ಪ್ರಧಾನಿ ವಿರುದ್ಧದ ನೀತಿ ಸಂಹಿತೆಯ ಉಲ್ಲಂಘನೆ ದೂರಿಗೆ ಕ್ರಮವೇ ಇಲ್ಲವೇಕೆ ?

Update: 2024-04-18 05:29 GMT
Editor : Ismail | Byline : ಆರ್. ಜೀವಿ

PC : ANI 

ಚುನಾವಣೆ ಘೋಷಿಸುವಾಗ ದೇಶದ ಮುಖ್ಯ ಚುನಾವಣಾ ಆಯುಕ್ತರು ಎರಡು ವಿಷಯಗಳನ್ನು ಬಹಳಷ್ಟು ಒತ್ತಿ ಹೇಳಿದ್ದರು. ಒಂದು, ನೀತಿ ಸಂಹಿತೆ ಉಲ್ಲಂಘನೆಯನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂಬುದು. ಇನ್ನೊಂದು, ಎಲ್ಲ ಪಕ್ಷಗಳಿಗೂ ಸಮಾನ ಸ್ಪರ್ಧಾವಕಾಶ ಕೊಡುವ ಲೆವೆಲ್ ಪ್ಲೇಯಿಂಗ್ ಫೀಲ್ಡ್ ನ ಖಾತರಿಯನ್ನು ತಾವು ಒದಗಿಸುತ್ತೇವೆ ಎಂಬುದು.

ಆದರೆ ಈಗ ಆಗುತ್ತಿರುವುದೇನು ? ಪ್ರಧಾನಿ ಮೋದಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ ದೂರು ದಾಖಲಾದರೆ ಆ ಬಗ್ಗೆ ಆಯೋಗ ಏನು ಮಾಡುತ್ತಿದೆ ? ಪ್ರಧಾನಿ ಮೋದಿ ನೀತಿ ಸಂಹಿತೆಯ ವ್ಯಾಪ್ತಿಯಿಂದ ಹೊರಗಿದ್ದಾರೆಯೇ ? ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳಲು ಆಯೋಗಕ್ಕೆ ಹೆದರಿಕೆಯಿದೆಯೇ ?

ಈ ಪ್ರಶ್ನೆಗಳನ್ನು ಚುನಾವಣಾ ಆಯೋಗಕ್ಕೆ ಕೇಳುತ್ತಿರುವವರು ನಿವೃತ್ತ ಹಿರಿಯ ಅಧಿಕಾರಿ. ಮೋದಿ ಪ್ರಶ್ನಾತೀತರೇ ? ಎಂದು ಕೇಳಿರುವ ಅವರು ಚುನಾವಣಾ ಆಯೋಗಕ್ಕೆ ತಾನು ನೀಡಿದ ದೂರಿನ ಬಗ್ಗೆ ಮತ್ತೊಮ್ಮೆ ಪತ್ರ ಬರೆದು ಹೇಳಿದ್ದೇನು ?

ಆಯೋಗಕ್ಕೆ ಅವರು ಕೇಳಿರುವ ಪ್ರಶ್ನೆಗಳೇನು ?

ಪ್ರಧಾನಿ ಮೇಲಿದ್ದ ಆರೋಪವೇನು ? ಅದಕ್ಕೆ ಆಯೋಗ ಮಾಡಿದ್ದೇನು ? ಹೀಗೇ ಆದರೆ ಇಲ್ಲಿ ಪಾರದರ್ಶಕ, ನ್ಯಾಯಸಮ್ಮತ ಚುನಾವಣೆ ನಡೆಯುವುದಾದರೂ ಹೇಗೆ ? ಪ್ರಧಾನಿ ಮೋದಿ ವಿರುದ್ಧ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಯ ಅನುಮಾನ ವ್ಯಕ್ತಪಡಿಸಿ ಮಾಜಿ ಹಿರಿಯ ಐಎಎಸ್ ಅಧಿಕಾರಿ ಇ. ಎ. ಎಸ್ ಶರ್ಮಾ ಬರೆದ ಪತ್ರಕ್ಕೆ ಚುನಾವಣಾ ಆಯೋಗ ಉತ್ತರಿಸಿಲ್ಲ.

ಮಾರ್ಚ್ 22ರಂದು ಬರೆದ ಪತ್ರಕ್ಕೆ ಆಯೋಗ ಪ್ರತಿಕ್ರಿಯಿಸದೇ ಇರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿರುವ ಶರ್ಮಾ, ಮೋದಿ ವಿರುದ್ಧ ಕ್ರಮ ಕೈಗೊಳ್ಳಲು ಆಯೋಗ ಹೆದರುತ್ತಿದೆಯೆ ಎಂದು ಸೋಮವಾರ ಪ್ರಶ್ನಿಸಿದ್ದಾರೆ. ಮೋದಿ ಆಯೋಗಕ್ಕಾಗಲೀ ಸಾರ್ವಜನಿಕರಿಗಾಗಲೀ ಉತ್ತರದಾಯಿಯಲ್ಲವೇ ಎಂದು ಕೂಡ ಶರ್ಮಾ ಆಯೋಗವನ್ನು ಪ್ರಶ್ನಿಸಿದ್ದಾರೆ. ಇತ್ತೀಚೆಗೆ ತಮಿಳುನಾಡಿನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮೋದಿ ಮಾಡಿದ ಭಾಷಣದ ಬಗ್ಗೆ ಶರ್ಮಾ ತಮ್ಮ ಪತ್ರದಲ್ಲಿ ಆಯೋಗದ ಗಮನ ಸೆಳೆದಿದ್ದರು.

ಹಿಂದೂಗಳು ನಾರಿ ಶಕ್ತಿ ಮತ್ತು ಮಾತೃ ಶಕ್ತಿಯನ್ನು ನಂಬುತ್ತಾರೆ. ಇಂಡಿಯಾ ವಿಪಕ್ಷ ಬಣ ಶಕ್ತಿಯನ್ನು ನಾಶಪಡಿಸುವ ಬಗ್ಗೆ ಹೇಳಿಕೆ ನೀಡಿದೆ. ಅದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನವಾಗಿದೆ ಎಂದು ಆ ರ್ಯಾಲಿಯಲ್ಲಿ ಮೋದಿ ಹೇಳಿದ್ದನ್ನು ಶರ್ಮಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ರ್ಯಾಲಿಯಲ್ಲಿ ಇಂಡಿಯಾ ಒಕ್ಕೂಟ ಹಿಂದೂ ಧರ್ಮ ನಂಬಿಕೆ ಹೊಂದಿರುವ ಶಕ್ತಿಯನ್ನು ನಾಶ ಮಾಡುವುದಾಗಿ ಹೇಳಿದೆ. ಹಿಂದೂ ಧರ್ಮದಲ್ಲಿ ಶಕ್ತಿ ಎಂದರೆ ಏನು ಎಂದು ತಮಿಳುನಾಡಿನ ಪ್ರತಿಯೊಬ್ಬರಿಗೂ ತಿಳಿದಿದೆ ಎಂದು ಮೋದಿ ಭಾಷಣ ಮಾಡಿದ್ದನ್ನು ಪತ್ರದಲ್ಲಿ ಶರ್ಮಾ ಪ್ರಸ್ತಾಪಿಸಿದ್ದರು.

ತಮಿಳುನಾಡಿನಲ್ಲಿ ದೇವಿಯರಿಗೆ ಮುಡಿಪಾದ ಹಲವಾರು ದೇವಾಲಯಗಳು ಈ ಸ್ಥಳದ ಶಕ್ತಿಯಾಗಿದ್ದು, ಹಿಂದೂ ಧರ್ಮದಲ್ಲಿ ಈ ಪದ ಮಾತೃ ಶಕ್ತಿ ಮತ್ತು ನಾರಿ ಶಕ್ತಿಯನ್ನು ಸೂಚಿಸುತ್ತದೆ ಎಂದು ಮೋದಿ ಹೇಳಿದ್ದರು. ಇಂಡಿಯಾ ಒಕ್ಕೂಟ ಪದೇ ಪದೇ ಮತ್ತು ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದೆ ಎಂದು ಮೋದಿ ಆಕ್ಷೇಪಿಸಿದ್ದರು.

ಈ ಹೇಳಿಕೆಗಳು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದಿದ್ದ ಶರ್ಮಾ, ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದರು. ಚುನಾವಣೆಯಲ್ಲಿ ರಾಜಕೀಯ ನಾಯಕರು ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವುದು ಮಾದರಿ ನೀತಿ ಸಂಹಿತೆಯ ನಿರ್ಲಜ್ಜ ಉಲ್ಲಂಘನೆಯಾಗುತ್ತದೆ.

ಯಾರೇ ಹಾಗೆ ಮಾತಾಡಿರುವುದು ನಿಜವೇ ಆಗಿದ್ದಲ್ಲಿ ಆಯೋಗ ಅದರ ಬಗ್ಗೆ ತುರ್ತಾಗಿ ಗಮನ ವಹಿಸಬೇಕು ಮತ್ತು ಅಂಥ ಹೇಳಿಕೆ ನೀಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಶರ್ಮಾ ತಮ್ಮ ಪತ್ರದಲ್ಲಿ ಆಯೋಗಕ್ಕೆ ನೆನಪಿಸಿದ್ದರು.ಮಾರ್ಚ್ 22ರ ತಮ್ಮ ಪತ್ರಕ್ಕೆ ಆಯೋಗ ಪ್ರತಿಕ್ರಿಯಿಸದೇ ಇರುವುದರಿಂದ ಬೇಸರಗೊಂಡಿರುವ ಶರ್ಮಾ, ಮಾರ್ಚ್ 25ರಂದು ಆಯೋಗವನ್ನು ಅದರ ಬಗ್ಗೆ ಪ್ರಶ್ನಿಸಿದ್ದಾರೆ.

ಚುನಾವಣಾ ಆಯೋಗಕ್ಕೆ ಮಾರ್ಚ್ 25ರಂದು ಬರೆದ ತಮ್ಮ ಮತ್ತೊಂದು ಪತ್ರದಲ್ಲಿ ಶರ್ಮಾ ಎತ್ತಿರುವ ಪ್ರಶ್ನೆಗಳು ಹೀಗಿವೆ:

1. ಒಬ್ಬ ರಾಜಕೀಯ ನಾಯಕ ತನ್ನ ಪಕ್ಷಕ್ಕೆ ಮತ ಪಡೆಯಲು ಮತದಾರರ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದೇನಾದರೂ ಆಯೋಗ ಪರಿಗಣಿಸುತ್ತದೆಯೇ?

2. ನನ್ನಂತಹ ಸಾಮಾನ್ಯ ಮತದಾರ ನೀಡಿದ ದೂರಿನ ಮೇಲೆ ಕ್ರಮ ಕೈಗೊಳ್ಳಬೇಕಾಗಿಲ್ಲ ಮತ್ತು ಸಾಮಾನ್ಯ ಮತದಾರರ ಕಳವಳಗಳನ್ನು ಸುಲಭವಾಗಿ ನಿರ್ಲಕ್ಷಿಸಬಹುದು ಎಂದು ಆಯೋಗ ಭಾವಿಸುತ್ತದೆಯೇ?

3. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀತಿ ಸಂಹಿತೆಯ ವ್ಯಾಪ್ತಿಯನ್ನು ಮೀರಿದ್ದಾರೆ ಮತ್ತು ಅವರು ಆಯೋಗಕ್ಕೆ ಅಥವಾ ಸಾರ್ವಜನಿಕರಿಗೆ ಉತ್ತರದಾಯಿಯಲ್ಲ ಎಂದು ಆಯೋಗ ಪರಿಗಣಿಸುತ್ತದೆಯೇ?

4. ಚುನಾವಣಾ ಪ್ರಕ್ರಿಯೆಯಲ್ಲಿ ಮೋದಿಯವರಿಗೇ ಬೇರೆ ನಿಯಮಗಳು ಮತ್ತು ಇತರರಿಗೆ ಮತ್ತೊಂದು ಬಗೆಯ ನಿಯಮಗಳಿವೆಯೇ?

5. ಆಯೋಗ ನನ್ನ ದೂರಿನ ಮೇಲೆ ಕ್ರಮ ಕೈಗೊಳ್ಳಲಿದೆಯೆ ಅಥವಾ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ನಿರ್ಧರಿಸಿದೆಯೇ?

6. ಆಯೋಗ ತನ್ನದೇ ಮೂಲಗಳಿಂದ ದೂರಿಗೆ ಸಂಬಂಧಿಸಿದ ಸಂಗತಿಗಳನ್ನು ಖಚಿತಪಡಿಸಿಕೊಂಡಿದೆಯೇ ಮತ್ತು ನನ್ನ ದೂರಿನ ಬಗ್ಗೆ ಆದೇಶ ಹೊರಡಿಸಿದೆಯೆ? ಹಾಗಿದ್ದಲ್ಲಿ ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬಹುದೇ?

7. ನನ್ನ ದೂರಿನ ವಿಚಾರದಲ್ಲಿ ಮೂವರೂ ಆಯುಕ್ತರ ಮಧ್ಯೆ ಭಿನ್ನಾಭಿಪ್ರಾಯಗಳಿವೆಯೆ ಮತ್ತು ಅದನ್ನು ಬಹಿರಂಗಪಡಿಸದೇ ಇರಲು ಕಾರಣಗಳೇನಾದರೂ ಇವೆಯೆ?

8. ಸರ್ಕಾರದಿಂದ ನೇಮಕಗೊಂಡಿರುವ ನೀವು ಅದಕ್ಕೆ ಉಪಕೃತರಾಗಿ, ನಿಮ್ಮನ್ನು ನೇಮಿಸಿದವರಿಗೆ ಯಾವುದೇ ಮುಜುಗರ ಉಂಟುಮಾಡದಿರಲು ನಿರ್ಧರಿಸಿದ್ದೀರಾ?

9. ಆಯೋಗ ಕೆಲವು ಕಾರಣಗಳಿಗಾಗಿ ನನ್ನ ದೂರಿನ ಮೇಲೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಹೆದರುತ್ತಿದೆಯೇ?

10. ಆಯೋಗ ಸಾರ್ವಜನಿಕರ ಹಣದ ಮೇಲೆಯೇ ನಡೆಯುವುದರಿಂದ, ಅದು ಸಾರ್ವಜನಿಕರಿಗೆ ಜವಾಬ್ದಾರವಾಗಿರಬೇಕಲ್ಲವೇ?

ಇಷ್ಟು ಪ್ರಶ್ನೆಗಳನ್ನು ಎತ್ತಿರುವ ಶರ್ಮಾ ಅವರು, ಆಯೋಗ ಆಡಳಿತಾರೂಢ ರಾಜಕೀಯ ಪ್ರಭಾವಿಗಳ ಪರವಾಗಿ ಯಾವುದೇ ಪಕ್ಷಪಾತ ಪ್ರದರ್ಶಿಸಿದರೆ ಅಥವಾ ಅವರ ವಿರುದ್ಧ ವರ್ತಿಸಲು ಹೆದರಿದರೆ ಅದರ ಮೇಲೆ ಸಾರ್ವಜನಿಕರು ಇಟ್ಟಿರುವ ವಿಶ್ವಾಸ ಕುಸಿಯುವುದು ಖಚಿತ ಎಂದೂ ಹೇಳಿದ್ದಾರೆ.

ಹಾಗಾದಲ್ಲಿ ಸಂವಿಧಾನಾತ್ಮಕವಾಗಿ ಕಾರ್ಯನಿರ್ವಹಿಸಬೇಕಿರುವ ಆಯೋಗದ ದಕ್ಷತೆ ಬಗ್ಗೆ ಕಳವಳ ಮೂಡುತ್ತದೆ ಎಂದು ಅವರು ಹೇಳಿದ್ದಾರೆ.

ತಾವು ಎತ್ತಿರುವ ಪ್ರಶ್ನೆಗಳ ವಿಚಾರವಾಗಿ ಸೂಕ್ತ ಉತ್ತರಗಳನ್ನು ಆಯೋಗ ನೀಡಬೇಕಾಗಿದೆ. ಇಲ್ಲದೇ ಹೋದಲ್ಲಿ, ತನ್ನ ಘನತೆಯನ್ನು ಕಾಯ್ದುಕೊಳ್ಳುವ ಉದ್ದೇಶವೇ ಅದಕ್ಕಿಲ್ಲ ಎಂದು ಭಾವಿಸಬೇಕಾಗುತ್ತದೆ ಎಂದೂ ಶರ್ಮಾ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ತಮ್ಮ ದೂರಿನ ವಿಚಾರವಾಗಿ ಆಯೋಗ ಕ್ರಮ ಕೈಗೊಳ್ಳುತ್ತಿದೆಯೆ ಅಥವಾ ಅದು ಯಾವುದೇ ಕಾರಣಕ್ಕಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಹೆದರುತ್ತಿದೆಯೇ ಎಂಬ ಶರ್ಮಾ ಪ್ರಶ್ನೆ ಬಹಳ ಮುಖ್ಯವಾದುದಾಗಿದೆ. ಚುನಾವಣಾ ಆಯುಕ್ತರ ನೇಮಕಕ್ಕೆ ರೂಪಿಸಲಾದ ಹೊಸ ಕಾನೂನಿನ ಬಗ್ಗೆಯೂ ಪ್ರಸ್ತಾಪಿಸಿರುವ ಅವರು, ಸರ್ಕಾರದ ಕಡೆಯಿಂದ ನೇಮಕಗೊಂಡಿರುವ ಕಾರಣದಿಂದ ನಿಮ್ಮನ್ನು ನೇಮಿಸಿದವರಿಗೆ ಯಾವುದೇ ಮುಜುಗರ ಉಂಟಾಗದಂತೆ ಕೆಲಸ ಮಾಡಲು ಬಯಸಿದ್ದೀರಾ ಎಂದು ಕೂಡ ಶರ್ಮಾ ಮೂವರೂ ಆಯುಕ್ತರನ್ನು ಪ್ರಶ್ನಿಸಿದ್ದಾರೆ.

ಆಯೋಗ ತಮ್ಮ ಪ್ರಶ್ನೆಗಳ ಬಗ್ಗೆ ಸಾರ್ವಜನಿಕವಾಗಿ ಉತ್ತರ ಕೊಡಬೇಕು ಎಂಬುದು ಶರ್ಮಾ ಆಗ್ರಹವಾಗಿದೆ. ಹಾಗೆ ಮಾಡುವುದರಿಂದ, ಚುನಾವಣಾ ಆಯೋಗಕ್ಕೆ ರಾಜಕೀಯದಿಂದ ದೂರವಿರಲು ಮತ್ತು ಸ್ವತಂತ್ರವಾಗಿರಲು ಇಷ್ಟವಿಲ್ಲ ಎಂಬ ಗ್ರಹಿಕೆ ನಿವಾರಣೆಯಾಗುವುದು ಸಾಧ್ಯ ಎಂಬ ಆಶಯವನ್ನೂ ಶರ್ಮಾ ವ್ಯಕ್ತಪಡಿಸಿದ್ದಾರೆ. ಮಾದರಿ ನೀತಿ ಸಂಹಿತೆ ಚುನಾವಣೆ ಘೋಷಣೆಯಾದಾಗಿನಿಂದ ಫಲಿತಾಂಶದ ಘೊಷಣೆಯಾಗುವವರೆಗೂ ಇರುತ್ತದೆ.

ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯಲು, ಸರ್ಕಾರಗಳು, ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳ ಮೇಲೆ ಒಂದು ನಿಯಂತ್ರಣವನ್ನು ಇಡುವುದು ಇದರ ಉದ್ದೇಶವಾಗಿರುತ್ತದೆ. ಅದನ್ನು ಎಲ್ಲರೂ ತಾವಾಗಿಯೇ ಪಾಲಿಸಬೇಕು. ಉಲ್ಲಂಘಿಸುವವರಿಗೆ ಆಯೋಗ ನೋಟಿಸ್‌ ನೀಡುತ್ತದೆ ಮತ್ತು ಕೆಲವೊಮ್ಮೆ ಸೂಕ್ತ ಕ್ರಮವನ್ನೂ ತೆಗೆದುಕೊಳ್ಳುತ್ತದೆ.

ಮಾದರಿ ನೀತಿ ಸಂಹಿತೆಯ ನಿಬಂಧನೆಗಳಲ್ಲಿ, ಮತಗಳನ್ನು ಪಡೆಯಲು ಜಾತಿ ಅಥವಾ ಕೋಮು ಭಾವನೆಗಳನ್ನು ಪ್ರಚೋದಿಸುವ ಮಾತಾಡಬಾರದು ಎಂಬುದೂ ಒಂದು.

ಅದನ್ನೇ ಶರ್ಮಾ ಅವರು ಮೋದಿ ಭಾಷಣದ ವಿಚಾರದಲ್ಲಿ ಪ್ರಸ್ತಾಪಿಸಿ, ಮೋದಿ ಭಾಷಣ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ದೂರಿರುವುದು. ಆದರೆ, ಬಡಪಾಯಿ ಚುನಾವಣಾ ಆಯೋಗ ಮೋದಿ ವಿರುದ್ಧ ಶರ್ಮಾ ಅವರು ನೀಡಿರುವ ದೂರನ್ನು ಬಹುಶಃ ಯಾವುದೋ ಫೈಲಿನ ಕೆಳಗೆ ಇಟ್ಟುಕೊಂಡು ಸುಮ್ಮನೆ ಕೂತಿರುವ ಹಾಗಿದೆ.

ಲೆವೆಲ್ ಪ್ಲೇಯಿಂಗ್ ಫೀಲ್ಡ್ ಬಗ್ಗೆ ಮಾತಾಡಿದವರು ಮೋದಿಗೆ ಹೆದರುತ್ತಿರುವ ಪರಿಯಲ್ಲವೆ ಇದು?

ಚುನಾವಣೆ ಘೋಷಿಸುವ ದಿನ ಅಷ್ಟು ದೊಡ್ಡದಾಗಿ ಬಹಳ ಶೌರ್ಯದಿಂದ ಯಾವುದೇ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಎಂದ ಮುಖ್ಯ ಚುನಾವಣಾ ಆಯುಕ್ತರು, ಮೋದಿ ಬಗ್ಗೆ ದೂರು ಬಂದ ತಕ್ಷಣವೇ ಏನೂ ಉತ್ತರಿಸಲಾರದೆ ಬೆವರೊರೆಸಿಕೊಳ್ಳುತ್ತ ಕೂತಿದ್ದಾರೆಯೆ? ಇಂಥದೇ ದೂರು ವಿಪಕ್ಷಗಳ ವಿರುದ್ದ ಬಂದಿದ್ದರೆ ಇಷ್ಟು ಹೊತ್ತಿಗೆ ಅವರು ಕಟ್ಟುನಿಟ್ಟಿನ ಕ್ರಮದ ಅಬ್ಬರ ತೋರಿಸಿಬಿಡುತ್ತಿದ್ದರು ಅಲ್ಲವೆ?

ಹಾಗಾದರೆ ಚುನಾವಣಾ ಅಯೋಗಕ್ಕೆ ಮೋದಿ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳಲು ಏಕೆ ಭಯ? ಆ ಸ್ವಾತಂತ್ರ್ಯ ಮತ್ತು ಅಧಿಕಾರ ಮೂವರೂ ಚುನಾವಣಾ ಆಯುಕ್ತರಿಗೆ ಇಲ್ಲವಾಗಿದೆಯೆ? ಅವರು ವಿಪಕ್ಷಗಳು ಆರೋಪಿಸುತ್ತಿರುವಂತೆ ನಿಜವಾಗಿಯೂ ಮೋದಿ ಸರ್ಕಾರದ ಹೌದಪ್ಪಗಳಾ?

ಅದೇ ನಿಜವಾದರೆ ಇನ್ನೆಂಥ ಲೆವೆಲ್ ಪ್ಲೇಯಿಂಗ್ ಫೀಲ್ಡ್ ನ ಖಾತರಿ ಕೊಡುತ್ತೀರಿ ನೀವು ? ಎಲ್ಲಿದೆ ಇಲ್ಲಿ ಎಲ್ಲ ಪಕ್ಷಗಳಿಗೆ ಸ್ಪರ್ಧೆಯ ಸಮಾನ ಅವಕಾಶ ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!