ಮುಂಬೈನಲ್ಲಿ ತೆರೆದ ಬಸ್ ನಲ್ಲಿ ವಿಶ್ವಕಪ್ ವಿಜಯೋತ್ಸವದ ಮೆರವಣಿಗೆ | ನೆಚ್ಚಿನ ಆಟಗಾರರನ್ನು ನೋಡಲು ಕಿಕ್ಕಿರಿದು ಸೇರಿದ ಕ್ರಿಕೆಟ್ ಅಭಿಮಾನಿಗಳು

Update: 2024-07-04 17:23 GMT

ಮುಂಬೈ : ಟಿ20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗಾಗಿ ಮುಂಬೈನಲ್ಲಿ ವಿಜಯೋತ್ಸವದ ಮೆರವಣಿಗೆಯನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು. ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ವಾಂಖೆಡೆ ಕ್ರೀಡಾಂಗಣದ ಬಳಿ ಲಕ್ಷಾಂತರ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ.

ಚಂಡಮಾರುತದ ಕಾರಣ ಬಾರ್ಬಡೋಸ್ನಲ್ಲಿ ಉಳಿದುಕೊಂಡಿದ್ದ ಟೀಮ್ ಇಂಡಿಯಾದ ಆಟಗಾರರು ಇಂದು ದಿಲ್ಲಿಗೆ ವಿಶೇಷ ವಿಮಾನದಲ್ಲಿ ಬಂದಿಳಿದಿದ್ದರು. ನಂತರ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಎರಡು ಗಂಟೆ ಕಾಲ ಕಳೆದಿದ್ದರು.

ಮುಂಬೈ ಕಡೆಗೆ ಪ್ರಯಾಣ ಬೆಳೆಸಿರುವ ಆಟಗಾರರು ತೆರೆದ ಬಸ್ ನಲ್ಲಿ ವಿಜಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.

ಮರಿನ್ ಡ್ರೈವ್ ನಲ್ಲಿ ಜನ ಸಾಗರವಿದ್ದ ಕಾರಣ ಕ್ರಿಕೆಟಿಗರಿದ್ದ ಮುಂದೆ ಸಾಗಲು ಹೆಣಗಾಡಬೇಕಾಯಿತು. ವಿಜಯೋತ್ಸವ ಮೆರವಣಿಗೆಯಲ್ಲಿ ತಮ್ಮನ್ನು ನೋಡಲು ಆಗಮಿಸಿರುವ ಅಭಿಮಾನಿಗಳತ್ತ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಒಟ್ಟಿಗೆ ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದು ಪ್ರದರ್ಶಿಸಿದರು.

ನಾರಿಮನ್ ಪಾಯಿಂಟ್ ನಿಂದ ಆರಂಭವಾಗಿರುವ ವಿಜಯೋತ್ಸವ ಮೆರವಣಿಗೆಯು ಮರಿನ್ ಡ್ರೈವ್ ಮೂಲಕ ವಾಂಖೆಡೆ ಸ್ಟೇಡಿಯಂ ತಲುಪಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ವಿಶ್ವ ವಿಜೇತ ಭಾರತದ ಆಟಗಾರರಿಗೆ ಬಿಸಿಸಿಐ ಅಭಿನಂದನೆ ಸಲ್ಲಿಸಿದೆ.

ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಮಳೆಯನ್ನು ಲೆಕ್ಕಿಸದೇ ಮುಂಬೈನ ಗಲ್ಲಿಗಲ್ಲಿನ ಜನ ಸೇರಿದ್ದು, ವಾಂಖೆಡೆ ಕ್ರೀಡಾಂಗಣ ಅಕ್ಷರಶಃ ಅಭಿಮಾನಿಗಳಿಂದ ತುಂಬಿ ಹೋಗಿದೆ. ಕ್ರೀಡಾಂಗಣದ ಸುತ್ತಮುತ್ತ ಜನರು ಕಿಕ್ಕಿರಿದು ಸೇರಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News