ಮುಸ್ಲಿಮರು ಬಿಜೆಪಿಯನ್ನು ಏಕೆ ಬೆಂಬಲಿಸಬೇಕು?

Update: 2024-05-14 07:27 GMT

ದೇಶದಲ್ಲಿ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ 2024ರಲ್ಲಿ ಭಾರತೀಯ ಜನತಾ ಪಕ್ಷ ತನ್ನ 10 ವರ್ಷಗಳ ಆಡಳಿತದಲ್ಲಿ ಕೈಗೊಂಡಿರುವ ದೇಶದ ಅಭಿವೃದ್ಧಿ ಕುರಿತು ಮಾತನಾಡದೇ ಇರುವುದು ದೇಶದ ಜನತೆಯ ದುರದೃಷ್ಟ. ಯಾವುದೇ ಪಕ್ಷಕ್ಕೆ 10 ವರ್ಷಗಳ ಆಡಳಿತ ಅವಧಿಯು ಅಭಿವೃದ್ಧಿಯ ಕುರಿತು ಮಾತನಾಡಲು ಸಾಕಷ್ಟು ಅವಕಾಶ ನೀಡುತ್ತದೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ವಿರೋಧ ಪಕ್ಷಗಳ ಬಗ್ಗೆ ನಕರಾತ್ಮಕ ವಿಚಾರಗಳನ್ನು ಹಾಗೂ ಒಂದು ಧರ್ಮದ ಬಗ್ಗೆ ಜನರಲ್ಲಿ ಭಯ ಉಂಟು ಮಾಡುವುದೇ ಚುನಾವಣಾ ಪ್ರಚಾರದ ಕಾಯಕ ಮಾಡಿಕೊಂಡಿದ್ದಾರೆ, ಅವರ ಪಕ್ಷದ ಯಾವ ನಾಯಕರೂ ತಾವು ಮಾಡಿದ ಅಭಿವೃದ್ಧಿಯ ಬಗ್ಗೆ ಮಾತನಾಡುವುದನ್ನೇ ಕೈಬಿಟ್ಟಿದ್ದಾರೆ. ಮೋದಿಯವರು ಏನು ಹೇಳುತ್ತಾರೆ ಅದೇ ವಿಷಯವನ್ನು ಅವರ ಪಕ್ಷದ ಮುಖಂಡರು ಪುನರುಚ್ಚಾರ ಮಾಡುತ್ತಿದ್ದಾರೆ. ಇದು ‘ಸರಕು ಮುಗಿದ ಮೇಲೆ ತವುಡು ಕುಟ್ಟುವುದು’ ಎನ್ನುವ ಹಾಗಾಗಿದೆ ಅವರ ಪರಿಸ್ಥಿತಿ. ಲೋಕಸಭಾ ಚುನಾವಣೆಯ ಎರಡನೆಯ ಹಂತದ ಮತದಾನ ಮುಗಿದ ನಂತರ ಮೋದಿಯವರು ಭರವಸೆ ಕಳೆದುಕೊಂಡಂತೆ ಕಾಣುತ್ತಿದೆ. ಮೂರನೆಯ ಹಂತದ ಮತದಾನ ಮುಗಿಯುವ ಸಂದರ್ಭದಲ್ಲಿ ರಾಷ್ಟ್ರೀಯ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರ ಹತಾಶ ಮನಸ್ಥಿತಿ ಎದ್ದು ಕಾಣುತ್ತಿತ್ತು. ಒಂದು ರೀತಿ ಮುಸ್ಲಿಮರ ಬಗ್ಗೆ ಅನುಕಂಪ, ಮುಸ್ಲಿಮರಿಗೆ ಭಯ ಉಂಟು ಮಾಡುವ ಉದ್ದೇಶದ ಮಾತುಗಳು, ಮುಸ್ಲಿಮರಿಗೆ ಸಲಹೆ ನೀಡುವ ರೀತಿ, ‘‘ನಾನು ಮಾಡುತ್ತಿರುವುದು ನೀವು ಒಪ್ಪಿಕೊಳ್ಳದೇ ಇದ್ದರೆ ನಿಮಗೆ ಉಳಿಗಾಲವಿಲ್ಲ’’ ಎನ್ನುವ ಎಚ್ಚರಿಕೆ ನೀಡಿದಂತಿತ್ತು. ಅಲ್ಲದೆ, ಮದ್ಯಪ್ರದೇಶದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ‘‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕ್ರೀಡೆಯಲ್ಲಿಯೂ ಅಲ್ಪಸಂಖ್ಯಾತರನ್ನು ಸೇರಿಸುತ್ತದೆ’’ ಎಂದು ಜನರನ್ನು ಪ್ರಚೋಧಿಸುತ್ತಿರುವುದು ಕಂಡು ಬಂದಿದೆ, ಇಷ್ಟೆಲ್ಲ ನಡೆಯುತ್ತಿದ್ದರೂ ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ.

ಭಾರತದ ಮುಸ್ಲಿಮರು ಭಾರತದ ಸಂವಿಧಾನದ ಆಶಯದಂತೆ ನಡೆಯುತ್ತಿದ್ದಾರೆ, ಶರಿಯಾ ಕಾನೂನಿಗೆ ದೇಶದ ಸಂವಿಧಾನ ಅವಕಾಶ ನೀಡಿದೆ. ತ್ರಿವಳಿ ತಲಾಖ್ಗೆ ಕೂಡಾ ದೇಶದ ಸಂವಿಧಾನ ಅವಕಾಶ ನೀಡಿತ್ತು. ಈಗ ಅದರ ವಿರುದ್ಧ ಕಾನೂನು ಮಾಡಲಾಗಿದೆ. ಇದನ್ನು ಮುಸ್ಲಿಮರು ವಿರೋಧಿಸಿಲ್ಲ. ಯಾವ ಕಾನೂನಿಗೆ ವಿರುದ್ಧವಾಗಿ ಮುಸ್ಲಿಮರು ನಡೆದುಕೊಂಡಿದ್ದಾರೆ ಎಂದು ಪ್ರಧಾನ ಮಂತ್ರಿಗಳು ಹೇಳಬೇಕಿತ್ತು. ಬಿಜೆಪಿಯನ್ನು ವಿರೋಧಿಸುವುದೆಂದರೆ ಭಾರತವನ್ನು ವಿರೋಧ ಮಾಡಿದಂತಾಗುವುದಿಲ್ಲ ಎನ್ನುವ ಕನಿಷ್ಠ ತಿಳುವಳಿಕೆ ಅವರಿಗೆ ಇರಬೇಕಿತ್ತು.

ಈ ದೇಶದ ನಾಗರಿಕ ಯಾವುದೇ ಚುನಾವಣೆಯಲ್ಲಿ ಯಾವುದೇ ಪಕ್ಷವನ್ನಾದರೂ ಅಥವಾ ಯಾವುದೇ ವ್ಯಕ್ತಿಯನ್ನಾದರೂ ಮತದಾನದ ಮೂಲಕ ಅಥವಾ ಬಹಿರಂಗ ಪ್ರಚಾರದ ಮೂಲಕ ಬೆಂಬಲಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ನೀವು ವಿರೋಧ ಮಾಡಬಾರದು ಎಂದೋ ಅಥವಾ ನೀವು ನಮಗೆ ಬೆಂಬಲ ನೀಡಬೇಕು ಎಂದೋ ಯಾರೂ ಯಾರ ಮೇಲೂ ಒತ್ತಾಯ ಪಡಿಸುವಂತಿಲ್ಲ ಎನ್ನುವ ಕನಿಷ್ಠ ತಿಳುವಳಿಕೆ ಅವರಿಗೆ ಇಲ್ಲದಿರುವುದು ದುರದೃಷ್ಟ. ಒಂದೊಂದು ರಾಜ್ಯದಲ್ಲಿ ಒಂದೊಂದು ಸಮೀಕರಣದಲ್ಲಿ ಒಂದೊಂದು ಪಕ್ಷಕ್ಕೆ ಬೆಂಬಲಿಸುವ ಇತಿಹಾಸ ಮುಸ್ಲಿಮರಿಗೆ ಇದೆ, ಅದು ಆಯಾ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳನ್ನು ಆಧರಿಸಿ ಎನ್ನಬಹುದು.

ಎಲ್ಲಾ ಸಂದರ್ಭದಲ್ಲಿಯೂ ದೇಶದ ಮುಸ್ಲಿಮರು ಸಂವಿಧಾನದ ಆಶಯದಂತೆ ಜಾತ್ಯತೀತ ಪಕ್ಷಗಳ ಜೊತೆಗೆ ಇದ್ದಾರೆ ವಿನಃ ಕೇವಲ ಕಾಂಗ್ರೆಸ್ ಜೊತೆಗಿಲ್ಲ. ದೇಶದ ಮುಸ್ಲಿಮರು ಬಿಜೆಪಿ ಜೊತೆಗೆ ಇರದಿರುವುದಕ್ಕೆ ನೂರಾರು ಕಾರಣಗಳಿವೆ. ಒಂದು ಇಡೀ ಸಮುದಾಯವನ್ನು ಅವಮಾನಿಸುವುದೇ ಕಾಯಕ ಮಾಡಿಕೊಂಡಿರುವ ಪಕ್ಷದ ಜೊತೆಗೆ ಮುಸ್ಲಿಮರು ಯಾವ ಪುರುಷಾರ್ಥಕ್ಕಾಗಿ ಹೋಗಲು ಸಾಧ್ಯ?.

ಮುಸ್ಲಿಮರು ಯಾಕೆ ಬಿಜೆಪಿ ಪಕ್ಷದ ಜೊತೆಗಿಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿರುವುದು ಬಿಜೆಪಿಯೇ ಹೊರತು ಮುಸ್ಲಿಮರಲ್ಲ. ದೇಶದ ಪ್ರಧಾನಿಯಿಂದ ಹಿಡಿದು, ಬಿಜೆಪಿಯ ಬಹುತೇಕ ಮುಖ್ಯಮಂತ್ರಿಗಳು, ಮಂತ್ರಿಗಳು, ನಾಯಕರು ನೇರವಾಗಿ ಮುಸ್ಲಿಮರನ್ನು ದ್ವೇಷಿಸುವಂತಹ ಮಾತನಾಡುವಾಗ ಅಂತಹವರ ಜೊತೆಗೆ ಮುಸ್ಲಿಮರು ಹೇಗೆ ಇರಲು ಸಾಧ್ಯ?. ಯಾವುದೇ ದೇಶದ ಇತಿಹಾಸದಲ್ಲಿ ಒಬ್ಬ ಪ್ರಧಾನ ಮಂತ್ರಿ ಅಥವಾ ದೇಶದ ನಾಯಕ ಆ ದೇಶದ ಒಂದು ಇಡೀ ಸಮುದಾಯದ ವಿರುದ್ಧ ಮಾತನಾಡುವಂತಹ, ಅವರ ಬೆಳವಣಿಗೆಯನ್ನು ಅಪಹಾಸ್ಯ ಮಾಡುವಂತಹದ್ದನ್ನು ಕಾಣಲಾಗುತ್ತಿದೆಯೇ?. ದೇಶದ ಪ್ರಧಾನಿಯವರಲ್ಲಿ ಒಂದು ಮಾತು ಕೇಳಬೇಕಿದೆ: ಒಂದು ವೇಳೆ ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ತುಷ್ಟೀಕರಿಸಿದ್ದರೆ, ದೇಶದ ಮುಸ್ಲಿಮರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿ ಈಗಲೂ ಈ ಪರಿಸ್ಥಿತಿಯಲ್ಲಿ ಇರಲು ಸಾಧ್ಯವಿತ್ತೇ? ದೇಶದ ಜನತೆ ಎಂದಿಗೂ ದ್ವೇಷದ ರಾಜಕಾರಣಕ್ಕೆ ಬೆಂಬಲ ನೀಡುವುದಿಲ್ಲ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕಿದೆ.

ಪ್ರಧಾನ ಮಂತ್ರಿ ಮೋದಿಯವರು ಹೇಳಿದ ಹಾಗೆ ಮುಸ್ಲಿಮರು ಅವಿದ್ಯಾವಂತರು, ಸ್ಲಂಗಳಲ್ಲಿ ಬದುಕುತ್ತಾರೆ, ಸಮಾಜದ ಮುಖ್ಯ ವಾಹಿನಿಗೆ ಬರುತ್ತಿಲ್ಲ ಎನ್ನುವುದಾದರೆ ಅದಕ್ಕೆ ನೀವೂ ಹೊಣೆಗಾರರಲ್ಲವೇ, ಕಳೆದ ಹತ್ತು ವರ್ಷಗಳಲ್ಲಿ ನಿಮ್ಮ ಸರಕಾರ ದೇಶದ ಮುಸ್ಲಿಮರಿಗೆ ಮಾಡಿರುವುದಾದರೂ ಏನು? ಯಾವ ಯೋಜನೆಗಳನ್ನು ಜಾರಿಗೊಳಿಸಿದ್ದೀರಿ? 2006ರಲ್ಲಿ ಬಂದಂತಹ ನ್ಯಾ.ರಾಜೇಂದ್ರ ಸಾಚಾರ್ ವರದಿಯನ್ವಯ ದೇಶದ ಮುಸ್ಲಿಮರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅತ್ಯಂತ ಕೆಳಸ್ತರದಲ್ಲಿದ್ದಾರೆ. ಅದರಂತೆ ಯುಪಿಎ ಸರಕಾರ ಸಾಚಾರ್ ವರದಿ ಅನುಷ್ಠಾನ ಮಾಡಲು ಮುಂದಾಗಿ, ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇನ್ನು ಹಲವು ಜಾರಿಗೊಳಿಸಲು ಸಾಧ್ಯವಾಗಿಲ್ಲ. ಅದನ್ನು ನೀವು ಮುಂದುವರಿಸಬಹುದಾಗಿತ್ತು, ಅದು ನಿಮ್ಮಿಂದಾಗಲಿಲ್ಲ. ಕಳೆದ ಇಪ್ಪತ್ತು ವರ್ಷಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ, ಇದಕ್ಕೆ ಮೂಲ ಕಾರಣ ಯುಪಿಎ ಸರಕಾರ ಸಾಚಾರ್ ವರದಿಯಂತೆ ಪ್ರಾರಂಭಿಸಿರುವ ವಿದ್ಯಾರ್ಥಿ ವೇತನ. 2014ಕ್ಕೂ ಮೊದಲು ಪ್ರತೀ ವರ್ಷ ವಿದ್ಯಾರ್ಥಿ ವೇತನ ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತ ಬಂದಿತ್ತು, ಆದರೆ ನಿಮ್ಮ ಸರಕಾರ ಬಂದ ನಂತರ ಅದು ಹೆಚ್ಚಾಗಲಿಲ್ಲ. ಅದುವೇ ನಿಮ್ಮ ಸಾಧನೆ, ಮಕ್ಕಳ ಭವಿಷ್ಯದ ಜೊತೆಗೆ ಆಟ ಆಡಲಾಗಿದೆ. ಹೀಗಿದ್ದರೂ ಮುಸ್ಲಿಮರು ಬಿಜೆಪಿಯನ್ನು ಯಾಕೆ ಬೆಂಬಲಿಸುವುದಿಲ್ಲ ಎಂದು ಪ್ರಶ್ನೆ ಮಾಡುವುದು ಮೂರ್ಖತನವಾದೀತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ರಝಾಕ್ ಉಸ್ತಾದ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!