ಇರಾನಿ ಕಪ್ | ಬಲಿಷ್ಠ ಸ್ಥಿತಿಯಲ್ಲಿ ಮುಂಬೈ

Update: 2024-10-04 16:59 GMT

PC : PTI 

ಲಕ್ನೋ : ಇರಾನಿ ಕಪ್ ಪಂದ್ಯದ ನಾಲ್ಕನೇ ದಿನವಾದ ಶುಕ್ರವಾರ ಶೇಷ ಭಾರತ ತಂಡದ ಪ್ರಬಲ ಹೋರಾಟದ ಹೊರತಾಗಿಯೂ, ಮುಂಬೈ ತಂಡವು ದಿನದಾಟದ ಅಂತ್ಯಕ್ಕೆ 274 ರನ್‌ಗಳ ಉತ್ತಮ ಮುನ್ನಡೆಯನ್ನು ಪಡೆದಿದೆ.

ಮುಂಬೈ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ ತನ್ನ ದ್ವಿತೀಯ ಇನಿಂಗ್ಸ್‌ ನಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದೆ.

ಅದಕ್ಕಿಂತಲೂ ಮೊದಲು, ಶೇಷ ಭಾರತ ತಂಡವು ತನ್ನ ಮೊದಲ ಇನಿಂಗ್ಸ್‌ ನಲ್ಲಿ ಅಭಿಮನ್ಯು ಈಶ್ವರನ್‌ ರ 191 ರನ್‌ಗಳ ನೆರವಿನಿಂದ 416 ರನ್ ಗಳಿಸಿತು. ಅಭಿಮನ್ಯು ಕೇವಲ ಒಂಭತ್ತು ರನ್‌ಗಳಿಂದ ದ್ವಿಶತಕ ವಂಚಿತರಾದರು.

ಮುಂಬೈ ತಂಡವು ತನ್ನ ಮೊದಲ ಇನಿಂಗ್ಸ್‌ ನಲ್ಲಿ 537 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿದ ಬಳಿಕ, ಶೇಷ ಭಾರತವು ತನ್ನ ಮೊದಲ ಇನಿಂಗ್ಸ್‌ ನಲ್ಲಿ ಆರಂಭಿಕ ಹಿನ್ನಡೆಯನ್ನು ಕಂಡಿತು. ಬೃಹತ್ ಮೊತ್ತವನ್ನು ಬೆನ್ನತ್ತಲು ಹೋಗಿ ನಾಯಕ ಋತುರಾಜ್ ಗಾಯಕ್ವಾಡ್ (9), ಸಾಯಿ ಸುದರ್ಶನ್ (32) ಮತ್ತು ದೇವದತ್ತ ಪಡಿಕ್ಕಲ್ (16) ಮತ್ತು ಇಶಾನ್ ಕಿಶನ್ (38) ಬೇಗನೇ ವಿಕೆಟ್‌ಗಳನ್ನು ಕಳೆದುಕೊಂಡರು.

ಆದರೆ, ಈಶ್ವರನ್ ಸದೃಢ ಬ್ಯಾಟಿಂಗ್‌ನ ಪ್ರದರ್ಶನ ನೀಡಿದರು. ಅವರು ಧ್ರುವ ಜುರೆಲ್ ಜೊತೆಗೆ ಉತ್ತಮ ಭಾಗೀದಾರಿಕೆ ನಿಭಾಯಿಸಿ ತಂಡವನ್ನು ಅಗ್ರ ಕ್ರಮಾಂಕದ ಕುಸಿತದ ಆಘಾತದಿಂದ ಪಾರುಮಾಡಿದರು. ಈ ಜೋಡಿಯು 165 ರನ್‌ಗಳ ಭಾಗೀದಾರಿಕೆ ನಿಭಾಯಿಸಿತು. ದುರದೃಷ್ಟವಶಾತ್ ಜೂರೆಲ್ 93 ರನ್‌ನಲ್ಲಿದ್ದಾಗ ಔಟಾಗಿ ಶತಕದಿಂದ ವಂಚಿತರಾದರು.

ಸ್ವಲ್ಪವೇ ಹೊತ್ತಿನ ಬಳಿಕ, ಈಶ್ವರನ್‌ರ ಅಮೋಘ ಇನಿಂಗ್ಸ್ ಕೂಡ 191 ರನ್‌ನಲ್ಲಿ ಕೊನೆಗೊಂಡಿತು. ಅವರು ಅರ್ಹ ದ್ವಿಶತಕದಿಂದ ಸ್ವಲ್ಪದರಲ್ಲಿ ವಂಚಿತರಾದರು.

ಅವರು ಶಾಮ್ಸ್ ಮುಲಾನಿಯ ಎಸೆತವನ್ನು ಸ್ವೀಪ್ ಮಾಡಲು ಹೋಗಿ ತನುಷ್ ಕೋಟ್ಯಾನ್‌ಗೆ ಕ್ಯಾಚ್ ನೀಡಿದರು.

ಬೆನ್ನು ಬೆನ್ನಿಗೆ ಎರಡು ವಿಕೆಟ್‌ಗಳು ಉರುಳಿದ ಬಳಿಕ, ಪಂದ್ಯವು ಮುಂಬೈನತ್ತ ವಾಲಿತು. ಮುಲಾನಿ ಮತ್ತು ಕೋಟ್ಯಾನ್ ತಮ್ಮ ಶ್ರೇಷ್ಠ ಬೌಲಿಂಗ್ ಪ್ರದರ್ಶನವನ್ನು ಮುಂದುವರಿಸಿ ತಲಾ ಮೂರು ವಿಕೆಟ್‌ಗಳನ್ನು ಪಡೆದರು. ಅಂತಿಮವಾಗಿ ಶೇಷ ಭಾರತವು 416 ರನ್‌ಗಳಿಗೆ ತನ್ನ ಮೊದಲ ಇನಿಂಗ್ಸ್ ಮುಕ್ತಾಯಗೊಳಿಸಿತು.

ಬಳಿಕ, ಮುಂಬೈ ತಂಡದ ದ್ವಿತೀಯ ಇನಿಂಗ್ಸ್‌ಗೆ ಪೃಥ್ವಿ ಶಾ (76) ಮತ್ತು ಆಯುಶ್ ಮಾತ್ರೆ (14) ಉತ್ತಮ ಆರಂಭ ಒದಗಿಸಿದರು. ಆದರೆ, ನಂತರದ ಬ್ಯಾಟರ್‌ಗಳು ವಿಫಲವಾದರು.

ತಂಡವು ಮಧ್ಯಮ ಕ್ರಮಾಂಕದ ಕುಸಿತಕ್ಕೆ ಒಳಗಾಯಿತು. ದಿನದಾಟ ಮುಗಿದಾಗ ಅದು ತನ್ನ ದ್ವಿತೀಯ ಇನಿಂಗ್ಸ್‌ ನಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 153 ರನ್ ಗಳಿಸಿದೆ. ಮೊದಲ ಇನಿಂಗ್ಸ್‌ ನಲ್ಲಿ ದ್ವಿಶತಕ ಗಳಿಸಿರುವ ಸರ್ಫರಾಝ್ ಖಾನ್ (9) ಮತ್ತು ತನುಷ್ ಕೋಟ್ಯಾನ್ (20) ಕ್ರೀಸ್‌ನಲ್ಲಿದ್ದಾರೆ.

ಸಾರಾಂಶ್ ಜೈನ್ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರೆ, ಮಾನವ್ ಸುತರ್ 2 ವಿಕೆಟ್‌ಗಳನ್ನು ಪಡೆದರು.

ಸಂಕ್ಷಿಪ್ತ ಸ್ಕೋರ್

ಮುಂಬೈ ಮೊದಲ ಇನಿಂಗ್ಸ್ 537

ಶೇಷ ಭಾರತ ಮೊದಲ ಇನಿಂಗ್ಸ್ 416

ಅಭಿಮನ್ಯು ಈಶ್ವರನ್ 191, ಸಾಯಿ ಸುದರ್ಶನ್ 32, ಇಶಾನ್ ಕಿಶನ್ 38, ಧ್ರುವ ಜುರೆಲ್ 93

ಮೋಹಿತ್ ಅವಸ್ತಿ 2-97, ಶಾಮ್ಸ್ ಮುಲಾನಿ 3-122, ತನುಷ್ ಕೋಟ್ಯಾನ್ 3-101

ಮುಂಬೈ ದ್ವಿತೀಯ ಇನಿಂಗ್ಸ್ 153/6

ಪೃಥ್ವಿ ಶಾ 76, ಆಯುಶ್ ಮಾತ್ರೆ 14

ಸಾರಾಂಶ್ ಜೈನ್ 4-67, ಮಾನವ್ ಸುತರ್ 2-40

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News