ಪ್ರಜ್ವಲ್ ರೇವಣ್ಣ ಬಂಧನ ಇನ್ನೂ ಯಾಕಿಲ್ಲ?

Update: 2024-05-14 05:30 GMT

ಪ್ರಜ್ವಲ್ ರೇವಣ್ಣ

ಮಾನ್ಯರೇ,

ಪ್ರಜ್ವಲ್ ರೇವಣ್ಣ ನಡೆಸಿದ್ದಾರೆನ್ನಲಾದ ನೂರಾರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಹೇಯ ಅತ್ಯಾಚಾರ ಪ್ರಕರಣವು ದಿನದಿಂದ ದಿನಕ್ಕೆ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ರಾಜಕೀಯ ಕೆಸರೆರಚಾಟವು ಮಹಿಳೆಯರು ಮಾತ್ರವಲ್ಲ, ಸಭ್ಯ ನಾಗರಿಕರು ಕೂಡ ಲಜ್ಜೆಯಿಂದ ತಲೆತಗ್ಗಿಸುವಂತೆ ಮಾಡಿದೆ.

ಈ ಪ್ರಕರಣದಲ್ಲಿ ಅಪರಾಧಿ ಮತ್ತು ಆತನ ಅಪರಾಧವನ್ನು ಮುನ್ನೆಲೆಗೆ ಬಾರದಂತೆ ಮಾಡುತ್ತಿರುವ ತಂತ್ರ-ಕುತಂತ್ರಗಳು ಅತ್ಯಂತ ಹೇಯವಾಗಿವೆ ಮತ್ತು ಸಮಕಾಲೀನ ರಾಜಕಾರಣವು ತಲುಪಿರುವ ಹೀನಾಯಮಟ್ಟದ ಸೂಚಕವೂ ಆಗಿದೆ.

ಪೆನ್ಡ್ರೈವ್ ಹಂಚಿದ ವ್ಯಕ್ತಿಗಳು ಕೂಡ ಅಪರಾಧಿಗಳು ಎಂಬುದು ಎಲ್ಲರೂ ಒಪ್ಪುವ ಸಂಗತಿ. ಆದರೆ ಕೇವಲ ಅವರೇ ಅಪರಾಧಿಗಳೆಂಬಂತೆ ಬಿಂಬಿಸುತ್ತಿರುವವರ ಮನಸ್ಥಿತಿಯು ಕುತ್ಸಿತ ಮತ್ತು ಸ್ವಾರ್ಥದ್ದೇ ಆಗಿದೆ. ರಾಜಕಾರಣಿಗಳಂತೂ ಏನಾದರೂ ಮಾತಾಡಿದರೆ ತಮ್ಮ ಹುಳುಕು ಎಲ್ಲಿ ಹೊರಬರುತ್ತದೋ ಎಂಬ ಭಯದಲ್ಲಿ ಇರುವಂತೆ ಭಾಸವಾಗುತ್ತಿದೆ. ವಿಕೃತ ಕಾಮಿಗೆ ಮೌನದಿಂದ ಬೆಂಬಲ ಕೊಡುತ್ತಿರುವ ರಾಜಕಾರಣಿಗಳು, ಮಠಾಧಿಪತಿಗಳು, ಸಾಮಾಜಿಕ ಮುಖಂಡರು ಮತ್ತು ನಾಗರಿಕರು ಮೌನ ಮುರಿದು ಸಂತ್ರಸ್ತೆಯರ ಪರ ನಿಲ್ಲಬೇಕಿದೆ.

ಇವರಾರಿಗೂ ಸಂತ್ರಸ್ತೆಯರ ಬಗ್ಗೆ ಕಾಳಜಿ ಇಲ್ಲದಿರು ವುದು, ಅವರನ್ನು ಕೆಲವೆಡೆ ಬೆದರಿಸುತ್ತಿರುವುದು, ಸಾಮಾಜಿಕವಾಗಿ ಅವರು ಎಂದಿಗೂ ಘನತೆಯಿಂದ ಬದುಕು ಕಟ್ಟಿಕೊಳ್ಳಲು ಆಗದಂತೆ ಮಾಡುತ್ತಿರುವುದನ್ನು ಎಲ್ಲ ಮಹಿಳಾ ಸಂಘಟನೆಗಳು ಮತ್ತು ಪ್ರಗತಿಪರ ಹಾಗೂ ಸಮಾನ ಮನಸ್ಕ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ.

ಎಸ್ಐಟಿ ರಚನೆಯಾಗಿ ಕೆಲವೇ ದಿನಗಳಲ್ಲಿ ತನಿಖೆಯಲ್ಲಿ ಪ್ರಗತಿ ಕಂಡುಬರುತ್ತಿದೆ ಎಂಬುದು ನಿಜ. ಆದರೆ, ಸಂತ್ರಸ್ತೆಯರ ವ್ಯಕ್ತಿಮಾಹಿತಿ ಬಹಿರಂಗ ವಾಗುವುದನ್ನು ತಡೆಯುವಲ್ಲಿ ಅದು ಯಶಸ್ವಿಯಾಗಿಲ್ಲ. ಇದು ಅತ್ಯಂತ ಖಂಡನೀಯ. ಇನ್ನು ಮುಂದಾದರೂ ಹೀಗೆ ಆಗದಂತೆ ನೋಡಿಕೊಳ್ಳುವಂತೆ ಒತ್ತಾಯಿಸುತ್ತೇವೆ.

ಪ್ರಜ್ವಲ್ ರೇವಣ್ಣರನ್ನು ಇನ್ನೂ ಬಂಧಿಸಲು ಸಾಧ್ಯವಾಗದಿರುವುದು ಸರಕಾರದ ಮತ್ತು ಆಡಳಿತ ವೈಫಲ್ಯವಾಗಿ ನಮಗೆ ಕಾಣುತ್ತಿದೆ.

ಒಟ್ಟಿನಲ್ಲಿ ಇಡೀ ಪ್ರಕರಣದ ತನಿಖೆಯನ್ನು ಸೂಕ್ಷ್ಮವಾಗಿ, ಸಮರ್ಥವಾಗಿ ಮತ್ತು ಶೀಘ್ರವಾಗಿ ಮುಗಿಸಬೇಕು, ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಮತ್ತು ಸಂತ್ರಸ್ತೆಯರಿಗೆ ಬದುಕುವ ವಾತಾವರಣವನ್ನು ಎಲ್ಲರೂ ಸೇರಿ ನಿರ್ಮಿಸಬೇಕೆಂದು ಅಗ್ರಹಿಸುತ್ತೇವೆ.

-ಸಬೀಹ ಭೂಮಿಗೌಡ, ಸುಚೇತನಾ ಸ್ವರೂಪ, ಭೂಮಿಗೌಡ, ಸುಮತಿ ಕೆ.ಆರ್., ನಾ. ದಿವಾಕರ, ಜಿ.ಪಿ. ಬಸವರಾಜ್, ಲ. ಜಗನ್ನಾಥ್, ಸವಿತಾ ಮಲ್ಲೇಶ್, ಸುಶೀಲ, ರತಿರಾವ್, ಸರಸ್ವತಿ, ಮುಝಫ್ಫರ್ ಅಸ್ಸಾದಿ, ಉಗ್ರನರಸಿಂಹೇಗೌಡ, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ- ಮೈಸೂರು ಘಟಕ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ಮೈಸೂರು

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!