ಆರು ಬಾರಿ ಸಂಸದರಾದವರಿಗೆ ಹೇಳಿಕೊಳ್ಳಲು ಒಂದೇ ಒಂದೇ ಸಾಧನೆ ಯಾಕಿಲ್ಲ ?

Update: 2024-03-18 05:45 GMT
Editor : Ismail | Byline : ಆರ್. ಜೀವಿ

ಅನಂತಕುಮಾರ್ ಹೆಗಡೆ 

ದ್ವೇಷ ರಾಜಕಾರಣವನ್ನು ಮಾತ್ರವೇ ಮಾಡಿಕೊಂಡು ಬಂದಿರುವ, ಅತಿ ಕೊಳಕು ಮನಃಸ್ಥಿತಿಯ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆಯಿಂದ ಮತ್ತೊಮ್ಮೆ ದೇಶದ ಸಂವಿಧಾನ ಬದಲಿಸುವ ಮಾತು ಬಂದಿದೆ. ಕಳೆದ ಐದು ವರ್ಷಗಳಿಂದ ಕಾಣೆಯಾಗಿದ್ದ ಈ ಸಂಸದ ಮತ್ತೆ ಕಾಣಿಸಿಕೊಂಡ ಮೇಲೆ ಹೇಳಿದ್ದೆಲ್ಲ ಇಂಥವೇ ಜನವಿರೋಧಿ, ಸಂವಿಧಾನ ವಿರೋಧಿ, ಮನುಷ್ಯ ವಿರೋಧಿ ಹೇಳಿಕೆಗಳು.

ಹಾಗಾದರೆ ಈಗ ಬದಲಾಯಿಸಬೇಕಾದ್ದು ಯಾರನ್ನು ? ಸಂವಿಧಾನವನ್ನೇ ಅಥವಾ ಈ ದೇಶದ ಸರಕಾರ ಹಾಗೂ ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಸಂಸದರನ್ನೇ ? ಸಂವಿಧಾನ ಬದಲಾವಣೆಯ ಮಾತನ್ನಾಡಿದ ಅನಂತ್ ಕುಮಾರ್ ಹೆಗಡೆಯ ಮಾತಿಗೂ ಬಿಜೆಪಿಗೂ ಸಂಬಂಧವಿಲ್ಲ ಎನ್ನುತ್ತಿದೆ ಬಿಜೆಪಿ. ಇಷ್ಟು ಹೇಳಿಬಿಟ್ಟರೆ ಸಾಕೆ? ಅಥವಾ ಸಂವಿಧಾನ ವಿರೋಧಿ ಹೇಳಿಕೆ ಕೊಟ್ಟ ಅನಂತ್ ಕುಮಾರ್ ಹೆಗಡೆಯನ್ನು ಉಚ್ಚಾಟಿಸ ಬೇಡವೇ ?

ಬಿಜೆಪಿ ಹೇಳಿದ ಹಾಗೆ ಹೆಗಡೆ ಮಾತಿಗೆ ಅದರ ಬೆಂಬಲ ಇಲ್ಲ ಎಂದಾದರೆ ಹೆಗಡೆಯ ಟಿಕೆಟ್ ರದ್ದು ಮಾಡಿ ಅಲ್ಲಿಂದ ಬೇರೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಡವೆ ? ಯಾಕೆ ಬಿಜೆಪಿ ಅನಂತ್ ಕುಮಾರ್ ಹೆಗಡೆಯಂಥವರನ್ನು ಮುಂದೆ ಬಿಟ್ಟು, ಹೀಗೆಲ್ಲ ಹೇಳಿಸುತ್ತಿದೆ? ಬಳಿಕ ತನಗೆ ಸಂಬಂಧವಿಲ್ಲ ಎಂಬಂತೆ ನಟಿಸುತ್ತಿದೆ?

ಅನಂತ್ ಕುಮಾರ್ ಹೆಗಡೆ ಮೊನ್ನೆ ನೀಡಿರುವ ಹೇಳಿಕೆ ಪ್ರಕಾರ, ಬಿಜೆಪಿಗೆ ಈಗ ಭರ್ಜರಿ ಬಹುಮತ ಬೇಕಿರುವುದು ಬಾಬಾ ಸಾಹೇಬ್ ಕೊಟ್ಟ ದೇಶದ ಸಂವಿಧಾನ ಬದಲಿಸುವುದಕ್ಕೆ. ಸಂವಿಧಾನಕ್ಕೆ ತಿದ್ದುಪಡಿ ಮಾಡುವುದಕ್ಕೋಸ್ಕರ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕಾಗಿದೆಯಂತೆ. ಹಿಂದೂ ಧರ್ಮವನ್ನು ರಕ್ಷಿಸಬೇಕಾದರೆ ಸಂವಿಧಾನವನ್ನು ಬದಲಾಯಿಸಬೇಕು. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು ಎಂಬ ಹೆಗಡೆ ಹೇಳಿಕೆ ಏನನ್ನು ಸೂಚಿಸುತ್ತದೆ?

ಎಲ್ಲೆಡೆ ಬಹುಮತ ಬರಲಿ, ಆಮೇಲೆ ನೋಡಿ ಮಾರಿಜಾತ್ರೆ ಹೇಗಿರುತ್ತದೆ ಅಂತ ಅನಂತ್ ಕುಮಾರ್ ಹೆಗಡೆ ಹೇಳಿರುವುದು ಹಿಂಸೆಯ ಅಮಲಿನಲ್ಲಿಯೇ ಎಂಬುದು ಸ್ಪಷ್ಟ. 400ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಪಡೆದರೆ ಮಾರಿಜಾತ್ರೆಗೆ ಒಂದು ಕಳೆ ಬರುತ್ತದೆ ಎಂಬ ಆ ಸಂಸದನದು ಹೇಗೆ ಹಿಂಸೆಯ ಮನೋಭಾವ ಮಾತ್ರವಾಗಿದೆ ಎಂಬುದನ್ನು ಗಮನಿಸಬಹುದು. ಮಾರಿ ಜಾತ್ರೆ ಅಂತ ಈ ಅನಂತ್ ಕುಮಾರ್ ಹೆಗಡೆ ಏನನ್ನು ಹೇಳ್ತಾ ಇದ್ದಾರೆ ? ನಿಜವಾಗಿ ಏನು ಮಾಡಲು ಹೊರಟಿದ್ದಾರೆ ಅವರು ?

ಈ ಅನಂತ್ ಕುಮಾರ್ ಹೆಗಡೆ ತನ್ನ ರಾಜಕೀಯ ವೃತ್ತಿ ಜೀವನ ದುದ್ದಕ್ಕೂ ಮಾಡಿಕೊಂಡು ಬಂದಿದ್ದೇ ದ್ವೇಷ ರಾಜಕಾರಣ.ಧಾರ್ಮಿಕ ವಿಚಾರಗಳನ್ನು ಕೆದಕುತ್ತ, ಪ್ರಚೋದನಕಾರಿ ಹೇಳಿಕೆ ನೀಡುತ್ತಾ, ಸಂವಿಧಾನ ಬದಲಿಸುವ ಮಾತನ್ನು ಮತ್ತೆ ಮತ್ತೆ ಆಡುತ್ತ ಸುದ್ದಿಯಲ್ಲಿದ್ದ ಈ ಸಂಸದ ಅಭಿವೃದ್ಧಿ, ಜನಸೇವೆ ವಿಚಾರಗಳಿಂದ ಯಾವತ್ತೂ ದೂರವೇ ಇದ್ದುದನ್ನು ಉತ್ತರ ಕನ್ನಡ ಜಿಲ್ಲೆಯ ಇವತ್ತಿನ ಸ್ಥಿತಿಯೇ ಹೇಳುತ್ತದೆ.

6 ಬಾರಿ ಸಂಸತ್ತಿಗೆ ಆಯ್ಕೆಯಾದರೂ ಉತ್ತರ ಕನ್ನಡಕ್ಕೆ ಹೆಗಡೆ ಕೊಡುಗೆ ಸೊನ್ನೆ ಎಂಬುದನ್ನು ಅಲ್ಲಿನ ಜನರೇ ಹೇಳುತ್ತಾರೆ. ಕಳೆದ ಚುನಾವಣೆಯಲ್ಲಿ ಗೆದ್ದ ನಂತರವಂತೂ ಹೆಗಡೆ ಎಲ್ಲಿ ಇದ್ದರು ಎನ್ನುವುದೇ ಯಾರಿಗೂ ಪತ್ತೆಯಿಲ್ಲದಂತಾಗಿತ್ತು. ಅದಾದ ಬಳಿಕ ಕಳೆದ ತಿಂಗಳು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಮೇಲೆ ಶುರು ಮಾಡಿದ್ದೂ ಅದೇ ಕೊಳಕು ಕೋಮುವಾದಿ ಹೇಳಿಕೆಗಳನ್ನೇ. ವರದಿಗಳು ಹೇಳುವ ಪ್ರಕಾರ, ಕಾರವಾರ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಇರುವ ಸಂಸದರ ಕಚೇರಿಗೆ ಬೀಗ ಬಿದ್ದೇ ಬಹಳ ಕಾಲವಾಗಿದೆ.

ಜಿಲ್ಲೆಗಾಗಿ ಅನಂತ್ ಕುಮಾರ್ ಹೆಗಡೆ ಮಾಡಿದ್ದು ಎಂದು ಹೇಳುವುದಕ್ಕೂ ಒಂದು ಕೆಲಸ ಕಾಣಿಸುತ್ತಿಲ್ಲ ಎಂಬ ತೀವ್ರ ಅಸಮಾಧಾನ ಅಲ್ಲಿನ ಜನರಲ್ಲಿದೆ. ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಶುರುವಾಗಿಯೇ 11 ವರ್ಷಗಳಾದವು. ಅರ್ಧ ಕೆಲಸವೂ ಮುಗಿದಿಲ್ಲ ಎನ್ನುತ್ತಿವೆ ವರದಿಗಳು.

ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದಾರರ ಸಮಸ್ಯೆಯನ್ನಂತೂ ಕೇಳುವವರೇ ಇಲ್ಲ .  ಶಿರಸಿ-ತಾಳಗುಪ್ಪ, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಬೇಡಿಕೆಗಳು ದಶಕಗಳಿಂದಲೂ ಹಾಗೇ ಇವೆ. ಕೇಂದ್ರದ ಮೂಲಕವೇ ಬಗೆಹರಿಸಿಕೊಳ್ಳಬೇಕಾದ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ. ಹೋಗಲಿ ತಮ್ಮ ಆರು ಅವಧಿಯಲ್ಲಿ ಜಿಲ್ಲೆಗೆ ಒಂದು ಸುಸಜ್ಜಿತ ಸರಕಾರೀ ಆಸ್ಪತ್ರೆ ಮಾಡಿಸುವ ಯೋಗ್ಯತೆಯೂ ಈ ಸಂಸದರಿಗೆ ಇಲ್ಲ.

ಸಂಸತ್ ಕಲಾಪದಲ್ಲಿ ಅನಂತ್ ಕುಮಾರ್ ಹೆಗಡೆ ಕಾಣಿಸಿಕೊಳ್ಳುವುದು ಕೂಡ ಅಪರೂಪ. ಕಲಾಪಕ್ಕೆ ಹಾಜರಾದಾಗಲೂ ಚರ್ಚೆಯಲ್ಲಿ ಪಾಲ್ಗೊಂಡು, ಜಿಲ್ಲೆಗಾಗಿ ಮಾತನಾಡಲೇ ಇಲ್ಲ ಎಂಬುದು ಮೊನ್ನೆಯಷ್ಟೇ ವರದಿಯಾಗಿದೆ. ಇಂಥ ಒಬ್ಬ ಸಂಸದ ಧರ್ಮದ ಹೆಸರಿನಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಸುದ್ದಿಯಾಗುತ್ತಿರುವುದಷ್ಟೇ ಸಾಧನೆ.

ಸಂವಿಧಾನ ಬದಲಿಸುವುದಕ್ಕಾಗಿ ಬಹುಮತ ಬೇಕಿದೆ ಎಂಬ ಅನಂತ್ ಕುಮಾರ್ ಹೆಗಡೆ ಹೇಳಿಕೆ ಮೂಲಕ ಬಿಜೆಪಿಯ, ಆರೆಸ್ಸೆಸ್ನ, ಮೋದಿ ಸರ್ಕಾರದ ನಿಜವಾದ ಅಜೆಂಡ ಬಯಲಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ದೇಶದ ಸಂವಿಧಾನವನ್ನು ನಾಶಪಡಿಸುವುದು ಮತ್ತು ಬದಲಿಸುವುದೇ ಬಿಜೆಪಿ ಮತ್ತು ಆರೆಸ್ಸೆಸ್ನ ರಹಸ್ಯ ಮತ್ತು ಮೋಸದ ಅಜೆಂಡ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ನಾಶ ಮಾಡುವುದು ಮೋದಿ ಸರ್ಕಾರದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಸರ್ವಾಧಿಕಾರ ಹೇರುವ ಮೋದಿ ಮತ್ತು ಆರ್ಎಸ್ಎಸ್ ಕಾರ್ಯಸೂಚಿಯನ್ನು ಬಿಜೆಪಿ ಸಂಸದನ ಹೇಳಿಕೆ ಬಯಲು ಮಾಡಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.      

ಸಂವಿಧಾನ ಬದಲಾಯಿಸುತ್ತೇವೆ ಎಂದು ಅನಂತ್ ಕುಮಾರ್ ಹೆಗಡೆ ಹೇಳುತ್ತಿರುವುದು ಇದೇ ಮೊದಲೇನೂ ಅಲ್ಲ. 2017ರಲ್ಲಿ ಕೇಂದ್ರ ಮಂತ್ರಿಯಾಗಿದ್ದ ಹೊತ್ತಿನಲ್ಲಿಯೂ ಅಂಥ ಮಾತನಾಡಿ, ಬಳಿಕ ಸಂಸತ್ತಿನಲ್ಲಿ ಕ್ಷಮೆ ಯಾಚಿಸಿದ್ದು ಗೊತ್ತಿರುವ ವಿಚಾರ. ಇಷ್ಟಾದ ಮೇಲೂ ಅಂಥದೇ ಮಾತನ್ನು ಮತ್ತೆ ಹೇಳುತ್ತಿರುವುದರ ಹಿನ್ನೆಲೆಯೇನು? ಹೇಗೆ ಅಂಥ ಧೈರ್ಯ ಬರುತ್ತದೆ?

ಅನಂತ್ ಕುಮಾರ್ ಹೆಗಡೆ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ ಎನ್ನುತ್ತಾರೆ ವಿಧಾನಸಭೆ ವಿರೋಧ ಪಕ್ಷ ನಾಯಕ ಆರ್ ಅಶೋಕ್. ಆದರೆ ಹಾಗೆಂದು ಹೇಳಿದ ಮಾತ್ರಕ್ಕೆ ಅವರದೇ ಪಕ್ಷದ ಸಂಸದನ ಹೇಳಿಕೆ ಇಲ್ಲವಾಗುತ್ತದೆಯೆ? ಅಂಥ ಮಾತನ್ನು ಬಿಜೆಪಿ ಸಹಿಸುವುದಿಲ್ಲ ಎಂದಾದರೆ ಆ ಸಂಸದನನ್ನು ಪಕ್ಷದಿಂದ ಉಚ್ಚಾಟಿಸಿ ತನ್ನ ಬದ್ಧತೆ ತೋರಿಸಬೇಕಲ್ಲವೆ?.

ಸಿಎಂ ಸಿದ್ದರಾಮಯ್ಯ ಇಂಥದೇ ಸವಾಲನ್ನು ಬಿಜೆಪಿಗೆ ಹಾಕಿದ್ದಾರೆ. ಸಂವಿಧಾನ ಬದಲಾವಣೆಯ ಮಾತನಾಡಿರುವ ಅನಂತ ಕುಮಾರ್ ಹೆಗಡೆಯನ್ನು ಚುನಾವಣಾ ಸ್ಪರ್ಧೆಯಿಂದ ಶಾಶ್ವತವಾಗಿ ಅನರ್ಹಗೊಳಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಅನಂತ್‌ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕ ಹೇಳಿಕೆಯಲ್ಲ. ಅದು ಬಿಜೆಪಿಯ ಗುಪ್ತ ಅಜೆಂಡಾದ ಭಾಗವೇ ಆಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ನಮ್ಮ ಸಂವಿಧಾನ ಸರ್ವಧರ್ಮಗಳನ್ನೂ ಸಮಭಾವದಿಂದ ನೋಡುತ್ತದೆ. ಪ್ರತಿಯೊಬ್ಬ ಪ್ರಜೆಗೂ ತನ್ನ ನಂಬಿಕೆಯ ಧರ್ಮವನ್ನು ಪಾಲಿಸಿಕೊಂಡು ಬರುವ ಸ್ವಾತಂತ್ರ್ಯವನ್ನು ನೀಡಿದೆ. ಹೀಗಿರುವಾಗ ಸಂವಿಧಾನವನ್ನೇ ಬದಲಾಯಿಸಿ ಅನಂತ್ ಕುಮಾರ್ ಹೆಗಡೆ ಯಾವ ಹಿಂದೂಧರ್ಮವನ್ನು ರಕ್ಷಿಸಲು ಹೊರಟಿದ್ದಾರೆ? ಹೆಗಡೆ ಹೇಳಿಕೆ ಗಮನಿಸಿದರೆ ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿ ಕೊಟ್ಟ ಸಂವಿಧಾನಕ್ಕಿಂತ ಮೊದಲು ಇದ್ದ ಮನು ಪ್ರಣೀತ ಸಂವಿಧಾನವನ್ನು ಜಾರಿಗೊಳಿಸುವ ದುಷ್ಠ ಆಲೋಚನೆ ಹೆಗಡೆ ಮತ್ತು ಅವರ ಪಕ್ಷಕ್ಕೆ ಇದೆ ಎನ್ನುವುದು ಸ್ಪಷ್ಟ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯನವರು ಹೇಳಿದಂತೆ ಸಾರ್ವಜನಿಕ ಭಾಷಣಗಳಲ್ಲಿ ಮಾತ್ರ ಸಂವಿಧಾನದ ಬಗ್ಗೆ ಗೌರವ ತೋರಿಸುವ ಮೋದಿ ಮತ್ತವರ ಪಕ್ಷ ಯಾಕೆ ಅವತ್ತಾಗಲಿ ಇವತ್ತಾಗಲೀ ಸಂವಿಧಾನ ಬದಲಾಯಿರುವ ಮಾತಾಡುವ ತಮ್ಮದೇ ಸಂಸದನ ವಿಚಾರದಲ್ಲಿ ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ?

ಪಕ್ಷದ ವರಿಷ್ಠರ ಬೆಂಬಲ ಇಲ್ಲದೆ ಹೀಗೆಲ್ಲ ಸಂವಿಧಾನ ವಿರೋಧಿ ಹೇಳಿಕೆ ಕೊಡುವ ಧೈರ್ಯ ಬರಲು ಹೇಗೆ ಸಾಧ್ಯ?

ಇಂಥವರನ್ನು ಸಾಕುತ್ತಲೇ ಬಂದಿದೆಯಲ್ಲವೆ ಬಿಜೆಪಿ? ಎದುರಲ್ಲಿ ಮಾತ್ರ ತನ್ನನ್ನು ತಾನು ಸಾಚಾ ಎಂಬಂತೆ ತೋರಿಸಿಕೊಳ್ಳುತ್ತ, ಇಂಥವರನ್ನು ಬಿಟ್ಟು ತನ್ನ ಉದ್ದೇಶವನ್ನು ಸಾಧಿಸುವ ವ್ಯವಸ್ಥಿತ ತಂತ್ರವನ್ನು ಅದು ಜಾರಿಯಲ್ಲಿಟ್ಟಿದೆಯೇ ಎಂಬ ಅನುಮಾನಗಳು ಇಂಥ ಹೊತ್ತಿನಲ್ಲಿ ಮೂಡದೇ ಇರುವುದಿಲ್ಲ.

ವಿಕಾಸದ ಹೊಸ ಮಾದರಿಯನ್ನೇ ಇಡೀ ಜಗತ್ತಿಗೆ ತೋರಿಸಿದ ಸರ್ಕಾರ ಎಂಬ ಪ್ರಚಾರ ಮಾಡ್ತಾ ಇರುವ ಬಿಜೆಪಿ ಹಾಗೂ ಮೋದಿಜೀ ಗೆ ತೀರಾ ಇಂತಹ ದೇಶ ವಿರೋಧಿ, ಸಂವಿಧಾನ ವಿರೋಧಿ ಹೇಳಿಕೆ ಕೊಡುವ ಸಂಸದನ ಅಗತ್ಯ ಏನಿದೆ ? ಆರು ಬಾರಿ ಸಂಸದನಾಗಿ , ಕೇಂದ್ರ ಸಚಿವನೂ ಆಗಿದ್ದ ಅತ್ಯಂತ ಹಿರಿಯ ಹಾಗೂ ಅನುಭವೀ ಜನಪ್ರತಿನಿಧಿ ಒಬ್ಬ ಸಂಸತ್ತಿನಲ್ಲಿ ಮಾತೇ ಆಡೋದಿಲ್ಲ ಅನ್ನೋದು ಒಂದು ವಿಪರ್ಯಾಸ.

ಹೊರಗೆ ಬಾಯಿ ಬಿಟ್ಟರೆ ಬರೀ ದೇಶ ವಿರೋಧಿ, ಜನ ವಿರೋಧಿ ಹೇಳಿಕೆಗಳನ್ನೆ ಕೊಡ್ತಾರೆ ಅನ್ನೋದು ಅದೆಂತಹ ದುರಂತ ಅಲ್ವಾ.. ಅದೂ ಈ ಆರು ಬಾರಿಯ ಸಂಸದ ವಿಶ್ವ ಗುರು ಮೋದಿ ಅವರ ಪಕ್ಷಕ್ಕೆ ಸೇರಿದವರು ಎಂಬುದು ಅವರಿಗೆ ಅದೆಷ್ಟು ದೊಡ್ಡ ಅವಮಾನ ಅಲ್ವಾ. ಹಾಗಾದರೆ ಆ ಆರು ಬಾರಿಯ ಸಂಸದರಿಗೆ ಈಗ ಓಟು ಕೇಳಲು ಹೋಗುವಾಗ ಹೇಳಿಕೊಳ್ಳಲು ಬೇರೆ ಯಾವುದೇ ಸಾಧನೆಯೇ ಇಲ್ವಾ...

ಕೇವಲ ಸಂವಿಧಾನ ಬದಲಾವಣೆ ಮಾಡ್ತೀವಿ, ಮಾರಿ ಹಬ್ಬ ಕಾದಿದೆ ಅಂತ ಹೇಳೋದೇ ಅವರಿಗೆ ಉಳಿದಿರುವ ದಾರಿಯೇ ? ಅದೇ ಅವರ ನಿಜವಾದ ಅಜೆಂಡಾ ಕೂಡ ಆಗಿದೆಯೇ ? ಅನಂತ್ ಕುಮಾರ್ ಹೆಗಡೆಯ ಮಾತನ್ನು ಮೋದಿಜೀ ಒಪ್ತಾರ ? ಒಪ್ಪೋದಿಲ್ಲ ಅಂದ್ರೆ ಅವರನ್ನು ಲೋಕಸಭಾ ಟಿಕೆಟ್ ಪಟ್ಟಿಯಿಂದ ಕಿತ್ತು ಬಿಸಾಕಿ ನಾನು ಸಂವಿಧಾನ ವಿರೋಧಿ ಹೇಳಿಕೆಯನ್ನು ಸಹಿಸಲ್ಲ ಎಂದು ಇಡೀ ದೇಶಕ್ಕೆ ಸಂದೇಶ ರವಾನೆ ಮಾಡ್ತಾರಾ ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!