಿಗೆ ಸೇರಿಸಿ-ಪ್ರಜಾಪ್ರಭುತ್ವ ವ್ಯವಸ್ಥೆಯ ಎಪ್ಪತೈದು ವರ್ಷಗಳಲ್ಲಿಯೂ ಜಾತಿ ಹಾಗೂ ಧರ್ಮದ ಅಂಧಕಾರದಲ್ಲಿ ಅಸಮಾನತೆಯ ಭಾರತವನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ಬಹುದೊಡ್ಡ ದುರಂತವಲ್ಲದೆ ಮತ್ತೇನು..?

ನಿಜಾರ್ಥದಲ್ಲಿ ಹೇಳುವುದಾದರೆ ರಾಜಪ್ರಭುತ್ವದ ಕಾಲದಲ್ಲಿ ‘ಧರ್ಮ’ ಜಾತಿಯನ್ನು ಪ್ರಬಲವಾಗಿ ನಿಯಂತ್ರಿಸುತ್ತಿತ್ತು. ಆದರೆ ಇಂದಿನ ಪ್ರಜಾಪ್ರಭುತ್ವ ಭಾರತದಲ್ಲಿ ‘ಜಾತಿ’ ಧರ್ಮವನ್ನು ಅತ್ಯಂತ ಪ್ರಬಲವಾಗಿ ನಿಯಂತ್ರಿಸುತ್ತಿದೆ. ಇದಕ್ಕೆ ಅಂದಿನ ಹಾಗೂ ಇಂದಿನ ಸಾಂಸ್ಕೃತಿಕ ಸಂದರ್ಭಗಳೇ ಸಾಕ್ಷಿಯಾಗುತ್ತಿವೆ. ಅಂದು ರಾಜತ್ವವನ್ನು ಅಗ್ರಹಾರದ ಜನ ವರ್ಗ ನಿಯಂತ್ರಿಸುತ್ತಿದ್ದರೆ ಇಂದು ಪ್ರಜಾಪ್ರಭುತ್ವವನ್ನು ಜಾತಿ ಆಧರಿತ ಜನವರ್ಗ ನಿಯಂತ್ರಿಸುತ್ತಿರುವುದು ಇದಕ್ಕೆ ಸಾಕ್ಷಿ.

ಜನರ ಜೀವನಾಧಾರಿತ ಮೂಲಭೂತ ಸೌಕರ್ಯಗಳನ್ನು ನೀಡದೆ, ಧರ್ಮ ಪ್ರತಿಪಾದಕರು ಎಂದು ಶತಶತಮಾನಗಳಿಂದ ಹೇಳಿಕೊಂಡು ಬಂದವರು ತಮ್ಮ ಬಳಿಯಲ್ಲಿಯೇ ಎಲ್ಲವನ್ನು ಏಕಸ್ವಾಮ್ಯ ರೂಪದಲ್ಲಿ ಇಟ್ಟುಕೊಂಡಿದ್ದು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ ಹಿನ್ನೆಲೆಯಲ್ಲಿ ಸಂವಿಧಾನಾತ್ಮಕ ಮೂಲಭೂತ ಹಕ್ಕುಗಳನ್ನು ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಎಂಬ ತತ್ವ ಸಿದ್ಧಾಂತದ ಅಡಿಯಲ್ಲಿ ಒದಗಿಸಲು ಅಂಧಕಾರದ ಮನಸ್ಥಿತಿಯ ಹಿನ್ನೆಲೆಯಿಂದ ಮುಂದಾಗದೆ, ಶತಶತಮಾನಗಳ ತಮ್ಮ ಪಾರಂಪರಿಕ ಸಂಪ್ರದಾಯವನ್ನೇ ಮುಂದುವರಿಸುವುದನ್ನು ಕಂಡ ಸಂವಿಧಾನದ ಪ್ರಜ್ಞಾವಂತ ಮನಸ್ಥಿತಿಯ ಜನರಿಂದ 70ರ ದಶಕದಲ್ಲಿ ಅಂದರೆ, ಭಾರತಕ್ಕೆ ಸ್ವಾತಂತ್ರ್ಯ ಬಂದು 27 ವರ್ಷಗಳು, ಸಂವಿಧಾನ ಬಂದು 25 ವರ್ಷಗಳ ಸಂದರ್ಭದಲ್ಲಿ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಆ ಸಮಿತಿಯ ಮೂಲಕ ಬೃಹತ್ ಚಳವಳಿಯ ಉಗಮಕ್ಕೆ ಕಾರಣವಾಯಿತು. ಕನ್ನಡ ನೆಲದಲ್ಲಿ ಹನ್ನೆರಡನೇ ಶತಮಾನದ ನಂತರ ಜನ ಸಂಸ್ಕೃತಿಯ ಹೊಸ ಇತಿಹಾಸ ಸೃಷ್ಟಿಯಾಯಿತು. ಆದರೆ ಮುಂದಿನ ದಿನಗಳಲ್ಲಿ ಈ ಚಳವಳಿ ತನ್ನ ನಿರಂತರತೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಯಿತೆಂದೇ ಹೇಳಬೇಕು.

ಈ ಸಂದರ್ಭದಲ್ಲಿ ಇಂದಿನ ಲಿಖಿತ ಸಂವಿಧಾನದ ವಾಸ್ತವದ ನೀತಿ ರೀತಿಗಳನ್ನು ಬಯಸದ ಜನವರ್ಗ ಅಲಿಖಿತ ಸಂವಿಧಾನದ ಧರ್ಮ ಹಾಗೂ ಧಾರ್ಮಿಕ ಹಿನ್ನೆಲೆಯ ನಾನು ‘ಸ್ಪಶ್ಯ’, ‘ಶ್ರೇಷ್ಠ’ ಎನ್ನುವ ಜಾತಿ ವ್ಯವಸ್ಥೆಯ ಅಧರ್ಮದ ನೀತಿಯೊಳಗೆ ಸಿಲುಕಿಕೊಂಡು ಅದರಿಂದ ಹೊರಬರಲು ಸಾಧ್ಯವಾಗದೆ ಪಾರಂಪರಿಕ ಅಜ್ಞಾನದ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಾ ಬದುಕುತ್ತಿದ್ದಾರೆ. ಸಮಯಕ್ಕೆ ತಕ್ಕಂತೆ ತಮ್ಮ ಬದುಕಿಗಾಗಿ ಇಂದಿನ ಸಂವಿಧಾನಾತ್ಮಕ ಕಾನೂನುಗಳನ್ನು ಮೀರಿ ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಅಜ್ಞಾನವನ್ನೇ ಮೈಗೂಡಿಸಿಕೊಂಡು ಮೆರೆಯುತ್ತಿದ್ದಾರೆ.

ಇದರ ಸೂಕ್ಷ್ಮಾತಿ ಸೂಕ್ಷ್ಮ ಹಿನ್ನೆಲೆಯ ಸ್ಪಷ್ಟತೆಯನ್ನು ಅರಿಯದ ದಲಿತ ಚಳವಳಿ ಹಾಗೂ ಹೋರಾಟಗಳು ಪ್ರಜಾಪ್ರಭುತ್ವ ಭಾರತದ ಎಪ್ಪತ್ತೈದು ವರ್ಷಗಳಲ್ಲಿಯೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಂತೆ ನಡೆಯುತ್ತಿರುವುದು ದುರಂತವಾಗಿದೆ. 75ರ ದಶಕದಲ್ಲಿ ನಮ್ಮ ಹಿರಿಯ ದಲಿತ ಹೋರಾಟಗಾರರು ಮಾಡಿದ ಸಾಹಸವನ್ನೇ ನೆನೆಯುತ್ತಾ, ಅವರು ಹತ್ತು ವರ್ಷದಲ್ಲಿ ಕಟ್ಟಿದ್ದೇ ಸಾಕು ಎಂಬ ಮನೋಭಾವನೆಯಿಂದ ಇತಿಹಾಸವನ್ನು ಕಟ್ಟುವ ಬದಲು ಬಿಚ್ಚಲು ಮುಂದಾಗುತ್ತಿರುವುದು ದುರಂತವಲ್ಲದೆ ಮತ್ತೇನು?. ಇನ್ನು 75ರ ದಶಕದಲ್ಲಿ ನಡೆದ ದಲಿತ ಚಳವಳಿಯ ಒಗ್ಗಟ್ಟಿನ ವೈಭವವನ್ನು ನೋಡಲು ಇಂದು ಸಾಧ್ಯವಿಲ್ಲ. ನಿಜಾರ್ಥದಲ್ಲಿ ಸಂದರ್ಭ ಹಾಗೂ ಸನ್ನಿವೇಶಕ್ಕೆ ಅನುಗುಣವಾಗಿ ಪ್ರಥಮ ತಲೆಮಾರಿನ ದಲಿತ ಪರಚಿಂತಕರು ಹಾಗೂ ಹೋರಾಟಗಾರರು ತಮ್ಮ ಸಾಧನೆಗಳನ್ನೇ ಮೆಲುಕು ಹಾಕುವ ಮಾದರಿಯಿಂದ ಮೌನಕ್ಕೆ ಶರಣಾದರೆ, ಎರಡನೇ ಮತ್ತು ಮೂರನೇ ತಲೆಮಾರಿನ ದಲಿತ ಚಿಂತಕರು ಹಾಗೂ ಹೋರಾಟಗಾರರು ಪ್ರಥಮ ತಲೆಮಾರಿನ ವಾರಸುದಾರಿಕೆಯಿಂದ ಭಿನ್ನಭಿನ್ನವಾಗಿ ತಮ್ಮ ಐಡೆಂಟಿಟಿಯನ್ನು ಗುರುತಿಸಿಕೊಳ್ಳುವುದರಲ್ಲಿಯೇ ಕಾಲ ಕಳೆದರು. ಕಳೆಯುತ್ತಿರುವರು.

ಇವರ ನಡೆದಾಟ ಹೇಗಿದೆ ಎಂದರೆ, ಕುರುಡ ಆನೆಯನ್ನು ಮುಟ್ಟಿ ವರ್ಣಿಸುವ ರೂಪದಲ್ಲಿಯೇ ದಲಿತ ಚಳವಳಿಯನ್ನು, ಅದರ ಇಕ್ಕಟ್ಟು - ಬಿಕ್ಕಟ್ಟುಗಳನ್ನು ಕಣ್ಣಾರೆ ನೋಡುತ್ತಿದ್ದರೂ ಸಹ ನೋಡದೆ ಇರುವ ಮಾದರಿಯ ಅಂಧಕಾರದಲ್ಲಿ ವರ್ಣಿಸಲು ಮುಂದಾಗುತ್ತಿರುವುದು ಬಹುದೊಡ್ಡ ದುರಂತವಾಗಿದೆ. ಈ ಹಿನ್ನೆಲೆಯಿಂದ ಸಂವಿಧಾನಬದ್ಧ ಹಾಗೂ ಅಂಬೇಡ್ಕರ್ ಚಿಂತನೆಗೆ ಪೂರಕವಾಗಿ ನಡೆಸುತ್ತಿರುವ ಬಹುದೊಡ್ಡ ಬೌದ್ಧಿಕ ಹೋರಾಟಕ್ಕೆ ಹಿನ್ನಡೆಯಾಗುತ್ತಿದೆ. ಇಂತಹ ಕೆಲವರು ಕೇವಲ ತೋರಿಕೆಗೆ ಮಾತ್ರ ‘ದಲಿತ ಹೋರಾಟಗಾರರು’, ‘ಅಂಬೇಡ್ಕರ್ ವಾದಿಗಳು’, ‘ಸಂವಿಧಾನ ರಕ್ಷಕರು’, ‘ದಲಿತಪರ ಚಿಂತಕರು’ ಎಂದು ಗಂಜಿ ಹಾಕಿದ ಬಿಳಿ ಬಟ್ಟೆ - ಕತ್ತಿಗೆ ಹಾಕಿಕೊಳ್ಳುವ ನೀಲಿ ಟವಲ್ ಮೂಲಕ ಗುರುತಿಸಿಕೊಳ್ಳುವವರೇ ಆಗಿದ್ದಾರೆ. ಇಂಥವರಿಂದಲೇ ದಲಿತ ಚಳವಳಿಗೆ ಆಗುವ ಅಪಾಯ ಹೆಚ್ಚು. ಸಾಲದ್ದಕ್ಕೆ ಈ ವರ್ಗದವರೆಲ್ಲರೂ ಸಹ ಬಹುತೇಕ ಒಂದಷ್ಟು ವಿದ್ಯಾವಂತರೆ. ಈ ಹಂತದಲ್ಲಿ ಅವಿದ್ಯಾವಂತರಿಗಿಂತ ವಿದ್ಯಾವಂತರಿಂದಲೇ ಹೆಚ್ಚು ಅಪಾಯವಾಗುತ್ತಿರುವುದು ದುರಂತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಎನ್. ಚಿನ್ನಸ್ವಾಮಿ ಸೋಸಲೆ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!