ಮಹಿಳೆಯರಿಗೆ ಐದು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್ ಗೆ ಲಾಭವಾಗಲಿದೆಯೇ ?

Update: 2024-03-15 05:45 GMT
Editor : Ismail | Byline : ಆರ್. ಜೀವಿ

ರೈತರಿಗೆ, ಯುವಕರಿಗೆ ಗ್ಯಾರಂಟಿ ಘೋಷಿಸಿದ ಬೆನ್ನಿಗೇ ಕಾಂಗ್ರೆಸ್ ದೇಶದ ಮಹಿಳೆಯರಿಗೆ ದೊಡ್ಡ ಗ್ಯಾರಂಟಿಯನ್ನೇ ಘೋಷಿಸಿದೆ. ಕರ್ನಾಟಕ, ತೆಲಂಗಾಣಗಳಲ್ಲಿ ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದು ಬಿಜೆಪಿಯೂ ಗ್ಯಾರಂಟಿ ಘೋಷಿಸುವ ಹಾಗೆ ಮಾಡಿದ ಕಾಂಗ್ರೆಸ್,

ಈಗ ಇಡೀ ದೇಶದಲ್ಲಿ ಗ್ಯಾರಂಟಿ ಮೂಲಕ ಬದಲಾವಣೆ ತರಲು ಮುಂದಾಗಿದೆ.ಆದರೆ ಇದೇ ವೇಳೆ ಹಲವು ಪ್ರಶ್ನೆಗಳು ಕಾಡುತ್ತವೆ.

ಕಾಂಗ್ರೆಸ್ನ ಈ ಗ್ಯಾರಂಟಿಗಳು ಕಾಂಗ್ರೆಸ್ ಗೆಲುವನ್ನು ಬರೆಯಬಲ್ಲವೆ? ಅದೆಷ್ಟೇ ಕಷ್ಟವಾದರೂ ಮೋದಿ ಹಾಗೂ ಬಿಜೆಪಿ ಬೆನ್ನಿಗೆ ನಿಂತ ಮಹಿಳೆಯರು ಈ ಬಾರಿ ಮನಸ್ಸು ಬದಲಾಯಿಸ್ತಾರ ? ​ಇದು ಕಾಂಗ್ರೆಸ್ ನ ಮಾಸ್ಟರ್ ಸ್ಟ್ರೋಕ್ ಆಗಲಿದೆಯೇ ? ಬಿಜೆಪಿ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ?

ಮಹಿಳೆಯರು, ಯುವಜನರನ್ನು ತಮ್ಮತ್ತ ಸೆಳೆಯುವಲ್ಲಿ ರಾಹುಲ್ ಗಾಂಧಿ ಯಶಸ್ವಿ ಆಗ್ತಾರಾ ? ಅಥವಾ ಮೋದಿ ಹಾಗೂ ಹಿಂದುತ್ವದ ಎದುರು ಇದೆಲ್ಲ ವ್ಯರ್ಥವಾಗಲಿದೆಯೆ ? ಇದೆಲ್ಲ ಅನುಮಾನಗಳ ನಡುವೆಯೂ ಒಂದು ಸಮಾಧಾನವೆಂದರೆ, ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಬಿಜೆಪಿಯ ಹಾಗೆ ಬರೀ ರಾಜಕೀಯವಿಲ್ಲ, ಗೆಲ್ಲುವ ಗಿಮಿಕ್ ಇದಲ್ಲ. ಬದಲಾಗಿ, ಪ್ರಜಾಪ್ರಭುತ್ವದ ದೊಡ್ಡ ಮಟ್ಟದ ಪರಿವರ್ತನೆಗೆ ಪ್ರೇರಣೆಯಾಗಬಲ್ಲ ನ್ಯಾಯದ ವಿಚಾರವೊಂದು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಹಕ್ಕುಗಳ ಮೂಲಕ ಇಲ್ಲಿ ಪ್ರತಿಪಾದಿತವಾಗಿದೆ.

ಕರ್ನಾಟಕದ ಮಾದರಿಯನ್ನೇ ಕಾಂಗ್ರೆಸ್ ಲೋಕಸಭಾ ಚುನಾವಣೆಯನ್ನು ಎದುರಿಸುವಲ್ಲಿಯೂ ಮುಂದುವರಿಸಿದೆ. ಕರ್ನಾಟಕದಲ್ಲಿ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಹೇಗೆ ಮಹತ್ವದ ಗ್ಯಾರಂಟಿಗಳನ್ನು ​ಘೋಷಣೆ ​ಮಾಡಲಾಗಿತ್ತೋ ಅದೇ ರೀತಿ ​ಇಡೀ ದೇಶದ​ಲ್ಲಿ ಮಹಿಳೆಯರಿಗೆ ಐದು ಗ್ಯಾರಂಟಿಗಳನ್ನು ಬುಧವಾರ ಘೋಷಿಸಿದೆ.

ನಾರಿ ನ್ಯಾಯ ಗ್ಯಾರಂಟಿ ಯೋಜನೆ ಅಡಿಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ನೀಡುತ್ತಿರುವ ಭರವಸೆಗಳು ಐದು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶದ ಬಡ ಕುಟುಂಬದ ಮಹಿಳೆಗೆ ವಾರ್ಷಿಕ 1 ಲಕ್ಷ ರೂ. ಆರ್ಥಿಕ ಸಹಾಯವನ್ನು ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡುವುದಾಗಿ ಮತ್ತು ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡುವುದಾಗಿ ಅದು ಘೋಷಿಸಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಮ್ಮ ಗ್ಯಾರಂಟಿಗಳು ಖಾಲಿ ಭರವಸೆ ಮತ್ತು ಹೇಳಿಕೆಗಳಲ್ಲ ಎಂದಿದ್ದಾರೆ. ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡುತ್ತೀರಿ ಮತ್ತು ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸುವ ಈ ಹೋರಾಟದಲ್ಲಿ ನಮ್ಮ ಕೈಗಳನ್ನು ಬಲಪಡಿಸಬೇಕು ಎಂದು ಖರ್ಗೆ ಮನವಿ ಮಾಡಿದ್ದಾರೆ.

ನಾರಿ ನ್ಯಾಯದ ಅಡಿಯಲ್ಲಿನ ಐದು ಗ್ಯಾರಂಟಿಗಳು ಹೀಗಿವೆ:

1.ಮಹಾಲಕ್ಷ್ಮಿ ಗ್ಯಾರಂಟಿ ಯೋಜನೆ - ದೇಶದ ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕವಾಗಿ 1 ಲಕ್ಷ ರೂ. ವರ್ಗಾವಣೆ ಮಾಡುವ ಸ್ಕೀಮ್ ಇದು.

2.ಆದಿ ಆಬಾದಿ, ಪೂರಾ ಹಕ್ - ಇದರಡಿಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಎಲ್ಲಾ ಹೊಸ ನೇಮಕಾತಿಗಳಲ್ಲಿ ಶೇ.50ರಷ್ಟನ್ನು ಮಹಿಳೆಯರಿಗೆ ಮೀಸಲಿಡಲಾಗುವುದು.

3.ಶಕ್ತಿ ಕಾ ಸಮ್ಮಾನ್ – ಈ ಗ್ಯಾರಂಟಿ ಅಡಿಯಲ್ಲಿ ಆಶಾ, ಅಂಗನವಾಡಿ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ಡಬಲ್ ಮಾಡಲಾಗುವುದು.

4.ಅಧಿಕಾರ ಮೈತ್ರಿ - ಮಹಿಳೆಯರಿಗೆ ಅವರ ಕಾನೂನು ಹಕ್ಕುಗಳ ಬಗ್ಗೆ ತಿಳಿಸಿಕೊಡಲು ಪ್ರತಿ ಪಂಚಾಯತ್‌ ಮಟ್ಟದಲ್ಲಿ ಕಾನೂನು ಸಹಾಯಕರ ನೇಮಕದ ಭರವಸೆ.

5.ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್‌ಗಳು – ಈ ಗ್ಯಾರಂಟಿ ಯೋಜನೆಯಡಿ ದೇಶದಲ್ಲಿ ಉದ್ಯೋಗದಲ್ಲಿರುವ ಮಹಿಳೆಯರಿಗಾಗಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದಾದರೂ ಹಾಸ್ಟೆಲ್‌ ನಿರ್ಮಾಣ ಮತ್ತು ಇಂಥ ಹಾಸ್ಟೆಲ್ಗಳ ಸಂಖ್ಯೆ ದ್ವಿಗುಣಗೊಳಿಸಲಾಗುವುದು.

ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಈಗಾಗಲೇ ಯುವಕರಿಗಾಗಿ ಐದು ಗ್ಯಾರಂಟಿಗಳನ್ನು ಘೋಷಿಸಿದ್ದರು. ನಿರುದ್ಯೋಗಿ ಯುವಕರ ಪಾಲಿನ ಭರವಸೆಗಳಾಗಿ ಅವು ಮುಖ್ಯವಾದವುಗಳಾಗಿವೆ.

ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಹಾಗೂ ಕೇಂದ್ರದಲ್ಲಿನ 30 ಲಕ್ಷ​ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡುವ ಆ ಭರವಸೆಗಳು ಖಂಡಿತ ಅಸಾಧಾರಣವಾದವುಗಳು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲ ಹೆಜ್ಜೆಯೇ 30 ಲಕ್ಷ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಎಂದು ಈಗಾಗಲೇ ಘೋಷಿಸಲಾಗಿದೆ. ಈ ಭಾರತಿ ಭರೋಸಾ ಯೋಜನೆ ನಿಜವಾಗಿಯೂ ಬಹಳ ದೊಡ್ಡ ಯೋಜನೆಯಾಗಿದೆ.

ಎರಡನೆಯದಾಗಿ, ಮೊದಲ ಕೆಲಸದ ಗ್ಯಾರಂಟಿ. ಪ್ರತಿ ಪದವೀಧರರು ಮತ್ತು ಡಿಪ್ಲೊಮಾ ​ಪದವೀಧರರಿಗೆ 1 ಲಕ್ಷ ರೂ. ಸ್ಟೈ​ಪೆಂಡ್ ನೊಂದಿಗೆ ಒಂದು ವರ್ಷದ ಇಂಟರ್ನ್ಶಿಪ್. ಮೂರನೆಯದು, ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮುಕ್ತಿ ಭರವಸೆ.

ಪತ್ರಿಕೆ ಸೋರಿಕೆ ತಡೆಯಲು ಹೊಸ ಕಾನೂನನ್ನು ತರುವ ಮೂಲಕ ಪರೀಕ್ಷೆಗಳನ್ನು ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಭರವಸೆ ಅದು.

ನಾಲ್ಕನೆಯದು, ಸಾಮಾಜಿಕ ಭದ್ರತೆ. ಚಾಲಕರು, ಗಾರ್ಡ್‌ಗಳು ಮತ್ತು ಡೆಲಿವರಿ ಬಾಯ್‌ಗಳಂತಹ ಕೆಲಸಗಾರರಿಗೆ ಸಾಮಾಜಿಕ ಭದ್ರತೆಗಾಗಿ ಕಾನೂನನ್ನು ತರುವ ಭರವಸೆ. ಐದನೆಯದು, ಯುವ ರೋಶನಿ. 5,000 ಕೋಟಿ ರಾಷ್ಟ್ರೀಯ ನಿಧಿಯಿಂದ ಜಿಲ್ಲಾ ಮಟ್ಟದಲ್ಲಿ ಸ್ಟಾರ್ಟ್ ಅಪ್ ಫಂಡ್ ನೀಡುವ ಮೂಲಕ ಯುವ ಉದ್ಯಮಿಗಳನ್ನು ಬೆಂಬಲಿಸುವ ಭರವಸೆ.

ಜೊತೆಗೆ, ಕಾಂಗ್ರೆಸ್ ರೈತರಿಗೆ ನೀಡಿರುವ ಭರವಸೆ ಕೂಡ ಅಷ್ಟೇ ಮಹತ್ವದ್ದು. ​ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತರಿಯನ್ನು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ. ಎಂಎಸ್ಪಿಗೆ ಕಾನೂನು ಖಾತರಿಯನ್ನು ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷವೊಂದು ಬೆಂಬಲಿಸಿದೆ.

ಇನ್ನೊಂದೆಡೆ, ಆದಿವಾಸಿ ಸಮಾಜಕ್ಕೆ ಉತ್ತಮ ಆಡಳಿತ, ಸುಧಾರಣೆಗಳು, ಭದ್ರತೆ, ಸ್ವಆಡಳಿತ, ಆತ್ಮಗೌರವ, ಉಪ ಯೋಜನೆ ಎಂಬ ಆರು ಸಂಕಲ್ಪಗಳನ್ನು ಕೂಡ ಕಾಂಗ್ರೆಸ್ ಘೋಷಿಸಿದೆ. ಹೀಗೆ ಚುನಾವಣೆಯನ್ನು ಕಾಂಗ್ರೆಸ್ ಎದುರಿಸುತ್ತಿರುವುದು ಸಾಮಾಜಿಕ ನ್ಯಾಯದ ಪ್ರತಿಪಾ​ದನೆ ಯೊಂದಿಗೆ.

ಹಾಗಾಗಿಯೇ ಇದು ಬಿಜೆಪಿಯ ಅಗ್ಗದ ಚುನಾವಣಾ ಗಿಮಿಕ್ ಅಲ್ಲ. ಬಹಳ ಬಹಳ ಎತ್ತರದಲ್ಲಿನ ಮತ್ತು ಘನತೆಯ ಗ್ಯಾರಂಟಿ​ಗಳಾಗಿವೆ.

ಅಧಿಕಾರದಲ್ಲಿರುವವರು ಸರ್ವಾಧಿಕಾರದ ಧೋರಣೆಯೊಂದಿಗೆ ಆಕ್ರಮಿಸಿಕೊಳ್ಳುತ್ತಿರುವುದರ ಬಗ್ಗೆ ಮತ್ತು ಸಾಮಾಜಿಕ, ಆರ್ಥಿಕ ತಾರತಮ್ಯವನ್ನು ಎಸಗುತ್ತಿರುವುದರ ಬಗ್ಗೆ ಎಚ್ಚರಿಸಿದ್ದ ಭಾರತ್ ಜೋಡೊ ಯಾತ್ರೆಯ ಬಳಿಕ ಅದರ ಎರಡನೇ ಹಂತವಾಗಿ ರಾಹುಲ್ ಅವರು ಕೈಗೊಂಡದ್ದು ಭಾರತ್ ಜೋಡೋ ನ್ಯಾಯ ಯಾತ್ರೆ,

ಇದು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಸಾಂವಿಧಾನಿಕ ಆದರ್ಶಗಳನ್ನು ಸಾಧಿಸಲು ಮುಂದಾಗಿದೆ. ಇದು ಮಹತ್ವದ ಆಶಯ.

ರಾಜಕೀಯ ನ್ಯಾಯ ಎಲ್ಲಾ ಭಾರತೀಯರಿಗೆ ಘನತೆ ಮತ್ತು ಗೌರವದ ಸಾಂವಿಧಾನಿಕ ಮೌಲ್ಯಗಳನ್ನು ಪ್ರತಿಪಾದಿಸಿದರೆ,

ಸಾಮಾಜಿಕ ನ್ಯಾಯ ಸರ್ಕಾರದ ನೀತಿ ನಿರ್ಧಾರಗಳಲ್ಲಿ ಅಂಚಿನಲ್ಲಿರುವ ವರ್ಗದ ಪಾಲ್ಗೊಳ್ಳುವಿಕೆಯನ್ನು ಬಯಸುತ್ತದೆ.

ಆರ್ಥಿಕ ನ್ಯಾಯ ದೇಶದ ಪ್ರತಿಯೊಬ್ಬ ಯುವಕರಿಗೂ ಉದ್ಯೋಗವನ್ನು ನೀಡುತ್ತದೆ ಮತ್ತು ಅಸಮಾನತೆಯನ್ನು ಕೊನೆಗಾಣಿಸುತ್ತದೆ.

ಈಗಾಗಲೇ ಕಾಂಗ್ರೆಸ್ ಘೋಷಿಸಿರುವ ಎಲ್ಲ ಗ್ಯಾರಂಟಿಗಳು ಇದಿಷ್ಟೂ ಆಶಯಗಳನ್ನು ಈಡೇರಿಸುವ ಕಾರಣದಿಂದಾಗಿ ದೇಶದ ಸಂದರ್ಭದಲ್ಲಿ ಮಹತ್ವದ ಹೆಜ್ಜೆಗಳಾಗಲಿವೆ. ಕಾಂಗ್ರೆಸ್ ತನ್ನ ಭರವಸೆಗಳನ್ನು ಕಾಂಗ್ರೆಸ್ ಗ್ಯಾರಂಟಿ ಎಂದು ಕರೆದಿದೆ.

ಆದರೆ ಕಾಂಗ್ರೆಸ್ ಗ್ಯಾರಂಟಿಗಳನ್ನು ನಕಲು ಮಾಡಿದ ಬಿಜೆಪಿ ಮಾತ್ರ ಅವುಗಳನ್ನು ಮೋದಿ ಗ್ಯಾರಂಟಿ ಅಥವಾ ಮೋದಿ ಸರ್ಕಾರ್ ಕಿ ಗ್ಯಾರಂಟಿ ಎಂದು ಕರೆದಿದೆ.

ಕಳೆದ ಹತ್ತು ವರ್ಷಗಳಲ್ಲಿ ಮೋದಿಯಾಗಲೀ ಮೋದಿ ಸರ್ಕಾರವಾಗಲೀ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ.

ಹಾಗಿರುವಾಗಲೂ ಅದು ಮೋದಿ ಗ್ಯಾರಂಟಿಯ ಮಾತನ್ನಾಡುತ್ತಿರುವುದು ವಿಪರ್ಯಾಸ ಮತ್ತು ಹಾಸ್ಯಾಸ್ಪದ. ಆದರೆ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ತಾನು ಘೋಷಿಸಿದ್ದ ಎಲ್ಲ ಐದೂ ಭರವಸೆಗಳನ್ನು ಜಾರಿಗೊಳಿಸಿತು. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ ನಾಲ್ಕು ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ ಎಂದು ಸರ್ಕಾರ ಹೇಳಿದೆ.

ಅದರ ಈ ಬದ್ಧತೆ ಕೂಡ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಅದಕ್ಕೆ ಆತ್ಮವಿಶ್ವಾಸ ತುಂಬಿದೆ ಎಂಬುದು ನಿಜ.

ಉದ್ಯೋಗ ಮತ್ತು ಜೀವನೋಪಾಯವನ್ನೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಮುಖ ವಿಷಯಗಳನ್ನಾಗಿ ಮುಂದಿಟ್ಟಿದೆ. ಆದರೆ ಈ ವಿಚಾರಗಳನ್ನು ಅದು ಹೇಗೆ ಜನರಿಗೆ ಮುಟ್ಟಿಸಲಿದೆ ಮತ್ತು ಬಿಜೆಪಿಯ ತಂತ್ರಗಾರಿಕೆಯನ್ನು ಮೀರಿ ತನ್ನ ಪ್ರಾಮಾಣಿಕ ಉದ್ದೇಶಗಳನ್ನು ಜನರಿಗೆ ಅದು ಹೇಗೆ ಮನವರಿಕೆ ಮಾಡಿಕೊಡಲಿದೆ ಎಂಬುದೇ ಈಗಿನ ಪ್ರಶ್ನೆ.

ಬಿಜೆಪಿ ಭಾವನಾತ್ಮಕ ವಿಚಾರಗಳನ್ನು, ಅದರಲ್ಲೂ ಅಯೋಧ್ಯೆಯ ರಾಮ ಮಂದಿರ ಮತ್ತು ಹಿಂದುತ್ವದ ವಿಚಾರಗಳನ್ನು ತೆಗೆದುಕೊಂಡು,

​ಜನರನ್ನು ಧರ್ಮದ ಅಮಲಿನಲ್ಲಿ ಮುಳುಗಿಸುವ ಹೊತ್ತಿನಲ್ಲಿ ಕಾಂಗ್ರೆಸ್ ತನ್ನ ಸದುದ್ದೇಶದ ಮತ್ತು ಸತ್ಯದ ಹೆಜ್ಜೆಗಳ ಬಗ್ಗೆ ಜನತೆಯ ಗಮನ ಸೆಳೆಯಲೇಬೇಕಿರುವುದು ಮುಖ್ಯವಾಗಿದೆ. ಇವತ್ತು ದೇಶ ಎದುರಿಸುತ್ತಿರುವ ಬಿಕ್ಕಟ್ಟು, ಯುವಕರೆದುರಿನ ಹತಾಶ ಸ್ಥಿತಿ ಇವೆಲ್ಲದರ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯೋಜನೆಗಳು ಗಮನಾರ್ಹವಾಗಿವೆ.

ಎಲ್ಲಾ ನಾಗರಿಕರಿಗೆ ಯೋಗ್ಯ ಜೀವನ ಮತ್ತು ಕನಿಷ್ಠ ಜೀವನ ಮಟ್ಟವನ್ನು ಖಾತರಿಪಡಿಸುವ ಕಾಂಗ್ರೆಸ್ ಗ್ಯಾರಂಟಿಗಳು, ದೇಶದ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಹೊಳಪು ಕೊಡುವಂಥವುಗಳಾಗಿವೆ. ಅವುಗಳ ಬಗ್ಗೆ ಜನರಿಗೆ ಅರ್ಥ ಮಾಡಿಸಬೇಕಿರುವುದು, ಹಿಂದುತ್ವದ ಅಬ್ಬರದ ಸದ್ದಿನಲ್ಲಿ ಅವು ಅಡಗಿ ಹೋಗದಂತೆ ನೋಡಿಕೊಳ್ಳಬೇಕಿರುವುದು ಈಗಿನ ಅತ್ಯಗತ್ಯ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!