ಸಮಯ ಬರಲಿ ಎಲ್ಲಾ ಹೇಳುತ್ತೇನೆ ಎಂದು ಗುಡುಗಿದ್ದು ಯಾಕೆ ಸಿ ಟಿ ರವಿ ?

Update: 2024-03-18 06:01 GMT
Editor : Ismail | Byline : ಆರ್. ಜೀವಿ

ಸಿ ಟಿ ರವಿ 

​ರಾಜ್ಯ ಬಿಜೆಪಿಯಲ್ಲಿ ನಿಜವಾಗಿಯೂ ಏನಾಗುತ್ತಿದೆ?. ಪಕ್ಷದೊಳಗಿನ ಬಣ ರಾಜಕಾರಣ​ ರಾಜ್ಯದ ಹಲವು ನಾಯಕರ ರಾಜಕೀಯ ಭವಿಷ್ಯವನ್ನು ಅತಂತ್ರಗೊಳಿಸಲಿದೆಯೆ? ಅಂಥ ಆತಂಕ ಹೊಂದಿರುವವರು ವ್ಯಕ್ತಪಡಿಸುತ್ತಿರುವ ಅಸಮಾಧಾನ ಬಿಜೆಪಿಯಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಬಹುದೆ? ಸಿಟಿ ರವಿಯಂಥ​ ಪ್ರಖರ ಹಿಂದುತ್ವ ನಾಯಕರಿಗೆ ಏಕೆ ಈಗ ಪಕ್ಷದೊಳಗೆ ಅಸ್ಥಿರತೆ ಕಾಡುತ್ತಿದೆ?

ಮೋದಿಗೋಸ್ಕರ ಎಲ್ಲವನ್ನೂ ನುಂಗಿಕೊಳ್ಳುತ್ತ ಬಂದಿರುವುದಾಗಿ ಹೇಳುತ್ತಿರುವುದರ ಹಿಂದಿನ ಕಾರಣಗಳು ಏನು?

ಪಕ್ಷದೊಳಗೇ ಇರುವ ಪೈಪೋಟಿ, ಸೇಡು ತೀರಿಸಿಕೊಳ್ಳುವ ಮಟ್ಟಕ್ಕೆ ಹೋಗಿರುವ ನಾಯಕರು ಇವೆಲ್ಲವೂ ತರಬಹುದಾದ ಪರಿಣಾಮಗಳು ಏನು?

​ರಾಜ್ಯ ಬಿಜೆಪಿಯೊಳಗೆ ಬಿಎಲ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡು ಬಿಎಸ್ ಯಡಿಯೂರಪ್ಪ ವಿರುದ್ಧ ನಿಂತಿದ್ದವರು ಹಲವರು.

ಅದಕ್ಕೆ ಪರೋಕ್ಷವಾಗಿ ಹೈಕಮಾಂಡ್ ಬೆಂಬಲವೂ ಇತ್ತೆಂಬುದು ಬೇರೆ ಮಾತು. ಯಡಿಯೂರಪ್ಪನವರನ್ನು ಹೇಗಾದರೂ ಪಕ್ಷದಲ್ಲಿ ಗೌಣವಾಗಿಸಬೇಕು ಎಂಬ ಲೆಕ್ಕಾಚಾರ ಯಾವಾಗ ನಡೆಯಲಿಲ್ಲವೊ ಆಗ ನಿಧಾನವಾಗಿ ಪಕ್ಷದ ದೆಹಲಿ ವರಿಷ್ಠರು ಮತ್ತೆ ಯಡಿಯೂರಪ್ಪನವರ ಅನಿವಾರ್ಯತೆಯನ್ನು ಕಂಡುಕೊಂಡಿದ್ದಾರೆ.

ಪಕ್ಷದಲ್ಲಿನ್ನು ಬಿಎಸ್ವೈ ಆಟ ನಡೆಯದು ಎಂದೇ ಅಂದುಕೊಂಡಿದ್ದ ಮತ್ತು ಆ ಕಾರಣಕ್ಕೇ ದಾಕ್ಷಿಣ್ಯವಿಲ್ಲದೆ ಯಡಿಯೂರಪ್ಪನವರ ವಿರುದ್ಧವೂ ಮಾತನಾಡಿದ ಕೆಲವು ನಾಯಕರ ಸ್ಥಿತಿ ​ಈಗ ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ. ಇದು ಒಂದು ವಿಚಾರವಾದರೆ, ಯಡಿಯೂರಪ್ಪನವರಿಗೆ ಈಗ ಪಕ್ಷದೊಳಗೆ ಸಿಕ್ಕಿರುವ ಪ್ರಾಮುಖ್ಯತೆ ತಮ್ಮ ರಾಜಕೀಯ ಬದುಕನ್ನೇ ಅಯೋಮಯಗೊಳಿಸಲಿದೆಯೆ ಎಂಬ ಪ್ರಶ್ನೆಯನ್ನೂ ಹಲವರು ಕೇಳಿಕೊಳ್ಳುತ್ತಿದ್ದಾರೆ.

ಸಿಟಿ ರವಿ ಕೂಡ ಅಂಥ ಆತಂಕವನ್ನು ಹೊಂ​ದಿದ್ದಾರೆ. ಮತ್ತು ಅದೇ ಕಾರಣದಿಂದ ಅವರು​ ಬೇರೆ ದಾರಿ ಕಾಣದೆ ಅಸಮಾಧಾನ ಹೊರಹಾಕಿದ್ದಾರೆ.

ಅವರ ಅಸಮಾಧಾನಗಳ ಹಿನ್ನೆಲೆ ಏನು ಎಂಬುದನ್ನು ನೊಡುವುದಾದರೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿಟಿ ರವಿ ಅವರನ್ನು ಹುದ್ದೆಯಿಂದ ಇಳಿಸಲಾಗಿತ್ತು.

ಆಗ, ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂಬ ಸುದ್ದಿಗಳೇ ಹರಡುವಂತಾಗಿತ್ತು. ಆದರೆ ಬಿಎಸ್ವೈ ಪುತ್ರ ವಿಜಯೇಂದ್ರ ಅವರನ್ನು ಆ ಹುದ್ದೆಯಲ್ಲಿ ಕೂರಿಸಲಾಯಿತು. ಅದು ಸಿಟಿ ರವಿಗೆ ಆದ ಮೊದಲ ಬಹಳ ದೊಡ್ಡ ನಿರಾಸೆ. ಇದಾದ ನಂತರ ಅವರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಆಸೆಯೊಂದು ಉಳಿದುಕೊಂಡಿತ್ತು.

ಈಗ, ಯಡಿಯೂರಪ್ಪನವರು ಆ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆಯವರನ್ನು ಕಣಕ್ಕಿಳಿಸುವ ಬಗ್ಗೆ ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಆ ಆಸೆಗೂ ಕಲ್ಲು ಬೀಳುವ ಸಾಧ್ಯತೆ ಕಾಣಿಸುತ್ತಿರುವುದು ಸಿಟಿ ರವಿ ಅವರನ್ನು ಕಂಗೆಡಿಸಿದೆ. ​ಶಾಸಕ ಸ್ಥಾನವನ್ನೂ ಕಳಕೊಂಡು, ಈಗ ಪಕ್ಷದಲ್ಲಿ ಹುದ್ದೆಯೂ ಇಲ್ಲದಂತಾಗಿದ್ದು, ರಾಜ್ಯ ಘಟಕದಲ್ಲೂ ಯಾವ ಜವಾಬ್ದಾರಿ ಸಿಗದೇ ಹೋದದ್ದು ಅವರ ತೀವ್ರ ಚಡಪಡಿಕೆಗೆ ಕಾರಣ.

ಪಕ್ಷದ ವಿಚಾರ ಬಂದಾಗ ಬಹಿರಂಗವಾಗಿ ಎಲ್ಲೂ ತಳಮಳಗಳನ್ನು ಹೊರಗೆ ತೋರಿಸಿಕೊಳ್ಳದ ಸಿಟಿ ರವಿ, ಈಗ ಮಾತ್ರ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ಹಿತಕ್ಕಾಗಿ ಬಹಳ ವಿಷಯಗಳನ್ನು ನುಂಗಿಕೊಂಡಿದ್ದೇನೆ. ಬಹಳ ದಿನ ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಆಗದು, ಸಮಯ ಬರಲಿ ಎಲ್ಲಾ ಹೇಳುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿಯೊಳಗಿನ ಬೆಳವಣಿಗೆಗಳ ಬಗ್ಗೆ ತಮ್ಮ ಅಸಮಾಧಾನ ತೋರಿಸಿಕೊಂಡಿದ್ದಾರೆ.

ಯಡಿಯೂರಪ್ಪನವರ ವಿಚಾರದಲ್ಲಿ ಅವರಿಗಿರುವ ಅಸಮಾಧಾನ ಒಂದೆಡೆಯಾದರೆ, ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡು ಟೀಕಿಸಿದ್ದನ್ನೇ ನೆನಪಿನಲ್ಲಿಟ್ಟುಕೊಂಡು ಈಗ ಯಡಿಯೂರಪ್ಪನವರು ಸಿಟಿ ರವಿ ವಿರುದ್ಧ ಒಂದೊಂದೇ ಆಟವಾಡುತ್ತಿರುವುದು ಇನ್ನೊಂದೆಡೆ.

ಹಿಂದೆ ಹಲವು ಸಲ ಯಡಿಯೂರಪ್ಪನವರನ್ನು ಸಿಟಿ ರವಿ ಟೀಕಿಸಿದ್ದು ಅವರ ಸೋಲಿಗೂ ಬಹುಶಃ ಕಾರಣವಾಗಿಬಿಟ್ಟಿತು . ಈಗ ಹೈಕಮಾಂಡ್ ಬಿ ಎಸ್ ವೈ ಬೆನ್ನಿಗೆ ನಿಂತಿದ್ದು, ಈ ಬಾರಿ ಟಿಕೆಟ್ ಹಂಚಿಕೆ ಸಂಪೂರ್ಣ ಬಿ ಎಸ್ ವೈ ಹೇಳಿದಂತೆ ಆಗಲಿರುವುದು, ಅದು ರವಿ ಅಂಥವರಿಗೆ​ ತೀವ್ರ ಕಿರಿಕಿರಿ ಉಂಟುಮಾಡುತ್ತಿದೆ.

ಕಳೆದ ವಿಧಾನಸಭೆ ಚುನಾವಣೆ ವೇಳೆಯಂತೂ ಯಡಿಯೂರಪ್ಪ ಕುಟುಂಬದ ವಿರುದ್ಧ ಸಿಟಿ ರವಿ ಸತತ ಟೀಕೆಯಲ್ಲಿ ತೊಡಗಿದ್ದರು. ​ಯಾರದ್ದೋ ಮನೆಯ ಕಿಚನ್ನಲ್ಲಿ ಬಿಜೆಪಿ ಟಿಕೆಟ್ ನಿರ್ಧಾರವಾಗುವುದಿಲ್ಲ ಎಂಬ ಸಿಟಿ ರವಿ ಹೇಳಿಕೆಯಂತೂ ತೀವ್ರ ಅಸಮಾಧಾನದ ಕಿಡಿಯನ್ನೇ ಹೊತ್ತಿಸಿತ್ತು.

ಹೀಗೆಲ್ಲ ಇರುವಾಗ ಅದು ಒಟ್ಟಾರೆ ಸಿಟಿ ರವಿ ರಾಜಕೀಯದ ಮೇಲೆ ಏನು ಪರಿಣಾಮ ಬೀರಲಿದೆ?

ವಿಧಾನಸಭೆ ಚುನಾವಣೆಯಲ್ಲಿ ಯಾರ್ಯಾರು ಹೇಗೆ ನಡೆದುಕೊಂಡರು ಎನ್ನುವುದನ್ನು ಲೋಕಸಭೆ ಚುನಾವಣೆ ಬಳಿಕ ಹೇಳುತ್ತೇನೆ, ಹೇಳಲೇಬೇಕು ಎನ್ನುವ ಮೂಲಕ ಸಿಟಿ ರವಿ ಯಾರಿಗೆ ಏನು ಸಂದೇಶ ಕೊಡುತ್ತಿದ್ದಾರೆ? ಅವರ ಈ ನಡೆ ಇನ್ನಷ್ಟು ತೊಡಕಾಗಬಹುದೆ? ಲೋಕಸಭಾ ಚುನಾವಣೆ ಬಳಿಕ ನಿಜಕ್ಕೂ ಅವರು ಹೇಳಲಿರುವುದು ಏನಿರಬಹುದು?

ಬಿಜೆಪಿಯನ್ನೂ ಈ ಪ್ರಶ್ನೆಗಳು ಕಾಡದೇ ಇರಲಾರವು. ​ಈ ನಡುವೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಹಲವು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸುವ ನಿರೀಕ್ಷೆ ಇದೆ. ಈ ಬಾರಿ ಸುಮಾರು 10ಕ್ಕೂ ಹೆಚ್ಚು ಹಾಲಿ ಸಂಸದರಿಗೆ ಟಿಕೆಟ್‌ ಕೈತಪ್ಪುವ ಸಾಧ್ಯತೆ ಇದೆ. ಶುಕ್ರವಾರ ಬಿಡುಗಡೆಯಾಗುತ್ತೆ ಎನ್ನಲಾದ ಎರಡನೇ ಪಟ್ಟಿಯಲ್ಲಿ ಹಲವು ಅಚ್ಚರಿಗಳಿರಲಿವೆ ಎಂಬುದು ತಿಳಿದುಬಂದಿದೆ.

​ಇವತ್ತು, ನಾಳೆ ಒಳಗೆ ಎರಡನೇ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಕರ್ನಾಟಕದ ಎಲ್ಲ ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆಯಾಗುವ ನಿರೀಕ್ಷೆ ಇದೆ. 13 ಹಾಲಿ ಸಂಸದರಿಗೆ ಟಿಕೆಟ್‌ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ. ಮೊದಲ ಪಟ್ಟಿಯ ಮಾನದಂಡಗಳನ್ನು ಕರ್ನಾಟಕದಲ್ಲಿ ಪ್ರಯೋಗಿಸಿದರೆ 13 ಸಂಸದರು ಟಿಕೆಟ್‌ ಕಳೆದುಕೊಳ್ಳಬಹುದು ಎಂದು ಹೇಳಲಾಗಿದೆ. ಹಲವು ಹೊಸ ಮುಖಗಳಿಗೆ ಅವಕಾಶ ನೀಡಲು ಬಿಜೆಪಿ ನಾಯಕರು ನಿರ್ಧರಿಸಿರುವಂತೆ ಕಾಣುತ್ತಿದೆ.

​ಇದೂ ರಾಜ್ಯ ಬಿಜೆಪಿಯೊಳಗೆ ಹೊಸ ತಳಮಳಕ್ಕೆ ಕಾರಣವಾಗುವ ಸಾಧ್ಯತೆ ಇಲ್ಲದಿಲ್ಲ. ಹೈಕಮಾಂಡ್ ಎದುರು ಹೇಗೂ ಮಾತಾಡೋ ಹಾಗಿಲ್ಲ, ಜೊತೆಗೆ ರಾಜ್ಯದಲ್ಲೂ ಈಗ ಬಿ ಎಸ್ ವೈ ಅವರದ್ದೇ ಆಟ ಅನ್ನೋ ಹಾಗಿದೆ. ಇದನ್ನೆಲ್ಲಾ ಟಿಕೆಟ್ ವಂಚಿತ ಸಂಸದರು ಹೇಗೆ ಸ್ವೀಕರಿಸುತ್ತಾರೆ ಅಂತ ಕಾದು ನೋಡಬೇಕು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!