ಮಾಜಿ ಪ್ರಧಾನಿ ನರಸಿಂಹರಾವ್ ಮೇಲೆ ಬಿಜೆಪಿಗೇಕೆ ಇಷ್ಟು ಪ್ರೀತಿ? । P. V. Narasimha Rao

Update: 2024-02-19 05:30 GMT
Editor : Ismail | Byline : ಆರ್. ಜೀವಿ

ನರಸಿಂಹರಾವ್ |  Photo: livemint.com 

ಬಾಬರಿ ಮಸೀದಿ ಧ್ವಂಸ ಕಾನೂನಿನ ಉಲ್ಲಂಘನೆ ಎಂದು ಈ ದೇಶದ ಸುಪ್ರೀಮ್ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆ ಘಟನೆ ಹೇಗೆ ಇಡೀ ದೇಶದ ಸಾಮಾಜಿಕ ಸಂರಚನೆಯನ್ನು ಶಾಶ್ವತವಾಗಿ ಬದಲಾಯಿಸಿ ಬಿಟ್ಟಿತು ಎಂಬುದೂ ಈಗ ದೇಶದ ಮುಂದಿದೆ. ಡಿಸೆಂಬರ್ 6, 1992 ರ ಆ ಘಟನೆ ಹೇಗೆ ಹಿಂದುತ್ವ ರಾಜಕೀಯಕ್ಕೆ ಹೊಸ ವೇಗ ಕೊಟ್ಟಿತು ಹಾಗು ಇವತ್ತು ಅದನ್ನು ಎಲ್ಲಿಗೆ ತಂದು ತಲುಪಿಸಿದೆ ಎಂಬುದೂ ಎಲ್ಲರ ಎದುರಿಗೇ ಇದೆ.

ಆ ಘಟನೆ ನಡೆಯುವುದನ್ನು ತಪ್ಪಿಸುವಲ್ಲಿ ಸಂಪೂರ್ಣ ವಿಫಲರಾದ ಹಾಗೂ ಅದಕ್ಕೆ ಪರೋಕ್ಷವಾಗಿ ದಾರಿ ಮಾಡಿ ಕೊಟ್ಟವರನ್ನು ಈಗ ಸ್ಮರಿಸಿ ಗೌರವಿಸಲಾಗಿದೆ. ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರಿಗೆ ಭಾರತ ರತ್ನ ಘೋಷಿಸುವುದರೊಂದಿಗೆ ಮೋದಿ ಸರ್ಕಾರ ಮತ್ತೊಂದು ಬಗೆಯಲ್ಲಿ ಕಾಂಗ್ರೆಸ್ ಅನ್ನು ಹಣಿಯಲು ನೋಡಿದೆ.

ಪ್ರಧಾನಿಯಾದ ಬಳಿಕ ಭಾರತದ ಆರ್ಥಿಕತೆಗೆ ಅಭೂತಪೂರ್ವ ಬದಲಾವಣೆ ತಂದಿದ್ದ, ದೇಶದ ಆರ್ಥಿಕ ಭವಿಷ್ಯವನ್ನೇ ಬದಲಿಸಿದ್ದ ತನ್ನದೇ ನಾಯಕನನ್ನು ಕಾಂಗ್ರೆಸ್ ಕಡೆಗಣಿಸಿತ್ತು ಎಂಬುದೇ ಮತ್ತೊಮ್ಮೆ ಚರ್ಚೆಯಾಗುವುದಕ್ಕೆ ಈಗ ಬಿಜೆಪಿ ಆಸ್ಪದ ಮಾಡಿಕೊಟ್ಟಿದೆ. ಒಂದೆಡೆ, ರಾಮರಥಯಾತ್ರೆಯ ಕೇಂದ್ರಬಿಂದುವಾಗಿದ್ದ ಎಲ್ಕೆ ಅಡ್ವಾಣಿಗೆ ಭಾರತ ರತ್ನ ಘೋಷಿಸಿದರೆ, ಬಾಬ್ರಿ ಮಸೀದಿ ಧ್ವಂಸಕ್ಕೆ ಆಸ್ಪದ ಮಾಡಿಕೊಟ್ಟ ಕಳಂಕ ಹೊತ್ತು ಕಾಂಗ್ರೆಸ್ನಲ್ಲಿ ಕಡೆಗಣನೆಗೆ ತುತ್ತಾಗಿದ್ದ ಪಿವಿ ನರಸಿಂಹರಾವ್ ಅವರಿಗೂ ಭಾರತ ರತ್ನ ಘೋಷಿಸಲಾಗಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಈ ಘೋಷಣೆಗಳನ್ನು ಮಾಡಲಾಗಿದೆ. ಈ ಮೂಲಕ ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳುವ ರಾಜಕಾರಣವನ್ನು ಮಾಡಿದೆ. ಚುನಾವಣೆ ಹತ್ತಿರದಲ್ಲಿರುವಾಗ ಇದೆಲ್ಲವೂ ಬಿಜೆಪಿಯ ಮತ್ತೊಂದು ರಾಜಕೀಯ ತಂತ್ರವೇ ಆಗಿದೆ.      

ಈ ಇಡೀ ವಿದ್ಯಮಾನದ ಹಿನ್ನೆಲೆಯಾಗಿ ನಾವೀಗ ಗಮನಿಸಬೇಕಿರುವುದು, ಹೇಗೆ ಪಿವಿ ನರಸಿಂಹರಾವ್ ಅವರು ಕಾಂಗ್ರೆಸ್ಗಿಂತ ಬಿಜೆಪಿಗೆ ಬಹಳ ಇಷ್ಟವಾಗುತ್ತಿದ್ದರು ಎಂಬುದನ್ನು. ರಾವ್ ಹೇಗೆ ಬಾಬರಿ ಮಸೀದಿ ಧ್ವಂಸಕ್ಕೆ ಕಾರಣರಾದರು, ಹೇಗೆ ಅವರು ಸ್ವತಃ ಮೃದು ಹಿಂದುತ್ವ ವಾದಿಯೇ ಆಗಿದ್ದರು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರಿಗೆ ಭಾರತ ರತ್ನ ಕೊಡುವಲ್ಲಿನ ಮೋದಿ ಸರ್ಕಾರದ ಲೆಕ್ಕಾಚಾರಗಳು ತಿಳಿದುಬಿಡುತ್ತವೆ.

ರಾಮಮಂದಿರ ಉದ್ಘಾಟನೆ ಬೆನ್ನಿಗೇ ಅವರನ್ನು ಸ್ಮರಿಸಿ ಸನ್ಮಾನಿಸಲಾಗುತ್ತಿರುವ ಈ ಇಡೀ ವಿದ್ಯಮಾನ ಒಂದು ಯೋಜಿತ ತಂತ್ರದ ಹಾಗೆ, ಸ್ಕ್ರಿಪ್ಟೆಡ್ ಅನ್ನುವ ಹಾಗೆಯೇ ಇದೆಯಲ್ಲವೆ ಎಂಬುದೂ ಕಾಣಿಸತೊಡಗುತ್ತದೆ. ರಾವ್ ಅವರನ್ನು ಬಿಜೆಪಿಯ ಮೊದಲ ಪ್ರಧಾನಿ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಮತ್ತೆ ಮತ್ತೆ ಟೀಕಿಸಿದ್ದರು.

ರಾಮಮಂದಿರ ವಿಚಾರದಲ್ಲಿನ ಬಿಜೆಪಿಯ ಹುನ್ನಾರವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದ ರಾವ್, ಕೋಮುವಾದಿಗಳೆಡೆಗೆ ಮೃದುತ್ವದ ಧೋರಣೆ ಹೊಂದಿದ್ದರು. ಕಡೆಗೆ ಅದೇ ಬಾಬರಿ ಮಸೀದಿ ಧ್ವಂಸಕ್ಕೂ ಎಡೆ ಮಾಡಿಕೊಟ್ಟಿತ್ತು. ರಾವ್ ಈ ದೇಶವನ್ನು ಸ್ವತಃ ಹಿಂದೂ ರಾಷ್ಟ್ರ ಎಂದೇ ಅಂದುಕೊಂಡಿದ್ದರು ಮತ್ತು ಮುಸ್ಲಿಮರ ಬಗೆಗಿನ ಅವರ ಧೋರಣೆ ಅಸಡ್ಡೆಯದಾಗಿತ್ತು ಎಂಬುದನ್ನೂ ಮಣಿಶಂಕರ್ ಅಯ್ಯರ್ ಅಂಥ ನಾಯಕರು ಪ್ರತಿಪಾದಿಸಿದ್ಧಾರೆ.

ಬಾಬರಿ ಮಸೀದಿ ಧ್ವಂಸವನ್ನು ತಡೆಗಟ್ಟಲಾಗದ ಅಸಮರ್ಥತೆಯ ಕಾರಣಕ್ಕೆ ರಾವ್ ಕಾಂಗ್ರೆಸ್ನಿಂದಲೇ ತೀವ್ರ ಟೀಕೆಗೆ ಗುರಿಯಾಗಿದ್ದವರು. ರಾವ್ ಕಾಲದಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣದಿಂದಾಗಿಯೇ ಮುನ್ನೆಲೆಗೆ ಬಂದ ಹಿಂದುತ್ವ ಕೋಮುವಾದಿ ರಾಜಕಾರಣ ಇಂದು ತನ್ನ ಉತ್ತುಂಗವನ್ನು ತಲುಪಿದೆ.

ಪಿ.ವಿ. ನರಸಿಂಹರಾವ್ ವೈಯಕ್ತಿಕವಾಗಿ ಹಿಂದುತ್ವ ರಾಜಕಾರಣದತ್ತ ಮೃದು ಭಾವನೆ ತಳೆದಿದ್ದರು ಎನ್ನಲು ಮಣಿಶಂಕರ್ ಅಯ್ಯರ್ ಹಲವು ನಿದರ್ಶನಗಳನ್ನು ಇಟ್ಟಿದ್ಧಾರೆ. ಸಂಘ ಪರಿವಾರ ಅಡ್ವಾಣಿ ನೇತೃತ್ವದಲ್ಲಿ ಕೋಮು ಧ್ರುವೀಕರಣದ ರಥಯಾತ್ರೆಯನ್ನು ಹಮ್ಮಿಕೊಂಡಿದ್ದಾಗ, ಅದಕ್ಕೆ ಪ್ರತಿಯಾಗಿ ಮಣಿಶಂಕರ್ ಅಯ್ಯರ್, ಕೋಮು ಸಾಮರಸ್ಯವನ್ನು ಮುನ್ನೆಲೆಗೆ ತರುವ ‘ರಾಮ್-ರಹೀಮ್ ಯಾತ್ರೆಯನ್ನು ಆಯೋಜಿಸಿದ್ದರು.

ಆದರೆ ಅವರ ಯಾತ್ರೆ ಉತ್ತರ ಪ್ರದೇಶವನ್ನು ಪ್ರವೇಶಿಸಿದಾಗ, ರಾವ್ ಅವರ ಸರಕಾರ, ಅಯ್ಯರ್ ಅವರನ್ನು ಬಂಧಿಸುತ್ತದೆ. ಅನಂತರ ಅಯ್ಯರ್ ಬಳಿ ಮಾತಾಡುವ ರಾವ್, ಎಷ್ಟೇ ಆಗಲಿ ಇದು ಹಿಂದೂ ರಾಷ್ಟ್ರವಲ್ಲವೇ? ಎಂದು ಪ್ರಶ್ನಿಸಿದ್ದನ್ನು ಅಯ್ಯರ್ ನೆನಪಿಸುತ್ತಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಹೇಳುವ ಮಾತುಗಳೇ ರಾವ್ ಬಾಯಲ್ಲೂ ಬಂದಿದ್ದು ಹೇಗೆ? ಈ ಪ್ರಶ್ನೆ ಮುಖ್ಯವಾಗುತ್ತದೆ.

ಇಡೀ ಬಾಬರಿ ಮಸೀದಿ ಪ್ರಕರಣದಲ್ಲಿ ನರಸಿಂಹರಾವ್ ನಡೆದುಕೊಂಡಿದ್ದ ರೀತಿಯನ್ನು ಗಮನಿಸಿದಾಗ ಅಯ್ಯರ್ ಆರೋಪ ಸುಳ್ಳೆನ್ನಿಸುವುದಿಲ್ಲ. ಸಾಧು ಸಂತರ ಜೊತೆ ಮಾತುಕತೆ ನಡೆಸುವ ಮೂಲಕ ಅಯೋಧ್ಯೆ ಭೂವಿವಾದವನ್ನು ಬಗೆಹರಿಸಬಹುದು ಎನ್ನುವುದು ರಾವ್  ಬಲವಾದ ನಂಬಿಕೆಯಾಗಿತ್ತು. ಆದರೆ, ಸಾಧು ಸಂತರು ಕೋಮುವಾದಿ ರಾಜಕೀಯ ಶಕ್ತಿಗಳಿಂದ ಪ್ರಭಾವಿತರಾಗಿರುವ ವಾಸ್ತವವನ್ನು ರಾವ್ ಮನಗಂಡಿರಲೇ ಇಲ್ಲ.

ಇಡೀ ರಾಮಮಂದಿರ ವಿವಾದ ಮೂಲತಃ ಒಂದು ರಾಜಕೀಯ ಹುನ್ನಾರ ಎನ್ನುವುದನ್ನು ಅವರು ಕಡೆಯವರೆಗೂ ಅರ್ಥ ಮಾಡಿಕೊಂಡಿರಲೇ ಇಲ್ಲ. ರಾವ್ ಮಾಡಿದ ಈ ಬಹುದೊಡ್ಡ ಪ್ರಮಾದ ಇಂದು ಸಂಘ ಪರಿವಾರದ ಹಿಂದುತ್ವ ರಾಜಕಾರಣವನ್ನು ಮುಂದೆ ತಂದು ನಿಲ್ಲಿಸಿಬಿಟ್ಟಿದೆ. ಮತ್ತು ದೇಶ ಅದರ ಪರಿಣಾಮವಾಗಿ ಕನಲಿಹೋಗುತ್ತಿದೆ.

ನರಸಿಂಹ ರಾವ್ ಆಗಿನ ಕಾಲದ ಬಹಳಷ್ಟು ಕಾಂಗ್ರೆಸ್ ನಾಯಕರಂತೆ ಧಾರ್ಮಿಕತೆ ಮತ್ತು ಕೋಮುವಾದಗಳ ನಡುವೆ ಸ್ಪಷ್ಟ ವ್ಯತ್ಯಾಸವನ್ನು ಗುರುತಿಸಲಾರದಷ್ಟು ಗೊಂದಲದಲ್ಲಿದ್ದರು. ಮುಸ್ಲಿಮರ ಕುರಿತಾಗಿ ನರಸಿಂಹರಾವ್ ಗ್ರಹಿಕೆ ಎಂಥದಿತ್ತು ಎಂಬುದು ಕೂಡ ಅವರ ಒಂದು ಹೇಳಿಕೆಯಿಂದ ಬಯಲಾಗಿತ್ತು.

ಮುಸ್ಲಿಮರು ಈ ದೇಶಕ್ಕೆ ಹೊರಗಿನವರು ಎಂದು ದೇಶದಲ್ಲಿ ಹಬ್ಬಿಸಲಾಗಿರುವ ಭಾವನೆಯಿಂದ ರಾವ್ ಕೂಡ ಹೊರತಾಗಿರಲಿಲ್ಲ. ಹಾಗಾಗಿಯೇ ಕೋಮುವಾದಿಗಳೆಡೆಗೆ ಅವರು ಮೃದುತ್ವ ಧೋರಣೆ ಹೊಂದಿದ್ದರು. ಮತ್ತು ಅವರ ಈ ಮೃದುತ್ವವೇ ಬಾಬರಿ ಮಸೀದಿ ಧ್ವಂಸಕ್ಕೆ ಎಡೆ ಮಾಡಿಕೊಟ್ಟಿತ್ತು.

ಲಕ್ಷಾಂತರ ಕರಸೇವಕರು ದೇಶಾದ್ಯಂತ ಜಮೆಯಾಗಿ ಅಯೋಧ್ಯೆಯತ್ತ ಹೊರಟ ವರ್ತಮಾನವನ್ನು ಅಧ್ಯಯನ ಮಾಡಿದ ಕೇಂದ್ರ ಗೃಹ ಸಚಿವಾಲಯ, ಸಂವಿಧಾನದ 356ನೇ ವಿಧಿಯನ್ನು ಬಳಸಿಕೊಂಡು ಉತ್ತರ ಪ್ರದೇಶದ ಬಿಜೆಪಿ ಸರಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸು ಮಾಡಿತ್ತು.

ಆದರೆ ಆ ವರದಿಯನ್ನೇ ತಿರಸ್ಕರಿಸಿದ್ದ ರಾವ್, ಅನಂತರದ ಎಲ್ಲ ಅವಾಂತರಗಳಿಗೆ, ಪ್ರಮಾದಗಳಿಗೆ ಕಾರಣರಾಗಿಬಿಟ್ಟಿದ್ದರು. ಅವರ ಅವತ್ತಿನ ನಡೆ, ಕರಸೇವಕರಿಗೆ ಅವರೇ ದಾರಿ ತೆರೆದುಕೊಟ್ಟು ಕೂತ ಹಾಗಿತ್ತು ಎಂಬುದನ್ನು ವಿಶ್ಲೇಷಕರು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನೂ ಒಂದು ವಿಚಾರವನ್ನು ಇಲ್ಲಿ ಗಮನಿಸಬೇಕು. ಬಾಬರಿ ಮಸೀದಿ ಧ್ವಂಸ ಪ್ರಕರಣದ ಬೆನ್ನಿಗೇ ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಾಗ, ರಾವ್ ನೇತೃತ್ವದ ಕೇಂದ್ರ ಸರಕಾರ 1992ರಲ್ಲಿ ಆರೆಸ್ಸೆಸ್, ವಿಎಚ್ಪಿ, ಬಜರಂಗ ದಳ ಸಂಘಟನೆಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು.

ಆದರೆ ಆ ಬ್ಯಾನ್ ಕುರಿತು ವಿಚಾರಣೆ ನಡೆಸಿದ ಕೇಂದ್ರ ಟ್ರಿಬ್ಯೂನಲ್ ಮುಂದೆ ರಾವ್ ಸರಕಾರ, ಯಾವ ಕಾರಣಕ್ಕೆ ಬ್ಯಾನ್ ಮಾಡಿದ್ದೇವೆ ಹಾಗೂ ಬ್ಯಾನ್ ಮಾಡದೆ ಹೋದರೆ ಸಮಾಜದಲ್ಲಿ ಏನೆಲ್ಲ ಅನಾಹುತಗಳಾಗಬಹುದು ಎಂಬುದನ್ನು ದಾಖಲೆಸಹಿತ ವಿವರಿಸುವಲ್ಲಿ ವಿಫಲವಾಯಿತು. ಹಾಗಾಗಿ ಮೂರನೇ ಸಲ ನಿಷೇಧಕ್ಕೆ ತುತ್ತಾಗಿದ್ದ ಆರೆಸ್ಸೆಸ್ ಮೇಲಿನ ನಿರ್ಬಂಧವನ್ನು ಕೇವಲ ಆರು ತಿಂಗಳಲ್ಲಿ ಸ್ವತಃ ರಾವ್ ಸರಕಾರ ಹಿಂಪಡೆಯಬೇಕಾಯಿತು.

ರಾವ್ ಹಿಂದುತ್ವ ಸಂಘಟನೆಗಳ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರಿಂದಾಗಿಯೇ, ಅವರ ಸರಕಾರ ಟ್ರಿಬ್ಯೂನಲ್ ಮುಂದೆ ಸಮರ್ಪಕ ವಾದ ಮಂಡಿಸಲಿಲ್ಲ ಎನ್ನಲಾಗುತ್ತದೆ.

ರಾವ್ ಅವರು ಅಯೋಧ್ಯೆ ಭೂವಿವಾದದ ಹಿಂದಿನ ರಾಜಕೀಯ ಹುನ್ನಾರವನ್ನು ಗ್ರಹಿಸಿ, ಹಿಂದುತ್ವದ ಮುಲಾಜುಗಳಿಗೆ ಬಲಿಯಾಗದೆ ದೃಢ ರಾಜಕೀಯ ನಿರ್ಧಾರವನ್ನು ತೆಗೆದುಕೊಂಡಿದ್ದಿದ್ದರೆ ಬಾಬರಿ ಮಸೀದಿ ಧ್ವಂಸವನ್ನು ತಡೆಯಬಹುದಿತ್ತು. ಮಾತ್ರವಲ್ಲ, ಭಾರತೀಯ ರಾಜಕಾರಣದಲ್ಲಿ ಕೋಮುವಾದಿಗಳ ವಿಜೃಂಭಿಸುವಿಕೆಯನ್ನು ಇನ್ನಷ್ಟು ಕಾಲ ದೂರವಿಡುವುದು ಕೂಡ ಸಾಧ್ಯವಾಗುತ್ತಿತ್ತು.

ರಾವ್ ಕೈಯಿಂದ ಅದಾವುದೂ ಆಗಲಿಲ್ಲ ಮತ್ತು ಅವರು ತಮ್ಮ ಪ್ರತಿ ಹೆಜ್ಜೆಯಲ್ಲೂ ಸಂಘ ಪರಿವಾರಕ್ಕೆ ಅನುಕೂಲವಾಗುವ ಹಾಗೆಯೇ ನಡೆದುಕೊಂಡುಬಿಟ್ಟರು ಎಂಬ ಅನುಮಾನಗಳು ಏಳುವುದು ಇದೇ ಕಾರಣದಿಂದ. ಹಾಗಾಗಿಯೇ ರಾವ್ ಎಂದರೆ ಬಿಜೆಪಿಗೆ ಬಹಳ ಇಷ್ಟ. ರಾವ್ ಅವರನ್ನು ಮೋದಿ ಆಗಾಗ ಹೊಗಳುವುದರ ಹಿಂದೆ ಇವೆಲ್ಲ ಸತ್ಯಗಳಿವೆ.

ಮತ್ತು ಈಗ ಅವರಿಗೆ ಭಾರತ ರತ್ನ ಘೋಷಿಸುವ ಮೂಲಕ, ಕಾಂಗ್ರೆಸ್ ಅನ್ನು ಇನ್ನೂ ಸಂಕಟಕ್ಕೆ ಸಿಕ್ಕಿಸುವ ಆಟವನ್ನೂ ಬಿಜೆಪಿ ಆಡಿದೆ. ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿದ್ದ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ಬಿ ಆರ್ ಅಂಬೇಡ್ಕರ್ ಅವರನ್ನು ಭಾರತ ರತ್ನಕ್ಕೆ ಅರ್ಹರೆಂದು ಪರಿಗಣಿಸಲಿಲ್ಲ ಎಂದಿದ್ದರು. ಅದೇನಿದ್ದರೂ ಸ್ವಂತ ಕುಟುಂಬದವರನ್ನು ಮಾತ್ರವೇ ಗೌರವಿಸುತ್ತದೆ ಎಂದು ಟೀಕಿಸಿದ್ದರು.

ಕಾರಣಗಳು ಏನೇ ಇದ್ದರೂ, ಕಾಂಗ್ರೆಸ್ನಲ್ಲಿ ಪಿವಿ ನರಸಿಂಹರಾವ್ ಕಡೆಗಣನೆಗೆ ಒಳಗಾದರು, ಅವರನ್ನು ಕಾಂಗ್ರೆಸ್ ತನ್ನ ರಾಷ್ಟ್ರೀಯ ನಾಯಕ ಎಂದು ಒಪ್ಪಿಕೊಳ್ಳುವುದಕ್ಕೇ ತಯಾರಿಲ್ಲದ ಮಟ್ಟದವರೆಗೆ ಅವರು ಮೂಲೆಗೆ ತಳ್ಳಲ್ಪಟ್ಟರು ಎಂಬುದು ನಿಜ.

ಸೋನಿಯಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬರುವುದಕ್ಕೂ ಮೊದಲೇ ರಾವ್ ವಿಚಾರದಲ್ಲಿ ಅವರು ಒಂದು ಬಗೆಯ ಕಹಿ ಭಾವನೆಯನ್ನೇ ಹೊಂದಿದ್ದರು. ರಾವ್ ಮರಣದ ನಂತರವೂ ಅವರ ಬಗೆಗೆ ಪಕ್ಷದೊಳಗೆ ಇದ್ದ ಕಡೆಗಣನೆ ಮುಂದುವರಿದಿತ್ತು ಎಂಬುದೂ ನಿಜ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್, ರಾವ್ ಅವರನ್ನು ಪಕ್ಷದ ಐಕಾನ್‌ಗಳ ಸಾಲಿಗೆ ಸೇರಿಸಲು ಪ್ರಯತ್ನ ನಡೆಸಿದ್ದೇನೋ ನಿಜ.

2020ರಲ್ಲಿ ಸೋನಿಯಾ ಅವರು ಪಿವಿಎನ್ ಅವರನ್ನು, ಅವರ ನಾಯಕತ್ವದ ಕೌಶಲ್ಯಗಳನ್ನು ಹೊಗಳಿದ್ದರು. ಅವರ ಕೊಡುಗೆಗಳ ಬಗ್ಗೆ ಪಕ್ಷ ಹೆಮ್ಮೆಪಡುತ್ತದೆ ಎಂದಿದ್ದರು. ಅವರಿಗೆ ಈಗ ಮೋದಿ ಸರ್ಕಾರ ಭಾರತ ರತ್ನ ಘೋಷಣೆ ಮಾಡಿರುವುದನ್ನೂ ಸೋನಿಯಾ ಸ್ವಾಗತಿಸಿದ್ದಾರೆ.

ನಾನದನ್ನು ಸ್ವಾಗತಿಸುತ್ತೇನೆ. ಯಾಕಾಗಬಾರದು ಎಂದು ಸೋನಿಯಾ ಪ್ರತಿಕ್ರಿಯಿಸಿದ್ದಾರೆ. ಬಹುಶಃ ಕಾಂಗ್ರೆಸ್ ಅಧಿಕಾರದಲ್ಲಿರುವ ಕಾಲದಲ್ಲಿ ಸಿಗದ ಗೌರವ ಈಗ ಮೋದಿ ಸರ್ಕಾರದಿಂದಾಗಿ ಕಾಂಗ್ರೆಸ್ ನಾಯಕರೊಬ್ಬರಿಗೆ ಮರಣೋತ್ತರವಾಗಿ ಸಿಕ್ಕಿರುವುದು ಆ ಪಕ್ಷದಲ್ಲಿ ತಳಮಳ ಹುಟ್ಟಿಸಬೇಕೆಂಬುದೇ ಬಿಜೆಪಿಯ ಉದ್ದೇಶವೂ ಆಗಿರುತ್ತದೆ.

ಯಾವ ಕಹಿ ಚರಿತ್ರೆಯನ್ನು ನೆನಪು ಮಾಡಿಕೊಳ್ಳುವುದು ಕಾಂಗ್ರೆಸ್ಗೆ ಬೇಕಾಗಿಯೇ ಇಲ್ಲವೊ ಅದನ್ನೇ ಮೋದಿ ಸರ್ಕಾರ ಈ ಮೂಲಕ ಅಗೆದು ಅಗೆದು ಹೊರಗಿಟ್ಟು ಕಾಂಗ್ರೆಸ್ ಅನ್ನು ಮುಜುಗರಕ್ಕೆ ಸಿಲುಕಿಸಿ ಆಟ ನೋಡುತ್ತಿದೆ. ರಾವ್ ಜೊತೆಗಿನ ಸೋನಿಯಾ ಸಂಬಂಧ ಕೆಟ್ಟಿದ್ದರ ಹಿಂದೆ, ವೈಯಕ್ತಿಕ, ರಾಜಕೀಯ, ಸೈದ್ಧಾಂತಿಕ ಕಾರಣಗಳೆಲ್ಲವೂ ಇದ್ದವು. ಅಥವಾ ಬಹುಶಃ ಅವೆಲ್ಲವೂ ಬೆರೆತಂತಿದ್ದ ಕಾರಣಗಳಿದ್ದವು.

ನೆಹರೂ-ಗಾಂಧಿ ಕುಟುಂಬಕ್ಕೆ ಹೊರಗಿನವರಾಗಿಯೂ ಪೂರ್ಣಾವಧಿ ಅಧಿಕಾರ ನಡೆಸಿದ ಮೊದಲ ಪ್ರಧಾನಿಯಾಗಿದ್ದರು ರಾವ್. ಅಂಥವರು 2004ರ ಡಿಸೆಂಬರ್ನಲ್ಲಿ ನಿಧನರಾದಾಗ ಅವರ ಪಾರ್ಥಿವ ಶರೀರವನ್ನು ಎಐಸಿಸಿ ಪ್ರಧಾನ ಕಚೇರಿಗೆ ತರುವುದಕ್ಕೂ ಅವಕಾಶ ಕೊಡದ ಮಟ್ಟಿಗೆ ಕಾಂಗ್ರೆಸ್ ಅವರನ್ನು ದೂರ ಮಾಡಿತ್ತು.

1996ರ ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಹೊಣೆಯನ್ನು ಕಾಂಗ್ರೆಸ್ ರಾವ್ ಅವರ ಮೇಲೆ ಹೊರಿಸಿತ್ತು. ಅದಾದ ಬಳಿಕ ಅವರನ್ನು ದೂರ ತಳ್ಳಲಾಯಿತು. ರಾಜೀವ್ ಹತ್ಯೆ ನಂತರ ಪ್ರಧಾನಿ ಹುದ್ದೆ ವಹಿಸಿಕೊಳ್ಳುವ ಮೊದಲು ಸೋನಿಯಾ ಅವರನ್ನು ಭೇಟಿಯಾಗಿದ್ದ ರಾವ್ ಸಾಷ್ಟಾಂಗ ನಮಸ್ಕಾರ ಮಾಡಿದ್ದರೆಂಬುದನ್ನು ಅದನ್ನು ಕಂಡವರು ಹೇಳಿದ್ದಿದೆ.

ಆದರೆ, ಅನಂತರ ಸಂಬಂಧ ಹದಗೆಡುತ್ತ ಬರತೊಡಗಿತ್ತು. ಬಾಬರಿ ಮಸೀದಿಯ ಧ್ವಂಸದ ಬಳಿಕ ಅರ್ಜುನ್ ಸಿಂಗ್ ಮತ್ತು ತಿವಾರಿಯಂತಹವರು ರಾವ್ ಅವರನ್ನು ಬಹಿರಂಗವಾಗಿಯೇ ಟೀಕಿಸಿದ್ದರು. ಅದಕ್ಕೆ ಆಗ ಸೋನಿಯಾ ಆಪ್ತರಾಗಿದ್ದವರ ಮೌನ ಬೆಂಬಲವೂ ಇತ್ತು. ಇನ್ನೊಂದೆಡೆ, ರಾಜೀವ್ ಹತ್ಯೆ ತನಿಖೆಯಲ್ಲಿ ಪಿವಿಎನ್ ಚುರುಕು ಗತಿ ತೋರಿಸುತ್ತಿಲ್ಲ ಎಂಬ ಅಸಮಾಧಾನ ಕೂಡ ಸೋನಿಯಾ ಅವರಿಗಿತ್ತು.

ಅದನ್ನು ಅವರು 1995ರಲ್ಲಿ ಬಹಿರಂಗವಾಗಿಯೇ ಆರೋಪಿಸಿದರು. ತನಿಖೆ ಮುಂದುವರಿಸುವುದು ರಾವ್ ಅವರಿಗೆ ಇಷ್ಟವಿದ್ದಂತಿಲ್ಲ  ಎಂಬ ಭಾವನೆ ಸೋನಿಯಾ ಅವರಲ್ಲಿ ಬಂದುಬಿಟ್ಟಿತ್ತು ಎಂದು ಹೇಳಲಾಗುತ್ತದೆ. 1996ರಲ್ಲಿ ಪಕ್ಷದ ಸೋಲಿನ ನಂತರ ರಾವ್ ಸ್ಥಾನದಲ್ಲಿ ಸೀತಾರಾಮ್ ಕೇಸರಿಯವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಲಾಯಿತು.

ಅನಂತರ 1998ರ ಲೋಕಸಭಾ ಚುನಾವಣೆಯಲ್ಲಿ ರಾವ್ ಅವರಿಗೆ ಟಿಕೆಟ್ ನಿರಾಕರಿಸಲಾಯಿತು. ಬಾಬರಿ ಮಸೀದಿಯನ್ನು ರಕ್ಷಿಸುವಲ್ಲಿ ವಿಫಲವಾದ ಕಾರಣವನ್ನು ಮುಂದೆ ಮಾಡಲಾಯಿತು. 1998ರಲ್ಲಿ ಸೋನಿಯಾ ಕಾಂಗ್ರೆಸ್ ಅಧ್ಯಕ್ಷರಾದರು. ರಾವ್ ಮೂಲೆಗುಂಪಾಗತೊಡಗಿದರು.

ರಾವ್ ಅವರ ಬಗೆಗಿನ ಕಹಿಯನ್ನು ಅವರ ಮರಣದವರೆಗೂ, ಅನಂತರವೂ ಪಕ್ಷ ಉಳಿಸಿಕೊಂಡೇ ಬಿಟ್ಟಿತ್ತು. ವಿನಯ್ ಸೀತಾಪತಿ ಅವರು ಹಾಫ್ ಲಯನ್: ಹೌ ಪಿ.ವಿ. ನರಸಿಂಹ ರಾವ್ ಟ್ರಾನ್ಸ್ಫಾರ್ಮ್ಡ್ ಇಂಡಿಯಾ ಎಂಬ ತಮ್ಮ ಪುಸ್ತಕದಲ್ಲಿ, ರಾವ್ ಅಂತ್ಯಸಂಸ್ಕಾರವನ್ನು ಅವರ ಕುಟುಂಬದವರು ದೆಹಲಿಯಲ್ಲಿಯೇ ಮಾಡಬೇಕೆಂದು ಬಯಸಿದ್ದರು ಎಂದು ಬರೆಯುತ್ತಾರೆ. ಅವರು ರಾವ್ ಪುತ್ರ ಪ್ರಭಾಕರ್ ಅವರ ಮಾತನ್ನು ಪುಸ್ತಕದಲ್ಲಿ ಉಲ್ಲೇಖಿಸುತ್ತಾರೆ. ಪ್ರಭಾಕರ್ ಹೇಳಿದ್ದ ಪ್ರಕಾರ, ಸೋನಿಯಾಜಿ ರಾವ್ ಅವರನ್ನು ಅಖಿಲ ಭಾರತ ನಾಯಕನನ್ನಾಗಿ ನೋಡಲು ಬಯಸಲಿಲ್ಲ.

ಈಗ, ರಾವ್ ಅವರಿಗೆ ಭಾರತ ರತ್ನ ಘೋಷಣೆಯಾದ ಬೆನ್ನಲ್ಲೇ ರಾವ್ ಮೊಮ್ಮಗ ಎನ್‌ವಿ ಸುಭಾಷ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ತನ್ನ ವೈಫಲ್ಯಗಳಿಗೆ ರಾವ್ ಅವರನ್ನು ಬಲಿಪಶುವಾಗಿಸಿತು ಎಂದು ಆರೋಪಿಸಿದ್ದಾರೆ. ಪಿ.ವಿ.ನರಸಿಂಹರಾವ್ ಅವರು ಕಾಂಗ್ರೆಸ್ ಪಕ್ಷದವರಾಗಿದ್ದರೂ ಪ್ರಧಾನಿ ಮೋದಿ ಅವರಿಗೆ ಭಾರತ ರತ್ನ ಘೋಷಿಸಿದ್ದಾರೆ. 2004 ರಿಂದ 2014 ರವರೆಗೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತ ರತ್ನ ಕೊಡುವುದು ಹಾಗಿರಲಿ, ಬದಲಾಗಿ ಪಕ್ಷದ ವೈಫಲ್ಯಗಳಿಗೆ ನರಸಿಂಹರಾವ್ ಅವರನ್ನು ಬಲಿಪಶುವಾಗಿಸುವಲ್ಲಿ ಗಾಂಧಿ ಕುಟುಂಬ ಬಹಳ ಪ್ರಮುಖ ಪಾತ್ರ ವಹಿಸಿತು ಎಂದು ಬಿಜೆಪಿ ನಾಯಕರೂ ಆಗಿರುವ ಸುಭಾಷ್ ಹೇಳಿದ್ದಾರೆ.

ಬಿಜೆಪಿ ಈ ಘೋಷಣೆ ಮೂಲಕ ಏನನ್ನು ಬಿಂಬಿಸಲು ಹೊರಟಿದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಮತ್ತು ಇತಿಹಾಸದ ಭಾಗವಾಗಿರುವ ಇದೆಲ್ಲ ಭಾರವನ್ನೂ ಕಾಂಗ್ರೆಸ್ ಹೊರಲೇಬೇಕಾಗಿದೆ. ಸೋನಿಯಾ ಅವರು ಪಿವಿಎನ್ಗೆ ಭಾರತ ರತ್ನ ಬಂದಿರುವುದನ್ನು ಸ್ವಾಗತಿಸುವಾಗಲೂ ಇತಿಹಾಸದ ಈ ಭಾಗ ಅವರನ್ನು ಅಣಕಿಸುತ್ತಲೇ ಇರುತ್ತದೆ. ಮತ್ತು ಅದನ್ನೇ ಬಿಜೆಪಿ ಬಯಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!