ರಾಹುಲ್ ಭಾಷಣವನ್ನು ತೋರಿಸದಂತೆ ತಡೆದಿದ್ದು ಯಾರು ? | Rahul Gandhi | Congress

Update: 2024-03-18 03:59 GMT
Editor : Ismail | Byline : ಆರ್. ಜೀವಿ

ರಾಹುಲ್ ಗಾಂಧಿ | Photo: PTI 

ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ ಯಾತ್ರೆ ಮಹಾರಾಷ್ಟ್ರ ತಲುಪಿದೆ. ಈ ಯಾತ್ರೆಯುದ್ದಕ್ಕೂ ಎಲ್ಲೆಡೆ ಜನ ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಬಂದು ಸೇರಿದ್ದಾರೆ. ಈಗ ಮಹಾರಾಷ್ಟ್ರದಲ್ಲೂ ಬಿಸಿಲ ಬೇಗೆಯಲ್ಲೂ ಜನರ ದಂಡು ಸೇರುತ್ತಿದೆ.ಎಲ್ಲಕ್ಕಿಂತ ಮುಖ್ಯವಾಗಿ ಈ ಯಾತ್ರೆಯುದ್ಧಕ್ಕೂ ರಾಹುಲ್ ಅತ್ಯಂತ ಮಹತ್ವದ ವಿಷಯಗಳನ್ನು ಎತ್ತಿದ್ದಾರೆ, ಚರ್ಚಿಸಿದ್ದಾರೆ ಹಾಗು ಅದಕ್ಕೆ ಅನುಗುಣವಾಗಿಯೇ ದಿಲ್ಲಿಯಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಭರವಸೆಗಳನ್ನು ಒಂದೊಂದಾಗಿ ಘೋಷಿಸುತ್ತಿದೆ.

ಆದರೆ ಇದೆಲ್ಲವೂ ಟಿವಿ ಚಾನಲ್ ಗಳು ಹಾಗು ಪ್ರಮುಖ ಪತ್ರಿಕೆಗಳ​ ಪುಟಗಳಿಂದ ಮಾಯವಾಗಿದೆ ಯಾಕೆ ? ಅಲ್ಲೇಕೆ ಇದರ ನೇರಪ್ರಸಾರ, ಚರ್ಚೆ, ಕವರೇಜ್, ವೀಡಿಯೊ , ಫೋಟೋ ಯಾವುದೂ ಕಾಣುತ್ತಿಲ್ಲ? ಅಲ್ಲೊಂದು ಇಲ್ಲೊಂದು ಬಿಟ್ಟರೆ ಪ್ರಮುಖ ಮಾಧ್ಯಮಗಳಲ್ಲಿ ರಾಹುಲ್ ಯಾತ್ರೆ ಹಾಗು ಅವರ ಅಷ್ಟೊಂದು ಪ್ರಮುಖ ಘೋಷಣೆಗಳ ಚರ್ಚೆಯೇ ಕಾಣೆಯಾಗಿದ್ದು ಹೇಗೆ ?

ಇದರ ಹಿಂದೆ ಯಾರಿದ್ದಾರೆ ? ಯಾಕೆ ಹೀಗೆ ಮಾಡಲಾಗುತ್ತಿದೆ ? ಅಲ್ಲಲ್ಲಿ ಅಧಿಕಾರಿಗಳು, ಪೊಲೀಸರೂ ಏಕೆ ರಾಹುಲ್ ಜೊತೆ ಸಹಕರಿಸದಂತೆ ಮಾಡಲಾಗುತ್ತಿದೆ ? ಎಲ್ಲಕ್ಕಿಂತ ಮುಖ್ಯವಾಗಿ ರಾಹುಲ್ ಗಾಂಧಿ ಬಗ್ಗೆ ಇಷ್ಟೊಂದು ಭಯ ಯಾರಿಗೆ ಮತ್ತು ಯಾಕೆ ? ಈ ಬಗ್ಗೆ ಜನ ಏನು ಹೇಳುತ್ತಿದ್ದಾರೆ ? ಇದೊಂದು ದೊಡ್ಡ ಬದಲಾವಣೆಯ ಸೂಚನೆಯೇ ? ಅಥವಾ​ ಈ ಯಾತ್ರೆ ಇನ್ನೊಂದು ಪ್ಲಾಪ್ ಷೋ ಆಗಲಿದೆಯೇ ?

ಮಹಾರಾಷ್ಟ್ರದಲ್ಲಿ ರಾಹುಲ್ ಯಾತ್ರೆ ಜೋರಾಗಿಯೇ ಸಾಗಿದೆ. ಅಲ್ಲಿ ಜನಸಾಗರವೇ ರಾಹುಲ್ ಜೊತೆಗೆ ಸೇರುತ್ತಿದೆ. ಅಲ್ಲಿ ಜನರ ಜೊತೆ ರಾಹುಲ್ ಬೆರೆಯುತ್ತಿದ್ದಾರೆ, ಅವರೊಂದಿಗೆ ಸಂವಾದಿಸುತ್ತಿದ್ದಾರೆ, ಅವರ ಕಷ್ಟಗಳಿಗೆ ಕಾರಣ ಮೋದಿ ಸರ್ಕಾರ ಎಂಬುದನ್ನು ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದಾರೆ.

ಅಲ್ಲಿ ರಾಹುಲ್ ಗಾಂಧಿ ಈ ದೇಶದ ಪ್ರಧಾನಿ ಮೋದಿಯ ಹಾಗೆ ಬರೆದುಕೊಂಡ ಭಾಷಣವನ್ನು ಮಾಡುತ್ತಿಲ್ಲ. ಮೋದಿಯ ಎದುರು ಇರುವಂತೆ ಅಲ್ಲಿ ಟೆಲಿಪ್ರಾಂಪ್ಟರ್ ಇಲ್ಲ. ರಾಹುಲ್ ನೇರವಾಗಿ ಜನರ ಜೊತೆ ಮಾತನಾಡುತ್ತಿದ್ದಾರೆ. ಒಬ್ಬ ಶಾಲಾ ಮಗುವಿನ ಮಾತು ಆಲಿಸುವುದಕ್ಕೂ ಅವರು ಸಮಯ ಮಾಡಿಕೊಳ್ಳುತ್ತಿದ್ದಾರೆ.

ಆದರೆ ಆ ಯಾವ​ ವಿಡಿಯೋಗಳು, ಚಿತ್ರಗಳೂ, ಆ ಯಾವ ಮಾತುಗಳೂ ​ಮಡಿಲ ಮೀಡಿಯಾದಲ್ಲಿ ಜಾಗ ಪಡೆಯುತ್ತಿಲ್ಲ. ಮಾಧ್ಯಮಗಳ ತುಂಬ ಮೋದಿ ನಾನಾ ವೇಷಭೂಷಣಗಳಲ್ಲಿ ಮಿಂಚುವುದು ಮಾತ್ರ ಪ್ರಸಾರವಾಗುತ್ತದೆ. ರಾಹುಲ್ ಗಾಂಧಿ ಹೇಳುತ್ತಿರುವ ಈ ದೇಶದ ವಾಸ್ತವದ ಕುರಿತ ಮಾತುಗಳಿಗೆ ಅಲ್ಲಿ ಅವಕಾಶ ಇಲ್ಲವಾಗಿದೆ.

ಹಾಗಾಗಿ, ಈಗ ಮೂಡುತ್ತಿರುವ ಅನುಮಾನಗಳೆಂದರೆ, ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಮ್ಮ ಖಾತೆಗೆ ವಾರ್ಷಿಕ 1 ಲಕ್ಷ ಹಣ ಹಾಕಲಾಗುತ್ತದೆ ಎಂಬ ವಿಚಾರ ದೇಶದ ಬಡ ಮಹಿಳೆಯರಿಗೆ ಗೊತ್ತಾಗಿದೆಯೆ?

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಮಗೆ ನೌಕರಿ ಸಿಗೋದು ಪಕ್ಕಾ ಎಂದು ರಾಹುಲ್ ಭರವಸೆ ಕೊಟ್ಟಿರೋದರ ಬಗ್ಗೆ ದೇಶದ ಯುವಜನತೆಗೆ ತಿಳಿದಿದೆಯೆ? ಜಲ, ಜಂಗಲ್, ಜಮೀನು ರಕ್ಷಣೆ ಬಗ್ಗೆ ಕಾಂಗ್ರೆಸ್ ಅಭಯ ನಿಡಿರುವ ವಿಚಾರ ಈ ದೇಶದ ಆದಿವಾಸಿಗಳಿಗೆ ಅರ್ಥವಾಗಿದೆಯೆ? ಅಥವಾ ಕಡೇ ಪಕ್ಷ​ ಈ ವಿಚಾರ ಅವರವರೆಗೂ ಮುಟ್ಟಿದೆಯೆ?

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಇನ್ನು ಆದಿವಾಸಿಗಳ ವಿಚಾರದಲ್ಲಿ ತಾರತಮ್ಯವಾಗಲಾರದು ಎಂಬ ಸಂದೇಶವನ್ನು ಅವರಿಗೆ ಮುಟ್ಟಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆಯೆ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ​ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧವಾಗಿಯೇ ಸಿಗಲಿದೆ ಎಂಬ ವಿಚಾರ ಎಲ್ಲ ರೈತರಿಗೂ ​ತಲುಪಿದೆಯೆ?

ಕಾಂಗ್ರೆಸ್ ಬಹಳ ಮಹತ್ವದ ಗ್ಯಾರಂಟಿಗಳನ್ನು ಈ ದೇಶದ ಜನತೆಗಾಗಿ ಘೋಷಿಸಿದೆ. ಭಾರತ್ ಜೋಡೋ ನ್ಯಾ​ಯಯಾತ್ರೆಯ ಉದ್ದಕ್ಕೂ ರಾಹುಲ್ ಗಾಂಧಿ ಕೂಡ ಎಲ್ಲವನ್ನೂ ಹೇಳುತ್ತ ಬಂದಿದ್ದಾರೆ. ಆದರೆ ಅದೆಲ್ಲವೂ ಈ ದೇಶದ ಎಲ್ಲ ಜನರಿಗೂ ತಲುಪುತ್ತಿದೆಯೆ? ತಿಳಿಯುತ್ತಿದೆಯೆ?

ಅಂಥ ಸಾಧ್ಯತೆ ಕಡಿಮೆ ಎಂದೇ ಹೇಳಬೇಕಾಗಿದೆ. ಯಾಕೆಂದರೆ, ರಾಹುಲ್ ಭಾಷಣಗಳು ಟಿವಿಯಲ್ಲಿ ಪ್ರಸಾರವಾಗದಂತೆ ತಡೆಯಲಾಗುತ್ತಿದೆ. ಆಡಳಿತ ಪಕ್ಷದ ವಿಚಾರದಲ್ಲಿ ​ ಎಲ್ಲದಕ್ಕೂ ಜಾಗ ಮಾಡಿಕೊಡುತ್ತಿರೋ ​ ಟಿವಿ ಮಾಧ್ಯಮ ವಿಪಕ್ಷದ ವಿಚಾರದಲ್ಲಿ ಮಾತ್ರ ಪತ್ರಿಕೋದ್ಯಮ ನೀತಿಗೆ ವಿಮುಖವಾಗಿದೆ.

ಅಲ್ಲಿ ಕಾಂಗ್ರೆಸ್ ವಿಚಾರಕ್ಕೆ, ರಾಹುಲ್ ಭಾಷಣ ಪ್ರಸಾರಕ್ಕೆ ಜಾಗವಿಲ್ಲವಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭಕ್ಕೆ ಹೀಗೆ ಗೆದ್ದಲು ಹಿಡಿದಿದೆ. ಅದು ಭ್ರಷ್ಟಗೊಂಡಿದೆ. ಹಾಗಾದರೆ ಈ ದೇಶದ ಸ್ಥಿತಿ ಎಲ್ಲಿಗೆ ಮುಟ್ಟಿದೆ ಎಂದು ದುಃಖದಿಂದಲೇ ಕೇಳಬೇಕಾಗಿದೆ.

ಈ ದೇಶದಲ್ಲಿ ಒಂದೊಂದು ಹೊತ್ತಿನ ತುತ್ತಿಗೂ ಪರದಾಡುತ್ತಿರುವ ಬಡವರು, ದುಡಿವ ವರ್ಗ, ಅತಿ ಹಿಂದುಳಿದವರು, ಮಹಿಳೆಯರು, ರೈತರು, ಉದ್ಯೋಗವಿಲ್ಲದೆ ಹತಾಶರಾಗಿರುವ ಯುವಜನತೆ, ಬುಡಕಟ್ಟು ಜನರು ಇವರಿಗೆಲ್ಲ ಕಾಂಗ್ರೆಸ್ ಏನು ಹೇಳುತ್ತಿದೆ ಎಂಬುದು ತಿಳಿಯದೇ ಹೋದರೆ ಎನಾಗಬಹುದು?

ಕಾಂಗ್ರೆಸ್ ತಮ್ಮ ಪರವಾಗಿ ನಿಲ್ಲಲು ತಯಾರಾಗಿ ಏನೇನು ಭರವಸೆಗಳನ್ನು ಕೊಡುತ್ತಿದೆ ಎಂಬ ವಿಚಾರಗಳೇ ಈ ಎಲ್ಲ ವರ್ಗದ ಜನರಿಗೆ ತಲುಪದೇ ಹೋದರೆ ಏನಾಗಬಹುದು? ಅಮೇಥಿ, ರಾಯ್ ಬರೇಲಿಯಂಥ ಕ್ಷೇತ್ರಗಳಲ್ಲಿ ಕೂಡ ಜನಸಾಮಾನ್ಯರಿಗೆ ರಾಹುಲ್ ಯಾವಾಗ ಬಂದರು, ಯಾವಾಗ ಹೋದರು ಎಂಬುದು ತಿಳಿಯಲಾರದಷ್ಟು ಮಟ್ಟಿಗೆ ಕಾಂಗ್ರೆಸ್ ಕುರಿತ ಸುದ್ದಿಗಳು ಟಿವಿಯಲ್ಲಿ ಇಲ್ಲವಾಗಿವೆ ಎಂದಾದ ಮೇಲೆ ಉಳಿದೆಡೆಗಳಲ್ಲಿನ ಸ್ಥಿತಿ ಹೇಗಿರಬಹುದು?

ದೇಶದಲ್ಲೇ ಒಂದು ರಾಜಕೀಯ ಬದಲಾವಣೆಯ ಪರ್ವವನ್ನು ರಾಹುಲ್ ತಮ್ಮ ಭಾರತ್ ಜೋಡೋ ಯಾತ್ರೆಯ ಮೂಲಕ ತಂದರು, ತರುತ್ತಿದ್ದಾರೆ. ನೇರವಾಗಿ ನೇತಾರನೊಬ್ಬ ಜನರ ಜೊತೆ ಸಂವಾದಕ್ಕಿಳಿದು, ಅವರ ನಡುವೆ ಬೆರೆತು, ಅವರ ಕಷ್ಟಗಳೇನು ಎಂಬುದನ್ನು ಕಣ್ಣಾರೆ ಕಾಣುತ್ತ, ಅದಕ್ಕೆ ತಾನೇನು ಮಾಡಬಹುದು ಎಂದು ತಿಳಿಯುವ ಅಪರೂಪದ ಪ್ರಯತ್ನ ಭಾರತ್ ಜೋಡೋ ಯಾತ್ರೆ ಮತ್ತು ಅದರ ಎರಡನೇ ಹಂತವಾಗಿರುವ ಭಾರತ್ ಜೋಡೋ ನ್ಯಾಯ ಯಾತ್ರೆ.

ದೇಶದ ಉದ್ದಗಲಕ್ಕೂ ಸಂಚರಿಸುತ್ತ ರಾಹುಲ್ ಕಂಡುಕೊಂಡ ಸತ್ಯ, ಈ ದೇಶದ ಕಾರ್ಪೊರೇಟ್ ಆರ್ಥಿಕತೆ ಮತ್ತು ಜನರ ಆರ್ಥಿಕ ಸ್ಥಿತಿ ಇವೆರಡರ ನಡುವೆ ಅತಿ ದೊಡ್ಡ ಕಂದಕ ಏರ್ಪಟ್ಟಿದೆ ಎಂಬುದು. ಇದನ್ನು ಜನರಿಗೆ ತಿಳಿಸಲು ಯತ್ನಿಸುತ್ತಿರುವ ರಾಹುಲ್ ಮಾತುಗಳು ಅವರನ್ನು ​ತಲುಪುತ್ತಿವೆಯೆ?

ಈ ದೇಶದಲ್ಲಿ ಕಾರ್ಪೊರೇಟ್ ವಲಯಕ್ಕೆ ಏಕಿಷ್ಟು ಮಹತ್ವ​ ? ಮತ್ತದು ಸರ್ಕಾರವನ್ನೇ ಹಿಡಿತದಲ್ಲಿಟ್ಟುಕೊಳ್ಳುವ ಮಟ್ಟಕ್ಕೆ ಹೋಗಿರುವುದು ಹೇಗೆ ಎಂಬ ಸತ್ಯವನ್ನು ರಾಹುಲ್ ಹೇಳುತ್ತಿ​ದ್ದಾರೆ.

ಈ ದೇಶದ ಬಡವರ ಸ್ಥಿತಿ ಹೇಗೆ ಶೋಚನೀಯವಾಗುತ್ತಿದೆ ಎಂಬ ಸತ್ಯವನ್ನು ರಾಹುಲ್ ಹೇಳಹೊರಟಿದ್ದಾರೆ. ಆದರೆ ರಾಹುಲ್ ಮಾತುಗಳು ಜನರನ್ನು ತಲುಪಲಾರದಂತೆ ವ್ಯವಸ್ಥಿತವಾಗಿ ನೊಡಿಕೊಳ್ಳಲಾಗುತ್ತಿದೆಯೆ? ಹಾಗೆ ನೋಡಿದರೆ ಮಾಧ್ಯಮಗಳೇ ಇವೆಲ್ಲದರ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸಬೇಕಿತ್ತು.

ಆದರೆ ಆಳುವವರ ಭಾಷೆಯೇ ಬದಲಾಗಿರುವ ಈ ಕಾಲದಲ್ಲಿ, ಆಳುವವರ ಮಡಿಲ ಪಾಲಾಗಿರುವ ಮಾಧ್ಯಮಗಳು ಕೂಡ ಬೇರೆಯದೇ ಬಗೆಯ ಮಾತು ಕಲಿತಿವೆ ಮತ್ತು ನಿಜವಾಗಿಯೂ ಆಡಬೇಕಾದ ಮಾತುಗಳು ಮಾಧ್ಯಮದಿಂದ ಕಾಣೆಯಾಗಿಬಿಟ್ಟಿವೆ. ರಾಹುಲ್ ಗಾಂಧಿ ಮೂಲಕ ಆಗುತ್ತಿರುವ ಅತಿ ದೊಡ್ಡ ಮಟ್ಟದ ರಾಜಕೀಯ ಪರಿವರ್ತನೆಗೆ ಅಡ್ಡಗಾಲಾಗುವ ಹಿಕಮತ್ತುಗಳೇ ಮಾಧ್ಯಮವೂ ಸೇರಿದಂತೆ ಎಲ್ಲ ಕಡೆಯಿಂದಲೂ ನಡೆಯುತ್ತಿವೆ.

ಈ ದೇಶದ ಒಟ್ಟಾರೆ ಸ್ಥಿತಿಯ ಬಗ್ಗೆ ರಾಹುಲ್ ಅವರಿಗಿರುವ ಸ್ಪಷ್ಟತೆ ಮತ್ತದರ ಹಿನ್ನೆಲೆಯಲ್ಲಿ ರಾಹುಲ್ ಅವರ ನಿಲುವಿನಂತೆ ಕಾಂಗ್ರೆಸ್ ಇಡುತ್ತಿರುವ ಹೆಜ್ಜೆಗಳು ಕಾಂಗ್ರೆಸ್ಗೆ ಮತಗಳನ್ನು ತಂದುಕೊಡಬಲ್ಲವೆ? ನಿಜವಾಗಿಯೂ ರಾಜಕೀಯ ಬದಲಾವಣೆಯೊಂದು ಸಾಧ್ಯವಾಗಲಿದೆಯೆ? ಅಥವಾ ಅಂಥ ವಾತಾವರಣ ಇದೆಯೆಂಬುದು ತೋರಿಕೆ ಮಾತ್ರವೆ? ಬಿಜೆಪಿಯ ವ್ಯವಸ್ಥಿತ ತಂತ್ರಗಳನ್ನು ಮೀರಿ, ಜನರನ್ನು ​ತಲುಪುವುದು ಮತ್ತು ಜನರ ಮತಗಳನ್ನು ಗಳಿಸುವುದು ಕಾಂಗ್ರೆಸ್ ಎದುರಿನ ಅತಿ ದೊಡ್ಡ ಸವಾಲಾಗಿದೆಯೆ? ಈ ಯುದ್ಧದಲ್ಲಿ ಅದು ಜಯಿಸುವುದೆ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!