ಡಸ್ಟ್ ಬಿನ್ ಇಲ್ಲದ ಝೀರೋ ವೇಸ್ಟ್ ಹೊಟೇಲ್
ಜಗತ್ತಿನ ಮೊತ್ತ ಮೊದಲ ಝೀರೋ ವೇಸ್ಟ್ ಹೊಟೇಲ್-ಸೈಲೋ ಪ್ರಾರಂಭಿಸಿದ ಡಗ್ಲಾಸ್ ಮೆಕ್ಮಾಸ್ಟರ್ ಅವರ ‘ಸಿಲೊ ದಿ ಝೀರೋ ವೇಸ್ಟ್ ಬ್ಲೂ ಪ್ರಿಂಟ್’ ಪುಸ್ತಕದ ಚಿಂತನೆಯನ್ನು ಇಲ್ಲಿ ತೀರಾ ಸ್ಥೂಲವಾಗಿ ಹಂಚಿಕೊಳ್ಳಲಾಗಿದೆ
ನಾವು ಜೀವಿಸುತ್ತಿರುವ ನೈಸರ್ಗಿಕವಲ್ಲದ ಕೈಗಾರಿಕಾ ಜಗತ್ತಿನಲ್ಲಿ ಇದು ಸಾಧ್ಯವಿಲ್ಲ. ಅದಕ್ಕೆ ಪರ್ಯಾಯವಾಗಿ ಡಗ್ಲಾಸ್ ಯೋಚಿಸಿದ್ದು ತನ್ನ ಹೊಟೇಲ್ನೊಳಗೆ ತಂದ ಎಲ್ಲಾ ವಸ್ತುಗಳ ಜವಾಬ್ದಾರಿಯನ್ನು ತಾನೇ ವಹಿಸಿಕೊಳ್ಳಬೇಕು. ಅದನ್ನು ಸಂಪೂರ್ಣ ಬಳಸಿಕೊಳ್ಳಬೇಕು. ಯಾವುದೂ ವೇಸ್ಟ್ ಆಗಬಾರದು. ಅಂದರೆ ಡಸ್ಟ್ ಬಿನ್ ಅವಶ್ಯಕತೆಯೇ ಇರಬಾರದು. ಅದಕ್ಕೆ ಅವನು ಡಸ್ಟ್ಬಿನ್ನನ್ನು ಶವಪೆಟ್ಟಿಗೆ ಅಂತ ಕರೆದ. ಅವನು ಹೆಚ್ಚು ಉತ್ಪಾದಕವಾಗಿರುವ, ದೀರ್ಘಕಾಲ ಜೀವಿಸುವ, ಹೊಸ ರೂಪದಲ್ಲಿ ಮರುಹುಟ್ಟು ಪಡೆಯಬಲ್ಲ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳತೊಡಗಿದ. ಉಳಿದ ಪದಾರ್ಥಗಳ ಮರುಬಳಕೆ ಪ್ರಾಕೃತಿಕ ಕ್ರಮ ಅನಿಸಲಿಲ್ಲ. ಅದಕ್ಕೆ ಮರುರೂಪ ಕೊಡುವ ನಿಟ್ಟಿನಲ್ಲಿ ಚಿಂತಿಸತೊಡಗಿದ.
ಒಟ್ಟು ಉತ್ಪನ್ನವಾದ ಆಹಾರದಲ್ಲಿ ಶೇ. ೪೦ರಷ್ಟು ಹಾಳಾ ಗುತ್ತದಂತೆ. ಒಂದಿಷ್ಟು ಬೆಳೆದ ಸ್ಥಳದಿಂದ ಸಾಗಿಸುವಾಗ ಹಾಳಾಗುತ್ತದೆ. ಇನ್ನೊಂದಿಷ್ಟು ಗೋದಾಮುಗಳಲ್ಲಿ ಹಾಳಾಗುತ್ತದೆ. ಇನ್ನು ಸ್ವಲ್ಪ ಮಾಲುಗಳಲ್ಲಿ ಹಾಳಾಗುತ್ತದೆ. ಸಿದ್ಧವಾದ ಆಹಾರದಲ್ಲಿ ಎಷ್ಟೋ ತಟ್ಟೆಗೇ ಬರುವುದಿಲ್ಲ. ಕೊನೆಗೆ ತಟ್ಟೆಯಲ್ಲೂ ಒಂದಿಷ್ಟನ್ನು ಉಳಿಸಿ ಚೆಲ್ಲುತ್ತೇವೆ. ದುರಂತ ಅಂದರೆ ಶೇ. ೩೫ರಷ್ಟು ಜನ ಹಸಿವಿನಿಂದ ಸಾಯು ತ್ತಿದ್ದಾರೆ. ಹಾಗಾಗಿಯೇ ಹಲವರು ಸಮಸ್ಯೆ ಇರುವುದು ಉತ್ಪಾದನೆಯಲ್ಲಿ ಅಲ್ಲ, ಹಂಚಿಕೆಯಲ್ಲಿ ಅನ್ನುವುದು.
ತಿನ್ನುವ ಆಹಾರವನ್ನು ತ್ಯಾಜ್ಯ ವಸ್ತುವನ್ನಾಗಿಸಿದವರು ನಾವು ಮನುಷ್ಯರು. ಅಂದರೆ ನಾವು ತ್ಯಾಜ್ಯವಸ್ತುಗಳ ಸೃರ್ಷ್ಟಿಕರ್ತರು. ಸಮಸ್ಯೆ ಪ್ರಾರಂಭವಾಗಿದ್ದು ಕಳೆದ ಇನ್ನೂರು ವರ್ಷಗಳ ಹಿಂದೆ ಅಂದರೆ ಕೈಗಾರಿಕೀಕರಣದಿಂದ ಪ್ರಾರಂಭವಾಯಿತು ಎಂದು ಭಾವಿಸಲಾಗಿದೆ. ಅದು ನಮ್ಮ ದೋಷಪೂರಿತ ವ್ಯವಸ್ಥೆಯ ಲಕ್ಷಣ. ಪ್ರಾಕೃತಿಕವಾದ ಯಾವುದರಲ್ಲಿಯೂ ಕೆಲಸಕ್ಕೆ ಬಾರದ್ದು ಅಂತ ಯಾವುದೂ ಇಲ್ಲ. ಅದೊಂದು ಪರಿಪೂರ್ಣ ವ್ಯವಸ್ಥೆ. ನಾವು ಬೆಂಕಿ ಕಂಡು ಹಿಡಿದೆವು. ಬೆಂಕಿ ಬಳಸಿ ಆಹಾರ ಬೇಯಿಸ ತೊಡಗಿದೆವು. ನಮ್ಮ ಕಲ್ಪನೆ ಚಿಗುರುತ್ತಾ ಹೋಯಿತು. ಇದರೊಂದಿಗೆ ಕೀಟನಾಶಕಗಳು, ರಾಸಾಯನಿಕ ಗೊಬ್ಬರ, ಪ್ಲಾಸ್ಟಿಕ್ ಇವೆಲ್ಲಾ ಸೃಷ್ಟಿಯಾಯಿತು. ಪ್ರಕೃತಿಯನ್ನು ಕಲುಷಿತಗೊಳಿಸಿದೆವು, ಬರೀ ತ್ಯಾಜ್ಯಗಳಿಂದಲೇ ಜಗತ್ತನ್ನು ತುಂಬಿದೆವು.
ಇನ್ನೂರು ವರ್ಷಗಳ ಹಿಂದಿನ ನಮ್ಮ ಜಗತ್ತನ್ನು ಒಮ್ಮೆ ಗಮನಿಸೋಣ. ಆಗ ಒಂದು ವಿಕೇಂದ್ರೀಕೃತ ಆಹಾರ ವ್ಯವಸ್ಥೆಯಿತ್ತು. ಭೂಮಿಯಲ್ಲಿ ಬೆಳೆದದ್ದು ಒಂದಿಷ್ಟು ಮಾರ್ಪಾಡಾಗಿ ತಟ್ಟೆಗೆ ಬರುತ್ತಿತ್ತು. ಕ್ರಮೇಣ ತೋಟದಲ್ಲಿ ಬೆಳೆದದ್ದು ಫ್ಯಾಕ್ಟರಿಯ ಕಡೆಗೆ ಚಲಿಸಲು ಪ್ರಾರಂಭಿಸಿತು. ಆಹಾರದ ಉತ್ಪನ್ನ ಕೈಗಾರಿಕೀಕರಣಗೊಂಡಿತು. ಈಗ ನಾವು ಯಂತ್ರಗಳಿಗೆ ಒಗ್ಗಿಕೊಳ್ಳುತ್ತಾ ಬಂದೆವು. ಸಂಸ್ಕರಿಸಿದ ನಿರ್ಜಿವ ಆಹಾರವನ್ನು ಅವಲಂಬಿಸತೊಡಗಿದೆವು. ಕ್ರಮೇಣ ಕೃಷಿ, ಆಹಾರ, ಆರೋಗ್ಯ, ಶಿಕ್ಷಣ ಎಲ್ಲವೂ ಕೈಗಾರಿಕೀಕರಣಗೊಂಡವು. ನಮ್ಮ ನಡತೆ, ರುಚಿ, ಸಂಸ್ಕೃತಿ ಎಲ್ಲವನ್ನು ಇಂದು ಅದೇ ರೂಪಿಸುತ್ತಿದೆ.
ಕೈಗಾರಿಕೀಕರಣ ಅದರಷ್ಟಕ್ಕೆ ಕೆಟ್ಟದಲ್ಲದಿರಬಹುದು. ನಿಜ, ಅದು ನಮಗೆ ಸಂಪತ್ತು, ಅನುಕೂಲ, ಆಯ್ಕೆ ಎಲ್ಲವನ್ನೂ ಕೊಟ್ಟಿದೆ. ಆದರೆ ಅದು ಪರಿಪೂರ್ಣ ವ್ಯವಸ್ಥೆಯಲ್ಲ. ಹಾಗಾಗಿ ಅದರ ನ್ಯೂನತೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಅದು ಸೃಷ್ಟಿಸುವ ತ್ಯಾಜ್ಯ ಪದಾರ್ಥಗಳು ಒಂದು ದೊಡ್ಡ ಸಮಸ್ಯೆ. ತ್ಯಾಜ್ಯವನ್ನು ವಿಲೇವಾರಿ ಮಾಡುವುದಕ್ಕೆ ಅದರ ಮರುಬಳಕೆ ಮಾಡುತ್ತೇವೆ. ಮರುಬಳಕೆ ಅನ್ನುವುದು ತ್ಯಾಜ್ಯವನ್ನು ವಿಲೇವಾರಿ ಮಾಡುವುದಕ್ಕೆ ಕೈಗಾರಿಕಾ ವ್ಯವಸ್ಥೆ ಕಂಡುಕೊಂಡಿರುವ ಕ್ರಮ. ಆದರೆ ಹೀಗೆ ಮರುಬಳಕೆ ಮಾಡುವ ಪ್ರಕ್ರಿಯೆಯಲ್ಲೇ ಸಮಯ, ಇಂಧನ, ಸ್ಥಳ, ಹಣ, ವಸ್ತುಗಳು ಇತ್ಯಾದಿಗಳು ಇನ್ನಷ್ಟು ಪೋಲಾಗುತ್ತವೆ. ಕೈಗಾರಿಕೆಗೆ ಇದನ್ನು ಬಿಟ್ಟು ತ್ಯಾಜ್ಯವಸ್ತುಗಳನ್ನು ವಿಲೇವಾರಿ ಮಾಡುವುದಕ್ಕೆ ಬೇರೆ ಕ್ರಮ ಗೊತ್ತಿಲ್ಲ. ಇರುವ ಅಂಕಿ ಅಂಶದ ಪ್ರಕಾರ ಶೇ. ೩೦ರಷ್ಟು ಆಹಾರವನ್ನು, ಶೇ. ೮೦ ಪ್ಲಾಸ್ಟಿಕನ್ನು, ಶೇ. ೪೦ ಗಾಜನ್ನು ಗುಂಡಿಗಳಲ್ಲಿ ಎಸೆಯಲಾಗುತ್ತಿದೆ.
ಕೈಗಾರಿಕೀಕರಣದ ಜೊತೆಗೆ ದುರಾಸೆ, ಲಾಭದ ಹುಚ್ಚು ಸೇರಿಕೊಂಡಿರುತ್ತದೆ. ಯಾರಿಗೂ ಲಾಭ ಇಲ್ಲದಿ ದ್ದರೆ ಸಂಸ್ಕರಿಸಿದ ಆಹಾರ ಇರುತ್ತಿರಲಿಲ್ಲ. ಅದು ನಿರ್ಜೀವ ಆಹಾರ. ಜೀವಂತ ಜಗತ್ತಿನಲ್ಲಿ ವಾಸಿಸುತ್ತಿರುವ ನಾವು ನಿರ್ಜೀವ ಆಹಾರವನ್ನು ಸೇವಿಸುತ್ತಿದ್ದೇವೆ. ಕೈಗಾರಿಕೀಕರಣ ಗೊಂಡಷ್ಟು ಜಗತ್ತಿನ ಆರೋಗ್ಯ ಕೆಡುತ್ತದೆ. ಅದು ಪ್ರಕೃತಿಯನ್ನು ಮಾನವನ ಒಳಿತಿಗೆ ದುಡಿಸಿಕೊಳ್ಳುತ್ತದೆ. ಉಳಿದ ಜೀವಿಗಳ ದೃಷ್ಟಿಯಿಂದ ನೋಡಿದರೆ ಇದು ಸ್ವಾರ್ಥ ಹಾಗೂ ಅನೈತಿಕವಾದದ್ದು. ಅದು ತಾಳಿಕೆಯದ್ದೂ ಅಲ್ಲ. ವಿಪರೀತ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಬಳಸಿ ಹೆಚ್ಚು ಆಹಾರ ಬೆಳೆಯುತ್ತೇವೆ. ಬಲವಂತವಾಗಿ ತಿನ್ನಿಸಿ ಪ್ರಾಣಿಗಳನ್ನು ಕೊಬ್ಬಿಸುತ್ತೇವೆ. ದೊಡ್ಡ ದೊಡ್ಡ ಬಲೆಗಳ ಜಾಲವನ್ನೇ ಹರಡಿ ಸಮುದ್ರದ ಮೀನನ್ನು ಖಾಲಿ ಮಾಡು ತ್ತಿದ್ದೇವೆ. ಓರೆನ್ ಪದರವನ್ನು ಹಾಳು ಮಾಡಿದ್ದೇವೆ. ಮಣ್ಣಿನ ಫಲವತ್ತತೆಯನ್ನು ಕೊಂದಿದ್ದೇವೆ. ಸಮುದ್ರವನ್ನು ಬರಿದು ಮಾಡುತ್ತಿದ್ದೇವೆ. ನಿಜ ಮನುಷ್ಯನ ಆಯಸ್ಸು ಜಾಸ್ತಿಯಾಗಿದೆ. ಹಾಗೆಯೇ ಅನಾರೋಗ್ಯವೂ ಹೆಚ್ಚಿದೆ.
ಕೈಗಾರಿಕೀಕರಣದ ಮೊದಲು ಮನುಷ್ಯ ಪ್ರಕೃತಿಯೊಂದಿಗೆ ನೇರವಾಗಿ ವ್ಯವಹರಿಸುತ್ತಿದ್ದ. ಬೆಳೆದದ್ದನ್ನು ನೇರವಾಗಿ ತರುತ್ತಿದ್ದ. ಮಧ್ಯವರ್ತಿಗಳು ಬೇಕಾಗಿರಲಿಲ್ಲ. ಈಗ ಬೆಳೆಯುವವನ ಹಾಗೂ ಬಳಸುವವನ ನಡುವಿನ ಸಂಪರ್ಕ ತುಂಡಾಗಿದೆ. ಜನರಿಗೆ ಬೇಕಾದ್ದನ್ನು ಪೂರೈಸಲು ಸೂಪರ್ ಮಾರುಕಟ್ಟೆಗಳು ಬಂದಿವೆ. ಪ್ಯಾಕೇಜ್ ಅನಿವಾರ್ಯವಾಗಿದೆ. ಜೊತೆಗೆ ಎಷ್ಟು ಬಳಕೆಯಾಗುತ್ತದೆ ಅನ್ನುವ ಅಂದಾಜು ಇರುವುದಿಲ್ಲ. ಕೊರತೆ ಬೀಳಬಾರದು ಅನ್ನುವ ಕಾರಣಕ್ಕೆ ಹೆಚ್ಚಿಗೆ ಸ್ಟಾಕ್ ಇಟ್ಟುಕೊಳ್ಳುವುದು ಮಾಮೂಲಿಯಾಗಿದೆ. ಬಿಕರಿಯಾಗದೆ ಉಳಿದು ಹಾಳಾಗುವುದು ವಿಪರೀತವಾಗುತ್ತಿದೆ. ಸೂಪರ್ ಮಾರುಕಟ್ಟೆಗಳಲ್ಲಿ ಉತ್ಪಾದನೆಯ ಶೇ.೧೦ರಷ್ಟು ಹಾಳಾಗುತ್ತದೆ ಅನ್ನುವ ಅಂದಾಜಿದೆ. ಜೊತೆಗೆ ಬೆಳೆಯುವುದರೊಂದಿಗೆ ಕೊಳ್ಳುವವರಿಗೆ ಸಂಪರ್ಕ ತಪ್ಪಿರುವುದರಿಂದ, ಅದರೊಂದಿಗಿದ್ದ ವಾತ್ಸಲ್ಯ ತಪ್ಪಿ ಅವು ಕೇವಲ ಸರಕಾಗಿ ಕಾಣುತ್ತಿದೆ. ಅದನ್ನು ಚೆಲ್ಲುವುದು ನಮ್ಮನ್ನು ಕಾಡುವುದಿಲ್ಲ.
ಈಗ ಆಹಾರದ ಪೋಲು ದೊಡ್ಡ ಸಮಸ್ಯೆಯಾಗಿದೆ. ಅದಕ್ಕೆ ಪರಿಹಾರ ಅಂದರೆ ನಾವು ಮತ್ತೆ ಪ್ರಕೃತಿಯ ಕ್ರಮವನ್ನು ಅನುಸರಿಸುವುದರಲ್ಲಿ. ನಾವು ಪ್ರಕೃತಿಯನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ ವೈವಿಧ್ಯತೆಯನ್ನು ಸಾಯಿಸುತ್ತಾ, ಒಂದೇ ರೀತಿಯ ಚಿಂತನೆ, ರುಚಿ, ಆಸೆಗಳಿಗೆ ಒಗ್ಗಿಹೋಗುತ್ತಿದ್ದೇವೆ. ಪ್ರಕೃತಿಯಲ್ಲಿ ತರಕಾರಿಗಳು ಒಂದೇ ರೀತಿ ಇರುವುದಿಲ್ಲ. ಇಂದು ಮಾಡಿದ ಅಡುಗೆಯ ರುಚಿ ನಾಳೆ ಇರುವುದಿಲ್ಲ. ನಾವು ಭಿನ್ನತೆಗೆ ಒಗ್ಗಿಕೊಳ್ಳುತ್ತೇವೆ. ಆದರೆ ಕೃಷಿ ಕೈಗಾರಿಕೀಕರಣವಾದೊಡನೆ ಬೆಳೆಯುವ ಪದಾರ್ಥಗಳು ಒಂದೇ ಗಾತ್ರ, ಒಂದೇ ಆಕಾರ ಪಡೆದುಕೊಳ್ಳುತ್ತವೆ. ಹಾಗಿದ್ದರೆ ಪ್ಯಾಕ್ ಮಾಡುವುದಕ್ಕೆ ಒಳ್ಳೆಯದು. ಆಕಾರ, ಗಾತ್ರದಲ್ಲಿ ಒಂದಿಷ್ಟು ಬದಲಾದರೂ ಅವು ತಿರಸ್ಕೃತವಾಗುತ್ತವೆ. ಅಷ್ಟೇ ಅಲ್ಲ ಈಗ ಎಲ್ಲಾ ಕಾಲದಲ್ಲೂ ಎಲ್ಲಾ ಪದಾರ್ಥಗಳು ಸಿಗುತ್ತವೆ. ಆದರೆ ಸೊಗಡನ್ನು ಕಳೆದುಕೊಂಡಿರುತ್ತವೆ.
ವೈಯಕ್ತಿಕವಾಗಿ ಹಲವರಿಗೆ ಈ ಪ್ರಕ್ರಿಯೆಯಲ್ಲಿ ಅತೃಪ್ತಿ ಇರಬಹುದು. ಆದರೆ ಬಹುತೇಕ ಎಲ್ಲರೂ ಅದನ್ನೇ ಮಾಡುತ್ತಿರುವುದರಿಂದ ಅದು ಸ್ವೀಕಾರಾರ್ಹವಾಗಿದೆ. ನಾವೆಲ್ಲಾ ಯಂತ್ರಗಳಾಗಿಬಿಟ್ಟಿದ್ದೇವೆ. ಪರಿಹಾರ ಇರುವುದು ಯಂತ್ರಗಳಾಚೆ ಯೋಚಿಸುವುದರಲ್ಲಿ. ಆಹಾರ ಪದಾರ್ಥಗಳು ವೇಸ್ಟ್ ಆಗುತ್ತಿರುವುದು ದುರಂತ. ಆದರೆ ಅದಕ್ಕಿಂತ ದುರಂತ ಅಂದರೆ ಅದಕ್ಕೆ ನಾವು ತೋರುತ್ತಿರುವ ಪ್ರತಿಕ್ರಿಯೆ. ನಾವು ಅದನ್ನು ಅನಿವಾರ್ಯ ಅಂದುಕೊಳ್ಳುತ್ತೇವೆ. ಏನೂ ಮಾಡುವುದಕ್ಕೆ ಆಗುವುದಿಲ್ಲ ಅಂತ ಸಿನಿಕರಾಗುತ್ತೇವೆ. ನಮ್ಮ ಮನೆಯ ಕಸದತೊಟ್ಟಿಗಳನ್ನು ಆಹಾರದಿಂದ ತುಂಬುತ್ತಿದ್ದೇವೆ. ಇದು ಒಳ್ಳೆಯದಲ್ಲ.
ಇಂತಹ ಸಿನಿಕತನವನ್ನು ಮೀರಿ ಯೋಚಿಸಿದ ಕೆಲವರಲ್ಲಿ ಡಗ್ಲಾಸ್ ಒಬ್ಬ. ಲಂಡನ್ನಲ್ಲಿರುವ ಜಗತ್ತಿನ ಮೊತ್ತಮೊದಲ ಝೀರೋ ವೇಸ್ಟ್ ಹೊಟೇಲ್ ಸೈಲೊದ ಮಾಲಕ ಹಾಗೂ ಮುಖ್ಯ ಚೆಫ್. ಇವನ ಚಿಂತನೆ ಸರಳ. ಕೇವಲ ಪ್ರಾಕೃತಿಕ ವಸ್ತುಗಳನ್ನು ಬಳಸಿ ಆಹಾರ ತಯಾರಿಸಬೇಕು. ಪ್ರಾಕೃತಿಕ ವಸ್ತುಗಳಿಗೆ ಒಂದು ಉದ್ದೇಶವಿರುತ್ತವೆ. ಅವು ತಮ್ಮ ಕೆಲಸವನ್ನು ಮುಗಿಸಿ ಮತ್ತೆ ಪ್ರಕೃತಿಗೆ ಹಿಂದಿರುಗುತ್ತವೆ. ಅಂತಹ ನೈಸರ್ಗಿಕ ಪ್ರಕ್ರಿಯೆಗೆ ಅವಕಾಶ ಮಾಡಿಕೊಡಬೇಕು. ಆದರೆ ನಾವು ಜೀವಿಸುತ್ತಿರುವ ನೈಸರ್ಗಿಕವಲ್ಲದ ಕೈಗಾರಿಕಾ ಜಗತ್ತಿನಲ್ಲಿ ಇದು ಸಾಧ್ಯವಿಲ್ಲ. ಅದಕ್ಕೆ ಪರ್ಯಾಯವಾಗಿ ಡಗ್ಲಾಸ್ ಯೋಚಿಸಿದ್ದು ತನ್ನ ಹೊಟೇಲ್ನೊಳಗೆ ತಂದ ಎಲ್ಲಾ ವಸ್ತುಗಳ ಜವಾಬ್ದಾರಿಯನ್ನು ತಾನೇ ವಹಿಸಿಕೊಳ್ಳಬೇಕು. ಅದನ್ನು ಸಂಪೂರ್ಣ ಬಳಸಿಕೊಳ್ಳಬೇಕು. ಯಾವುದೂ ವೇಸ್ಟ್ ಆಗಬಾರದು. ಅಂದರೆ ಡಸ್ಟ್ ಬಿನ್ ಅವಶ್ಯಕತೆಯೇ ಇರಬಾರದು. ಅದಕ್ಕೆ ಅವನು ಡಸ್ಟ್ ಬಿನ್ನನ್ನು ಶವಪೆಟ್ಟಿಗೆ ಅಂತ ಕರೆದ. ಅವನು ಹೆಚ್ಚು ಉತ್ಪಾದಕವಾಗಿರುವ, ದೀರ್ಘಕಾಲ ಜೀವಿಸುವ, ಹೊಸ ರೂಪದಲ್ಲಿ ಮರುಹುಟ್ಟು ಪಡೆಯಬಲ್ಲ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳತೊಡಗಿದ. ಉಳಿದ ಪದಾರ್ಥಗಳ ಮರುಬಳಕೆ ಪ್ರಾಕೃತಿಕ ಕ್ರಮ ಅನಿಸಲಿಲ್ಲ. ಅದಕ್ಕೆ ಮರುರೂಪ ಕೊಡುವ ನಿಟ್ಟಿನಲ್ಲಿ ಚಿಂತಿಸತೊಡಗಿದ. ಒಮ್ಮೆಯಷ್ಟೇ ಬಳಸಬಹುದಾದ ವೈನ್ ಬಾಟಲುಗಳಿಗೆ ಊಟದ ಪ್ಲೇಟುಗಳೊ, ಲೋಟವೋ ಅಥವಾ ಲ್ಯಾಂಪ್ ಶೇಡ್ ಆಗಿಯೋ ಮರುಜನ್ಮ ನೀಡುತ್ತಿದ್ದ. ಈ ಪ್ರಕ್ರಿಯೆಯನ್ನು ತೊಟ್ಟಿಲಿನಿಂದ ತೊಟ್ಟಿಲಿಗೆ ಎಂದು ಅವನು ಕರೆಯುತ್ತಾನೆ. ಬಳಸಲು ಸಾಧ್ಯವೇ ಇಲ್ಲದ ಕೆಲವು ಸಿಪ್ಪೆಗಳೋ, ಮೂಳೆಯ ಚೂರೊ, ಹೊಟೇಲಿಗೆ ಬಂದವರು ಉಳಿಸಿದ್ದೋ, ಗೊಬ್ಬರವಾಗಿ ಮಾರ್ಪಾಡಾಗುತ್ತಿತ್ತು.
ಡಗ್ಲಾಸ್ ತನಗೆ ಬೇಕಾದ ಪದಾರ್ಥಗಳನ್ನು ನೇರವಾಗಿ ರೈತರಿಂದ ಕೊಳ್ಳತೊಡಗಿದ. ಹಾಗಾಗಿ ಪ್ಯಾಕ್ ಮಾಡುವ ಅವಶ್ಯಕತೆ ಇರಲಿಲ್ಲ. ಹಾಗೆ ತಂದದ್ದನ್ನು ಕ್ರಿಯಾತ್ಮಕ ರೀತಿಯಲ್ಲಿ, ಬಹುತೇಕ ಭಾಗವನ್ನು ಬಳಸಿಕೊಂಡು ಆಹಾರ ತಯಾರಿಸಿ ಜನರ ತಟ್ಟೆಗೆ ರವಾನಿಸಿದ. ಎಸೆಯುವುದಕ್ಕೆ ಜಾಗವೇ ಇಲ್ಲದ್ದರಿಂದ ಎಲ್ಲಕ್ಕೂ ಒಂದು ಉಪಯೋಗ ಕಂಡುಕೊಳ್ಳಬೇಕು. ಸದಾ ಕ್ರಿಯಾಶೀಲವಾಗಿರಬೇಕು. ಪ್ರತಿಕ್ಷಣವೂ ಹೊಸ ಹೊಸ ಸವಾಲುಗಳು, ಪರಿಹಾರವಾಗಿ ಅನ್ವೇಷಣೆಗಳು ಹುಟ್ಟಿಕೊಳ್ಳುತ್ತಿದ್ದವು. ಅದು ಸೈಲೋ ತಂಡವನ್ನು ಜೀವಂತವಾಗಿಟ್ಟಿದೆ. ಹಲವು ಇಂತಹ ಪ್ರಯೋಗಗಳಿಗೆ ಸ್ಫೂರ್ತಿಯಾಗಿದೆ.
ತಾಳಿಕೆಯ ಕ್ರಮ ಅನ್ನುವುದು ಯಾವುದೋ ಒಂದು ಕ್ಷೇತ್ರಕ್ಕೆ ಸೀಮಿತವಾಗುವುದಕ್ಕೆ ಸಾಧ್ಯವಿಲ್ಲ. ಅದು ನಮ್ಮ ಚಿಂತನೆಯ, ಬದುಕಿನ ಕ್ರಮವಾಗಬೇಕು. ಕೊರತೆ ಇದೆ ಎಂದಾಕ್ಷಣ ಉತ್ಪಾದನೆಯನ್ನಷ್ಟೇ ಹೆಚ್ಚಿಸುವ ನಿಟ್ಟಿನಲ್ಲಿ ಯೋಚಿಸುವ ಅರ್ಥಶಾಸ್ತ್ರ ಉಳಿದ ಸಾಧ್ಯತೆಯ ಬಗ್ಗೆಯೂ ಯೋಚಿಸುವುದು ಅವಶ್ಯಕ.