ಧೋನಿಗಾಗಿ ಐಪಿಎಲ್‌ನಲ್ಲಿ ‘ಅನ್‌ಕ್ಯಾಪ್ಡ್ ಪ್ಲೇಯರ್’ ನಿಯಮ ಮರುಜಾರಿ?

Update: 2024-10-04 16:32 GMT

ಮಹೇಂದ್ರ ಸಿಂಗ್ ಧೋನಿ | PTI

ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಈ ತಿಂಗಳ ಆದಿ ಭಾಗದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2025ರ ಆವೃತ್ತಿಗೆ ಆಟಗಾರರನ್ನು ಉಳಿಸಿಕೊಳ್ಳುವ ನಿಯಮಗಳನ್ನು ಘೋಷಿಸಿದೆ. ಈ ಬಾರಿ ನಿಯಮಗಳಿಗೆ ಕೆಲವು ಕುತೂಹಲಕರ ಬದಲಾವಣೆಗಳನ್ನು ಮಾಡಲಾಗಿದೆ. ಈ ಪೈಕಿ ಮುಖ್ಯವಾಗಿ ಜನರ ಗಮನವನ್ನು ಸೆಳೆದಿರುವುದು ‘ಅನ್‌ಕ್ಯಾಪ್ಡ್ ಪ್ಲೇಯರ್’ ನಿಯಮವನ್ನು ಮರುಜಾರಿಗೊಳಿಸಿರುವುದು.

ಈ ‘ಅನ್‌ಕ್ಯಾಪ್ಡ್ ಪ್ಲೇಯರ್’ ನಿಯಮದ ಪ್ರಕಾರ, ಕಳೆದ ಐದು ಅಥವಾ ಅದಕ್ಕಿಂತಲೂ ಹೆಚ್ಚಿನ ವರ್ಷಗಳಲ್ಲಿ ಭಾರತೀಯ ತಂಡದಲ್ಲಿ ಸ್ಥಾನ ಪಡೆಯದ ಅಥವಾ ನಿವೃತ್ತರಾಗಿರುವ ಎಲ್ಲಾ ಭಾರತೀಯ ಕ್ರಿಕೆಟಿಗರನ್ನು ‘ಅನ್‌ಕ್ಯಾಪ್ಡ್’ ಎಂಬುದಾಗಿ ಪರಿಗಣಿಸಬಹುದಾಗಿದೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಾಲಿ ಆಟಗಾರ ಮಹೇಂದ್ರ ಸಿಂಗ್ ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳುವುದಕ್ಕಾಗಿ ಈ ನಿಯಮವನ್ನು ಮರುಜಾರಿಗೊಳಿಸಲಾಗಿದೆ ಎನ್ನಲಾಗಿದೆ. 2019ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರವಾಗಿ ಕೊನೆಯದಾಗಿ ಆಡಿದ ಬಳಿಕ, ಧೋನಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೆ, ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸಿದ್ದಾರೆ.

ಈ ನಿಯಮವು, ಧೋನಿಯನ್ನು ನಾಲ್ಕು ಕೋಟಿ ರೂಪಾಯಿ ಬೆಲೆಗೆ ಉಳಿಸಿಕೊಳ್ಳಲು ಸಿಎಸ್‌ಕೆಗೆ ಅವಕಾಶ ನೀಡುತ್ತದೆ. ಈ ಮೂಲಕ ಇತರ ಪ್ರಮುಖ ಆಟಗಾರರನ್ನೂ ಉಳಿಸಿಕೊಂಡು, ಮುಂಬರುವ ಬೃಹತ್ ಹರಾಜಿಗೆ ಗಣನೀಯ ಮೊತ್ತದ ಹಣವನ್ನೂ ಉಳಿಸಲು ಸಿಎಸ್‌ಕೆಗೆ ಹೆಚ್ಚಿನ ಸ್ವಾತಂತ್ರ್ಯ ಲಭಿಸುತ್ತದೆ.

► ಧೋನಿ ಆಡಲು ಬಯಸಿದರೆ ನಿಯಮಗಳು ಬದಲಾಗಲೇ ಬೇಕು: ಕೈಫ್

ಮಹೇಂದ್ರ ಸಿಂಗ್ ಧೋನಿಯ ಪರಂಪರೆಯು ಇಂಥ ವಿದ್ಯಮಾನಗಳಿಗೆ ಅರ್ಹವಾಗಿದೆ ಎಂದು ಧೋನಿಯ ಆರಂಭಿಕ ವರ್ಷಗಳ ಕ್ರೀಡಾ ಜೀವನವನ್ನು ಹತ್ತಿರದಿಂದ ನೋಡಿದ್ದ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಮುಹಮ್ಮದ್ ಕೈಫ್ ಹೇಳಿದ್ದಾರೆ. ಸಿಎಸ್‌ಕೆ ನಾಯಕನಾಗಿ ಐದು ಬಾರಿ ಐಪಿಎಲ್ ಪ್ರಶಸ್ತಿಗಳನ್ನು ಎತ್ತಿರುವ ಧೋನಿಯ ಪ್ರಭಾವ ಮೈದಾನದ ಒಳಗೂ ಹೊರಗೂ ಅಗಾಧವಾಗಿದೆ ಎಂದು ಅವರು ಹೇಳಿದ್ದಾರೆ.

‘‘ನಾವು ಮತ್ತೊಮ್ಮೆ ಎಮ್.ಎಸ್. ಧೋನಿ ಆಡುವುದನ್ನು ನೋಡಲಿದ್ದೇವೆ. ಅವರು ದೈಹಿಕವಾಗಿ ಸಮರ್ಥರಾಗಿದ್ದಾರೆ, ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಾರೆ ಮತ್ತು ವಿಕೆಟ್ ಹಿಂದುಗಡೆಯೂ ಚುರುಕಾಗಿ ಕೆಲಸ ಮಾಡುತ್ತಾರೆ. ಎಷ್ಟು ಸಮಯ ಅವರು ಆಡಲು ಬಯಸುತ್ತಾರೋ, ಅಷ್ಟು ಸಮಯ ನಿಯಮಗಳು ಬದಲಾಗುತಲೇ ಇರುತ್ತವೆ. ಧೋನಿ ಆಡಲು ಬಯಸುತ್ತಾರೆಂದರೆ ಅವರು ಆಡುವಂತೆ ಮಾಡಲು ನೀವು ನಿಯಮಗಳನ್ನು ಬದಲಾಯಿಸಲೇ ಬೇಕು ಅಥವಾ ಏನಾದರೊಂದು ಮಾಡಲೇ ಬೇಕು. ಅವರು ಅಷ್ಟು ದೊಡ್ಡ ಆಟಗಾರ ಮತ್ತು ಸಿಎಸ್‌ಕೆಯ ಪಂದ್ಯ ಗೆಲ್ಲಿಸುವಾತ’’ ಎಂದು ‘ಸ್ಟಾರ್ ಸ್ಪೋರ್ಟ್ಸ್’ನೊಂದಿಗೆ ಮಾತನಾಡಿದ ಕೈಫ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News