ಇಷ್ಟೊಂದು ಹಾಲಿ ಸಂಸದರನ್ನು ಬಿಜೆಪಿ ಕೈಬಿಡುತ್ತಿರುವುದು ಏಕೆ ?
ವಿಧಾನ ಸಭಾ ಚುನಾವಣೆಯಲ್ಲೂ ಟಿಕೆಟ್ ಘೋಷಣೆ ಬಳಿಕ ಭಾರೀ ಬಂಡಾಯ ಎದುರಿಸಿದ್ದ ರಾಜ್ಯ ಬಿಜೆಪಿ ಎದುರು ಈಗ ಲೋಕಸಭಾ ಚುನಾವಣೆಗೂ ಅದೇ ರೀತಿಯ ಸವಾಲು ಕಾಣುತ್ತಿದೆ. ಬಿಜೆಪಿ ಈಗ ಮತ್ತೆ ಪಕ್ಷದೊಳಗಿನವರ ಅಸಮಾಧಾನವನ್ನು ಎದುರಿಸಬೇಕಾಗಿ ಬಂದಿದೆ. ಮತ್ತು ಈ ಅಸಮಾಧಾನ ಎರಡು ಬಗೆಯದ್ದಾಗಿರಬಹುದು. ಮೊದಲನೆಯದು, ಲೋಕಸಭೆ ಚುನಾವಣೆಗೆ ಟಿಕೆಟ್ ಕೈತಪ್ಪುವ ಹಾಲಿ ಸಂಸದರ ಅಸಮಾಧಾನ.
ಎರಡನೆಯದು, ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರೇ ಕೆಲ ಹಾಲಿ ಸಂಸದರಿಗೆ ಟಿಕೆಟ್ ಕೊಡಕೂಡದು ಎಂದು ಪಟ್ಟು ಹಿಡಿದಿದ್ದು, ಪಕ್ಷದ ವರಿಷ್ಠರು ಅದನ್ನು ಮೀರಿ ಅವರಿಗೇ ಟಿಕೆಟ್ ಕೊಟ್ಟರೆ ಮೂಡಬಹುದಾದ ಆಕ್ರೋಶ ಮತ್ತು ಅಸಹಕಾರದ ಭಾವನೆ. ತನ್ನ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಒಂದೇ ಒಂದು ಕ್ಷೇತ್ರಕ್ಕೂ ಅಭ್ಯರ್ಥಿಯನ್ನು ಘೋಷಿಸಿರದ ಬಿಜೆಪಿ, ಈಗ ಎರಡನೇ ಪಟ್ಟಿಯ ಬಿಡುಗಡೆಗಾಗಿ ತೀವ್ರ ಕಸರತ್ತಿನಲ್ಲಿ ತೊಡಗಿದ್ದು, ರಾಜ್ಯ ಬಿಜೆಪಿಯಲ್ಲಿ ಆಗಲೇ ಹಲವರಿಗೆ ಟಿಕೆಟ್ ಕೈತಪ್ಪುವ ಸುಳಿವುಗಳು ಸಿಕ್ಕಿವೆ.
ಮತ್ತು ಈ ಸುಳಿವುಗಳ ಬೆನ್ನಲ್ಲೇ ನಾಯಕರ ಬೇಸರ, ಬೇಗುದಿ, ಜಿದ್ದು ಎಲ್ಲವೂ ಹೊರಬರುವುದಕ್ಕೆ ಶುರುವಾಗಿವೆ. ಎಷ್ಟೇ ಒಗ್ಗಟ್ಟು ಎಂದರೂ ಟಿಕೆಟ್ ಕೈತಪ್ಪಿದಾಗ ಹಾಲಿಗಳಾಗಿದ್ದವರ ರಾಜಕೀಯ ನಡೆ ಭಿನ್ನವಾಗಿರುವುದಂತೂ ನಿಜ. ಹಾಗಾದರೆ ಇದೆಲ್ಲ ಎಲ್ಲಿಗೆ ಹೋಗಿ ತಲುಪಬಹುದು?ಅಥವಾ ಎರಡು ದಿನದ ಹೈಡ್ರಾಮಾ ಬಳಿಕ ಎಲ್ಲವೂ ತಣ್ಣಗಾಗಿ, ಸಿಟಿ ರವಿ ಥರದವರು ಹೇಳುವಂತೆ ಮೋದಿಗಾಗಿ ಒಗ್ಗಟ್ಟಾಗಿರೋಣ ಎನ್ನುತ್ತಾರೆಯೆ? ಯಾರಿಗೇ ಟಿಕೆಟ್ ಕೊಟ್ಟರೂ ಮೋದಿಗಾಗಿ ಚುನಾವಣೆ ಗೆಲ್ಲಲು ಶ್ರಮಿಸೋಣ ಎಂದು ತಣ್ಣಗಾಗುತ್ತಾರೆಯೆ?
ಅಥವಾ ನಳೀನ್ ಕುಮಾರ್ ಕಟೀಲ್ ಈಗಾಗಲೇ ಹೇಳಿರುವಂತೆ ಗುಡಿಸು ಎಂದರೆ ಗುಡಿಸುವುದಕ್ಕೂ, ಒರೆಸು ಎಂದರೆ ಒರೆಸುವುದಕ್ಕೂ ರೆಡಿಯಾಗುತ್ತಾರೆಯೆ? ಟಿಕೆಟ್ ಕೈತಪ್ಪುವುದರಿಂದ ಹಾಲಿ ಸಂಸದರು ಎಷ್ಟರ ಮಟ್ಟಿಗೆ ಅಸಮಾಧಾನಗೊಳ್ಳುತ್ತಾರೊ ಗೊತ್ತಿಲ್ಲ. ಆದರೆ, ಪುತ್ರನಿಗೆ ಟಿಕೆಟ್ ಕೈತಪ್ಪುವ ಭೀತಿಯಿಂದ ಬಿಜೆಪಿಯ ವಿರುದ್ಧವೇ, ಅದರಲ್ಲೂ ಯಡಿಯೂರಪ್ಪ ಕುಟುಂಬದ ವಿರುದ್ಧವೇ ಸೆಡ್ಡು ಹೊಡೆಯಲು ಈಶ್ವರಪ್ಪ ಮಾತ್ರ ರೆಡಿಯಾಗಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಹಾವೇರಿ ಟಿಕೆಟ್ ಪುತ್ರನಿಗೆ ಮಿಸ್ ಆಗೋದು ಖಚಿತ ಆಗುತ್ತಿದ್ದಂತೆ ಪಕ್ಷದ ವಿರುದ್ಧ ಸಿಡಿದೇಳಲು ಈಶ್ವರಪ್ಪ ಸಜ್ಜಾಗಿದ್ದಾರೆ, ಬಂಡಾಯ ಘೋಷಿಸಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ. ಬಿ ಎಸ್ ವೈ ಹಾಗು ಈಶ್ವರಪ್ಪ ನಡುವಿನ ಈ ದಶಕಗಳ ಜಿದ್ದಾಜಿದ್ದಿ ಈಗ ತಾರಕಕ್ಕೆ ತಲುಪುವ ಸಾಧ್ಯತೆ ಕಾಣುತ್ತಿದೆ. ಜೊತೆಗೆ ಈವರೆಗೂ ಪಕ್ಷದ ಜೊತೆ ಹೊಂದಿಕೊಂಡು ಎಲ್ಲ ಅಸಮಾಧಾನಗಳನ್ನು ನುಂಗಿಕೊಂಡು ಹೋಗುತ್ತಿದ್ದ ಈಶ್ವರಪ್ಪ ಈ ಬಾರಿ ಸೆಟೆದು ನಿಲ್ಲಲು ನಿರ್ಧರಿಸಿದ ಹಾಗಿದೆ.
ಇದು ಎಲ್ಲಿಗೆ ಹೋಗಿ ತಲುಪಲಿದೆ ? ಇದರ ಹಿಂದೆ ಮುಂದೆ ಏನೇನು ಲೆಕ್ಕಾಚಾರಗಳಿವೆ ? ಕಳೆದ ವಿಧಾನಸಭೆ ಚುನಾವಣೆ ಹೊತ್ತಲ್ಲಿ ಟಿಕೆಟ್ ಕಳಕೊಂಡರೂ ಮೋದಿಯಿಂದ ಹಾಡಿ ಹೊಗಳಿಸಿಕೊಂಡಿದ್ದ ಈಶ್ವರಪ್ಪ, ಈಗ ಬಿಜೆಪಿ ವರಿಷ್ಠರ ನಿರ್ಧಾರದ ವಿರುದ್ಧವೇ ಸೆಟೆದು ನಿಲ್ತಾರಾ ?
ಅಥವಾ ಹಿಂದೆ ಬಹಳಷ್ಟು ಸಂದರ್ಭಗಳಲ್ಲಿ ಕಂಡಂತೆ, ಮೊದಲು ಅಬ್ಬರಿಸಿ ಆಮೇಲೆ ನಾನೇನೂ ಹೇಳೇ ಇಲ್ಲ ಎಂಬಂತೆ ಪಕ್ಷನಿಷ್ಠರಾಗಿಬಿಡುವ ಬಿಜೆಪಿ ನಾಯಕರ ಹಾಗೆ ಈಶ್ವರಪ್ಪ ಕೂಡ ಮೊದಲು ಹೆದರಿಸಿ ನೋಡಿ ಆಮೇಲೆ ಮುದುರಿಕೊಳ್ಳಲಿದ್ದಾರೆಯೆ?
ಈಗ ಹೇಳಲಾಗುತ್ತಿರುವ ಪ್ರಕಾರ, ಹಾವೇರಿಯಲ್ಲಿ ಮಗನಿಗೆ ಟಿಕೆಟ್ ಕೈತಪ್ಪಿದ್ದೇ ಆದಲ್ಲಿ ಅದರ ಸೇಡನ್ನು ಶಿವಮೊಗ್ಗದಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧವೇ ಎದುರಾಳಿಯಾಗಿ ನಿಂತು ತೀರಿಸಿಕೊಳ್ಳುವುದಕ್ಕೆ ಈಶ್ವರಪ್ಪ ತಯಾರಾಗಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಈಶ್ವರಪ್ಪ ನಿರ್ಧರಿಸಿದ್ಧಾರೆ ಎಂಬ ಮಾತುಗಳಿವೆ.
ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿರುವವರು ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ. ಹಾಗೆ ಬಿಜೆಪಿ ಅಭ್ಯರ್ಥಿಯ ವಿರುದ್ಧವೇ ಬಿಜೆಪಿ ನಾಯಕ ಈಶ್ವರಪ್ಪ ಬಂಡೇಳಲಿದ್ದಾರೆ ಎಂಬುದು ಈಗ ಕೇಳಿಬರುತ್ತಿರುವ ಮಾತು. ಈ ಬಗ್ಗೆ ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿರುವುದು, ಹಾಗೊಂದು ಮೆಸೇಜ್ ಹೋಗಲಿ ಎಂದಿದ್ದರೂ ಇರಬಹುದು.
ಅದೇನೇ ಇದ್ದರೂ, ಪುತ್ರನ ರಾಜಕೀಯ ಭವಿಷ್ಯವನ್ನು ಗಟ್ಟಿ ಮಾಡಲು ಬಹು ಕಾಲದಿಂದ ಶ್ರಮಿಸುತ್ತಿರುವ ಈಶ್ವರಪ್ಪ ಅದರಲ್ಲಿ ಈವರೆಗೂ ಯಶಸ್ವಿಯಾಗಿಲ್ಲ. ಆದರೆ ಒಳಗೊಳಗೇ ತಮ್ಮ ಬಹುಕಾಲದ ಎದುರಾಳಿಯಾಗಿರುವ ಯಡಿಯೂರಪ್ಪ ಕುಟುಂಬ ಮತ್ತವರ ಪುತ್ರರ ರಾಜಕೀಯ ಉನ್ನತಿಯಿಂದ ಅವರು ಕುದ್ದುಹೋಗಿದ್ಧಾರೆ ಎಂಬುಂದಂತೂ ನಿಜ.
ಒಂದು ಕಡೆ ಅವರನ್ನು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುವಂತೆ ಮಾಡಿ ಕೂರಿಸಲಾಗಿದೆ.
ಇನ್ನೊಂದೆಡೆ ಪಕ್ಷದಲ್ಲಿ ಅವರ ಮಗನಿಗೂ ಅವಕಾಶ ಇಲ್ಲದಂತೆ ಮಾಡಲಾಗುತ್ತಿದೆ.
ಇದು ಅವರ ಅಸಮಾಧಾನಕ್ಕೆ, ಬಿಜೆಪಿ ವರಿಷ್ಠರ ಮೇಲಿನ ಅಸಮಾಧಾನ ಎಂಬುದಕ್ಕಿಂತಲೂ ಯಡಿಯೂರಪ್ಪ ಮೇಲಿನ ಅಸಮಾಧಾನಕ್ಕೆ ಕಾರಣವಾಗಲಿದೆ. ಯಡಿಯೂರಪ್ಪ ಪುತ್ರರಿಗೆ ಸಿಗುವ ಸ್ಥಾನಮಾನ ಮತ್ತಿತರ ಅವಕಾಶಗಳು, ಪಕ್ಷನಿಷ್ಠನಾಗಿ ಇಷ್ಟು ಕಾಲದಿಂದ ನಡೆದುಕೊಂಡು ಬಂದಿರುವ ತಮ್ಮ ಪುತ್ರನ ವಿಚಾರದಲ್ಲಿ ತೆರೆದುಕೊಳ್ಳುತ್ತಿಲ್ಲ ಎಂಬ ಬೇಗುದಿಯಂತೂ ಈಶ್ವರಪ್ಪನವರಿಗೆ ಇದ್ಧೇ ಇದೆ.
ಆದರೆ ಹಾಗೆಂದು ಅವರು ಪಕ್ಷವನ್ನೇ ಬಿಡುವಷ್ಟು ಅತಿಗೆ ಹೋಗಬಲ್ಲರೆ? ಪಕ್ಷದ ವಿರುದ್ಧವೇ ಬಂಡೇಳುವಂಥ ಗುಂಡಿಗೆ ತೋರಬಲ್ಲರೆ?
ತಾವು ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ಕಾರ್ಯಕರ್ತರ ನಿರ್ಧಾರ ಏನಿರಲಿದೆ ಎಂದು ತಿಳಿದುಕೊಳ್ಳಲು ಶಿಕಾರಿಪುರ, ಸಾಗರ, ಭದ್ರಾವತಿ, ಶಿವಮೊಗ್ಗ ಮತ್ತಿತರ ಕಡೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ವಿವಿಧ ಸಮಾಜದ ಮುಖಂಡರು ಹಾಗೂ ಪಕ್ಷದೊಳಗಿನ ಆಪ್ತರ ಸಭೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.
ಹೀಗೆ ಹೆದರಿಸಿ ಬೆದರಿಸಿಯಾದರೂ ಮಗನಿಗೊಂದು ಜಾಗ ಮಾಡಿಸಿ ಕೊಡಬೇಕೆಂಬ ಹಠಕ್ಕೆ ಬಿದ್ದಿರುವ ಈಶ್ವರಪ್ಪನವರ ನಡೆ ಹೇಗಿರಲಿದೆ ಎಂಬುದನ್ನು ನೋಡಬೇಕು. ಯಾಕೆಂದರೆ, ಅವರು ಇದೆಲ್ಲದರ ನಡುವೆಯೂ, ಕಾಂತೇಶ್ಗೆ ಟಿಕೆಟ್ ಸಿಕ್ಕೇ ಸಿಗುತ್ತದೆ, ಆತ ಗೆದ್ದೇ ಗೆಲ್ತಾನೆ, ಮೋದಿ ಪ್ರಧಾನಿಯಾಗಿಯೇ ಆಗ್ತಾರೆ ಎಂದು ಕೊಲ್ಲೂರಿನಲ್ಲಿ ಹೇಳಿದ್ದಾರೆ. ಮತ್ತು ಇದೇ ಈಶ್ವರಪ್ಪನವರ ಅಸಲೀ ರೂಪ.
ಈಶ್ವರಪ್ಪನವರದು ಒಂದು ಬಗೆಯ ತೊಳಲಾಟವಾದರೆ, ಟಿಕೆಟ್ ಕೈತಪ್ಪುವುದನ್ನು ಹೆಚ್ಚು ಕಡಿಮೆ ಖಾತ್ರಿ ಮಾಡಿಕೊಂಡಿರುವ ಹಾಲಿ ಸಂಸದರದು ಮತ್ತೊಂದು ಬಗೆಯ ಫಜೀತಿ. ಈಗಾಗಲೇ ಪಕ್ಷದೊಳಗಿನ ನಾಯಕರ ಅಸಮಾಧಾನಕ್ಕೆ ತುತ್ತಾಗಿ ಟಿಕೆಟ್ ಸಿಗದಂತೆ ಮಾಡಿಕೊಂಡವರೇ ಇಂಥ ಹಾಲಿಗಳಲ್ಲಿ ಹೆಚ್ಚು.
ಮುಖ್ಯವಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ, ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್, ಉತ್ತರ ಕನ್ನಡದಲ್ಲಿ ಕೊಳಕು ಮಾತುಗಳ ಅನಂತ್ ಕುಮಾರ್ ಹೆಗಡೆ, ಉಡುಪಿ ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಈಗಾಗಲೇ ಪಕ್ಷದೊಳಗೆ ವಿರೋಧ ಇತ್ತು. ಆದರೆ ಶೋಭಾ ಕರಂದ್ಲಾಜೆಗೆ ಪಕ್ಷದೊಳಗೆ ಕಾರ್ಯಕರ್ತರ ಏನೇ ವಿರೋಧವಿದ್ದರೂ ಯಡಿಯೂರಪ್ಪ ಬೆಂಬಲವಿದ್ದು, ಅವರಿಗೆ ಟಿಕೆಟ್ ಕೈತಪ್ಪುವುದಿಲ್ಲ ಎನ್ನಲಾಗಿದೆ.
ಇನ್ನು ಪ್ರತಾಪ್ ಸಿಂಹ ಅವರನ್ನು ಪಕ್ಷ ಕೈಬಿಟ್ಟಿರುವುದು ಹೆಚ್ಚುಕಡಿಮೆ ಖಚಿತವಾಗಿದೆ. ಮೈಸೂರಿನಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರನ್ನು ಬಿಜೆಪಿ ಕಣಕ್ಕಿಳಿಸುವುದು ಪಕ್ಕಾ ಎನ್ನಲಾಗುತ್ತಿದೆ. ಈಗಾಗಲೇ ಅದರ ಬಗ್ಗೆ ಹತಾಶೆಯಿಂದ ಮಾತನಾಡಿರುವ ಪ್ರತಾಪ್ ಸಿಂಹ್, ಯಥಾಪ್ರಕಾರ ಬಾಲಿಶ ಟೀಕೆಗಳನ್ನು ಮಾಡಿ, ಪೇಚಿಗೆ ಸಿಲುಕಿದ್ದಾರೆ. ಯದುವೀರ್ ಅವರಿಗೆ ಟಿಕೆಟ್ ಸಿಕ್ಕಿದ್ರೆ ಕಾರ್ಯಕರ್ತರ ಜೊತೆ ನಾನೂ ಕೆಲಸ ಮಾಡುತ್ತೇನೆ ಎಂದು ಹೇಳುತ್ತಲೇ ಯದುವೀರ್ ಅವರ ಬಗ್ಗೆ ವ್ಯಂಗ್ಯವಾಗಿಯೂ ಮಾತಾಡಿದ್ದಾರೆ. ಎಸಿ ಯಿಂದ ಹೊರಬಂದು ಜನರೊಂದಿಗೆ ಪ್ರಜೆಯಾಗಿ ಬೆರೆಯುವುದಿದ್ದರೆ ಸ್ವಾಗತ... ಅರಮನೆ ಜೊತೆ ಜನರಿಗಿರುವ ಕೆಲವು ವಿವಾದಗಳನ್ನೂ ಅವರು ಸಂಸದರಾದ ಮೇಲೆ ಬಗೆಹರಿಸಬೇಕಾಗುತ್ತದೆ ಎಂದೆಲ್ಲ ಯದುವೀರ್ ಗೆ ಪರೋಕ್ಷವಾಗಿ ಬೆದರಿಕೆಯನ್ನೂ ಹಾಕಿದ್ದಾರೆ ಪ್ರತಾಪ್ ಸಿಂಹ.
ಪ್ರತಾಪ್ ಸಿಂಹ ಅವರ ಈ ಮಾತುಗಳಿಗೆ ಮೈಸೂರಿನ ಬಿಜೆಪಿ ಮುಖಂಡರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆಲ್ಲ ರಾಜವಂಶಸ್ಥರ ಬಗ್ಗೆ ಹಗುರವಾಗಿ ಮಾತಾಡಬಾರದು ಎಂದು ತಿರುಗೇಟು ನೀಡಿದ್ದಾರೆ. ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡಗಳಿಗೆ ಮಾತ್ರವೇ ಟಿಕೆಟ್ ಕಳೆದುಕೊಳ್ಳಲಿರುವ ಹಾಲಿಗಳ ಪಟ್ಟಿ ನಿಲ್ಲುವುದಿಲ್ಲ. ಸುಮಾರು 8 ಕ್ಷೇತ್ರಗಳಲ್ಲಿ ಅಭ್ಯರ್ಥಿ ಅವರಾಗಬೇಕೊ ಇವರಾಗಬೇಕೊ ಎಂಬಂಥ ಕಗ್ಗಂಟು ಸ್ಥಿತಿ ತಲೆದೋರಿದ್ದು, ನಿರ್ಧರಿಸುವುದೇ ಆಗದ ಇಕ್ಕಟ್ಟು ಎದುರಾಗಿದೆ. ಬಿಜೆಪಿ ವರಿಷ್ಠರ ಕಸರತ್ತು ನಡೆದೇ ಇದೆ ಎಂಬ ವರದಿಗಳಿವೆ.
ಈ ನಡುವೆ, ಬಿಜೆಪಿ ಟಿಕೆಟ್ ವಿಚಾರದಲ್ಲಿ ಹಲವಾರು ಅಚ್ಚರಿಗಳು ಇರುತ್ತವೆ. ಕೆಲವು ಕಡೆ ಹೊಸ ಮುಖಗಳು ಬರಲಿವೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಸೋಮವಾರವಷ್ಟೇ ಮೋದಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದ್ದು, ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿರುವ ಬೆನ್ನಲ್ಲೇ ಅಶೋಕ್ ಹೀಗೆ ಹೇಳಿರುವುದು ಪಕ್ಷದೊಳಗಿನ ಬೇಗುದಿ, ತಳಮಳವನ್ನು ಇನ್ನಷ್ಟು ಜಾಸ್ತಿಯಾಗಿಸಿದೆ.
ದೆಹಲಿ ಸಭೆಯಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಜೊತೆ ಭಾಗವಹಿಸಿದ್ದ ಬಳಿಕ ಹೇಳಿಕೆ ನೀಡಿರುವ ಅಶೋಕ್, ಎಲ್ಲ 28 ಕ್ಷೇತ್ರಗಳ ಬಗ್ಗೆಯೂ ಚರ್ಚೆಯಾಗಿದ್ದು, ಯಾವ ಹಂತದಲ್ಲಿ ಎಷ್ಟು ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಾರೆ ಎಂಬುದರ ಬಗ್ಗೆ ಗೊತ್ತಿಲ್ಲ ಎಂದಿದ್ಧಾರೆ. ಕೆಲವು ಸಂಸದರು ನಿವೃತ್ತಿ ಘೋಷಿಸಿದ್ದಾರೆ. ಸಹಜವಾಗಿ ಅಲ್ಲಿ ಬದಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಕೆಲವು ಕಡೆ ಹೊಸ ಮುಖಗಳು ಬರಲಿವೆ. ಸ್ವಲ್ಪ ಬದಲಾವಣೆ ಆಗಬಹುದು. ಬದಲಾವಣೆಯಂತೂ ಆಗುತ್ತದೆ. ಹೊಸಬರಿಗೆ ಅವಕಾಶ ನೀಡುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಅಶೋಕ್ ಹೇಳಿದ್ದಾರೆ.
ಆದರೆ ಇಷ್ಟೆಲ್ಲ ಹೇಳಿರುವ ಅಶೋಕ್, ಮೈಸೂರಿನಿಂದ ಯದುವೀರ್ ಸ್ಪರ್ಧೆ ಬಗ್ಗೆ ಗೊತ್ತಿಲ್ಲ ಎಂದಿರುವುದು ಬಹಿರಂಗಪಡಿಸಲಾರದ ಗುಟ್ಟು ಎಂಬ ಕಾರಣಕ್ಕೂ ಇದ್ದಿರಬಹುದು. ಅನೇಕ ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಯಂತೂ ಸ್ಪಷ್ಟವಾಗಿದೆ. ಆದರೆ, ಹಾಲಿ ಸಂಸದರೆಲ್ಲರೂ ಟಿಕೆಟ್ ಸಿಗುತ್ತದೆ ಎಂದು ಭರವಸೆ ಇಟ್ಟುಕೊಳ್ಳಬೇಕು. ಕೊನೇ ಕ್ಷಣದವರೆಗೂ ಏನು ಬೇಕಾದರೂ ಆಗಬಹುದು ಎಂದೂ ಅಶೋಕ್ ಒಂದು ಜಾಣತನದ ಮಾತನ್ನಾಡಿದ್ದಾರೆ.
ಮೈಸೂರಿನಲ್ಲಿ ಪ್ರತಾಪ್ ಸಿಂಹ, ದಕ್ಷಿಣ ಕನ್ನಡದಲ್ಲಿ ಕಟೀಲ್, ಉತ್ತರ ಕನ್ನಡದಲ್ಲಿ ಹೆಗಡೆಗೆ ಟಿಕೆಟ್ ಕೈತಪ್ಪುವುದು ಹೆಚ್ಚು ಕಡಿಮೆ ನಿಶ್ಚಿತ.
ದಕ್ಷಿಣ ಕನ್ನಡದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೆಸರು ಕೇಳಿಬರುತ್ತಿದೆ. ಇನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆಗೆ ವಿರೋಧ ವ್ಯಕ್ತಪಡಿಸಿದ ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದ ಸಿಟಿ ರವಿ ಸ್ವತಃ ಆ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿ ಎಂಬುದನ್ನು ಗಮನಿಸಬೇಕು.
ಅವರೂ ಬೆಂಗಳೂರು ಉತ್ತರ ಅಥವಾ ಉಡುಪಿ ಚಿಕ್ಕಮಗಳೂರಿನಿಂದ ಟಿಕೆಟ್ ಬೇಕೇ ಬೇಕು ಎಂಬಂತಹ ಹಠದಲ್ಲಿದ್ದಾರೆ. ಆದರೆ ಉಡುಪಿಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ಕೊಟ್ಟು ಶೋಭಾ ಅವರನ್ನು ಬೆಂಗಳೂರು ಉತ್ತರಕ್ಕೆ ಕಳಿಸುವ ಪ್ಲಾನ್ ಪಕ್ಷದಲ್ಲಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಸಿಟಿ ರವಿ ಸಿಟ್ಟಾಗಿದ್ದಾರೆ. ಈಗಾಗಲೇ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನೂ ಅವರು ಹೊರ ಹಾಕಿದ್ದಾರೆ. ಆದರೆ ಹೊರಗೆ ಮಾತ್ರ ಕಾರ್ಯಕರ್ತರನ್ನು ಸಮಾಧಾನಪಡಿಸುವ ನಟನೆ ಮಾಡುತ್ತಿದ್ದಾರೆ ಎಂಬ ವರದಿಗಳಿವೆ. ಅವರನ್ನು ವರಿಷ್ಠರು ದಿಲ್ಲಿಗೆ ಕರೆದಿದ್ದಾರೆ.
'ಚುನಾವಣಾ ರಾಜಕಾರಣದಿಂದ ದೂರ ಸರಿದಿದ್ದ ನನ್ನನ್ನು ಮತ್ತೆ ಸ್ಪರ್ಧಿಸುವಂತೆ ಮುಂದೆ ಕರೆತಂದು ಈಗ ಟಿಕೆಟ್ ಇಲ್ಲ ಎಂದರೆ ನನಗೆ ಅವಮಾನವಾಗುತ್ತದೆ. ನನ್ನ ವೈಯಕ್ತಿಕ ವರ್ಚಸ್ಸಿಗೂ ಧಕ್ಕೆಯಾಗುತ್ತದೆ' ಎಂದು ಸಂಸದ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಹಿಂದೆ ನಾನು ಚುನಾವಣಾ ರಾಜಕಾರಣದಿಂದ ದೂರು ಉಳಿಯಲು ನಿರ್ಧರಿಸಿದ್ದೆ. ಆದರೆ, ಮಾಜಿ ಸಿಎಂ, ಮಾಜಿ ಡಿಸಿಎಂ, ಹಾಗೂ ಮಾಜಿ ಸಚಿವರು ನನ್ನ ಮನೆಗೆ ಬಂದು ನೀವು ಚುನಾವಣಾ ರಾಜಕಾರಣದಿಂದ ದೂರ ಸರಿದರೆ ಪಕ್ಷಕ್ಕೆ ಹಾನಿಯಾಗುತ್ತದೆ ಎಂದರು. ಪಕ್ಷದ ಹಿತದೃಷ್ಟಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಮ್ಮತಿಸಿದ್ದೆ. ಈಗ ಟಿಕೆಟ್ ವಿಚಾರದಲ್ಲಿ ಗೊಂದಲ ಶುರುವಾಗಿರುವುದರಿಂದ ಮನಸ್ಸಿಗೆ
ನೋವಾಗಿದೆ ಎಂದಿದ್ದಾರೆ ಅವರು. ಇದೆಲ್ಲದರ ನಡುವೆ ಬಿಜೆಪಿಯೊಳಗಿನ ಬಣ ಕಿತ್ತಾಟವಂತೂ ಬಯಲಾಗಿದೆ. ಪಟ್ಟಿ ಬಿಡುಗಡೆ ಬಳಿಕ ಅದು ಇನ್ನಷ್ಟು ಜೋರಾಗಲೂ ಬಹುದು. ಬಿಜೆಪಿಯೊಳಗಿನ ಇನ್ನೂ ಹಲವಾರು ತಮಾಷೆಗಳು ಹೊರಬರಲೂ ಬಹುದು.